ನಿಸ್ವನ - ಜೋ-ಅರಿವು
- ಕವನ: ಅಂಬಿಕಾತನಯದತ್ತ
- ಕವನದ ಕಾಪೀರೈಟ್: ಪುನರ್ವಸು ಬೇಂದ್ರೆ
- ಗಾಯನ: ಉಸ್ತಾದ್ ಫ಼ಯಾಜ಼್ ಖಾನ್
- ರಾಗಸಂಯೋಜನೆ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
- ಸಿತಾರ್: ಅರ್ಜುನ್ ಆನಂದ್
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ರಿದಮ್ ಪ್ಯಾಡ್: ವರದರಾಜ್
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಜೋ-ಅರಿವು
೧
ಮಾಟ, ಮಾಟ, ಇದು ಯಾವ ಆಟ
ಈ ಬಟಾ ಬಯಲಿನಲ್ಲಿ.
ಅಚ್ಚ ಅರಿವು ಬರಿ ಬಚ್ಚ ಅರಿವು
ಹೊಸ ಹೊಚ್ಚ ಅರಿವಿನಲ್ಲಿ.
೨
ಅರೆ ಅರಿವಿನಲ್ಲಿ ಮರೆ ಅರಿವಿನಲ್ಲಿ
ಹೊರ ಅರಿವಿನಲ್ಲಿ ನೀನು
ತೆರೆ ಅರಿವಿನಲ್ಲಿ ಬರೆ ಅರಿವಿನಲ್ಲಿ
ಕೊರೆ ಅರಿವಿನಲ್ಲಿ ನೀನು.
೩
ಮುರಿವರಿವಿನಲ್ಲಿ ಮೆರೆವರಿವಿನಲ್ಲಿ
ಎರೆವರಿವಿನಲ್ಲಿ ನೀನು
ನುರಿವರಿವಿನಲ್ಲಿ ನೊರೆವರಿವಿನಲ್ಲಿ
ತೊರೆವರಿವಿನಲ್ಲಿ ನೀನು.
೪
ನೆಲದರಿವಿನಲ್ಲಿ ನೀರರಿವಿನಲ್ಲಿ
ಉರಿವರಿವಿನಲ್ಲಿ ಅನಿಲ
ಬಾನರಿವಿನಲ್ಲಿ ತಾನರಿವಿನಲ್ಲಿ
ಹರಿವರಿವಿನಲ್ಲಿ ಅನಲ.
೫
ಅನಲ, ಅನಿಲ ಸಂಯೋಗದಲ್ಲಿ ಗೋ-
-ಪುರವ ಕಟ್ಟಿ ಅರಿವು
ಮರೆವಿನೊಂದು ಮರೆಯಲ್ಲಿ ಮನೆಯ
ಕಟ್ಟಿಹುದು ಬಯಲ ಇರವು.
೬
ಹರವೆ ತಗ್ಗುತಿದೆ; ಹರವೆ ನುಗ್ಗುತಿದೆ
ಹಿಗ್ಗುತಿಹುದು ಹರವು
ಮೊಗ್ಗು ಮೊಗ್ಗಾಗಿ; ಅರಳು ಅರಳಾಗಿ
ಹರಳುಗೊಳುವ ಇರವು.
೭
ಅರಬು ಏಕೆ? ಬರಬೇಕೆ? ಮರೆವೊ? ಓ
ಅರಿವೆ ಅರಿವೆ ಇಹುದು
ಸ್ವರದ ಮೂರ್ಛನೆಗೆ ರಾಗ ಲಯದ ಕಲೆ
ತಲೆಯ ತೂಗುತಿಹುದು.
೮
ತಾ ಎಂದ ಅರಿವು ಬಾ ಎನುವ ಅರಿವು
ನಾ ಎನುವ ಅರಿವು ಇಳಿದು
ಜೋ ಎನುವ ಅರಿವು ಭೋ ಎನುವ ಅರಿವು
ಬರುತಿಹುದು ತಮವ ಕಳೆದು.
- ಅಂಬಿಕಾತನಯದತ್ತ
ಉತ್ತರಾಯಣ: 29
ಪ್ರಕಾಶನ: 1960
Comments
Post a Comment