Posts

ಕನ್ನಡದ ಭಕ್ತಿ - ಎಕಾರದ ಆವೇಶ

Image
ಈ ಲೇಖನವು ಈಗ GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಪ್ರಸ್ತಾವನೆ ಕೇಶಿರಾಜ ನ ಶಬ್ದಮಣಿದರ್ಪಣ ದ ಸೂತ್ರ ೧೧೭ ರಲ್ಲಿ ಹಾಗೂ ಸೂತ್ರ ೧೨೯ ರಲ್ಲಿ, ಹಳಗನ್ನಡದಲ್ಲಿ  ಎಕಾರವು ಕ್ರಮವಾಗಿ ತೃತೀಯಾ ವಿಭಕ್ತಿಯ ಹಾಗೂ ಸಪ್ತಮೀ ವಿಭಕ್ತಿಯ ಅರ್ಥದಲ್ಲಿ ಕಾಣಿಸುತ್ತದೆ  ಎಂದು ನಿರೂಪಿಸಲಾಗಿದೆ.  ಇದು ಅಷ್ಟು ಸಮಂಜಸವಲ್ಲ ವೆಂದೆನಿಸಿದ ಕಾರಣ, ಕೇಶಿರಾಜ ಹೇಳಿದ ಎಕಾರದ ಬಳಕೆ, ಅರ್ಥಸಂದರ್ಭಗಳನ್ನು ಇನ್ನಷ್ಟು ಸ್ಫುಟಗೊಳಿಸುವ ಪ್ರಯತ್ನ ಇಲ್ಲಿದೆ. ಕನ್ನಡದಲ್ಲಿ ಕಾಣುವ ಕೆಲವು ವೈಚಿತ್ರ್ಯಗಳು ಆಗಾಗ ನನ್ನನ್ನು ಕಾಡುತ್ತಲೇ ಬಂದಿವೆ. ಉದಾಹರಣೆಗೆ, ಒಂದೇ ವಿಭಕ್ತಿಪ್ರತ್ಯಯದ ವಿಭಿನ್ನ ರೂಪಗಳು (ದ್ವಿತೀಯಾ - ಅಂ/ಅನು/ಅನ್ನು, ತೃತೀಯಾ - ಇಂ/ಇಂದ, ಚತುರ್ಥೀ - ಕೆ/ಗೆ/ಇಗೆ/ಅಕ್ಕೆ/ಇಕ್ಕೆ, ಸಪ್ತಮೀ - ಒಳ್/ಒಳಗೆ/ಅಲ್/ಅಲಿ/ಅಲ್ಲಿ, ಇತ್ಯಾದಿ). ಷಷ್ಠೀರೂಪದ (ಕೆಲವೊಮ್ಮೆ ಅದಕ್ಕೆ ಸಮೀಪರೂಪದ) ದ್ವಿತೀಯಾ (ಉದಾಹರಣೆಗೆ, ಕಂಡು ಕಂಡು ನೀ ಎನ್ನ ಕೈಬಿಡುವರೇ ಎಂಬ ಪುರಂದರದಾಸರ ಪ್ರಸಿದ್ಧವಾದ ಸಾಲಿನಲ್ಲಿ ಎನ್ನ ಎಂಬುದು ಷಷ್ಠೀ ವಿಭಕ್ತಿಯಂತೆ ಕಂಡರೂ, ಅದು ನಿಜವಾಗಿ ಎನ್ನನ್ನು ಎಂಬ ದ್ವಿತೀಯಾ ವಿಭಕ್ತಿರೂಪವೇ ಆಗಿದೆ). ಇಂತಹ ವಿಚಾರಗಳ ಸ್ವರೂಪ ಮನಸ್ಸಿನಲ್ಲಿ ತಿಳಿಗೊಳ್ಳತೊಡಗಿದಾಗ, ತಿಳುವಳಿಕೆ ಇನ್ನೂ ಸ್ಫುಟವಾಗಬೇಕಾದರೆ ಹಳಗನ್ನಡದ, ಅದರಲ್ಲೂ, ಹಳಗನ್ನಡವ್ಯಾಕರಣದ ಪರಿಚಯ ಅಗತ್ಯವೆನಿಸಿತು. ಅದರೆ ...

ನಿಸ್ವನ - ಬೆಳಗು

Image
   ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ:  ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್:  ಹೇಮಂತ್ ಕುಮಾರ್ ತಾಳವಾದ್ಯ:  ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಕೀಬೋರ್ಡ್:  ಟೋನಿ ಮ್ಯಾಥ್ಯೂ ಧ್ವನಿತಂತ್ರಜ್ಞಾನ:  ಬಾಲಕೃಷ್ಣ ರಾವ್ ಈ ಹಾಡಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಕಾಂಭೋಜಿ ರಾಗ ಅಧಾರವಾಗಿದೆ. ಇಡೀ ಕವನ ಹೀಗಿದೆ. ಬೆಳಗು ೧ ಮೂಡಲ ಮನೆಯಾ ಮುತ್ತಿನ ನೀರಿನ ಎರಕಽವ ಹೊಯ್ದಾ ನುಣ್ಣ-ನ್ನೆರಕಽವ ಹೊಯ್ದಾ ಬಾಗಿಲ ತೆರೆದೂ ಬೆಳಕು ಹರಿದೂ ಜಗವೆಲ್ಲಾ ತೊಯ್ದಾ. ಹೋಯ್ತೋ-ಜಗವೆಲ್ಲಾತೊಯ್ದಾ ೨ ರತ್ನದರಸದಾ ಕಾರಂಜೀಯೂ ಪುಟಪುಟನೇ ಪುಟಿದು ತಾನೇ-ಪುಟಪುಟನೇ ಪುಟಿದು ಮಘಮಘಿಸುವಾ ಮುಗಿದ ಮೊಗ್ಗೀ ಪಟಪಟನೇ ಒಡೆದು ತಾನೇ-ಪಟಪಟನೇ ಒಡೆದು. ೩ ಎಲೆಗಳ ಮೇಲೇ ಹೂಗಳ ಒಳಗೇ ಅಮೃತಽದ ಬಿಂದು ಕಂಡವು-ಅಮೃತಽದ ಬಿಂದು ಯಾರಿರಿಸಿರುವರು ಮುಗಿಲಽಮೇಲಿಂ- ದಿಲ್ಲಿಗೇ ತಂದು.
ಈಗ-ಇಲ್ಲಿಗೇ ತಂದು. ೪ ತಂಗಾಳೀಯಾ ಕೈಯೊಳಗಿರಿಸೀ ಎಸಳೀನಾ ಚವರಿ ಹೂವಿನ-ಎಸಳೀನಾ ಚವರಿ ಹಾರಿಸಿಬಿಟ್ಟರು ತುಂಬಿಯ ದಂಡು ಮೈಯೆಲ್ಲಾ ಸವರಿ ಗಂಧಾ-ಮೈಯೆಲ್ಲಾ ಸವರಿ. ೫ ಗಿಡಗಂಟೆಯಾ ಕೊರಳೊಳಗಿಂದ ಹಕ್ಕೀಗಳ ಹಾಡು ಹೊರಟಿತು-ಹಕ್ಕೀಗಳ ಹಾಡು. ಗಂಧರ್ವರಾ ಸೀಮೆಯಾಯಿತು ಕಾಡಿನಾ ನಾಡು ಕ್ಷಣದೊಳು-ಕಾಡಿನಾ ನಾಡು. ೬ ಕಂಡಿತು ಕಣ್ಣು ಸವಿದಿತು ನಾಲಗೆ ಪಡೆ...

ನಿಸ್ವನ - ಜೊಂಪಿಸಿತ್ತು ಮಣ್ಣು

Image
  ನಿಸ್ವನದ ಭಾಗವಾಗಿ... ಕವನ: ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ:  ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್: ಹೇಮಂತ್ ಕುಮಾರ್ ಬಾನ್ಸುರೀ: ಆನಂದ ಪ್ರಸನ್ನ ಪಟ್ಟನಾಯಕ್ ( ಫ಼್ಲೂಟ್ ಬುಟ್ಟೋ ) ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಕೀಬೋರ್ಡ್: ಟೋನಿ ಮ್ಯಾಥ್ಯೂ ಸಿತಾರ್: ಸುಬ್ರಹ್ಮಣ್ಯ ಹೆಗಡೆ ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್ ಈ ಹಾಡಿನ ಪಲ್ಲವಿ ಹಾಗೂ ಮೊದಲ ಚರಣಕ್ಕೆ ಕರ್ನಾಟಕ ಸಂಗೀತದ ಮೋಹನ ಕಲ್ಯಾಣಿ ರಾಗದ ಹಾಗೂ ಕೊನೆಯ ಚರಣಕ್ಕೆ  ಕೇದಾರಗೌಳ ರಾಗದ ಆಧಾರವಿದೆ. ಕೊನೆಯ ಚರಣದಲ್ಲಿ ಕೇದಾರಗೌಳವನ್ನು, ಮೋಹನಕಲ್ಯಾಣಿಯ ರಿಷಭವನ್ನು ಷಡ್ಜವಾಗಿಸಿ, ಗ್ರಹಭೇದದೊಂದಿಗೆ ಬಳಸಲಾಗಿದೆ. ಇಡೀ ಕವನ ಹೀಗಿದೆ. ಜೊಂಪಿಸಿತ್ತು ಮಣ್ಣು ೧ ಜೊಂಪಿಸಿತ್ತು ಮಣ್ಣು ಮಣ್ಣು ಎವೆ ತೆರೆಯದ ಕೂಸು-ಕಣ್ಣು ಮೊಳಕೆ ಬರದೆ ಗಣಿಕೆಗಣ್ಣು ಎಲ್ಲೊ ಇತ್ತು ಚಿಗುರುಬಣ್ಣ ಹೂಹೂವಿನ ಚಿತ್ರವರ್ಣ ೨ ನಿದ್ರಿಸುತಿದೆ ಕಂಪಕಂಪ ಅಡಗಿದೆ ಎಲೆ ಪಸರ ಜೊಂಪ ಸವಿ ನುಂಗಿದೆ ತನ್ನ ಹಂಪ ಬಸಿರು ಬಯಲು ಪೊಳ್ಳುಗುಂಭ ೩ ಬಂಜೆಗಾಳಿ ಅದರ ತುಂಬ ಜಪಿಸುತಿರೋ ಶಪಿಸದಿರು ಕುಪಿಸದಿರೋ ತಪಿಸುತಿರು ಉಸಿರು ಮಸೆದ ಉರಿಯು ಆಗ ಬೇಗೆ ಹತ್ತಿದಂತೆ ಬೇಗ. ೪ ತಲೆಮೊಳೆವುದು ಬಿದ್ದ ಬಿತ್ತು; ಸಿಂಪಿ ತೆರೆದು ಬಹುದು ಮುತ್ತು. ಅಲ್ಲಿವರೆಗು ಮೌನ ಗುರು. ಅದರ ಶಿಷ್ಯ ನೀನಾಗಿರು. - ಅಂಬಿಕಾತನಯದತ್ತ ...

ನಿಸ್ವನ - ನಸುಕು ಬಂತು ನಸುಕು ೧

Image
ನಿಸ್ವನದ ಭಾಗವಾಗಿ... ಕವನ: ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ: ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್ ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಬಾನ್ಸುರೀ:  ಆನಂದ ಪ್ರಸನ್ನ ಪಟ್ಟನಾಯಕ್ ( Flute Butto ) ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್ ಇದೇ ಕವನವನ್ನು ಬೇರೊಂದು ಶೈಲಿಯಲ್ಲಿ ರಾಗಸಂಯೋಜಿಸಿ  ಈಗಾಗಲೇ ಹಾಡಿದ್ದೇನೆ. ಅಲ್ಲಿ ಇರುಳಿನ ನೆಲೆಯಿಂದ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ನಂದ್ ಕಲ್ಯಾಣ್ ರಾಗವಾದರೆ, ಇಲ್ಲಿ ಹಗಲಿನ ನೆಲೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಾಲಗಭೈರವಿ  ರಾಗ ಆಧಾರವಾಗಿದ್ದು,  ಕೇವಲ Jazz ಶೈಲಿಯಿಂದ ಪ್ರೇರಿತವಾದ ಗಿಟಾರಿನ ಹಿನ್ನೆಲೆಯಿದೆ. ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಸಿಂಧೂರ ಇದಕ್ಕೆ ಹತ್ತಿರವಾದ ರಾಗ.  ಇಡೀ ಕವನ ಹೀಗಿದೆ. ನಸುಕು ಬಂತು ನಸುಕು ೧ ಬೆಳಗು ಗಾಳಿ ತಾಕಿ ಚಳಿತು ಇರುಳ ಮರವು ಒಡೆದು ತಳಿತು ಅರುಣ ಗಂಧ ಹರುಹಿ ಒಳಿತು ನಸುಕು ಬಂತು ೨ ಬೆಳಕು ಬಳ್ಳಿ ಬಿಟ್ಟು ಕುಡಿ ಬಯಲಲೆತ್ತಿ ಹಗಲಗುಡಿ ಅಡಗಿಸಿಟ್ಟು ರವಿಯ ಮಿಡಿ ನಸುಕು ಬಂತು. ೩ ಬೆಳಗು ಸೂಸುತಿರಲು ಸುಸಿಲು ಅದನು ಮೂಸುತಿರಲು ಉಸಿಲು ಬೆಳಕು ಹೂತು ಆತು ಬಿಸಿಲು ನಸುಕು ಬಂತು. - ಅಂಬಿಕಾತನಯದತ್ತ ಗಂಗಾವತರಣ: 40 ಪ್ರಕಾಶನ: 1951 ಈ ಹಾಡುಗಳೆಲ್ಲವೂ  Creative Commons Attribution-No...

ನಿಸ್ವನ - ಹೃದಯ ಸಮುದ್ರ

Image
ನಿಸ್ವನದ ಭಾಗವಾಗಿ... ಕವನ: ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ: ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್ ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್) ಕೀಬೋರ್ಡ್: ಟೋನಿ ಮ್ಯಾಥ್ಯೂ ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್ ಇಡೀ ಕವನ ಹೀಗಿದೆ. ಹೃದಯ ಸಮುದ್ರ ೧ ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ ಮಿಂಚುಬಳಗ ತೆರೆತೆರೆಗಳಾಗಿ ಅಲೆೆಯುವದು ಪುಟ್ಟಪೂರಾ, ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ. ಅದರೊಳಗೆ ನಾವು, ನಮ್ಮೊಳಗೆ ತಾವು, ಅದು ಇಲ್ಲವಣ್ಣ ದೂರಾ. ೨ ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆ. ಹರಿತಽ‌ದ ಭಾವ, ಬೆರಿತಽ‌ದ ಜೀವ, ಅದರೊಳಗೆ ಒಳಗೆ ಒಳಗೆ. ಇದೆ ಸಮಯವಣ್ಣ, ಇದೆ ಸಮಯ ತಮ್ಮ, ನಮ್-ನಿಮ್ಮ ಆತ್ಮಗಳಿಗೆ. ಅಂಬಿಗನು ಬಂದ ನಂಬಿಗನು ಬಂದ ಬಂದಽ‌ದ ದಿವ್ಯಗಳಿಗೆ. ೩ ಇದು ಉಪ್ಪುನೀರ ಕಡಲಲ್ಲೊ: ನಮ್ಮ ಒಡಲಲ್ಲು ಇದರ ನೆಲೆಯು. ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದಽ‌ದ ಇದರ ಬೆಲೆಯು. ಸಿಕ್ಕಲ್ಲಿ ಅಲ್ಲ, ಸಿಕ್ಕಲ್ಲೆ ಮಾತ್ರ ಒಡೆಯುವದು ಇದರ ಸೆಲೆಯು, ಕಣ್ಣರಳಿದಾಗ, ಕಣ್-ಹೊರಳಿದಾಗ, ಹೊಳೆಯುವದು ಇದರ ಕಳೆಯು, ೪ ಬಂದವರ ಬಳಿಗೆ ಬಂದಽ‌ದ ಮತ್ತು ನಿಂದವರ ನೆರೆಗು ಬಂದಽ‌ದೋ ಬಂದಽ‌ದ, ನವಮನುವು ಬಂದ, ಹೊಸ ದ್ವೀಪಗಳಿಗೆ ಹೊರಟಾನ ಬನ್ನಿ ಅಂದಽ‌ದೋ ಅಂದಽ‌ದ. - ...

ನಿಸ್ವನ - ಚೈತ್ಯಾಲಯ

Image
ನಿಸ್ವನದ ಭಾಗವಾಗಿ... ಕವನ:  ಅಂಬಿಕಾತನಯದತ್ತ ಕವನದ ಕಾಪೀರೈಟ್ ಕೃಪೆ: ಪುನರ್ವಸು ಬೇಂದ್ರೆ ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್ ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್ ಬಾನ್ಸುರೀ: ಆನಂದ ಪ್ರಸನ್ನ ಪಟ್ಟನಾಯಕ್ ( Flute Butto ) ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು ( ತಬಲಾ ವೇಣು ) ಕೀಬೋರ್ಡ್: ಟೋನಿ ಮ್ಯಾಥ್ಯೂ (Tony Mathew) ಸಿತಾರ್: ಸುಬ್ರಹ್ಮಣ್ಯ ಹೆಗಡೆ ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್ ಈ ಹಾಡು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಜಂಜೂಟಿ ರಾಗದಲ್ಲಿದೆ. ಇಡೀ ಕವನ ಹೀಗಿದೆ. ಚೈತ್ಯಾಲಯ ೧ ಶಿವನುಂಡ ನಂಜು ತಿಳಿಗೊಂಡು ಮಂಜು- ಮಂಜಾಗಿದೆ ಈ ಸಂಜಿಗೆ. ಇದು ಉಷಾಮಿಷದ ಪೊಸನೇಹ ಸೇರಿ ಕಳೆ ಏರಿದೆ ಹುರಿಮಂಜಿಗೆ. ಭೌಮಾತ್ಮಭೂತಿ ಚೈತನ್ಯದೂತಿ, ಊ- ರ್ಜಿತದಾ ಸಿರಿವಂತಿಗೆ. ಕಥಕ್ಕಳಿಯ ಪುತ್ಥಳಿಯೆ! ಪೃಥಕ್ ಥತ್ ತಳಿಸಿದೆ ಜೀವಂತಿಗೆ. ಜಡೆತುಂಬ ಕಣ್ಣು, ಇದು ಯಾವ ಹೆಣ್ಣು? ಮಾ- ಪ್ರಾಣದ ಸ್ಯಾವಂತಿಗೆ! ೨ ಯಾವ ಅಚ್ಚರಸಿ? ಯಾವ ಋಷಿಯರಸಿ? ಯಾವ ಭಾವರಸಿ? ಯಾವ ಘಟ್ಟದಲಿ? ಯಾವ ಪಟ್ಟದಲಿ? ಯಾವ ಮುಹೂರ್ತವಿರಿಸಿ? ಯಾವ ನಕ್ಷತ್ರ? ಯಾವ ಸುಕ್ಷೇತ್ರ? ಯಾವ ಪಾತ್ರ ಧರಿಸಿ? ಝಂಝಣಣ ಝಣಣ, ಝಂಝಣತ್ ಝಣಣ, ಜೀ- ವಾಣುವೃಂದ ಮೆರೆಸಿ, ಛಂದ ಛಂದ ನವಬಂಧ ಪಡೆದು ಬಂ- ದಿಹವು ಹಳತ ಮರೆಸಿ. ೩ ಛಿಳಿಲ್ ಛಿಟಿಲೆಂದು ಭುಕ್ಕ್ ಭುಗಿಲೆಂದು ತಟಿತ್ ತಟ್ಟಿತೆಂದೂ ಕಣ್ಣಮುಚ್ಚಣಿಕೆ ಕಣ್ಣ ತೆರೆವಣಿಕೆ ಕಣ್ಣಕಟ್ಟಿತೆಂದೂ ನವೋನವದ ಭವಭವದ ತವದ...

ನಿಸ್ವನ - ಭಾವಗೀತೆಯ ಅನುಭಾವ

Image
ಕನ್ನಡದಲ್ಲಿ ಭಾವಗೀತೆಯ ಲೋಕ ದೊಡ್ಡದು. ಅನೇಕ ಕಲಾವಿದರು ಈ ಹಾಡುಗಳನ್ನು ರಾಗಸಂಯೋಜಿಸಿ, ಹಾಡಿ ಕನ್ನಡಿಗರ ಮನೆಮನೆಗೆ ತಲುಪಿಸಿದ್ದಾರೆ. ಹಾಡದೆ ಉಳಿದವೂ ಸಾಕಷ್ಟಿವೆ. ಆದರೆ, ಭಾವಗೀತೆಗಳನ್ನು ಹಾಡುವವರೂ ಬೇಕು, ಕೇಳುವವರೂ ಬೇಕು. ಹಾಡಿದ್ದನ್ನೂ ಹಾಡಬೇಕು, ಹಾಡದ್ದನ್ನೂ ಕೂಡ. ಕೇಳಿದ್ದನ್ನೂ ಕೇಳಬೇಕು, ಕೇಳದ್ದನ್ನೂ ಕೂಡ. ಈ ದಿಕ್ಕಿನಲ್ಲಿ ಹೊಸ ಪ್ರಯತ್ನ ಇಲ್ಲಿದೆ. YouTube ಇಲ್ಲಿರುವ ಪ್ರತಿಯೊಂದು ಹಾಡಿಗೂ ಹೊಸದಾಗಿ ರಾಗಸಂಯೋಜಿಸಿದ್ದೇನೆ. ಈ ಎಲ್ಲ ಹಾಡುಗಳು, ಕನ್ನಡದ ದೊಡ್ಡ ಕವಿಗಳ ಕವನಗಳು. ಕೆಲವನ್ನು ಹಿಂದೆ ಯಾರೂ ಹಾಡಿದಂತಿಲ್ಲ (ನನ್ನ ತಿಳಿವು ತಪ್ಪಾಗಿದ್ದಲ್ಲಿ ಕೇಳುಗರು ದಯವಿಟ್ಟು ತಿಳಿಸಿ). ಆದರೆ ಓದಿದಾಗ ಹಾಡಬೇಕು ಅನ್ನಿಸಿತು. ಇನ್ನು ಕೆಲವು ಈಗಾಗಲೇ ಪ್ರಸಿದ್ಧವಾಗಿವೆ. ಆದರೆ ಈ ಭಾವಗೀತೆಗಳು ಒಂದು ಧಾಟಿಗೆ, ರಾಗಕ್ಕೆ ಸೆರೆಸಿಕ್ಕುವವಲ್ಲ. ಬೇರೊಂದು ರೀತಿ ಹಾಡಿದರೆ, ಕವನದ ಬೇರೆ ಆಯಾಮಗಳು ಕೇಳುಗರಿಗೆ ಹೊಳೆಯಬಹುದು ಅನ್ನಿಸಿತು. ಸದ್ಯಕ್ಕೆ ಕೆಲವು ಹಾಡುಗಳು ಪ್ರಸ್ತುತವಿವೆ. ದಯವಿಟ್ಟು ಕೇಳಿ, ಅನಿಸಿಕೆಗಳನ್ನು ಹಂಚಿಕೊಳ್ಳಿ. ಇಷ್ಟವಾದರೆ 👍,  ಎಲ್ಲರಿಗೂ ಕೇಳಿಸಿ. ಇನ್ನೂ ಹಲವು ಕವನಗಳು ರಾಗಸಂಯೋಜಿತವಾಗಿವೆ, ಆದರೆ ಇನ್ನೂ ಹಾಡಿಲ್ಲ. ಬರುವ ತಿಂಗಳುಗಳಲ್ಲಿ,, ವರ್ಷದಲ್ಲಿ ಅವನ್ನೂ (ಅವು ತಯಾರಾದಂತೆ) ಇಲ್ಲಿ ಪ್ರಕಾಶಿಸುವ ಯೋಜನೆಯಿದೆ. ಅವುಗಳಿಗಾಗಿ Subscribe 🔔 ಮಾಡಿ.   ಈ ಹಾಡುಗಳೆಲ್ಲವೂ  Creative Com...

ಕೊರೋನಾ ಸೋಂಕಿತರಿಗೆ ಲಸಿಕೆ ಹಾಕುವುದರ ಹಿಂದೆಮುಂದೆ...

Image
ಕೊರೋನಾ ಸೋಂಕಿತರಿಗೆ ಲಸಿಕೆ ಹಾಕದಿರುವುದರ ಪರವಾಗಿ ಹಾಗೂ ಹಾಕಿಸಲು ನಿರ್ಧರಿಸಿರುವ ಭಾರತೀಯ ಸರಕಾರದ ನಿಲುವಿನ ಹಿಂದಿರಬಹುದಾದ ಷಡ್ಯಂತ್ರದ ಬಗೆಗೆ ಡಾ. ಶ್ರೀನಿವಾಸ ಕಕ್ಕಿಲ್ಲಾಯರು ತಮ್ಮ ಫೇಸ್ಬುಕ್ಕಿನಲ್ಲಿ ಬರೆದಿದ್ದಾರೆ . ಲಸಿಕೆಯ ಅವ್ಯವಸ್ಥೆಯ ಮೇಲೆ ಕಿಡಿಕಾರುವ ಭರದಲ್ಲಿ ಡಾ. ಕಕ್ಕಿಲ್ಲಾಯರು ತಮ್ಮ  ಅಜ್ಞಾನ ವನ್ನೂ ಕಾರಿರುವಂತಿದೆ. ಅವರು ಅಲ್ಲಿ ಪ್ರಸ್ತಾಪಿಸಿದ  “ಕೊರೋನಾ ಸೋಂಕಿತರಿಗೆ ಲಸಿಕೆಯ ಅಗತ್ಯವಿಲ್ಲ” ಎನ್ನುವ ವಾದವನ್ನು ಅವರ ವೈದ್ಯಕೀಯ ಅನುಭವವನ್ನು ಗೌರವಿಸಿ ಸರಿಯೆಂದೇ (ಅದು ನಿಜವಾಗಿ ಸರಿಯಲ್ಲದಿದ್ದರೂ) ಭಾವಿಸೋಣ. ಈ ವಾದದ ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಬದಲಾಗಿ, ಅದರ ಅಪ್ರಸ್ತುತತೆ ಹಾಗೂ (ಒಂದುವೇಳೆ ಸರಿಯೇ ಆಗಿದ್ದರೂ) ಅದರಿಂದ ಆಗಬಹುದಾದ ಅನಾಹುತದ ಪರಿಚಯವನ್ನು ಓದುಗರಿಗೆ ಮಾಡಿಕೊಡುವ ಸಣ್ಣ ಪ್ರಯತ್ನವಿದು. 1. ಈಗ ನಮ್ಮ ಮುಂದಿರುವ ಅತಿ ದೊಡ್ಡ ದುರಂತವೆಂದರೆ multiplicative ಮತ್ತು additive ಪ್ರಕ್ರಿಯೆಗಳ ನಡುವಿನ ವ್ಯತ್ಯಾಸದ ಸರಿಯಾದ ತಿಳುವಳಿಕೆಯ ಅಭಾವ. ಈ ವ್ಯತ್ಯಾಸವನ್ನೂ, ಅದರ ತಿಳುವಳಿಕೆಯ ಅಭಾವದಿಂದ ಆಗಬಹುದಾದ ಅನಾಹುತವನ್ನೂ ಆದಷ್ಟು ಚುಟುಕಾಗಿ ಹೇಳಬಯಸುತ್ತೇನೆ. ಸಾಂಕ್ರಾಮಿಕರೋಗಶಾಸ್ತ್ರವನ್ನು(epodemiology) multiplicative ಪ್ರಕ್ರಿಯೆಗೆ ಉದಾಹರಣೆಯಾಗಿಯೂ, ವೈದ್ಯಕೀಯ ವೃತ್ತಿಯನ್ನು additive ಪ್ರಕ್ರಿಯೆಗೆ ಉದಾಹರಣೆಯಾಗಿಯೂ ಇಲ್ಲಿ ತೆಗೆದುಕೊಳ್ಳಬಹುದು. ಸಾಂಕ್ರಾಮಿಕರೋಗಶಾಸ...

ಅವತಾರದ ತಾತ್ಪರ್ಯ

Image
ಕ್ಷಮೆ ಕೇಳುತ್ತಾ... ಅಂಶಗಣ ಛಂದಸ್ಸುಗಳ ಮೇಲಿನ ನನ್ನ ಪ್ರೀತಿಯ ಬಗ್ಗೇ ಈಗಾಗಲೇ ಸ್ವಲ್ಪ ಹೇಳಿದ್ದೇನೆ. ಆದರೆ ಈ ಕವನದ ಬಂಧವಾದ ಅಂಶಗಣಗಳ ತ್ರಿಪದಿ ಯ ಪರಿಚಯ ಮಾಡಬೇಕೆನ್ನಿಸುತ್ತದೆ. ಛಂದೋವತಂಸ ದಂತೆ ವಿರಳವಲ್ಲದೆ, ಬಹಳ ಜನಪ್ರಿಯವೂ, ಜಾನಪದವೂ ಆದ ತ್ರಿಪದಿಗೆ ಅಪರಿಚಿತರಲ್ಲದ ಓದುಗರು ಈ ಕಿರುಪರಿಚಯವನ್ನು ಬಿಟ್ಟು ಮುನ್ನಡೆಯಬಹುದು. ತ್ರಿಪದಿಯ ಲಕ್ಷಣಗಳನ್ನು ಇಲ್ಲಿ ಕಾಣಬಹುದು. ಹಾಗಾಗಿ, ತ್ರಿಪದಿಯನ್ನು ಓದುವ/ವಾಚಿಸುವ ಬಗ್ಗೆ ಮಾತ್ರ ಒಂದೆರಡು ಮಾತು. ತ್ರಿಪದಿಯಲ್ಲಿ ಮೂರೇ ಪಾದಗಳಿದ್ದರೂ, ಎರಡನೇ ಪಾದವನ್ನು ಪುನರಾವರ್ತಿಸಿ ನಾಲ್ಕು ಪಾದಗಳಾಗಿ ಓದಬೇಕು. ಆದರೆ, ಎರಡನೇ ಪಾದವನ್ನು ಮೊದಲ ಬಾರಿ ಓದುವಾಗ, ಪಾದದ ಕೊನೆಯ ಗಣವನ್ನು ಓದದೆ (ಇದನ್ನು "||" ಚಿಹ್ನೆಯಿಂದ ಗುರುತಿಸುವುದು ರೂಢಿ), ಅದರ ಹಿಂದಿನ ಗಣ(ಅಂದರೆ, ಎರಡನೇ ಪಾದದ ಮೂರನೇ ಗಣ)ವನ್ನು ಹಿಗ್ಗಿಸಿ ವಿರಮಿಸಬೇಕು.  ಹೀಗೆ ಹಿಗ್ಗಿಸುವಾಗ, ಎರಡನೇ ಪಾದದ ಮೂರನೇ ಗಣದ ಕೊನೆಯ ಅಕ್ಷರವನ್ನು ಬಿಟ್ಟು ಉಳಿದವನ್ನು ಇಡೀ ಗಣದಷ್ಟು ಹಿಗ್ಗಿಸಿ, ಕೊನೆಯ ಅಕ್ಷರವನ್ನು ಮುಡಿ/ಪದ್ಮಗಣದಂತೆ (ಅಪೂರ್ಣ ಗಣ ಎನ್ನಬಹುದು) ಓದುವ ರೀತಿ, ಕವನದ ಜಾನಪದ ಶೈಲಿಯನ್ನು ಇನ್ನೂ ಹೆಚ್ಚಿಸುತ್ತದೆ. ಎರಡನೇ ಪಾದದ ಪುನರಾವರ್ತನೆಯಲ್ಲಿ ಕೊನೆಯ ಗಣವನ್ನೂ ಸೇರಿಸಿ ಓದಬೇಕು. ಆಮೇಲೆ ಮೂರನೇ ಪಾದ. ಉದಾಹರಣೆಗೆ, ಈ ಕವನದ ಪಲ್ಲವಿಯನ್ನು ಹೀಗೆ ಓದಬಹುದು. ಇಳೆ ತಾನೇ|ಉರುಳುರುಳಿ-|ಋತುಗ-ಳೂ|...