ನಿಸ್ವನ - ನನ್ನ ನಿನ್ನ ಲೋಕ
- ಕವನ: ಎಂ ಗೋಪಾಲಕೃಷ್ಣ ಅಡಿಗ
- ಕವನದ ಕಾಪೀರೈಟ್ ಕೃಪೆ: ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು
- ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ರಿದಮ್ ಪ್ಯಾಡ್: ವರದರಾಜ್
- ಧ್ವನಿತಂತ್ರಜ್ಞಾನ/ಕೀಬೋರ್ಡ್: ಬಾಲಕೃಷ್ಣ ರಾವ್
ನನ್ನ ನಿನ್ನ ಲೋಕ
೧
ನನ್ನ ನಿನ್ನ ಲೋಕವೊಂದು ಬೇರೆಯೊಂದು ಇದ್ದರೆ
ನನ್ನ ನಿನ್ನ ಜೀವವೆರಡು ಈ ಭವವ ಗೆದ್ದರೆ
ತನುವ ತೆರೆಯು ಕರಗಿ ಶುದ್ಧಮನವು ಮೇಲಕೆದ್ದರೆ
ಏನು ಗಾಡಿ ಏನು ಮೋಡಿಯಿಂದ ಬಾಳುತಿದ್ದೆವೆ!
ಒಲವೊಂದನೆ ಬಿತ್ತಿ ಬೆಳೆದು
ನಲವೊಂದನೆ ತುತ್ತುವಡೆದು
ಚೆಲುವೊಂದನೆ ಹೊತ್ತು ಹಡೆದು
ಹೇಗೆ ಹಿಗ್ಗುತಿದ್ದೆವೆ,
ಹೇಗೆ ಹಿಗ್ಗುತಿದ್ದೆವು!
೨
ನೀನು ಸಖಿ ನಾನು ಸಖ; ನಿನ್ನ ಸುಖವೆ ನನ್ನ ಸುಖ;
ಬರಲಿ ನಾಕ ಬರಲಿ ನರಕ - ನಮ್ಮ ಗಮನಕೊಂದೆ ಮುಖ;
ಮನಮನವೂ ಎರಕದೆಸಕ, ಭಾವ ಜೀವ ಏಕ ಏಕ
ಎಂದು ಬಾಳುತಿದ್ದೆವು;
ಅಲ್ಲಿ ಇಲ್ಲಿ ಹಾಗೆ ಹೀಗೆ ನಾವು ತಿರುಗುತಿದ್ದೆವು!
೩
ದೂರ ದೂರ ಬಾನು ಬಾಗಿ ಬುವಿಗೆ ಮುದ್ದನಿಡುವೆಡೆ;
ಹಾರಿ ಬಂದು ಮುಗಿಲ ಹಿಂಡು ಗಿರಿಯ ತಬ್ಬುತಿರುವೆಡೆ;
ಅಲ್ಲಿ ಹುಲ್ಲೆ ಇಲ್ಲಿ ಜಿಂಕೆ ಜಿಗಿದು ನೆಗೆದು ನಲಿವೆಡೆ
ಎಲ್ಲಿ ಬಳ್ಳಿ ಬಾಗಿ ಬಾಗಿ
ಹೊನಲ ಕನ್ನಡಿಯಲಿ ನೋಡಿ
ತನ್ನ ಸೊಬಗಿಗಾಗಿ ತಾನೆ
ಬೀಗುತಿರುವುದೋ;
ಬೀಗಿ ನಿಂತು ಬಿಂಕದಿಂದ
ಹೂವು ತುಟಿಗಳನ್ನು ತೆರೆದು
ನಗುತಲಿರುವುದೋ;
ಎಲ್ಲಿ ಹರಿವ ಮೊರೆವ ಹೊನಲು
ತನ್ನ ಎದೆಯ ಪಾಡನೆಲ್ಲ
ತೋಡಿ ಹೇಳುತಿರುವುದೋ;
ಎಲ್ಲಿ ಹಕ್ಕಿ ಗಿಡಗಿಡದಲಿ
ತಳುವಿ ತಳುವಿ ಎದೆಗಡಲಲಿ
ನೆಗೆವ ಭಾವವೀಚಿಗಳನು
ಮೊಗೆಯುತಿರುವುದೋ;
ಅಲ್ಲಿನೊಂದು ಕಂದರದಲಿ, ಬಳ್ಳಿ ಸಮೆದ ಹಂದರದಲಿ
ಅಲ್ಲಿ ರವಿಯ ಕಿರಣ ತಳಿರಿನಲ್ಲಿ ಸೋಸಿ ಬರುತಿರೆ,
ಗಂಧರ್ವಗಾನಲಹರಿ ಎಲರೊಳೀಸಿ ಬರುತಿರೆ;
ಜಗಕೆ ಜನಕೆ ಬಹಳ ದೂರ,
ಹಗೆಯ ಹೊಗೆಗೆ ದೂರ ದೂರ,
ಸಣ್ಣತನದ ಕೊರಗು, ಮರುಗು
ನಮ್ಮ ಬಳಿಗು ಸುಳಿಯದಿರಲು;
ಅಲ್ಲಿ ನಾವು ನಿರ್ವಿಕಲ್ಪ
ಸುಖದ ವಿಮಲ ಕುಸುಮತಲ್ಪ -
ಅದರೊಳೊರಗಿ ಕಲ್ಪ ಕಲ್ಪ
ಮರೆತು ಸಾಗುತಿದ್ದೆವು;
ಕನಸುನಾಡಿನಲ್ಲಿ ಹಾಗೆ
ತಿರುಗುತಿದ್ದೆವು!
ನನ್ನ ನಿನ್ನ ಲೋಕವೊಂದು ಬೇರೆಯೊಂದು ಇದ್ದರೆ,
ಬೇರದೊಂದು ಇದ್ದರೆ!
- ಎಂ ಗೋಪಾಲಕೃಷ್ಣ ಅಡಿಗ
ನಡೆದು ಬಂದ ದಾರಿ: 180
ಪ್ರಕಾಶನ: 1952
Comments
Post a Comment