ಕ್ಷಮಾಪಣೆ

ಈ ಲೇಖನವು ಈಗ GitHubಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ.
---

ಮೂರು ದಶಕಗಳ ಕಾಲ, ಕನ್ನಡ ಮಾತ್ರವಲ್ಲ, ಯಾವುದೇ ಭಾಷೆಯ ಕಾವ್ಯಪರಂಪರೆಯ ಬಗೆಗೆ ಸ್ವಲ್ಪವೂ ರುಚಿ ಬೆಳೆಸಿಕೊಳ್ಳದೆ, ಆಮೇಲೆ ಕೆಲವು ವರ್ಷ ಮಾತ್ರ ಕನ್ನಡ ಕವನಗಳನ್ನು ಓದಿ (ರಾಗಸಂಯೋಜನೆಗಾಗಿ, ಕಾವ್ಯಾಭ್ಯಾಸಕ್ಕಾಗಿ ಅಲ್ಲ), ಈಗ ಇದ್ದಕ್ಕಿದ್ದಂತೆ ಕೆಲವು ಕವನಗಳನ್ನು ಬರೆದದ್ದು ದೊಡ್ಡ ಅಧಿಕಪ್ರಸಂಗ. ಬರೆದಮೇಲೆ ಅವುಗಳ ಅರ್ಥ ವಿವರಿಸಬೇಕು ಎನ್ನುವ ಕೆಟ್ಟ ಚಪಲ.

ಬರೆದವರು ತಮ್ಮ ಕವನಗಳನ್ನು ವಿವರಿಸಬಾರದು. ವಿವರಿಸಿದರೆ, ಅದನ್ನು ಯಾರೂ ಓದಬಾರದು. ಬರೆದಾದ ಮೇಲೆ, ಕವನ, ಬರೆದವರ ಸೊತ್ತಲ್ಲ. ಓದುವ ಕಣ್ಣಿಗೆ, ಬರೆದಾಗ ಕಂಡದ್ದು ಕಾಣದೆ ಹೋದೀತು. ಬರೆದಾಗ ಕಾಣದ್ದೂ ಕಂಡೀತು. ಕಣ್ಣಿಂದ ಕಣ್ಣಿಗೆ, ಎದೆಯಿಂದ ಎದೆಗೆ,  ಹೀಗೆ ಕವನದ ಜಾಡು, ತಾನಾಗಿಯೇ ಮೂಡಬೇಕಾದದ್ದು.

ಆದರೂ, ಏನೋ ಹೊಸತು ಇಲ್ಲಿ ಇದೆ ಅನ್ನುವ ಒಂದು ಭ್ರಾಂತಿ. ಈ ಭ್ರಾಂತಿಯಿಂದ ಉರುಳಿದ್ದು ಮುಂದಕ್ಕೋ? ಹಿಂದಕ್ಕೋ? ಅಂತೂ ಉರುಳುವುದು ಮುಖ್ಯ ಎನ್ನುವ ಸಮಾಧಾನ (ಸಮಾದಾನ?). ಹೀಗೆ ಉರುಳುವ ಮರುಳಾಗಿ, ಬರೆದಾಗ ಕಂಡದ್ದನ್ನು ಮಂಡಿಸಿದರೆ, ಖಂಡಿಸಲಿಕ್ಕಾದರೂ ಉಪಯೋಗವಾದೀತು ಎನ್ನುವ ಅನುಕೂಲ ತರ್ಕ. ಕಂಡದ್ದೆಲ್ಲವೂ ಕವನದಲ್ಲಿ ಇಳಿದುಬಂದಿರಬೇಕೆಂದೇನೂ ಇಲ್ಲ. ಅದೇನೇ ಇದ್ದರೂ, ಕೊಂದ ಪಾಪ, ತಿಂದು ಪರಿಹಾರ. 

ಶಬ್ದಾರ್ಥ ತಿಳಿದುಕೊಂಡು ಬರೆಯುವ ವಿವೇಕ ಮೂಡುವುದು ನನಗೆ ಬಹಳ ಅಪರೂಪಕ್ಕೆ. ನಿಘಂಟಿಲ್ಲದೇ ಬರೆದು (ಬರೆ) ಹಾಕುವುದೇ ಹೆಚ್ಚು. ಮೇಲಾಗಿ, ಇಂಗ್ಲಿಷ್ ಮಿಶ್ರಿತ ಕನ್ನಡದ ಕಲಸುಮೇಲೋಗರವೇ ತಲೆಯೊಳಗೆ. ಏನೋ ಒಳ್ಳೆಯ ಘಳಿಗೆಯಲ್ಲಿ, disclaimer ಶಬ್ದಕ್ಕೆ ಕನ್ನಡದಲ್ಲಿ ಅರ್ಥ ಹುಡುಕಿದಾಗ ಹಕ್ಕುತ್ಯಾಗ ಅನ್ನುವ ವಿಕಾರವೊಂದು ಕಂಡುಬಂತು. ಯೋಚಿಸಿದಾಗ, ಇಂಗ್ಲಿಷಲ್ಲೂ ಇದರ ಮೂಲಾರ್ಥ ಅದೇ (dis-claim) ಅಂತಲೂ ಹೊಳೆಯಿತು. Disclaimer ಎನ್ನುವುದು ನಮ್ಮ ಪರಂಪರೆಯಲ್ಲಿ ಇಲ್ಲ. ಅಷ್ಟಲ್ಲದೆ, ಬರೆದಾದ ಮೇಲೆ ಹಕ್ಕೇ ಇಲ್ಲದಿರುವಾಗ ತ್ಯಾಗ ಎಂಥದರದ್ದು? ಇನ್ನೂ ಒಂದಿಷ್ಟು ಉಳಿದಿರಬಹುದಾದ ಮಾನ, ಮರ್ಯಾದೆಯದ್ದಷ್ಟೇ.

ಹೀಗಾಗಿ, ಇದು ಕ್ಷಮಾಪಣೆ. ಒಂದೆರಡು ತಪ್ಪಿಗಲ್ಲ. ಮಾಡಿದ ತಪ್ಪಿಗೆ, ಮಾಡದ ತಪ್ಪಿಗೆ, ಈಗ ಮಾಡುತ್ತಿರುವ ತಪ್ಪಿಗೆ, ಮುಂದೆ ಮಾಡುವ ತಪ್ಪುಗಳಿಗೆ. ಮುಂದೆ ಮಾಡದೆ ಇರುವ ತಪ್ಪುಗಳಿಗೂ.

ಒಳ್ಳೆಯ ಬುದ್ಧಿ ಬಂದಾಗ ಅದನ್ನು ವಿಪರೀತಕ್ಕೆ ತಿರುಗಿಸದೆ ಬಿಟ್ಟರೆ ಹೇಗೆ? ಕ್ಷಮಾಪಣೆಗೆ ಇಂಗ್ಲಿಷಲ್ಲಿ apology ಅಂತ ಒಂದರ್ಥ. Apology ಎಂದರೆ ಸಮರ್ಥನೆ ಅಂತಲೂ ಅರ್ಥವಾಗುತ್ತದೆ. ಸಮರ್ಥನೆಗಿಂತ ಸಮಜಾಯಿಷಿಯೇ ಸರಿ. ಒಟ್ಟಿನಲ್ಲಿ, ಸುತ್ತು ಬಳಸಿ, ಗೊತ್ತಿದ್ದೂ ಮಾಡುವ ತಪ್ಪನ್ನು ಸಮರ್ಥಿಸುವ ಅಪಚಾರ.

ದಯವಿಟ್ಟು ಕ್ಷಮಿಸಿ.

Creative Commons License
ಈ ಲೇಖನ Creative Commons Attribution-NonCommercial-NoDerivatives 4.0 International License ಮೂಲಕ ಲಭ್ಯವಿವೆ.

Comments

  1. 'ಕ್ಷಮಾಪಣೆ' ಕವನಗಳಷ್ಟೇ ಮೆಚ್ಚಿಗೆಯಾಯಿತು. ಇದು ಮುಂದುವರಿಯಲಿ.

    ReplyDelete

Post a Comment

Popular posts from this blog

ನಿಸ್ವನ - ಮಳೆ

ನಿಸ್ವನ - ಜ್ಞಾನಸೂತಕ

Nisvana - Playlists