ನಿಸ್ವನ - ಇದು ಬಾಳು
- ಕವನ: ಎಂ ಗೋಪಾಲಕೃಷ್ಣ ಅಡಿಗ
- ಕವನದ ಕಾಪೀರೈಟ್ ಕೃಪೆ: ಎಂ ಗೋಪಾಲಕೃಷ್ಣ ಅಡಿಗ ಮೆಮೋರಿಯಲ್ ಟ್ರಸ್ಟ್, ಬೆಂಗಳೂರು
- ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್/ಚೆಲ್ಲೋ: ಹೇಮಂತ್ ಕುಮಾರ್
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ರಿದಮ್ ಪ್ಯಾಡ್: ವರದರಾಜ್
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಇದು ಬಾಳು!
೧
ಅಳುವ ಕಡಲೊಳೂ ತೇಲಿ ಬರುತಲಿದೆ
ನಗೆಯ ಹಾಯಿದೋಣಿ;
ಬಾಳಗಂಗೆಯ ಮಹಾಪೂರದೊಳೂ
ಸಾವಿನೊಂದು ವೇಣಿ
ನೆರೆತಿದೆ, ಬೆರೆತಿದೆ, ಕುಣಿವ ಮೊರೆವ
ತೆರೆತೆರೆಗಳೋಳಿಯಲ್ಲಿ
ಜನನಮರಣಗಳ ಉಬ್ಬುತಗ್ಗು ಹೊರ-
ಳುರುಳುವಾಟವಲ್ಲಿ!
೨
ಆಶೆಬೂದಿತಳದಲ್ಲು ಕೆರಳುತಿವೆ
ಕಿಡಿಗಳೆನಿತೊ ಮರಳಿ,
ಮುರಿದು ಬಿದ್ದ ಮನಮರದ ಕೊರಡೊಳೂ
ಹೂವು ಹೂವು ಅರಳಿ!
ಕೂಡಲಾರದೆದೆಯಾಳದಲ್ಲು ಕಂ-
ಡೀತು ಏಕಸೂತ್ರ;
ಕಂಡುದುಂಟು ಬೆಸೆದೆದೆಗಳಲ್ಲು ಭಿ-
ನ್ನತೆಯ ವಿಕಟಹಾಸ್ಯ!
೩
ಎತ್ತರೆತ್ತರಕೆ ಏರುವ ಮನಕೂ
ಕೆಸರ ಲೇಪ, ಲೇಪ;
ಕೊಳೆಯ ಕೊಳಚೆಯಲಿ ಮುಳುಗಿ ಕಂಡನೋ
ಬಾನಿನೊಂದು ಪೆಂಪ;
ತುಂಬುಗತ್ತಲಿನ ಬಸಿರನಾಳುತಿದೆ
ಒಂದು ಅಗ್ನಿಪಿಂಡ;
ತಮದಗಾಧ ಹೊನಲಲ್ಲು ಹೊಳೆಯುತಿದೆ
ಸತ್ವವೊಂದಖಂಡ!
೪
ಇದನರಿತೆನೆಂದೆ; ಆ ಅರಿವುಕಿರಣವನೆ
ನುಂಗಿತೊಂದು ಮೇಘ;
ಆ ಮುಗಿಲ ಬಸಿರನೇ ಬಗೆದು ಬಂತು ನವ-
ಕಿರಣವೊಂದಮೋಘ!
ಹಿಡಿದ ಹೊನ್ನೆ ಮಣ್ಣಹುದು! ಮಣ್ಣೊಳೂ
ಹೊಳೆದುದುಂಟು ಹೊನ್ನು;
ಇದು ಹೀಗೆ ಎಂಬ ನಂಬುಗೆಯ ಊರೆಗೋ-
ಲಿಲ್ಲ ಇನ್ನು ಮುನ್ನು!
೫
ಆಶೆಯೆಂಬ ತಳವೊಡೆದ ದೋಣಿಯಲಿ
ದೂರತೀರಯಾನ;
ಯಾರ ಲೀಲೆಗೋ ಯಾರೊ ಏನೊ ಗುರಿ-
ಯಿರದೆ ಬಿಟ್ಟ ಬಾಣ!
ಇದು ಬಾಳು ನೋಡು; ಇದ ತಿಳಿದೆನೆಂದರೂ
ತಿಳಿದ ಧೀರನಿಲ್ಲ;
ಹಲವುತನದ ಮೈಮರೆಸುವಾಟವಿದು;
ನಿಜವು ತೋರದಲ್ಲ!
ಬೆಂಗಾಡು ನೋಡು ಇದು; ಕಾಂಬ ಬಯಲುದೊರೆ-
ಗಿಲ್ಲ ಆದಿ-ಅಂತ್ಯ;
ಅದ ಕುಡಿದೆನೆಂದ ಹಲರುಂಟು; ತಣಿದೆನೆಂ-
ದವರ ಕಾಣೆನಯ್ಯ!
ಅರೆಬೆಳಕಿನಲ್ಲಿ ಬಾಳಲ್ಲಿ ಸುತ್ತಿ ನಾ-
ವೇಕೊ ಮಲೆತು, ಮೆರೆದು,
ಕೊನೆಗೆ ಕರಗುವೆವು ಮರಣತೀರಘನ-
ತಿಮಿರದಲ್ಲಿ ಬೆರೆತು!
- ಎಂ ಗೋಪಾಲಕೃಷ್ಣ ಅಡಿಗ
ಭಾವತರಂಗ: 44
ಪ್ರಕಾಶನ: 1947
Comments
Post a Comment