Posts

Showing posts from 2020

ಅವತಾರದ ತಾತ್ಪರ್ಯ

Image
ಕ್ಷಮೆ ಕೇಳುತ್ತಾ... ಅಂಶಗಣ ಛಂದಸ್ಸುಗಳ ಮೇಲಿನ ನನ್ನ ಪ್ರೀತಿಯ ಬಗ್ಗೇ ಈಗಾಗಲೇ ಸ್ವಲ್ಪ ಹೇಳಿದ್ದೇನೆ. ಆದರೆ ಈ ಕವನದ ಬಂಧವಾದ ಅಂಶಗಣಗಳ ತ್ರಿಪದಿ ಯ ಪರಿಚಯ ಮಾಡಬೇಕೆನ್ನಿಸುತ್ತದೆ. ಛಂದೋವತಂಸ ದಂತೆ ವಿರಳವಲ್ಲದೆ, ಬಹಳ ಜನಪ್ರಿಯವೂ, ಜಾನಪದವೂ ಆದ ತ್ರಿಪದಿಗೆ ಅಪರಿಚಿತರಲ್ಲದ ಓದುಗರು ಈ ಕಿರುಪರಿಚಯವನ್ನು ಬಿಟ್ಟು ಮುನ್ನಡೆಯಬಹುದು. ತ್ರಿಪದಿಯ ಲಕ್ಷಣಗಳನ್ನು ಇಲ್ಲಿ ಕಾಣಬಹುದು. ಹಾಗಾಗಿ, ತ್ರಿಪದಿಯನ್ನು ಓದುವ/ವಾಚಿಸುವ ಬಗ್ಗೆ ಮಾತ್ರ ಒಂದೆರಡು ಮಾತು. ತ್ರಿಪದಿಯಲ್ಲಿ ಮೂರೇ ಪಾದಗಳಿದ್ದರೂ, ಎರಡನೇ ಪಾದವನ್ನು ಪುನರಾವರ್ತಿಸಿ ನಾಲ್ಕು ಪಾದಗಳಾಗಿ ಓದಬೇಕು. ಆದರೆ, ಎರಡನೇ ಪಾದವನ್ನು ಮೊದಲ ಬಾರಿ ಓದುವಾಗ, ಪಾದದ ಕೊನೆಯ ಗಣವನ್ನು ಓದದೆ (ಇದನ್ನು "||" ಚಿಹ್ನೆಯಿಂದ ಗುರುತಿಸುವುದು ರೂಢಿ), ಅದರ ಹಿಂದಿನ ಗಣ(ಅಂದರೆ, ಎರಡನೇ ಪಾದದ ಮೂರನೇ ಗಣ)ವನ್ನು ಹಿಗ್ಗಿಸಿ ವಿರಮಿಸಬೇಕು.  ಹೀಗೆ ಹಿಗ್ಗಿಸುವಾಗ, ಎರಡನೇ ಪಾದದ ಮೂರನೇ ಗಣದ ಕೊನೆಯ ಅಕ್ಷರವನ್ನು ಬಿಟ್ಟು ಉಳಿದವನ್ನು ಇಡೀ ಗಣದಷ್ಟು ಹಿಗ್ಗಿಸಿ, ಕೊನೆಯ ಅಕ್ಷರವನ್ನು ಮುಡಿ/ಪದ್ಮಗಣದಂತೆ (ಅಪೂರ್ಣ ಗಣ ಎನ್ನಬಹುದು) ಓದುವ ರೀತಿ, ಕವನದ ಜಾನಪದ ಶೈಲಿಯನ್ನು ಇನ್ನೂ ಹೆಚ್ಚಿಸುತ್ತದೆ. ಎರಡನೇ ಪಾದದ ಪುನರಾವರ್ತನೆಯಲ್ಲಿ ಕೊನೆಯ ಗಣವನ್ನೂ ಸೇರಿಸಿ ಓದಬೇಕು. ಆಮೇಲೆ ಮೂರನೇ ಪಾದ. ಉದಾಹರಣೆಗೆ, ಈ ಕವನದ ಪಲ್ಲವಿಯನ್ನು ಹೀಗೆ ಓದಬಹುದು. ಇಳೆ ತಾನೇ|ಉರುಳುರುಳಿ-|ಋತುಗ-ಳೂ|ಮರಮರ

ಸರಸ್ವತೀ ತಾತ್ಪರ್ಯ

Image
ಈ ಲೇಖನವು ಈಗ GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕ್ಷಮೆ ಬೇಡುತ್ತಾ... ಕವನ ದ ಮೊದಲು ಅದರ ಛಂದಸ್ಸ ನ್ನು ಸ್ವಲ್ಪ ವಿವರಿಸಬೇಕೆನ್ನಿಸುತ್ತದೆ. ಅಕ್ಷರಗಣ ಗಳ ವರ್ಣವತ್ತಗಳು ಮತ್ತು  ಮಾತ್ರಾಗಣ  ಛಂದಸ್ಸುಗಳು ಸಂಸ್ಕೃತ, ಪ್ರಾಕೃತಗಳಿಂದ ಬಂದು ಕನ್ನಡದವೇ ಆದವು. ಅಂಶಗಣ ಛಂದಸ್ಸುಗಳು ಮೊದಲಿನಿಂದಲೂ ಕನ್ನಡದವೇ. ಯಾಕೋ ಅಂಶಗಣ ಛಂದಸ್ಸುಗಳ ಬಳಕೆ ಸಮಕಾಲೀನ ಕವನಗಳಲ್ಲಿ ಕಡಿಮೆಯಾಗಿದೆ, ಆಗುತ್ತಿದೆ ಅಂತ ನನ್ನ ಅನಿಸಿಕೆ. ಸ್ವಲ್ಪ ಜಾನಪದವೆನ್ನಬಹುದಾದ ಶೈಲಿಯನ್ನು ಬಿಂಬಿಸುವ ಕಾರಣವೋ ಏನೋ. ಅದು ನನ್ನ ಸೀಮಿತ ಓದಿನ ತಪ್ಪು ಅಭಿಪ್ರಾಯವೂ ಇರಬಹುದು. ಏನೇ ಇರಲಿ, ನಾನಂತೂ ಅಂಶಗಣಗಳ ಸರಳ ಸೌಂದರ್ಯಕ್ಕೆ ಮಾರುಹೋಗಿದ್ದೇನೆ. ಅಂಶಗಣಗಳೊಳಗಿನ ಹದವಾದ ಎಳೆಯಾಟ ಕನ್ನಡಕ್ಕೆ ವಿಶೇಷ ಲಾಲಿತ್ಯವನ್ನು ಕೊಟ್ಟಿದೆ. ಇಲ್ಲಿ ಬಳಸಿರುವ ಅಂಶಗಣ ಛಂದಸ್ಸು ಛಂದೋವತಂಸ .  ನಾಗವರ್ಮ ಹೇಳಿದಂತೆ, ಇದಕ್ಕೆ ಅಂಶಗಣಗಳ ನಾಲ್ಕು ಪಾದಗಳು. ಪ್ರತಿಯೊಂದು ಪಾದದಲ್ಲಿ 3 ವಿಷ್ಣುಗಣಗಳಾದಮೇಲೆ ಕಡೆಗೊಂದು ಬ್ರಹ್ಮಗಣ. ಆದರೆ ಪಾದಾಂತ್ಯದಲ್ಲಿ ಬ್ರಹ್ಮಗಣಗಳ ಏಕತಾನತೆ ತಪ್ಪಿಸಲಿಕ್ಕಾಗಿ, ಮೂರನೇ ಪಾದಾಂತ್ಯಕ್ಕೆ ವಿಷ್ಣುಗಣಾದೇಶಮಾಡಿ, ಪಾದವನ್ನು ಎರಡು ಭಾಗ ಮಾಡಿ, ಈ ಭಾಗಗಳು ಸರಿಯಾಗಿ ಕಾಣಿಸಲು ಬೇರೊಂದು ಅಂತ್ಯಪ್ರಾಸವನ್ನೂ ಅಳವಡಿಸಿದ್ದೇನೆ. ಹೀಗಾಗಿ ಇದು 5 ಪಾದಗಳ ಇಂಗ್ಲಿಷಿನ limerick  ಆಗಿಯೂ ಕಾಣಿಸುತ್ತದೆ. ಅಂ

ಶಬ್ದವೇದಿಯ ತಾತ್ಪರ್ಯ

Image
ಈ ಲೇಖನವು ಈಗ  GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕ್ಷಮೆ ಬೇಡುತ್ತಾ... ಶಬ್ದವೇಧಿ ಎಂದಾಗ ಕೆಲವು ಕಥೆಗಳು ನೆನಪಿಗೆ ಬರುತ್ತವೆ. ಏಕಲವ್ಯ ನ ಕಥೆಯಂತೂ ಪ್ರಸಿದ್ಧ. ಶ್ರವಣಕುಮಾರ ನ ಕಥೆಯೂ ಇದೆ. ಇಲ್ಲಿ ಶಬ್ದವೇಧಿ ಎಂದರೆ ಶಬ್ದಮಾತ್ರದಿಂದ ದಿಕ್ಕನ್ನು ಗ್ರಹಿಸಿ ಗುರಿಯಿಟ್ಟು ಬಾಣ ಹೊಡೆಯುವ ಕಲೆ. ಇಲ್ಲೆಲ್ಲಾ ಶಬ್ದವೇಧಿ ಎಂದರೆ ಅವಿವೇಕದ ಪ್ರತೀಕವೇ. ವಿದ್ಯೆಯೇನೋ ಚಮತ್ಕಾರಿಯೇ ಆದರೂ, ಅದನ್ನು ಪ್ರಯೋಗಿಸಿದವನ ಉದ್ದೇಶ ಸರಿಯೇ ಇದ್ದರೂ,  ಈ ಕಥೆಗಳಲ್ಲಿ ಅದರ ಪರಿಣಾಮ ಮಾತ್ರ ವಿದ್ಯೆ, ಉದ್ದೇಶಗಳೆಲ್ಲವನ್ನೂ ಮೀರಿ ವಿಪರೀತವಾಗುತ್ತದೆ. ಶಬ್ದ ಎಂದರೆ ಕನ್ನಡದಲ್ಲಿ ಮಾತೂ ಹೌದು. ಮಾತು ಎಂದರೆ ಕನ್ನಡದಲ್ಲಿ ಪ್ರತಿಜ್ಞೆ , ವಾಗ್ದಾನ ಎಂದೂ ಆಗುತ್ತದೆ. ಹೀಗೆ, ಯುದ್ಧದಲ್ಲಿ ರಥದ ಚಕ್ರಕ್ಕೆ ಬೆರಳು ಕೊಟ್ಟು ಜೀವ ಉಳಿಸಿದ ಕೈಕೇಯಿಗೆ ದಶರಥ ಕೊಟ್ಟ ವಾಗ್ದಾನ, ಏಕಲವ್ಯನ ಕಥೆಯಲ್ಲಿ ದ್ರೋಣ ಅರ್ಜುನನಿಗೆ ಕೊಟ್ಟ ವಾಗ್ದಾನ, ಇವೂ ಬಂದು ಸೇರುತ್ತವೆ. ಇಲ್ಲೂ, ಮಾತು ಕೊಟ್ಟವರು (ಮಾತಿನ ಬಾಣ ಬಿಟ್ಟವರು) ದುರಂತನಾಯಕರೇ . ಶಬ್ದವೇಧಿಗಳೇ. ಅವರ ಪ್ರತಿಜ್ಞಾಪಾಲನೆಯ ಪರಿಣಾಮ ವಿಪರೀತವೇ. ಸ್ವಲ್ಪ ಸ್ವಾತಂತ್ರ್ಯವಹಿಸಿದರೆ, ಕಾಮದಹನ ದ ಕಥೆಯೂ ಇಲ್ಲಿ ಪ್ರಸ್ತುತ. ಹಾಗೆಯೇ, ಶಬ್ದವನ್ನು ಆಯುಧವೆಂದು ತಿಳಿದವರೂ ಶಬ್ದವೇಧಿಗಳೇ. ಇಂಥವರಿಗೂ ಹೆಚ್ಚು ಹುಡುಕಬೇಕಾಗಿಲ್ಲ. ನಮ್ಮ ಸುತ್ತಲೂ ತುಂಬಿದ್ದಾರೆ ಎನ್ನುವ ಭ್ರಾ

ಕ್ಷಮಾಪಣೆ

Image
ಈ ಲೇಖನವು ಈಗ  GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಮೂರು ದಶಕಗಳ ಕಾಲ, ಕನ್ನಡ ಮಾತ್ರವಲ್ಲ, ಯಾವುದೇ ಭಾಷೆಯ ಕಾವ್ಯಪರಂಪರೆಯ ಬಗೆಗೆ ಸ್ವಲ್ಪವೂ ರುಚಿ ಬೆಳೆಸಿಕೊಳ್ಳದೆ, ಆಮೇಲೆ ಕೆಲವು ವರ್ಷ ಮಾತ್ರ ಕನ್ನಡ ಕವನಗಳನ್ನು ಓದಿ (ರಾಗಸಂಯೋಜನೆಗಾಗಿ, ಕಾವ್ಯಾಭ್ಯಾಸಕ್ಕಾಗಿ ಅಲ್ಲ), ಈಗ ಇದ್ದಕ್ಕಿದ್ದಂತೆ ಕೆಲವು ಕವನಗಳನ್ನು ಬರೆದದ್ದು ದೊಡ್ಡ ಅಧಿಕಪ್ರಸಂಗ. ಬರೆದಮೇಲೆ ಅವುಗಳ ಅರ್ಥ ವಿವರಿಸಬೇಕು ಎನ್ನುವ ಕೆಟ್ಟ ಚಪಲ. ಬರೆದವರು ತಮ್ಮ ಕವನಗಳನ್ನು ವಿವರಿಸಬಾರದು. ವಿವರಿಸಿದರೆ, ಅದನ್ನು ಯಾರೂ ಓದಬಾರದು. ಬರೆದಾದ ಮೇಲೆ, ಕವನ, ಬರೆದವರ ಸೊತ್ತಲ್ಲ. ಓದುವ ಕಣ್ಣಿಗೆ, ಬರೆದಾಗ ಕಂಡದ್ದು ಕಾಣದೆ ಹೋದೀತು. ಬರೆದಾಗ ಕಾಣದ್ದೂ ಕಂಡೀತು. ಕಣ್ಣಿಂದ ಕಣ್ಣಿಗೆ, ಎದೆಯಿಂದ ಎದೆಗೆ,  ಹೀಗೆ ಕವನದ ಜಾಡು, ತಾನಾಗಿಯೇ ಮೂಡಬೇಕಾದದ್ದು. ಆದರೂ, ಏನೋ ಹೊಸತು ಇಲ್ಲಿ ಇದೆ ಅನ್ನುವ ಒಂದು ಭ್ರಾಂತಿ. ಈ ಭ್ರಾಂತಿಯಿಂದ ಉರುಳಿದ್ದು ಮುಂದಕ್ಕೋ? ಹಿಂದಕ್ಕೋ? ಅಂತೂ ಉರುಳುವುದು ಮುಖ್ಯ ಎನ್ನುವ ಸಮಾಧಾನ (ಸಮಾದಾನ?). ಹೀಗೆ ಉರುಳುವ ಮರುಳಾಗಿ, ಬರೆದಾಗ ಕಂಡದ್ದನ್ನು ಮಂಡಿಸಿದರೆ, ಖಂಡಿಸಲಿಕ್ಕಾದರೂ ಉಪಯೋಗವಾದೀತು ಎನ್ನುವ ಅನುಕೂಲ ತರ್ಕ. ಕಂಡದ್ದೆಲ್ಲವೂ ಕವನದಲ್ಲಿ ಇಳಿದುಬಂದಿರಬೇಕೆಂದೇನೂ ಇಲ್ಲ. ಅದೇನೇ ಇದ್ದರೂ, ಕೊಂದ ಪಾಪ, ತಿಂದು ಪರಿಹಾರ.  ಶಬ್ದಾರ್ಥ ತಿಳಿದುಕೊಂಡು ಬರೆಯುವ ವಿವೇಕ ಮೂಡುವುದು ನನಗೆ ಬಹಳ ಅಪರೂಪಕ್ಕೆ. ನ

ಶಬ್ದವೇದಿ

Image
ಈ ಕವನವು ಈಗ  GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕಾಡಬೇಡ ಪಡೆದುಬಂದ ಹಾಡಿ ಎಲ್ಲ ಕಡೆಯು ಸಂದ ನಾಡಿದಂತೆ ನಡೆದುಬಂದ ದಾರಿ ಕಾಣದೆ ಕಾಡಿಬೇಡಿ ಅಂತು ಇಂತು ಮೋಡಿಮಾಡಿ ಕಂತು ಕಂತು ಹೂಡಿಬಿಟ್ಟ ಬಾಣ ನೆಟ್ಟು ಸೊಟ್ಟಗಾಗಿದೆ. ಬಾಣವೇನೊ ಹೊಡೆದು ಬಿಚ್ಚೆ ಕಾಣದಂಥ ಕನಸು ಕಿಚ್ಚೆ ಕೋಣನ ಮುಂದಷ್ಟು ಹಾಡಿ ಕಾಡ ಹತ್ತಿದೆ. ಎಣಿಸಿದಂತೆ ಆಗಲಿಲ್ಲ ಕುಣಿಕೆ ಸೂತ್ರ ಕಾಣಲಿಲ್ಲ ಹಣತೆಯೊಂದು ಮಾತ್ರ ಇಲ್ಲಿ ಏನು ಕಂ ಡಿದೆ. ಬೆರಳು ಗಾತ್ರ ಕಳಚಿಕೊಂಡ ಅರಳಿ ಮರದ ಮುಂದೆ ನಿಂತ ನೆರಳು ಮಾತ್ರ ಅರಸಿ ಕಣ್ಣು ಕತ್ತಲಾಗಿದೆ. ಸಿದ್ಧಹಸ್ತದಿಂದ ಎದ್ದು ಬಿದ್ದ ಮೈಯನಣಕಿಸಿದ್ದು ಗೆದ್ದ ಲಂಕೆ ಮೀರಿ ಅರಿವೆ ಬತ್ತಲಾಗಿದೆ. ಈ ಕವನ  Creative Commons Attribution-NonCommercial-NoDerivatives 4.0 International License  ಮೂಲಕ ಲಭ್ಯವಿವೆ. This work is licensed under a Creative Commons Attribution-NonCommercial-NoDerivatives 4.0 International License .

ಅವತಾರ

Image
ಈ ಕವನವು ಈಗ  GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಇಳೆ ತಾನೇ ಉರುಳುರುಳಿ ಋತುಗಳೂ ಮರಮರಳಿ ತಿಳಿಯಾದ ಮಂಜು ಸುಳಿಸುರುಳಿ || ಸುತ್ತಿದೆ ಇಳಿಯದ ನಂಜು ಏರುತ್ತಿದೆ! ಚಕ್ರವೇ ಉರುಳಲ್ಲ, ಮಣ್ಣಲ್ಲೇ ಹುರುಳಿಲ್ಲ ಶುಕ್ರನ ದೆಸೆಯೂ ಸರಿಯಿಲ್ಲ||ವೆಂದರೆ ವಕ್ರದೃಷ್ಟಿಯೆ ಬೇರೆ ಕಾಣಿಸಿದೆ! ಕರೆಕರೆದು ಬಂದದ್ದು, ಕಡೆಕಡೆದು ಬಿಟ್ಟದ್ದು, ಅರೆದರೆದು ಉಜ್ಜಿ ಬೆರೆಸುತ್ತಾ || ಇಟ್ಟದ್ದು, ಉರಿಸಿಟ್ಟ ಒಲೆಮೇಲೆ ಕಾಯುತ್ತಿದೆ. ತೆರೆಯದ ಅಂಗಳ ಪೊರೆಯದ ಕಂಗಳ ಹೊರೆಯದೆ ತಿಂಗಳೇ ಮೀರಿ||ಹೋಗಿದೆ ಬರೆಸುಟ್ಟ ಕಲೆಯೂ ಮಾಯುತ್ತಿದೆ. ಕಾಣಿಕೆ ಒಂದಲ್ಲ ಹಲವಾರು ಕೊಟ್ಟದ್ದು ಪೋಣಿಸಿದಂತೆಯೇ ಇತ್ತಲಿದೆ || ಹೂಡಿದ ಬಾಣದ ಕಣ್ಣಲ್ಲಿ ಕತ್ತಲಿದೆ. ನಾಕಾರು ಕನಸಲ್ಲಿ ಮೂಕವಾಗಿದೆ ಮನ ಏಕಾಗ್ರವಾದೀತೇ ಬತ್ತಳಿಕೆ? ಗುಡಿಯಲ್ಲಿ ಸಾಕಾರವಾದೀತೇ ಮೆರವಣಿಗೆ? ಮೋಡದ ಸೆರೆಯಿಂದ ಮಳೆಬಿಲ್ಲಿನೊಂದಿಗೆ ಹಾಡಿದ ತುಂತುರು ಗಾನ! ಕೇಳಿದರೆ ನೋಡದ ಕಡಲಿನ ಪಾನ! ಛಂದಸ್ಸು: (ಅಂಶಗಣಗಳ) ತ್ರಿಪದಿ. 6 ಮಾತ್ರೆಯ ಜಾನಪದ ಗತಿ. 2ನೇ ಪಾದಕ್ಕೆ ಪುನರಾವರ್ತನೆ. ಈ ಕವನ  Creative Commons Attribution-NonCommercial-NoDerivatives 4.0 International License  ಮೂಲಕ ಲಭ್ಯವಿವೆ. This work is licensed under a Creative Commons Attribution-NonCommercial-NoDerivatives 4.0 In

ಸರಸ್ವತೀ

Image
ಈ ಕವನವು ಈಗ  GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕಡಿದಾದ ಕಣಿವೆಯ ಬೆಣ್ಣೆಯೇ? ಕೆನೆಯೇ! ಸಿಡಿಲಿನ ಕುಡಿಯ ಒಳನಂಜಿನ ಹನಿಯೇ! ಕೊಡದಲ್ಲಿ ತುಳುಕಿದೆ. ಬುಡದಲ್ಲಿ ಬಳುಕಿದೆ. ನೋಡದ ಶಿಖರದ ಮಂಜಿನ ಖನಿಯೇ! ಕರೆಯೊಂದೇ ಸಾಕಲ್ಲ, ಬೇರೇನೂ ಬೇಡ. ಎರೆಯುವ ಹೊತ್ತಿಗೆ ಕರದಲ್ಲೂ ಕೂಡ, ನೆರೆಯಲ್ಲಿ ನೊರೆಯಾಗಿ, ಕೆರೆಯಲ್ಲಿ ಸೆರೆಯಾಗಿ, ಮರುಭೂಮಿಯೊಳಗೇನೇ ಅಡಗಿದೆ ನೋಡ! ಬಾನೆಲ್ಲಾ ಹರಡಿ ಕೋಲ್ಮಿಂಚಿನ ಮಾಲೆ, ಆನೆಗೆ ಅಂಕುಶ, ಟಂಕದ ಸಾಲೆ. ಮಾನವ ಕಾಡಿದ ದಾನವ ಮಾಡಿದ ತಾನವನಡಗಿಸುವಂಥಾ ಕರೆಯೋಲೆ! ಹಸಿರಿನ ಹಂದರಕೆ ಹೂವಿನ ಮೋಡಿ. ಕೆಸರಿನ ಕೆರೆಯಲ್ಲೂ ಸೆಲೆಗಳು ಮೂಡಿ, ಉಸಿರಾಗಿ ಕಡಲಿಂದ, ಬಸಿರಿನ ಒಳಗಿಂದ, ಪಿಸುಗುಟ್ಟಿದಂತಿದೆ ಅಸರಂತವು ಹಾಡಿ. ಛಂದಸ್ಸು: ಲಿಮರಿಕ್ಕಿನ (limerick) ಛದ್ಮವೇಷದಲ್ಲಿ ಛಂದೋವತಂಸ. ೬ ಮಾತ್ರೆಯ ಜಾನಪದಗತಿ. ಈ ಕವನ  Creative Commons Attribution-NonCommercial-NoDerivatives 4.0 International License  ಮೂಲಕ ಲಭ್ಯವಿವೆ. This work is licensed under a Creative Commons Attribution-NonCommercial-NoDerivatives 4.0 International License .

ಸಂಧ್ಯಾವಂದನೆ

Image
ಈ ಕವನವು ಈಗ  GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಹೊತ್ತಿಲ್ಲ, ಗೊತ್ತಿಲ್ಲ. ಕಿಂಚಿತ್ತೂ ಕಿಚ್ಚಿಲ್ಲ. ಕತ್ತಲ ಸೆರಗಿನ ಅಂಚೆ? ಕಿತ್ತಳೆ ಬಣ್ಣ ನೋಡದ ಕಣ್ಣ ತಟ್ಟಿತೇ ಬೆರಗಿನ ಸಂಜೆ? ತಂಗಾಳಿ ಬೀಸಿದೆ. ನೇಸರನ್ನೆತ್ತಿದೆ. ತಂಗಳ ನೆರೆಮನೆಯ ಸಾರೋ? ಕಂಗಳ ಮುಚ್ಚಿದರೆ ನರಸಿಂಹ ಕಂಡಾನೇ? ಕಂಬವನ್ನೊಡೆವವರ್ಯಾರೋ? ಕಣ್ಣಮುಚ್ಚಾಲೆಯ ಆಟದ ಒಳಗೊಂದು ಬಂಗಾರದುಂಗುರವಡಗಿ! ಮಣ್ಣಿನ ಲೋಕದ ಕಣ್ಣಿಗೆ ಕತ್ತಲ ಹುಣ್ಣಿಮೆಯೂ ಬಣ್ಣದ ಬೆಡಗಿ! ಹಿನ್ನೀರ ಊರೊಳಗೆ ಮಿಂದರೆ ಸಿಕ್ಕೀತೇ ಮುನ್ನಿನ ಕೊಳೆ ತೊಳೆದ ಪುಳಕ? ಹೊನ್ನೀರ ತೀರದಲೀಜಾಟವೆಂದರೆ ಚಿನ್ನದ ಬೆಳಕಿನ ಝಳಕ! ಛಂದಸ್ಸು: ಸಾಂಗತ್ಯ ಈ ಕವನ  Creative Commons Attribution-NonCommercial-NoDerivatives 4.0 International License  ಮೂಲಕ ಲಭ್ಯವಿವೆ. This work is licensed under a Creative Commons Attribution-NonCommercial-NoDerivatives 4.0 International License .

ಜ್ಞಾನಸೂತಕ

Image
ಈ ಕವನವು ಈಗ  GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ನೀರಗೆರೆಯ ತಳಸ್ಪರ್ಶದಂತೆ, ಕರಿಮೋಡ ತಂದ ಲಘುವರ್ಷದಂತೆ, ಬಸಿರೊಳಗಿನಿಂದ ಎಳೆ ಹರ್ಷದಂತೆ, ಒಳಹೊರಗು ಹರಿಯಿತಲ್ಲ! ಭಿತ್ತಿಯನ್ನೆ ಕಳೆ. ಬಿತ್ತಿಲ್ಲದೆ ಬೆಳೆ. ನೆತ್ತಿಯಲ್ಲಿ ನೆಲೆನಿಂತ ನೀರಹೊಳೆ. ತಲೆಬಾಗಿಸಿದರೆ ಅಲ್ಲೆ ಹರಿವ ತೊರೆ, ನೆರೆಯೆ ಬಂದಿತಲ್ಲ! ಬೇರಿನಲ್ಲೆ ಫಲ. ಬೇಲಿಯಲ್ಲೆ ಹೊಲ. ಇಂಗಿತವೇ ಹರಿವಂಥ ಜೀವಜಲ! ಮಿಂಚಿನಹುಳದೊಳಬೆಳಕಿನಂತೆ ಬೇರೇನೊ ಹೊಳೆಯಿತಲ್ಲ! ಮಂಜು ಮಸುಕು ಮುಂಜಾವದಲ್ಲಿ ಚಳಿಗಾಲ ಮಾಗಿ ನಿಟ್ಟುಸಿರು ಬಿಟ್ಟ ನಸುಕಾದ ಎದೆಯೆ ಇಬ್ಬನಿಯ ಹಾರ ವರವಾಗಿ ಪಡೆಯಿತಲ್ಲ! ಈ ಕವನ  Creative Commons Attribution-NonCommercial-NoDerivatives 4.0 International License  ಮೂಲಕ ಲಭ್ಯವಿವೆ. This work is licensed under a Creative Commons Attribution-NonCommercial-NoDerivatives 4.0 International License .