ನಿಸ್ವನ - ಸಂಧ್ಯಾವಂದನೆ
- ಕವನ/ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಸಾರಂಗಿ: ಸರ್ಫ಼ರಾಜ಼್ ಖಾನ್
- ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ರಿದಮ್ ಪ್ಯಾಡ್: ವರದರಾಜ್
- ಧ್ವನಿತಂತ್ರಜ್ಞಾನ/ಕೀಬೋರ್ಡ್: ಬಾಲಕೃಷ್ಣ ರಾವ್
"ನಿಸ್ವನ"ದ ಕಲ್ಪನೆ, ನನ್ನದೇ ಕವನವಾದ "ಸಂಧ್ಯಾವಂದನೆ"ಯೊಂದಿಗೆ ಸದ್ಯಕ್ಕೆ ಕೊನೆಗೊಳ್ಳುತ್ತದೆ. ಇದು ಹಲವು ಸಂಗೀತಶೈಲಿಗಳ (ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತ, ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ಹಾಗೂ Jazz), ಜ್ಞಾನಮೀಮಾಂಸೆಯ ಹಲವು ಮುಖಗಳ, ಅವೆಲ್ಲಕ್ಕೂ ಮಿಗಿಲಾಗಿ, ತೆರೆಯ, ಮರೆಯ, ಕೊನೆಯಿರದ ಸಂಜೆಯ ಧ್ಯಾನ.
ಇಲ್ಲಿ, ಗ್ರಹಭೇದದಿಂದ ಪ್ರೇರಿತವಾಗಿ, ಷಡ್ಜ ಶ್ರುತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಹೈಮವತಿ, ರಿಷಭಶ್ರುತಿಯಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಬಸಂತ್ ಮುಖಾರಿ ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತದ ವಕುಳಾಭರಣ ಹಾಗೂ ಪಂಚಮಶ್ರುತಿಯಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ natural minor scale (aeolean mode in G or G minor) ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತದ ನಠಭೈರವಿ ರಾಗಗಳನ್ನೂ, ಕರ್ನಾಟಕ ಶಾಸ್ತ್ರೀಯ ಶೈಲಿಯ ವೀಣೆ, ಹಿಂದೂಸ್ಥಾನೀ ಶಾಸ್ತ್ರೀಯ ಶೈಲಿಯ ಸಾರಂಗಿ, ಬಾನ್ಸುರೀ, ಪಾಶ್ಚಾತ್ಯ ಶಾಸ್ತ್ರೀಯ, Jazz ಶೈಲಿಗಳ ಗಿಟಾರ್, ಶಾಸ್ತ್ರೀಯವೂ ಜಾನಪದವೂ ಸೇರಿರುವ ಲಯವಿನ್ಯಾಸವನ್ನೂ ಕಾಣಬಹುದು.
ಇದರೊಂದಿಗೆ ಸದ್ಯಕ್ಕೆ ತಯಾರಾದ ನಿಸ್ವನದ ಎಲ್ಲ ಹಾಡುಗಳೂ ಬಿಡುಗಡೆಯಾಗಿವೆ. ಕೇಳಿದ, ಕೇಳಿಸಿದ, ಮೆಚ್ಚಿದ, ಪ್ರೋತ್ಸಾಹಿಸಿದ, ಅನಿಸಿಕೆಗಳನ್ನು ಹಂಚಿಕೊಂಡ ಎಲ್ಲರಿಗೂ ಎದೆಯಾಳದ ಧನ್ಯವಾದಗಳು, ನಮನಗಳು. ಮುಂದೊಮ್ಮೆ ಮತ್ತೆ ಭೇಟಿಯಾಗೋಣ🙏.
ಇಡೀ ಕವನ ಹೀಗಿದೆ.
ಸಂಧ್ಯಾವಂದನೆ
೧
ಹೊತ್ತಿಲ್ಲ, ಗೊತ್ತಿಲ್ಲ. ಕಿಂಚಿತ್ತೂ ಕಿಚ್ಚಿಲ್ಲ.
ಕತ್ತಲ ಸೆರಗಿನ ಅಂಚೆ?
ಕಿತ್ತಳೆ ಬಣ್ಣ ನೋಡದ ಕಣ್ಣ
ತಟ್ಟಿತೇ ಬೆರಗಿನ ಸಂಜೆ?
೨
ತಂಗಾಳಿ ಬೀಸಿದೆ. ನೇಸರನ್ನೆತ್ತಿದೆ.
ತಂಗಳ ನೆರೆಮನೆಯ ಸಾರೋ?
ಕಂಗಳ ಮುಚ್ಚಿದರೆ ನರಸಿಂಹ ಕಂಡಾನೇ?
ಕಂಬವನ್ನೊಡೆವವರ್ಯಾರೋ?
೩
ಕಣ್ಣಮುಚ್ಚಾಲೆಯ ಆಟದ ಒಳಗೊಂದು
ಬಂಗಾರದುಂಗುರವಡಗಿ!
ಮಣ್ಣಿನ ಲೋಕದ ಕಣ್ಣಿಗೆ ಕತ್ತಲ
ಹುಣ್ಣಿಮೆಯೂ ಬಣ್ಣದ ಬೆಡಗಿ!
೪
ಹಿನ್ನೀರ ಊರೊಳಗೆ ಮಿಂದರೆ ಸಿಕ್ಕೀತೇ
ಮುನ್ನಿನ ಕೊಳೆ ತೊಳೆದ ಪುಳಕ?
ಹೊನ್ನೀರ ತೀರದಲೀಜಾಟವೆಂದರೆ
ಚಿನ್ನದ ಬೆಳಕಿನ ಝಳಕ!
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ.
These songs are licensed under a Creative Commons Attribution-NonCommercial-NoDerivatives 4.0 International License and standard YouTube license.
Comments
Post a Comment