ನಿಸ್ವನ - ಸೆಳವು ೨
- ಕವನ: ಕೆ ಎಸ್ ನರಸಿಂಹಸ್ವಾಮಿ
- ಕವನದ ಕಾಪೀರೈಟ್ ಕೃಪೆ: ಕೆ ಎಸ್ ನರಸಿಂಹಸ್ವಾಮಿ ಪ್ರತಿಷ್ಥಾನ (ಡಾ|| ಮೇಖಲಾ ವೆಂಕಟೇಶ್, ವ್ಯವಸ್ಥಾಪಕ ಟ್ರಸ್ಟಿ)
- ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಸಾರಂಗಿ: ಸರ್ಫ಼ರಾಜ಼್ ಖಾನ್
- ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ರಿದಮ್ ಪ್ಯಾಡ್: ವರದರಾಜ್
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಕೆ ಎಸ್ ನರಸಿಂಹಸ್ವಾಮಿಗಳ "ಸೆಳವು" ಎಂಬ ಈ ಕವನ, ಅವರ "ಸಂಜೆ ಹಾಡು" ಸಂಕಲನದಲ್ಲಿದೆ.
ಈ ಹಾಡಿನಲ್ಲಿ ಎರಡು ಲೋಕಗಳಿವೆ. ಇದೇ ಕವನವನ್ನು ಬೇರೊಂದು ಶೈಲಿಯಲ್ಲಿಯೂ ರಾಗಸಂಯೋಜಿಸಿ ಹಾಡಿದ್ದೇನೆ. ಅಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಯಮನ್ ಕಲ್ಯಾಣ್ ಹಾಗೂ ಭೈರವಿ (ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಿಂಧೂಭೈರವಿ) ರಾಗಗಳ ಲೋಕಗಳಿವೆ. ಇಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ (ಅನ್ಯಸ್ವರವಿರದ) ಖಮಾಚ್ ರಾಗದ ಮಧ್ಯ, ತಾರ ಸ್ಥಾಯಿ ಹಾಗೂ ವೀಣೆ, ಕೊಳಲುಗಳ ಲೋಕ ಮೊದಲನೆಯದಾದರೆ, ಎರಡೂ ನಿಷಾದಗಳಿರುವ ಅಥವಾ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಖಮಾಜ್ ರಾಗದಲ್ಲಿ ಕೊನೆಗೊಳ್ಳುವ ಮಂದ್ರ ಸ್ಥಾಯಿ ಹಾಗೂ ಸಾರಂಗಿಗಳ ಲೋಕ ಎರಡನೆಯದು. ಎರಡೂ ರಾಗಗಳು ಒಂದೇ ಮೂಲದ ಕವಲುಗಳು. ಹೆಚ್ಚಿನ ವಿವರಗಳನ್ನು video ವಿವರಣೆಯಲ್ಲಿರುವ timestamp, chapterಗಳಲ್ಲಿ ನೋಡಬಹುದು.
ಇದೇ ಕವನವನ್ನು ಬೇರೊಂದು ಶೈಲಿಯಲ್ಲಿಯೂ ರಾಗಸಂಯೋಜಿಸಿ ಹಾಡಿದ್ದೇನೆ. ಅದು ಮುಂದೆ ಇಲ್ಲೇ ಬಿಡುಗಡೆಯಾಗಲಿದೆ.
ಇಡೀ ಕವನ ಹೀಗಿದೆ.
ಸೆಳವು
೧
ಹೂವರಳುವ ಸಮಯದಲ್ಲಿ
ತಂಬೆಲರಿನ ಸೀಮೆಯಲ್ಲಿ
ದೂರ ದೂರ ನಾಡಿನಲ್ಲಿ
ತೇಲಿ ಬಂದ ಹಾಡಿನಲ್ಲಿ
- ನಿನ್ನ ನೆನೆದೆನು!
೨
ಬಂಗಾರದ ಮಿಂಚಿನಲ್ಲಿ
ಮಳೆಬಿಲ್ಲಿನ ಅಂಚಿನಲ್ಲಿ
ನಟ್ಟಿರುಳಿನ ಕನಸಿನಲ್ಲಿ
ಹೂವರಳಿದ ಮನಸಿನಲ್ಲಿ
- ಹಾಡ ಕಂಡೆನು!
೩
ನನಗೆ ನಾನೆ ಹಾಡಿಕೊಂಡ
ಬದುಕಿನಲ್ಲಿ ಚೆಲುವ ಕಂಡ
ಒಲವಿನಲ್ಲಿ ಅರಳಿಕೊಂಡ
ಇರುವಂತಿಗೆ ಮೊಗ್ಗಿನಲ್ಲಿ
- ಕನಸ ಕಂಡೆನು!
೪
ಪಿಸುಮಾತಿನ ಹೊರಳಿನಲ್ಲಿ
ಕಣ್ತೆರೆಸುವ ಮೋಡಿಯಲ್ಲಿ
ಹಾಡು ಹೊರಗೆ ಬಂದಿತು;
ಈ ಲೋಕದ ಹೊಲಗಳಲ್ಲಿ
ಆ ಲೋಕದ ನಲಿವು ಪುಟಿದು
ಒಲವು ನಲಿವು ಚೆಲುವು ಮೂಡಿ
- ನನ್ನ ಸೆಳೆದವು!
- ಕೆ ಎಸ್ ನರಸಿಂಹಸ್ವಾಮಿ
ಸಂಜೆ ಹಾಡು
ಮಲ್ಲಿಗೆಯ ಮಾಲೆ, ಪುಟ 549
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.
Comments
Post a Comment