ನಿಸ್ವನ - ಅಗೋ ಅಲ್ಲಿ ದೂರದಲ್ಲಿ
- ಕವನ: ಅಂಬಿಕಾತನಯದತ್ತ
- ಕವನದ ಕಾಪೀರೈಟ್: ಪುನರ್ವಸು ಬೇಂದ್ರೆ
- ಗಾಯನ: ವಾರಿಜಾಶ್ರೀ
- ರಾಗಸಂಯೋಜನೆ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ/ಕೀಬೋರ್ಡ್: ಹೇಮಂತ್ ಕುಮಾರ್
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
- ರಿದಮ್ ಪ್ಯಾಡ್: ವರದರಾಜ್
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ಕೀಬೋರ್ಡ್ /ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಅಗೋ ಅಲ್ಲಿ ದೂರದಲ್ಲಿ
೧
ಅಗೋ ಅಲ್ಲಿ ದೂರದಲ್ಲಿ
ನೆಲದ ಮುಗಿಲ ಮಗ್ಗುಲಲ್ಲಿ
ಹಸಿರಿನ ಹಸುಗೂಸದೊಂದು
ಆಗ ಈಗ ಹೊರಳುತಿಹುದು
ಏನೋ ಎಂತೊ ಒರಲುತಿಹುದು
ಆಽ ಹಸಿರ ಒಳಗೆ ಹೊರಗೆ
ನೀರ ಬೆಳಕ ತುಣುಕು ಮಿಣುಕು,
ಅಲ್ಲಿನಿಂದ ಬಂದೆಯಾ!
ಕುಣಿವ ಮಣಿವ ಹೆಡೆಯ ಹಾವು-
ಗಳನು ಹಿಡಿದು ತಂದೆಯಾ?
೨
ಏಕೆ ಬಂದೆ? ಏನು ತಂದೆ?
ಹೇಳೊ ಹೇಳು ಶ್ರಾವಣಾ
ನೀ ಬಂದ ಕಾರಣಾ.
೩
ಪಡುವ ದಿಕ್ಕಿನಿಂದ ಹರಿವ
ಗಾಳಿ-ಕುದುರೆಯನ್ನು ಏರಿ
ಪರ್ಜನ್ಯ ಗೀತವನ್ನು
ಹಾಽಡುತ್ತ ಬಂದಿತು.
೪
ಬನದ ಮನದ ಮೇಳವೆಲ್ಲ
ಸೋಽ ಎಂದು ಎಂದಿತು
ಬಿದಿರ ಕೊಳಲ ನುಡಿಸಿತು
ಮಲೆಯ ಹೆಳಲ ಮುಡಿಸಿತು;
ಬಳ್ಳಿ ಮಾಡ ಬಾಗಿಸಿತ್ತು
ಗಿಡಗಳ ತಲೆದೂಗಿಸಿತ್ತು;
ಮರದ ಹನಿಯ ಮಣಿಗಳನ್ನು
ಅತ್ತ ಇತ್ತ ತೂರುತಾ
ಹಸಿರು ಮುರಿವ ತೊಂಗಲನ್ನು
ಕೆಳಗೆ ಮೇಲೆ ತೂಗುತಾ
ಬರುವ ನಿನ್ನ ಅಂದ ಚೆಂದ
ಸೂಸು ಸೊಗಸು ಆನಂದ.
೫
ಗುಳ್ಳಗಂಜಿ ತೊಡವ ತೊಟ್ಟು
ಹಾವಸೆಯಾ ಉಡುಪನುಟ್ಟು
ನಗುವ ತುಟಿಯ ನನೆದ ಎವೆಯ
ತರಳ ನೀನು ಶ್ರಾವಣ,
ಅಳಲು ನಗಲು ತಡವೆ ಇಲ್ಲ
ಇದುವು ನಿನಗೆ ಆಟವೆಲ್ಲ
ಬಾರೊ ದಿವ್ಯ ಚಾರಣಾ
ತುಂಟ ಹುಡುಗ ಶ್ರಾವಣಾ!
೬
ನೀನು ನಡೆದು ಬಂದ ಮಾಸ
ಹೆಣ್ಗೆ ತವರುಮನೆಯ ವಾಸ
ಬರಿಯ ಆಟ, ಬರಿಯ ಹಾಸ
ಮಧುಮಾಸಕು ಹಿರಿದದು
ಮಧುರ ಮಾಸ ಸರಿಯದು.
೭
ಮೋಡಗವಿದ ಕಣ್ಣಿನವನು
ಮುದಿಯ ತಂದೆ ಮುಗಿಲರಾಯ
ನಿನ್ನನ್ನೆ ಬಯಸಿದಾ
ಕಣ್ಣ ಕೆನ್ನೆ ತೊಯ್ಸಿದಾ.
ಬಿಸಿಲಹಣ್ಣ ತಿಂದು ಹೊತ್ತು
ಹೆತ್ತ ನಿನ್ನ ಭೂಮಿ ತಾಯಿ
ಪಾಪ, ನಿನ್ನ ನೆನಸಿತು
ಎದೆಯ ಸೆರಗ ನನೆಸಿತು.
ಅಂತೆ ಬಂದೆ ಬಾರಣಾ
ಬಾರೊ ಮಗುವೆ ಶ್ರಾವಣಾ!
- ಅಂಬಿಕಾತನಯದತ್ತ
ನಾದಲೀಲೆ: 16
ಪ್ರಕಾಶನ: 1938
Comments
Post a Comment