Posts

Showing posts from February, 2020

ಅವತಾರ

Image
ಈ ಕವನವು ಈಗ  GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಇಳೆ ತಾನೇ ಉರುಳುರುಳಿ ಋತುಗಳೂ ಮರಮರಳಿ ತಿಳಿಯಾದ ಮಂಜು ಸುಳಿಸುರುಳಿ || ಸುತ್ತಿದೆ ಇಳಿಯದ ನಂಜು ಏರುತ್ತಿದೆ! ಚಕ್ರವೇ ಉರುಳಲ್ಲ, ಮಣ್ಣಲ್ಲೇ ಹುರುಳಿಲ್ಲ ಶುಕ್ರನ ದೆಸೆಯೂ ಸರಿಯಿಲ್ಲ||ವೆಂದರೆ ವಕ್ರದೃಷ್ಟಿಯೆ ಬೇರೆ ಕಾಣಿಸಿದೆ! ಕರೆಕರೆದು ಬಂದದ್ದು, ಕಡೆಕಡೆದು ಬಿಟ್ಟದ್ದು, ಅರೆದರೆದು ಉಜ್ಜಿ ಬೆರೆಸುತ್ತಾ || ಇಟ್ಟದ್ದು, ಉರಿಸಿಟ್ಟ ಒಲೆಮೇಲೆ ಕಾಯುತ್ತಿದೆ. ತೆರೆಯದ ಅಂಗಳ ಪೊರೆಯದ ಕಂಗಳ ಹೊರೆಯದೆ ತಿಂಗಳೇ ಮೀರಿ||ಹೋಗಿದೆ ಬರೆಸುಟ್ಟ ಕಲೆಯೂ ಮಾಯುತ್ತಿದೆ. ಕಾಣಿಕೆ ಒಂದಲ್ಲ ಹಲವಾರು ಕೊಟ್ಟದ್ದು ಪೋಣಿಸಿದಂತೆಯೇ ಇತ್ತಲಿದೆ || ಹೂಡಿದ ಬಾಣದ ಕಣ್ಣಲ್ಲಿ ಕತ್ತಲಿದೆ. ನಾಕಾರು ಕನಸಲ್ಲಿ ಮೂಕವಾಗಿದೆ ಮನ ಏಕಾಗ್ರವಾದೀತೇ ಬತ್ತಳಿಕೆ? ಗುಡಿಯಲ್ಲಿ ಸಾಕಾರವಾದೀತೇ ಮೆರವಣಿಗೆ? ಮೋಡದ ಸೆರೆಯಿಂದ ಮಳೆಬಿಲ್ಲಿನೊಂದಿಗೆ ಹಾಡಿದ ತುಂತುರು ಗಾನ! ಕೇಳಿದರೆ ನೋಡದ ಕಡಲಿನ ಪಾನ! ಛಂದಸ್ಸು: (ಅಂಶಗಣಗಳ) ತ್ರಿಪದಿ. 6 ಮಾತ್ರೆಯ ಜಾನಪದ ಗತಿ. 2ನೇ ಪಾದಕ್ಕೆ ಪುನರಾವರ್ತನೆ. ಈ ಕವನ  Creative Commons Attribution-NonCommercial-NoDerivatives 4.0 International License  ಮೂಲಕ ಲಭ್ಯವಿವೆ. This work is licensed under a Creative Commons Attribution-NonCommercial-NoDerivatives 4.0 In

ಸರಸ್ವತೀ

Image
ಈ ಕವನವು ಈಗ  GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕಡಿದಾದ ಕಣಿವೆಯ ಬೆಣ್ಣೆಯೇ? ಕೆನೆಯೇ! ಸಿಡಿಲಿನ ಕುಡಿಯ ಒಳನಂಜಿನ ಹನಿಯೇ! ಕೊಡದಲ್ಲಿ ತುಳುಕಿದೆ. ಬುಡದಲ್ಲಿ ಬಳುಕಿದೆ. ನೋಡದ ಶಿಖರದ ಮಂಜಿನ ಖನಿಯೇ! ಕರೆಯೊಂದೇ ಸಾಕಲ್ಲ, ಬೇರೇನೂ ಬೇಡ. ಎರೆಯುವ ಹೊತ್ತಿಗೆ ಕರದಲ್ಲೂ ಕೂಡ, ನೆರೆಯಲ್ಲಿ ನೊರೆಯಾಗಿ, ಕೆರೆಯಲ್ಲಿ ಸೆರೆಯಾಗಿ, ಮರುಭೂಮಿಯೊಳಗೇನೇ ಅಡಗಿದೆ ನೋಡ! ಬಾನೆಲ್ಲಾ ಹರಡಿ ಕೋಲ್ಮಿಂಚಿನ ಮಾಲೆ, ಆನೆಗೆ ಅಂಕುಶ, ಟಂಕದ ಸಾಲೆ. ಮಾನವ ಕಾಡಿದ ದಾನವ ಮಾಡಿದ ತಾನವನಡಗಿಸುವಂಥಾ ಕರೆಯೋಲೆ! ಹಸಿರಿನ ಹಂದರಕೆ ಹೂವಿನ ಮೋಡಿ. ಕೆಸರಿನ ಕೆರೆಯಲ್ಲೂ ಸೆಲೆಗಳು ಮೂಡಿ, ಉಸಿರಾಗಿ ಕಡಲಿಂದ, ಬಸಿರಿನ ಒಳಗಿಂದ, ಪಿಸುಗುಟ್ಟಿದಂತಿದೆ ಅಸರಂತವು ಹಾಡಿ. ಛಂದಸ್ಸು: ಲಿಮರಿಕ್ಕಿನ (limerick) ಛದ್ಮವೇಷದಲ್ಲಿ ಛಂದೋವತಂಸ. ೬ ಮಾತ್ರೆಯ ಜಾನಪದಗತಿ. ಈ ಕವನ  Creative Commons Attribution-NonCommercial-NoDerivatives 4.0 International License  ಮೂಲಕ ಲಭ್ಯವಿವೆ. This work is licensed under a Creative Commons Attribution-NonCommercial-NoDerivatives 4.0 International License .

ಸಂಧ್ಯಾವಂದನೆ

Image
ಈ ಕವನವು ಈಗ  GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಹೊತ್ತಿಲ್ಲ, ಗೊತ್ತಿಲ್ಲ. ಕಿಂಚಿತ್ತೂ ಕಿಚ್ಚಿಲ್ಲ. ಕತ್ತಲ ಸೆರಗಿನ ಅಂಚೆ? ಕಿತ್ತಳೆ ಬಣ್ಣ ನೋಡದ ಕಣ್ಣ ತಟ್ಟಿತೇ ಬೆರಗಿನ ಸಂಜೆ? ತಂಗಾಳಿ ಬೀಸಿದೆ. ನೇಸರನ್ನೆತ್ತಿದೆ. ತಂಗಳ ನೆರೆಮನೆಯ ಸಾರೋ? ಕಂಗಳ ಮುಚ್ಚಿದರೆ ನರಸಿಂಹ ಕಂಡಾನೇ? ಕಂಬವನ್ನೊಡೆವವರ್ಯಾರೋ? ಕಣ್ಣಮುಚ್ಚಾಲೆಯ ಆಟದ ಒಳಗೊಂದು ಬಂಗಾರದುಂಗುರವಡಗಿ! ಮಣ್ಣಿನ ಲೋಕದ ಕಣ್ಣಿಗೆ ಕತ್ತಲ ಹುಣ್ಣಿಮೆಯೂ ಬಣ್ಣದ ಬೆಡಗಿ! ಹಿನ್ನೀರ ಊರೊಳಗೆ ಮಿಂದರೆ ಸಿಕ್ಕೀತೇ ಮುನ್ನಿನ ಕೊಳೆ ತೊಳೆದ ಪುಳಕ? ಹೊನ್ನೀರ ತೀರದಲೀಜಾಟವೆಂದರೆ ಚಿನ್ನದ ಬೆಳಕಿನ ಝಳಕ! ಛಂದಸ್ಸು: ಸಾಂಗತ್ಯ ಈ ಕವನ  Creative Commons Attribution-NonCommercial-NoDerivatives 4.0 International License  ಮೂಲಕ ಲಭ್ಯವಿವೆ. This work is licensed under a Creative Commons Attribution-NonCommercial-NoDerivatives 4.0 International License .

ಜ್ಞಾನಸೂತಕ

Image
ಈ ಕವನವು ಈಗ  GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ನೀರಗೆರೆಯ ತಳಸ್ಪರ್ಶದಂತೆ, ಕರಿಮೋಡ ತಂದ ಲಘುವರ್ಷದಂತೆ, ಬಸಿರೊಳಗಿನಿಂದ ಎಳೆ ಹರ್ಷದಂತೆ, ಒಳಹೊರಗು ಹರಿಯಿತಲ್ಲ! ಭಿತ್ತಿಯನ್ನೆ ಕಳೆ. ಬಿತ್ತಿಲ್ಲದೆ ಬೆಳೆ. ನೆತ್ತಿಯಲ್ಲಿ ನೆಲೆನಿಂತ ನೀರಹೊಳೆ. ತಲೆಬಾಗಿಸಿದರೆ ಅಲ್ಲೆ ಹರಿವ ತೊರೆ, ನೆರೆಯೆ ಬಂದಿತಲ್ಲ! ಬೇರಿನಲ್ಲೆ ಫಲ. ಬೇಲಿಯಲ್ಲೆ ಹೊಲ. ಇಂಗಿತವೇ ಹರಿವಂಥ ಜೀವಜಲ! ಮಿಂಚಿನಹುಳದೊಳಬೆಳಕಿನಂತೆ ಬೇರೇನೊ ಹೊಳೆಯಿತಲ್ಲ! ಮಂಜು ಮಸುಕು ಮುಂಜಾವದಲ್ಲಿ ಚಳಿಗಾಲ ಮಾಗಿ ನಿಟ್ಟುಸಿರು ಬಿಟ್ಟ ನಸುಕಾದ ಎದೆಯೆ ಇಬ್ಬನಿಯ ಹಾರ ವರವಾಗಿ ಪಡೆಯಿತಲ್ಲ! ಈ ಕವನ  Creative Commons Attribution-NonCommercial-NoDerivatives 4.0 International License  ಮೂಲಕ ಲಭ್ಯವಿವೆ. This work is licensed under a Creative Commons Attribution-NonCommercial-NoDerivatives 4.0 International License .