ನಿಸ್ವನ - ಅಗೋ ಅಲ್ಲಿ ದೂರದಲ್ಲಿ

ನಿಸ್ವನದ ಭಾಗವಾಗಿ...

  • ಕವನ: ಅಂಬಿಕಾತನಯದತ್ತ
  • ಕವನದ ಕಾಪೀರೈಟ್: ಪುನರ್ವಸು ಬೇಂದ್ರೆ
  • ಗಾಯನ: ವಾರಿಜಾಶ್ರೀ
  • ರಾಗಸಂಯೋಜನೆ: ಅಂಶುಮಾನ್ ಕೆ ಆರ್
  • ಸ್ಟೂಡಿಯೋ/ವಾದ್ಯಸಂಯೋಜನೆ/ಕೀಬೋರ್ಡ್: ಹೇಮಂತ್ ಕುಮಾರ್
  • ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
  • ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
  • ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
  • ರಿದಮ್ ಪ್ಯಾಡ್: ವರದರಾಜ್
  • ಕೀಬೋರ್ಡ್: ಟೋನಿ ಮ್ಯಾಥ್ಯೂ
  • ಕೀಬೋರ್ಡ್ /ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಗಣರಾಜ್ಯೊತ್ಸವದ ಶುಭಾಶಯಗಳೊಂದಿಗೆ,  ವಾರಿಜಾಶ್ರೀಯವರ ಮಧುರಕಂಠದಲ್ಲಿ ಅಂಬಿಕಾತನಯದತ್ತರ "ಅಗೋ ಅಲ್ಲಿ ದೂರದಲ್ಲಿ" (ಅವರ "ನಾದಲೀಲೆ" ಸಂಕಲನದಲ್ಲಿದೆ).

ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಮಾಂಡ್ ರಾಗದಲ್ಲಿರುವ ಈ ಹಾಡಿನ ಹಿನ್ನೆಲೆಯಲ್ಲಿ ಗಿಟಾರ್, ಸಂತೂರ್(ಕೀಬೋರ್ಡಿನಲ್ಲಿ ಹೇಮಂತ್ ಕುಮಾರ್ ಅವರು ನುಡಿಸಿರುವುದು)-ಗಳು ಶ್ರಾವಣದ ಮಳೆ ಹನಿಗಳಂತೆ ಎಡೆಬಿಡದೆ ಸುರಿಯುತ್ತವೆ.

ಇಡೀ ಕವನ ಹೀಗಿದೆ.

ಅಗೋ ಅಲ್ಲಿ ದೂರದಲ್ಲಿ

ಅಗೋ ಅಲ್ಲಿ ದೂರದಲ್ಲಿ

ನೆಲದ ಮುಗಿಲ ಮಗ್ಗುಲಲ್ಲಿ

ಹಸಿರಿನ ಹಸುಗೂಸದೊಂದು

ಆಗ ಈಗ ಹೊರಳುತಿಹುದು

ಏನೋ ಎಂತೊ ಒರಲುತಿಹುದು

ಆಽ ಹಸಿರ ಒಳಗೆ ಹೊರಗೆ

ನೀರ ಬೆಳಕ ತುಣುಕು ಮಿಣುಕು,

ಅಲ್ಲಿನಿಂದ ಬಂದೆಯಾ!

ಕುಣಿವ ಮಣಿವ ಹೆಡೆಯ ಹಾವು-

ಗಳನು ಹಿಡಿದು ತಂದೆಯಾ?

ಏಕೆ ಬಂದೆ? ಏನು ತಂದೆ?

ಹೇಳೊ ಹೇಳು ಶ್ರಾವಣಾ

ನೀ ಬಂದ ಕಾರಣಾ.

ಪಡುವ ದಿಕ್ಕಿನಿಂದ ಹರಿವ

ಗಾಳಿ-ಕುದುರೆಯನ್ನು ಏರಿ

ಪರ್ಜನ್ಯ ಗೀತವನ್ನು

ಹಾಽಡುತ್ತ ಬಂದಿತು.

ಬನದ ಮನದ ಮೇಳವೆಲ್ಲ

ಸೋಽ ಎಂದು ಎಂದಿತು

ಬಿದಿರ ಕೊಳಲ ನುಡಿಸಿತು

ಮಲೆಯ ಹೆಳಲ ಮುಡಿಸಿತು;

ಬಳ್ಳಿ ಮಾಡ ಬಾಗಿಸಿತ್ತು

ಗಿಡಗಳ ತಲೆದೂಗಿಸಿತ್ತು;

ಮರದ ಹನಿಯ ಮಣಿಗಳನ್ನು

ಅತ್ತ ಇತ್ತ ತೂರುತಾ

ಹಸಿರು ಮುರಿವ ತೊಂಗಲನ್ನು

ಕೆಳಗೆ ಮೇಲೆ ತೂಗುತಾ

ಬರುವ ನಿನ್ನ ಅಂದ ಚೆಂದ

ಸೂಸು ಸೊಗಸು ಆನಂದ.

ಗುಳ್ಳಗಂಜಿ ತೊಡವ ತೊಟ್ಟು

ಹಾವಸೆಯಾ ಉಡುಪನುಟ್ಟು

ನಗುವ ತುಟಿಯ ನನೆದ ಎವೆಯ

ತರಳ ನೀನು ಶ್ರಾವಣ,

ಅಳಲು ನಗಲು ತಡವೆ ಇಲ್ಲ

ಇದುವು ನಿನಗೆ ಆಟವೆಲ್ಲ

ಬಾರೊ ದಿವ್ಯ ಚಾರಣಾ

ತುಂಟ ಹುಡುಗ ಶ್ರಾವಣಾ!

ನೀನು ನಡೆದು ಬಂದ ಮಾಸ

ಹೆಣ್ಗೆ ತವರುಮನೆಯ ವಾಸ

ಬರಿಯ ಆಟ, ಬರಿಯ ಹಾಸ

ಮಧುಮಾಸಕು ಹಿರಿದದು

ಮಧುರ ಮಾಸ ಸರಿಯದು.

ಮೋಡಗವಿದ ಕಣ್ಣಿನವನು

ಮುದಿಯ ತಂದೆ ಮುಗಿಲರಾಯ

ನಿನ್ನನ್ನೆ ಬಯಸಿದಾ

ಕಣ್ಣ ಕೆನ್ನೆ ತೊಯ್ಸಿದಾ.

ಬಿಸಿಲಹಣ್ಣ ತಿಂದು ಹೊತ್ತು

ಹೆತ್ತ ನಿನ್ನ ಭೂಮಿ ತಾಯಿ

ಪಾಪ, ನಿನ್ನ ನೆನಸಿತು

ಎದೆಯ ಸೆರಗ ನನೆಸಿತು.

ಅಂತೆ ಬಂದೆ ಬಾರಣಾ

ಬಾರೊ ಮಗುವೆ ಶ್ರಾವಣಾ!

- ಅಂಬಿಕಾತನಯದತ್ತ

ನಾದಲೀಲೆ: 16

ಪ್ರಕಾಶನ: 1938

Creative Commons License
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.

Creative Commons License
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.

Comments

Popular posts from this blog

ನಿಸ್ವನ - ಜ್ಞಾನಸೂತಕ

ನಿಸ್ವನ - ಮಳೆ

ಕನ್ನಡದ ಭಕ್ತಿ - ಸರ್ವನಾಮಗಳ ಸರ್ಗ