ನಿಸ್ವನ - ಬೆಳಗು
- ಕವನ: ಅಂಬಿಕಾತನಯದತ್ತ
- ಕವನದ ಕಾಪೀರೈಟ್ ಕೃಪೆ: ಪುನರ್ವಸು ಬೇಂದ್ರೆ
- ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ/ವಯೊಲಿನ್: ಹೇಮಂತ್ ಕುಮಾರ್
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಬೆಳಗು
೧
ಮೂಡಲ ಮನೆಯಾ ಮುತ್ತಿನ ನೀರಿನ
ಎರಕಽವ ಹೊಯ್ದಾ
ನುಣ್ಣ-ನ್ನೆರಕಽವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ.
ಹೋಯ್ತೋ-ಜಗವೆಲ್ಲಾತೊಯ್ದಾ
೨
ರತ್ನದರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು.
೩
ಎಲೆಗಳ ಮೇಲೇ ಹೂಗಳ ಒಳಗೇ
ಅಮೃತಽದ ಬಿಂದು
ಕಂಡವು-ಅಮೃತಽದ ಬಿಂದು
ಯಾರಿರಿಸಿರುವರು ಮುಗಿಲಽಮೇಲಿಂ-
ದಿಲ್ಲಿಗೇ ತಂದು. ಈಗ-ಇಲ್ಲಿಗೇ ತಂದು.
೪
ತಂಗಾಳೀಯಾ ಕೈಯೊಳಗಿರಿಸೀ
ಎಸಳೀನಾ ಚವರಿ
ಹೂವಿನ-ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ-ಮೈಯೆಲ್ಲಾ ಸವರಿ.
೫
ಗಿಡಗಂಟೆಯಾ ಕೊರಳೊಳಗಿಂದ
ಹಕ್ಕೀಗಳ ಹಾಡು
ಹೊರಟಿತು-ಹಕ್ಕೀಗಳ ಹಾಡು.
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು.
೬
ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ.
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ.
೭
ಅರಿಯದು ಅಳವು ತಿಳಿಯದು ಮನವು
ಕಾಣಽದೋ ಬಣ್ಣಾ
ಕಣ್ಣಿಗೆ-ಕಾಣಽದೋ ಬಣ್ಣಾ
ಶಾಂತೀರಸವೇ ಪ್ರೀತೀಯಿಂದಾ
ಮೈದೋರೀತಣ್ಣಾ
ಇದು ಬರಿ-ಬೆಳಗಲ್ಲೋ ಅಣ್ಣಾ.
- ಅಂಬಿಕಾತನಯದತ್ತ
ಗರಿ: 1
ಪ್ರಕಾಶನ: 1932
Comments
Post a Comment