ಶಬ್ದವೇದಿಯ ತಾತ್ಪರ್ಯ
ಈ ಲೇಖನವು ಈಗ GitHubಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ.
---
ಶಬ್ದವೇಧಿ ಎಂದಾಗ ಕೆಲವು ಕಥೆಗಳು ನೆನಪಿಗೆ ಬರುತ್ತವೆ. ಏಕಲವ್ಯನ ಕಥೆಯಂತೂ ಪ್ರಸಿದ್ಧ. ಶ್ರವಣಕುಮಾರನ ಕಥೆಯೂ ಇದೆ. ಇಲ್ಲಿ ಶಬ್ದವೇಧಿ ಎಂದರೆ ಶಬ್ದಮಾತ್ರದಿಂದ ದಿಕ್ಕನ್ನು ಗ್ರಹಿಸಿ ಗುರಿಯಿಟ್ಟು ಬಾಣ ಹೊಡೆಯುವ ಕಲೆ. ಇಲ್ಲೆಲ್ಲಾ ಶಬ್ದವೇಧಿ ಎಂದರೆ ಅವಿವೇಕದ ಪ್ರತೀಕವೇ. ವಿದ್ಯೆಯೇನೋ ಚಮತ್ಕಾರಿಯೇ ಆದರೂ, ಅದನ್ನು ಪ್ರಯೋಗಿಸಿದವನ ಉದ್ದೇಶ ಸರಿಯೇ ಇದ್ದರೂ, ಈ ಕಥೆಗಳಲ್ಲಿ ಅದರ ಪರಿಣಾಮ ಮಾತ್ರ ವಿದ್ಯೆ, ಉದ್ದೇಶಗಳೆಲ್ಲವನ್ನೂ ಮೀರಿ ವಿಪರೀತವಾಗುತ್ತದೆ.
ಶಬ್ದ ಎಂದರೆ ಕನ್ನಡದಲ್ಲಿ ಮಾತೂ ಹೌದು. ಮಾತು ಎಂದರೆ ಕನ್ನಡದಲ್ಲಿ ಪ್ರತಿಜ್ಞೆ, ವಾಗ್ದಾನ ಎಂದೂ ಆಗುತ್ತದೆ. ಹೀಗೆ, ಯುದ್ಧದಲ್ಲಿ ರಥದ ಚಕ್ರಕ್ಕೆ ಬೆರಳು ಕೊಟ್ಟು ಜೀವ ಉಳಿಸಿದ ಕೈಕೇಯಿಗೆ ದಶರಥ ಕೊಟ್ಟ ವಾಗ್ದಾನ, ಏಕಲವ್ಯನ ಕಥೆಯಲ್ಲಿ ದ್ರೋಣ ಅರ್ಜುನನಿಗೆ ಕೊಟ್ಟ ವಾಗ್ದಾನ, ಇವೂ ಬಂದು ಸೇರುತ್ತವೆ. ಇಲ್ಲೂ, ಮಾತು ಕೊಟ್ಟವರು (ಮಾತಿನ ಬಾಣ ಬಿಟ್ಟವರು) ದುರಂತನಾಯಕರೇ . ಶಬ್ದವೇಧಿಗಳೇ. ಅವರ ಪ್ರತಿಜ್ಞಾಪಾಲನೆಯ ಪರಿಣಾಮ ವಿಪರೀತವೇ. ಸ್ವಲ್ಪ ಸ್ವಾತಂತ್ರ್ಯವಹಿಸಿದರೆ, ಕಾಮದಹನದ ಕಥೆಯೂ ಇಲ್ಲಿ ಪ್ರಸ್ತುತ.
ಹಾಗೆಯೇ, ಶಬ್ದವನ್ನು ಆಯುಧವೆಂದು ತಿಳಿದವರೂ ಶಬ್ದವೇಧಿಗಳೇ. ಇಂಥವರಿಗೂ ಹೆಚ್ಚು ಹುಡುಕಬೇಕಾಗಿಲ್ಲ. ನಮ್ಮ ಸುತ್ತಲೂ ತುಂಬಿದ್ದಾರೆ ಎನ್ನುವ ಭ್ರಾಂತಿ ಹುಟ್ಟಿಸುವಷ್ಟು ಸಶಕ್ತರಾಗಿದ್ದಾರೆ. Experts ಎಂದುಕೊಂಡು ಸಶಸ್ತ್ರರೂ ಆಗಿದ್ದಾರೆ. ಇಲ್ಲಿ ವಿದ್ಯೆ ಇರಬಹುದಾದರೂ, ಉದ್ದೇಶವಂತೂ ಸರಿಯಿಲ್ಲ. ಅಥವಾ ಸರಿಯಿರದೇ ಇರಲೂ ಬಹುದು, ಎನ್ನುವ ಅರಿವೇ ಇಲ್ಲ.
ಆದರೆ ಈ ಕವನದ ಶೀರ್ಷಿಕೆ ಶಬ್ದವೇದಿ. ಮಹಾಪ್ರಾಣ ತೆಗೆದದ್ದು ಒಂದು ರೀತಿಯ ವಿಡಂಬನೆ. ಈ ಕವನವನ್ನು ಇಡಿಯಾಗಿ ವಿಡಂಬನೆಯೆಂದೇ ಓದಬಹುದು. ಇದು ದ್ರೋಣ, ಅರ್ಜುನ, ದಶರಥ, ಕೈಕೇಯಿ ಮಾತ್ರವಲ್ಲ, ಹೆಚ್ಚು ಕಡಿಮೆ ನಮ್ಮ ಕಾಲದ ನೆಹರೂ, communists, socialists, authoritarians, globalists, experts ಇತ್ಯಾದಿ ಜನಸಾಮಾನ್ಯರ ಬದುಕನ್ನು ತಾವೇ ಸಂಭಾಳಿಸುವ ಹೊಣೆಹೊತ್ತವರೆಲ್ಲರ ವಿಡಂಬನೆ.
ಹೀಗೆಂದಾಗ ಒಂದು ಮಾತನ್ನು ಹೇಳುವುದು ಮುಖ್ಯ. ಇಲ್ಲಿ ವಿಡಂಬನೆಗೀಡಾಗಿರುವುದು ಕರ್ಮವಲ್ಲ. ಕರ್ತಾರರೂ ಅಲ್ಲ. ಮಾಡಿದ ಕೆಲಸವೂ ಉತ್ತಮವಾಗಿರಬಹುದು. ಕೆಲಸವನ್ನು ಮಾಡಿದವರೂ ಉತ್ತಮರೇ ಆಗಿರಬಹುದು. ಅದರ ಹಿಂದಿನ, ಅವರ ಉದ್ದೇಶವೂ ಉತ್ತಮವೇ ಇರಬಹುದು. ಒಂದು ರೀತಿಯಲ್ಲಿ ಆದರ್ಶಪ್ರಾಯವೇ ಆಗಿರಲೂ ಬಹುದು. ಇಲ್ಲಿ ವಿಡಂಬನೆಗೀಡಾಗಿರುವುದು ಕೇವಲ (ಕಾಳಿದಾಸ ವಾಗರ್ಥಗಳ ಬಗ್ಗೆ ಹೇಳಿದಂತೆ) ಕರ್ಮಫಲಗಳ ಬೇರ್ಪಡಿಸಲಾರದ ಸಂಪೃಕ್ತಿಯ ಅಜ್ಞಾನ, ಅಷ್ಟೇ. ಮತ್ತು ಅಂತಹಾ ಅಜ್ಞಾನದಿಂದ ಆಗಬಹುದಾದ ಅನರ್ಥ.
ಆದರೆ, ಶಬ್ದವೇದಿಯನ್ನು ಅದರದ್ದೇ ನೆಲೆಯಲ್ಲಿ ನೋಡಿದರೆ ಬೇರೆ ಅರ್ಥಗಳೂ ಹೊಳೆಯುತ್ತವೆ. ಶಬ್ದವೇದಿ ಅಂದರೆ ಶಬ್ದ ತಿಳಿದವನು ಎಂದೂ ಆಗಬಹುದು. ಅಥವಾ ಅಂಥಾ ತಿಳಿಯುುವಿಕೆ. ತಿಳುವಳಿಕೆ. ಶಬ್ದ ಅಂದರೆ ಧ್ವನಿಯೂ ಕೂಡ. ಮೇಲಾಗಿ, ತತ್ಪುರುಷ ಸಮಾಸದಲ್ಲಿ ಬೇರೆ ಬೇರೆ ವಿಭಕ್ತಿಗಳನ್ನು ಆರೋಪಿಸುವ ಅನುಕೂಲವೂ ಉಂಟು. ನಿಜವಾಗ ಇದೆಯೋ? ಇಲ್ಲವೋ? ನಾವೇ ಆರೋಪಿಸಿಕೊಳ್ಳೋಣ. ಅಂತೂ, ಎಲ್ಲ ಆಯಾಮಗಳಲ್ಲಿ, ಶಬ್ದವೇ ತಿಳಿದವನು. ಅಂಥಾ ತಿಳುವಳಿಕೆ.
ಹಾಗಾದರೆ ಇಂಥಾ ನಿಜವಾದ ಶಬ್ದವೇದಿಗಳು ಇದ್ದಾರೆಯೇ? ಇದ್ದರೆ ಹೇಗಿದ್ದಾರು?
ಇದಕ್ಕೆ ಉತ್ತರ ಸುಲಭ. ಯಾರ ಶಬ್ದಗಳು ಬಾಳಿ, ಬೆಳೆದವೋ, ಬಾಳನ್ನು ಬೆಳಗಿದವೋ ಅವರೇ ನಿಜವಾದ ಶಬ್ದವೇದಿಗಳು. ಆದಿಕವಿ ವಾಲ್ಮೀಕಿಗಿಂತ ಶಬ್ದವೇದಿಗಳು ಯಾರು? ಇಲ್ಲಿ ತಿಳುವಳಿಕೆ ಶಬ್ದಮಾತ್ರದ್ದಲ್ಲ. ಇವರ ಶಬ್ದವೇ ತಿಳುವಳಿಕೆ. ನಮ್ಮ ಕಾಲದಲ್ಲಿ, ಸಂವಿಧಾನವನ್ನು ಬರೆದ, ಬರೆದದ್ದಕ್ಕಿಂತಲೂ ಚೆನ್ನಾಗಿ ಪ್ರಜಾಪ್ರಭುತ್ವವನ್ನು , ಅದಕ್ಕಿಂತಲೂ ಹೆಚ್ಚಾಗಿ ಈ ದೇಶವನ್ನು ತಿಳಿದ ಅಂಬೇಡ್ಕರರೂ ಶಬ್ದವೇದಿಗಳೇ. ತಿಳುವಳಿಕೆಯನ್ನೇ ಶಬ್ದವಾಗಿಸಿದವರೆಲ್ಲಾ ನಿಜವಾದ ಶಬ್ದವೇದಿಗಳೇ.
ಹಾಡಿ ಎಲ್ಲ ಕಡೆಯು ಸಂದ
ನಾಡಿದಂತೆ ನಡೆದುಬಂದ ದಾರಿ ಕಾಣದೆ
ಕಾಡಬೇಡ ಎಂದರೆ ಕಾಡಿನ ಬೇಡ. ವಾಲ್ಮೀಕಿಯೂ ಹಿಂದೊಮ್ಮೆ ಬೇಡನಾಗಿದ್ದವನೇ. ಏಕಲವ್ಯನೂ ಆಗಬಹುದು. ಸ್ವತಃ ಶಿವನೇ ಯಾಕಾಬಾರದು? ಮಾಹೇಶ್ವರ ಸೂತ್ರಗಳಲ್ಲವೇ? ಹಾಗೆಯೇ, ಬೇಡ ನಾಗರಿಕತೆಗೆ ಹೊರಗಾದವನು. ಬೇಡವಾದವನು. ಅಂಬೇಡ್ಕರ್.
ಮತ್ತೆ ವಿಡಂಬನೆಯ ವಿಪರೀತಾರ್ಥದಲ್ಲಿ ಕಂಡರೆ, ನಾಗರಿಕನೆನಿಸಿಕೊಂಡೂ ಅನಾಗರಿಕ, ಅವಿವೇಕಿ ಎಂದೂ ಆಗಬಹುದು. ಈ ಕವನದಲ್ಲಿ ಸೀಮಿತವಾಗಿ ದುರಂತನಾಯಕರಾಗಿ ವಿಡಂಬನೆಗೊಳಗುವ ದಶರಥ, ಅರ್ಜುನ, ನೆಹರೂ. Cultural Revolution ಮೊದಲಾಗಿ ಈಗಲೂ ಮರೀಚಿಕೆಗಳ ಹಿಂದೆ ಲೋಕವನ್ನು ಅಟ್ಟುತ್ತಿರುವ ಮಾರೀಚಸಂಕುಲವೂ ಇಲ್ಲಿ ವಿಡಂಬನೆಗೆ ಈಡಾಗುತ್ತದೆ (communists, socialists, authoritarians, globalists, experts ಇತ್ಯಾದಿ ಬಹುರೂಪಿ ರಕ್ತಬೀಜರು).
ಇದು ಪಡೆದುಬಂದ ನಾಡಂತೆ. ಎಲ್ಲಕಡೆಯೂ ಸಂದ ನಾಡು. ಹಾಡಿ(ಬನ)ಯಂತೆ ಎಲ್ಲೆಡೆಯೂ ಹಬ್ಬಿದ ನಾಡು. ಕಾಡಬೇಡನೂ ಇಂಥಾ ನಾಡನ್ನು ಪಡೆದುಬಂದವನೇ. ಆದರೆ ಶಬ್ದವನ್ನು ಬಾಣದಂತೆ ಬಿಟ್ಟವರಿಗೆ ಅದು ಹಾಡಿ ಹಬ್ಬಿದ್ದು ಹೇಗೆ ಕಾಣಿಸಬೇಕು?
ಕಾಡಬೇಡನೂ ಎಲ್ಲಕಡೆಯೂ ಸಂದವನು. ಆಡಿದಂತೆ ನಡೆದುಬಂದವನು. ಅವನಿಗೆ ಬೇರೆ ದಾರಿಯೇ ಕಾಣದು. ಕಾಣಿಸುವವರೂ ಯಾರೂ ಇಲ್ಲ. ಯಾರೂ ಕಾಣಿಸಬೇಕಾಗಿಯೂ ಇಲ್ಲ. ಅಂಥವನ ದಾರಿ. ವಾಲ್ಮೀಕಿ, ಏಕಲವ್ಯ, ಅಂಬೇಡ್ಕರರ ದಾರಿ.
ನಾಡಿನಿಂದ ಪಡೆದುಬಂದ ದಾರಿಯೂ ಇದೇ. Darwin ಮಂಡಿಸಿದ ವಿಕಾಸದ ದಾರಿಯೂ ಇದೇ. ನಡೆಯದೇ ಪಡೆಯುವಂಥದ್ದಲ್ಲ. ಪಡೆದಮೇಲೂ ನಡೆಯಬೇಕಾದದ್ದು. ಶಿವ.
ಕಾಡಬೇಡವನ್ನು ಕ್ರಿಯಾಪದವಾಗಿಸಿದರೆ? ಹೀಗೆ ಉನ್ನತವಾದದ್ದನ್ನು ಕಾಡಬೇಡ. ಮಾ ನಿಷಾದ. ಕಾಡಬೇಡ ಅಂದರೆ ಈ ಅರ್ಥದಲ್ಲಿ ಮಾ ನಿಷಾದದ ಅನುವಾದವೇ. ನಡೆದುಬಂದ ದಾರಿಯೂ ಕಾಣದೇ? ಕಾಡಬೇಡರಿಗೆ ಹೇಗೆ ಕಂಡೀತು?
ಕಾಡಿಬೇಡಿ ಅಂತು ಇಂತು
ಮೋಡಿಮಾಡಿ ಕಂತು ಕಂತು
ಹೂಡಿಬಿಟ್ಟ ಬಾಣ ನೆಟ್ಟು ಸೊಟ್ಟಗಾಗಿದೆ.
ಹೂಡಿಬಿಟ್ಟ ಬಾಣ ನೆಟ್ಟು ಸೊಟ್ಟಗಾಗಿದೆ.
ದಾರಿ ಸುಲಭವಲ್ಲ. ಬಂದ ದಾರಿಯೂ, ಮುಂದಿರುವ ದಾರಿಯೂ. ಅದಕ್ಕಾಗಿ ಕಾಡಬೇಕು. ಅದೂ ಕಾಡುತ್ತದೆ. ಅದನ್ನು ಬೇಡಬೇಕು. ಒಂದರ್ಥದಲ್ಲಿ ಅದೂ ಬೇಡಿದೆ. ಬೇಡುತ್ತಿದೆ. ಅದನ್ನು ನಿಧಾನವಾಗಿ, ಸ್ವಲ್ಪ ಸ್ವಲ್ಪವೇ (ಕಂತಿನಲ್ಲಿ) ಸವೆಸ(ಕಂತಿಸ)ಬೇಕು. ಇಲ್ಲಿ ವಿದ್ಯೆ, ಸಾಧನೆ, ಉದ್ದೇಶ ಯಾವುದರಿಂದಲೂ ಕೆಲಸ ಸಾಗದು. ನಡೆಯಲೇಬೇಕಷ್ಟೇ. ನಮ್ಮ ಕಾಡಬೇಡರೂ (ವಾಲ್ಮೀಕಿ, ಏಕಲವ್ಯ, ಅಂಬೇಡ್ಕರ್) ಹೀಗೆ ನಡೆದವರೇ. ಇಲ್ಲಿ short-cut ಎಂಬುದಿಲ್ಲ. ನಮ್ಮ ಭಾಷೆಗಳಲ್ಲೂ short-cutಇಗೆ ಪರ್ಯಾಯವಾಗುವ ಶಬ್ದಗಳು ಸಿಗುವುದಿಲ್ಲ. ಸಿಗದಿರುವುದೇ ಸರಿ ಅನ್ನಿಸುತ್ತದೆ. ಅಡ್ಡದಾರಿ ಎಂದೇ ಕರೆಯಬೇಕಷ್ಟೇ. ಬಾಣದಂತೆ ಹಾರಿದರೆ ಸೊಟ್ಟಗಾಗುವುದು ಬಾಣಮಾತ್ರವಲ್ಲ, ದಾರಿಯೂ ಕೂಡ!
ವಿಪರೀತಾರ್ಥವಾಗಿ, ಕಾಡಬೇಡರು ನಡೆದುಬಂದ ದಾರಿಯನ್ನು ತಪ್ಪಿಸಲು ಹೇಗುಹೇಗೋ ಕಾಡಿದ್ದಾರೆ, ಬೇಡಿದ್ದಾರೆ (ನೆಹರೂ). ಕಾಡುತ್ತಿದ್ದಾರೆ, ಬೇಡುತ್ತಿದ್ದಾರೆ (globalists, experts, ಚೀನಾ). ನಮಗೇ ಗೊತ್ತಾಗದಂತೆ ಕಂತುಕಂತಾಗಿ ಮೋಡಿಮಾಡಿದ್ದಾರೆ. ಮಾಡುತ್ತಿದ್ದಾರೆ. ಅವರ ಬಾಣಗಳು ನೆಟ್ಟಿವೆ. ಅಂತೆಯೇ, ದಾರಿಯೂ ಸೊಟ್ಟಗಾಗಿದೆ.
ಕಂತು ಅಂದರೆ ಸಂಸ್ಕೃತದಲ್ಲಿ ಮನ್ಮಥ. ಮೋಡಿಮಾಡುವವ. ಶಿವನನ್ನೂ ಮೋಡಿಮಾಡಹೊರಟವ. ಆದರೆ ಬಾಣ ಮಾತ್ರ ಹೊಡದವನಿಗೇ ನೆಟ್ಟಿದೆ. ಇದು ಶಿವದ ಮೇಲೆ ಮೋಡಿಮಾಡುವ ಶಬ್ದಬಾಣಗಳನ್ನು ಹೂಡುವ ಎಲ್ಲರ ಪಾಡು.
ಬಾಣವೇನೊ ಹೊಡೆದು ಬಿಚ್ಚೆ
ಕಾಣದಂಥ ಕನಸು ಕಿಚ್ಚೆ
ಕೋಣನ ಮುಂದಷ್ಟು ಹಾಡಿ ಕಾಡ ಹತ್ತಿದೆ.
ಬಾಣವೇನೊ ಹೊಡೆದು ಬಿಚ್ಚೆ
ಕಾಣದಂಥ ಕನಸು ಕಿಚ್ಚೆ
ಕೋಣನ ಮುಂದಷ್ಟು ಹಾಡಿ ಕಾಡ ಹತ್ತಿದೆ.
ಬಾಣ ಹೊಡೆದ ಉದ್ದೇಶ ಏನೇ ಇದ್ದರೂ ಅದು ಬಿಚ್ಚಿದ್ದು ಮಾತ್ರ ಬೇರೇನನ್ನೋ. ಯಾರೂ ಕಾಣದಂಥ, ಕಾಣಲಾರದಂಥ ಕನಸನ್ನು. ಹೀಗೆ ಸುಡುತ್ತಿರುವಾಗ, ಕಾಣಬಾರದಂಥ ಕನಸೂ ಅನ್ನಬೇಕಷ್ಟೇ. ದ್ರೋಣನಿಗೆ ಕಾಣದ ಅರ್ಜುನನ ಕಿಚ್ಚು. ದಶರಥನಿಗೆ ಕಾಣದ ಕೈಕೇಯಿಯ ಕಿಚ್ಚು. ಬೇಡನಿಗೆ ಕಾಣದ ಕ್ರೌಂಚದ ಕಿಚ್ಚು. ನೆಹರೂವಿಗೆ ಕಾಣದ (ಅಂಬೇಡ್ಕರಿಗೆ ಕಂಡ) ದೇಶದೊಳಗಿನ ಕಿಚ್ಚು. ಹೊರಗಿನ ಕಿಚ್ಚೂ. ಲೋಕ್ಕೆ ಬೆಂಕಿ (ಈಗಿನ ವೈರಸ್ಸಿನಿಂದ ಮಾತ್ರವಲ್ಲ, ಹತ್ತು ವರ್ಷಕ್ಕೂ ಹಿಂದೆಯೇ) ಹಚ್ಚಿದ ಚೀನಕ್ಕೂ, ಹಚ್ಚಿಸಿಕೊಂಡ ಲೋಕಕ್ಕೂ ಇನ್ನೂ ಕಾಣದ ಕಿಚ್ಚು.
ಇಂಥಾ ಕನಸು ಆಡಿದ, ಇನ್ನೂ ಆಡುತ್ತಿರುವ ತಾಂಡವ ನೊಡಿದವರು ಯಾರು? ಕೋಣನ ಮೇಲೆ ಕೂತವನೇ (ಯಮ) ಬಂದರೂ (ವೈರಸ್ಸಿನ ವೇಷದಲ್ಲಿ) ಇನ್ನೂ ಮೋಡಿಮಾಡುವವರೇ ಎಲ್ಲ. ಕೋಣನ ಮುಂದೆ ಕಿನ್ನರಿಯೋ? ಕಿನ್ನರಿಯ ಮುಂದೆ ಕೋಣವೋ? ಯಾರಿಂದ ಯಾರಿಗಾಗಿ ತಾಂಡವ? ಮತ್ತೆ ಇನ್ನೊಮ್ಮೆ ಪುನರಾವರ್ತನೆಯಾಗುವವರೆಗೆ. ಹೀಗೆ ಕಾಡೇ ಹತ್ತಬೇಕಷ್ಟೇ. ಆದರೂ ಕಾಡುತ್ತಿದೆ.
ಎಣಿಸಿದಂತೆ ಆಗಲಿಲ್ಲ
ಕುಣಿಕೆ ಸೂತ್ರ ಕಾಣಲಿಲ್ಲ
ಹಣತೆಯೊಂದು ಮಾತ್ರ ಇಲ್ಲಿ ಏನು ಕಂಡಿದೆ.
ಈ ಕುಣಿತ ಎಣಿಕೆಗೆ ಬರುವಂಥದ್ದಲ್ಲ. ಇದಕ್ಕೆ ಕುಣಿಕೆ ಹಾಕುವಂತೆಯೂ ಇಲ್ಲ. ಹಾಕಲು ಅದರ ಸೂತ್ರ ಕಾಣಬೇಕಲ್ಲ. ಈ ಲೆಕ್ಕಾಚಾರದ ಸೂತ್ರಗಳನ್ನು ಸುಟ್ಟ ಮೂರನೆಯ ಕಣ್ಣು, ಏನನ್ನೋ ಕಂಡಿದೆ. ಕಂಡು ನಿಂತಿದೆ. ಹೊತ್ತುವುದನ್ನು ಹೊತ್ತಿಸಿದೆ. ಬತ್ತುವುದನ್ನೂ ಬತ್ತಿಸಿದೆ. ಆದರೆ ಅಷ್ಟೇ ಅಲ್ಲ. ಬಿತ್ತುವುದನ್ನು ಬಿತ್ತಿಸಿದೆ ಕೂಡ. ಇದೊಂದು ಎಣಿಕೆಗೆಟುಕದ, ಸೂತ್ರವಿಲ್ಲದ ಕುಣಿಕೆ. ಇಂಥಾ ದಾರಿ, ಸೊಟ್ಟಗಾಗಿಯೂ ಮುಂದೆ ಸಾಗಿದೆ.
ಬೆರಳು ಗಾತ್ರ ಕಳಚಿಕೊಂಡ
ಅರಳಿ ಮರದ ಮುಂದೆ ನಿಂತ
ನೆರಳು ಮಾತ್ರ ಅರಸಿ ಕಣ್ಣು ಕತ್ತಲಾಗಿದೆ.
ನೆರಳು ಮಾತ್ರ ಅರಸಿ ಕಣ್ಣು ಕತ್ತಲಾಗಿದೆ.
ಏಕಲವ್ಯ ಬೆರಳನ್ನೇನೋ ಕಳಚಿಕೊಂಡ. ಆದರೆ ಅರಳಿ ಮರವೇ ಆದ. ದ್ರೋಣಾರ್ಜುನರೂ ಬೆರಳನ್ನು (ಆತ್ಮ) ಕಳಚಿಕೊಂಡರು. ಕಳಚಿಕೊಂಡು ಅರಳಿಮರದ ಮುಂದೆ ನಿಂತರು. ಆದರೆ ಅವರು ಅರಸಿದ್ದು ಅದರ ನೆರಳು ಮಾತ್ರ. ರಥದ ಚಕ್ರಕ್ಕೆ ಬೆರಳು ಕೊಟ್ಟ ಕೈಕೇಯಿ (ಅರಸಿ) ಮರವೇ ಮುಂದೆ ನಿಂತಾಗ ಬೇಡಿದ್ದು ಅದರ ನೆರಳನ್ನು ಮಾತ್ರ. ಹೀಗೆ ಮರವಿಲ್ಲದ ನೆರಳನ್ನು ಹುಡುಕುವವರೇ ಎಲ್ಲ. ಬೆರಳನ್ನು (ಆತ್ಮ) ಕಳಚಿಕೊಂಡವರೇ. ಉಳಿದವರದ್ದನ್ನೂ ಕಾಡಿಬೇಡಿ ಕಳಚುವವರೇ. ಇಂಥಾ ಕತ್ತಲುಗಣ್ಣಿನವರಿಗೆ ಅರಳಿದ ಮರ ಹೇಗೆ ಕಾಣಬೇಕು?
ಇದಕ್ಕೆ ವಿಪರೀತವಾಗಿ, ನೆರಳನ್ನೇ ಬಯಸಿದ ಕಾಮ ಗಾತ್ರ(ದೇಹ)ವನ್ನೇ ಕಳಚಿಕೊಂಡಿದ್ದಾನೆ. ಅವನ ಬೆರಳೇ ಅರಳಿ ಎಲ್ಲೆಡೆಯೂ ಹಬ್ಬಿದೆ. ಬಾಣವನ್ನು ಬಿಡಲೇಬೇಕೆಂದರೆ ಹೀಗೆ ಬಿಡಬೇಕು. ವಾಲ್ಮೀಕಿಯೂ ಹೀಗೆಯೇ.
ಸಿದ್ಧಹಸ್ತದಿಂದ ಎದ್ದು
ಬಿದ್ದ ಮೈಯನಣಕಿಸಿದ್ದು
ಗೆದ್ದ ಲಂಕೆ ಮೀರಿ ಅರಿವೆ ಬತ್ತಲಾಗಿದೆ.
ಕಥೆಗಳಲ್ಲಿನ ಶಬ್ದವೇಧಿಗಳೆಲ್ಲರೂ ಸಿದ್ಧಹಸ್ತರೇ. ಬಾಣ ಹೊಡೆಯಲು ಯಾವಾಗಲೂ ಎದ್ದೇಳುವ ಉತ್ಸಾಹಿಗಳು. ನಮ್ಮ ಕಾಲದ ಶಬ್ದವೇಧಿಗಳೂ ಹೀಗೆಯೇ ಉತ್ಸಾಹಿಗಳು. ಇವರ ಬಾಣಗಳಿಗೆ ಬಿದ್ದ ಮೈಗಳಿಗೆ ಲೆಕ್ಕವುಂಟೇ? ಆ ಮೈಗಳಂತೂ ಎದ್ದು ಬಿದ್ದು ಬದುಕಿದವು. ಇವರಂತೆ ಪಡೆದುಬಂದವಲ್ಲ. ಇವರ ಉತ್ಸಾಹ, ಅಂಥಾ ಮೈಗಳನ್ನು ಅಣಕಿಸುವ ವಿಕಾರ. ಈ ವಿಕಾರದ ಗೆದ್ದಲು ಅಂಕೆ ಮೀರಿದೆ. ದಶರಥನು ಉತ್ಸಾಹದಿಂದ ಹೊಡೆದ ಬಾಣ, ಶ್ರವಣಕುಮಾರನಿಗೆ ಮಾತ್ರವಲ್ಲ, ರಾಮ ಗೆದ್ದ ಲಂಕೆಯನ್ನೂ ಮೀರಿ ನಾಟಿದೆ.
ನಮ್ಮ ಕಾಲದ ಸಿದ್ಧಹಸ್ತರ ಅರಿವೆಗೂ ಗೆದ್ದಲು ಹಿಡಿದಿದೆ. ಬತ್ತಲಾಗಿದ್ದಾರೆ. ಆದರೂ ಎದ್ದುಬಿದ್ದವರ (ಅಂಬೇಡ್ಕರ್) ಅಣಕ ನಡೆಯುತ್ತಲೇ ಇದೆ. ಪಡೆದುಬಂದದ್ದಕ್ಕೆ ಗೆದ್ದಲಿಟ್ಟವರೂ (ನೆಹರೂ, ಚೀನಾ. ಚೀನಾವಂತೂ, ಅಕ್ಷರಶಃ, ಲೋಕಕ್ಕೇ ಗೆದ್ದಲಿಟ್ಟಿದೆ), ಇಡಿಸಿಕೊಂಡವರೂ ಬತ್ತಲಾಗಿಯೇ ಅಣಕವಾಡುತ್ತಿದ್ದಾರೆ. ಬತ್ತಲಾದವರನ್ನು ಬಯಲು ಮಾಡುವ ಬಗೆ ಹೇಗೆ?
ಹಾಗಿದ್ದರೂ, ನಿಜವಾದ ಸಿದ್ಧಹಸ್ತರಿಗೆ ಬಿದ್ದ ಮೈಯೂ ಅರಿವು ತೆರೆದುಕೊಳ್ಳಲು ಒಂದು ನಿಮಿತ್ತ. ಹಾಗೆ ತೆರೆದದ್ದು ತೆರೆದೇ ಇದೆ. ಈಗಲೂ ತೆರೆದುಕೊಳ್ಳುತ್ತಲೇ ಇದೆ.
___
ಹಿಂದಿನ ಆವೃತ್ತಿಯಲ್ಲಿ ಕೆಲವು ತಪ್ಪುಗಳಿದ್ದವು (ಶಬ್ದವೇಧಿ/ಶಬ್ದವೇದಿ ವ್ಯತ್ಯಾಸ). ಕಥೆ ಮತ್ತಿತರ ವಿಷಯಗಳ ಹಿನ್ನೆಲೆ ಕೊಟ್ಟಿರಲಿಲ್ಲ. ವಿಡಂಬನೆಯ ಸೀಮಿತ ವ್ಯಾಪ್ತಿಯನ್ನೂ ತಿಳಿಸಿರಲಿಲ್ಲ. ಈ ಆವೃತ್ತಿಯಲ್ಲಿ ಇವನ್ನು ಗಮನದಲ್ಲಿಟ್ಟುಕೊಂಡು ಬದಲಾವಣೆ ಮಾಡಿದ್ದೇನೆ. ತಪ್ಪುಗಳನ್ನು ತಿದ್ದಿದ ಮಿತ್ರರೆಲ್ಲರಿಗೂ ಕೃತಜ್ಞ.
ಈ ಲೇಖನ Creative Commons Attribution-NonCommercial-NoDerivatives 4.0 International License ಮೂಲಕ ಲಭ್ಯವಿವೆ.
This work is licensed under a Creative Commons Attribution-NonCommercial-NoDerivatives 4.0 International License.
Comments
Post a Comment