ನಿಸ್ವನ - ಪೆರುಮಾಳನ ಕೆಂದಾವರೆ
- ಕವನ: ಅಂಬಿಕಾತನಯದತ್ತ
- ಕವನದ ಕಾಪೀರೈಟ್: ಪುನರ್ವಸು ಬೇಂದ್ರೆ
- ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್: ಹೇಮಂತ್ ಕುಮಾರ್
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ರಿದಮ್ ಪ್ಯಾಡ್: ವರದರಾಜ್
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಪೆರುಮಾಳನ ಕೆಂದಾವರೆ
೧
ಪೆರುಮಾಳನ ಕೆಂದಾವರೆ ಅರಳಿದೆ ನಸುನಕ್ಕೆ!
ಹರಿನೀಲದ ಬಾನೊಳಗಿನ ಸಿಂಧೂರದ ಚುಕ್ಕೆ.
ನಲಿವಿನ ನಲಿನವು ತಾನೇ ತಾನಾಗಿಯೆ ಬಿಚ್ಚೆ
ಏಳ್ಮಡಿ ಧಾಳಾಧೂಳಿಯ ಏಳ್ಬಣ್ಣದ ಕಿಚ್ಚೇ.
೨
ಕಾರಣತನುವಿನ ಕೃತಿಯೇ ಸವಿಯೇ ಹರಿವರಿಯೇ
ಮನುಹೃದಯದಿ ಚಿಗಿ ನಿಗಿನಿಗಿ ಜಿಗಿ ಮೇಲಕ್ಕುರಿಯೇ
ಹೆಸರಾಚೆಯ ಭಾವದ ಹೂ ಸುರಿಸಿದ ಹಿರಿ ಹಿಗ್ಗೇ
ಬೆಡಗಿನ ನುಡಿ ಮೌನದ ಕುಡಿ ಮುಗುಳೇ ಮುಮ್ಮೊಗ್ಗೇ.
೩
ಪೆರುಮಾಳನ ಕೆಂದಾವರೆ ಬೆಳಕಿನ ಚೆಂದಿರುಳೇ
ಬಾಳಿನ ತಿರುಕೋಡೊಳಗಿನ ಬಲು ಅರಿವಿನ ಅರುಳೇ
ಕಗ್ಗೊನೆಗಾಣ್ಕೆಯ ಒಳಗಿನ ಅಕಲಂಕಿತ ಕೆಚ್ಚೇ
ನೆಲೆದೆದೆಯಲಿ ನೆಲೆಮಾಡೆಲೆ ಹೊನ್‍ಹೂ ಮನಮೆಚ್ಚೇ
೪
ಗುಟ್ಟೇ ಹುಟ್ಟೇ ಮೊಟ್ಟೆಯೆ ಹುರುಳಡಗಿದ ಹೆಸರೇ
ನಿಷ್ಕಾಲದ ನಡುನೆತ್ತಿಯ ನೇಸರೆ ಹೊಂಬಸಿರೇ
ದಿವ್ಯಮುಹೂರ್ತದ ಅತಿಥಿಯೆ ಕಾದಿರುವದು ಈಗ.
ಮೂರಾಳದ ಕತ್ತಲೆ ಅದ ಬೆಳಗಿಸು ಬಾ ಬೇಗ.
೫
ಪೆರುಮಾಳನ ಕೆಂದಾವರೆ ರತ್ನಪ್ರಭೆ ಬೀರೆ.
ಇರುಳಿಂಗಿತು ಮರ್ತ್ಯರ ಸಂಕಲ್ಪವೆ ಹೊತ್ತುತಿರೆ
ಆನಂತ್ಯದ ತಪಚಿತ್ರಿತ ಚೀನಾಂಶುಕವಾಗೆ
ದಿವ್ಯಪ್ರತಾಪದ ಮಾಣಿಕ್ಯದ ಮೂರ್ತಿಯ ಹಾಗೆ.
೬
ಕಾರ್ಮೋಡದ ತಿಳಿನೀರಲಿ ಕೆಮ್ಮಿಂಚುರಿವಂತೆ
ಡಾಳಿಂಬದ ಮೈದುಂಬಿರೆ ತಾನೇ ಬಿರಿವಂತೆ
ನಿನ್ನಾ ಹಂಚಿಕೆ ಮಾಟಕೆ ಬೆಳಗಾದೊಲು ಹಣತೆ
ವಿಗ್ರಹಗೊಂಡೊಲು ಅಮರತೆ ನರನಾರಾಯಣತೆ.
೭
ಪೆರುಮಾಳನ ಕೆಂದಾವರೆ ಬಾಳಿನ ತಾಣವಿದೋ
ವರ್ಣಕ್ರಮ ಬಣ್ಣಸರಂಗೊಂಡಿಹ ವೀಣೆಯಿದೋ
ದಿವ್ಯೇಚ್ಛೆಯೆ ಮೈದಾಳಿದೆ ನೇರಿಳೆ ಬಣ್ಣದೊಳು
ಶತದಳದೊಲು ದಳದಳದಲಿ ಮಣ್ಣಿನ ಕಣ್ಣಿನೊಲು
೮
ನೆಲ ಬಾನಿಗು ನಿಚ್ಚಣಿಕೆಯ ನಿಲ್ಲಿಸು ನಿಲ್ಲಸೆಲೇ
ಮರ್ತ್ಯವು ಮರಣವನರಿಯದ ಹಾಗಿರಲಿಲ್ಲಿ ಸೆಲೆ
ಮಧುಮಂತ್ರದ ಛಂದಸ್ಸನು ಪಲ್ಲಟಿಸುವ ಹಾಗೆ
ಕಾಲನ ಕಂದರ ಮಾಡೈ ಮಾರ್ಕಂಡೆಯರಾಗೆ.
೯
ಪೆರುಮಾಳನ ಕೆಂದಾವರೆ ನಲುಮೆಯ ನಲಿನವಿದೋ
ಗುರುಕಾರುಣ್ಯದ ಭಾವಜ್ವಾಲಾಮಾಲೆಯಿದೋ
ಎಂದೆಂದಿನ ಮೊಗದೊಳಗಿಹ ಹಿಗ್ಗಿನ ನಾಚಿಕೆಯೋ
ಬಾಳಿನ ಆಳವ ತುಂಬಿದ ಮಾಣಿಕವೀಚಿಕೆಯೋ
೧೦
ಪ್ರಕೃತಿಯ ಪಾತಾಳದ ಎದೆಯಾಳವೆ ಬಿಕ್ಕುತಿರೆ
ಬಾ ಬಲವೇ ಬಾ ನಲಿವೇ ಚೆಲುವೆ ಉಕ್ಕುತಿರೆ.
ಬಿಸವಂದದ ನಂದನವನ ಮಾಡೀ ಜಗವಿಂದು
ಬಾಳಾಗಲಿ ಚಿನ್ಮೋದದ ಮುತ್ತಿನ ಸರವೊಂದು.
- ಅಂಬಿಕಾತನಯದತ್ತ
ಚೈತ್ಯಾಲಯ: 43
ಪ್ರಕಾಶನ: 1957
Comments
Post a Comment