ನಿಸ್ವನ - ನಾನಲೆಯುತಿದ್ದೆ
- ಕವನ: ಅಂಬಿಕಾತನಯದತ್ತ
- ಕವನದ ಕಾಪೀರೈಟ್ ಕೃಪೆ: ಪುನರ್ವಸು ಬೇಂದ್ರೆ
- ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ಸಾರಂಗಿ: ಸರ್ಫ಼ರಾಜ಼್ ಖಾನ್
- ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
- ಸಿತಾರ್: ಅರ್ಜುನ್ ಆನಂದ್
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ರಿದಮ್ ಪ್ಯಾಡ್: ವರದರಾಜ್
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಅಂಬಿಕಾತನಯದತ್ತರ "ನೆನಲೆಯುತಿದ್ದೆ" ಎಂಬ ಈ ಕವನ, ಅವರ "ಹೃದಯ ಸಮುದ್ರ" ಸಂಕಲನದಲ್ಲಿದೆ.
ಈ ಹಾಡಿನಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಕೆಲವು ರಾಗಗಳ ಛಾಯೆಯನ್ನು ಕಾಣಬಹುದು. ಷಡ್ಜಶ್ರುತಿಯಲ್ಲಿ ಮಿಶ್ರ ತಿಲಕ್ ಕಾಮೋದ್, ಯಮನ್ ಕಲ್ಯಾಣ್, ಪಂಚಮಶ್ರುತಿಯಲ್ಲಿ ಮಿಶ್ರ ಮಾಂಝ್ ಖಮಾಜ್ ಹಾಗೂ ಮತ್ತೆ ಷಡ್ಜಶ್ರುತಿಯಲ್ಲಿ ಛಾಯಾನಟ್ ರಾಗಗಳಿಗೆ ವಿಭಿನ್ನ ರೀತಿಯ ಲಯಗಾರಿಕೆಯೊಂದಿಗೆ ಸಾರಂಗಿ, ಸಿತಾರ್, ಬಾನ್ಸುರೀ, ವೀಣೆ, ಗಿಟಾರ್‍ಗಳ ಹಿನ್ನೆಲೆಯಿದೆ. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು.
ಇಡೀ ಕವನ ಹೀಗಿದೆ.
ನಾನಲೆಯುತಿದ್ದೆ
೧
ನಾನಲೆಯುತಿದ್ದೆನೋ ಬಗೆಯ ಬಾನ ಕೆಂಬೆಳಕು-ನಸುಕಿನಲ್ಲಿ
ಕಿರಿಮರೆವು ನೆನೆವು ಅರೆಬೆರೆತು ತೆರೆದ ಹೊಸಬಾಳ ಮುಸುಕಿನಲ್ಲಿ
ಎದೆಹೂವಿನುಸಿರ ನರುಗಂಪಿನೊಂದು ನಸುಸುಳಿಯು ತೇಲುವಂತೆ
ಒಳಚಿತ್ತವರಳುತಿರೆ ಕಾಯುತಿದ್ದೆ ನಿಶ್ಚಿಂತ ಚಿಂತೆಯಂತೆ.
೨
ಆಃ ನೀನು ಬಂದೆ ತನಿಮಿಂಚಿನುರುಳೆ ತನ್ನನ್ನೆ ತೂಗುವಂತೆ,
ಕಡುಕಾದ ಮೈಯು ತಡವರಿಸಿ ಮಮತೆ ನಿದ್ದೆಯಲಿ ತಾಗುವಂತೆ,
ಆ ನಮ್ಮ ನಿಮ್ಮ ಒಪ್ಪಂದದೊಪ್ಪ ಕಣ್ತೆರೆದು ಇಣುಕುವಂತೆ,
ನನ್ನಲ್ಲಿ ಏನೊ ಮಿಸುಗುತ್ತಲಿಹುದು ಬಾನ್ ಮೀನ ಮಿಣುಕುವಂತೆ.
೩
ಮಾತಾಡುವಂತೆ ನಗೆಗಣ್ಣು ತುಳುಕೆ ನಾನೆಲ್ಲೊ ನೋಡಿದಂತೆ;
ಎನಿಸುವದು; ಚಿತ್ತ ನೆನೆಸುವದು ಎಂದೂ ನೀನೊಮ್ಮೆ ಹಾಡಿದಂತೆ;
ಆ ಪಲ್ಲವಿಯನೆ ಗುಂಗುಣಿಸಿ ನುಡಿಯನೊಂದೊಂದು ಕಟ್ಟಿದಂತೆ
ಮರವೇರುತಿಹುದು; ಮುದ ಬೀರುತಿಹುದು ಬಾನಟ್ಟ ಮೆಟ್ಟಿದಂತೆ.
೪
ನೀನೆಲ್ಲೆ ಇರಲಿ ನಾನಿಲ್ಲೆ ಇರಲಿ ಮೈಗಿರಲಿ ಎಲ್ಲೆಗಿಲ್ಲೆ.
ಆ ಸಾವು ನೋವಿನೊಳತೋಟಿಯೇಕೆ? ಇದ್ದಲ್ಲೆ ಎಲ್ಲವಿಲ್ಲೆ?
- ಅಂಬಿಕಾತನಯದತ್ತ
ಹೃದಯ ಸಮುದ್ರ: 4
ಪ್ರಕಾಶನ: 1956
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.
Comments
Post a Comment