ನಿಸ್ವನ - ಗಿರಿಶಿಖರ
- ಕವನ: ಅಂಬಿಕಾತನಯದತ್ತ
- ಕವನದ ಕಾಪೀರೈಟ್: ಪುನರ್ವಸು ಬೇಂದ್ರೆ
- ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
- ಸಿತಾರ್: ಅರ್ಜುನ್ ಆನಂದ್
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ರಿದಮ್ ಪ್ಯಾಡ್: ವರದರಾಜ್
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಗಿರಿಶಿಖರ
೧
ಅಗೊ ಭೂಮಿಹೃದಯ ಗಿರಿಶಿಖರಗಳಲಿ ಕೈಮೊಗ್ಗೆ ಮೇಲೆ ಮುಗಿಸಿ,
ಅರ್ಪಿಸುತ್ತಲಿವೆ ಭಕ್ತಿಯನ್ನು ಬಾನಲ್ಲಿ ಸತ್ವ ಚಿಗಿಸಿ.
ಕೊಳಕುಕೊಳ್ಳದಲಿ ಹುಚ್ಚುಹಳ್ಳದಲಿ ಎಷ್ಟು ದಿವಸ ನಡೆವೆ?
ಎತ್ತರಕ್ಕೆ ಬಾರಣ್ಣ, ಅಲ್ಲೆ ನೀ ಪಡೆವುದನ್ನು ಪಡೆವೆ.
೨
ತಿರುಮಲೆಯ ಕಡೆಗೆ, ಶ್ರೀಶೈಲದೆಡೆಗೆ ಶೃಂಗೇರಿ ಮಾರ್ಗವಾಗಿ
ಬೆಳಗುಳದ ಬೆಟ್ಟ, ಆ ಪೂರ್ವಘಟ್ಟ ಜೀವಕ್ಕೆ ಸ್ವರ್ಗವಾಗಿ
ಎಂದಿನಿಂದಲೋ ಸೆಳೆಯುತಿಹವು ಯಾತ್ರಿಕರ ಮೋದದಿಂದ.
ಬದುಕು ಮಾಡಿಕೊಂಡಿಹುದು ಮನುಜಕುಲ ಆ ಪ್ರಸಾದದಿಂದ.
೩
ಹೊಳೆಗೆ ತಾಯಿಮೊಲೆಯಾಗಿ ಬಾಳುತಿವೆ ಸರ್ವಪರ್ವತಾಗ್ರ,
ಮನಕೆ ತವರುಮನೆಯಾಗಿ ನೆಲೆಸಿಹವು ತಾನೆ ತಾ ಉದಗ್ರ.
ಹೊಲಕೆ ಮಣ್ಣು ಆ ಮನೆಗೆ ಕಲ್ಲು ಹೆರುತಿಹವು ಏನು ಒಲವು!
ಬಿಸುಲುಗಾಲದಲಿ ನೆರೆಯ ತರುವವೋ ಗಂಗೆಗಳಿಗೆ ಕೆಲವು.
೪
ಗುಡ್ಡದಲ್ಲೆ ಗುಡಿ ಕೊರೆದರಲ್ಲ ಕಣ್ಗಂಡ ಓಜರೆಲ್ಲ.
ಶಿಲ್ಪವಲ್ಲ ನವಕಲ್ಪ ಸೃಷ್ಟಿ ಆ ಕಲೆಗೆ ಮರಣವಿಲ್ಲ.
ಧ್ಯಾನಲೀನ ಮನ ಏಳೆ ತೊಳೆದು ಅಜ್ಞಾನದಾ ಕಳಂಕ
ಜ್ಯೋತಿ ಜೀವನವೆ ಮೂರ್ತವಾದಂತೆ ಜೀವ ದೇವತಾಂಕ.
೫
ಕಲ್ಲಿನಲ್ಲೆ ದೇವತ್ವ ಮೂಡಿ ಆದರ್ಶವಾಗುತಿರಲು
ಮನುಜನಲ್ಲಿ ಯಾ ರೋಗ ಮೂಡಿ ಜೀವನವೇ ಬೊಕ್ಕಬೊರಲು
ಆಗುತಿಹುದೊ? ಆ ಬೀಜ ಹುರಿದು ನಿರ್ನಾಮಗೊಳಿಸಲಹುದು.
ಅಲ್ಲಿ ಇಲ್ಲಿ ಒರಗುವದದೇಕೆ, ತುದಿಯಲ್ಲಿ ಫಲವು ಬಹುದು.
- ಅಂಬಿಕಾತನಯದತ್ತ
ಹೃದಯ ಸಮುದ್ರ: 57
ಪ್ರಕಾಶನ: 1956
Comments
Post a Comment