ಕನ್ನಡದ ಭಕ್ತಿ - ಅನುಸ್ವಾರದ ಅನುಸಾರ

ಈ ಲೇಖನವು ಈಗ GitHubಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ.

---

ಕನ್ನಡದ ಭಕ್ತಿಯನ್ನು ಮುಂದುವರೆಸುತ್ತಾ...

ಪ್ರಸ್ತಾವನೆ

ಹಳಗನ್ನಡದಲ್ಲಿ ಪ್ರಥಮಾ ವಿಭಕ್ತಿಪ್ರತ್ಯಯವಾಗಿ ಕಾಣಿಸುವ ಹಾಗೂ ದ್ವಿತೀಯಾ, ತೃತೀಯಾ, ಪಂಚಮೀ ವಿಭಕ್ತಿಪ್ರತ್ಯಯಗಳ ಅಂತ್ಯದಲ್ಲಿ ಕಾಣಿಸುವ ಅನುಸ್ವಾರವನ್ನು ಹೇಗೆ ಉಚ್ಚರಿಸಬೇಕು ಎನ್ನುವುದರ ಬಗ್ಗೆ ಪ್ರಾಚೀನ ಹಾಗೂ ಆಧುನಿಕ ವೈಯಾಕರಣರಲ್ಲಿ ಭಿನ್ನಮತಗಳಿವೆ. ಈ ಅನುಸ್ವಾರದ ನಿಜರೂಪವನ್ನರಸುತ್ತಾ ಪ್ರಾಚೀನರ ಹಾಗೂ ಆಧುನಿಕರ ಮತಗಳನ್ನು ಒಂದು ರೀತಿಯಲ್ಲಿ ಖಂಡಿಸುತ್ತಾ, ಇನ್ನೊಂದು ರೀತಿಯಲ್ಲಿ ಸಮನ್ವಯಿಸುವ ಪ್ರಯತ್ನ ಇಲ್ಲಿದೆ. ಲೇಖನವು ತುಸು ದೀರ್ಘವೂ, ಅದರಲ್ಲಿ ವಿಷಯಗಳು ತುಸು ಸಂಕೀರ್ಣವೂ ಆಗಿರುವುದರಿಂದ, ಓದುಗರ ತಾಳ್ಮೆ, ಏಕಾಗ್ರತೆಗಳನ್ನು ಕೋರುತ್ತೇನೆ.

ಸೂಚನೆ

ಈ ಲೇಖನದಲ್ಲಿ ಕೊಟ್ಟಿರುವ ಉದಾಹರಣೆಗಳಲ್ಲಿ, ಅರ್ಧಾನುಸ್ವಾರಕ್ಕೆ ದೇವನಾಗರೀಲಿಪಿಯ ಚಂದ್ರಬಿಂದುವನ್ನು (ಁ) ಬಳಸಿದ್ದೇನೆ. ಅದು ಸರಿಯಾಗಿ ಕಾಣಿಸದಿದ್ದರೆ, ದಯವಿಟ್ಟು ದೇವನಾಗರೀ ಅಥವಾ ಹಿಂದೀ font ಅನ್ನೂ ಹಾಕಿಕೊಳ್ಳಿ. ಆಗ ಎಲ್ಲ ಉದಾಹರಣೆಗಳೂ ಸರಿಯಾಗಿ ಕಂಡಾವು.

Creative Commons License
ಈ ಲೇಖನ Creative Commons Attribution-NonCommercial-NoDerivatives 4.0 International License ಮೂಲಕ ಲಭ್ಯವಿವೆ. ಇಲ್ಲಿ ಕೆಲವು ಹೊಸ ಸಂಶೋದನೆಯ ವಿಚಾರಗಳಿರುವುದರಿಂದ,  ಈ ಲೇಖನವನ್ನು ಅಥವಾ ಅದರ ಭಾಗಗಳನ್ನು ಉದ್ಧರಿಸುವ ಮೊದಲು ದಯವಿಟ್ಟು ಕೆಳಗಿರುವ "comment" ವಿಭಾಗದಲ್ಲಿ ಬರೆದು ತಿಳಿಸಿ.

Creative Commons License
This work is licensed under a Creative Commons Attribution-NonCommercial-NoDerivatives 4.0 International License. Since there is some original research in this work, please inform in the comment section below, if you want to quote or use this or any part of this work.

ಪ್ರಾಚೀನ ವೈಯಾಕರಣರ ಮತ

ಕೇಶಿರಾಜ ತನ್ನ ಶಬ್ದಮಣಿದರ್ಪಣದ ಸೂತ್ರ ೧೦೩ರಲ್ಲಿ "ಮಮಿಂಕೆಯದದೊಳ್ಳೆಂದಿರ್ಪುವು ಸಪ್ತವಿಧ ವಿಭಕ್ತಿಗಳ್" ಎಂದು ಕನ್ನಡದ ವಿಭಕ್ತಿಪ್ರತ್ಯಯಗಳನ್ನು ಅಡಕವಾಗಿ ಹೇಳಿದ್ದಾನೆ.

ಸೂತ್ರ ೧೦೩

ಸಂದಿಸಿ ಮಮಿಂಕೆಯದದೊ-
ಳ್ಳೆಂದಿರ್ಪುವು ಸಪ್ತವಿಧ ವಿಭಕ್ತಿಗಳವು ಮಾ-|
ರ್ಗಂದಪ್ಪದರ್ಥವಶದಿಂ
ಪಿಂದೆಣಿಸಿದ ವಿವಿಧವಿಧದ ಲಿಂಗಕ್ಕೆಲ್ಲಂ||

ವೃತ್ತಿ - ಪಿಂತೆ ಪೇೞ್ದ ನಾನಾ ತೆಱದ ಲಿಂಗಂಗಳ್ಗೆ ಪರಮಾಗಿ ನಾಮ ವಿಭಕ್ತಿಗಳ್ ಮ್, ಅಮ್, ಇಮ್, ಕೆ, ಅತ್, ಅದ್, ಒಳ್, ಎಂದು ಪ್ರಥಮೆಗಂ, ದ್ವಿತೀಯೆಗಂ, ತೃತೀಯೆಗಂ, ಚತುರ್ಥಿಗಂ, ಪಂಚಮಿಗಂ, ಷಷ್ಠಿಗಂ, ಸಪ್ತಮಿಗಂ ಏೞಾಗಿ ಕಾರಕವಶದಿಂ ಪತ್ತುಗುಂ. ...

ಪ್ರಯೋಗಂ - ಮರಂ, ಮರನಂ, ಮರದಿಂ, ಮರಕ್ಕೆ, ಮರದತ್ತಣಿಂ, ಮರದ, ಮರದೊಳ್, ಮರನೇ - ಇಂತರ್ಥವಶದಿಂ ವಿಭಕ್ತಿ ಪರಿಣಮಿಪುವು; ವಿಭಕ್ತಿಗಳ್ ವಿಕಾರಮನೆಯ್ದುವುದಱಿಂ ಪದಂ ನಾನಾರೂಪಮಪ್ಪುದು.

ಮರನಿರ್ದುದು ಮರನಂ ಕಡಿ
ಮರದಿಂ ಮಾಡಾನೆಯಂ ಮರಕ್ಕೆರೆ ನೀರಂ|
ಮರನತ್ತಣಿನೆಲೆ ಬಿೞ್ದುದು
ಮರದದು ಪಣ್ ಮರದೊಳಿರು ತಳಿರ್ತಿರು ಮರನೇ||

ಸಾರಾಂಶ: ಎಲ್ಲ ಲಿಂಗಗಳಿಗೂ (ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಇತ್ಯಾದಿ; ಸೂತ್ರ ೯೮ನ್ನು ನೋಡಿ) ಮ್, ಅಮ್, ಇಮ್, ಕೆ, ಅತ್, ಅದ್, ಒಳ್ ಎಂಬ ಪ್ರತ್ಯಯಗಳು ಕ್ರಮವಾಗಿ ಪ್ರಥಮಾ, ದ್ವಿತೀಯಾ, ತೃತೀಯಾ, ಚತುರ್ಥೀ, ಪಂಚಮೀ, ಷಷ್ಠೀ ಹಾಗೂ ಸಪ್ತಮೀ ವಿಭಕ್ತ್ಯರ್ಥದಲ್ಲಿ ಬರುತ್ತವೆ.

ಉದಾಹರಣೆಯಾಗಿ,

  1. ಮರಂ: ಪ್ರಥಮಾ - ಹೊಸಗನ್ನಡದಲ್ಲಿ ಮರವು
  2. ಮರನಂ: ದ್ವಿತೀಯಾ - ಹೊಸಗನ್ನಡದಲ್ಲಿ ಮರವನ್ನು
  3. ಮರದಿಂ: ತೃತೀಯಾ - ಹೊಸನ್ನಡದಲ್ಲಿ ಮರದಿಂದ
  4. ಮರಕ್ಕೆ: ಚತುರ್ಥೀ - ಹೊಸಗನ್ನಡದಲ್ಲೂ ಮರಕ್ಕೆ
  5. ಮರದತ್ತಣಿಂ: ಪಂಚಮೀ - ಹೊಸಗನ್ನಡದಲ್ಲಿ "ಮರದ ದೆಸೆಯಿಂದ" ಎಂದು ವ್ಯಾಕರಣ ಪಾಠದಲ್ಲಿ ಕಂಡುಬಂದರೂ ಈ ಪ್ರಯೋಗ ಅಷ್ಟಾಗಿ ಕಾಣಿಸುವುದಿಲ್ಲ. ಈ ಬಗೆಗೆ ಆಳವಾದ ವಿವೇಚನೆಗಾಗಿ ಶ್ರೀ ಸೇಡಿಯಾಪು ಕೃಷ್ಣಭಟ್ಟರ "ಪಂಚಮೀ ವಿಭಕ್ತಿ" ಎಂಬ ಲೇಖನವನ್ನು ನೋಡಬಹುದು. ಡಾ|| ಶ್ರೀ ಪಾದೆಕಲ್ಲು ವಿಷ್ಣುಭಟ್ಟರು ತಾವು ಸಂಪಾದಿಸಿದ "ವಿಚಾರಪ್ರಪಂಚ" ಎಂಬ ಸೇಡಿಯಾಪು ಕೃಷ್ಣಭಟ್ಟರ ಲೇಖನಗಳ ಸಂಪುಟದಲ್ಲಿ ಈ ಲೇಖನವನ್ನೂ ಸೇರಿಸಿದ್ದಾರೆ.
  6. ಮರದ: ಷಷ್ಠೀ - ಹೊಸಗನ್ನಡದಲ್ಲೂ ಮರದ
  7. ಮರದೊಳ್: ಸಪ್ತಮೀ - ಹೊಸಗನ್ನಡದಲ್ಲಿ ಮರದಲ್ಲಿ. ಉತ್ತರಕರ್ನಾಟಕದಲ್ಲಿ ಮರದೊಳಗೆ ಎನ್ನುವುದೇ ಹೆಚ್ಚು ಪ್ರಚಲಿತವಾಗಿರುವುದನ್ನು ಗಮನಿಸಬಹುದು.
ಸಂದರ್ಭಕ್ಕನುಸಾರವಾಗಿ ಈ ಪ್ರತ್ಯಯಗಳು ವಿಕೃತಿಗೊಳಗಾಗಿ ಬೇರೆ ಬೇರೆ ರೂಪಗಳಾಗಿ ಕಾಣಿಸುತ್ತವೆ.

ಉದಾಹರಣೆಗೆ,
  1. ಮರಂ + ಇರ್ದುದು => ಮರನಿರ್ದುದು; ಇಲ್ಲಿ ಪ್ರಥಮಾರ್ಥದ ಅನುಸ್ವಾರಕ್ಕೆ (ಂ / ಮ್) ಬದಲಾಗಿ ನಕಾರ ಕಾಣಿಸಿಕೊಂಡಿದೆ.
  2. ಮರ + ಅಂ => ಮರನಂ; ಇಲ್ಲಿ ದ್ವಿತೀಯಾರ್ಥದ ಅಂ ಪ್ರತ್ಯಯದ ಮೊದಲು ನಕಾರ ಕಾಣಿಸಿಕೊಂಡಿದೆ.
  3. ಮಾಡಾನೆ + ಅಂ => ಮಾಡಾನೆಯಂ; ಇಲ್ಲಿ ದ್ವಿತೀಯಾರ್ಥದ ಅಂ ಪ್ರತ್ಯಯದ ಮೊದಲು ಯಕಾರ ಕಾಣಿಸಿಕೊಂಡಿದೆ.
  4. ಮರ + ಇಂ => ಮರದಿಂ; ಇಲ್ಲಿ ತೃತೀಯಾರ್ಥದ ಇಂ ಪ್ರತ್ಯಯದ ಮೊದಲು ದಕಾರ ಕಾಣಿಸಿಕೊಂಡಿದೆ.
  5. ಮರ + ಕೆ => ಮರಕ್ಕೆ; ಇಲ್ಲಿ ಚತುರ್ಥ್ಯರ್ಥದ ಕೆ ಪ್ರತ್ಯಯಕ್ಕೆ ಸಜಾತೀಯ ದ್ವಿತ್ವ (ಇಲ್ಲಿ ಕ್ ಒತ್ತಕ್ಷರ) ಕಾಣಿಸುತ್ತದೆ.
  6. ಮರದತ್ತಣಿಂ + ಎಲೆ => ಮರದತ್ತಣಿನೆಲೆ; ಇಲ್ಲಿ ಪಂಚಮ್ಯರ್ಥದ ಅತ್ತಣಿಂ ಪ್ರತ್ಯಯದ ಅಂತ್ಯದ ಅನುಸ್ವಾರಕ್ಕೆ ಬದಲಾಗಿ ನಕಾರ ಕಾಣಿಸಿಕೊಂಡಿದೆ.
  7. ಮರ + ಅ => ಮರದ; ಇಲ್ಲಿ ಕೇಶಿರಾಜ ಷಷ್ಠೀ ವಿಭಕ್ತಿಪ್ರತ್ಯಯವನ್ನು ಅದ್ ಎಂದಿರುವುದು ಕೇವಲ ಮುಂದಿನ ಸ್ವರಾಕ್ಷರದೊಂದಿಗೆ (ಒಳ್ ಎಂಬಲ್ಲಿರುವ ಒಕಾರ) ಸಂಧಿಮಾಡಿಕೊಳ್ಳುವುದಕ್ಕಾಗಿಯೇ ಇರಬೇಕು. ಸಂಸ್ಕೃತ ವ್ಯಾಕರಣಶಾಸ್ತ್ರದಲ್ಲೂ ಇಂತಹ ಪ್ರಯೋಗಗಳಿವೆ; ಉದಾಹರಣೆಗೆ, ಪಾಣಿನಿಯ ಸೂತ್ರ ಅದೇಙ್ಗುಣಃ.
  8. ಮರ + ಒಳ್ => ಮರದೊಳ್; ಇಲ್ಲಿ ಸಪ್ತಮ್ಯರ್ಥದ ಒಳ್ ಪ್ರತ್ಯಯದ ಮೊದಲು ದಕಾರ ಕಾಣಿಸಿಕೊಂಡಿದೆ.

'ವೃತ್ತಿ'ಯಲ್ಲಿ ಪ್ರಥಮಾ ವಿಭಕ್ತಿಪ್ರತ್ಯಯವಾದ ಅನುಸ್ವಾರವನ್ನು ಮ್ ಎಂದೂ, ದ್ವಿತೀಯಾ ವಿಭಕ್ತಿಪ್ರತ್ಯಯವಾದ ಅಂ ಅನ್ನು ಅಮ್ ಎಂದೂ, ತೃತೀಯಾ ವಿಭಕ್ತಿಪ್ರತ್ಯಯವಾದ ಇಂ ಅನ್ನು ಇಮ್ ಎಂದೂ ಹೇಳಿರುವುದರಿಂದ, ಆ ಸಂದರ್ಭಗಳಲ್ಲಿ ಕಾಣುವ ಅನುಸ್ವಾರಾಂತ್ಯದ ಉಚ್ಚಾರಣೆ ಮ್ ಎಂದೇ ಇರಬೇಕೆಂಬುದು ಕೇಶಿರಾಜನ (ಬಹುಶ: ಅವನಿಗೂ ಪುರಾತನರಾದ ವೈಯಾಕರಣರ) ಮತವೆಂದು ನಮಗೆ ತಿಳಿಯುತ್ತದೆ. ಆದರೆ ಅನುಸ್ವಾರವು ಸಂಧಿಯಾಗುವ ಸಂದರ್ಭದಲ್ಲಿ ಬೇರೆ ರೂಪಗಳನ್ನು ತಾಳುತ್ತದೆ ಎಂದೂ ಹೇಳಿರುವುದು ಸೂಕ್ತವೇ ಆದರೂ, ಆ ರೂಪಗಳನ್ನು ಮೂಡಿಸುವ ಭಾಷಾಪ್ರಕ್ರಿಯೆಗಳು ತಿಳಿಗೊಳ್ಳುವುದಿಲ್ಲ.

ಆಧುನಿಕ ವೈಯಾಕರಣರ ಮತ

ಮೈಸೂರು ವಿಶ್ವವಿದ್ಯಾನಿಲಯದ "ಕನ್ನಡ ಕೈಪಿಡಿ"ಕಾರರು (ಲೇಖಕರ ಪಟ್ಟಿಯನ್ನು ಪುಟ iii ಹಾಗೂ ivಗಳಲ್ಲಿ ನೋಡಬಹುದು) ಈ ಅನುಸ್ವಾರಾಂತ್ಯವಾದ ವಿಭಕ್ತಿಪ್ರತ್ಯಯಗಳ (ಪ್ರಥಮಾ, ದ್ವಿತೀಯಾ ಹಾಗೂ ತೃತೀಯಾ ವಿಭಕ್ತಿಪ್ರತ್ಯಯಗಳ) ಬಗೆಗೆ ಬೇರೊಂದು ಮತವನ್ನು ಪ್ರತಿಪಾದಿಸುತ್ತಾರೆ. ಈ ಮತವನ್ನು ಪೂರ್ತಿಯಾಗಿ ತಿಳಿಯಲು ಪುಟ ೪೦೭ರಿಂದ ಪುಟ ೪೧೪ರವರೆಗಿನ ಸಾಕಷ್ಟು ಭಾಗಗಳನ್ನು ಇಲ್ಲಿ ಉದ್ಧರಿಸಬೇಕಿದೆ. ಸುದೀರ್ಘವಾದ ಉದ್ಧರಣೆಗಾಗಿ ಓದುಗರ ಕ್ಷಮೆಯನ್ನೂ, ಅವರ ತಾಳ್ಮೆಯನ್ನೂ ಕೋರುತ್ತೇನೆ.

ಕನ್ನಡ ಕೈಪಿಡಿ, ಪುಟ ೪೦೭

(2) ಪ್ರಥಮಾವಿಭಕ್ತಿಗೆ ಪ್ರತ್ಯೇಕವಾದ ವಿಭಕ್ತಿಪ್ರತ್ಯಯವಾವುದೂ ಇಲ್ಲ; ಪ್ರಕೃತಿಯೇ ಪ್ರಥಮಾವಿಭಕ್ತ್ಯರ್ಥದಲ್ಲಿ ಪ್ರಯೋಗವಾಗುತ್ತದೆ. ಮ್ ಎಂಬುದು ಪ್ರಥಮಾವಿಭಕ್ತಿಪ್ರತ್ಯಯವೆಂದು ಹಳಗನ್ನಡವ್ಯಾಕರಣಗಳಲ್ಲಿ ಹೇಳಿದೆ. ಈ ಪ್ರತ್ಯಯವು ಸೇರುವುದು ಅಕಾರಾಂತ ಶಬ್ದಗಳಿಗೆ, ಅದೂ ಏಕವಚನದಲ್ಲಿ ಮಾತ್ರ. ಮಿಕ್ಕ ಕಡೆಗಳಲ್ಲಿ ಅದು ಲೋಪವಾಗುವುದೆಂದು ಆ ವ್ಯಾಕರಣಗಳಲ್ಲಿ ಹೇಳಿದೆ. ಪ್ರತ್ಯಯವು ಸೇರದೆಯೇ ವಿಭಕ್ತಿ ಸೂಚಿತವಾಗಕೂಡದು ಎಂಬ ನಿಯಮವನ್ನು ಇಟ್ಟುಕೊಳ್ಳುವುದಾದರೆ ಹಾಗೆಯೇ ಹೇಳಬೇಕಾಗುತ್ತದೆ. ಆದರೆ ಇದು ಸಮಂಜಸವಾಗಿ ತೋರುವುದಿಲ್ಲ. ಏಕೆಂದರೆ ಅಕಾರಾಂತವಲ್ಲದ ಶಬ್ದಗಳಿಗೆ ಏಕವಚನ ಬಹುವಚನಗಳೆರಡರಲ್ಲಿಯೂ[,] ಅಕಾರಾಂತ ಶಬ್ದಗಳಿಗೆ ಬಹುವಚನದಲ್ಲಿಯೂ ಮ್ ಪ್ರತ್ಯಯವು ಮೊದಲು ಸೇರುವುದೇಕೆ, ಅಮೇಲೆ ಲೋಪವಾಗುವುದೇಕೆ? ಇದಕ್ಕೆ ಸಮರ್ಪಕವಾದ ಉತ್ತರವಾವುದೂ ವ್ಯಾಕರಣಗಳಲ್ಲಿ ಸಿಕ್ಕುವುದಿಲ್ಲ. ಆದಕಾರಣ ಕನ್ನಡದಲ್ಲಿ ಸಾಮಾನ್ಯವಾಗಿ ಪ್ರಕೃತಿಯೇ ಪ್ರಥಮಾವಿಭಕ್ತ್ಯರ್ಥದಲ್ಲಿ ಪ್ರಯೋಗವಾಗುವುದೆಂದೂ ಅಕಾರಾಂತಗಳಿಗೆ ಏಕವಚನದಲ್ಲಿ ಮ್ ಪ್ರತ್ಯಯ ಸೇರುವುದೆಂದೂ ಹೇಳಬೇಕಾಗುತ್ತದೆ.

ಅಕಾರಾಂತ ಶಬ್ದಗಳಿಗೆ ಮ್, ನ್ ಎಂಬ ಪ್ರತ್ಯಯಗಳು ಸೇರುತ್ತವೆ. ಅಷ್ಟೇ ಅಲ್ಲ. ಮ್ ಎಂಬುದು ಎಲ್ಲ ಅಕಾರಾಂತ ಶಬ್ದಗಳಿಗೂ ಹತ್ತುವುದಿಲ್ಲ. ಸಂಸ್ಕೃತ ಅಕಾರಾಂತ ನಪುಂಸಕ ಶಬ್ದಗಳಿಗೆಲ್ಲಕ್ಕೂ[,] ಕನ್ನಡದ ಅಕಾರಾಂತ ನಪುಂಸಕಶಬ್ದಗಳಲ್ಲಿ ಬಹುಭಾಗಕ್ಕೂ ಮ್ ಪ್ರತ್ಯಯವು ಸೇರುವುದು ನಿಜ. ಆದರೆ ಕೊಳ ಮೊದಲಾದ ಕೆಲವು ಕನ್ನಡ ಅಕಾರಾಂತ ನಪುಂಸಕ ಶಬ್ದಗಳಿಗೂ[,] ಎಲ್ಲ ಪುಲ್ಲಿಂಗ ಅಕಾರಾಂತಗಳಿಗೂ[,] ಅಕ್ಕ ಮೊದಲಾದ ಸ್ತ್ರೀಲಿಂಗ ನಾಮವಾಚಕಗಳಿಗೂ ಸೇರುವ ಪ್ರತ್ಯಯವು ಮ್ ಅಲ್ಲ, ನ್ ಎಂಬುದು. ಹಳಗನ್ನಡ ವ್ಯಾಕರಣಗಳಲ್ಲಿ ಮ್ ಎಂಬುದಕ್ಕೆ ಅಕಾರಾಂತಶಬ್ದಗಳ ಏಕವಚನದಲ್ಲಿ ಅನುಸ್ವಾರವು ಆದೇಶವಾಗುವುದೆಂದೂ[,] ಸ್ವರಪರವಾದಾಗ ಈ ಅನುಸ್ವಾರಕ್ಕೆ ನಕಾರ ಮಕಾರಗಳು ಆಗುವುದೆಂದೂ ಹೇಳಿದೆ. ನಕಾರವಾಗುತ್ತದೆಂಬುದು ಸಮಂಜಸವಲ್ಲ. ಏಕೆಂದರೆ ರಾಮ ಶಬ್ದಕ್ಕೆ ಮ್ ಪ್ರತ್ಯಯ ಸೇರಿದರೆ ರಾಮಮ್ ಎಂದಾಗುತ್ತದೆ. ಇದನ್ನು ರಾಮಂ ಎಂದು ಬರೆಯಬಹುದು. ಉಚ್ಚರಿಸುವುದು ಹೇಗೆ? ರಾಮಮ್ ಎಂದೇ ಅಲ್ಲವೇ? ಅದಕ್ಕೆ ಅಂ ಎಂಬ ಅಕಾರಾದಿ ಪ್ರತ್ಯಯವು ಪರವಾದಾಗ 

[ಪುಟ ೪೦೮ರಲ್ಲಿ ಮುಂದುವರೆಯುತ್ತದೆ.]

ಕನ್ನಡ ಕೈಪಿಡಿ, ಪುಟ ೪೦೮

[ಪುಟ ೪೦೭ರಿಂದ ಮುಂದುವರೆದಿದೆ.]

ಸ್ವಾಭಾವಿಕವಾಗಿ ರಾಮಮಂ ಎಂದಾಗುತ್ತದೆಯೇ ಹೊರತು ರಾಮನಂ ಎಂದು ಹೇಗಾಗಬೇಕು? ಅಲ್ಲದೆ ಹಳಗನ್ನಡದ ವ್ಯಂಜನಾಂತಗಳು ಹೊಸಗನ್ನಡದಲ್ಲಿ ಉಕಾರಾಂತವಾಗುತ್ತವೆ. ಇದರಂತೆ ರಾಮಂ ಎಂಬುದು ರಾಮಮು ಎಂದಾಗದೆ ರಾಮನು ಎಂದು ಏಕೆ ಆಗುತ್ತದೆ? ನಿಜಸ್ಥಿತಿಯೇನೆಂದರೆ, ಅದು ಮ್ ಅಲ್ಲ, ನ್ ಎಂಬುದು. ಇದು ಕೇವಲ ಅನುಮಾನದಿಂದ ಸಿದ್ಧವಾದುದಲ್ಲ. ಪ್ರಾಚೀನ ಶಾಸನಗಳಲ್ಲಿ 'ಕಲಿಯುಗ ವಿಪರೀತನ್', 'ಮುನಿಪ್ರವರನ್' ಇತ್ಯಾದಿ ನಾಂತ ರೂಪಗಳು ದೊರೆಯುತ್ತವೆ. ಅಲ್ಲದೆ ತಮಿಳಿನಲ್ಲಿ ರಾಮ ಕೃಷ್ಣ ಮೊದಲಾದ ಅಕಾರಾಂತ ಪುಲ್ಲಿಂಗ ಶಬ್ದಗಳನ್ನು ರಾಮನ್ ಕೃಷ್ಣನ್ ಎಂದು ಉಚ್ಚರಿಸುವುದೂ[,] ಬರೆಯುವುದೂ ರೂಢಿಯಲ್ಲಿದೆ. ಆದಕಾರಣ ಅಕಾರಾಂತ ಶಬ್ದಗಳಿಗೆ ಮ್, ನ್ ಎಂಬ ಎರಡು ಪ್ರತ್ಯಯಗಳು ಸೇರುತ್ತವೆಂದು ಹೇಳಬೇಕಾಗುತ್ತದೆ*; ಆದರೆ ಇವು ವಿಭಕ್ತಿಪ್ರತ್ಯಯಗಳೇ ಅಹುದು ಎಂದು ಹೇಳುವುದು ಹೇಗೆ?

ಮ್, ನ್ - ಇವು ವಿಭಕ್ತಿಪ್ರತ್ಯಯಗಳಲ್ಲ. ಮ್[,] ನ್, ಎಂಬಿವು ವಿಭಕ್ತಿಪ್ರತ್ಯಯಗಳಲ್ಲವೆಂಬುದಕ್ಕೆ ಆಧಾರವಿದೆ:- (1) ಮ್ ಪ್ರತ್ಯಯವು ಪುಲ್ಲಿಂಗ ಸ್ತ್ರೀಲಿಂಗ ಶಬ್ದಗಳಿಗೆ ಹತ್ತುವುದಿಲ್ಲ; ನ್ ಪ್ರತ್ಯಯವು ನಪುಂಸಕ ಶಬ್ದಗಳಲ್ಲಿ ಅನೇಕಕ್ಕೆ ಹತ್ತುವುದಿಲ್ಲ. ಹೀಗೆ ಲಿಂಗಭೇದದಿಂದ ಪ್ರಥಮಾವಿಭಕ್ತಿಪ್ರತ್ಯಯವು ಬೇರೆಯಾಗುತ್ತದೆ. ಮಿಕ್ಕ ವಿಭಕ್ತಿಪ್ರತ್ಯಯಗಳೆಲ್ಲವೂ ಲಿಂಗಭೇದವಿಲ್ಲದೆ ಶಬ್ದಗಳಿಗೆ ಸೇರುತ್ತವೆ. ಪ್ರಥಮಾವಿಭಕ್ತಿ ಮಾತ್ರ ಈ ಲಕ್ಷಣಕ್ಕೆ ವಿರುದ್ಧವಾದುದೆಂದು ಹೇಳಬೇಕಾಗುತ್ತದೆ. ಹೀಗಾಗುವುದಕ್ಕೆ ಸಮಂಜಸವಾದ ಕಾರಣವಾವುದೂ ತೋರಿ ಬರುವುದಿಲ್ಲ. (2) ಅಲ್ಲದೆ ಅಕಾರಾಂತ ಶಬ್ದಗಳಿಗೆ ಬಹುವಚನದಲ್ಲಿ ಗಳ್ ಪ್ರತ್ಯಯವು ಸೇರುವಾಗ ಅದು ಮ್[,] ನ್ ಎಂಬ ಪ್ರತ್ಯಯಗಳ ಮುಂದೆ ಸೇರುತ್ತದೆ. ಅಣ್ಣಂಗಳ್ ಮರಂಗಳ್ ಮುಂತಾದ ಪ್ರಯೋಗಗಳಲ್ಲಿ ಅನುಸ್ವಾರವು ಆಗಮ[-]

[ಪುಟ ೪೦೯ರಲ್ಲಿ ಮುಂದುವರೆಯುತ್ತದೆ.]

--- [ಅಡಿಟಿಪ್ಪಣಿ]

* ಮೊದಲು ಅಕಾರಂತ ಪುಲ್ಲಿಂಗಗಳು ನಾಂತವಾಗಿದ್ದುವೆಂಬುದರಲ್ಲಿ ಯಾವ[ ]ಸಂದೇಹವೂ ಕಾಣುವುದಿಲ್ಲ. ಆದರೆ ಈ ಕಡೆಯ ನಕಾರವನ್ನು ಬಿಂದುವಾಗಿ ಬರೆಯುತ್ತ ಬಂದು, ನಕಾರೋಚ್ಚಾರಣೆ ನಿಂತುಹೋದಮೇಲೆ ಇದು ಮಕಾರವೆಂದು ಭ್ರಮಿಸಿರಬಹುದೇ, ಅಥವಾ ಹಳಗನ್ನಡದ ಕಾಲದಲ್ಲಿ ನಕಾರವು ಮಕಾರವಾಗಿ ಪರಿಣಾಮಹೊಂದಿತೇ ವಿಚಾರಮಾಡತಕ್ಕದ್ದಾಗಿದೆ. ಹೊಸಗನ್ನಡವನ್ನು ನೋಡಿದರೆ, ಮೊದಲ ಊಹೆಯೇ ಸರಿಯೆಂದು ತೋರುತ್ತದೆ.

ಕನ್ನಡ ಕೈಪಿಡಿ, ಪುಟ ೪೦೯

[ಪುಟ ೪೦೮ರಿಂದ ಮುಂದುವರೆದಿದೆ.]

ವಾಗಿದೆಯೆಂದು ಹೇಳಿದೆ. (3) ಅಕಾರಾಂತ ಪುಲ್ಲಿಂಗ ಶಬ್ದಗಳಿಗೆ ದ್ವಿತೀಯಾ[,] ತೃತೀಯಾದಿ ವಿಭಕ್ತಿಪ್ರತ್ಯಯಗಳು ಪರವಾದಾಗಲೂ ನಕಾರವು ಉಳಿದಿರುತ್ತದೆ. ಇದೂ ಆಗಮವೆಂದು ವ್ಯಾಕರಣಗಳಲ್ಲಿ ಹೇಳಿದೆ. ನಪುಂಸಕಲಿಂಗ ಶಬ್ದಕ್ಕೆ ದ್ವಿತೀಯಾವಿಭಕ್ತಿಯ ಅಂ ಪರವಾದಾಗ ಮಕಾರವಾಗುತ್ತದೆ (ಮರಮ್+ಅಂ = ಮರಮಂ); ತೃತೀಯಾದಿ ವಿಭಕ್ತಿಗಳು ಪರವಾದಾಗ ದಕಾರಾಗಮವಾಗುತ್ತದೆ (ಮರ+ದ್+ಇಂ = ಮರದಿಂ ಇತ್ಯಾದಿ) ಎಂದು ವ್ಯಾಕರಣಗಳಲ್ಲಿ ಹೇಳಿದೆ. ಪುಲ್ಲಿಂಗ ಶಬ್ದಗಳಿಗೆ ಸ್ವರಾದಿ ವಿಭಕ್ತಿ ಪರವಾದರೆ ನಕಾರಾಗಮವೇಕೆ? ನಪುಂಸಕಲಿಂಗದವುಗಳಿಗೆ ಪರವಾದರೆ ಮಕಾರ ಅಥವಾ ದಕಾರದ ಆಗಮವೇಕೆ? ವ್ಯಾಕರಣಗಳಲ್ಲಿ ಇದಕ್ಕೆ ಸಮರ್ಪಕವಾದ ಉತ್ತರವಿಲ್ಲ. ಇದನ್ನೆಲ್ಲ ನೋಡಿದರೆ ಮ್, ನ್ ಎಂಬಿವು ವಿಭಕ್ತಿಪ್ರತ್ತಯಗಳೇ ಅಲ್ಲವೆಂದು ಗೊತ್ತಾಗುತ್ತದೆ.

ಅವು ಲಿಂಗವನ್ನು ಸೂಚಿಸುವಂತೆ ತೋರುತ್ತದೆ. ಮ್, ನ್ ಎಂಬಿವು ವಿಭಕ್ತಿಪ್ರತ್ಯಯಗಳಲ್ಲದಿದ್ದರೆ ಮತ್ತೇನು? ಇವು ಏನೆಂದು ಊಹಿಸುವುದಕ್ಕೆ ಕೆಲವು ಸಾಧನಗಳಿವೆ :- (1) ಅಕಾರಾಂತ ಪುಲ್ಲಿಂಗ ಶಬ್ದಗಳಿಗೆ ಏಕವಚನದಲ್ಲಿ ನ್ ಸೇರುತ್ತದಷ್ಟೆ? ಅವಕ್ಕೆ ಬಹುವಚನದಲ್ಲಿ ಸಾಮಾನ್ಯವಾಗಿ ರ್ ಪ್ರತ್ಯಯವು (ಅರ್, ,ದಿರ್, ವಿರ್ ಇತ್ಯಾದಿ) ಸೇರುತ್ತದೆ. ಗಳ್ ಪ್ರತ್ಯಯವು ಸೇರುವುದು ಹ.ಗ.ದಲ್ಲಿ ಅಪೂರ್ವ. ಹೊ.ಗ.ದಲ್ಲಿ ಇಲ್ಲವೇ ಇಲ್ಲ. (ಅ)ನ್, (ಅ)ರ್ ಎಂಬೀ ಪ್ರತ್ಯಯಗಳು ಅವನ್, ಇವನ್, ಅವರ್, ಇವರ್ ಈ ಮೊದಲಾದ ಸರ್ವನಾಮಗಳಲ್ಲಿಯೂ; ಓರ್ವನ್, ಇರ್ವರ್ ಮೊದಲಾದ ಸಂಖ್ಯಾವಾಚಕಗಳಲ್ಲಿಯೂ; ನಲ್ಲನ್, ನಲ್ಲರ್ ಮೊದಲಾದ ಗುಣವಾಚಕಗಳಲ್ಲಿಯೂ, ಬೇಡುವನ್, ಮಾಡುವರ್, ಬೇಡುವರ್ ಮೋದಲಾದ ಕೃದಂತಗಳಲ್ಲಿಯೂ; ಮಾಡಿದಪನ್, ಕೊಲ್ವನ್, ಮಾಡಿದಪರ್, ಕೊಲ್ವರ್ ಮೊದಲಾದ ಕ್ರಿಯಾಪದಗಳಲ್ಲಿಯೂ ಕಂಡುಬರುತ್ತವೆ. ಅಲ್ಲಿ ಪುಲ್ಲಿಂಗವನ್ನು ಸೂಚಿಸುತ್ತವೆ. ಇಲ್ಲಿಯೂ ನ್, ರ್ ಅಥವಾ ಅನ್, ಅರ್ ಎಂಬಿವು ಪುಲ್ಲಿಂಗವನ್ನು ಸೂಚಿಸುತ್ತವೆಂದು ಇಟ್ಟುಕೊಳ್ಳುವುದು ಅನುಚಿತವಾಗಲಾರದು. ಮರ, ಕೊಳ ಮೊದಲಾದ ಕೆಲವು ನಪುಂಸಕಲಿಂಗಶಬ್ದಗಳಿಗೂ ಏಕವಚನದಲ್ಲಿ ನ್ ಸೇರುವುದಲ್ಲ ಎಂದರೆ, ಅವುಗಳಿಗೆ ಬಹುವಚನದಲ್ಲಿ ಅರ್ ಅಥವಾ ರ್ ಪ್ರತ್ಯಯವು ಸೇರುವುದಿಲ್ಲ. ನ್ ಅಥವಾ ಅನ್ ಎಂಬುದು ಪುಲ್ಲಿಂಗವನ್ನು ಸೂಚಿಸುವುದಾದರೆ ಮ್ ಅಥವಾ ಅಮ್

[ಪುಟ ೪೧೦ರಲ್ಲಿ ಮುಂದುವರೆಯುತ್ತದೆ.]

 [ಹಳಗನ್ನಡ, ಹೊಸಗನ್ನಡಗಳನ್ನು ಕ್ರಮವಾಗಿ ಹ.ಗ., ಹೊ.ಗ. ಎಂದು ಮೂಲದಲ್ಲೇ ಸಂಕ್ಷೇಪಿಸಲಾಗಿದೆ.]

ಕನ್ನಡ ಕೈಪಿಡಿ, ಪುಟ ೪೧೦

[ಪುಟ ೪೦೯ರಿಂದ ಮುಂದುವರೆದಿದೆ.]

ಎಂಬುದು ನಪುಂಸಕವನ್ನು ಸೂಚಿಸಬೇಕಾಗುತ್ತದೆ. ಅಮ್ ಎಂಬುದು ಅದು ಎಂಬ ಅರ್ಥವನ್ನು ಸೂಚಿಸುವ ನಪುಂಸಕಲಿಂಗ ಸರ್ವನಾಮವೆಂದು ಡಾ|| ಗುಂಡರ್ಟ್ ಸಾಹೇಬರು ಅಭಿಪ್ರಾಯಪಡುತ್ತಾರೆ. ಡಾ|| ಕಾಲ್ಡ್ವೆಲ್ ಅವರು ಆ ಅಭಿಪ್ರಾಯವನ್ನು ಅನುಮೋದಿಸುತ್ತಾರೆ. ಅಮ್ ಎಂಬುದು ನಪುಂಸಕಲಿಂಗವನ್ನು ಸೂಚಿಸುತ್ತದೆ ಎಂಬುದಕ್ಕೆ ಅಕಾರಾಂತ ನಪುಂಸಕಗಳಿಗೆ ತೃತೀಯಾದಿ ವಿಭಕ್ತಿಗಳು ಸೇರುವಾಗ ಆಗಮವಾಗುವ ತ್, ದ್, ಱ್ ಎಂಬಿವು ಸಾಧಕವಾಗುತ್ತವೆ. ಏಕೆಂದರೆ ಇವೆಲ್ಲವೂ ನಪುಂಸಕಲಿಂಗವನ್ನು ಸೂಚಿಸುವ ಪ್ರತ್ಯಯಗಳು. ಆದುದರಿಂದ ಪುರಮ್, ಕೊಳಮ್, ನೆಲಮ್, ತೆಱಮ್ ಮುಂತಾದುವೇ ಮೂಲರೂಪಗಳೆಂದೂ, ಮರನ್, ಕೊಳನ್, ನೆಲನ್, ತೆಱನ್ ಮುಂತಾದುವು ವಿಕಲ್ಪರೂಪಗಳೆಂದೂ ಭಾವಿಸಬೇಕು.

[ಮುಂದಿರುವ "ವಿಭಕ್ರಿಪ್ರತ್ಯಯಗಳು ಸ್ವತಂತ್ರ ಶಬ್ದಗಳೇ?" ಎನ್ನುವ ವಿಚಾರವನ್ನು ಸದ್ಯಕ್ಕೆ ಸಂಗತವಲ್ಲವೆಂದುಕೊಂಡು ಉದ್ಧರಿಸಿಲ್ಲ.]

ಕನ್ನಡ ಕೈಪಿಡಿ, ಪುಟ ೪೧೧

ಈ ಪುಟದ ಆರಂಭದಲ್ಲಿರುವ "ವಿಭಕ್ರಿಪ್ರತ್ಯಯಗಳ ಚರಿತ್ರೆ" ಎನ್ನುವ ವಿಚಾರವನ್ನು ವಿಷಯಾಂತರವಾಗಬಹುದೆಂದು ಉದ್ಧರಿಸಿಲ್ಲ.]

- ಪ್ರಥಮಾವಿಭಕ್ತಿ -

ಪ್ರಕೃತಿ ಪ್ರಯೋಗ. ಕನ್ನಡದಲ್ಲಿ ಪ್ರ.ವಿ.ಗೆ ಪ್ರತ್ಯಯವಾವುದೂ ಇಲ್ಲ; ಏಕವಚನದಲ್ಲಿ ಪ್ರಕೃತಿಯೂ[,] ಬಹುವಚನದಲ್ಲಿ ಬಹುವಚನಪ್ರತ್ಯಯದಿಂದ ಕೂಡಿದ ಪ್ರಕೃತಿಯೂ ಪ್ರ.ವಿ.ಯ ಅರ್ಥವನ್ನು ಸೂಚಿಸುತ್ತವೆ. ಏಕವಚನದಲ್ಲಿ ನ್, ಮ್, ಎಂಬಿವು ಕೆಲವು ಶಬ್ದಗಳ ಕೊನೆಯಲ್ಲಿರುತ್ತವೆ; (ಇವನ್ನು ಬಿಂದುವಾಗಿ ಬರೆಯುವುದು ಬರವಣಿಗೆಯ ವಿಷಯ) ಇವು ವಿಭಕ್ತಿಪ್ರತ್ಯಯಗಳಲ್ಲ ಎಂಬುದನ್ನು ಹಿಂದೆಯೇ ಸಕಾರಣವಾಗಿ ವಿವರಿಸಿದೆ.* ಈ ಬಗೆಯ ಶಬ್ದಗಳನ್ನು ಬಿಂದುವಿಲ್ಲದೆಯೇ ಪ್ರಯೋಗಿಸುವುದು ತಪ್ಪೆಂದು ಹ.ಗ. ವ್ಯಾಕರಣಗಳಲ್ಲಿ ಹೇಳಿದೆ. ಆ ವಿಧವಾದ ಪ್ರಯೋಗವು ಹಳಗನ್ನಡ ಗ್ರಂಥಗಳಲ್ಲಿ ಕಂಡುಬರುವುದು ಅಪೂರ್ವ.

[ಪುಟ ೪೧೨ರಲ್ಲಿ ಮುಂದುವರೆಯುತ್ತದೆ.]

--- [ಅಡಿಟಿಪ್ಪಣಿ]

* ಅಕ್ಕನ್, ಅಣ್ಣನ್, ನೆಲನ್, ನೆಲಮ್, ಆಟಮ್ ಮುಂತಾದ ಶಬ್ದಗಳಲ್ಲಿ ನ್, ಮ್ ಎಂಬಿವು ಪ್ರಕೃತಿಗೇ ಸೇರಿದುವೇ ಅಥವಾ ಅಕಾರಾಂತ ಪ್ರಕೃತಿಯ ಮೇಲೆ ಹತ್ತಿದ ವಿಭಕ್ತಿಪ್ರತ್ಯಯಗಳೇ ಎಂಬ ವಿಷಯವನ್ನು ವಿಚಾರಮಾಡಿ ವಾಚಕರು ನಿಶ್ಚಯಿಸಿಕೊಳ್ಳಬೇಕು.

[ಪ್ರಥಮಾವಿಭಕ್ತಿಯನ್ನು ಪ್ರ.ವಿ. ಎಂದೂ, ಹಳಗನ್ನಡವನ್ನು ಹ.ಗ. ಎಂದೂ ಮೂಲದಲ್ಲೇ ಸಂಕ್ಷೇಪಿಸಲಾಗಿದೆ.]

ಕನ್ನಡ ಕೈಪಿಡಿ, ಪುಟ ೪೧೨

[ಪುಟ ೪೧೧ರಿಂದ ಮುಂದುವರೆದಿದೆ.]

ಆದರೆ ಆ ಕಾಲದಲ್ಲಿ ಅಂಥ ಪ್ರಯೋಗವು ಜನರಾಡುವ ಮಾತಿನಲ್ಲಿ ಬಳಕೆಗೆ ಬಂದಿತ್ತೆಂದು ತೋರುತ್ತದೆ. ಏಕೆಂದರೆ ಆ ಪ್ರಯೋಗವು ಹ.ಗ. ಗ್ರಂಥಗಳಲ್ಲಿ ಅಲ್ಲಲ್ಲಿ ಕಂಡುಬರುತ್ತದೆ. ನಡುಗನ್ನಡದಲ್ಲಿ ಇನ್ನೂ ಹೆಚ್ಚಾಗಿ ಕಂಡುಬರುತ್ತದೆ; ಹೊಸಗನ್ನಡದ ಮಾತನಾಡುವ ಭಾಷೆಯಲ್ಲಿ ವಿಶೇಷವಾಗಿ ಬಳಕೆಯಲ್ಲಿದೆ.

ನಡುಗನ್ನಡದಲ್ಲಿಯೂ ನ್, ಮ್ ಕೂಡಿದ ಪ್ರಕೃತಿಗಳುಂಟು. ಅಲ್ಲದೆ ಅವಕ್ಕೆ ಉಕಾರ ಸೇರಿ ನು, ವು ಎಂಬ ರೂಪಗಳೂ ಬಳಕೆಗೆ ಬರುತ್ತವೆ. ಮ್ ಎಂಬುದಕ್ಕೆ ಉಕಾರವು ಸೇರುವಾಗ ಮಕಾರಕ್ಕೆ ವಕಾರಾದೇಶವೂ ಆಗುತ್ತದೆ. ವೃಕ್ಷಂ ಎಂಬ ಹ.ಗ. ಪದವು ವೃಕ್ಷವು ಎಂದು ನ.ಗ.ದಲ್ಲಿ ಕಾಣುತ್ತದೆಯೇ ಹೊರತು ವೃಕ್ಷಮು ಎಂದು ಎಲ್ಲಿಯೂ ಕಂಡುಬರುವುದಿಲ್ಲ.

ನ.ಗ.ದ ಉಕಾರ ಸೇರಿದ ರೂಪಗಳಲ್ಲದೆ, ಹ.ಗ.ದ ಅನುನಾಸಿಕ ವ್ಯಂಜನವು ಲೋಪವಾದ ರೂಪಗಳೂ ಹ.ಗ.ದಲ್ಲಿ ರೂಢಿಯಾಗಿವೆ. ನೆಲನು ಮುಂತಾದ ವಿಕಲ್ಪ ರೂಪಗಳಿಲ್ಲ. ಹ.ಗ., ನ.ಗ.ಗಳಲ್ಲಿ ಇಲ್ಲದೆ ಇದ್ದ ಒಂದು ವಿಶೇಷ ಪ್ರಯೋಗವು - ಅಕಾರಾಂತಗಳಲ್ಲದ ಶಬ್ದಗಳಿಗೂ ಉ ಪ್ರತ್ಯಯವನ್ನು ಸೇರಿಸುವುದು - ಹೊ.ಗ.ದಲ್ಲಿ ಗ್ರಾಂಥಿಕಭಾಷೆಯಲ್ಲಿ ಮಾತ್ರ ಕಂಡುಬರುತ್ತದೆ. ಇದಕ್ಕೆ ಉ ಎಂಬುದು ಪ್ರ.ವಿ.ಪ್ರತ್ಯಯವೆಂಬ ಭ್ರಮೆಯೇ ಕಾರಣ. ಹ.ಗ.ದಲ್ಲಿನ ವ್ಯಂಜನಾಂತಗಳೆಲ್ಲವೂ ಸ್ವರಾಂತಗಳಾಗುವುದರಿಂದ, ಅದರಲ್ಲಿಯೂ ಮುಖ್ಯವಾಗಿ ಉಕಾರಾಂತಗಳಾಗುವುದರಿಂದ ಉ ಎಂಬುದನ್ನು ಪ್ರ.ವಿ.ಪ್ರತ್ಯಯವೆಂದು ಭಾವಿಸುವುದು ತಪ್ಪು.

- ದ್ವಿತೀಯಾವಿಭಕ್ತಿ -

ಹ.ಗ.-ಅಂ, ಆಂ; ನ.ಗ.-ಅಂ, ಅನು; ಹೊ.ಗ.-ಅನ್ನು, ಅನ್ನ.

ದ್ವಿ.ವಿ.ಪ್ರತ್ಯಯವು ಅಮ್ ಎಂದು ಹಳಗನ್ನಡ ವ್ಯಾಕರಣಗಳಲ್ಲಿ ಹೇಳಿದೆ; ಆದರೆ ಅದು ಅನ್ ಎಂದು ತೋರುತ್ತದೆ. *ಏಕೆಂದರೆ:-(1) ಅದಕ್ಕೆ ಸ್ವರ ಪರವಾದಾಗ ಅದು ನಕಾರವಾಗುತ್ತದೆ. (2) ಅದು ಮಕಾರಾಗಿ ಮತ್ತಾವ ದ್ರಾವಿಡಭಾಷೆಯಲ್ಲಿಯೂ ಪ್ರಯೋಗವಾಗುವುದಿಲ್ಲ. ನಕಾರವಾಗಿಯೇ ಪ್ರಯೋಗವಾಗು[-]

[ಪುಟ ೪೧೩ರಲ್ಲಿ ಮುಂದುವರೆಯುತ್ತದೆ.]

--- [ಅಡಿಟಿಪ್ಪಣಿ]

* ಪ್ರ.ವಿ.ಯಂತೆ ಇಲ್ಲಿಯೂ ಬಿಂದುವನ್ನು ಬರೆಯುವುದರಿಂದ ಮಕಾರಭ್ರಮೆ ಹುಟ್ಟಿರಬಹುದು.

[ಹಳಗನ್ನಡವನ್ನು ಹ.ಗ. ಎಂದೂ, ನಡುಗನ್ನಡವನ್ನು ನ.ಗ. ಎಂದೂ, ಹೊಸಗನ್ನಡವನ್ನು ಹೊ.ಗ. ಎಂದೂ, ಪ್ರಥಮಾ ವಿಭಕ್ತಿಯನ್ನು ಪ್ರ.ವಿ. ಎಂದೂ, ದ್ವಿತೀಯಾ ವಿಭಕ್ತಿಯನ್ನು ದ್ವಿ.ವಿ. ಎಂದೂ ಮೂಲದಲ್ಲೇ ಸಂಕ್ಷೇಪಿಸಲಾಗಿದೆ.]

ಕನ್ನಡ ಕೈಪಿಡಿ, ಪುಟ ೪೧೩

[ಪುಟ ೪೧೨ರಿಂದ ಮುಂದುವರೆದಿದೆ.]

ತ್ತದೆ. (3) ಪ್ರಾಚೀನ ಶಾಸನಗಳಲ್ಲಿ ಅನ್, ಆನ್ ಎಂಬ ನಾಂತ ಪ್ರಯೋಗವು ದೊರಕುತ್ತದೆ. ಉದಾ :- ಸಿಂಘಮನ್, ಪೀಠಮಾನ್ ಇತ್ಯಾದಿ.

ಆನ್ ಎಂಬ ಪ್ರತ್ಯಯವು ಪೂ.ಹ.ಗ.ದಲ್ಲಿ ಕಂಡುಬರುವಷ್ಟು ಹ.ಗ.ದಲ್ಲಿ ಕಂಡು ಬರುವುದಿಲ್ಲ. ಹ.ಗ.ದಲ್ಲಿ ಅನ್ ಎಂಬುದೇ ವಿಶೇಷವಾಗಿ ಪ್ರಯೋಗವಾಗುವ ಪ್ರತ್ಯಯ. ನ.ಗ.ದಲ್ಲಿ ಅನ್ ಎಂಬುದು ಅಲ್ಲದೆ ಉಕಾರ ಸೇರಿ ಅನು ಎಂಬುದೂ ಕಂಡು ಬರುತ್ತದೆ. ಹೊ.ಗ.ದಲ್ಲಿ ಗ್ರಾಂಥಿಕ ಭಾಷೆಯಲ್ಲಿ ಅನ್ನು ಎಂಬುದೂ ಮಾತನಾಡುವ ಭಾಷೆಯಲ್ಲಿ ಅನ್ನ ಎಂಬುದೂ ಕಂಡುಬರುತ್ತವೆ. ಉದಾ :- ಹ.ಗ. ರಾಮನಂ. ನ.ಗ. ರಾಮನಂ, ರಾಮನನು; ಹೊ.ಗ. ರಾಮನನ್ನು ರಾಮನನ್ನ.

ನ.ಗ., ಹೊ.ಗ.ಗಳಲ್ಲಿ ಅನ್ ಪ್ರತ್ಯಯದ ಅಂತ್ಯವ್ಯಂಜನವು ಲೋಪವಾಗುವುದೂ ಉಂಟು. ಈ ತೆರದ ಪ್ರಯೋಗವು ಹ.ಗ. ಕಾಲದಲ್ಲಿಯೂ ಸ್ವಲ್ಪಮಟ್ಟಿಗೆ ಇತ್ತೆಂದು ಊಹಿಸಬಹುದು. ಕೇಶಿರಾಜನು "ನೀನೆನ್ನ ಕೊಂದಯ್" ಎಂಬ ಪ್ರಯೋಗವು ಉಂಟೆಂದು ತಿಳಿಸಿ ಎನ್ನ ಎಂಬುದು ಷಷ್ಠೀ ವಿಭಕ್ತಿಯೆಂದೂ[,] ಅದು ದ್ವಿತೀಯಾರ್ಥದಲ್ಲಿ ಪ್ರಯೋಗವಾಗುವುದೆಂದೂ ಹೇಳುತ್ತಾನೆ. ವಿಭಕ್ತಿಪಲ್ಲಟವಾಗುವುದುಂಟು; ಆದರೆ ಈ ಸಂದರ್ಭದಲ್ಲಿ ಎನ್ನ ಎಂಬುದು ಅಂತ್ಯ ವ್ಯಂಜನ ಲೋಪವಾದ ದ್ವಿತೀಯೆಯೆಂದು ಹೇಳುವುದು ಸಮಂಜಸವೆಂದು ನ.ಗ., ಹೊ.ಗ.ಗಳ ಪ್ರಯೋಗಗಳಿಂದ ತಿಳಿದು ಬರುತ್ತದೆ. ಉದಾ:-ನನಗೆ ಕೊಡುವ ಹಣಾ (ಹಣವ) ತಾ. ಹಣವಂ > ಹಣವ > (ಹಣ ಆ) > ಹಣಾ > ಹಣ. ಜನರಾಡುವ ಮಾತಿನಲ್ಲಿ ಈ ಬಗೆಯ ದ್ವಿತೀಯಾರ್ಥವನ್ನು ಕೊಡುವ ಶಬ್ದಗಳ ಅಂತ್ಯದಲ್ಲಿ ದೀರ್ಘಸ್ವರವು ಕೇಳಿಬರುತ್ತದೆ. ಉದಾ:-ಹಣಾ ತಾ; ಕುರೀ(=ಕುರಿಯ) ಕಾಯಿ. ಕರೂ(=ಕರುವ) ಬಿಡು. ಮನೇ (=ಮನೆಯ) ಕಟ್ಟು.

- ತೃತೀಯಾವಿಭಕ್ತಿ -

ಹ.ಗ.-ಇಂ, ಇಂದಂ, ಇಂದೆ, ಎ.* ನ.ಗ.-ಇಂ, ಇಂದಂ, ಇಂದೆ, ಇ, ಇಂದ. ಹೊ.ಗ.-ಇಂದ.

[ಪುಟ ೪೧೪ರಲ್ಲಿ ಮುಂದುವರೆಯುತ್ತದೆ.]

--- [ಅಡಿಟಿಪ್ಪಣಿ]

* ಇದು ವ್ಯಾಕರಣಗಳಲ್ಲಿ ತೃತೀಯಾವಿಭಕ್ತಿ ಪ್ರತ್ಯಯವೆಂದು ಹೇಳಿದ್ದರೂ ಸಪ್ತಮೀವಿಭಕ್ತಿ ಪ್ರತ್ಯಯವೆಂದು ತೋರುವುದು. ಒಳಗು+ಎ=ಒಳಗೆ ಎಂಬುದರೊಡನೆ ಹೋಲಿಸಿ.

[ಪೂರ್ವದ ಹಳಗನ್ನಡವನ್ನು ಪೂ.ಹ.ಗ. ಎಂದೂ, ಹಳಗನ್ನಡವನ್ನು ಹ.ಗ. ಎಂದೂ, ನಡುಗನ್ನಡವನ್ನು ನ.ಗ. ಎಂದೂ, ಹೊಸಗನ್ನಡವನ್ನು ಹೊ.ಗ. ಎಂದೂ ಮೂಲದಲ್ಲೇ ಸಂಕ್ಷೇಪಿಸಲಾಗಿದೆ.]

ಕನ್ನಡ ಕೈಪಿಡಿ, ಪುಟ ೪೧೪

[ಪುಟ ೪೧೩ರಿಂದ ಮುಂದುವರೆದಿದೆ.]

ತೃತೀಯಾವಿಭಕ್ತಿಪ್ರತ್ಯಯವು ಇಮ್ ಎಂದು ಹ.ಗ. ವ್ಯಾಕರಣದಲ್ಲಿ ಹೇಳಿದೆ. ಈ ಪ್ರತ್ಯಯಕ್ಕೆ ಸ್ವರ ಪರವಾದಾಗ ನಕಾರವಾಗುವುದರಿಂದಲೂ[,] ಪ್ರಾಚೀನ ಶಾಸನಗಳಲ್ಲಿ ಇನ್ ಎಂಬ ರೂಪ ದೊರೆಯುವುದರಿಂದಲೂ ಇದನ್ನು ಇನ್ ಎಂದು ಇಟ್ಟುಕೊಳ್ಳುವುದೇ ಯುಕ್ತ.* 

ಹ.ಗ.ಕ್ಕೂ, ನ.ಗ.ಕ್ಕೂ ಇರುವ ವ್ಯತ್ಯಾಸಗಳೆರಡು :-(1) ಎ ಎಂಬುದು ಇ ಆಗಿರುವುದು; (2) ಇಂದಂ ಎಂಬುದರ ಅಂತ್ಯಾಕ್ಷರವು ಲೋಪವಾಗಿ ಇಂದ ಎಂದಾಗಿರುವುದು. ಹೊಸಗನ್ನಡದಲ್ಲಿ ಇಂದ ಎಂಬ ಪ್ರತ್ಯಯವು ಮಾತ್ರ ಉಳಿದಿದೆ.

--- [ಅಡಿಟಿಪ್ಪಣಿ]

* ಇದೂ ಬಿಂದುವಿನ ಕೆಲಸವೇ.

[ಕನ್ನಡ ಕೈಪಿಡಿಯಲ್ಲಿ ಇತರ ವಿಭಕ್ತಿಗಳ ಬಗೆಗೆ ಹೇಳಿರುವ ವಿಷಯಗಳು ಪ್ರಸ್ತುತ ಅನುಸ್ವಾರದ ಸಂದರ್ಭಕ್ಕೆ ಸಂಗತವಲ್ಲವೆಂದು ತಿಳಿದು ಉದ್ಧರಿಸಿಲ್ಲ.]

"ನಮ್ಮ ನುಡಿ"ಯಲ್ಲಿ ಮಾಸ್ತಿಯವರ ಮತ

ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರರು, ಒಳನೋಟಗಳಿಂದ ತುಂಬಿಕೊಂಡಿರುವ ಪುಸ್ತಕ "ನಮ್ಮ ನುಡಿ"ಯಲ್ಲಿ, ಪ್ರಾಚೀನರ ಹಾಗೂ ಆಧುನಿಕರ ಎರಡೂ ಮತಗಳನ್ನು ಗಮನಿಸಿ, ಹೀಗೆಂದಿದ್ದಾರೆ (ನಮ್ಮ ನುಡಿ, ಪುಟ ೫೦).

೬೩. ... ನಿಜದಲ್ಲಿ ರಾಮನ್ ತಮಿಳಿನ ಸ್ವಂತದ ರೂಪವೇನೂ ಅಲ್ಲ. ಅದು ಕನ್ನಡ ತಮಿಳು ಎರಡು ಭಾಷೆಗಳಿಗೂ ಸಮಾನ ರೂಪ. ಕನ್ನಡ ಅದನ್ನು ಬಳಸಿದರೆ ತಮಿಳಿನ ರೂಪವನ್ನು ತೆಗೆದುಕೊಂಡಂತೆ ಅಲ್ಲ. ರಾಮನ್‌ ಎನ್ನುವುದು ಕನ್ನಡದಲ್ಲಿ ಈ ಶಬ್ದದ ಸರಿಯಾದ ರೂಪ. ...

೬೪. ಇದಕ್ಕೆ ಒಂದು ಸಣ್ಣ ತಿದ್ದುಪಡಿ ಅವಶ್ಯಕ ಎಂದು ಕಾಣುತ್ತದೆ. ಈ ನ್ ಆದರೂ ನ ಕಾರದ ಅರ್ಧಾಕ್ಷರದ ಸ್ಪಷ್ಟವಾದ ಉಚ್ಚಾರಣೆ ಅಲ್ಲ. ತಮಿಳ ಜನ ಮಾತನಾಡುವಾಗ ರಾಮ ಶಬ್ದವನ್ನು ಕೆಲವು ವೇಳೆ ಅರ್ಧ ನ ಕಾರದೊಡನೆ ಉಚ್ಚರಿಸುವಂತೆ ಇನ್ನು ಕೆಲವು ವೇಳೆ ಆ ಅರ್ಧದ ಒಂದರ್ಧದೊಡನೆ ಉಚ್ಚರಿಸುತ್ತಾರೆ. ಕನ್ನಡದಲ್ಲಿಯೂ ಇದು ಕೆಲವು ವೇಳೆ ಕೇಳಿಸುತ್ತದೆ. ನ ಕಾರವನ್ನು ಉಚ್ಚರಿಸುವುದಕ್ಕೆ ತುದಿ ನಾಲಗೆ ಹಲ್ಲಿನ ಮೇಲ್ಭಾಗದ ಒಸಡನ್ನು ಮುಟ್ಟಬೇಕು. ಅದು ತೀರಾ ಮುಟ್ಟದೆ ಇದ್ದರೆ ನ ಕಾರದ ಒಂದು ಅರ್ಧಾನುಸ್ವಾರದಂತೆ ಕಾಣುತ್ತದೆ. ಇದು ಬರವಣಿಗೆಯಲ್ಲಿ ಪೂರ್ಣಾನುಸ್ವಾರ ಆಗಿ ಮಾತಿನಲ್ಲೂ ಬಳಕೆಗೆ ಬಂದಿರಬೇಕು. ವಿಭಕ್ತಿ ಪ್ರತ್ಯಯಗಳು ಸೇರಿದಾಗಲಂತೂ ಅದು ವಿಧಿ ಇಲ್ಲದೆ ಪೂರ್ಣಾನುಸ್ವಾರ ಆಗಲೇಬೇಕಾಯಿತು.

ಅರ್ಧಾನುಸ್ವಾರ ಒಂದು ದ್ರಾವಿಡ ಭಾಷೆಗಳಲ್ಲಿ ಇದ್ದಿತೆನ್ನುವುದಕ್ಕೆ ತೆಲುಗಿನಲ್ಲಿ ನಿದರ್ಶನವಿದೆ. ಈಗಲೂ ಅಲ್ಲಿ ಈ ಅನುನಾಸಿಕ ಬಳಕೆಯಲ್ಲಿದೆ.

ಉಚ್ಚಾರಣೆಯ ಸೌಲಭ್ಯಕ್ಕಾಗಿ ನ ಆಗಮವಾಗಿದೆಯೆಂದು ಕೆಲವು ಸಂದರ್ಭಗಳಲ್ಲಿ ವ್ಯಾಕರಣದಲ್ಲಿ ಹೇಳುವುದುಂಟು. ಇಂಥ ಎಲ್ಲ ವೇಳೆ ನಿಜವಾಗಿ ಆಗಮವೇನೂ ಇರುವುದಿಲ್ಲ. ಕೆಲವೇಳೆ ಅರೆಮರೆಯಾಗಿ ಉಚ್ಚಾರವಾಗುತ್ತದೆ ಅಷ್ಟೆ.

ಸೇಡಿಯಾಪು ಕೃಷ್ಣಭಟ್ಟರ ಚಿಂತನಾಂಶಗಳು

ಶ್ರೀ ಸೇಡಿಯಾಪು ಕೃಷ್ಣಭಟ್ಟರು "ಕನ್ನಡವ್ಯಾಕರಣದ ಕೆಲವು ಸಮಸ್ಯೆಗಳು" ಎನ್ನುವ ವಿಷಯದಲ್ಲಿ ಮಾಡಲುದ್ದೇಶಿಸಿದ ಉಪನ್ಯಾಸದ (ಅನಾರೋಗ್ಯಾದಿ ಕಾರಣಗಳಿಂದ ಉಪನ್ಯಾಸ ಸಂಪನ್ನವಾಗಲಿಲ್ಲ) ರೂಪರೇಖೆಗಳ, ಚಿಂತನಾಂಶಗಳ ಪಟ್ಟಿಯನ್ನು ಶ್ರೀ ಪಾದೆಕಲ್ಲು ವಿಷ್ಣುಭಟ್ಟರು "ವಿಚಾರಪ್ರಪಂಚ" ಎಂಬ ಸೇಡಿಯಾಪು ಕೃಷ್ಣಭಟ್ಟರ ಲೇಖನಸಂಚಯದಲ್ಲಿ "ಕನ್ನಡವ್ಯಾಕರಣದ ಕೆಲವು ಸಮಸ್ಯೆಗಳು (ಉಪನ್ಯಾಸಗಳ ರೂಪರೇಖೆ)" ಎನ್ನುವ ಶೀರ್ಷಿಕೆಯಡಿ ಸಂಪಾದಿಸಿದ್ದಾರೆ. ಇದು ಕನ್ನಡವ್ಯಾಕರಣವಿಷಯಗಳ ಚಿಂತನಾಂಶಗಳಷ್ಟೇ ಆಗಿದ್ದು, ಈ ವಿಷಯಗಳ ಬಗೆಗೆ ಸೇಡಿಯಾಪು ಅವರ ಪೂರ್ತಿ ಚಿಂತನೆಯಾಗಲೀ, ಅಭಿಪ್ರಾಯಗಳಾಗಲೀ ನಮಗೆ ಲಿಖಿತರೂಪದಲ್ಲಿ ಲಭ್ಯವಿಲ್ಲದಿರುವುದು ನಮ್ಮೆಲ್ಲರ ದೌರ್ಭಾಗ್ಯ. ಆದರೂ ಕೆಲವು ಚಿಂತನಾಂಶಗಳು ಕನ್ನಡದ ವಿಭಕ್ತಿಪ್ರತ್ಯಯಗಳಲ್ಲಿ ಕಾಣಿಸುವ ಅನುಸ್ವಾರದ ವಿಷಯಕ್ಕೆ ಪ್ರಸ್ತುತವಾಗಿರುವುದರಿಂದ ಇಲ್ಲಿ ಉದ್ಧರಿಸಿದ್ದೇನೆ. ಈ ಉದ್ಧರಣೆ ಹಾಗೂ ಅದರ ಬಗೆಗೆ ಮುಂದೆ ಹೇಳುವ ವಿಚಾರಗಳು ಸೇಡಿಯಾಪು ಅವರ ಚಿಂತನಾಂಶಗಳನ್ನು ನಾನು ಅರ್ಥಮಾಡಿಕೊಂಡ ಬಗೆಯಷ್ಟೇ ಎಂದಲ್ಲದೆ, ಸೇಡಿಯಾಪು ಅವರ ಮತ ಎಂದು ಓದುಗರು ದಯವಿಟ್ಟು ತಿಳಿಯಬಾರದು.

ವಿಚಾರ ಸಂಪುಟ, ಪುಟ ೨೩೫

... ಮ್=ವು - ತುಳುವಿನ ಅವು - ಸಾನುನಾಸಿಕ ವಕಾರ - ಅವು=ಅಂ - ತಾಂವು - ನ್ ವಾ ಮ್ - ಸುಬ್ರಹ್ಮಣ್ಯಮ್ - ಣ್ಯನ್ - ಸಾನುನಾಸಿಕವಾದ ಅಂತ್ಯಾಕ್ಷರ ...

ಅರ್ಧಾನುಸ್ವಾರದ ಜಾಡಿನಲ್ಲಿ

ಮಾಸ್ತಿಯವರು (ಮೇಲೆ ಉದ್ಧರಿಸಿದಂತೆ), ಪ್ರಥಮಾ ವಿಭಕ್ತಿಯ ಅನುಸ್ವಾರವು ಪೂರ್ಣಾನುಸ್ವಾರವಾಗಿರದೆ ಅರ್ಧಾನುಸ್ವಾರವಾಗಿರಬೇಕೆಂದಿರುವುದರಿಂದ, ಈ ಅರ್ಧಾನುಸ್ವಾರ ಕೆಲವೆಡೆ ತಮಿಳು, ಕನ್ನಡಗಳೆರಡರಲ್ಲೂ ಆಡುಮಾತಿನಲ್ಲಿ ಕಾಣಿಸುವುದು ಹಾಗೂ ತೆಲುಗಿನಲ್ಲಿ ಇಂದಿಗೂ ಕಂಡುಬರುವುದು ಎಂದಿರುವುದರಿಂದ ಹಾಗೂ ಸೇಡಿಯಾಪು ಅವರು ಪ್ರಥಮಾ ವಿಭಕ್ತಿಸಂದರ್ಭದಲ್ಲಿ ಸಾನುನಾಸಿಕ ವಕಾರ ಹಾಗೂ ನಕಾರ, ಮಕಾರ, ವಕಾರಗಳಿಗೆ ಸಂಬಂಧವನ್ನು ಸೂಚಿಸಿರುವುದರಿಂದ ಅರ್ಧಾನುಸ್ವಾರದ ಸ್ವರೂಪವನ್ನು ಸ್ವಲ್ಪ ತಿಳಿದುಕೊಳ್ಳೋಣ.

ಅರ್ಧಾನುಸ್ವಾರದ ಪರಿಚಯ ಮಾಡಿಕೊಳ್ಳಲು ಅದಕ್ಕೆ ಕನ್ನಡಲಿಪಿಯಲ್ಲಿ ಪ್ರತ್ಯೇಕವಾದ ಚಿಹ್ನೆಯಿಲ್ಲದಿರುವುದು ತೊಡಕಾಗುತ್ತದೆ. ದೇವನಾಗರೀಲಿಪಿಯಲ್ಲಿ ಇದಕ್ಕೆ ಪ್ರತ್ಯೇಕವಾದ ಚಿಹ್ನೆಯಿದೆ (ँ). ಇದನ್ನು ಚಂದ್ರಬಿಂದುವೆಂದು ಕರೆಯುವ ವಾಡಿಕೆಯಿದೆ. ಇನ್ನು ಮುಂದಿನ ಉದಾಹರಣೆಗಳಲ್ಲಿ ಈ ಚಿಹ್ನೆಯನ್ನೇ ಬಳಸುವುದರಿಂದ ಅನಾವಶ್ಯಕ ಗೊಂದಲಗಳು ತಪ್ಪಬಹುದು ಎಂದುಕೊಂಡಿದ್ದೇನೆ.

ಹವ್ಯಕಕನ್ನಡದಲ್ಲಿ ಅರ್ಧಾನುಸ್ವಾರ ಹಾಗೂ ಅದು ನಕಾರವಾಗುವ ಪ್ರಕ್ರಿಯೆ

ಕರ್ನಾಟಕದ ಪಶ್ಚಿಮಪ್ರಾಂತ್ಯಗಳಲ್ಲಿ ಕಾಣುವ ಕನ್ನಡದ ಉಪಭಾಷೆಯಂತಿರುವ, ಹಳಗನ್ನಡದ ಎಷ್ಟೋ ಪ್ರಯೋಗಗಳನ್ನು ಇಂದಿಗೂ ಬಳಕೆಯಲ್ಲಿಟ್ಟುಕೊಂಡಿರುವ, ಹವ್ಯಕಕನ್ನಡದಲ್ಲಿ ಇಂದಿಗೂ ಪ್ರಥಮಾ ವಿಭಕ್ತ್ಯರ್ಥದಲ್ಲಿ ಅರ್ಧಾನುಸ್ವಾರವೇ ಬಳಕೆಯಾಗುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಉದಾಹರಣೆಗೆ, ಹಳಗನ್ನಡದಲ್ಲಿ ಅವಂ ಬಂದಂ (ಹೊಸಗನ್ನಡದಲ್ಲಿ ಅವನು ಬಂದನು) ಎನ್ನುವುದು ಹವ್ಯಕಕನ್ನಡದಲ್ಲಿ ಅವಁ ಬೈಂದಁ ಎಂದಾಗುತ್ತದೆ. ಹೊಸಗನ್ನಡದಲ್ಲೂ ಆಡುಭಾಷೆಯಲ್ಲಿ ಅವ ಬಂದ ಎಂದೇ ಹೇಳುವುದು ಕರ್ನಾಟಕದ ಕೆಲವು ಪ್ರಾಂತ್ಯಗಳಲ್ಲಿ ಕಾಣಬಹುದು. ದಾಸಸಾಹಿತ್ಯದಲ್ಲೂ, "ದೇವ ಬಂದಾ, ನಮ್ಮ ಸ್ವಾಮಿ ಬಂದಾನೋ", "ತಂಬೂರಿ ಮೀಟಿದವ, ಭವಾಬ್ಧಿ ದಾಟಿದವ" ಇತ್ಯಾದಿ ದಾಸರಪದಗಳನ್ನು ನೋಡಬಹುದು. ಅಲ್ಲದೆ, ಅವ ಎನ್ನುವುದನ್ನು ಬರೆಹದಲ್ಲಿ ಅನುಸ್ವಾರವಿಲ್ಲದೆ ಬರೆದರೂ, ಅಡುಮಾತಿನಲ್ಲಿ ಅರ್ಧಾನುಸ್ವಾರಾಂತವಾಗಿಯೇ (ಅಂದರೆ ಅವಁ  ಎಂಬಂತೆಯೇ), ಕರ್ನಾಟಕದ ಕೆಲವು ಪ್ರಾಂತ್ಯಗಳಲ್ಲಿ, ಉಚ್ಚರಿಸುವುದನ್ನೂ ಗಮನಿಸಬಹುದು (ಆದರೆ ಬಂದ ಎನ್ನುವಲ್ಲಿ ಅನುಸ್ವಾರಾಂತ್ಯದ ಸುಳಿವಿಲ್ಲವಾಗಿದೆ). ತಮಿಳಿನಲ್ಲೂ ಆಡುಭಾಷೆಯಲ್ಲಿ ಯಾರ್ ಅವನ್ ಎಂಬುದನ್ನು ಅರ್ಧಾನುಸ್ವಾರಾಂತವಾಗಿ (ಅಂದರೆ ಯಾರವಁ  ಎಂಬಂತೆ) ಉಚ್ಚರಿಸುವುದನ್ನು ಕೇಳಿದ್ದಿದೆ. ಮಾಸ್ತಿಯವರು ಹೇಳಿದ ತೆಲುಗಿನ ಅರ್ಧಾನುಸ್ವಾರವೂ ಇದೇ ಆಗಿದೆ.

ಕನ್ನಡದಂತೆ ಹವ್ಯಕಕನ್ನಡದಲ್ಲೂ ಇತರ ವಿಭಕ್ತಿರೂಪಗಳಲ್ಲಿ ಹೆಚ್ಚಾಗಿ ನಕಾರವೂ, ಚತುರ್ಥೀ ವಿಭಕ್ತಿಯಲ್ಲಿ ಪೂರ್ಣಾನುಸ್ವಾರವೂ (ನಿಜವಾಗಿ ಅನುನಾಸಿಕವೆನ್ನಬೇಕೇನೋ) ಕಾಣಿಸುವುದರಿಂದ, ಹವ್ಯಕಕನ್ನಡದಲ್ಲಿ ಇತರ ವಿಭಕ್ತಿಪ್ರತ್ಯಯಗಳು ಅರ್ಧಾನುಸ್ವಾರದ ಮೇಲೆಯೇ ಬೀಳುವುದೆಂದುಕೊಂಡರೆ, ಅದೇ ಅರ್ಧಾನುಸ್ವಾರವು (ವಿಭಕ್ತಿಪ್ರತ್ಯಯದ ಆದಿಯಲ್ಲಿರುವ) ಸ್ವರವು ಪರವಾದಾಗ (ಮಾಸ್ತಿಯವರು ಹೇಳಿದಂತೆ) ನಕಾರವಾಗಿ, ವ್ಯಂಜನವು ಪರವಾದಾಗ ಪೂರ್ಣಾನುಸ್ವಾರ/ಅನುನಾಸಿಕವಾಗಿ ಪರಿಣಮಿಸಿದೆ ಎಂದುಕೊಳ್ಳಬಹುದು. ಅಂದರೆ,

  • ಅವಁ + ಇಂದ => ಅವನಿಂದ - ಸ್ವರ (ಇ) ಪರವಾದಾಗ ಅರ್ಧಾನುಸ್ವಾರವು ನಕಾರವಾಗಿದೆ.
  • ಅವಁ + ಗೆ => ಅವಂಗೆ - ವ್ಯಂಜನವು ಪರವಾದಾಗ ಅರ್ಧಾನುಸ್ವಾರವು, ಬರೆಹದಲ್ಲಿ ಪೂರ್ಣಾನುಸ್ವಾರವಾಗಿದೆ ಹಾಗೂ ಉಚ್ಚಾರದಲ್ಲಿ ಪರವಾದ ವ್ಯಂಜನದ ಸಜಾತೀಯ ಅನುನಾಸಿಕ ( ಗಕಾರವಿರುವ ಕವರ್ಗದ ಅನುನಾಸಿಕ ಙ), ಅಂದರೆ, ಅವಙ್ಗೆ ಎಂದಾಗಿದೆ. ಹೊಸಗನ್ನಡದಲ್ಲಿ ಅವನಿಗೆ ಎನ್ನುವ ರೂಪ ಕಂಡರೂ, ಹಳಗನ್ನಡದಲ್ಲಿ ಅವಂಗೆ ಎಂಬ ರೂಪವೇ ಇರುವುದನ್ನು ಗಮನಿಸಬೇಕು.
  • ಅವಁ + ಅ => ಅವನ - ಸ್ವರ (ಅ) ಪರವಾದಾಗ ಅರ್ಧಾನುಸ್ವಾರವು ನಕಾರವಾಗಿದೆ.
  • ಅವಁ + ಅಲ್ಲಿ => ಅವನಲ್ಲಿ - ಸ್ವರ (ಅ) ಪರವಾದಾಗ ಅರ್ಧಾನುಸ್ವಾರವು ನಕಾರವಾಗಿದೆ.

ಹವ್ಯಕಕನ್ನಡದಲ್ಲಿ ದ್ವಿತೀಯಾವಿಭಕ್ತಿರೂಪವು ಷಷ್ಠೀರೂಪದಂತೆಯೇ ಹೆಚ್ಚಾಗಿ (ಕೆಲವೊಮ್ಮೆ ಭಿನ್ನವಾದರೂ ಷಷ್ಠೀರೂಪಕ್ಕೆ ಸಮೀಪವೆನಿಸುವ ರೂಪದಂತೆ) ಕಾಣುವುದರಿಂದ ಇಲ್ಲಿ ಅದನ್ನು ತೋರಿಸಿಲ್ಲ. ಈ ವೈಚಿತ್ರ್ಯಕ್ಕೂ ಅರ್ಧಾನುಸ್ವಾರವೇ ಕಾರಣವೆನ್ನುವುದನ್ನು ಮುಂದೆ ನೋಡೋಣ.

ಕನ್ನಡದಂತೆ, ಹವ್ಯಕಕನ್ನಡದಲ್ಲೂ ಇಂದ ಎನ್ನುವುದೇ ಪಂಚಮೀ ವಿಭಕ್ತಿಪ್ರತ್ಯಯವಾಗಿದೆ. ತೃತೀಯಾ ವಿಭಕ್ತಿಯೂ (ಸೇಡಿಯಾಪು ಅವರು "ಪಂಚಮೀ ವಿಭಕ್ತಿ"ಯಲ್ಲಿ ನಿರೂಪಿಸಿದಂತೆ) ಕೆಲವೆಡೆ ಇಂದ ಪ್ರತ್ಯಯ ಅಥವಾ ಅಲ್ಲಿ ಪ್ರತ್ಯಯಗಳನ್ನೇ ಅವಲಂಬಿಸುವುದರಿಂದ ಈ ಎರಡು (ಇಂದ, ಅಲ್ಲಿ) ಪ್ರತ್ಯಯಗಳನ್ನು ಒಂದೇ ಬಾರಿ ಈ ಮೇಲಿನ ಪಟ್ಟಿಯಲ್ಲಿ ತೋರಿಸಿದ್ದೇನೆ.

ಭಾಷಾಶಾಸ್ತ್ರ, ವ್ಯಾಕರಣಶಾಸ್ತ್ರಗಳಲ್ಲಿ ಪ್ರತ್ಯಯಗಳೇ ಮೂಲ / ಮುಖ್ಯ, ವಿಭಕ್ತಿಗಳು ಅಲ್ಲ ಎನ್ನುವುದು ನನ್ನ ಅನಿಸಿಕೆ. ಅಂದರೆ, ಎರಡು ವಿಭಕ್ತ್ಯರ್ಥದಲ್ಲಿ ಒಂದೇ ಪ್ರತ್ಯಯವು ಬಳಕೆಯಾದರೆ ಅದು ಪ್ರತ್ಯಯದ ವೈಶಿಷ್ಟ್ಯ, ವ್ಯಾಪ್ತಿಯನ್ನು ಸೂಚಿಸುತ್ತದೆಯೇ ಹೊರತು ವಿಭಕ್ತಿಯದ್ದನ್ನಲ್ಲ. ಕಾಳಿದಾಸನು ಪಾರ್ವತೀಪರಮೇಶ್ವರರನ್ನು "ವಾಗರ್ಥಾವಿವ ಸಂಪೃಕ್ತೌ" ಎಂದು ಅದ್ಭುತವಾಗಿ ವರ್ಣಿಸಿದಂತೆ, ಭಾಷೆಗಳು ಶಬ್ದಾರ್ಥಸಂಪೃಕ್ತಿಯಂದಲೇ ಆಗಿವೆಯಷ್ಟೇ. ಅದರಲ್ಲಿ, ಪ್ರತ್ಯಯಗಳು ಶಬ್ದಲೋಕದವಾದರೆ, ವಿಭಕ್ತಿಗಳು ಅರ್ಥಲೋಕದವು. ಎಲ್ಲ ಭಾಷೆಗಳೂ ಎಲ್ಲ ಅರ್ಥಗಳನ್ನೂ ಸೂಚಿಸಲು ಶಕ್ತವಾಗಿಯೇ ಬೆಳೆದಿರುತ್ತವೆ. ಆದರೆ ಆ ಅರ್ಥಗಳನ್ನು ಬಿಂಬಿಸಲು ಅವು ಕಂಡುಕೊಳ್ಳುವ ದಾರಿಗಳಲ್ಲಿ ವಿವಿಧತೆಯಿದೆ. ಪ್ರತ್ಯಯಗಳು ಅಂತಹ ದಾರಿಗಳಲ್ಲಿ ಒಂದು ಜಾತಿಗೆ ಸೇರಿದವೆನ್ನಬಹುದೇನೋ. ಆದರೆ ಯಾಕೋ ಕಾರಣಾಂತರಗಳಿಂದ ನಮ್ಮ (ಪ್ರಾಚೀನ, ಆಧುನಿಕ) ವೈಯಾಕರಣರು ವಿಭಕ್ತಿಯ ವಿಷಯಕ್ಕೆ ಇರುವುದಕ್ಕಿಂತ ಹೆಚ್ಚೇ ಮಹತ್ವವನ್ನು ಕೊಟ್ಟಿದ್ದಾರೆ.

ಮೇಲೆ ಕೊಟ್ಟ ಹವ್ಯಕಕನ್ನಡದ ಉದಾಹರಣೆಗಳಲ್ಲಿ ಹೆಚ್ಚಿನವು ಕನ್ನಡದ ರೂಪಗಳಂತೆಯೇ ಇರುವುದರಿಂದ (ಭಿನ್ನವಾಗಿ ಕಾಣುವ ಅವಂಗೆ ಏನ್ನುವಲ್ಲಿ ನಕಾರ ಕಾಣದಿರುವುದರಿಂದ), ಅರ್ಧಾನುಸ್ವಾರವೇ, ಸ್ವರ ಪರವಾದಾಗ, ನಕಾರವಾಯಿತೆನ್ನಲು ಇನ್ನೂ ಸ್ಪಷ್ಟವಾದ ಉದಾಹರಣೆ ಬೇಕೆನಿಸುತ್ತದೆ. ಅದೃಷ್ಟವಶಾತ್, ಹಾಗಿರುವ ಹೆಚ್ಚು ಸ್ಪಷ್ಟವಾದ ಉದಾಹರಣೆ ಕ್ರಿಯಾಪದಾಂತ್ಯದಲ್ಲಿ ಕಾಣುತ್ತದೆ. ಹವ್ಯಕಕನ್ನಡದಲ್ಲಿ, ಮೇಲೆ ಹೇಳಿದ ಬೈಂದಁ ಎನ್ನುವ ಕ್ರಿಯಾಪದಕ್ಕೆ ಪ್ರಶ್ನಾರ್ಥಕವಾದ ಪ್ರತ್ಯಯ ಪರವಾದಾಗ ಬೈಂದನಾ ಎಂದಾಗುತ್ತದೆ. ಅಂದರೆ,

  • ಬೈಂದಁ + ಆ => ಬೈಂದನಾ

ಕನ್ನಡದಲ್ಲೂ (ಹಳೆ, ನಡು, ಹೊಸ ಎಲ್ಲದರಲ್ಲೂ) ಇದು "ಬಂದನಾ?" ಎಂದೇ ಇರುವುದನ್ನು ಗಮನಿಸಬಹುದು.

ಫ಼ಾರ್ಸೀ, ಉರ್ದೂ, ಹಿಂದೀ ಭಾಷೆಗಳಲ್ಲಿ ಅರ್ಧಾನುಸ್ವಾರ ಹಾಗೂ ಅದು ನಕಾರವಾಗುವ ಪ್ರಕ್ರಿಯೆ

ಉರ್ದೂ, ಹಿಂದೀಗಳಲ್ಲಿ ಅರ್ಧಾನುಸ್ವಾರಾಂತವಾದ (ದ್ರಾವಿಡಭಾಷೆಗಳಿಗೆ ದೂರವಾದ) ಫ಼ಾರ್ಸೀ ಶಬ್ದಗಳು ಕಾಣಿಸುತ್ತವೆ (ಇಲ್ಲಿ, ನನಗೆ ತಿಳಿದಿರುವ ದೇವನಾಗರೀ, ಕನ್ನಡಲಿಪಿಗಳಲ್ಲೇ ಈ ಭಾಷೆಗಳ ಉದಾಹರಣೆಗಳನ್ನು ಕೊಡಬೇಕಾಗಿರುವುದು ನನ್ನ ದೌರ್ಬಲ್ಯ). ಉದಾಹರಣೆಗೆ, आसमाँ (ಆಸ್‍ಮಾಁ), ज़मीँ (ಜ಼ಮೀಁ) ಇತ್ಯಾದಿ. ಇಂತಹ ಶಬ್ದಗಳನ್ನು ಅರ್ಧಾನುಸ್ವಾರಾಂತವಾಗಿಯೇ ಉಚ್ಚರಿಸುವುದನ್ನು   यह ज़मीँ यह आसमाँ ಎಂದು ಶುರುವಾಗುವ ಬಜಾಜ್ ಸ್ಕೂಟರಿನ ಹಳೆಯ ಜಾಹೀರಾತಿನಲ್ಲಿ ಗಮನಿಸಬಹುದು. ಆದರೆ ಇವುಗಳಿಗೆ ಸ್ವರವು ಪರವಾದಾಗ (ಕೆಲವೆಡೆ ವ್ಯಂಜನವು ಪರವಾದಾಗಲೂ ವಿಕಲ್ಪದಿಂದ), ಅರ್ಧಾನುಸ್ವಾರವು ನಕಾರವೇ ಆಗುತ್ತದೆ. ಅಂದರೆ,

  • आसमाँ + ई => आसमानी - ಆಸ್‍ಮಾಁ + ಈ => ಆಸ್‍ಮಾನೀ
  • आसमाँ + एँ => आसमानेँ - ಆಸ್‍ಮಾಁ + ಏಁ => ಆಸ್‍ಮಾನೇಁ
  • आसमाँ + ओँ => आसमानोँ - ಆಸ್‍ಮಾಁ + ಓಁ => ಆಸ್‍ಮಾನೋಁ 
  • ज़मीँ + ई => ज़मीनी - ಜ಼ಮೀಁ + ಈ => ಜ಼ಮೀನೀ
  • ज़मीँ + एँ => ज़मीनेँ - ಜ಼ಮೀಁ + ಏಁ => ಜ಼ಮೀನೇಁ
  • ज़मीँ + ओँ => ज़मीनोँ - ಜ಼ಮೀಁ + ಓಁ => ಜ಼ಮೀನೋಁ

ಹೀಗೆ ಅರ್ಧಾನುಸ್ವಾರವು ಸ್ವರವು ಪರವಾದಾಗ ನಕಾರವಾಗುವ ಪ್ರಕ್ರಿಯೆ ಕೇವಲ ದ್ರಾವಿಡಭಾಷೆಗಳಿಗೆ ಮಾತ್ರ ಸೀಮಿತವಲ್ಲ. ಅದು ಅರ್ಧಾನುಸ್ವಾರದ ಜಾಯಮಾನವೇ ಎನ್ನುವಂತಿದೆ.

ಅರ್ಧಾನುಸ್ವಾರವು ಮಕಾರ, ವಕಾರವಾದೀತೇ?

ನಕಾರ, ಮಕಾರಗಳು ಮೂಲ ಪ್ರಥಮಾ ವಿಭಕ್ತಿಪ್ರತ್ಯಯದ ರೂಪಾಂತರಗಳೇ ಅಥವಾ ಪ್ರಕೃತಿಯಲ್ಲೇ ಲಿಂಗವಾಚಕಗಳಾಗಿ ಸೇರಿರುವವೇ ಎಂಬುದರಲ್ಲಿ ಪ್ರಾಚೀನ, ಆಧುನಿಕರಲ್ಲಿ ಅಭಿಪ್ರಾಯಭೇದವಿರುವುದಾದರೂ, ನಕಾರವು ಬಹುಶ: ಪುಲ್ಲಿಂಗಾರ್ಥದಲ್ಲೇ ಹಾಗೂ ಮಕಾರ, ವಕಾರಗಳು ಬಹುಶ: ನಪುಂಸಕಲಿಂಗಾರ್ಥದಲ್ಲೇ ಕಾಣಿಸುವುದು (ಮೇಲೆ "ಕನ್ನಡ ಕೈಪಿಡಿ"ಯಿಂದ ಉದ್ಧರಿಸಿದಂತೆ ಕೆಲವು ಅಪವಾದಗಳಿದ್ದರೂ) ಎಲ್ಲರೂ ಒಪ್ಪಬೇಕಷ್ಟೇ.

ನಪುಂಸಕಲಿಂಗಕ್ಕೆ ಪ್ರತಿನಿಧಿಯಾಗಿ ಮರ ಶಬ್ದದ ಹವ್ಯಕಕನ್ನಡದ ಕೆಲವು ವಿಭಕ್ತಿರೂಪಗಳನ್ನು ನೋಡೋಣ.

  • ಮರಁ + ಅಂ  => ಮರವ - ಕನ್ನಡಲ್ಲೂ ಕೆಲಕಡೆ ಕಾಣುವ ಈ ರೂಪದಲ್ಲಿ ವಕಾರ ಕಾಣಿಸುತ್ತದೆ.
  • ಮರಁ + ಇಂದ  => ಮರಂದ - ಇಲ್ಲಿ ಕನ್ನಡದಲ್ಲಿ ಕಾಣುವ ಮರದಿಂದ ಎಂಬಲ್ಲಿ ಕಾಣುವ ದಕಾರವೂ, ಇಕಾರವೂ ಕಾಣದಿರುವುದು ಹವ್ಯಕಕನ್ನಡದ್ದೇ ಆದ ವೈಶಿಷ್ಟ್ಯವೆನಿಸುತ್ತದೆ.
  • ಮರಁ + ಕೆ  => ಮರಕ್ಕೆ - ಇಲ್ಲಿ ಕನ್ನಡದಲ್ಲಿರುವಂತೆಯೇ, ಕೆ ಪ್ರತ್ಯಯವು ಸಜಾತೀಯ ದ್ವಿತ್ವವಾಗಿರುವುದಕ್ಕೂ ಅರ್ಧಾನುಸ್ವಾರವೇ ಕಾರಣವೆನ್ನುವುದನ್ನು ಮುಂದೆ ನೋಡೋಣ.
  • ಮರಁ + ಅ  => ಮರದ - ಇಲ್ಲಿ ಕನ್ನಡದಲ್ಲಿರುವಂತೆ ದಕಾರ ಕಾಣಿಸುತ್ತದೆ.
  • ಮರಁ + ಅಲ್ಲಿ  => ಮರದಲ್ಲಿ - ಈ ರೂಪ ಕನ್ನಡದಲ್ಲಿರುವಂತೆ ಕಂಡರೂ, ಮರಲ್ಲಿ ಎನ್ನವುದನ್ನೂ ನಾನು ಕೇಳಿದ್ದಿದೆ. ಮರಲ್ಲಿ ಎನ್ನುವಾಗ ಲಕಾರವು ಸಾನುನಾಸಿಕಾಗಿಯೇ ಉಚ್ಚರಿಸಲ್ಪಡುವುದು ಗಮನಾರ್ಹ. ಇದು ಮರಂದ ಎನ್ನುವ ತೃತೀಯಾ ರೂಪದಂತೆ ಹವ್ಯಕಕನ್ನಡದ್ದೇ ಆದ ವೈಶಿಷ್ಟ್ಯವೋ ಅಥವಾ ದಕಾರಾಗಮವಿಲ್ಲದಿರುವ (ಕನ್ನಡದಲ್ಲೂ ಹಿಂದೆ ಇದ್ದಿರಬಹುದಾದ) ವಿಕಲ್ಪರೂಪವೋ ಎನ್ನುವುದು ಯೋಚನಾರ್ಹ. ಅದರೆ ದಕಾರಾಗಮದ ವಿಚಾರವನ್ನು ವಿಷಯಾಂತರಭಯದಿಂದ ಇಲ್ಲಿ ಮುಂದುವರೆಸುವುದಿಲ್ಲ.

ಇಲ್ಲಿ ವಕಾರ ಕೇವಲ ದ್ವಿತೀಯಾ ವಿಭಕ್ತಿಯಲ್ಲಿ ಕಾಣಿಸುತ್ತದೆ. ಕನ್ನಡದಲ್ಲೂ ಮಕಾರ, ವಕಾರಗಳು ಕೇವಲ ನಪುಂಸಕಲಿಂಗಶಬ್ದದ ಪ್ರಥಮಾ, ದ್ವಿತೀಯಾ ವಿಭಕ್ತಿಗಳಲ್ಲಿ ಮಾತ್ರ ಕಾಣಿಸುತ್ತವೆ. ಉದಾಹರಣೆಗೆ, ಫಲವು, ಫಲಮಂ, ಫಲವನ್ನು ಇತ್ಯಾದಿ. ತೃತೀಯಾದಿ ವಿಭಕ್ತಿಗಳಲ್ಲಿ ದಕಾರವೇ ಕಾಣಿಸುತ್ತದೆ. ಉದಾಹರಣೆಗೆ, ಫಲದಿಂದ, ಫಲದ, ಫಲದಲ್ಲಿ.

ಸೇಡಿಯಾಪು ಅವರು (ಮೇಲೆ ಉದ್ಧರಿಸಿದಂತೆ) ಸೂಚಿಸಿದ ಮಕಾರಕ್ಕೂ, ಸಾನುನಾಸಿಕವಾದ ವಕಾರಕ್ಕೂ ಇರುವ ಸಂಬಂಧವನ್ನು ಕೇಶಿರಾಜನೂ ನಿರೂಪಿಸಿದ್ದಾನೆ (ಸೂತ್ರ ೨೬ನ್ನು ನೋಡಿ). ಮಕಾರ ಹಾಗೂ ಸಾನುನಾಸಿಕವಕಾರಗಳು ಪರಸ್ಪರ ಒಂದರ ಬದಲಾಗಿ ಇನ್ನೊಂದು ವಿಕಲ್ಪವಾಗಿ ಬರುವುದಕ್ಕೆ ಬೇರೆ ಬೇರೆ ಭಾಷೆಗಳಲ್ಲಿ ಕಾಣಿಸುವ ತಾಮರೈ / ತಾವರೆ, ಸೇಮಗೆ / ಸೇವಁಗೆ, ಅಮುಕು / ಅವುಁಕು ಇತ್ಯಾದಿ ವಿಕಲ್ಪರೂಪಗಳನ್ನು ಗಮನಿಸಬಹುದು. 

ಅನುಸ್ವಾರ, ಮ, ವ, ಒಕಾರಗಳ, ಹಾಗೂ ನ, ಎಕಾರಗಳ ನುಡುವಣ ಸಂಬಂಧ

ತಮಿಳಿನ ಆಡುಭಾಷೆಯಲ್ಲಿ, ಅಕಾರದನಂತರ ಅನುಸ್ವಾರಾಂತವಾಗಿರುವ ನಪುಂಸಕಲಿಂಗಶಬ್ದಗಳನ್ನು ಅರ್ಧಾನುಸ್ವಾರಾಂತವಾದ ಒಕಾರವಾಗಿ ಉಚ್ಚರಿಸುವುದನ್ನು ಕಾಣಬಹುದು. ಉದಾಹರಣೆಗೆ, ಅಪರಂ ಎಂಬುದನ್ನು ಅಪ್ರೊಁ, ಫಲಂ ಎಂಬುದನ್ನು ಫಲೊಁ ಎನ್ನುವಂತೆಯೇ ಉಚ್ಚರಿಸುತ್ತಾರೆ. ಇಲ್ಲಿ ಮಾಸ್ತಿಯವರು (ಮೇಲೆ ಉದ್ಧರಿಸಿದಂತೆ) ಹೇಳಿದಂತೆ, ಅರ್ಧದ ಒಂದರ್ಧದ ನಕಾರದ ಉಚ್ಚಾರಣೆಯಲ್ಲಿ ನಾಲಗೆ ಹಲ್ಲಿಗೆ ಪೂರ್ತಿ ಮುಟ್ಟದಿರುವುದಕ್ಕೆ ಪ್ರತಿಯಾಗಿ ಅರ್ಧದ ಒಂದರ್ಧದ ಮಕಾರದ ಉಚ್ಚಾರಣೆಯಲ್ಲಿ ತುಟಿಗಳು ಪೂರ್ತಿ ಮುಚ್ಚದಿರುವುದನ್ನು ಗಮನಿಸಬಹುದು.

ತುಳುವಿನಲ್ಲೂ, ಅಕಾರಾಂತವಾದ ನಪುಂಸಕಲಿಂಗಶಬ್ದಗಳ ಪ್ರಥಮಾ ವಿಭಕ್ತಿರೂಪವು ಒಕಾರಾಂತವೇ ಆಗುತ್ತದೆ. ಉದಾಹರಣೆಗೆ, ಮರೊ, ಫಲೊ, ನೆಲೊ, ಆಕಾಶೊ ಇತ್ಯಾದಿ. ಇಲ್ಲಿ ತಮಿಳಿನಲ್ಲಿರುವಂತೆ ಅಂತ್ಯದಲ್ಲಿ ಅರ್ಧಾನುಸ್ವಾರ ಕಾಣದಿರುವುದು ಗಮನಾರ್ಹ. ಇದೂ ಅರ್ಧಾನುಸ್ವಾರದ ಸ್ವಭಾವಗಳಲ್ಲೊಂದೆಂಬುದನ್ನು ಮುಂದೆ ನೋಡೋಣ.

ಇಲ್ಲಿ ಮ, ವ, ಒಕಾರಗಳೆಲ್ಲವೂ ಓಷ್ಠ್ಯಜಾತಿಯವೇ ಆಗಿರುವುದನ್ನು (ಉಚ್ಚಾರಣಸ್ಥಾನ ತುಟಿಗಳ ಬಳಿ ಇರುವುದನ್ನು) ಗಮನಿಸಿದರೆ, ಅವುಗಳು ಒಂದರ ಬದಲಾಗಿ ಇನ್ನೊಂದು ಕಾಣಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಹೀಗಾಗಿ ಇವೆಲ್ಲವೂ ಮೂಲ ಅರ್ಧಾನುಸ್ವಾರದ ಪರಿವರ್ತಿತರೂಪಗಳೆಂದರೆ ತಪ್ಪಾಗದು.

ತುಳುವಿನಲ್ಲಿ, ಅಕಾರಾಂತ ಪುಲ್ಲಿಂಗಶಬ್ದಗಳ ಪ್ರಥಮಾ ವಿಭಕ್ತಿರೂಪವು ಎಕಾರಾಂತವಾಗಿರುವುದು ಈಗ ಗಮನಾರ್ಹ. ಉದಾಹರಣೆಗೆ, ರಾಮೆಕೃಷ್ಣೆ ಇತ್ಯಾದಿ. ಎಕಾರವು ತಾಲವ್ಯಕ್ಕೆ ಹತ್ತಿರವಾಗಿದೆಯೇ (ಎಕಾರದ ಉಚ್ಚಾರಣೆಯಲ್ಲಿ ಪೂರ್ಣ ತಾಲವ್ಯಗಳಂತೆ ನಾಲಗೆಯ ತುದಿ ಬಾಯಿಯ ಮೇಲ್ಛಾವಣಿಯನ್ನು ಮುಟ್ಟದಿದ್ದರೂ ಆ ಕಡೆಗೆ ಏಳುವುದಂತೂ ನಿಜ) ಹೊರತು, ಓಷ್ಠ್ಯವಲ್ಲ. ಆದರೆ ಕನ್ನಡ, ತಮಿಳುಗಳಲ್ಲಿ ಅಕಾರಾಂತ ಪುಲ್ಲಿಂಗಶಬ್ದಗಳಲ್ಲಿ ಅರ್ಧಾನುಸ್ವಾರವು ನಕಾರವಾಗಿ ಪರಿಣಮಿಸುತ್ತದೆ. ನಕಾರವು ದಂತ್ಯ (ಉಚ್ಚಾರಣಾಸ್ಥಾನ ನಾಲಗೆಯ ತುದಿ ಹಲ್ಲಿಗೆ ಮುಟ್ಟುವಲ್ಲಿ). ತಾಲವ್ಯ, ದಂತ್ಯಗಳ ಉಚ್ಚಾರಣಾಸ್ಥಾನ ಹಾಗೂ ಉಚ್ಚಾರಣಾರೀತಿ ತುಂಬ ಹತ್ತಿರವಾದುದನ್ನೂ, (ಎರಡರಲ್ಲೂ ನಾಲಗೆಯ ತುದಿ ಮೇಲೇಳುತ್ತದೆ), ಹಾಗೂ ಎಕಾರದ ಉಚ್ಚಾರಣೆಯಲ್ಲಿ ನಾಲಗೆಯ ತುದಿ (ತಾಲವ್ಯದಂತೆ) ಬಾಯಿಯ ಮೇಲ್ಛಾವಣಿಗಿಂತ (ದಂತ್ಯದಂತೆ) ಹಲ್ಲಿನ ಕಡೆಗೇ ಎಳುವುದನ್ನೂ ಗಮನಿಸಿದರೆ, ನಕಾರಕ್ಕೂ ಎಕಾರಕ್ಕೂ ಇರುವ ಜಾತಿಸಾಮ್ಯ ಕಾಣದಿರದು. ಹಾಗಾಗಿ ನ, ಎಕಾರಗಳೂ ಮೂಲ ಅರ್ಧಾನುಸ್ವಾರದ ಪರಿವರ್ತಿತರೂಪಗಳೆನ್ನಬಹುದು.

ನಕಾರ, ಮಕಾರಗಳ ಕಡೆಗೆ ಕ್ರಮವಾಗಿ ವಾಲುವ ಎರಡು ಬಗೆಯ ಅರ್ಧಾನುಸ್ವಾರಗಳಿವೆಯೇ?

ಮೇಲೆ ತೋರಿಸಿದಂತೆ, ದ್ರಾವಿಡಭಾಷೆಗಳಲ್ಲಿ, ಅರ್ಧಾನುಸ್ವಾರವು ಒಂದೆಡೆ ನಕಾರ, ಎಕಾರಗಳಾಗಿಯೂ ಇನ್ನೊಂದೆಡೆ ಮಕಾರ, ಒಕಾರ, ವಕಾರಗಳಾಗಿಯೂ ಪರಿಣಮಿಸುತ್ತವೆ ಎಂದುಕೊಂಡರೂ, ಇವೆಲ್ಲ ರೂಪಗಳನ್ನು ಒಂದೇ ಮೂಲ ಅರ್ಧಾನುಸ್ವಾರದ ಪರಿವರ್ತನೆಗಳೆನ್ನಬಹುದೇ? ಮೂಲ ಅರ್ಧಾನುಸ್ವಾರದ (ಅಥವಾ ಅರ್ಧಾನುಸ್ವಾರಗಳ ಎನ್ನಬೇಕೇ?) ಉಚ್ಚಾರಣೆಯನ್ನು ಸೂಕ್ಷ್ಮವಾಗಿ ಗಮನಿಸದೆ ನಿರ್ಣಯಿಸುವುದು ದುಃಸಾಧ್ಯ. ಅ ಉಚ್ಚಾರಣೆ (ಉಚ್ಚಾರಣೆಗಳು?) ಈಗ ಪ್ರಚಲಿತವಿರುವ ಭಾಷೆಗಳಲ್ಲಿ ಕಾಣುತ್ತದೆಯೇ? ಕಂಡರೂ ಅದನ್ನು ನಾವು ಗುರುತಿಸಬಲ್ಲೆವೇ? ಇಲ್ಲಿಂದ ಮುಂದೆ ಶಬ್ದಲೋಕದ ಬೆಳಕು ನನಗೆ ದಾರಿ ತೋರಿಸುತ್ತಿಲ್ಲ.

"ಕನ್ನಡ ಕೈಪಿಡಿ"ಯಲ್ಲಿ ಹೇಳಿದ (ಮೇಲೆ ಉದ್ಧರಿಸಿದಂತೆ), ಅರ್ಥಲೋಕದಲ್ಲಂತೂ ನಕಾರ, ಮಕಾರಗಳ ಪುಲ್ಲಿಂಗ, ನಪುಂಸಕಲಿಂಗದ ವ್ಯತ್ಯಾಸವನ್ನು ಒಪ್ಪಲೇಬೇಕಾಗಿದೆ. ಆದರೆ ಅದರಲ್ಲೇ ಹೇಳಿದ ನಕಾರ, ಮಕಾರಗಳೇ ಲಿಂಗವಾಚಕಗಳಾಗಿದ್ದು ಅನುಸ್ವಾರವು ಪ್ರಥಮಾ ವಿಭಕ್ತಿಪ್ರತ್ಯಯವಲ್ಲವೆಂಬ ನಿರೂಪಣೆ ಸರಿಯಲ್ಲವೆನಿಸುತ್ತದೆ. ಎಕೆಂದರೆ ಅಲ್ಲಿಯ ವಿಚಾರಸರಣಿಯಲ್ಲಿ (ಮೇಲೆ ಉದ್ಧರಿಸಿದಂತೆ), ಹೊಸಗನ್ನಡದಲ್ಲಿ ಈಗ ಕಾಣುವಂತೆ ಅನುಸ್ವಾರಕ್ಕೆ ಮಕಾರದ ಉಚ್ಚಾರಣೆಯನ್ನು ಮಾತ್ರ ಗಮನಿಸಿದ್ದು, ಇಲ್ಲಿ ತೋರಿಸಿರುವ ಉಚ್ಚಾರಣಾವೈವಿಧ್ಯವನ್ನು ಗಮನಿಸಿದಂತಿಲ್ಲ. "ಏಕೆಂದರೆ ರಾಮ ಶಬ್ದಕ್ಕೆ ಮ್ ಪ್ರತ್ಯಯ ಸೇರಿದರೆ ರಾಮಮ್ ಎಂದಾಗುತ್ತದೆ. ಇದನ್ನು ರಾಮಂ ಎಂದು ಬರೆಯಬಹುದು. ಉಚ್ಚರಿಸುವುದು ಹೇಗೆ? ರಾಮಮ್ ಎಂದೇ ಅಲ್ಲವೇ? ಅದಕ್ಕೆ ಅಂ ಎಂಬ ಅಕಾರಾದಿ ಪ್ರತ್ಯಯವು ಪರವಾದಾಗ ಸ್ವಾಭಾವಿಕವಾಗಿ ರಾಮಮಂ ಎಂದಾಗುತ್ತದೆಯೇ ಹೊರತು ರಾಮನಂ ಎಂದು ಹೇಗಾಗಬೇಕು?" ಎಂದು "ಕನ್ನಡ ಕೈಪಿಡಿ"ಯಲ್ಲಿ (ಮೇಲೆ ಉದ್ಧರಿಸಿದಂತೆ) ಹೇಳಿರುವುದು, ಕೇವಲ ಆಧುನಿಕಕಾಲದಲ್ಲಿ ದಕ್ಷಿಣಭಾರತದಲ್ಲಿ ಅನುಸ್ವಾರಕ್ಕೆ ಮಕಾರದ ಉಚ್ಚಾರಣೆಯೇ ಪ್ರಮುಖವಾಗಿ ಕಾಣುವುದನ್ನು ಮಾತ್ರ ಗಮನಿಸಿರುವುದರ ಕಾರಣವೆನಿಸುತ್ತದೆ. ಉದಾಹರಣೆಗೆ, ಸಂಯಮ ಎನ್ನುವುದನ್ನು ಸಮ್ಯಮ ಎಂಬಂತೆ ಉಚ್ಚರಿಸುವುದನ್ನು ಕಾಣಬಹುದು; ಅದರೆ ಅದನ್ನು ಹಳಬರು ಸಾನುನಾಸಿಕವಾದ ಯಕಾರವಾಗಿ, ಅಂದರೆ ಸಁಯ್ಯಮ ಎಂಬಂತೆ ಉಚ್ಚರಿಸುವುದನ್ನು ಕೇಳಿದ್ದಿದೆ. ಅದೇ ಸರಿಯಾದ ಉಚ್ಚಾರಣೆಯೆಂದೆನಿಸುತ್ತದೆ. ಹಾಗಾಗಿ, ಅನುಸ್ವಾರದ ಬಗೆಗೆ ಹೇಳುವ ಶಬ್ದಲೋಕಕ್ಕೆ ಸಂಬಂಧಿಸಿದ "ಕನ್ನಡ ಕೈಪಿಡಿ"ಯಲ್ಲಿ ಕಾಣುವ ಖಂಡನೆಗಳು ಬಹುಶಃ ಅನ್ವಯಿಸುವುದಿಲ್ಲವೆಂದೇ ಹೇಳಬೇಕಷ್ಟೇ. ಅಲ್ಲದೆ, ಮುಂದೆ ನೋಡಲಿರುವ ಇತರ ವಿಭಕ್ತಿಗಳ ಸಂದರ್ಭದಲ್ಲಿ ಕಾಣುವ ಅರ್ಧಾನುಸ್ವಾರದ ಇನ್ನೂ ಹೆಚ್ಚಿನ ವೈವಿಧ್ಯವು ಅನುಸ್ವಾರದ ಪಕ್ಷಕ್ಕೇ ಪುಷ್ಟಿಯನ್ನು ನೀಡುತ್ತವೆ.

ಒಟ್ಟಿನಲ್ಲಿ, ಅರ್ಧಾನುಸ್ವಾರವು (ಅಥವಾ ಎರಡು ಬಗೆಯ ಅರ್ಧಾನುಸ್ವಾರಗಳು), ವಿಭಕ್ತಿಪ್ರತ್ಯಯಗಳು ಸೇರುವ ಮೊದಲು (ಪ್ರಥಮಾ ವಿಭಕ್ತಿಯ ಸಂದರ್ಭದಲ್ಲಿ ಪ್ರತ್ಯಯವೇ ಆಗಿ ಅಥವಾ "ಕನ್ನಡ ಕೈಪಿಡಿ"ಯಲ್ಲಿ ಹೇಳಿರುವಂತೆ ಪ್ರಕೃತಿಯ ಭಾಗವಾಗಿ) ದ್ರಾವಿಡಭಾಷೆಗಳಲ್ಲಿ ಕಾಣಿಸುತ್ತದೆ ಎಂದು ಧೈರ್ಯವಾಗಿ ಹೇಳಬಹುದೆನಿಸುತ್ತದೆ.

ಈ ಎಳೆಯನ್ನು ಇಲ್ಲಿಗೆ ಒಲ್ಲದ ಮನಸ್ಸಿಂದ ಬಿಡುತ್ತಿದ್ದೇನೆ. 

ಬೇರೆ ವಿಭಕ್ತಿಪ್ರತ್ಯಯಗಳ ಮೊದಲೂ ಕಾಣುವ ಅರ್ಧಾನುಸ್ವಾರ

ಹೀಗೆ, ಅರ್ಧಾನುಸ್ವಾರವು ವಿಭಕ್ತಿಪ್ರತ್ಯಯಗಳು ಸೇರುವ ಮೊದಲು ಕಾಣಿಸುತ್ತದೆ ಎನ್ನುವುದಕ್ಕೆ ಕೆಲವು ಶಬ್ದಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ.

ಅಕಾರಾಂತ ಪುಲ್ಲಿಂಗಶಬ್ದವಾಗಿ, ರಾಮ.

  • ರಾಮ + ಁ => ರಾಮಁ
  • ರಾಮಁ + ಅಂ => ರಾಮನಂ => ರಾಮನನು / ರಾಮನನ್ನು - ಅರ್ಧಾನುಸ್ವಾರವು ನಕಾರವಾಗಿದೆ.
  • ರಾಮಁ + ಇಂ => ರಾಮನಿಂ => ರಾಮನಿಂದ - ಅರ್ಧಾನುಸ್ವಾರವು ನಕಾರವಾಗಿದೆ.
  • ರಾಮಁ + ಕೆ / ಗೆ => ರಾಮಂಗೆ (ಹಳಗನ್ನಡದಲ್ಲಿ) => ರಾಮನಿಗೆ (ಹೊಸಗನ್ನಡದಲ್ಲಿ) - ಅರ್ಧಾನುಸ್ವಾರವು ಹಳಗನ್ನಡದಲ್ಲಿ ಪೂರ್ಣಾನುಸ್ವಾರವೂ (ಅಥವಾ ಪರವಾದ ಪ್ರತ್ಯಯದ ಆದಿವ್ಯಂಜನದ ಸಜಾತೀಯ ಅನುನಾಸಿಕವೂ) ಹಾಗೂ ಹೊಸಗನ್ನಡದಲ್ಲಿ ಇಕಾರದೊಂದಿಗೆ ನಕಾರವೂ ಆಗಿದೆ. ಇಲ್ಲಿ ಕಾಣುವ ಇಕಾರದ ಕಾರಣವನ್ನು ಮುಂದೆ ನೋಡೋಣ.
  • ರಾಮಁ + ಅ => ರಾಮನ - ಅರ್ಧಾನುಸ್ವಾರವು ನಕಾರವಾಗಿದೆ.
  • ರಾಮಁ + ಅಲ್ಲಿ => ರಾಮನಲ್ಲಿ - ಅರ್ಧಾನುಸ್ವಾರವು ನಕಾರವಾಗಿದೆ. ಷಷ್ಠೀ ವಿಭಕ್ತಿಯ ಇತರ ಪ್ರತ್ಯಯರೂಪಗಳಾದ ಒಳ್, ಒಳು, ಒಳಗೆ, ಅಲಿ ಇತ್ಯಾದಿಗಳು ಅರ್ಧಾನುಸ್ವಾರದ ವಿಷಯದಲ್ಲಿ ಹೆಚ್ಚಿನ ವೈಶಿಷ್ಟ್ಯ ತೋರದುದರಿಂದ ಇಲ್ಲಿ ವಿಸ್ತರಿಸಿಲ್ಲ.

    ಅಕಾರಾಂತ ನಪುಂಸಕಲಿಂಗಶಬ್ದವಾಗಿ, ಕದ.

    • ಕದ + ಁ => ಕದಁ
    • ಕದಁ + ಅಂ => ಕದಮಂ / ಕದವಂ => ಕದವನು / ಕದನನ್ನು - ಅರ್ಧಾನುಸ್ವಾರವು ಮ, ವಕಾರಗಳಾಗಿದೆ.
    • ಕದಁ + ಇಂ => ಕದದಿಂ => ಕದದಿಂದ - ಇಲ್ಲಿ ದಕಾರಾಗಮವಾಗಿದೆ. ಅದರೆ ಇದು ಅರ್ಧಾನುಸ್ವಾರವೇ ಪರಿವರ್ತಿತವಾದ ದಕಾರವೆನ್ನಲಾಗದು.
    • ಕದಁ + ಕೆ / ಗೆ => ಕದಕ್ಕೆ - ಕೆ ಪ್ರತ್ಯಯಕ್ಕೆ ಸಜಾತೀಯ ದ್ವಿತ್ವವಿದೆ.
    • ಕದಁ + ಅ => ಕದದ - ಇಲ್ಲಿ ದಕಾರಾಗಮವಾಗಿದೆ. ಅದರೆ ಇದು ಅರ್ಧಾನುಸ್ವಾರವೇ ಪರಿವರ್ತಿತವಾದ ದಕಾರವೆನ್ನಲಾಗದು.
    • ಕದಁ + ಅಲ್ಲಿ => ಕದದಲ್ಲಿ - ಇಲ್ಲಿ ದಕಾರಾಗಮವಾಗಿದೆ. ಅದರೆ ಇದು ಅರ್ಧಾನುಸ್ವಾರವೇ ಪರಿವರ್ತಿತವಾದ ದಕಾರವೆನ್ನಲಾಗದು.

    ಅಕಾರಾಂತ ಸ್ತ್ರೀಲಿಂಗಶಬ್ದಗಳು (ಉದಾಹರಣೆಗೆ, ಅಕ್ಕ) ಅಕಾರಾಂತ ಪುಲ್ಲಿಂಗಶಬ್ದಗಳಂತೆಯೇ ನಕಾರಯುಕ್ತವಾಗಿಯೇ ಕಾಣಿಸುತ್ತವೆ (ಅಕ್ಕನನ್ನು, ಅಕ್ಕನಿಂದ ಇತ್ಯಾದಿ).

    ಇಕಾರಾಂತ ಶಬ್ದವಾಗಿ (ಇಲ್ಲಿ ಲಿಂಗವ್ಯತ್ಯಾಸ ಪರಿಣಾಮಕಾರಿಯಲ್ಲ), ಅಡಿ.

    • ಅಡಿ + ಁ => ಅಡಿಁ
    • ಅಡಿಁ + ಅಂ => ಅಡಿಯಂ => ಅಡಿಯನು / ಅಡಿಯನ್ನು - ಇಕಾರವು ಯಕಾರವಾಗಿದೆ.
    • ಅಡಿಁ + ಇಂ => ಅಡಿಯಿಂ => ಅಡಿಯಿಂದ - ಇಕಾರವು ಯಕಾರವಾಗಿದೆ.
    • ಅಡಿಁ + ಕೆ / ಗೆ => ಅಡಿಗೆ - ಅರ್ಧಾನುಸ್ವಾರ ಲೋಪವಾಗಿದೆ. ಇದೂ ಅರ್ಧಾನುಸ್ವಾರದ ಸ್ವಭಾವಗಳಲ್ಲೊಂದೆಂಬುದನ್ನು ಮುಂದೆ ನೋಡೋಣ.
    • ಅಡಿಁ + ಅ => ಅಡಿಯ - ಇಕಾರವು ಯಕಾರವಾಗಿದೆ.
    • ಅಡಿಁ + ಅಲ್ಲಿ => ಅಡಿಯಲ್ಲಿ - ಇಕಾರವು ಯಕಾರವಾಗಿದೆ.

    ಎಕಾರಾಂತ ಶಬ್ದವಾಗಿ (ಇಲ್ಲಿ ಲಿಂಗವ್ಯತ್ಯಾಸ ಪರಿಣಾಮಕಾರಿಯಲ್ಲ), ಎಡೆ.

    • ಎಡೆಁ + ಁ => ಎಡೆಁ
    • ಎಡೆಁ + ಅಂ => ಎಡೆಯಂ => ಎಡೆಯನು / ಎಡೆಯನ್ನು - ಎಕಾರವು ಯಕಾರವಾಗಿದೆ.
    • ಎಡೆಁ + ಇಂ => ಎಡೆಯಿಂ => ಎಡೆಯಿಂದ - ಎಕಾರವು ಯಕಾರವಾಗಿದೆ.
    • ಎಡೆಁ + ಕೆ / ಗೆ => ಎಡೆಗೆ - ಅರ್ಧಾನುಸ್ವಾರ ಲೋಪವಾಗಿದೆ. ಇದೂ ಅರ್ಧಾನುಸ್ವಾರದ ಸ್ವಭಾವಗಳಲ್ಲೊಂದೆಂಬುದನ್ನು ಮುಂದೆ ನೋಡೋಣ.
    • ಎಡೆಁ + ಅ => ಎಡೆಯ - ಎಕಾರವು ಯಕಾರವಾಗಿದೆ.
    • ಎಡೆಁ + ಅಲ್ಲಿ => ಎಡೆಯಲ್ಲಿ - ಎಕಾರವು ಯಕಾರವಾಗಿದೆ.

    ಇಕಾರ, ಎಕಾರಾಂತ ಶಬ್ದಗಳಲ್ಲಿ ಯಕಾರವೇ ಕಾಣಿಸುವುದು ಇ, ಎ, ಯಕಾರಗಳ ಉಚ್ಚಾರಣಾಸಾಮ್ಯದಿಂದ ಸ್ವಾಭಾವಿಕವೇ ಆಗಿದೆ. ಇದನ್ನು ಕೇಶಿರಾಜನೂ ಶಬ್ದಮಣಿದರ್ಪಣದಲ್ಲಿ ನಿರೂಪಿಸಿದ್ದಾನೆ. ಆದರೆ ಈ ವಿಭಕ್ತಿರೂಪಗಳಲ್ಲಿ ಅರ್ಧಾನುಸ್ವಾರವು ಕಾಣಿಸದಿರುವುದನ್ನು ಎರಡು ರೀತಿಯಲ್ಲಿ ಅರ್ಥಯಿಸಬಹುದು.

    1. ಅರ್ಧಾನುಸ್ವಾರವು ಲೋಪವಾಗಿದೆ. ಇದೂ ಅರ್ಧಾನುಸ್ವಾರದ ಸ್ವಭಾವಗಳಲ್ಲೊಂದೆಂಬುದನ್ನು ಮುಂದೆ ನೋಡೋಣ.
    2. ಇಲ್ಲಿ ಕಾಣುವ ಯಕಾರವು ಸಾನುನಾಸಿಕವಾಗಿದೆ (ಯಕಾರದ ಸಾನುನಾಸಿಕರೂಪದ ಬಗೆಗೆ ಕೇಶಿರಾಜನು ಹೇಳಿರುವುದನ್ನು ಸೂತ್ರ ೨೬ ನೋಡಬಹುದು).

    ಉಕಾರಾಂತ ಶಬ್ದವಾಗಿ (ಇಲ್ಲಿ ಲಿಂಗವ್ಯತ್ಯಾಸ ಪರಿಣಾಮಕಾರಿಯಲ್ಲ), ಮಡು.

    • ಮಡು + ಁ => ಮಡುಁ
    • ಮಡುಁ + ಅಂ => ಮಡುವಂ => ಮಡುವನು / ಮಡುವನ್ನು - ಉಕಾರವು ವಕಾರವಾಗಿದೆ.
    • ಮಡುಁ + ಇಂ => ಮಡುವಿಂ => ಮಡುವಿಂದ - ಉಕಾರವು ವಕಾರವಾಗಿದೆ.
    • ಮಡುಁ + ಕೆ / ಗೆ => ಮಡುವಿಂಗೆ / ಮಡುವಿಗೆ - ಉಕಾರವು ವಕಾರವಾಗಿದೆ. ಇಲ್ಲಿ ಕಾಣುವ ಇಕಾರದ ಕಾರಣವನ್ನೂ, ಇಕಾರದನಂತರ ವಿಕಲ್ಪದಿಂದ ಕಾಣುವ ಅನುಸ್ವಾರದ ಕಾರಣವನ್ನೂ ಮುಂದೆ ನೋಡೋಣ.
    • ಮಡುಁ + ಅ => ಮಡುವಿನ - ಉಕಾರವು ಇಕಾರದೊಂದಿಗೆ ವಕಾರವಾಗಿದೆ. ಇಲ್ಲಿ ಕಾಣುವ ಇಕಾರದ ಕಾರಣವನ್ನೂ, ಇಕಾರದನಂತರ ಕಾಣುವ ನಕಾರದ ಕಾರಣವನ್ನೂ ಮುಂದೆ ನೋಡೋಣ.
    • ಮಡುಁ + ಅಲ್ಲಿ => ಮಡುವಿನಲ್ಲಿ - ಉಕಾರವು ಇಕಾರದೊಂದಿಗೆ ವಕಾರವಾಗಿದೆ. ಇಲ್ಲಿ ಕಾಣುವ ಇಕಾರದ ಕಾರಣವನ್ನೂ, ಇಕಾರದನಂತರ ಕಾಣುವ ನಕಾರದ ಕಾರಣವನ್ನೂ ಮುಂದೆ ನೋಡೋಣ.

    ಉಕಾರಾಂತ ಶಬ್ದಗಳಲ್ಲಿ ವಕಾರವೇ ಕಾಣಿಸುವುದು ಉ, ವಕಾರಗಳ ಉಚ್ಚಾರಣಾಸಾಮ್ಯದಿಂದ ಸ್ವಾಭಾವಿಕವೇ ಆಗಿದೆ. ಇದನ್ನು ಕೇಶಿರಾಜನೂ ಶಬ್ದಮಣಿದರ್ಪಣದಲ್ಲಿ ನಿರೂಪಿಸಿದ್ದಾನೆ. ಆದರೆ ಈ ವಿಭಕ್ತಿರೂಪಗಳಲ್ಲಿ ಅರ್ಧಾನುಸ್ವಾರವು ಕಾಣಿಸದಿರುವುದನ್ನು ಎರಡು ರೀತಿಯಲ್ಲಿ ಅರ್ಥಯಿಸಬಹುದು.

    1. ಅರ್ಧಾನುಸ್ವಾರವು ಲೋಪವಾಗಿದೆ. ಇದೂ ಅರ್ಧಾನುಸ್ವಾರದ ಸ್ವಭಾವಗಳಲ್ಲೊಂದೆಂಬುದನ್ನು ಮುಂದೆ ನೋಡೋಣ.
    2. ಇಲ್ಲಿ ಕಾಣುವ ವಕಾರವು ಸಾನುನಾಸಿಕವಾಗಿದೆ (ವಕಾರದ ಸಾನುನಾಸಿಕರೂಪದ ಬಗೆಗೆ ಕೇಶಿರಾಜನು ಹೇಳಿರುವುದನ್ನು ಸೂತ್ರ ೨೬ ನೋಡಬಹುದು).

    ಒಕಾರಾಂತ ಶಬ್ದಗಳನ್ನು ನಾನು ಕನ್ನಡದಲ್ಲಿ ಕಂಡಿಲ್ಲ. ಇದ್ದಿದ್ದರೆ ಅವೂ ಉಕಾರಾಂತಗಳಂತೆ ವಕಾರಯುಕ್ತವಾಗಿಯೇ ಕಾಣಿಸುತ್ತಿದ್ದವೆನಿಸುತ್ತದೆ.

    ವ್ಯಂಜನಾಂತ ಶಬ್ದವಾಗಿ (ಇಲ್ಲಿ ಲಿಂಗವ್ಯತ್ಯಾಸ ಪರಿಣಾಮಕಾರಿಯಲ್ಲ), ಕಾಲ್. ಹೊಸಗನ್ನಡದಲ್ಲಿ ಇದು ಕಾಲು  ಎಂದು ಉಕಾರಾಂತವಾಗಿದ್ದರೂ, ಹಳಗನ್ನಡದಲ್ಲಿ ಕಾಲ್ ಎಂದು ವ್ಯಂಜನಾಂತವೇ ಆಗಿದೆ. ಅನುಸ್ವಾರವು ಅನ್ವರ್ಥವಾಗಿ ಸ್ವರವನ್ನೇ ಅನುಸರಿಸುತ್ತದಾದುದರಿಂದ, ವ್ಯಂಜನಾಂತಶಬ್ದಗಳಿಗೆ ಅನುಸ್ವಾರವು ಸಹಜವಾಗಿಯೇ ಹತ್ತುವುದಿಲ್ಲ.

    • ಕಾಲ್ + ಁ => ಕಾಲ್
    • ಕಾಲ್ + ಅಂ => ಕಾಲಂ => ಕಾಲನು / ಕಾಲನ್ನು
    • ಕಾಲ್ + ಇಂ => ಕಾಲಿಂ / ಕಾಲಿನಿಂ => ಕಾಲಿಂದ / ಕಾಲಿನಿಂದ - ಇಲ್ಲಿ ವಿಕಲ್ಪದಿಂದ ಕಾಣುವ 'ಇನ'ದ ಕಾರಣವನ್ನು ಮುಂದೆ ನೋಡೋಣ.
    • ಕಾಲ್ + ಕೆ / ಗೆ => ಕಾಲ್ಗೆ / ಕಾಲಿಂಗೆ / ಕಾಲಿಗೆ - ಇಲ್ಲಿ ವಿಕಲ್ಪದಿಂದ ಕಾಣುವ ಇಕಾರದ ಕಾರಣವನ್ನೂ, ಆ ಇಕಾರೊಂದಿಗೆ ವಿಕಲ್ಪದಿಂದ ಕಾಣುವ ಅನುಸ್ವಾರದ ಕಾರಣವನ್ನೂ ಮುಂದೆ ನೋಡೋಣ.
    • ಕಾಲ್ + ಅ => ಕಾಲ / ಕಾಲಿನ - ಇಲ್ಲಿ ವಿಕಲ್ಪದಿಂದ ಕಾಣುವ 'ಇನ'ದ ಕಾರಣವನ್ನು ಮುಂದೆ ನೋಡೋಣ.
    • ಕಾಲ್ + ಅಲ್ಲಿ => ಕಾಲಲ್ಲಿ / ಕಾಲಿನಲ್ಲಿ - ಇಲ್ಲಿ ವಿಕಲ್ಪದಿಂದ ಕಾಣುವ 'ಇನ'ದ ಕಾರಣವನ್ನು ಮುಂದೆ ನೋಡೋಣ.

    ಚತುರ್ಥಿ ವಿಭಕ್ತಿಯಲ್ಲಿ ಕೆಲವೆಡೆ ಕಾಣುವ ಅನುಸ್ವಾರ

    ಚತುರ್ಥಿ ವಿಭಕ್ತಿಯ ಸಂದರ್ಭದಲ್ಲಿ ಅನುಸ್ವಾರವು (ಅಥವಾ ಕೆ / ಗೆ ಪ್ರತ್ಯಯದ ಸಜಾತೀಯ ಅನುನಾಸಿಕವು) ವಿಕಲ್ಪವಾಗಿ ಕಾಣಿಸುವುದನ್ನು ಮೇಲೆ ಗಮನಿಸಲಾಗಿದೆಯಷ್ಟೇ (ರಾಮಂಗೆ). ಅನುಸ್ವಾರಕ್ಕೆ (ಅದು ಪೂರ್ಣವಾಗಿರಲಿ, ಅರ್ಧವಾಗಿರಲಿ), ವ್ಯಂಜನವು ಪರವಾದಾಗ, ವ್ಯಂಜನವು ವರ್ಗೀಯವಾಗಿದ್ದರೆ (ಕ, ಚ ಟ, ತ, ಪವರ್ಗಗಳು), ಅನುಸ್ವಾರವು ಆ ವ್ಯಂಜನದ್ದೇ ವರ್ಗದ ಅನುನಾಸಿಕವಾಗುವುದು ಸಹಜ. ಉದಾಹರಣೆಗೆ, ದೇವನಾಗರೀಲಿಪಿಯಲ್ಲಿ, ಸಂಸ್ಕೃತದ ಪಂಕಜ ಎನ್ನುವುದನ್ನು पङ्कज (ಪಙ್ಕಜ), ಪಂಚ ಎನ್ನುವುದನ್ನು पञ्च (ಪಞ್ಚ) ಎಂದು ಈ ಪ್ರಕ್ರಿಯೆಯನ್ನು  ಗಮನಿಸಿಯೇ ಬರೆಯುವುದಾಗಿದೆ. ವ್ಯಂಜನವು ಅವರ್ಗೀಯವಾಗಿದ್ದರೆ (ಯಕಾರಾದಿ), ಅದೇ ವ್ಯಂಜನದ ಸಾನುನಾಸಿಕ ರೂಪವು ಪರಿಣಮಿಸುವುದೂ ಸ್ವಾಭಾವಿಕ (ಕೇಶಿರಾಜನು ಯ, ರ, ಲ, ವ ಇತ್ಯಾದಿಗಳ ಸಾನುನಾಸಿಕರೂಪದ ಕುರಿತು ಸೂತ್ರ ೨೬ರಲ್ಲಿ ಹೇಳಿರುವುದನ್ನು ಗಮನಿಸಬಹುದು).

    ಹಾಗಾಗಿ, ಕೆ / ಗೆ ಪ್ರತ್ಯಯದ ಮೊದಲು ಇರಬಹುದಾದ ಅರ್ಧಾನುಸ್ವಾರವು ಪೂರ್ಣಾನುಸ್ವಾರವಾಗುವುದು (ಲಿಪಿಯಲ್ಲಿ) ಅಥವಾ ಕೆ / ಗೆ ಪ್ರತ್ಯಯದ ಸಜಾತೀಯ ಅನುನಾಸಿಕವಾದ ಙಕಾರವಾಗುವುದು ಸಹಜ. ಅಂದರೆ,

    • ರಾಮಁ + ಕೆ / ಗೆ => ರಾಮಂಗೆ - ಉಚ್ಚಾರಣೆಯಲ್ಲಿ ರಾಮಙ್ಗೆ

    "ಕನ್ನಡ ಕೈಪಿಡಿ"ಯಲ್ಲಿ (ಮೇಲೆ ಉದ್ಧರಿಸಿದಂತೆ) ಹೇಳಿದ ನ, ಮಕಾರಗಳೇ ಲಿಂಗವಾಚಕಗಳಾಗಿದ್ದು ಅನುಸ್ವಾರವು ಪ್ರಥಮಾ ವಿಭಕ್ತಿಪ್ರತ್ಯಯವಲ್ಲವೆಂಬ ನಿರೂಪಣೆಯನ್ನು ಅನುಸರಿಸಿದರೆ, ಇಲ್ಲಿ ನಕಾರವು, ಅನುಸ್ವಾರ ಅಥವಾ ಙಕಾರವಾಗಿದೆ ಎನ್ನಬೇಕಾದೀತು. ಅನುಸ್ವಾರವು ಬೇರೆ ಬೇರೆ ಸಂದರ್ಭಗಳಲ್ಲಿ ವಿವಿಧರೂಪಗಳನ್ನು ತಾಳಿದಂತೆ (ಮೇಲೆ ನಿರೂಪಿಸಿದಂತೆ), ನ, ಮಕಾರಗಳು ತಮ್ಮ ರೂಪ ಬದಲಾಯಿಸುವುದು ಬಳಕೆಯಲ್ಲೂ, ಶಾಸ್ತ್ರದಲ್ಲೂ ಕಾಣುವುದಿಲ್ಲ (ಇದಕ್ಕೆ ಅಪವಾದಗಳಿದ್ದಲ್ಲಿ ಬಲ್ಲವರು ತಿದ್ದಬೇಕು).

    ಹಾಗಾಗಿ, ಈ ಚತುರ್ಥೀ ಸಂದರ್ಭದಲ್ಲಿ ವಿಕಲ್ಪವಾಗಿ ಕಾಣಿಸುವ ಅನುಸ್ವಾರವು, ಈ ಲೇಖನದಲ್ಲಿ ಪ್ರತಿಪಾದಿಸಿರುವ ಹೆಚ್ಚಿನ ವಿಭಕ್ತಿ ಪ್ರತ್ಯಯಗಳ ಮೊದಲು ಕಾಣಿಸುವ ಅರ್ಧಾನುಸ್ವಾರದ ಮತಕ್ಕೆ ಪುಷ್ಟಿ ನೀಡುತ್ತದೆ.

    ಚತುರ್ಥೀ ವಿಭಕ್ತಿಯಲ್ಲಿ ಕೆಲವೆಡೆ ಕಾಣುವ ಸಜಾತೀಯದ್ವಿತ್ವ

    ಮರಕ್ಕೆ, ಕದಕ್ಕೆ ಎಂಬಲ್ಲಿ ಕೆ ಪ್ರತ್ಯಯಕ್ಕೆ ಸಜಾತೀಯದ್ವಿತ್ವ ಕಾಣಿಸುವುದನ್ನು ಮೇಲೆ ನೋಡಿದೆವಷ್ಟೇ. ಹೀಗೆ ದ್ವಿತ್ವವು ಅಕಾರಾಂತ ನಪುಂಸಕಲಿಂಗಶಬ್ದಗಳಲ್ಲಿ ಮಾತ್ರ ಕಾಣಿಸುತ್ತದೆ (ಅಪವಾದಗಳಿದ್ದಲ್ಲಿ ಬಲ್ಲವರು ತಿದ್ದಬೇಕು). ಮೇಲೆ ವಿಭಕ್ತಿಪ್ರತ್ಯಯಗಳ ಮೊದಲು ಕಾಣುವ ಅನುಸ್ವಾರವನ್ನು ಪ್ರತಿಪಾದಿಸುವಾಗ ಈ ಪ್ರಕ್ರಿಯೆಯನ್ನು ಹೀಗೆ ಹೇಳಿದೆ.

    • ಮರಁ + ಕೆ  => ಮರಕ್ಕೆ

    ಹಾಗಾದರೆ, ಕೆ ಪ್ರತ್ಯಯದ ಮೊದಲಿರುವ ಅರ್ಧಾನುಸ್ವಾರವೇ, ಕೆ ಪ್ರತ್ಯಯದ ಸಜಾತೀಯದ್ವಿತ್ವವಾಗಿದೆಯೇ?

    ಕನ್ನಡದಲ್ಲಿ ವಿಜಾತೀಯದ್ವಿತ್ವಗಳು ಸಜಾತೀಯದ್ವಿತ್ವಗಳಾಗುವುದು ಪ್ರಸಿದ್ಧ (ಇದು ಸ್ವಲ್ಪಮಟ್ಟಿಗೆ ಬೇರೆ ದ್ರಾವಿಡಭಾಷೆಗಳಲ್ಲೂ ಕಾಣಿಸುತ್ತದೆ). ಉದಾಹರಣೆಗೆ, ಅೞ್ತು => ಅತ್ತು, ಕೀೞ್ತು => ಕಿತ್ತು, ಬೀೞ್ತು => ಬಿತ್ತು, ಕೞ್ತು => ಕತ್ತು, ಕಳ್ದು => ಕದ್ದು, ಬೀೞ್ದು => ಬಿದ್ದು, ಏಱ್ದು => ಎದ್ದು ಇತ್ಯಾದಿ.

    ಅನುಸ್ವಾರಕ್ಕೆ ಪರವಾಗಿ ವರ್ಗೀಯವ್ಯಂಜನ ಬಂದಾಗ, ಅನುಸ್ವಾರವು ಅದೇ ವರ್ಗದ ಅನುನಾಸಿಕವಾಗುತ್ತದೆಂಬುದನ್ನು ಮೇಲೆ ಗಮನಿಸಿದೆವಷ್ಟೇ. ಇದನ್ನೂ, ವಿಜಾತೀಯದ್ವಿತ್ವಗಳು ಸಜಾತೀಯದ್ವಿತ್ವಗಳಾಗುವ ಕನ್ನಡದ ಸ್ವಭಾವವನ್ನೂ  ಒಟ್ಟಿಗೆ ನೋಡಿದಾಗ, ಅನುನಾಸಿಕವ್ಯಂಜನದ ಮೇಲೆ ಅದೇ ವರ್ಗದ ವ್ಯಂಜನ ಪರವಾದಾಗ ಆ ಅನುನಾಸಿಕವು ಪರವ್ಯಂಜನದ ದ್ವಿತ್ವವಾಗುವುದರಲ್ಲಿ ಆಶ್ಚರ್ಯವೇನಿಲ್ಲ. ಅಂದರೆ,

    • ಮರ + ಁ + ಕೆ => ಮರ + ಙ್ + ಕೆ => ಮರ + ಕ್ + ಕೆ => ಮರಕ್ಕೆ

    ಇಲ್ಲಿ ಮೂಲದಲ್ಲಿ ಅನುಸ್ವಾರವಿತ್ತು ಹಾಗೂ ಆ ಅನುಸ್ವಾರವೇ ದ್ವಿತ್ವವಾಗಿದೆ ಎನ್ನುದಕ್ಕೆ ಇನ್ನೊಂದು ಪುರಾವೆ ತುಳುವಿನಲ್ಲಿ ಸಿಗುತ್ತದೆ. ಮರಕ್ಕೆ ಎನ್ನುವುದು ತುಳುವಿನಲ್ಲಿ ಮರೊಂಕ್ ಎಂದಾಗುತ್ತದೆ (ತುಳವಿನಲ್ಲೂ, ತಮಿಳಿನಂತೆ ಕ್ ಎಂಬುದೇ ಚತುರ್ಥೀ ವಿಭಕ್ತಿಪ್ರತ್ಯಯವಾಗಿದ್ದು, ಅದೇ ಎಲ್ಲ ದ್ರಾವಿಡಭಾಷೆಗಳ ಮೂಲ ಚತುರ್ಥೀ ವಿಭಕ್ತಿಪ್ರತ್ಯಯವೆನಿಸುತ್ತದೆ; ಕನ್ನಡದಲ್ಲಿ ಎಕಾರವೂ ಸೇರಿರುವುದು ಕನ್ನಡಕ್ಕೇ ವಿಶೇಷವಾದ ಪ್ರಕ್ರಿಯೆಯೆನಿಸುತ್ತದೆ). ಅಕಾರದ ಮೇಲೆ ಅನುಸ್ವಾರ ಬಂದಾಗ ಒಕಾರ ಕಾಣುವುದಕ್ಕೆ ತಮಿಳು ಹಾಗೂ ತುಳುಗಳ ಬೇರೆ ಉದಾಹರಣೆಗಳನ್ನು ಮೇಲೆ ಕಂಡಿದ್ದೇವೆ.

    ತುಳುವಲ್ಲಿ, ಕನ್ನಡದ ಮರದ ಎನ್ನುವುದಕ್ಕೆ ಸಮಾನವಾಗಿ, ಮರೊಂತ, ಮರತ್ತ ಎಂಬ ಸಾನುಸ್ವಾರವಾದ, ದ್ವಿತ್ವಯುಕ್ತವಾದ ಎರಡೂ ರೂಪಗಳು ಷಷ್ಠ್ಯರ್ಥದಲ್ಲೂ, ಕನ್ನಡದ ಮರದಲ್ಲಿ ಎನ್ನುವುದಕ್ಕೆ ಸಮಾನವಾಗಿ, ಮರೊಂಟ್, ಮರಟ್ಟ್ ಎಂಬ ಸಾನುಸ್ವಾರವಾದ, ದ್ವಿತ್ವಯುಕ್ತವಾದ ಎರಡೂ ರೂಪಗಳು ಸಪ್ತಮ್ಯರ್ಥದಲ್ಲೂ ಈಗಲೂ  ಬಳಕೆಯಲ್ಲಿದೆ. ಹಾಗೆಯೇ, ವಿಭಕ್ತಿಯಲ್ಲದ ಸಂದರ್ಭದಲ್ಲೂ ತುಳು, ಹವ್ಯಕಕನ್ನಡಗಳಲ್ಲಿ ಅನುಸ್ವಾರವು ಕಾಣಿಸುವಲ್ಲಿ (ಗೊಂತು), ಕನ್ನಡದಲ್ಲಿ ಸಜಾತೀಯದ್ವಿತ್ವ ಕಾಣಿಸುವುದನ್ನು (ಗೊತ್ತು) ಗಮನಿಸಬಹುದು.

    ಅಲ್ಲದೆ, ಸಾನುಸ್ವಾರವಾದ ಚತುರ್ಥೀರೂಪಗಳೂ ಕನ್ನಡದಲ್ಲೂ (ರಾಮಂಗೆ, ನವಿಲಿಂಗೆ), ಹವ್ಯಕಕನ್ನಡದಲ್ಲೂ (ಕಾಲಿಂಗೆ) ಅಲ್ಲಲ್ಲಿ ಕಾಣಿಸುವುದನ್ನೂ ಗಮನಿಸಿದಾಗ, ಮರಕ್ಕೆ ಎನ್ನುವುದರ ಪ್ರಕ್ರಿಯೆಯಲ್ಲೂ ಅನುಸ್ವಾರವು (ಮರಂಕೆ ಎಂಬಂತೆ) ಅಡಗಿರುವುದರ ಬಗೆಗೂ, ಆ ಅನುಸ್ವಾರವೇ ಕೆ ಪ್ರತ್ಯಯಕ್ಕೆ ದ್ವಿತ್ವವನ್ನು ನೀಡಿದೆಯೆನ್ನುವುದಕ್ಕೂ ಯಾವ ಸಂಶಯವೂ ಉಳಿಯದು.

    ಇಲ್ಲಿ ನಿರೂಪಿಸಿದ ಚತುರ್ಥೀ ವಿಭಕ್ತಿಪ್ರತ್ಯಯದ ಸಜಾತೀಯದ್ವಿತ್ವವು, ಅದು, ಇದು, ಉದು ಎನ್ನುವ ಉಕಾರಂತ ಸರ್ವನಾಮಗಳನ್ನು ಬಿಟ್ಟರೆ, ಕೇವಲ ಅಕಾರಾಂತ ನಪುಂಸಕಲಿಂಗಶಬ್ದಗಳಿಗೆ ಕೆ ಪ್ರತ್ಯಯ ಬಂದಾಗ ಕಾಣಿಸುತ್ತದಲ್ಲದೆ, ಗೆ ಪ್ರತ್ಯಯ ಬಂದಾಗ ಬಹಳ ವಿರಳ. ಬೆಳಗ್ಗೆ ಎನ್ನುವ ಒಂದೇ ಉದಾಹರಣೆ ನೆನಪಿಗೆ ಬರುತ್ತದಾದರೂ, ಅದು ಈಗ ಚತುರ್ಥ್ಯರೂಪದಲ್ಲಿ ಬಳಕೆಯಾಗುವುದಿಲ್ಲ. ಆದರೂ, ಇಲ್ಲೂ, ಬೆಳಂಗೆ ಎನ್ನುವ ರೂಪ ಹಿಂದೆ ಇದ್ದು, ಈಗ ಕಳೆದುಹೋಗಿರಬಹುದೆಂದು ಊಹಿಸಬಹುದೇನೋ.

    ಇನ್ನುಳಿಯುವುದು, ಅದುಇದುಉದು ಎನ್ನುವ ಉಕಾರಂತವಾದ ನಪುಂಸಕಲಿಂಗದ, ಏಕವಚನದ ಸರ್ವನಾಮಗಳ ಚತುರ್ಥೀ ವಿಭಕ್ತಿರೂಪಗಳಲ್ಲಿ ಕಾಣುವ ಸಜಾತೀಯದ್ವಿತ್ವ. ಅಂದರೆ, ಅದಕ್ಕೆ, ಇದಕ್ಕೆ, ಉದಕ್ಕೆ (ಯಾವುದಕ್ಕೆ, ಮಾಡುವುದಕ್ಕೆ) ಇತ್ಯಾದಿ. ಇದನ್ನು ದ್ವಿತೀಯಾ ವಿಭಕ್ತಿಪ್ರತ್ಯಯದ ಸಂದರ್ಭದಲ್ಲಿ ಮುಂದೆ ನೋಡೋಣ.

    ಹೀಗೆ, ಕನ್ನಡದಲ್ಲಿ ಸಜಾತೀಯದ್ವಿತ್ವ ಕಂಡಲ್ಲಿ, ವಿಜಾತೀಯದ್ವಿತ್ವವನ್ನೋ, ಅನುಸ್ವಾರವನ್ನೋ ಹುಡುಕಿದರೆ, ಹಲವು ಬಾರಿ ಸಫಲರಾಗಬಹುದು.

    ಚತುರ್ಥಿ ವಿಭಕ್ತಿಯಲ್ಲಿ ಹಲವೆಡೆ ಅನುಸ್ವಾರವು ಏಕೆ ಕಾಣಿಸುವುದಿಲ್ಲ?

    ರಾಮಂಗೆ ಎನ್ನುವ ಪ್ರಯೋಗವಿದ್ದಂತೆ, ರಾಮಗೆ ಎನ್ನುವ ಪ್ರಯೋಗವೂ ಇದೆ. ಹಾಗೆಯೇ, ಮರಕ್ಕೆ ಇದ್ದಂತೆ, ಮರಕೆ ಎನ್ನುವ ದ್ವಿತ್ವವಿಲ್ಲದ ರೂಪವೂ ಇದೆ (ಕದಕ್ಕೆ / ಕದಕೆ ಇತ್ಯಾದಿ ಕೂಡಾ).

    ಇದನ್ನು ಸಮನ್ವಯಿಸಲು, ಕನ್ನಡದಲ್ಲಿ ಅನುಸ್ವಾರವು ಕೆಲವೊಮ್ಮೆ ಲೋಪವಾಗುವ ಪ್ರಕ್ರಿಯೆಯಿರುವುದನ್ನು ನೋಡಬೇಕು. ಉದಾಹರಣೆಗೆ, ಕೇಶಿರಾಜನು ಶಬ್ದಮಣಿದರ್ಪಣದ ಸೂತ್ರ ೪೬ರ ವೃತ್ತಿಯಲ್ಲಿ ಕೆಲವು ವಿಕಲ್ಪವಾಗಿ ಸಬಿಂದುಕ (ಅನುಸ್ವಾರಯುಕ್ತವಾದ) ಹಾಗೂ ನಿತ್ಯವಾಗಿ ಸಬಿಂದುಕ ರೂಪಗಳನ್ನು ಪಟ್ಟಿಮಾಡಿದ್ದಾನೆ.

    ಮೊದಲಿಗೆ, ವಿಕಲ್ಪವಾಗಿ ಸಬಿಂದುಕ ಶಬ್ದಗಳು (ಅಂದರೆ, ಅನುಸ್ವಾರಯುಕ್ತವಾಗಿಯೂ, ಅನುಸ್ವಾರವಿಲ್ಲದೆಯೂ ಕಾಣುವವು). ಇಲ್ಲಿ ಕೆಲವನ್ನು ಮಾತ್ರ ಪಟ್ಟಿಮಾಡಿದ್ದೇನೆ. ಉಳಿದವುಗಳನ್ನು ಶಬ್ದಮಣಿದರ್ಪಣದ ಪುಟ ೫೫,  ೫೬ರಲ್ಲಿ ನೋಡಬಹುದು.

      • ಜಿನುಂಗು - ಜಿನುಗು
      • ತುಳುಂಕಿದಂ - ತುಳುಕಿದಂ
      • ಬೆಳಂತಿಗೆ - ಬೆಳತಿಗೆ
      • ಮುಸುಂಕಿದಂ - ಮುಸುಕಿದಂ

    ಆಮೇಲೆ, ನಿತ್ಯವಾಗಿ ಸಬಿಂದುಕ ಶಬ್ದಗಳು (ಅಂದರೆ, ಅನುಸ್ವಾರಯುಕ್ತವಾಗಿಯೇ ಯಾವಾಗಲೂ ಕಾಣುವವು). ಇಲ್ಲಿ ಕೆಲವನ್ನು ಮಾತ್ರ ಪಟ್ಟಿಮಾಡಿದ್ದೇನೆ. ಉಳಿದವುಗಳನ್ನು ಶಬ್ದಮಣಿದರ್ಪಣದ ಪುಟ ೫೪ ಹಾಗೂ ೫೫ರಲ್ಲಿ ನೋಡಬಹುದು.

      • ಅಡಂಗು
      • ಅವುಂಕಿದಂ
      • ಒರಂಟು
      • ತುಱುಂಬು
      • ದಾಂಟು
      • ನಾಂದು
      • ಬೆಡಂಗು
      • ಬೇಂಟೆ
      • ಮೀಂಟು

    ಇಲ್ಲಿ, ವಿಕಲ್ಪದಿಂದ ಅನುಸ್ವಾರವಿಲ್ಲದೆ ಕಾಣುವ ಶಬ್ದಗಳು ಮಾತ್ರವಲ್ಲದೆ, ಕೇಶಿರಾಜನು ನಿತ್ಯವಾಗಿ ಅನುಸ್ವಾರಯುಕ್ತವಾಗಿಯೇ ಕಾಣುತ್ತವೆಂದ ಶಬ್ದಗಳೂ, ಹೊಸಗನ್ನಡದಲ್ಲಿ ಅನುಸ್ವಾರವಿಲ್ಲದೆಯೇ ಹೆಚ್ಚಾಗಿ ಕಾಣಿಸುವುದನ್ನು ಗಮನಿಸಬಹುದು. ಉದಾಹರಣೆಗೆ,

    • ಅಡಗು
    • ಅವುಕು (ಅಮುಕು ಎನ್ನುವುದೂ ಇದೆ)
    • ಒರಟು
    • ತುರುಬು
    • ದಾಟು
    • ನಾದು
    • ಬೆಡಗು
    • ಬೇಟೆ
    • ಮೀಟು

    ಇಷ್ಟನ್ನು ನೋಡಿದರೆ, ಅನುಸ್ವಾರವು ಲೋಪವಾಗುವುದು ಕನ್ನಡದಲ್ಲಂತೂ ಸ್ವಾಭಾವಿಕವಾದ ಪ್ರಕ್ರಿಯೆಯೇ ಎನ್ನುವುದರಲ್ಲಿ ಸಂಶಯವಿರಲಿಕ್ಕಿಲ್ಲ. ಈ ಪ್ರಕ್ರಿಯೆ ಕೇಶಿರಾಜನ ಕಾಲಕ್ಕೇ ಶುರುವಾಗಿತ್ತೆಂಬುದಕ್ಕೆ ಅವನು ವಿಕಲ್ಪದಿಂದ ಸಬಿಂದುಕ ಎಂದು ಪಟ್ಟಿಮಾಡಿರುವ ಶಬ್ದಗಳೇ ಸಾಕ್ಷಿ. ಹೀಗೆ, ಅನುಸ್ವಾರವೇ ಲೋಪವಾಗುವಾಗ, ಅರ್ಧಾನುಸ್ವಾರವೂ ಲೋಪವಾಗುವುದರಲ್ಲಿ ಆಶ್ಚರ್ಯವಿಲ್ಲ.

    ಹಾಗಾಗಿ, ಅನುಸ್ವಾರವಿರದ (ರಾಮಗೆ) ಹಾಗೂ ದ್ವಿತ್ವವಿರದ (ಮರಕ್ಕೆ, ಕದಕ್ಕೆ) ಚತುರ್ಥೀ ವಿಭಕ್ತಿರೂಪಗಳು, ನಿಜವಾಗಿಯೂ ಅಲ್ಲಿ ಇದ್ದೇ ಇರುವ ಅರ್ಧಾನುಸ್ವಾರವು ಲೋಪವಾಗಿರುವುದರಿಂದ ಸಿದ್ಧಿಸಿದೆ ಎನ್ನಬಹುದು. ಅಂದರೆ,

    • ರಾಮ + ಁ + ಕೆ / ಗೆ => ರಾಮಁಗೆ => ರಾಮಗೆ
    • ಮರ + ಁ + ಕೆ  => ಮರಁಕೆ => ಮರಕೆ
    • ಕದ + ಁ + ಕೆ => ಕದಁಕೆ => ಕದಕೆ

    ಇಲ್ಲಿ, "ಕನ್ನಡ ಕೈಪಿಡಿ"ಕಾರರು, (ಮೇಲೆ ಉದ್ಧರಿಸಿದಂತೆ) ಪ್ರಾಚೀನ ವೈಯಾಕರಣರು, ಪ್ರಥಮಾ ವಿಭಕ್ತಿಪ್ರತ್ಯಯವು ಅಕಾರಾಂತವಲ್ಲದ ಶಬ್ದಗಳಲ್ಲಿ ಅಡಗಿದ್ದು ಕಾಣೆಯಾಗಿದೆ ಎಂದಿರುವುದನ್ನು ಹೀಗೆ ಖಂಡಿಸಿರುವುದನ್ನು ನೋಡಬಹುದು.

    ಏಕೆಂದರೆ ಅಕಾರಾಂತವಲ್ಲದ ಶಬ್ದಗಳಿಗೆ ಏಕವಚನ ಬಹುವಚನಗಳೆರಡರಲ್ಲಿಯೂ[,] ಅಕಾರಾಂತ ಶಬ್ದಗಳಿಗೆ ಬಹುವಚನದಲ್ಲಿಯೂ ಮ್ ಪ್ರತ್ಯಯವು ಮೊದಲು ಸೇರುವುದೇಕೆ, ಆಮೇಲೆ ಲೋಪವಾಗುವುದೇಕೆ? ಇದಕ್ಕೆ ಸಮರ್ಪಕವಾದ ಉತ್ತರವಾವುದೂ ವ್ಯಾಕರಣಗಳಲ್ಲಿ ಸಿಕ್ಕುವುದಿಲ್ಲ.

    ಪ್ರಥಮೇತರ ವಿಭಕ್ತಿಪ್ರತ್ಯಯಗಳ ಮೊದಲು ಕಾಣುವ (ಅರ್ಧ)ಅನುಸ್ವಾರವೇ ಕೆಲವೊಮ್ಮೆ ಲೋಪವಾಗುವುದನ್ನು (ಈ ಮೇಲೆ ತೋರಿಸಿದಂತೆ) ಕಂಡಾಗ, ಅಕಾರಂತವಲ್ಲದ (ಅದರಲ್ಲೂ ಸ್ವರಾಂತವಾದ) ಶಬ್ದಗಳಲ್ಲೂ ಅದು ಲೋಪವಾಗುವುದರಲ್ಲಿ ಆಶ್ಚರ್ಯವೇನು? ಆಡುಭಾಷೆಯಲ್ಲಿ ಅಕಾರಾಂತ ಶಬ್ದಗಳ ಅನುಸ್ವಾರಲೋಪವಾದ ಪ್ರಥಮಾ ವಿಭಕ್ತಿರೂಪವೇ (ಉದಾಹರಣೆಗೆ, ರಾಮ ಬಂದ) ಕಾಣುತ್ತದೆ. ಅಕಾರಾಂತ ಶಬ್ದಗಳ ಸಂದರ್ಭದಲ್ಲಂತೂ (ಅರ್ಧ)ಅನುಸ್ವಾರವಿರುವುದು ಇಲ್ಲಿಯವರೆಗಿನ ನಿರೂಪಣೆಯಿಂದ ಸ್ಪಷ್ಟವಾಗಿದೆಯಷ್ಟೇ.

    ಹಾಗಾಗಿ, "(ಅರ್ಧ)ಅನುಸ್ವಾರವು ಮೊದಲು ಸೇರಿ, ಆಮೇಲೆ ಲೋಪವಾಗುವುದೇಕೆ?" ಎನ್ನುವ ಪ್ರಶ್ನೆಗೆ ಇಲ್ಲಿರುವ ನಿರೂಪಣೆ ಸಮರ್ಪಕವಾದ ಉತ್ತರವಾಗಿದೆ ಎಂದುಕೊಳ್ಳುತ್ತೇನೆ.

    (ಅರ್ಧ)ಅನುಸ್ವಾರದ ಸ್ವರೂಪ

    ಇಲ್ಲಿಯವರೆಗೆ, (ಅರ್ಧ)ಅನುಸ್ವಾರದ ಕೆಲವು ಮುಖ್ಯಸ್ವರೂಪಗಳನ್ನು ನೋಡಿದೆವು.

    • ಸ್ವರವು ಪರವಾದಾಗ, ನಕಾರವಾಗುವುದು (ರಾಮಁ + ಅಂ => ರಾಮನಂ). ತುಳುವಿನಲ್ಲಿ, ಸ್ವಾಭಾವಿಕವಾಗಿಯೇ ಎಕಾರ ಕೂಡಾ ಆಗುತ್ತದೆ (ರಾಮಁ  => ರಾಮೆ).
    • ಸ್ವರವು ಪರವಾದಾಗ, ಮ, ವಕಾರಗಳಾಗುವುದು (ಫಲಁ + ಅಂ => ಫಲಮಂ => ಫಲವನ್ನು). ತಮಿಳು, ತುಳುಗಳಲ್ಲಿ ಸಾನುಸ್ವಾರ ಅಥವಾ ಅನುಸ್ವಾರರಹಿತವಾದ ಒಕಾರ. ಸಾನುಸ್ವಾರಕ್ಕೆ,  ತಮಿಳಲ್ಲಿ, ಅಪರಂ => ಅಪ್ರೊಁ, ತುಳುವಲ್ಲಿ, ಮರಁ + ಕ್ => ಮರೊಂಕ್ ಹಾಗೂ ಅನುಸ್ವಾರವಿಲ್ಲದಿರುವುದಕ್ಕೆ ಮರಁ => ಮರೊ. 
    • ವ್ಯಂಜನವು ಪರವಾದಾಗ, ಪೂರ್ಣಾನುಸ್ವಾರವಾಗುವುದು ಅಥವಾ ಅದೇ ವ್ಯಂಜನವರ್ಗದ ಅನುನಾಸಿಕವಾಗುವುದು (ರಾಮಁ + ಗೆ => ರಾಮಂಗೆ). ಅದೇ ಪೂರ್ಣಾನುಸ್ವಾರ ಅಥವಾ ಅನುನಾಸಿಕವು ಪರವಾದ ವ್ಯಂಜನಕ್ಕೆ ದ್ವಿತ್ವವಾಗುವುದು (ಮರಁ + ಕೆ => ಮರಕ್ಕೆ).
    • ಕೆಲವೊಮ್ಮೆ ಲೋಪವಾಗುವುದು (ರಾಮಁ => ರಾಮ, ರಾಮಁ + ಗೆ => ರಾಮ + ಗೆ => ರಾಮಗೆ, ಮರಁ + ಕೆ => ಮರ + ಕೆ => ಮರಕೆ).

    ಹೀಗಿರುವ (ಅರ್ಧ)ನುಸ್ವಾರ, ಪ್ರಥಮಾವಿಭಕ್ತಿಯ ಪ್ರತ್ಯಯವಾಗಿ ಮಾತ್ರವಲ್ಲದೆ ಇತರ ವಿಭಕ್ತಿಪ್ರತ್ಯಯಗಳ ಮೊದಲೂ ಕಾಣಿಸುತ್ತದೆಂಬುದನ್ನು ಮೇಲೆ ನೋಡಿದ್ದೇವೆ. ಹಾಗೆಯೇ, ಅನುಸ್ವಾರಾಂತವಾಗಿ ಪ್ರಾಚೀನ ವೈಯಾಕರಣರು ನಿರೂಪಿಸಿರುವ  ಇತರ ವಿಭಕ್ತಿಪ್ರತ್ಯಯಗಳ (ದ್ವಿತೀಯಾ ವಿಭಕ್ತಿಪ್ರತ್ಯಯ ಅಂ ಹಾಗೂ ತೃತೀಯಾ ವಿಭಕ್ತಿಪ್ರತ್ಯಯ ಇಂ) (ಅರ್ಧ)ಅನುಸ್ವಾರಗಳೂ ಈ ಮೇಲೆ ನಿರೂಪಿಸಿರುವ ಲಕ್ಷಣಗಳನ್ನು ತೋರಿಸುತ್ತವೆಯೇ ಎನ್ನುವುದನ್ನು ಈಗ ನೋಡೋಣ.

    ದ್ವಿತೀಯಾ ವಿಭಕ್ತಿಪ್ರತ್ಯಯದಲ್ಲಿರುವ (ಅರ್ಧ)ಅನುಸ್ವಾರ

    ದ್ವಿತೀಯಾ ವಿಭಕ್ತಿ ಪ್ರತ್ಯಯವನ್ನು ಕೇಶಿರಾಜನು ಅಂ ಎಂದಿರುವುದನ್ನೂ, "ಕನ್ನಡ ಕೈಪಿಡಿ"ಕಾರರು ಅನ್ ಎಂದಿರುವುದನ್ನೂ ಮೇಲೆ ಕಂಡಿದ್ದೇವಷ್ಟೇ. ಇಲ್ಲಿ ಅಂತ್ಯದಲ್ಲಿರುವುದು (ಅರ್ಧ)ಅನುಸ್ವಾರವೋ, ನಕಾರವೋ ಎಂಬುದನ್ನು ನಿರ್ಧರಿಸಲು ಮೇಲೆ ಅನುಸರಿಸಿದ ದಾರಿಯಲ್ಲೇ ಅದರ ವಿವಿಧರೂಪಗಳನ್ನು ಗಮನಿಸೋಣ.

    ಕಾಡಂ ಎನ್ನುವುದರ ವಿಕಲ್ಪರೂಪಗಳಾದ ಕಾಡನು, ಕಾಡನ್ನು ಎಂಬುವುಗಳಲ್ಲಿ ನಕಾರವೇ ಕಾಣಿಸುತ್ತದೆ. ಆದರೆ ನಕಾರವಲ್ಲದ ರೂಪಗಳಿವೆಯೇ?

    ದ್ವಿತೀಯಾ ವಿಭಕ್ತಿಪ್ರತ್ಯಯದ ಅನುಸ್ವಾರಲೋಪ

    ಹವ್ಯಕಕನ್ನಡದಲ್ಲಿ ದ್ವಿತೀಯಾ ವಿಭಕ್ತಿರೂಪ ಷಷ್ಠೀ ವಿಭಕ್ತಿಯ ರೂಪದಂತೆ (ಅಥವಾ ಭಿನ್ನವಾಗಿರುವಲ್ಲಿ ಷಷ್ಠೀ ವಿಭಕ್ತಿರೂಪವನ್ನು ಹೋಲುವಂತೆ) ಕಾಣುವುದನ್ನು ಮೇಲೆ ನೋಡಿದ್ದೇವಷ್ಟೇ. ಉದಾಹರಣೆಗೆ, ಅವನ (ಅಂದರೆ ಅವನನ್ನು), ಮರವ (ಅಂದರೆ ಮರವನ್ನು), ಅದರ (ಅಂದರೆ ಅದನ್ನು), ಹಿಟ್ಟಿನ (ಹಿಟ್ಟಿನ ಕಲಸು; ಅಂದರೆ ಹಿಟ್ಟನ್ನು ಕಲಸು)  ಇತ್ಯಾದಿ.

    ಇಂತಹ ಪ್ರಯೋಗಗಳನ್ನು (ಅದರ, ಹಿಟ್ಟಿನ ಹೀಗೆ ಬೆರಳೆಣಿಕೆಯವಷ್ಟನ್ನು ಹೊರತಾಗಿ) ಕನ್ನಡದಲ್ಲೂ ಕಾಣಬಹುದು. ಉದಾಹರಣೆಗೆ, "ವಂದಿಸುವುದಾದಿಯಲಿ ಗಣನಾಥನ" ಎಂಬ ಪುರಂದರದಾಸಪ್ರಸಿದ್ಧ ಸಾಲನ್ನು ನೋಡಬಹುದು. ಇಂತಹ ಪ್ರಯೋಗಗಳನ್ನು, ಕೇಶಿರಾಜನು ಶಬ್ದಮಣಿದರ್ಪಣದಲ್ಲಿ ದ್ವಿತೀಯಾರ್ಥದಲ್ಲಿ ಷಷ್ಠೀ ವಿಭಕ್ತಿಪ್ರತ್ಯಯದ ವಿಭಕ್ತಿಪಲ್ಲಟ ಎಂದು ನಿರೂಪಿಸಿದ್ದಾನೆ (ಸೂತ್ರ ೧೪೫ನ್ನು ನೋಡಬಹುದು).

    ಆದರೆ, ಮರವ ಎನ್ನುವಲ್ಲಿ, ನಿಜವಾದ ಷಷ್ಠೀ ವಿಭಕ್ತಿರೂಪ ಮರದ ಎಂಬುದಾಗಿದೆ. ಹಾಗೂ ಹವ್ಯಕಕನ್ನಡದ ದ್ವಿತೀಯಾರ್ಥದ ಅದರ (ಅಂದರೆ ಅದನ್ನು) ಎಂಬುದಕ್ಕೆ ಸಮವಾಗಿ ಕನ್ನಡದಲ್ಲಿ ಅದ ಎನ್ನುವ ರೂಪವಿದೆ (ಶ್ರೀ ಗೋಪಾಲಕೃಷ್ಞ ಅಡಿಗರ "ಇದು-ಬಾಳು" ಎಂಬ ಪ್ರಸಿದ್ಧವಾದ ಕವನದ "ಅದ ಕುಡಿದೆನೆಂದ ಹಲರುಂಟು ತಣಿದೆನೆಂದವರ ಕಾಣೆನಯ್ಯ" ಎಂಬ ಸಾಲನ್ನು ನೆನೆಯಬಹುದು). ಇಲ್ಲಿ ಅದ ಎನ್ನುವುದಕ್ಕೆ ಅದನ್ನು ಎಂದೇ ಅರ್ಥ. ಆದರೆ ನಿಜವಾದ ಷಷ್ಠೀ ವಿಭಕ್ತಿರೂಪ ಅದರ ಎಂಬುದಾಗಿದೆ. ಈ ಎರಡು ಅಪವಾದಗಳು ಕೇಶಿರಾಜನ ದ್ವಿತೀಯಾರ್ಥದ ಷಷ್ಠೀ ವಿಭಕ್ತಿಪ್ರತ್ಯಯದ ವಿಭಕ್ತಿಪಲ್ಲಟದ ನಿರೂಪಣೆಗೆ ತೊಡಕಾಗುತ್ತವೆ. ಈ ತೊಡಕನ್ನು ನಿವಾರಿಸಲು ಬೇರೆ ದಾರಿಯನ್ನು ಕಂಡುಕೊಳ್ಳಬೇಕೆನಿಸುತ್ತದೆ.

    ಷಷ್ಠೀ ವಿಭಕ್ತಿರೂಪಗಳನ್ನು ಹೋಲುವ ಪದಗಳ ದ್ವಿತೀಯಾರ್ಥದ ಬಳಕೆಗೆ ನಿಜವಾದ ಕಾರಣ, ದ್ವಿತೀಯಾ ವಿಭಕ್ತಿಪ್ರತ್ಯಯದ (ಅಂ) ಅನುಸ್ವಾರಲೋಪವೇ ಆಗಿರಬೇಕೆನಿಸುತ್ತದೆ. ಅಂದರೆ,

    • ಅವಁ + ಅಁ => ಅವನಁ => ಅವನ
    • ಮರಁ + ಅಁ => ಮರವಁ => ಮರವ
    • ಕದಁ + ಅಁ => ಕದವಁ => ಕದವ
    • ಅದುಁ + ಅಁ => ಅದು + ಅಁ => ಅದಁ => ಅದ
    • ಮನೆಁ + ಅಁ => ಮನೆಯಁ => ಮನೆಯ

    ಈ ಅನುಸ್ವಾರಲೋಪದ ಪ್ರಕ್ರಿಯೆಯಲ್ಲಿ, ಸಾಮಾನ್ಯವಾಗಿ ಅಕಾರಾಂತ ಪುಲ್ಲಿಂಗ, ಸ್ತ್ರೀಲಿಂಗಶಬ್ದಗಳಲ್ಲಿ ಕಾಣುವ ಷಷ್ಠೀ ವಿಭಕ್ತಿರೂಪದಂತಹ ದ್ವಿತೀಯಾ ವಿಭಕ್ತಿರೂಪವು ಸಿದ್ಧಿಸುವುದು ಮಾತ್ರವಲ್ಲ, ನಪುಂಸಕಲಿಂಗ ಶಬ್ದಗಳ (ಮರ, ಕದ, ಅದು ಇತ್ಯಾದಿ) ಷಷ್ಠೀ ವಿಭಕ್ತಿರೂಪದಂತಿರದೆ (ಮರದ, ಕದದ, ಅದರ), ವಿಭಕ್ತಿಪಲ್ಲಟಕ್ಕೆ ಅಪವಾದವಾಗಿರುವ ದ್ವಿತೀಯಾ ವಿಭಕ್ತಿರೂಪಗಳೂ (ಮರವ, ಕದವ, ಅದ) ಸಿದ್ಧಿಸುವುದನ್ನು ಗಮನಿಸಬಹುದು.

    ಇನ್ನು ಉಳಿಯುವುದು ಹವ್ಯಕಕನ್ನಡದಲ್ಲಿ ಈಗ ಕಾಣುವ ದ್ವಿತೀಯಾರ್ಥದ ಅದರ (ಅಂದರೆ ಅದನ್ನು) ಎನ್ನುವ ಹಾಗೂ ಹಿಟ್ಟಿನ (ಅಂದರೆ ಹಿಟ್ಟನ್ನು) ಎನ್ನುವಂತಹ ಇತರ ರೂಪಗಳು  ಮಾತ್ರ. ಅನುಸ್ವಾರಲೋಪವಾಗಿದ್ದರೆ ಅದ ಎನ್ನುವ (ಮೇಲೇ ತೋರಿಸಿರುವ) ರೂಪವೇ ಸಿದ್ಧಿಸಬೇಕಷ್ಟೇ. ಆದರೆ ಅದರ ಎನ್ನುವುದು ಷಷ್ಠೀವಿಭಕ್ತಿರೂಪವೇ ಎನ್ನುವಂತಿದೆ. ಇಲ್ಲಿ ಕಾಣುವ ರೇಫವು (ಸಂಸ್ಕೃತದಲ್ಲಿ ರಕಾರಕ್ಕೆ ರೇಫವೆನ್ನುವುದು ಪದ್ಧತಿ) ಅನುಸ್ವಾರಲೋಪದ ನಿರೂಪಣೆಗೆ ತೊಡಕಾಗುತ್ತದೆ. ಈ ತೊಡಕಿಗೆ ಕಾರಣ, ಹೊಸಗನ್ನಡದಲ್ಲಿ ಅದು ಶಬ್ದದ ವಿಭಕ್ತಿರೂಪಗಳಲ್ಲಿ ರೇಫವು ತೃತೀಯಾ ವಿಭಕ್ತಿಯಿಂದ ಸಪ್ತಮೀ ವಿಭಕ್ತಿಯವರೆಗೆ ಮಾತ್ರ ಕಾಣಿಸಿ, ದ್ವಿತೀಯಾ ವಿಭಕ್ತಿಯಲ್ಲಿ ಅದನ್ನು ಎಂಬ ರೇಫವಿಲ್ಲದ ರೂಪ ಮಾತ್ರ ಕಾಣಿಸುವುದಾಗಿದೆ.

    ಆದರೆ, ಹಳಗನ್ನಡದಲ್ಲಿ ಅದಱಂ ಎನ್ನುವ ಱಕಾರಯುಕ್ತವಾದ ದ್ವಿತೀಯಾ ವಿಭಕ್ತಿರೂಪ ಕಾಣಿಸುತ್ತದೆ. ಸೇಡಿಯಾಪು ಅವರು ಈ ರಕಾರಕ್ಕೆ ಅಱ ಎಂಬ ಹೆಸರನ್ನು ಟಂಕಿಸಿರುವುದು ಯುಕ್ತವೇ ಆಗಿದೆ. ಅವರ ಱಳ, ಕುಳ, ಕ್ಷಳಗಳ ಬಗೆಗಿನ ಲೇಖನವನ್ನು ನೋಡಬಹುದು. ಶ್ರೀ ಪಾದೆಕಲ್ಲು ವಿಷ್ಣುಭಟ್ಟರು ಇದನ್ನು "ವಿಚಾರಪ್ರಪಂಚ" ಎನ್ನುವ ಸೇಡಿಯಾಪು ಅವರ ಲೇಖನಸಂಚಯದಲ್ಲಿ ಸಂಪಾದಿಸಿದ್ದಾರೆ.

    ಉದಾಹರಣೆಗೆ, ಮುದ್ದಣ, ಮನೋರಮೆಯರ ಸಲ್ಲಾಪದಲ್ಲಿ ಹೀಗಿದೆ.

    ಮುದ್ದಣ: ಅಪ್ಪುದಪ್ಪುದು. ಆದೊಡಂ ಸಕ್ಕದಮೊಂದೆ, ರನ್ನವಣಿಯಂ ಪೊನ್ನಿಂ ಬಿಗಿದಂತೆಸಗುಂ; ಅದಱಂ ಕರ್ಮಣಿಸರದೊಳ್ ಚೆಂಬವಳಮಂ ಕೋದಂತಿರೆ, ರಸಮೊಸರೆ, ಲಕ್ಕಣಂ ಮಿಕ್ಕಿರೆ, ಎಡೆಯೆಡೆಯೊಳ್ ಸಕ್ಕದದ ನಲ್ನುಡಿ ಮೆಱೆಯೆ ! ತಿರುಳ್ಗನ್ನಡದೊಳೆ ಕತೆಯನುಸಿರ್ವೆಂ ಎಂಬಲ್ಲಿಗೆ ಮುದ್ದಣ ಪೇೞ್ದ ಶ್ರೀ ರಾಮಾಶ್ವಮೇಧದೊಳ್ ಕಥಾಮುಖಮೆಂಬ ಪ್ರಥಮಾಶ್ವಾಸಂ ಸಂಪೂರ್ಣಂ

    ಇಲ್ಲಿ ಅದಱಂ ಎಂಬುದು ಅದನ್ನು ಎಂಬಂತೆ ದ್ವಿತೀಯಾರ್ಥದಲ್ಲೇ ಇದೆ ಎಂಬುದು ಸ್ಪಷ್ಟವಾಗಿಯೇ ಇದೆಯೆಂದುಕೊಳ್ಳುತ್ತೇನೆ. ಹಾಗೆಯೇ, ಱಕಾರವು (ಸೇಡಿಯಾಪು ಅವರು ಹೇಳುವ ಅಱ) ಕನ್ನಡದಲ್ಲಿ ಮುಂದೆ ರೇಫವಾದದ್ದು  ಪ್ರಸಿದ್ಧವೇ ಆಗಿದೆ. ಇವೆಲ್ಲವನ್ನು ಒಟ್ಟಾಗಿ ನೋಡಿದಾಗ, ಅದರ ಎನ್ನುವ ರೇಫಯುಕ್ತವಾದ ರೂಪವು ದ್ವಿತೀಯಾ ವಿಭಕ್ತಿಪ್ರತ್ಯಯದ ಅನುಸ್ವಾರಲೋಪದಿಂದ ಸಿದ್ಧಿಸುವ ಪ್ರಕ್ರಿಯೆ ಸ್ಪಷ್ಟವಾಗುತ್ತದೆ.

    • ಅದುಁ + ಅಁ => ಅದಱಁ => ಅದಱ => ಅದರ

    ಇನ್ನುಳಿಯುವ ಹಿಟ್ಟಿನ (ಅಂದರೆ ಹಿಟ್ಟನ್ನು) ಎನ್ನುವಂತಹ ಇತರ ರೂಪಗಳು ದ್ವಿತೀಯಾ ವಿಭಕ್ತಿರೂಪಗಳಂತೆ ಸ್ವಲ್ಪವೂ ಕಾಣದೆ ಷಷ್ಠೀ ವಿಭಕ್ತಿರೂಪಗಳೇ ಎನ್ನುವಂತಿವೆ. ಇಲ್ಲಿ ನಿರೂಪಿಸಿರುವ ಅನುಸ್ವಾರಲೋಪದ ಪ್ರಕ್ರಿಯೆಯು ಹಿಟ್ಟ ಎನ್ನುವ ರೂಪವನ್ನೇ ಮೂಡಿಸುತ್ತದೆ. 

    • ಹಿಟ್ಟುಁ + ಅಁ => ಹಿಟ್ಟು + ಅಁ => ಹಿಟ್ಟಁ => ಹಿಟ್ಟ

    ಹಿಟ್ಟಿನ ಎನ್ನುವ ದ್ವಿತೀಯಾರ್ಥದ ರೂಪಕ್ಕೆ ಅನುಸ್ವಾರಲೋಪದ ಪ್ರಕ್ರಿಯೆಯಲ್ಲೇ ಕೊಡಬಹುದಾದ ಸಮಾಧಾನವನ್ನು ಮುಂದೆ ಇನಾಗಮದ ಸಂದರ್ಭದಲ್ಲಿ ನೋಡೋಣ.

    ಹೀಗೆ, ಕೇಶಿರಾಜನ ದ್ವಿತೀಯಾರ್ಥದ ಷಷ್ಠೀ ವಿಭಕ್ತಿಪ್ರತ್ಯಯದ ವಿಭಕ್ತಿಪಲ್ಲಟದ ಉದಾಹರಣೆಗಳಷ್ಟೇ ಅಲ್ಲದೆ, ಆ ನಿರೂಪಣೆಗೆ ತೊಡಕಾದ ಅಪವಾದಗಳೂ ಕೂಡ ದ್ವಿತೀಯಾ ವಿಭಕ್ತಿಪ್ರತ್ಯಯದ ಅನುಸ್ವಾರಲೋಪದಿಂದ ಸಿದ್ಧಿಸುವುದರಿಂದ, ದ್ವಿತೀಯಾ ವಿಭಕ್ತಿಪ್ರತ್ಯಯದ ಅನುಸ್ವಾರಲೋಪ ಇಲ್ಲಿ ನಡೆಯುವ ನಿಜವಾದ ಪ್ರಕ್ರಿಯೆ, ದ್ವಿತೀಯಾರ್ಥದ ಷಷ್ಠೀ ವಿಭಕ್ತಿಪ್ರತ್ಯಯದ ವಿಭಕ್ತಿಪಲ್ಲಟವಲ್ಲ ಎಂದು ಧೈರ್ಯವಾಗಿ ನಿಶ್ಚಯಿಸಬಹುದು.

    ಅದು ಶಬ್ದದ ತೃತೀಯಾದಿ ವಿಭಕ್ತಿರೂಪಗಳಲ್ಲಿ ಱಕಾರ (ಅಱ) / ರೇಫಗಳಿಗೆ ಕಾರಣವೇನೆನ್ನುವುದು ಚಿಂತನಾರ್ಹ ವಿಷಯವಾಗಿದ್ದರೂ, ವಿಷಯಾಂತರಭಯದಿಂದ ಇಲ್ಲಿ ಮುಂದುವರಿಸುತ್ತಿಲ್ಲ.

    ಹೀಗೆ, ಒಂದೇ ಪದವು, ಷಷ್ಠೀ ವಿಭಕ್ತಿಪ್ರತ್ಯಯದಿಂದಲೂ, ದ್ವಿತೀಯಾ ವಿಭಕ್ತಿಪ್ರತ್ಯಯದಿಂದಲೂ ಸಿದ್ಧಿಸುವಾಗ, ಅದನ್ನು, ಷಷ್ಠ್ಯರ್ಥದಲ್ಲಿ ಬಳಸಿದಾಗ ಅದು ಷಷ್ಠೀ ವಿಭಕ್ತಿಪ್ರತ್ಯಯದ ಪ್ರಕ್ರಿಯೆಯಿಂದಲೂ, ದ್ವಿತೀಯಾರ್ಥದಲ್ಲಿ ಬಳಸಿದಾಗ ದ್ವಿತೀಯಾ ವಿಭಕ್ತಿಪ್ರತ್ಯಯದ ಪ್ರಕ್ರಿಯೆಯಿಂದಲೂ ಸಿದ್ಧಿಸಿದೆ ಎಂದು ಪರಿಗಣಿಸಬೇಕಾಗುತ್ತದೆ.

    ಹೀಗೆ, ಒಂದೇ ಪದವು ಹಲವು ಪ್ರಕ್ರಿಯೆಗಳಿಂದ ಸಿದ್ಧಿಸಿದಾಗ, ಆ ಬೇರೆ ಬೇರೆ ಪ್ರಕ್ರಿಯೆಗಳು ತಮ್ಮದೇ ಆದ ಅರ್ಥಗಳೆಲ್ಲವನ್ನೂ ಆ ಪದಕ್ಕೆ ತುಂಬುತ್ತವೆ.

    "ಕನ್ನಡ ಕೈಪಿಡಿ"ಕಾರರು (ಮೇಲೆ ಉದ್ಧರಿಸಿದಂತೆ) ದ್ವಿತೀಯಾ ವಿಭಕ್ತಿಪ್ರತ್ಯಯವನ್ನು ಅನ್ ಎಂದು ನಿರೂಪಿಸಿದರೂ, ಎನ್ನ ಎಂಬಲ್ಲಿ ಅಂತ್ಯದ ನಕಾರವು ಲೋಪವಾಗುವುದನ್ನೇ ಪ್ರತಿಪಾದಿಸಿರುವುದನ್ನು ಮೇಲೆಯೇ ನೋಡಿದ್ದೇವೆ. ಇದು ಭಾಗಶಃ ಸರಿಯೇ ಆಗಿದೆ. ಆದರೆ, ಅಲ್ಲಿ ಕೊಟ್ಟಿರುವ ಉದಾಹರಣೆಗಳಿಂದ (ಹಣಾ ತಾ) ಈ ಪ್ರಕ್ರಿಯೆ ಅಷ್ಟು ಸ್ಪಷ್ಟವಾಗುವುದಿಲ್ಲ. ಅಲ್ಲದೆ, ಅಲ್ಲಿ ಹೇಳಿರುವ ದೀರ್ಘಸ್ವರವು ಕರ್ನಾಟಕದ ಕೆಲವೇ ಪ್ರಾಂತ್ಯಗಳಲ್ಲಿ ಕಂಡುಬಂದು, ದ್ವಿತೀಯಾ ವಿಭಕ್ತಿಯಿರದೆಡೆಗಳಲ್ಲೂ ಕಾಣಿಸುವುದರಿಂದ (ಮೇಲೆ ಹೇಳಿದ "ಕನ್ನಡವ್ಯಾಕರಣದ ಕೆಲವು ಸಮಸ್ಯೆಗಳು" ಎಂಬ ಚಿಂತನಾಂಶಗಳ ಪಟ್ಟಿಯಲ್ಲಿ ಸೇಡಿಯಾಪು ಅವರು ರಾಮಾಶಾಸ್ತ್ರಿ ಎಂಬ ಉದಾಹರಣೆಯನ್ನು ಕೊಡುತ್ತಾರೆ), ಅದು ಅ ಪ್ರಾಂತ್ಯಗಳಿಗೇ ವಿಶಿಷ್ಟವಾದ, ದ್ವಿತೀಯಾ ವಿಭಕ್ತ್ಯೇತರಪ್ರಕ್ರಿಯೆ ಎಂದೆನಿಸುತ್ತದೆ.

    ದಿಗ್ವಾಚಕಶಬ್ದಗಳಲ್ಲಿ ಅಲ್ಲಲ್ಲಿ ಕಾಣುವ ಣಕಾರ

    ಕೇಶಿರಾಜನು ದಿಗ್ವಾಚಕಶಬ್ದಗಳಲ್ಲಿ ಕೆಲವೊಮ್ಮೆ ಕಾಣುವ ಣಕಾರವನ್ನು ಸೂತ್ರ ೧೨೦ರಲ್ಲಿ ಅಣಾಗಮವೆಂದು ನಿರೂಪಿಸಿದ್ದಾನೆ. ಉದಾಹರಣೆಗೆ, ತೃತೀಯಾರ್ಥದಲ್ಲಿ ಮೂಡಣಿಂ, ತೆಂಕಣಿಂ, ಪಡುವಣಿಂ, ಬಡಗಣಿಂ, ನಡುವಣಿಂ ಇತ್ಯಾದಿ, ಷಷ್ಠ್ಯರ್ಥದಲ್ಲಿ ಮೂಡಣತೆಂಕಣಪಡುವಣಬಡಗಣನಡುವಣ ಇತ್ಯಾದಿ. ಇಲ್ಲಿ ಣಕಾರದ ಮೊದಲು ಕೆಲವೆಡೆ ಕಾಣುವ ವಕಾರವು ಎಲ್ಲ ಪ್ರತ್ಯಯಗಳ ಮೊದಲು ಬರುವ (ಅರ್ಧ)ಅನುಸ್ವಾರವೇ ಆಗಿದ್ದರೂ, ಅಣಾಗಮ ಎನ್ನುವುದಕ್ಕೆ ಹೆಚ್ಚಿನ ವ್ಯಾಕರಣಪ್ರಕ್ರಿಯೆಯಿರಬೇಕೆನಿಸುತ್ತದೆ. ಎಕೆಂದರೆ, ಮೇಲೆ ಹೇಳಿದ ಎಲ್ಲ ಪ್ರತ್ಯಯಗಳ ಮೊದಲು ಬರುವ (ಅರ್ಧ)ಅನುಸ್ವಾರದ ಸಾಮಾನ್ಯ ಪ್ರಕ್ರಿಯೆಯಿಂದ ಬೇರೆ (ಕನ್ನಡದಲ್ಲಿ ಅಷ್ಟಾಗಿ ಕಾಣಿಸದ) ರೂಪಗಳು ಸಿದ್ಧಿಸುತ್ತವೆ. ಉದಾಹರಣೆಗೆ,

    • ಮೂಡುಁ + ಇಁ => ಮೂಡಿಂ / ಮೂಡಿಁ
    • ಪಡುಁ + ಇಁ => ಪಡುವಿಂ / ಪಡುವಿಁ
    • ತೆಂಕುಁ + ಅ => ತೆಂಕ
    • ಬಡಗುಁ + ಅ => ಬಡಗ
    • ನಡುಁ + ಅ => ನಡುವ

    ಇಲ್ಲಿ ಣಕಾರವೂ ಕಾಣುವುದಿಲ್ಲ, ಆ ಣಕಾರದ ಮೊದಲಿನ ಅಕಾರವೂ (ಮೂಡ, ಪಡುವ ಇತ್ಯಾದಿ) ಕಾಣುವುದಿಲ್ಲ. ಹಾಗಾದರೆ, ಹೆಚ್ಚಾಗಿ ಕಾಣಿಸುವ ಣಕಾರಕ್ಕೂ ಹಾಗೂ ಣಕಾರದ ಮೊದಲು ಕಾಣಿಸುವ ಅಕಾರಕ್ಕೂ ಕಾರಣ ಇಲ್ಲಿ ದ್ವಿತೀಯಾ ವಿಭಕ್ತಿಯ ಅಂ / ಅಁ ಪ್ರತ್ಯಯವು ಮಧ್ಯವರ್ತಿಯಾಗಿ ಬಂದಿದ್ದು, ಆ ಪ್ರತ್ಯಯದ (ಅರ್ಧ)ಅನುಸ್ವಾರವೇ ಣಕಾರವಾಗಿದೆ ಹಾಗೂ ಅದೇ (ಅಂ / ಅಁ) ಪ್ರತ್ಯಯದ ಆದಿಯ ಅಕಾರವೇ, ಣಕಾರದ ಮೊದಲು ಕಾಣುವ ಅಕಾರ ಎಂದು ತೋರುತ್ತದೆ. ಅಂದರೆ,

    • ಮೂಡುಁ + ಅಁ + ಇಁ => ಮೂಡು + ಅಁ + ಇಁ (ಮೊದಲ ಅನುಸ್ವಾರದ ಲೋಪವಾಗಿದೆ) => ಮೂಡಁ + ಇಁ => ಮೂಡಣಿಂ (ದ್ವಿತೀಯಾ ವಿಭಕ್ತಿಪ್ರತ್ಯಯದ ಅಂತ್ಯಾನುರಸ್ವಾವು ಣಕಾರವಾಗಿದೆ)
    • ಪಡುಁ + ಅಁ + ಇಁ => ಪಡುವಁ + ಇಁ (ಮೊದಲ ಅನುಸ್ವಾರವು ವಕಾರವಾಗಿದೆ) => ಪಡುವಣಿಂ (ದ್ವಿತೀಯಾ ವಿಭಕ್ತಿಪ್ರತ್ಯಯದ ಅಂತ್ಯಾನುಸ್ವಾವು ಣಕಾರವಾಗಿದೆ)
    • ತೆಂಕುಁ + ಅಁ + ಅ => ತೆಂಕು + ಅಁ + ಅ (ಮೊದಲ ಅನುಸ್ವಾರದ ಲೋಪವಾಗಿದೆ) => ತೆಂಕಁ + ಅ => ತೆಂಕಣ (ದ್ವಿತೀಯಾ ವಿಭಕ್ತಿಪ್ರತ್ಯಯದ ಅಂತ್ಯಾನುಸ್ವಾರವು ಣಕಾರವಾಗಿದೆ)
    • ಬಡಗುಁ + ಅಁ + ಅ => ಬಡಗು + ಅಁ + ಅ (ಮೊದಲ ಅನುಸ್ವಾರದ ಲೋಪವಾಗಿದೆ) => ಬಡಗಁ + ಅ => ಬಡಗಣ (ದ್ವಿತೀಯಾ ವಿಭಕ್ತಿಪ್ರತ್ಯಯದ ಅಂತ್ಯಾನುಸ್ವಾವು ಣಕಾರವಾಗಿದೆ)
    • ನಡುಁ + ಅಁ + ಅ => ನಡುವಁ + ಅ (ಮೊದಲ ಅನುಸ್ವಾರವು ವಕಾರವಾಗಿದೆ) => ನಡುವಣ (ದ್ವಿತೀಯಾ ವಿಭಕ್ತಿಪ್ರತ್ಯಯದ ಅಂತ್ಯಾನುಸ್ವಾರವು ಣಕಾರವಾಗಿದೆ)

    ದಿಗ್ವಾಚಕಗಳಲ್ಲದ ಕೆಲವು ಶಬ್ದಗಳಲ್ಲೂ ಇದೇ ಪ್ರಕ್ರಿಯೆ, ರೂಪ ಕಾಣಿಸುವುದನ್ನು ಗಮನಿಸಬಹುದು (ಉದಾಹರಣೆಗೆ, ಮದುವಣಗಿತ್ತಿ).

    ಹೀಗೆ, ಒಂದೇ ವಿಭಕ್ತಿಯನ್ನು ಸೂಚಿಸಲು ಎರಡು ಪ್ರತ್ಯಯಗಳು ಬೇರೆ ಕಡೆಯಲ್ಲೂ ಬರುವುದನ್ನು ಮುಂದೆ ನೋಡುವುದಿದೆ. ಹೀಗೆ,  ಒಂದು ವಿಭಕ್ತಿಪ್ರತ್ಯಯಕ್ಕೆ (ಇಲ್ಲಿ ತೃತೀಯಾ, ಷಷ್ಠೀ ವಿಭಕ್ತಿಪ್ರತ್ಯಯಗಳಿಗೆ) ಮಧ್ಯವರ್ತಿಯಾಗಿ ಇನ್ನೊಂದು ವಿಭಕ್ತಿಪ್ರತ್ಯಯ (ಇಲ್ಲಿ ದ್ವಿತೀಯಾ ವಿಭಕ್ತಿಪ್ರತ್ಯಯ) ಬರುವಲ್ಲಿ, ಸಾಮಾನ್ಯವಾಗಿ, ಕೊನೆಯ ವಿಭಕ್ತಿಪ್ರತ್ಯಯದ್ದೇ (ಇಲ್ಲಿ ತೃತೀಯಾ, ಷಷ್ಠೀ ವಿಭಕ್ತಿಪ್ರತ್ಯಯಗಳದ್ದೇ) ಪ್ರಮುಖಾರ್ಥ, ಹಾಗೂ ಮಧ್ಯವರ್ತಿಯಾಗಿ ಬರುವ ವಿಭಕ್ತಿಪ್ರತ್ಯಯದ್ದು ಹೆಚ್ಚೆಂದರೆ ಗೌಣಾರ್ಥ; ಕೆಲವುಬಾರಿ ಅದರಿಂದ ಯಾವ ಅರ್ಥವ್ಯತ್ಯಾಸವೂ ಆಗುವುದಿಲ್ಲ. ಇಲ್ಲಿ ಮಧ್ಯವರ್ತಿಯಾಗಿ ಬಂದ ದ್ವಿತೀಯಾ ವಿಭಕ್ತಿಪ್ರತ್ಯಯದಿಂದ ಹೆಚ್ಚೇನೂ ಅರ್ಥವ್ಯತ್ಯಾಸವಾಗಿರುವಂತಿಲ್ಲ.

    ಕನ್ನಡದಲ್ಲಿ ಎನಗೆ ಎನ್ನುವಲ್ಲಿ ಕಾಣುವ ನಕಾರದ ಮೇಲಿನ ಅಕಾರ ಹಾಗೂ ತಮಿಳಿನಲ್ಲಿ ಎನಕ್ಕ್ ಎನ್ನುವಲ್ಲಿ ಕಾಣುವ ದ್ವಿತ್ವ

    ಮೇಲ್ನೋಟಕ್ಕೆ, ಕನ್ನಡದಲ್ಲಿ ಎನಗೆ ಎನ್ನುವಲ್ಲಿ ಕಾಣುವ ನಕಾರದ ಮೇಲಿನ ಅಕಾರ ಹಾಗೂ ತಮಿಳಿನಲ್ಲಿ ಎನಕ್ಕ್ ಎನ್ನುವಲ್ಲಿ ಕಾಣುವ ದ್ವಿತ್ವಕ್ಕೆ ಮೇಲೆ ನಿರೂಪಿಸಿದಂತೆ ಎಲ್ಲ ವಿಭಕ್ತಿಪ್ರತ್ಯಯಗಳ ಮೊದಲು ಕಾಣುವ (ಅರ್ಧ)ಅನುಸ್ವಾರವೇ ಕಾರಣವೆಂದು ತೋರಬಹುದು. ಆದರೆ ಅದು ನಿಜವೇ?

    ಕನ್ನಡದ ಎನಗೆ ಎಂಬುದಕ್ಕೂ, ತಮಿಳಿನ ಎನಕ್ಕ್ ಎಂಬುದಕ್ಕೂ ಮೂಲಸರ್ವನಾಮಶಬ್ದ ಎಂ (ಅಥವಾ ಎಁ) ಎನ್ನುವುದು (ಅರ್ಧ)ಅನುಸ್ವಾರಾಂತವಾಗಿಯೇ ಇದೆ. ಈ ಅನುಸ್ವಾರವೇ ಪೂರ್ಣಾನುಸ್ವಾರವಾಗಿ (ಅಥವಾ ಗೆ ಪ್ರತ್ಯಯದ ಆದಿವ್ಯಂಜನದ ಕವರ್ಗದ ಅನುನಾಸಿಕವಾದ ಙಕಾರವಾಗಿ)  ಪರಿಣಮಿಸಬೇಕಷ್ಟೇ. ಅಂದರೆ, ಎಁ + ಕೆ / ಗೆ => ಎಂಕೆ (ಉಚ್ಚಾರಣೆ ಎಙ್ಕೆ) / ಎಂಗೆ (ಉಚ್ಚಾರಣೆ ಎಙ್ಗೆ), ಎಁಕ್ => ಎಂಕ್ ಎಂದಾಗಬೇಕಷ್ಟೇ. ತುಳುವಲ್ಲಿ ಇಂದಿಗೂ ಇದು ಎಂಕ್ ಎಂದಿರುವುದು ಈ ಪ್ರಕ್ರಿಯೆಯನ್ನು ಬೆಂಬಲಿಸುತ್ತದೆ. ತಮಿಳಲ್ಲಿ ಎಂಗೆ ಎನ್ನುವುದು ಬೇರೆ (ಚತುರ್ಥೀ ವಿಭಕ್ತಿಯಲ್ಲದ) ಪ್ರಶ್ನಾರ್ಥಕ ಅರ್ಥದಲ್ಲಿರುವುದನ್ನು ಗಮನಿಸಿದರೆ ಹಾಗೂ ಕ್ ಪ್ರತ್ಯಯವೇ ಮುಖ್ಯವಾಗಿ ಚತುರ್ಥ್ಯರ್ಥದಲ್ಲಿ ಬರುವುದರಿಂದ ಈ ಪದವು ಬೇರೆ ಪ್ರಕ್ರಿಯೆಯಿಂದ ಉಂಟಾಗಿರಬೇಕೆನಿಸುತ್ತದೆ.

    ಹಾಗಾದರೆ, ಎನಗೆ, ಎನಕ್ಕ್ ಎನ್ನುವಲ್ಲಿ ಕಾಣುವ ನಕಾರ, ಅಕಾರಗಳಿಗೆ ಕಾರಣ, ಇಲ್ಲಿ ಚತುರ್ಥೀ ವಿಭಕ್ತಿಪ್ರತ್ಯಯದ ಮೊದಲು ದ್ವಿತೀಯಾ ವಿಭಕ್ತಿಯ ಅಂ / ಅಁ ಪ್ರತ್ಯಯವು ಬಂದಿರುವುದೆನಿಸುತ್ತದೆ. ಅಂದರೆ,

    • ಎಁ + ಅಁ + ಕೆ / ಗೆ => ಎನಁಗೆ => ಎನಗೆ (ಇಲ್ಲಿ ಅನುಸ್ವಾರವು ಲೋಪವಾಗಿದೆ).
    • ಎಁ + ಅಁ +ಕ್ => ಎನಁಕ್ / ಎನಂಕ್ => ಎನಕ್ಕ್ (ಇಲ್ಲಿ ಅನುಸ್ವಾರವು ಕ್ ಪ್ರತ್ಯಯಕ್ಕೆ ದ್ವಿತ್ವವನ್ನು ನೀಡಿದೆ).

    ಈ ಮೇಲಿನ ಪ್ರಕ್ರಿಯೆಗಳಲ್ಲಿ ಮಧ್ಯವರ್ತಿಯಾಗಿ ಕಾಣಿಸುವ ಸಾನುಸ್ವಾರವಾದ ಎನಁಗೆ, ಎನಁಕ್ಎನಂಕ್ ರೂಪಗಳು ಕನ್ನಡ, ತಮಿಳುಗಳಲ್ಲಿ ಕಾಣಿಸುವುದಿಲ್ಲ. ಆದರೆ ಎನಁಗೆ ಎನ್ನುವ ಸಾನುಸ್ವಾರವಾದ ಉಚ್ಚಾರಣೆ ಹವ್ಯಕದಲ್ಲಿ ಕಾಣುತ್ತದೆ. ಎನಁಕ್ / ಎನಂಕ್ ರೂಪಗಳು ತಮಿಳಿನಲ್ಲೆಲ್ಲೂ ಕಾಣುವುದಿಲ್ಲ. ಆದರೆ ಎಁ / ಎನ್ ಎನ್ನುವ ಸರ್ವನಾಮಧಾತುವಿಗೆ ಚತುರ್ಥ್ಯರ್ಥದ ಕ್ ಪ್ರತ್ಯಯವು ಬಂದಾಗ, ತುಳುವಿನ ಎಂಕ್ ಎನ್ನುವ ರೂಪವು ಸಿದ್ಧಿಸುವುದಲ್ಲದೆ ತಮಿಳಿನ ಎನಕ್ಕ್ ಎನ್ನುವ ರೂಪ ಸಿದ್ಧಿಸದು. ಹೀಗಾಗಿ, ಅನುಸ್ವಾರವು ದ್ವಿತ್ವವಾಗುವ ಪ್ರಕ್ರಿಯೆಯನ್ನು ಮೇಲೆಯೇ ಗಮನಿಸಿರುವುದರಿಂದಲೂ, ಎಂಕ್ ಎನ್ನುವ ಸಣ್ಣ ಪ್ರಕ್ರಿಯಾಭೇದವಿರುವ ಸಾನುಸ್ವಾರರೂಪ ತುಳುವಿನಲ್ಲಿ ಕಾಣುವುದರಿಂದಲೂ, ಎನಁಕ್ / ಎನಂಕ್ ರೂಪಗಳು ತಮಿಳಿನಲ್ಲಿ ಕಾಣದಿದ್ದರೂ, ಎಁ + ಅಁ +ಕ್ => ಎನಁಕ್ / ಎನಂಕ್ => ಎನಕ್ಕ್ ಎನ್ನುವ ಪ್ರಕ್ರಿಯೆಯೇ ಸರಿಯೆನಿಸುತ್ತದೆ.

    ಕನ್ನಡದಲ್ಲಿ ಎಂಗೆ (ಎಁ + ಕೆ / ಗೆ) ಎನ್ನುವ ರೂಪ ಕಾಣಿಸದಿದ್ದರೂ, ನನಗೆ (ನಁ + ಅಁ + ಕೆ / ಗೆ), ಹಾಗೂ ನಂಗೆ (ನಁ  + ಕೆ / ಗೆ), ಈ ಎರಡೂ ರೂಪಗಳು ಬಳಕೆಯಲ್ಲಿರುವುದು, ಚತುರ್ಥೀ ವಿಭಕ್ತಿಯ ಸಂದರ್ಭದಲ್ಲಿ, ದ್ವಿತೀಯಾ ವಿಭಕ್ತಿಪ್ರತ್ಯಯವು ಮಧ್ಯವರ್ತಿಯಾಗಿರುವ, ಆಗದಿರುವ ಎರಡೂ ಪ್ರಕ್ರಿಯೆಗಳಿರುವ ಸಾಧ್ಯತೆಗೆ ಪುಷ್ಟಿಯನ್ನು ನೀಡುತ್ತದೆ.

    ಉಕಾರಂತವಾದ ನಪುಂಸಕಲಿಂಗದ ಏಕವಚನದ ಸರ್ವನಾಮಗಳ (ಅದು, ಇದು, ಉದು) ಚತುರ್ಥೀ ವಿಭಕ್ತಿರೂಪಗಳಲ್ಲಿ ಕಾಣುವ ಸಜಾತೀಯದ್ವಿತ್ವವೂ (ಅದಕ್ಕೆ, ಇದಕ್ಕೆ, ಉದಕ್ಕೆ) ಚತುರ್ಥೀ ವಿಭಕ್ತಿರೂಪಗಳಲ್ಲಿ ಕೆಲವೊಮ್ಮೆ ದ್ವಿತೀಯಾ ವಿಭಕ್ತಿಯ ಅಁ ಪ್ರತ್ಯಯವು ಮಧ್ಯವರ್ತಿಯಾಗಿ ಬರುವ ನಿರೂಪಣೆಗೆ ಪುಷ್ಟಿಯನ್ನು ಕೊಡುತ್ತದೆನ್ನುವುದನ್ನು ಮುಂದೆ ನೋಡೋಣ.

    ಅಣಾಗಮದ ಪ್ರಕ್ರಿಯೆಯಲ್ಲಿ ಹೇಳಿದಂತೆ ಇಲ್ಲೂ ಮಧ್ಯವರ್ತಿಯಾಗಿ ಬಂದಿರುವ ದ್ವಿತೀಯಾ ವಿಭಕ್ತಿಪ್ರತ್ಯಯದಿಂದ ಮುಖ್ಯ ಚತುರ್ಥ್ಯರ್ಥಕ್ಕೆ ಅಷ್ಟೇನೂ ವ್ಯತ್ಯಾಸವಾಗಿರುವಂತಿಲ್ಲ.

    ಉಕಾರಾಂತವಾದ ನಪುಂಸಕಲಿಂಗದ, ಏಕವಚನದ ಸರ್ವನಾಮಗಳ ಚತುರ್ಥೀ ವಿಭಕ್ತಿರೂಪಗಳಲ್ಲಿರುವ ಅಕಾರ, ವಿಕಲ್ಪದ್ವಿತ್ವ

    ಉಕಾರಂತವಾದ ನಪುಂಸಕಲಿಂಗದ ಏಕವಚನದ ಸರ್ವನಾಮಗಳ (ಅದುಇದುಉದು) ಚತುರ್ಥೀ ವಿಭಕ್ತಿರೂಪಗಳಲ್ಲಿ ಅಕಾರವೂ, ವಿಕಲ್ಪವಾಗಿ ಚತುರ್ಥೀ ವಿಭಕ್ತಿಯ ಕೆ ಪ್ರತ್ಯಯಕ್ಕೆ ಸಜಾತೀಯದ್ವಿತ್ವವೂ ಕಾಣಿಸುತ್ತದಷ್ಟೇ.

    ಸಜಾತೀಯದ್ವಿತ್ವವಿದ್ದರೆ,

    • ಅದಕ್ಕೆ
    • ಇದಕ್ಕೆ
    • ಉದಕ್ಕೆ

    ಇಲ್ಲಿ, ಉದಕ್ಕೆ ಎನ್ನುವುದು ಈಗ ಸ್ವತಂತ್ರವಾಗಿ ಹೊಸಗನ್ನಡದಲ್ಲಿ ಕಾಣಿಸದಿದ್ದರೂ ಪದಗಳೊಳಗೆ ತುಣುಕಾಗಿ ಧಾರಾಳವಾಗಿ ಕಾಣಿಸುತ್ತದೆ. ಉದಾಹರಣೆಗೆ, ಯಾವುದಕ್ಕೆ, ಮಾಡುವುದಕ್ಕೆ ಇತ್ಯಾದಿ.

    ಸಜಾತೀಯದ್ವಿತ್ವವಿಲ್ಲದಿದ್ದರೆ,

    • ಅದಕೆ
    • ಇದಕೆ
    • ಉದಕೆ

    ಮೇಲೆ ನಿರೂಪಿಸಿರುವ, ಎನಗೆ, ಎನಕ್ಕ್ ರೂಪಗಳ ಪ್ರಕ್ರಿಯೆಯಂತೆ, ಇಲ್ಲೂ ದ್ವಿತೀಯಾ ವಿಭಕ್ತಿಯ ಅಂ / ಅಁ ಪ್ರತ್ಯಯವು ಮಧ್ಯವರ್ತಿಯಾಗಿ ಬರುವುದೆಂದುಕೊಂಡರೆ, ಈ ರೂಪಗಳು ಸಿದ್ಧಿಸುವ ಪ್ರಕ್ರಿಯೆಗಳು ಹೀಗಿರಬಹುದು.

    ದ್ವಿತೀಯಾ ವಿಭಕ್ತಿಪ್ರತ್ಯಯದ ಅಂತ್ಯಾನುಸ್ವಾರವು ಸಜಾತೀಯದ್ವಿತ್ವವಾಗುವುದಕ್ಕೆ,

    • ಅದು + ಅಁ + ಕೆ => ಅದಁ + ಕೆ => ಅದಂಕೆ => ಅದಕ್ಕೆ
    • ಇದು + ಅಁ + ಕೆ => ಇದಁ + ಕೆ => ಇದಂಕೆ => ಇದಕ್ಕೆ
    • ಉದು + ಅಁ + ಕೆ => ಉದಁ + ಕೆ => ಉದಂಕೆ => ಉದಕ್ಕೆ

    ದ್ವಿತೀಯಾ ವಿಭಕ್ತಿಪ್ರತ್ಯಯದ ಅಂತ್ಯಾನುಸ್ವಾರವು ಲೋಪವಾಗುವುದಕ್ಕೆ,

    • ಅದು + ಅಁ + ಕೆ => ಅದಁ + ಕೆ => ಅದಁಕೆ => ಅದಕೆ
    • ಇದು + ಅಁ + ಕೆ => ಇದಁ + ಕೆ => ಇದಁಕೆ => ಇದಕೆ
    • ಉದು + ಅಁ + ಕೆ => ಉದಁ + ಕೆ => ಉದಁಕೆ => ಉದಕೆ

    ಈ ಪ್ರಕ್ರಿಯೆಗಳು ತೋರಿಸುವ (ಅರ್ಧ)ಅನುಸ್ವಾರಯುಕ್ತವಾದ ರೂಪಗಳು (ಅದಁಕೆ/ಅದಂಕೆ, ಇದಁಕೆ/ಇದಂಕೆ, ಉದಁಕೆ/ಉದಂಕೆ) ಹೊಸಗನ್ನಡದಲ್ಲಿ ಕಾಣುವುದಿಲ್ಲ. ಹಳಗನ್ನಡದಲ್ಲೂ ನಾನು ಕಂಡದ್ದಿಲ್ಲ. ಆದರೆ, ರಾಬರ್ಟ್ ಕಾಲ್ಡ್ವೆಲ್ಲರು (Robert Caldwell) ತಮ್ಮ "A Comparative grammar of the Dravidian" ಎಂಬ ಉದ್ಗ್ರಂಥದಲ್ಲಿ, ಇಂತಹ ರೂಪಗಳು, ಹಳೆಯ ಗ್ರಾಂಥಿಕ ತಮಿಳಿನಲ್ಲಿ (ಅವರು High Tamil ಎನ್ನುತ್ತಾರೆ; ಇದನ್ನು ಹಳೆಯ ಗ್ರಾಂಥಿಕ ತಮಿಳು ಎಂದು ಅರ್ಥಯಿಸಿಕೊಂಡಿದ್ದೇನೆ; ಇದು ತಪ್ಪಾಗಿದ್ದರೆ ಬಲ್ಲವರು ದಯವಿಟ್ಟು ತಿದ್ದಬೇಕು), ಈ ರೂಪಗಳು ಕಂಡುಬರುತ್ತವೆ ಎಂದಿದ್ದಾರೆ.

    A Comparative grammar of the Dravidian, ಪುಟ 333,

    ... In addition to 'adu' and 'idu', the High Tamil sometimes uses 'adan' and 'idan'. These forms are probably derived from the annexation to 'ad' and 'id' of 'am,' which is dialectically and and ordinarily convertible to 'an.' ... 'am' is a formative of neuter nouns; and I conceive that it was not added to 'ad-u' and 'id-u,' till it had ceased to be known and felt that 'd' was itself a sign of the neuter singular. 'dan,' the final portion of 'adan' and 'idan' is sometimes used in the high dialect, instead of 'du,' as the pronominal termination of third person neuter singular of the participial noun, especially in the dative; e.g., 'śeÿgiRadan-ku' (euphonically 'śeÿgiRadaR-ku'), instead of 'śeÿgiRadu-kku,' for or to the doing.

    ಕಾಲ್ಡ್ವೆಲ್ಲರು ಹೇಳಿದ, ಅದರ್ಕೆ ಎನ್ನುವ ರೂಪ, ಹಳಗನ್ನಡದಲ್ಲೂ ಕಾಣುತ್ತದೆ. ಉದಾಹರಣೆಗೆ, ಕೇಶಿರಾಜನ ಶಬ್ದಮಣಿದರ್ಪಣದ ಸೂತ್ರ ೨೪೮ರಲ್ಲಿ ಅದರ್ಕಂಜದೆ (ಅದರ್ಕೆ + ಅಂಜದೆ => ಅದರ್ಕಂಜದೆ) ಎನ್ನುವ ಪ್ರಯೋಗವನ್ನು ಕಾಣಬಹುದು. ಕಾಲ್ಡ್ವೆಲ್ಲರು, ಅದರ್ಕೆ ಎನ್ನುವುದರ ತಮಿಳಿನ ರೂಪವಾದ ಅದರ್ಕ್ ಎನ್ನುವುದರ ಮೂಲರೂಪ, ಅದಂಕ್ ಎಂದೂ, ಅದು ಹಳೆಯ ಗ್ರಾಂಥಿಕ ತಮಿಳಿನಲ್ಲಿ ಕಂಡುಬರುವುದೆಂದೂ ನಿರೂಪಿಸಿದ್ದಾರೆ. ಅವರು ಇಲ್ಲಿ ಅನುಸ್ವಾರದ ಬದಲು ನಕಾರವನ್ನು ನಿರೂಪಿಸಿದ್ದಾರಾದರೂ, ಈ ಮೇಲಿನ ನಿರೂಪಣೆಯಂತೆ, ಇಲ್ಲಿ ಅನುಸ್ವಾರವನ್ನು ನಿರೂಪಿಸುವುದೇ ಸರಿ. ಆದರೆ, ಅನುಸ್ವಾರ ಅಥವಾ ನಕಾರವು ಱಕಾರವಾಗುವ (ಅಱ) ಪ್ರಕ್ರಿಯೆಯು ನನಗೆ ತಿಳಿದಿಲ್ಲ. ಕಾಲ್ಡ್ವೆಲ್ಲರ ವಿದ್ವತ್ತು, ಪರಿಶ್ರಮ, ಸಾಧನೆಗಳು ತುಂಬ ಆದರಣೀಯ; ದ್ರಾವಿಡಭಾಷೆಗಳ ತುಲನಾತ್ಮಕ ಆಧ್ಯಯನಕ್ಕೆ ಅವರು ಹಾಕಿಕೊಟ್ಟ ದಾರಿ ಅನುಸರಣೀಯ. ಆದರೆ, ದ್ರಾವಿಡಭಾಷೆಗಳ ಕುರಿತಾಗಿ ಅವರು ನಿರೂಪಿಸಿರುವ ವಿಚಾರಗಳಲ್ಲಿ (ನನಗೆ ತಿಳಿಯುವ ಕನ್ನಡ, ತುಳುಗಳ ವಿಚಾರಗಳಲ್ಲಂತೂ) ಎಲ್ಲವೂ ಸ್ವೀಕಾರ್ಯವಲ್ಲ. ಹಾಗಾಗಿ, ಅವರು ಮೇಲೆ ಉದ್ಧರಿಸಿದಂತೆ ಹೇಳಿದ, ಅನುಸ್ವಾರವು ಱಕಾರ/ಅಱವಾಗುವ ಪ್ರಕ್ರಿಯೆ ಸಾಧುವೋ, ಅಲ್ಲವೋ ಎನ್ನುವುದನ್ನು ಬೇರೆ ಆಧಾರಗಳಿಲ್ಲದೆ ನಿರ್ಧರಿಸಲಾರೆ. ತಮಿಳು ಬಲ್ಲವರು ದಯವಿಟ್ಟು ತಿಳಿಸಬೇಕು. ಆದರೆ ಅವರ ಈ ವಿಚಾರಸರಣಿ ಸರಿಯಾಗಿದ್ದರೆ, ಅದಁಕೆ/ಅದಂಕೆಇದಁಕೆ/ಇದಂಕೆಉದಁಕೆ/ಉದಂಕೆ ಎನ್ನುವ ಅನುಸ್ವಾರಯುಕ್ತವಾದ ರೂಪದ ಸಾಧುತ್ವಕ್ಕೆ, ಮತ್ತು ಇಲ್ಲಿ ದ್ವಿತೀಯಾ ವಿಭಕ್ತಿಯ ಅಂ / ಅಁ ಪ್ರತ್ಯಯವು ಮಧ್ಯವರ್ತಿಯಾಗಿ ಬರುವುದಕ್ಕೆ ಪುಷ್ಟಿ ಸಿಗಬಹುದು.

      ಅನ್ನು ಎಂಬಲ್ಲಿ ದ್ವಿತೀಯಾ ವಿಭಕ್ತಿಪ್ರತ್ಯಯದಲ್ಲಿ ಕಾಣುವ ದ್ವಿತ್ವ

      ದ್ವಿತೀಯಾ ವಿಭಕ್ತಿಪ್ರತ್ಯಯದ (ಅರ್ಧ)ಅನುಸ್ವಾರವು ಸ್ವರವು ಪರವಾದಾಗ ನಕಾರವಾಗುವುದನ್ನು ಮೇಲೆ ನೋಡಿದೆವಷ್ಟೇ (ರಾಮಁ + ಅಁ  + ಉ => ರಾಮನಁ + ಉ => ರಾಮನನು / ರಾಮನನ್ನು). ಇಲ್ಲಿ ರಾಮನನ್ನು ಎಂಬಲ್ಲಿ ನಕಾರವು ದ್ವಿತ್ವವಾಗಿರುವುದಕ್ಕೆ ಕಾರಣ ಎರಡು ರೀತಿಯಿರಬಹುದೆನಿಸುತ್ತದೆ.

      ಒಂದು, ಕೇಶಿರಾಜನು ಹೇಳಿದ ದ್ವಿತ್ವಸಂಧಿಯಂತೆ (ಸೂತ್ರ ೭೯, ೮೦, ೮೧ನ್ನು ನೋಡಬಹುದು), ಒಂದೇ ಲಘ್ವಕ್ಷರದ (ಹ್ರಸ್ವಾಕ್ಷರದಂತೆ ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುವಂತಹುದರ) ಮೇಲೆ ವ್ಯಂಜನಾಂತವಿದ್ದರೆ, ಅ ವ್ಯಂಜನಕ್ಕೆ ಸ್ವರವು ಪರವಾದಾಗ ದ್ವಿತ್ವವಾಗುತ್ತದೆ. ಮೊದಲು ಗುರು (ಅಂದರೆ, ದೀರ್ಘಾಕ್ಷರದಂತೆ ಅಥವಾ ಪರವಾಗಿ ಒತ್ತಕ್ಷರವಿದ್ದಂತೆ ಎರಡು ಮಾತ್ರಾಕಾಲದಲ್ಲಿ, ಉಚ್ಚರಿಸುವಂತಹವು) ಅಥವಾ ಅನೇಕಾಕ್ಷರಗಳಿದ್ದರೆ ದ್ವಿತ್ವವಿಲ್ಲ. ಅಂದರೆ,

      • ಅಁ + ಉ => ಅನ್ + ಉ => ಅನ್ನು (ಮೊದಲು ಒಂದೇ ಲಘುವಿರುವುದರಿಂದ ದ್ವಿತ್ವ)

      ಆದರೆ ಅನು ಎನ್ನುವ ದ್ವಿತ್ವವಿಲ್ಲದ ರೂಪವೂ ಕಾಣಿಸುವುದಕ್ಕೆ, ಅದು ಯಾವಾಗಲೂ ಪ್ರತ್ಯಯವಾಗಿ ಪದಗಳ ಕೊನೆಯಲ್ಲಿ ಕಾಣಿಸುವುದರಿಂದಲೂ, ಹಾಗಾದಾಗ ಅದರ ಮೊದಲು ಅನೇಕಾಕ್ಷರಗಳಿರುವುದರಿಂದಲೂ ಇರಬೇಕೆಂಬ ಸಮಾಧಾನವನ್ನು ಕೊಡಬಹುದು (ಅನೇಕಾಕ್ಷರಗಳಿದ್ದರೆ ದ್ವಿತ್ವವಿಲ್ಲವೆನ್ನುವುನ್ನು ಗಮನಿಸಬಹುದು). ಅಂದರೆ

      • ರಾಮಁ + ಅಁ  + ಉ => (ರಾಮಁ + ಅಁ)  + ಉ => ರಾಮನಁ + ಉ => ರಾಮನನು (ಮೊದಲು ಅನೇಕಾಕ್ಷರಗಳಿರುವುದರಿಂದ ದ್ವಿತ್ವವಿಲ್ಲ)

      ಹಾಗಾದರೆ, ಅನ್ನು ಎನ್ನುವುದೂ ಪ್ರತ್ಯಯವಾಗಿ ಪದಗಳ ಕೊನೆಯಲ್ಲಿ ಕಾಣಿಸುತ್ತದೆ. ಅಲ್ಲೂ ಮೊದಲು ಅನೇಕಾಕ್ಷರಗಳಿದ್ದು, ದ್ವಿತ್ವವಾಗಬಾರದೆಂದರೆ, ಅನ್ನು ಎನ್ನುವುದು ಮೊದಲೇ ಸ್ವತಂತ್ರವಾಗಿ ಸಿದ್ಧಿಸಿ, ಆಮೇಲೆ ಪ್ರತ್ಯಯವಾಗಿ ಬಂದಿದೆ ಎನ್ನುವ ಸಮಾಧಾನವನ್ನು ಕೊಡಬಹುದು. ಅಂದರೆ,

      • ರಾಮಁ + ಅಁ  + ಉ => ರಾಮಁ + (ಅಁ  + ಉ) => ರಾಮಁ  + (ಅನ್ + ಉ) => ರಾಮಁ + ಅನ್ನು (ಮೊದಲು ಒಂದೇ ಲಘುವಿರುವುದರಿಂದ ದ್ವಿತ್ವ) => ರಾಮನನ್ನು

      ಹೀಗೆ, ಪ್ರಕ್ರಿಯೆಗಳು ಕೆಲಸಮಾಡುವ ಅನುಕ್ರಮವು ಬೇರೆಯಾದಾಗ ಸಿದ್ಧಿಸುವ ರೂಪಗಳೂ ಕೆಲವೊಮ್ಮೆ ಬೇರೆಯಾಗುತ್ತವೆ.

      ಇಲ್ಲಿ ಹೇಳಿರುವ ದ್ವಿತ್ವಸಂಧಿಗೂ, ಅಚ್ಚಗನ್ನಡಛಂದಸ್ಸುಗಳ ಅಂಶಗಣಗಳಿಗೂ (ಬ್ರಹ್ಮ, ವಿಷ್ಣು, ರುದ್ರಗಣಗಳು) ಹತ್ತಿರದ ಸಂಬಂಧವಿರುವಂತಿದೆ. ಸೇಡಿಯಾಪು ಅವರು ತಮ್ಮ "ಕನ್ನಡಛಂದಸ್ಸು" ಎನ್ನುವ ಕನ್ನಡಛಂದಸ್ಸುಗಳ ಒಳನೋಟ ತೋರಿಸುವ ಗ್ರಂಥದಲ್ಲಿ, ಎಲ್ಲ ಅಂಶಗಣಗಳ ಆದಿಯಲ್ಲಿ ಎರಡು ಲಘು ಅಥವಾ ಒಂದು ಗುರುವಿರಬೇಕು, ಒಂದೇ ಲಘುವಿರಬಾರದು ಎನ್ನುವ ಲಕ್ಷಣ / ನಿಯಮವನ್ನು ವಿಶ್ಲೇಷಿಸುತ್ತಾ, ಈ ಲಕ್ಷಣ / ನಿಯಮವು ಗಣಾದಿಯಲ್ಲಿ ಲಗಂ (ಅಂದರೆ, ಒಂದು ಲಘುವಾದಮೇಲೆ ಒಂದು ಗುರು) ಬರದಂತೆ ನೋಡಿಕೊಳ್ಳುವುದಕ್ಕೇ ಬಂದಿದೆ, ಲಗಂ ಗತಿಯ ತಿರಸ್ಕಾರ (ಹೆಚ್ಚಾಗಿ ಗಣಾದಿಯಲ್ಲಿ) ಕನ್ನಡವಷ್ಟೇ ಅಲ್ಲ, ಇತರ ದ್ರಾವಿಡಭಾಷೆಗಳ ಜಾಯಮಾನವೂ ಆಗಿದೆ ಎನ್ನುತ್ತಾರೆ. ಇದು ಸರಿಯೆನಿಸುತ್ತದೆ. ಇದೇ ಕಾರಣಕ್ಕೆ, ಕನ್ನಡದಲ್ಲಿ ಅಕ್ಷರವೃತ್ತ, ಮಾತ್ರಾಜಾತಿಛಂದಸ್ಸುಗಳಲ್ಲೂ ಜಗಣವು (ಲಘು, ಗುರು, ಲಘು) ಅಷ್ಟಾಗಿ ಕಾಣಿಸುವುದಿಲ್ಲ (ಅಥವಾ ಕಾಣಿಸುವಲ್ಲಿ ಗಣವಿನ್ಯಾಸದ ಕಡೆಗೆ ಗಮನವಿರಿಸಬೇಕಾಗುತ್ತದೆ) ಎನಿಸುತ್ತದೆ. ದ್ವಿತ್ವಸಂಧಿಯೂ ಗಣಾದಿಯಲ್ಲಿ ಒಂದೇ ಲಘುವಿರುವಾಗ ಅದನ್ನು ಗುರುವನ್ನಾಗಿ ಪರಿವರ್ತಿಸಲೆಂದೇ ಬರುತ್ತದೆಂದೆನಿಸುತ್ತದೆ. ಒತ್ತಕ್ಷರದ ಮೊದಲಿನ ಲಘ್ವಕ್ಷರವೂ ಗುರುವಾಗುತ್ತೆಂಬುದನ್ನು ಗಮನಿಸಬಹುದು.

      ಎರಡು, ಅನು, ಅನ್ನು ಎಂಬ ಎರಡು ರೂಪಗಳಿಗೆ ಮೇಲಿನ ದ್ವಿತ್ವಸಂಧಿಯ ಸಮಾಧಾನವೇ ಸರಿಯಾದುದೆನಿಸಿದರೂ, ಇನ್ನೊಂದು ಬೇರೆಯೇ ರೀತಿಯ ಸಮಾಧಾನವನ್ನೂ ನೋಡಬಹುದು. ಅರ್ಧಾನುಸ್ವಾರವು ಬೇರೆ ರೂಪಗಳನ್ನು (ಲೋಪವಾಗುವುದೊಂದನ್ನು ಬಿಟ್ಟರೆ) ತಾಳುವ ಸಂದರ್ಭದಲ್ಲಿ, ರೂಪಾಂತರವಾದಮೇಲೂ ಅರ್ಧಾನುಸ್ವಾರ / ಅನುನಾಸಿಕತೆ ಉಳಿದುಕೊಳ್ಳುವುದನ್ನು ಗಮನಿಸಬಹುದು. ಉದಾಹರಣೆಗೆ,

      • ರಾಮಁ  + ಉ => ರಾಮನು -  ನಕಾರವು ಅನುನಾಸಿಕವೇ ಆಗಿದೆ.
      • ಫಲಁ + ಉ => ಫಲವು - ಇಲ್ಲಿ ವಕಾರವು ಸಾನುನಾಸಿಕವಾಗಿದೆ ಎಂದು ಸೂಚಿಸಿರುವುದನ್ನು ಸೇಡಿಯಾಪು ಅವರ  (ಮೇಲೆ ಉದ್ಧರಿಸಿದ) ಚಿಂತನಾಂಶದಲ್ಲಿ ನೋಡಬಹುದು.
      • ತಮಿಳಿನಲ್ಲಿ, ಅಪರಂ => ಅಪ್ರೊಁ ಎಂಬಲ್ಲಿ ಒಕಾರವು ಸಾನುನಾಸಿಕವಾಯೇ ಇದೆ.
      • ತುಳುವಲ್ಲಿ, ಮರಁ + ಕ್ => ಮರೊಁ + ಕ್ => ಮರೊಂಕ್ ಎಂಬಲ್ಲಿ ಅರ್ಧಾನುಸ್ವಾರವು ಸಾನುನಾಸಿಕವಾದ ಒಕಾರವಾಗಿ, ಆಮೇಲೆ ಪೂರ್ಣಾನುಸ್ವಾರವೇ ಆಗಿದೆ.

      ಹೀಗೆ ಅನುಸ್ವಾರದ ರೂಪಾಂತರಗಳೂ ಸ್ವಲ್ಪಮಟ್ಟಿಗೆ ಸಾನುನಾಸಿಕವಾಗಿರುವುದರಿಂದಲೂ, ಅನು, ಅನ್ನು ಎಂಬೆರಡು ರೂಪಗಳು ಸಿದ್ಧಿಸಬಹುದು. ಅಂದರೆ,

        • ಅಁ + ಉ => ಅನ್ + ಉ => ಅನು
        • ಅಁ + ಉ => ಅನ್ಁ + ಉ => ಅನ್ನು

        ಈ ಎರಡರಲ್ಲಿ, ದ್ವಿತ್ವಸಂಧಿಯ ಪ್ರಕ್ರಿಯೆಯೇ ಹೆಚ್ಚು ಸೂಕ್ತವೆನಿಸುತ್ತದೆ.

        ಸಪ್ತಮೀ ವಿಭಕ್ತಿಪ್ರತ್ಯಯಗಳಾದ ಅಲಿ, ಅಲ್ಲಿ ಎಂಬ ರೂಪಗಳೂ, ಇದೇ ರೀತಿ, ಮೂಲ ಸಪ್ತಮೀ ವಿಭಕ್ತಿಪ್ರತ್ಯಯಗಳಲ್ಲೊಂದಾದ ಅಲ್ ಪ್ರತ್ಯಯಕ್ಕೆ ಇಕಾರ ಪರವಾದಾಗ ಪ್ರಕ್ರಿಯಾನುಕ್ರಮವ್ಯತ್ಯಾಸದಿಂದ ಉಂಟಾಗುವ ವಿಕಲ್ಪದ ದ್ವಿತ್ವದಿಂದಲೇ ಸಿದ್ಧಿಸಿರಬೇಕು. ಅಂದರೆ,

        • ಅಲ್ + ಇ => ಅಲ್ಲಿ
        • ರಾಮಁ + ಅಲ್ + ಇ => ರಾಮಁ + (ಅಲ್ + ಇ) => ರಾಮಁ + ಅಲ್ಲಿ => ರಾಮನಲ್ಲಿ
        • ರಾಮಁ + ಅಲ್ + ಇ => (ರಾಮಁ + ಅಲ್) + ಇ => ರಾಮನಲ್ + ಇ => ರಾಮನಲಿ

        ಅಲ್ಲಿ ಎಂಬುದು ಪ್ರತ್ಯಯವಾಗಿಯೂ, ಸ್ವತಂತ್ರಪದವಾಗಿಯೂ ಕಾಣಿಸಿದರೆ, ಅಲಿ ಎಂಬುದು ಕೇವಲ ಪ್ರತ್ಯಯವಾಗಿ ಮಾತ್ರ ಕಾಣುವುದೂ ಈ ನಿರೂಪಣೆಯನ್ನು ಸಮರ್ಥಿಸುತ್ತದೆ.

        ಈಗಾಗಲೇ ಮೇಲೆ ನೋಡಿದ, ವಿಕಲ್ಪದಿಂದ ಕಾಣುವ ಚತುರ್ಥ್ಯರ್ಥದ ಕೆ ಪ್ರತ್ಯಯದ ದ್ವಿತ್ವಕ್ಕೂ (ಮರಕ್ಕೆ / ಮರಕೆ), ಇಲ್ಲಿ ಕೊಟ್ಟಿರುವ ಪ್ರಕ್ರಿಯಾನುಕ್ರಮವ್ಯತ್ಯಾಸದ ಕಾರಣವನ್ನೂ ಹೇಳಬಹುದೇನೋ. ಆದರೆ, ಅಲ್ಲಿ ಮೊದಲು ಅನೇಕಾಕ್ಷರಗಳಿರುವ ಕಾರಣ, ಅನುಸ್ವಾರವೇ ದ್ವಿತ್ವವನ್ನುಂಟು ಮಾಡಿರಬೇಕೆನಿಸುತ್ತದೆ.

        ದ್ವಿತೀಯಾ ವಿಭಕ್ತಿಪ್ರತ್ಯಯದ (ಅರ್ಧ)ಅನುಸ್ವಾರದ ಸ್ವರೂಪ

        ಮೇಲೆ ನಿರೂಪಿಸಿದ ಅಂಶಗಳೆಲ್ಲವನ್ನೂ ಒಟ್ಟಾಗಿ ನೋಡಿದಾಗ, ಅಂ / ಅಁ ಎನ್ನುವುದೇ ದ್ವಿತೀಯಾ ವಿಭಕ್ತಿಪ್ರತ್ಯಯದ ಮೂಲರೂಪ, ಕನ್ನಡ ಕೈಪಿಡಿಯಲ್ಲಿ ನಿರೂಪಿಸಿದಂತೆ ಅನ್ ಎಂಬುದಲ್ಲ ಎನ್ನಬಹುದೆನಿಸುತ್ತದೆ. ಈ ದ್ವಿತೀಯಾ ವಿಭಕ್ತಿಪ್ರತ್ಯಯದ (ಅರ್ಧ)ಅನುಸ್ವಾರದ ಕೆಲವು ಮುಖ್ಯಸ್ವರೂಪಗಳು ಹೀಗಿವೆ.

        • ಸ್ವರವು ಪರವಾದಾಗ ನಕಾರವಾಗುವುದು (ಕಾಡುಁ + ಅಁ + ಉ => ಕಾಡಁ + ಉ => ಕಾಡನು / ಕಾಡನ್ನು)
        • ಕೆಲವೊಮ್ಮೆ ಲೋಪವಾಗುವುದು (ಮರಁ + ಅಁ => ಮರವಁ => ಮರವ)
        • ದಿಗ್ವಾಚಕಗಳ ಕೆಲವು ವಿಭಕ್ತಿಗಳಲ್ಲಿ (ತೃತೀಯಾ, ಷಷ್ಠೀ ಇತ್ಯಾದಿ) ಮಧ್ಯವರ್ತಿಯಾಗಿ ಬಂದಾಗ, ಣಕಾರವಾಗುವುದು (ಮೂಡುಁ + ಅಁ + ಇಁ => ಮುಡು + ಅಁ + ಇಁ  => ಮೂಡಁ + ಇಁ => ಮೂಡಣಿಂ, ನಡುಁ + ಅಁ + ಅ => ನಡುವಁ + ಅ => ನಡುವಣ)
        • ಕೆಲವೆಡೆ ಚತುರ್ಥೀ ವಿಭಕ್ತಿಯಲ್ಲಿ ಮಧ್ಯವರ್ತಿಯಾಗಿ ಬಂದಾಗ ಪೂರ್ಣಾನುಸ್ವಾರವಾಗಿ ಅಥವಾ ಕೆ / ಗೆ ಪ್ರತ್ಯಯದ ಆದಿಯ ಕವರ್ಗದ ಅನುನಾಸಿಕವಾದ ಙಕಾರವಾಗಿ, ಮತ್ತೆ ಲೋಪವಾಗುವುದು (ಎಁ + ಅಁ + ಕೆ / ಗೆ => ಎನಁಗೆ => ಎನಗೆ).
        • ಕೆಲವೆಡೆ ಚತುರ್ಥೀ ವಿಭಕ್ತಿಗಳಲ್ಲಿ ಮಧ್ಯವರ್ತಿಯಾಗಿ ಬಂದಾಗ ಪೂರ್ಣಾನುಸ್ವಾರವಾಗಿ ಅಥವಾ ಕ್ ಪ್ರತ್ಯಯದ ಆದಿಯ ಕವರ್ಗದ ಅನುನಾಸಿಕವಾದ ಙಕಾರವಾಗಿ, ಮತ್ತೆ ಕ್ ಪ್ರತ್ಯಯಕ್ಕೆ ದ್ವಿತ್ವವನ್ನುಂಟುಮಾಡುವುದು (ಎಁ + ಅಁ +ಕ್ => ಎನಁಕ್ / ಎನಂಕ್ => ಎನಕ್ಕ್).

        ತೃತೀಯಾ ವಿಭಕ್ತಿಪ್ರತ್ಯಯದಲ್ಲಿರುವ (ಅರ್ಧ)ಅನುಸ್ವಾರ

        ತೃತೀಯಾ ವಿಭಕ್ತಿ ಪ್ರತ್ಯಯವನ್ನು ಕೇಶಿರಾಜನು ಇಂ ಎಂದಿರುವುದನ್ನೂ, "ಕನ್ನಡ ಕೈಪಿಡಿ"ಕಾರರು ಇನ್ ಎಂದಿರುವುದನ್ನು ಮೇಲೆ ಕಂಡಿದ್ದೇವಷ್ಟೇ. ಇಲ್ಲಿ ಅಂತ್ಯದಲ್ಲಿರುವುದು (ಅರ್ಧ)ಅನುಸ್ವಾರವೋ, ನಕಾರವೋ ಎಂಬುದನ್ನು ನಿರ್ಧರಿಸಲು ಮೇಲೆ ಅನುಸರಿಸಿದ ದಾರಿಯಲ್ಲೇ ಅದರ ವಿವಿಧರೂಪಗಳನ್ನು ಗಮನಿಸೋಣ.

        ಇಂದ ಎನ್ನುವಲ್ಲಿ ಪೂರ್ಣಾನುಸ್ವಾರ ಅಥವಾ ದಕಾರವಿರುವ ತವರ್ಗದ ಅನುನಾಸಿಕವು ಕಂಡರೂ, ಆ ಅನುನಾಸಿಕವು ನಕಾರವೇ ಆಗಿದೆ. ಆದರೆ ಬೇರೆ ರೂಪಾಂತರ ಅಥವಾ ಪ್ರಕ್ರಿಯೆಗಳೂ ಇವೆಯೇ?

        ತೃತೀಯಾ ವಿಭಕ್ತಿಪ್ರತ್ಯಯದ ಅನುಸ್ವಾರಲೋಪ

        ತೃತೀಯಾ ವಿಭಕ್ತಿಪ್ರತ್ಯಯದ ಅನುಸ್ವಾರವು ಲೋಪವಾಗುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. "ಕನ್ನಡ ಕೈಪಿಡಿ"ಯಲ್ಲೂ (ಮೇಲೆ ಉದ್ಧರಿಸಿದಂತೆ) ಇದನ್ನು ಗಮನಿಸಿ ನಕಾರಲೋಪವೆಂದು ಕರೆದಿದ್ದಾರೆ. ಉದಾಹರಣೆಗೆ, ಪುರಂದರದಾಸರು ತಮ್ಮ ಪ್ರಸಿದ್ಧವಾದ ರಚನೆ "ಭಾಗ್ಯದ ಲಕ್ಷ್ಮೀ ಬಾರಮ್ಮಾ"ದಲ್ಲಿ "ದಿನಕರಕೋಟಿ ತೇಜದಿ ಹೊಳೆಯುವ" ಎಂದಿದ್ದಾರೆ. ಇಲ್ಲಿ ತೇಜದಿ ಅಂದರೆ ತೇಜದಿಂದ ಎಂದೇ ಅರ್ಥ. ಇದು ತೃತೀಯಾ ವಿಭಕ್ತಿಪ್ರತ್ಯಯದ ಅನುಸ್ವಾರವು ಲೋಪವಾಗಿಯೇ ಸಿದ್ಧಿಸಿದ ರೂಪ. ಅಂದರೆ,

        • ತೇಜಁ + ಇಁ => ತೇಜ + ಇಁ => ತೇಜದಿಁ => ತೇಜದಿ

        ಹೀಗೆ ಸಿದ್ದಿಸುವ ಇಕಾರವು ಸಪ್ತಮ್ಯರ್ಥದಲ್ಲೂ ಕಾಣಿಸುವುದನ್ನು (ಅಮರ ಚಿತ್ರಕಥೆಯ ನಳದಮಯಂತಿ ಕಥೆಯ ಕನ್ನಡ ಆವೃತ್ತಿಯಲ್ಲಿ, ರೂಪಂತರಗೊಂಡ ನಳನನ್ನು ಗುರುತಿಸಲು ದಮಯಂತಿ ಹೇಳುವ ಪದ್ಯರೂಪದ ಒಗಟಿನಲ್ಲಿ "ನೆಲದಿ ಹೊಳೆವ ರತುನ ಬಿತ್ತು" ಎಂದು ಓದಿದ ನೆನಪು; ಪುರಂದರದಾಸರ "ಭಾಗ್ಯದ ಲಕ್ಷ್ಮೀ ಬಾರಮ್ಮಾ"ದಲ್ಲೇ ಮುಂದೆ "ಚಿತ್ತದಿ ಹೊಳೆಯುವ ಪುತ್ಥಳಿ ಬೊಂಬೆ" ಎಂದಿರುವುದನ್ನು ಗಮನಿಸಬಹುದು), ಕೇಶಿರಾಜನೇ ಮೊದಲಾಗಿ ಎಲ್ಲ ಪ್ರಾಚೀನ, ಆಧುನಿಕ ವೈಯಾಕರಣರು ಗಮನಿಸಿದ್ದಾರೆ. ಇದಕ್ಕೆ ಒಂದು ಮಟ್ಟಿನ ಸಮಾಧಾನವನ್ನು ಸೇಡಿಯಾಪು ಅವರು ನೀಡಿರುವುದನ್ನು "ಎಕಾರದ ಆವೇಶ"ದಲ್ಲಿ ನೋಡಬಹುದು.

        "ಕನ್ನಡ ಕೈಪಿಡಿ"ಯಲ್ಲಿ, ಕೆಲವೊಮ್ಮೆ ಪ್ರತ್ಯಯವಾಗಿ ಬರುವ ಎಕಾರವು, ನಡುಗನ್ನಡದಲ್ಲಿ ಇಕಾರವಾಗಿದೆ ಎಂದಿರುವುದನ್ನು ಮೇಲೆ ಉದ್ಧರಿಸಿದಲ್ಲಿ ನೋಡಬಹುದು. ಆದರೆ ಇದು ಸರಿಯಾಗಿರಲಾರದು, ಇಲ್ಲಿ ನಿರೂಪಿಸಿರುವ ಅನುಸ್ವಾರವು ಲೋಪವಾಗುವ ಪ್ರಕ್ರಿಯೆಯ ವ್ಯಾಪ್ತಿಯನ್ನು ನೋಡಿದರೆ ಇಂಇಁ ಪ್ರತ್ಯಯದ ಅನುಸ್ವಾರವು ಲೋಪವಾಗಿಯೇ ಇಕಾರವು ಸಿದ್ಧಿಸಿದೆ ಎನ್ನುವುದೇ ಯುಕ್ತವೆನಿಸುತ್ತದೆ. ಈ ನಿಲುವಿಗೆ ಪೂರಕವಾದ ಇನ್ನೊಂದು ವಿಷಯವನ್ನು, ಮುಂದೆ ಸಪ್ತಮೀ ವಿಭಕ್ತಿಪ್ರತ್ಯಯರೂಪಗಳಾದ ಅಲಿ, ಅಲ್ಲಿ ಎಂಬಲ್ಲಿ ಕಾಣಿಸುವ ಇಕಾರದ ಸಂದರ್ಭದಲ್ಲಿ ನೋಡಬಹುದು.

        ಚತುರ್ಥಿ ವಿಭಕ್ತಿಯಲ್ಲಿ ಕೆಲವೆಡೆ ಕಾಣುವ ಇಕಾರ ಹಾಗೂ ಅದರೊಡನೆ ವಿಕಲ್ಪದಿಂದ ಕಾಣುವ ಅನುಸ್ವಾರ

        ಚತುರ್ಥಿ ವಿಭಕ್ತಿಯ ಸಂದರ್ಭದಲ್ಲಿ ಕೆಲವೆಡೆ ಇಕಾರ ಕಾಣಿಸುವುದನ್ನೂ (ಮಡುವಿಗೆ, ಕಾಲಿಗೆ, ರಾಮನಿಗೆ ಇತ್ಯಾದಿ), ಅ ಇಕಾರದೊಂದಿಗೆ ವಿಕಲ್ಪದಿಂದ ಅನುಸ್ವಾರವೂ ಕಾಣಿಸುವುದನ್ನೂ (ಮಡುವಿಂಗೆ, ಕಾಲಿಂಗೆ, ನವಿಲಿಂಗೆ ಇತ್ಯಾದಿ) ಮೇಲೆ ನೋಡಿದೆವಷ್ಟೇ. ಇದಕ್ಕೆ ಇಲ್ಲಿ ಮಧ್ಯವರ್ತಿಯಾಗಿ ತೃತೀಯಾ ವಿಭಕ್ತಿಪ್ರತ್ಯಯವಾದ ಇಂ / ಇಁ ಬಂದಿರುವುದೇ ಕಾರಣವೆನಿಸುತ್ತದೆ. ಎಕೆಂದರೆ, ಇಂ / ಇಁ ಪ್ರತ್ಯಯವಿಲ್ಲದಿದ್ದರೆ ಬೇರೆ ರೂಪಗಳು ಸಿದ್ಧಿಸುತ್ತವೆ.

        • ಕಾಲ್ + ಕೆ / ಗೆ => ಕಾಲ್ಗೆ - ಈ ರೂಪವೂ ಕನ್ನಡದಲ್ಲಿದೆ
        • ಮಡುಁ + ಕೆ / ಗೆ => ಮಡುಂಗೆ => ಮಡುಗೆ - ಈ ರೂಪಗಳು ಕನ್ನಡದಲ್ಲಿಲ್ಲ.

        ಆದರೆ ಮಧ್ಯವರ್ತಿಯಾಗಿ ಇಂ / ಇಁ  ಪ್ರತ್ಯಯ ಬಂದಾಗ, ಇಕಾರಯುಕ್ತವಾದ ಹಾಗೂ ವಿಕಲ್ಪದಿಂದ ಸಾನುಸ್ವಾರವಾದ ರೂಪಗಳು ಸಿದ್ಧಿಸುತ್ತವೆ. ಅಂದರೆ,

        • ಕಾಲ್ + ಇಁ + ಕೆ / ಗೆ => ಕಾಲಿಁ + ಕೆ / ಗೆ => ಕಾಲಿಂಗೆ => ಕಾಲಿಗೆ
        • ಮಡುಁ + ಇಁ + ಕೆ / ಗೆ => ಮಡುವಿಁ + ಕೆ / ಗೆ => ಮಡುವಿಂಗೆ => ಮಡುವಿಗೆ
        • ರಾಮಁ + ಇಁ + ಕೆ / ಗೆ => ರಾಮನಿಁ + ಕೆ / ಗೆ => ರಾಮನಿಂಗೆ => ರಾಮನಿಗೆ

        ಇಲ್ಲಿ ಅನುಸ್ವಾರವಿಲ್ಲದ ಇಕಾರ ರೂಪಗಳು (ಮಡುವಿಗೆ, ಕಾಲಿಗೆ, ರಾಮನಿಗೆ ಇತ್ಯಾದಿ) ಇಂ / ಇಁ  ಪ್ರತ್ಯಯದ (ಅರ್ಧ)ಅನುಸ್ವಾರವು ಲೋಪವಾಗಿ ಸಿದ್ಧಿಸಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಸಾನುಸ್ವಾರವಾದ ರೂಪಗಳೂ ಕನ್ನಡದಲ್ಲಿ ಕೆಲವೆಡೆ (ಹವ್ಯಕಕನ್ನಡದಲ್ಲಿ ಇನ್ನೂ ಹೆಚ್ಚಾಗಿ) ಕಾಣಿಸುವುದನ್ನು ಗಮನಿಸಬಹುದು. ಇಲ್ಲೂ ಪ್ರಮುಖವಾದ ಚತುರ್ಥ್ಯರ್ಥಕ್ಕೆ, ಮಧ್ಯವರ್ತಿಯಾದ ದ್ವಿತೀಯಾ ವಿಭಕ್ತಿಪ್ರತ್ಯಯವು ಹೆಚ್ಚಿನ ಅರ್ಥವ್ಯತ್ವಾಸವನ್ನೇನೂ ಮಾಡಿಲ್ಲವೆನಿಸುತ್ತದೆ.

        ಹಲವು ವಿಭಕ್ತಿರೂಪಗಳಲ್ಲಿ ಕಾಣುವ ಇನಾಗಮ

        ವಿಭಕ್ತಿರೂಪಗಳಲ್ಲಿ ಹಲವೆಡೆ ಇನ ಎನ್ನುವ ತುಣುಕು ಕಾಣಿಸುವುದನ್ನು ಮೇಲೆ ನೋಡಿದೆವಷ್ಟೇ (ಕಾಲಿನಿಂದ, ಮಡುವಿನ, ಕಾಡಿನಲ್ಲಿ ಇತ್ಯಾದಿ). ಇದನ್ನು ಕೇಶಿರಾಜನು ಶಬ್ದಮಣಿದರ್ಪಣದಲ್ಲಿ ಇನಾಗಮ ಎಂದು ನಿರೂಪಿಸಿದ್ದಾನೆ (ಸೂತ್ರ ೧೧೮ನ್ನು ನೋಡಬಹುದು). ಈ ಇನಾಗಮದ ಹಿಂದೆಯೂ (ಮೇಲೆ ಅಣಾಗಮದಲ್ಲಿ ನೋಡಿದಂತೆ) ಹೆಚ್ಚಿನ ವ್ಯಾಕರಣಪ್ರಕ್ರಿಯೆಯಿರಬೇಕೆನಿಸುತ್ತದೆ. ಎಕೆಂದರೆ, (ಮೇಲೆ ನಿರೂಪಿಸಿದಂತೆ) ಸಾಮಾನ್ಯವಾಗಿ, ಇನಾಗಮವಿಲ್ಲದ ರೂಪಗಳೇ ಸಿದ್ಧಿಸುತ್ತವೆ. ಉದಾಹರಣೆಗೆ,

        • ಕಾಲ್ + ಇಁ => ಕಾಲಿಂ => ಕಾಲಿಂದ
        • ಮಡುಁ + ಅ => ಮಡುವ
        • ಕಾಡುಁ + ಅಲ್ಲಿ => ಕಾಡಲ್ಲಿ

        ಈ ರೂಪಗಳೂ ಕನ್ನಡದಲ್ಲಿ ಕಾಣಿಸುತ್ತವೆ. ಆದರೆ ಇನಾಗಮವಿರುವ ರೂಪಗಳಿಗೆ, ಮಧ್ಯವರ್ತಿಯಾಗಿ ತೃತೀಯಾ ವಿಭಕ್ತಿಪ್ರತ್ಯಯವಾದ ಇಂ / ಇಁ ಬಂದಿರುವುದೇ ಕಾರಣವೆನಿಸುತ್ತದೆ. ಅಂದರೆ,

          • ಕಾಲ್ + ಇಁ + ಇಁ => ಕಾಲಿಁ + ಇಁ => ಕಾಲಿನಿಂ => ಕಾಲಿನಿಂದ - ಇಲ್ಲಿ ಇಂ / ಇಁ ಪ್ರತ್ಯಯಕ್ಕೆ ಇಂ / ಇಁ ಪ್ರತ್ಯಯವೇ ಮಧ್ಯವರ್ತಿಯಾಗಿ ಬಂದಿದೆ.
          • ಮಡುಁ + ಇಁ + ಅ => ಮಡುವಿಁ + ಅ => ಮಡುವಿನ
          • ಕಾಡುಁ + ಇಁ + ಅಲ್ಲಿ => ಕಾಡಿಁ + ಅಲ್ಲಿ => ಕಾಡಿನಲ್ಲಿ

          ಇಲ್ಲಿ ಮಧ್ಯವರ್ತಿಯಾಗಿ ಬಂದಿರುವ ತೃತೀಯಾ ವಿಭಕ್ತಿಪ್ರತ್ಯಯವು, ಕೆಲವೊಮ್ಮೆ ಪ್ರಮುಖ ವಿಭಕ್ತ್ಯರ್ಥಕ್ಕೆ ತನ್ನದೇ ಆದ ಛಾಯೆಯನ್ನು ಸಣ್ಣದಾಗಿ ಸೇರಿಸಿ, ಸ್ವಲ್ಪ ಅರ್ಥವ್ಯತ್ಯಾಸವನ್ನು ಮಾಡುವುದನ್ನು ಗಮನಿಸಬಹುದು. ಉದಾಹರಣೆಗೆ, "ಕಣ್ಣಿನಲ್ಲಿ ಕಣ್ಣಿಟ್ಟು" ಎಂಬಲ್ಲಿ ಇನಾಗಮದ ತೃತೀಯಾರ್ಥದ ಛಾಯೆಯು (ಅಥವಾ ಸಪ್ತಮಿಯದೇ ಛಾಯೆಯು; ಇಕಾರದ ಸಪ್ತಮ್ಯರ್ಥದ ಪ್ರಯೋಗವನ್ನು ಈಗಾಗಲೇ ನೋಡಿದ್ದೇವೆ), "ಕಣ್ಣಲ್ಲಿ ಕಣ್ಣಿಟ್ಟು" ಎಂಬುದಕ್ಕಿಂತಲೂ, ಸಪ್ತಮ್ಯರ್ಥಕ್ಕೆ ಸ್ವಲ್ಪ ಹೆಚ್ಚಿನ ಅವಧಾರಣೆಯನ್ನು ನೀಡಿದಂತಿದೆ. ಹಾಗೆಯೇ, "ಕಾಲ ಕಸ" ಎಂಬಲ್ಲಿರುವಂತೆ, "ಕಾಲ ಉಂಗುರ" ಎಂಬುದಕ್ಕಿಂತ, "ಕಾಲಿನ ಉಂಗುರ" ಎಂಬಲ್ಲಿ ಇಂ / ಇಁ ಪ್ರತ್ಯಯವು ಷಷ್ಠ್ಯರ್ಥಕ್ಕೆ ಸ್ವಲ್ಪ ಸಪ್ತಮ್ಯರ್ಥವನ್ನೂ ಸೇರಿಸಿ (ಇಕಾರದ ಸಪ್ತಮ್ಯರ್ಥದ ಪ್ರಯೋಗವನ್ನು ಈಗಾಗಲೇ ನೋಡಿದ್ದೇವೆ) ವಾಕ್ಯದ ಅರ್ಥವನ್ನು  ಹೆಚ್ಚು ಸ್ಫುಟಗೊಳಿಸುತ್ತದೆ. ಆದರೆ ಕಾಲುಂಗುರ ಎನ್ನುವಲ್ಲಿ ತತ್ಪುರುಷಸಮಾಸವಾಗಿ ವಿಭಕ್ತಿಯಿಲ್ಲದ ಕಾಲ್ ಎಂಬ ಪ್ರಕೃತಿಯೇ ಬರುವುದರಿಂದ ಈ ಅರ್ಥವ್ಯತ್ಯಾಸದ ಪ್ರಶ್ನೆಯೇಳುವುದಿಲ್ಲ. ಮುಂದುವರೆಸಿ, "ಕಾಲಿಂದ ಒದ್ದ" ಎನ್ನುದಕ್ಕಿಂತ, "ಕಾಲಿನಿಂದ ಒದ್ದ" ಎನ್ನುವಲ್ಲಿ ಎರಡು ಬಾರಿ ಕಾಣುವ ಇಂ / ಇಁ ಪ್ರತ್ಯಯವು, ತೃತೀಯಾ ವಿಭಕ್ತಿಯ ಕರಣಕಾರಕದ ಅರ್ಥವನ್ನು ಹೆಚ್ಚು  ಸ್ಫುಟಗೊಳಿಸುತ್ತದೆ. ಇನ್ನೂ ಸ್ಪಷ್ಟವಾಗಿ, "ಮಣ್ಣ ಮಡಕೆ", "ಹಣ್ಣ ರಸ", "ಹಲಸ ಹಣ್ಣು" ಎನ್ನುದಕ್ಕಿಂತ "ಮಣ್ಣಿನ ಮಡಿಕೆ", "ಹಣ್ಣಿನ ರಸ", "ಹಲಸಿನ ಹಣ್ಣು" ಎಂಬಲ್ಲಿರುವ  ಇಂ / ಇಁ ಪ್ರತ್ಯಯವು, ಕೊನೆಯ ಷಷ್ಠೀ ವಿಭಕ್ತಿಪ್ರತ್ಯಯದ ಅರ್ಥಕ್ಕಿಂತ,  ತೃತೀಯಾ ವಿಭಕ್ತಿಯ ಕರಣಕಾರಕದ ಅರ್ಥವನ್ನೇ ಪ್ರಬಲವಾಗಿಸಿ, ಅರ್ಥವನ್ನು ಹೆಚ್ಚು ಸಮರ್ಥವಾಗಿ ಸ್ಫುರಿಸುತ್ತದೆ. "ಮಣ್ಣ ಮಡಕೆ", "ಹಣ್ಣ ರಸ", "ಹಲಸ ಹಣ್ಣು" ಎನ್ನುವ ಪ್ರಯೋಗಗಳು ಅಷ್ಟಾಗಿ ಕಾಣದಿರುವುದಕ್ಕೆ ಇದೇ ಕಾರಣವಿರಬೇಕು.

          ಇನಾಗಮದ ಪ್ರಕ್ರಿಯೆಯ ಈ ನಿರೂಪಣೆಯನ್ನು ಮುಗಿಸುವ ಮೊದಲು, ಮೇಲೆ ದ್ವಿತೀಯಾ ವಿಭಕ್ತಿಪ್ರತ್ಯಯದ ಅನುಸ್ವಾರಲೋಪದ ಸಂದರ್ಭದಲ್ಲಿ ಹೇಳಿದ, ಹವ್ಯಕ ಕನ್ನಡದಲ್ಲಿ ಮಾತ್ರ ಕಾಣುವ, ಇನಾಗಮದೊಂದಿಗೆ ಷಷ್ಠೀ ವಿಭಕ್ತಿರೂಪದಲ್ಲಿ ದ್ವಿತೀಯಾ ವಿಭಕ್ತ್ಯರ್ಥವನ್ನು ಸೂಚಿಸುವ ಪದಗಳನ್ನು (ಉದಾಹರಣೆಗೆ, ಹಿಟ್ಟಿನ ಕಲಸು, ಅಂದರೆ ಹಿಟ್ಟನ್ನು ಕಲಸು) ಗಮನಿಸೋಣ. ಇಲ್ಲೂ, ಹಿಟ್ಟಿನ ಎನ್ನುವುದು ದ್ವಿತೀಯಾ ವಿಭಕ್ತಿರೂಪದಂತಿಲ್ಲದೆ, ಷಷ್ಠೀ ವಿಭಕ್ತಿರೂಪದಂತೆಯೇ ಕಾಣಿಸುತ್ತದೆ. ಆದರೆ, ಇಲ್ಲಿ ನಿರೂಪಿಸಿರುವಂತೆ, ಇನಾಗಮವಿರುವಲ್ಲಿ ನಿಜವಾಗಿ ತೃತೀಯಾ ವಿಭಕ್ತಿಯ ಇಂ / ಇಁ ಪ್ರತ್ಯಯವೇ ಮಧ್ಯವರ್ತಿಯಾಗಿ ಬಂದಿರುವುದನ್ನೂ, ಮೇಲೆ ನಿರೂಪಿಸಿದಂತೆ, ದ್ವಿತೀಯಾ ವಿಭಕ್ತಿಪ್ರತ್ಯಯದಲ್ಲಿ ಕೆಲವೊಮ್ಮೆ ಅನುಸ್ವಾರಲೋಪವಾಗುವುದನ್ನೂ ಒಟ್ಟಾಗಿ ನೋಡಿದಾಗ, ಹಿಟ್ಟಿನ ಎನ್ನುವ ರೂಪವೂ ದ್ವಿತೀಯಾ ವಿಭಕ್ತಿಪ್ರತ್ಯಯದ ಅನುಸ್ವಾರಲೋಪದಿಂದಲೇ ಸಿದ್ಧಿಸುವುದನ್ನು ಕಾಣಬಹುದು. ಅಂದರೆ,

          • ಹಿಟ್ಟುಁ + ಇಁ + ಅಁ => ಹಿಟ್ಟಿಁ + ಅಁ  => ಹಿಟ್ಟಿನಁ => ಹಿಟ್ಟಿನ

          ಈ ಪ್ರಕ್ರಿಯೆಯಲ್ಲಿ ಷಷ್ಠೀ ವಿಭಕ್ತಿಪ್ರತ್ಯಯವು ಕಾಣಿಸದಿರುವುದನ್ನು ಗಮನಿಸಬಹುದು. ಆದರೆ, ದ್ವಿತೀಯಾ ವಿಭಕ್ತಿರೂಪಗಳಲ್ಲಿ ಕಾಣುವ ಈ ಇನಾಗಮವು, ನನಗೆ ತಿಳಿದಂತೆ, ಕೇವಲ ಹವ್ಯಕಕನ್ನಡಕ್ಕೆ ಮಾತ್ರ ಸೀಮಿತವಾಗಿದ್ದು, ಕನ್ನಡದ ಇತರ ಕವಲುಗಳಲ್ಲಿ ಕಾಣಿಸುವುದಿಲ್ಲ.

          ಹೀಗೆ, ಹಿಟ್ಟಿನ ಎನ್ನುವ (ಹಾಗೂ ಅದೇ ರೀತಿಯ ಇತರ ಶಬ್ದಗಳ) ಒಂದೇ ರೂಪವು, ಷಷ್ಠೀ ವಿಭಕ್ತಿಪ್ರತ್ಯಯದಿಂದಲೂ, ತೃತೀಯಾ ವಿಭಕ್ತಿಪ್ರತ್ಯಯವು ಮಧ್ಯವರ್ತಿಯಾಗಿ ಬಂದಾಗ ದ್ವಿತೀಯಾ ವಿಭಕ್ತಿಪ್ರತ್ಯಯದಿಂದಲೂ ಸಿದ್ಧಿಸುವಾಗ, ಅದನ್ನು, ಷಷ್ಠ್ಯರ್ಥದಲ್ಲಿ ಬಳಸಿದಾಗ ಅದು ಷಷ್ಠೀ ವಿಭಕ್ತಿಪ್ರತ್ಯಯದ ಪ್ರಕ್ರಿಯೆಯಿಂದಲೂ, ದ್ವಿತೀಯಾರ್ಥದಲ್ಲಿ ಬಳಸಿದಾಗ ದ್ವಿತೀಯಾ ವಿಭಕ್ತಿಪ್ರತ್ಯಯದ ಪ್ರಕ್ರಿಯೆಯಿಂದಲೂ ಸಿದ್ಧಿಸಿದೆ ಎಂದು ಪರಿಗಣಿಸಬೇಕಾಗುತ್ತದೆ. 

          ಸಪ್ತಮೀ ವಿಭಕ್ತಿಪ್ರತ್ಯಯರೂಪಗಳಾದ ಅಲಿ, ಅಲ್ಲಿ ಎಂಬಲ್ಲಿ ಕಾಣುವ ಇಕಾರ

          ಅನು, ಅನ್ನು ಎಂಬಲ್ಲಿ ವಿಕಲ್ಪದಿಂದ ಕಾಣುವ ದ್ವಿತ್ವದ ಸಂದರ್ಭದಲ್ಲಿ, ಸಪ್ತಮೀ ವಿಭಕ್ತಿಪ್ರತ್ಯಯರೂಪಗಳಾದ ಅಲಿ, ಅಲ್ಲಿ ಎಂಬುವು, ಮೂಲ ಸಪ್ತಮೀ ವಿಭಕ್ತಿಪ್ತತ್ಯಯಗಳಲ್ಲೊಂದಾದ ಅಲ್ ಪ್ರತ್ಯಯಕ್ಕೆ ಇಕಾರವು ಪರವಾಗಿ ಬಂದಾಗ ಸಾಧ್ಯವಿರಬಹುದಾದ ಎರಡು ಪ್ರಕ್ರಿಯಾನುಕ್ರಮಗಳಿಂದಾಗಿ ಸಿದ್ಧಿಸಿವೆ ಎನ್ನುವುದನ್ನು ನೋಡಿದೆವಷ್ಟೇ. ಇಲ್ಲಿ ಕಾಣುವ ಇಕಾರವೂ, ತೃತೀಯಾವಿಭಕ್ತಿ ಪ್ರತ್ಯಯವಾಗಿಯೂ ಕಾಣಿಸುವ ಇಂ / ಇಁ ಪ್ರತ್ಯಯದ ಅನುಸ್ವಾರದ ಲೋಪವಾಗಿಯೇ ಸಿದ್ಧಿಸಿರಬೇಕು. ಅಂದರೆ,

          • ಅಲ್ + ಇಁ => ಅಲ್ಲಿಁ => ಅಲ್ಲಿ
          • ರಾಮಁ + ಅಲ್ + ಇಁ => ರಾಮಁ + (ಅಲ್ + ಇಁ) => ರಾಮಁ + ಅಲ್ಲಿಁ => ರಾಮನಲ್ಲಿಁ => ರಾಮನಲ್ಲಿ
          • ರಾಮಁ + ಅಲ್ + ಇಁ => (ರಾಮಁ + ಅಲ್) + ಇಁ => ರಾಮನಲ್ + ಇಁ => ರಾಮನಲಿಁ => ರಾಮನಲಿ

          ಇಲ್ಲಿ, ಕೊನೆಗಿರುವುದು ತೃತೀಯಾರ್ಥದ ಇಂ / ಇಁ ಪ್ರತ್ಯಯ. ಎರಡು ಪ್ರತ್ಯಯಗಳು ಒಂದರ ಮೇಲೆ ಒಂದು ಬಂದಾಗ, ಮೊದಲಿನದು ಮಧ್ಯವರ್ತಿ, ಹಾಗಾಗಿ ಅದರದು ಗೌಣಾರ್ಥ, ಕೊನೆಯದರದ್ದೇ ಮುಖ್ಯಾರ್ಥ ಎಂಬುದನ್ನು ಮೇಲೆ ನೋಡಿದ್ದೇವೆ. ಹಾಗೆಂದು, ಇಲ್ಲಿ ಮೊದಲು ಬರುವ ಸಪ್ತಮ್ಯರ್ಥದ ಅಲ್ ಪ್ರತ್ಯಯವು ಮಧ್ಯವರ್ತಿಯೇನಲ್ಲ! ಆದರೆ ಇಂ / ಇಁ ಪ್ರತ್ಯಯದ ಅರ್ಥವೂ ಪ್ರಬಲವಾಗಿಯೇ ಇದೆಯೆನ್ನಬೇಕು. ಏಕೆಂದರೆ, ಸಪ್ತಮ್ಯರ್ಥದಲ್ಲಿ ಇಕಾರವು ಬರುವುದನ್ನೂ ("ನೆಲದಿ ಹೊಳೆವ ರತುನ ಬಿತ್ತು", "ಚಿತ್ತದಿ ಹೊಳೆಯುವ ಪುತ್ಥಳಿ ಬೊಂಬೆ"), ಸೇಡಿಯಾಪು ಅವರು ("ಪಂಚಮೀ ವಿಭಕ್ತಿ" ಎಂಬ ಲೇಖನದಲ್ಲಿ) ಅದಕ್ಕೆ ಕನ್ನಡದಲ್ಲಿ ತೃತೀಯಾರ್ಥಕ್ಕೂ, ಸಪ್ತಮ್ಯರ್ಥಕ್ಕೂ ಕಾಣುವ, ಒಂದೇ ಅಥವಾ ಹತ್ತಿರದ ರೂಪಗಳ ಕಾರಣವನ್ನು ಕೊಟ್ಟಿರುವುದನ್ನು ಮೇಲೆ ಹಾಗೂ ಎಕಾರದ ಆವೇಶದಲ್ಲಿ ನೋಡಬಹುದು. ಹೀಗೆ ತೃತೀಯಾ, ಸಪ್ತಮೀ ವಿಭಕ್ತಿಪ್ರತ್ಯಯಗಳೇ ಒಂದರೊಳಗೊಂದು ಬೆರೆತಿರುವಾಗ, "ಪಂಚಮೀ ವಿಭಕ್ತಿ"ಯಲ್ಲಿ ಸೇಡಿಯಾಪು ಅವರು ಸಾಧಾರವಾಗಿ ನಿರೂಪಿಸಿದಂತೆ, ತೃತೀಯಾ, ಸಪ್ತಮೀ ವಿಭಕ್ಯರ್ಥದ ಪ್ರಯೋಗಗಳೂ ಬೆರೆತಿರುವುದರಲ್ಲಿ ಆಶ್ಚರ್ಯವೇನು?

          ಭಾಷಾಶಾಸ್ತ್ರ, ವ್ಯಾಕರಣಶಾಸ್ತ್ರಗಳಲ್ಲಿ ವಿಭಕ್ತಿಗಳಿಗಿಂತ ಪ್ರತ್ಯಯಗಳೇ ಮುಖ್ಯ ಎಂಬ ಮಾತಿಗೆ ಇದೊಂದು ಬಹಳ ಒಳ್ಳೆಯ ದೃಷ್ಟಾಂತವಾಗಿದೆ.

          ತೃತೀಯಾ ವಿಭಕ್ತಿಪ್ರತ್ಯಯದ (ಅರ್ಧ)ಅನುಸ್ವಾರದ ಸ್ವರೂಪ

          ಮೇಲೆ ನಿರೂಪಿಸಿದ ಅಂಶಗಳೆಲ್ಲವನ್ನೂ ಒಟ್ಟಾಗಿ ನೋಡಿದಾಗ, ಇಂ / ಇಁ ಎನ್ನುವುದೇ ತೃತೀಯಾ ವಿಭಕ್ತಿಪ್ರತ್ಯಯದ ಮೂಲರೂಪ, ಕನ್ನಡ ಕೈಪಿಡಿಯಲ್ಲಿ ನಿರೂಪಿಸಿದಂತೆ ಇನ್ ಎಂಬುದಲ್ಲ ಎನ್ನಬಹುದೆನಿಸುತ್ತದೆ. ಈ ತೃತೀಯಾ ವಿಭಕ್ತಿಪ್ರತ್ಯಯದ (ಅರ್ಧ)ಅನುಸ್ವಾರದ ಕೆಲವು ಮುಖ್ಯಸ್ವರೂಪಗಳು ಹೀಗಿವೆ.

          • ಸ್ವರವು ಪರವಾದಾಗ ನಕಾರವಾಗುವುದು (ಔಚಿತ್ಯದಿಁ + ಅಱಿವುದು => ಔಚಿತ್ಯದಿನಱಿವುದು)
          • ವ್ಯಂಜನವು ಪರವಾದಾಗ, ಬರೆಹದಲ್ಲಿ ಪೂರ್ಣಾನುಸ್ವಾರ ಹಾಗೂ ಉಚ್ಚಾರಣೆಯಲ್ಲಿ ಆ ವ್ಯಂಜನವರ್ಗದ ಅನುನಾಸಿಕವಾಗುವುದು (ಮರದಿಁ + ದ => ಮರದಿಂದ ಆದರೆ ಉಚ್ಚಾರಣೆ ಮರದಿನ್ದ)
          • ಕೆಲವೊಮ್ಮೆ ಲೋಪವಾಗುವುದು (ತೇಜದಿಁ => ತೇಜದಿ)
          • ಕೆಲವೆಡೆ ಚತುರ್ಥೀ ವಿಭಕ್ತಿಗಳ ಮೊದಲು ಮಧ್ಯವರ್ತಿಯಾಗಿ ಬಂದಾಗ ಪೂರ್ಣಾನುಸ್ವಾರವಾಗಿ ಅಥವಾ ಕೆ / ಗೆ ಪ್ರತ್ಯಯದ ಆದಿಯ ಕವರ್ಗದ ಅನುನಾಸಿಕವಾದ ಙಕಾರವಾಗಿ, ಆಮೇಲೆ ಕೆಲವೊಮ್ಮೆ ಲೋಪವಾಗುವುದು (ಕಾಲ್ + ಇಁ + ಕೆ / ಗೆ => ಕಾಲಿಁ + ಕೆ / ಗೆ => ಕಾಲಿಂಗೆ => ಕಾಲಿಗೆ).
          • ಹಲವು ಕಡೆ ಇತರ ವಿಭಕ್ತಿಗಳ (ತೃತೀಯಾ, ಷಷ್ಠೀ, ಸಪ್ತಮೀ ಇತ್ಯಾದಿ) ಮೊದಲು ಮಧ್ಯವರ್ತಿಯಾಗಿ ಬಂದಾಗ, ನಕಾರವಾಗಿ, ಇನ ಎನ್ನುವಂತೆ ಕಾಣುವುದು (ಕಾಲ್ + ಇಁ + ಇಁ => ಕಾಲಿಁ + ಇಁ => ಕಾಲಿನಿಂ => ಕಾಲಿನಿಂದ, ಮಡುಁ + ಇಁ + ಅ => ಮಡುವಿಁ + ಅ => ಮಡುವಿನ, ಕಾಡುಁ + ಇಁ + ಅಲ್ಲಿ => ಕಾಡಿಁ + ಅಲ್ಲಿ => ಕಾಡಿನಲ್ಲಿ)
          • ಸಪ್ತಮ್ಯರ್ಥದ ಅಲ್ ಪ್ರತ್ಯಯಕ್ಕೆ ಪರವಾಗಿ ಬಂದು, ಅನುಸ್ವಾರವನ್ನು ಕಳೆದುಕೊಂಡು ಅಲಿ, ಅಲ್ಲಿ ಎಂಬ ಇಕಾರಾಂತ ರೂಪಗಳನ್ನು ಮೂಡಿಸುವುದು.

          ಮಧ್ಯವರ್ತಿಯಾದ ಅಁ ಪ್ರತ್ಯಯವು ಣಕಾರವನ್ನೂ, ಇಁ ಪ್ರತ್ಯಯವು ನಕಾರವನ್ನೂ ಸ್ಫುರಿಸುವುದೇಕೆ?

          ಬೇರೆ ವಿಭಕ್ತಿಪ್ರತ್ಯಯಗಳಿಗೆ ಮಧ್ಯವರ್ತಿಯಾಗಿ ಅಁ ಪ್ರತ್ಯಯವು ಬಂದಾಗ ಣಕಾರವು ಕಾಣಿಸುವುದನ್ನೂ (ತೆಂಕುಁ + ಅಁ + ಅ => ತೆಂಕು + ಅಁ + ಅ => ತೆಂಕಁ + ಅ => ತೆಂಕಣ), ಇಁ ಪ್ರತ್ಯಯವು ಬಂದಾಗ ನಕಾರವು ಕಾಣಿಸುವುದನ್ನೂ (ಕಾಲ್ + ಇಁ + ಅ => ಕಾಲಿಁ + ಅ => ಕಾಲಿನ) ಮೇಲೆ ನೋಡಿದೆವಷ್ಟೇ. ಈ ವ್ಯತ್ಯಾಸಕ್ಕೂ ಕಾರಣವಿರಬಹುದೆನಿಸುತ್ತದೆ. ಅದನ್ನು ಹುಡುಕಲು ಇಲ್ಲಿ ಣಕಾರ, ನಕಾರಗಳು ಕಾಣುವ ತುಣುಕುಗಳನ್ನು ಗಮನಿಸೋಣ.

          • ಣಕಾರಕ್ಕೆ, ತೆಂಕಁ + ಅ => ತೆಂಕಣ, ಈ ಪ್ರಕ್ರಿಯೆಯಲ್ಲಿ ಕಁ + ಅ => ಕಣ ಎನ್ನುವುದೇ ಮುಖ್ಯಭಾಗ.
          • ನಕಾರಕ್ಕೆ, ಕಾಲಿಁ + ಅ => ಕಾಲಿನ, ಈ ಪ್ರಕ್ರಿಯೆಯಲ್ಲಿ ಲಿಁ + ಅ => ಲಿನ ಎನ್ನುವುದೇ ಮುಖ್ಯಭಾಗ.

          ಈ ತುಣುಕುಗಳಲ್ಲಿ ಮುಖ್ಯವಲ್ಲದ ಆದಿವ್ಯಂಜನವನ್ನೂ ಬಿಟ್ಟರೆ,

          • ಣಕಾರಕ್ಕೆ , ಅಁ + ಅ => ಅಣ
          • ನಕಾರಕ್ಕೆ, ಇಁ + ಅ => ಇನ

          ಇಲ್ಲಿ ಅಁ + ಅ ಎನ್ನುವುದನ್ನು ಹಾಗೆಯೇ ಉಚ್ಚರಿಸಿದರೆ ನಕಾರಕ್ಕಿಂತ, ಣಕಾರಕ್ಕೇ ಹತ್ತಿರವಾಗಿ ಕೇಳಿಸುವುದನ್ನು ಹಾಗೂ ಇಁ + ಅ ಎನ್ನುವುದನ್ನು ಹಾಗೆಯೇ ಉಚ್ಚರಿಸಿದರೆ ಣಕಾರಕ್ಕಿಂತ, ನಕಾರಕ್ಕೇ ಹತ್ತಿರವಾಗಿ ಕೇಳಿಸುವುದನ್ನು ಗಮನಿಸಬಹುದು. ಇದಕ್ಕೂ ಶಬ್ದಲೋಕದ ಕಾರಣವಿದೆ. ಇಲ್ಲಿ ಮುಖ್ಯ ವ್ಯತ್ಯಾಸ (ಅರ್ಧ)ಅನುಸ್ವಾರವು ಅನುಸರಿಸುವ (ಅಂದರೆ, ಅದರ ಮೊದಲಿರುವ) ಸ್ವರವು ಅ, ಇ ಎಂದು ಬೇರೆಯಾಗಿರುವುದಾಗಿದೆ.

          ಅಕಾರವನ್ನುಚ್ಚರಿಸುವಾಗ ಇರುವ ಬಾಯಿಯ ಆಕಾರವು ಣಕಾರವನ್ನುಚ್ಚರಿಸುವಾಗಲೂ ಇರುತ್ತದೆಂಬುದನ್ನು ಗಮನಿಸಬಹುದು. ಹಾಗೆ ನೋಡಿದರೆ, ವ್ಯಂಜನಗಳಲ್ಲಿ, ಮೂರ್ಧನ್ಯವ್ಯಂಜನಗಳನ್ನು (ಟ, ಟ, ಡ, ಢ, ಣ ಇತ್ಯಾದಿಯಾಗಿ, ನಾಲಗೆಯ ತುದಿ ಮೇಲೆದ್ದು, ಹಿಂದಕ್ಕೆ ಮಡಚಿ, ನಾಲಗೆಯ ತುದಿಯ ಅಡಿಯ ಭಾಗವು ಬಾಯಿಯ ಮೇಲ್ಛಾವಣಿಗೆ ತಾಗಿ, ಮುಂದಕ್ಕೆ ಚಿಮ್ಮಿಸುವವುಗಳು) ಮಾತ್ರ ಅಕಾರವನ್ನುಚ್ಚರಿಸುವಾಗಿನ ಬಾಯಿಯ ಅಕಾರದಲ್ಲಿ, ಕೆಳದವಡೆಯನ್ನು ಚಲಿಸದೆ ಉಚ್ಚರಿಸಬಹುದು. ಉಳಿದ ವ್ಯಂಜನಗಳನ್ನುಚ್ಚರಿಸುವಾಗ ಕೆಳದವಡೆ ಸ್ವಲ್ಪ ಚಲಿಸಲೇ ಬೇಕಾಗುತ್ತದೆ.

          ಹಾಗೆಯೇ, ಇಕಾರವನ್ನುಚ್ಚರಿಸುವಾಗ (ಮೇಲೆ ಎಕಾರದ ವಿಷಯದಲ್ಲಿ ನಿರೂಪಿಸಿದಂತೆ), ನಾಲಗೆಯ ತುದಿಯು, ದಂತ್ಯವ್ಯಂಜನಗಳನ್ನುಚ್ಚರಿಸುವಾಗ (ನಕಾರ, ತವರ್ಗ) ಹಲ್ಲಿನ ಒಸಡಿಗೆ ತಾಗುವ ಸ್ಥಳಕ್ಕೆ ಹತ್ತಿರವೇ ಇರುವುದನ್ನೂ ಗಮನಿಸಬಹುದು.

          ಇವೆರಡೂ, ವಿಷಯಗಳನ್ನು ಒಟ್ಟಾಗಿ ನೋಡಿದಾಗ, ಅಁ + ಅ => ಅಣ ಹಾಗೂ ಇಁ + ಅ => ಇನ, ಈ ಪ್ರಕ್ರಿಯೆಗಳಲ್ಲಿನ ಣಕಾರ, ನಕಾರಗಳ ವ್ಯತ್ಯಾಸಕ್ಕೆ, ಶಬ್ದಲೋಕದ ಕಾರಣ ಸ್ವಷ್ಟವಾಗುತ್ತದೆಂದುಕೊಳ್ಳುತ್ತೇನೆ.

          ಆದರೆ, ರಾಮಁ + ಅ => ರಾಮಣ ಎಂದಾಗುವುದಿಲ್ಲವೆನ್ನುವುದಕ್ಕೆ, ಣಕಾರಕ್ಕಿಂತ ನಕಾರದಲ್ಲೇ ಉಚ್ಚಾರಣಸೌಲಭ್ಯ ಹೆಚ್ಚಿದ್ದು, ಅದಕ್ಕಾಗಿಯೇ ಜಗತ್ತಿನ ಹೆಚ್ಚಿನ ಭಾಷೆಗಳಲ್ಲಿ ಣಕಾರಕ್ಕಿಂತ ನಕಾರವೇ ಹೆಚ್ಚಾಗಿ ಕಾಣಿಸುವುದರಿಂದ ಹಾಗೂ ಸುಲಭೋಚ್ಚಾರಣೆಯೇ ಜನರಾಡುವ ಭಾಷೆಯಲ್ಲಿ ನಿಲ್ಲುವುದರಿಂದ, ಅರ್ಧಾನುಸ್ವಾರಕ್ಕೆ (ದ್ರಾವಿಡೇತರ ಭಾಷೆಗಳಲ್ಲೂ) ನಕಾರವಾಗುವ ಸ್ವಭಾವವೇ ಮುಖ್ಯ (ಕನ್ನಡದಲ್ಲಿ ಅದು ಮ, ವಕಾರವಾಗುವುದೂ ಕೇವಲ ನಪುಂಸಕಲಿಂಗದ ಸಂದರ್ಭದಲ್ಲಿ ಮಾತ್ರ), ಣಕಾರವಾಗುವ ಪ್ರಕ್ರಿಯೆ ಕಾಣುವುದು ವಿಶೇಷ ಸಂದರ್ಭಗಳಲ್ಲಿ ಮಾತ್ರ ಎನ್ನುವುದು ಬಿಟ್ಟರೆ, ಬೇರೆ ಸಮಾಧಾನವು ನನಗೆ ಕಾಣಿಸುತ್ತಿಲ್ಲ.

          ಮಧ್ಯವರ್ತಿಪ್ರತ್ಯಯಗಳ ಅನುಸ್ವಾರವು ಣಕಾರ, ನಕಾರಗಳಾಗುವಲ್ಲಿ ಎಲ್ಲ ಪ್ರತ್ಯಯಗಳ ಮೊದಲು ಬರುವ ಅನುಸ್ವಾರವು ವಿಕಲ್ಪವಾಗಿ ಆಗುವ ಲೋಪ, ವಕಾರ

          ಮೇಲೆ ಅಣಾಗಮ, ಇನಾಗಮಗಳ ಹಿಂದಿರುವ ಪ್ರಕ್ರಿಯೆಗಳನ್ನು ನಿರೂಪಿಸುವಾಗ, ಮಧ್ಯವರ್ತಿಯಾಗಿ ಬರುವ ಪ್ರತ್ಯಯದ ಹಿಂದೆ ಇರುವ ಎಲ್ಲ ಪ್ರತ್ಯಯಗಳ ಮೊದಲೂ ಬರುವ ಅನುಸ್ವಾರವು ಕೆಲವೆಡೆ ಲೋಪವಾಗುವುದನ್ನೂ, ಇನ್ನು ಕೆಲವೆಡೆ ವಕಾರವಾಗುವುದನ್ನೂ ನೋಡಿದೆವಷ್ಟೇ.

          ಉದಾಹರಣೆಗೆ, ಣಕಾರಕ್ಕೆ,

          • ಮೂಡುಁ + ಅಁ + ಇಁ => ಮೂಡು + ಅಁ + ಇಁ (ಮೊದಲ ಅನುಸ್ವಾರದ ಲೋಪವಾಗಿದೆ) => ಮೂಡಁ + ಇಁ => ಮೂಡಣಿಂ
          • ಪಡುಁ + ಅಁ + ಇಁ => ಪಡುವಁ + ಇಁ (ಮೊದಲ ಅನುಸ್ವಾರವು ವಕಾರವಾಗಿದೆ) => ಪಡುವಣಿಂ
          • ತೆಂಕುಁ + ಅಁ + ಅ => ತೆಂಕು + ಅಁ + ಅ (ಮೊದಲ ಅನುಸ್ವಾರದ ಲೋಪವಾಗಿದೆ) => ತೆಂಕಁ + ಅ => ತೆಂಕಣ
          • ಬಡಗುಁ + ಅಁ + ಅ => ಬಡಗು + ಅಁ + ಅ (ಮೊದಲ ಅನುಸ್ವಾರದ ಲೋಪವಾಗಿದೆ) => ಬಡಗಁ + ಅ => ಬಡಗಣ
          • ನಡುಁ + ಅಁ + ಅ => ನಡುವಁ + ಅ (ಮೊದಲ ಅನುಸ್ವಾರವು ವಕಾರವಾಗಿದೆ) => ನಡುವಣ

          ನಕಾರಕ್ಕೆ,

          • ಕಾಡುಁ + ಇಁ + ಅ => ಕಾಡಿಁ + ಅ (ಮೊದಲ ಅನುಸ್ವಾರದ ಲೋಪವಾಗಿದೆ) => ಕಾಡಿನ
          • ಮಡುಁ + ಇಁ + ಅ => ಮಡುವಿಁ + ಅ(ಮೊದಲ ಅನುಸ್ವಾರವು ವಕಾರವಾಗಿದೆ) => ಮಡುವಿನ
          • ಹಡಗುಁ + ಇಁ + ಅ => ಹಡಗಿಁ + ಅ (ಮೊದಲ ಅನುಸ್ವಾರದ ಲೋಪವಾಗಿದೆ) => ಹಡಗಿನ

          ಇಲ್ಲಿ ಮೊದಲ ಅನುಸ್ವಾರವು ಲೋಪವಾಗುವಲ್ಲೆಲ್ಲಾ ಆ ಅನುಸ್ವಾರವು ಕಾಣಿಸುವ ಅಕ್ಷರದ ಮೊದಲು ಒಂದು ಗುರು ಅಥವಾ, ಎರಡು ಲಘು ಇರುವುದನ್ನು ಗಮನಿಸಬಹುದು. ಹಾಗೆಯೇ, ಆ ಅನುಸ್ವಾರವು ವಕಾರವಾಗುವಲ್ಲೆಲ್ಲಾ ಆ ಅನುಸ್ವಾರವು ಕಾಣಿಸುವ ಅಕ್ಷರದ ಮೊದಲು ಒಂದೇ ಲಘು ಇರುವುದನ್ನು ಗಮನಿಸಬಹುದು. ಈ ಲಕ್ಷಣ, (ಮೇಲೆ ಅನ್ನು ಎನ್ನುವಲ್ಲಿ ಕಾಣುವ ದ್ವಿತ್ವದ ಸಂದರ್ಭದಲ್ಲಿ ಹೇಳಿದಂತೆ) ದ್ವಿತ್ವಸಂಧಿ ಹಾಗೂ ಕನ್ನಡಛಂದಸ್ಸುಗಳ ಅಂಶಗಣಗಳ ಆದಿಯಲ್ಲಿ ಕಾಣಿಸುವ ಲಕ್ಷಣವೇ ಆಗಿದೆ. 

          ಅಂಶಗಣಗಳ ಆದಿಯಲ್ಲಿ ಒಂದು ಗುರು ಅಥವಾ ಎರಡು ಲಘುಗಳು ಮಾತ್ರ ಇದ್ದು ಒಂದು ಲಘು ಮಾತ್ರ ಇರುವುದಿಲ್ಲವೆಂಬ ಲಕ್ಷಣ, ನಿಯಮವನ್ನು ನೋಡಿದೆವಷ್ಟೇ. ದ್ವಿತ್ವಸಂಧಿಯು, ಶಬ್ದದ ಮೊದಲು ಒಂದೇ ಲಘು ಬಂದಾಗ, ಅದರನಂತರದ ವ್ಯಂಜನಕ್ಕೆ ದ್ವಿತ್ವವನ್ನು ಕೊಟ್ಟು, ಮೊದಲ ಅಕ್ಷರವನ್ನು ಗುರುವನ್ನಾಗಿಸಿ (ಒತ್ತಕ್ಷರದ ಹಿಂದಿನ ಅಕ್ಷರ ಗುರು), ಆದಿಯಲ್ಲಿ ಬರಬಹುದಾದ ಒಂದೇ ಲಘುವಿನ ಸಾಧ್ಯತೆಯನ್ನು ನಿವಾರಿಸುತ್ತದೆ. ಆದರೆ ಇಲ್ಲಿ, ಅನುಸ್ವಾರವಿರುವ ಅಕ್ಷರದ ಮೊದಲು ಒಂದೇ ಲಘುವಿದ್ದಲ್ಲಿ (ಪಡುಁ, ನಡುಁ, ಮಡುಁ ಇತ್ಯಾದಿ), ಆ ಅನುಸ್ವಾರವು  ವಕಾರವಾಗುವುದರಿಂದ, ಆದಿಯಲ್ಲಿ ಎರಡು ಲಘುವಾಗಿಸಿ, ಆದಿಯಲ್ಲಿ ಬರಬಹುದಾದ ಒಂದೇ ಲಘುವಿನ ಸಾಧ್ಯತೆಯನ್ನು ನಿವಾರಿಸುತ್ತದೆ. ಆದಿಯಲ್ಲಿ ಗುರು (ಮೂಡುಁ, ತೆಂಕುಁ, ಕಾಡುಁ ಇತ್ಯಾದಿ) ಅಥವಾ ಎರಡು ಲಘುಗಳು ಮೊದಲೇ ಇದ್ದಲ್ಲಿ  (ಬಡಗುಁ, ಹಡಗುಁ ಇತ್ಯಾದಿ) ದ್ವಿತ್ವಸಂಧಿಯಂತೆಯೇ, ಅನುಸ್ವಾರವು ವಕಾರವಾಗುವುದು ಆವಶ್ಯಕವಲ್ಲ. ಹಾಗಾಗಿ, ಅಂಥಲ್ಲಿ ಅನುಸ್ವಾರವು ಲೋಪವಾಗುತ್ತದೆ.

          ಹಾಗಾಗದೆ, ಆದಿಯಲ್ಲಿ ಒಂದೇ ಲಘುವಿರುವಲ್ಲಿಯೂ ಅನುಸ್ವಾರವು ಲೋಪವಾದರೆ, ಕನ್ನಡದ (ಎಲ್ಲ ದ್ರಾವಿಡಭಾಷೆಗಳ) ಜಾಯಮಾನಕ್ಕೆ ಹಿಡಿಸದ, ಆದಿಯ ಲಗಂ (ಒಂದು ಲಘು ಆದಮೇಲೆ ಒಂದು ಗುರು) ಗತಿಯು ಕಾಣಿಸುವ ಸಾಧ್ಯತೆಯಿದೆ. ಉದಾಹರಣೆಗೆ,

          • ಮಡುಁ + ಅಁ => ಮಡಁ => ಮಡಂ - ಒಂದು ಲಘು, ಒಂದು ಗುರು (ಅಂದರೆ, ಲಗಂ) ಸಿದ್ಧಿಸಿದೆ.
          • ಮಡುಁ + ಅಁ => ಮಡಁ => ಮಡಂ => ಮಡನು -ಇಲ್ಲಿ ಆದಿಯಲ್ಲಿ ಎರಡು ಲಘು ಇರುವುದರಿಂದ ತೊಂದರೆಯೇನಿಲ್ಲ.
          • ಮಡುಁ + ಅಁ => ಮಡಁ => ಮಡಂ => ಮಡನ್ನು - ಒಂದು ಲಘು, ಒಂದು ಗುರು (ಅಂದರೆ, ಲಗಂ) ಸಿದ್ಧಿಸಿದೆ.
          • ಮಡುಁ + ಅಁ => ಮಡಁ => ಮಡ - ಎರಡು ಲಘುಗಳು ಮಾತ್ರವಿರುವುದೂ ಕನ್ನಡದ, ಅಂಶಗಣಗಳ ಜಾಯಮಾನವಲ್ಲ.
          • ನಡುಁ + ಅಁ + ಅ => ನಡಁ + ಅ => ನಡಣ - ಇಲ್ಲಿ ಆದಿಯಲ್ಲಿ ಎರಡು ಲಘು ಇರುವುದರಿಂದ ತೊಂದರೆಯೇನಿಲ್ಲ.

          ಹೀಗೆ ಮದ್ಯವರ್ತಿಯಾಗಿ ಪ್ರತ್ಯಯಗಳು ಬರುವಲ್ಲಿ ಮಾತ್ರವಲ್ಲದೆ, ಎಲ್ಲ ವಿಭಕ್ತಿಸಂದರ್ಭಗಳಲ್ಲೂ, ವಕಾರಾಗಮವಾಗುವುದು ಲಗಂ ಗತಿಯ ಸಾಧ್ಯತೆಯನ್ನು ತಿರಸ್ಕರಿಸುವುದಕ್ಕಾಗಿಯೇ ಇರಬೇಕು. ಸಂಧಿಸ್ಥಾನದ ಆದಿಯಲ್ಲಿ ಒಂದೇ ಲಘುವಿದ್ದಾಗ (ಉದಾಹರಣೆಗೆ, ಮಡುವನ್ನು, ಮಡುವ, ಕರುವನ್ನು, ಕರುವ ಇತ್ಯಾದಿಯಂತೆ) ವಕಾರಾಗಮವಿಲ್ಲದೆ ಲೋಪಸಂಧಿಯಾದರೆ (ಮಡನ್ನು, ಕರನ್ನು ಎಂಬಂತೆ) ಲಗಂ ಗತಿ ಸಿದ್ಧಿಸುವ ಸಾಧ್ಯತೆಯುಂಟಾಗುತ್ತದೆ. ಇದನ್ನು ಕನ್ನಡಭಾಷೆ ಸಹಿಸುವುದಿಲ್ಲ. ಆದರೆ, ಆದಿಯಲ್ಲಿ ಗುರು ಅಥವಾ ಅನೇಕಾಕ್ಷರಗಳಿದ್ದಾಗ ಲೋಪಸಂಧಿಯೇ ಆಗುತ್ತದೆ (ಉದಾಹರಣೆಗೆ, ಕಾಡ, ಹಡಗ ಇತ್ಯಾದಿ) ಹೊರತು ವಕಾರಾಗಮವಲ್ಲ.

          ಇದನ್ನೆಲ್ಲ ಒಟ್ಟಾಗಿ ನೋಡಿದಾಗ, ಕನ್ನಡಕ್ಕೆ ಪದ, ಗಣಾದಿಗಳಲ್ಲಿ ಲಗಂ ಗತಿಯು ಎಷ್ಟು ವರ್ಜ್ಯವೆಂದರೆ, ಅದು ಲಗಂ ಗತಿಯಿರುವುದನ್ನು ಮಾತ್ರವಲ್ಲ, ವಿಕಲ್ಪದಿಂದ ಲಗಂ ಗತಿಯಂಟಾಗುವ ಸಾಧ್ಯತೆಯಿರುವ ಪ್ರಕ್ರಿಯೆಗಳನ್ನೂ ಸಹಿಸುವುದಿಲ್ಲವೆನಿಸುತ್ತದೆ. ಭಾಷೆಗಳು ತಮ್ಮ ಶಬ್ದಲೋಕದ ಆಳದಲ್ಲಿರುವ ಸ್ವಭಾವಗಳನ್ನು ಎಂದೂ (ಅವು ಬೇರೆ ಬೇರೆ, ಸಂಬಂಧವಿಲ್ಲದಂತೆ ಕಾಣುವ ಸಂದರ್ಭಗಳಲ್ಲೂ) ಬಿಟ್ಟುಕೊಡುವುದಿಲ್ಲವೆಂದರೆ ಆಶ್ಚರ್ಯವಾಗುತ್ತದೆ.

          ಉದಾಹರಣೆಗೆ, ಇಂಗ್ಲಿಷಿನ ಕೆಲವು ವ್ಯಂಜನಾಂತ ಶಬ್ದಗಳು (bus, car ಇತ್ಯಾದಿ), ಕನ್ನಡದಲ್ಲಿ ಉಕಾರಾಂತವಾಗುವಾಗಲೂ ಆದಿಯಲ್ಲಿ ಲಗಂ ಗತಿಯನ್ನು ತಪ್ಪಿಸಲು ದ್ವಿತ್ವ ಬರುವುದನ್ನು ಗಮನಿಸಬಹುದು.

          • ಬಸ್ + ಉ => ಬಸ್ಸು - ಆದಿಯಲ್ಲಿರುವ ಒಂದೇ ಲಘು ಅನಂತರ ಬಂದ ದ್ವಿತ್ವದಿಂದ ಗುರುವಾಗಿದೆ.
          • ಕಾರ್ + ಉ => ಕಾರು - ಅದಿಯಲ್ಲಿ ಗುರುವಿರುವುದರಿಂದ ದ್ವಿತ್ವದ ಆವಶ್ಯಕತೆಯಿಲ್ಲ.

          ಕೆಲವು ಆಕ್ಷೇಪಗಳಿಗೆ ಸಮಾಧಾನ

          ಇಲ್ಲಿ ನಿರೂಪಿಸಿರುವ ಲಕ್ಷಣ, ಪ್ರಕ್ರಿಯೆಗಳು ಊಹಾತ್ಮಕವಾಗಿಯೂ, ಪ್ರಾಚೀನ, ಆಧುನಿಕ ಕನ್ನಡ ವೈಯಾಕರಣರ ಮತಗಳಿಗೆ ಹಲವೆಡೆ ವಿರುದ್ಧವಾಗಿಯೂ ಇರುವುದರಿಂದ ಕೆಲವು ಆಕ್ಷೇಪಗಳನ್ನು ನಿರೀಕ್ಷಿಸಬಹುದು. ಅಂತಹ ಕೆಲವು ಆಕ್ಷೇಪಗಳಿಗೆ, ನನಗೆ ಈವರೆಗೆ ಕಂಡ ಸಮಾಧಾನಗಳನ್ನು, ಇಲ್ಲಿ ಕೊಡಬಯಸುತ್ತೇನೆ. ಇಲ್ಲಿ ನಿರೀಕ್ಷಿಸದ ಆಕ್ಷೇಪ, ಖಂಡನೆ, ಅಪವಾದಗಳನ್ನು ಅಥವಾ ಇಲ್ಲಿನ ನಿರೂಪಣೆ, ಸಮಾಧಾನಗಳ ಕೊರತೆಗಳನ್ನು, ಬಲ್ಲವರು ತಿಳಿಸಿದರೆ, ಅದಕ್ಕೆ ಯಾವಾಗಲೂ ಸ್ವಾಗತ, ಋಣಿ. ಏಕೆಂದರೆ, ಹಳೆಯ, ಹೊಸ ವಿಚಾರಗಳನ್ನು ಆಕ್ಷೇಪ, ಖಂಡನೆಗಳಿಗೊಳಪಡಿಸದೆ ಯಾವ ಶಾಸ್ತ್ರವೂ ಮುಂದುವರೆಯದು.

          (ಅರ್ಧ)ಅನುಸ್ವಾರವೇ ಪ್ರತ್ಯಯವೇ? ನಕಾರವೇ ಲಿಂಗವಾಚಕವಾಗಿ ಪ್ರಕೃತಿಯ ಭಾಗವೇ?

          "ಕನ್ನಡ ಕೈಪಿಡಿ"ಯಲ್ಲಿ ಈ ವಿಷಯದ ಬಗೆಗೆ ಇರುವ ಆಕ್ಷೇಪ, ನಿರೂಪಣೆಗಳನ್ನು ಮೇಲೆಯೇ ನೋಡಿದ್ದೇವೆ. ಈ ಲೇಖನದಲ್ಲಿ (ಅರ್ಧ)ಅನುಸ್ವಾರ ಅಥವಾ ನಕಾರಗಳು ಪ್ರಥಮಾ ವಿಭಕ್ತಿಪ್ರತ್ಯಯಗಳೇ ಅಥವಾ ಲಿಂಗವಾಚಕಗಳಾಗಿ ಪ್ರಕೃತಿಯ ಭಾಗಗಳೇ ಎನ್ನುವ ಬಗೆಗೆ ಯಾವ ಖಚಿತವಾದ ನಿಲುವನ್ನೂ ತಳೆದಿಲ್ಲ. ಹಾಗೆಯೇ, (ಅರ್ಧ)ಅನುಸ್ವಾರವು ಲೋಪ, ನಕಾರ, ಮಕಾರ, ವಕಾರ, ಪೂರ್ಣಾನುಸ್ವಾರ, ಪರವ್ಯಂಜನದ ದ್ವಿತ್ವ, ಹೀಗೆ ವಿವಿಧರೂಪಗಳನ್ನು ಪಡೆಯುತ್ತದೆ ಎಂದು ಈ ಲೇಖನದಲ್ಲಿ ನಿರೂಪಿಸಿರುವುದು ಕೇವಲ ಸರಳತೆ ಹಾಗೂ ಸುಲಭವೇದ್ಯತೆಗಾಗಿ ಅಷ್ಟೇ. ಇದಕ್ಕೆ ವಿರುದ್ಧವಾಗಿ, ನಕಾರ, ಮಕಾರಗಳೇ, ವಕಾರ, ಪೂರ್ಣಾನುಸ್ವಾರ, ಪರವ್ಯಂಜನದ ದ್ವಿತ್ವ, ಅರ್ಧಾನುಸ್ವಾರ, ಲೋಪ, ಹೀಗೆ ವಿವಿಧರೂಪಗಳನ್ನು ಪಡೆಯುತ್ತದೆ ಎಂದರೂ, ಇಲ್ಲಿ ನಿರೂಪಿಸಿರುವ ಲಕ್ಷಣ, ಪ್ರಕ್ರಿಯೆಗಳಿಗೆ ಹೆಚ್ಚಿನ ಮೌಲಿಕ ಬದಲಾವಣೆಗಳೇನೂ ಆಗುವುದಿಲ್ಲ.

          ಒಟ್ಟಿನಲ್ಲಿ, ನಕಾರ, ಮಕಾರ, ವಕಾರ, ಪೂರ್ಣಾನುಸ್ವಾರ, ಪರವ್ಯಂಜನದ ದ್ವಿತ್ವ, ಅರ್ಧಾನುಸ್ವಾರ, ಲೋಪ, ಈ ಎಲ್ಲ ಲಕ್ಷಣಗಳ ಪರಿಶೀಲನೆ, ಅವುಗಳ ನಡುವೆ ಕಾಣುವ ಹತ್ತಿರದ ಸಂಬಂಧ ಹಾಗೂ ಕನ್ನಡದ ಹೆಚ್ಚಿನ ವಿಭಕ್ತಿರೂಪಗಳನ್ನು ಪ್ರಕ್ರಿಯಿಸುವಲ್ಲಿ ಅವುಗಳ ಅನಿವಾರ್ಯತೆಯೇ ಇಲ್ಲಿ ನಿರೂಪಿಸಿರುವ ಮುಖ್ಯಾಂಶ. ಈ ಎಲ್ಲ ವಿಚಾರಗಳ ಹೊರೆಯನ್ನು ಹೊರಲು ಆರ್ಧಾನುಸ್ವಾರದ ಪರಿಭಾಷೆಯು ಯೋಗ್ಯವೆನಿಸಿದುದರಿಂದ, ಹಾಗೂ ನಕಾರ, ಮಕಾರಗಳು ಈ ಎಲ್ಲ ರೂಪಗಳನ್ನು ತಾಳುವುದಕ್ಕೆ ಇತರ ಭಾಷೆಗಳಲ್ಲಿ ತೃಪ್ತಿಕರವಾದ ಉದಾಹರಣೆಗಳು (ಸಜಾತೀಯ ದ್ವಿತ್ವವು ಸಾನುಸ್ವಾರವಾಗುವುದು) ಕಾಣಿಸದುದರಿಂದ, ಅರ್ಧಾನುಸ್ವಾರದ ಪರಿಭಾಷೆಯನ್ನೇ ಈ ಲೇಖನದಲ್ಲಿ ಹೆಚ್ಚಾಗಿ ಬಳಸಿದ್ದೇನಾದರೂ, ಬೇರೆ ಯಾವ (ನಕಾರ, ಮಕಾರಗಳನ್ನೂ ಒಳಗೊಂಡ)  ಸೂಕ್ತ ಪಾರಿಭಾಷೆಯನ್ನೂ ಬಳಸಿದರೆ ಮೌಲಿಕವಾದ ವ್ಯತ್ಯಾಸವೇನೂ ಆಗದೆನಿಸುತ್ತದೆ.

          ಕನ್ನಡ, ತಮಿಳುಗಳಲ್ಲಿ (ಅರ್ಧ)ಅನುಸ್ವಾರದ ವಿರಳತೆ

          ಹಲವು ಕನ್ನಡದ (ಕೆಲವು ತಮಿಳಿನ) ಸಾನುಸ್ವಾರವಲ್ಲದ ರೂಪಗಳು, (ಅರ್ಧ)ಅನುಸ್ವಾರಯುಕ್ತವಾದ ರೂಪಗಳ ಪ್ರಕ್ರಿಯೆಗಳಿಂದ ಸಿದ್ಧಿಸಿವೆ ಎಂದು ಈ ಲೇಖನದಲ್ಲಿ ನಿರೂಪಿಸಿರುವಾಗ, ಇವುಗಳಲ್ಲಿ ಕೆಲವು (ಅರ್ಧ)ಅನುಸ್ವಾರಯುಕ್ತವಾದ ಮಧ್ಯಂತರರೂಪಗಳು ಕನ್ನಡದಲ್ಲಿ ಕಾಣುವುದಿಲ್ಲವಲ್ಲ ಎಂದು ಆಕ್ಷೇಪಿಸಬಹುದು. ಉದಾಹರಣೆಗೆ,

          • ಅವಁ + ಉ => ಅವನು - ಇಲ್ಲಿ ಅವಁ ಎನ್ನುವ ರೂಪ ಕನ್ನಡದ ಕೆಲವು ಪ್ರಾಂತ್ಯಗಳಲ್ಲಿ ಆಡುಭಾಷೆಯಲ್ಲಿ ಮಾತ್ರ ಕಾಣಿಸುತ್ತದೆ.
          • ಮರಁ + ಕೆ => ಮರಂಕೆ => ಮರಕ್ಕೆ - ಇಲ್ಲಿ ಮರಂಕೆ ಎನ್ನುವ ರೂಪ ಕನ್ನಡದಲ್ಲಿ ಕಾಣಿಸುವುದಿಲ್ಲ.
          • ಎಁ + ಅಁ + ಕೆ => ಎನಁ + ಕೆ => ಎನಁಗೆ => ಎನಗೆ - ಇಲ್ಲಿ ಎನಁಗೆ ರೂಪ ಕನ್ನಡದಲ್ಲಿ ಕಾಣಿಸುವುದಿಲ್ಲ.
          • ಎಁ + ಅಁ + ಕ್ => ಎನಁ + ಕ್ => ಎನಁಕ್ => ಎನಂಕ್ => ಎನಕ್ಕ್ - ಇಲ್ಲಿ ಎನಁಕ್ಎನಂಕ್ ಎನ್ನುವ ರೂಪಗಳು ತಮಿಳಿನಲ್ಲಿ ಕಾಣಿಸುವುದಿಲ್ಲ.
          • ರಾಮಁ + ಇಁ + ಕೆ => ರಾಮನಿಁ + ಕೆ => ರಾಮನಿಁಗೆ => ರಾಮನಿಗೆ - ಇಲ್ಲಿ ರಾಮನಿಁಗೆ (ಅಥವಾ ರಾಮನಿಂಗೆ) ಎನ್ನುವ ರೂಪ ಕನ್ನಡದಲ್ಲಿ ಕಾಣಿಸುವುದಿಲ್ಲ.

          ಇದಕ್ಕೆ ಸಮಾಧಾನವಾಗಿ ಇಷ್ಟು ಹೇಳಬಹುದು. ಭಾಷೆಗಳ ಬೆಳವಣಿಗೆ ಎಂಬುದು ಒಂದು ಬಹುಮುಖಿ ಪ್ರಕ್ರಿಯೆ. ಹಾಗೆ ಬೆಳೆಯುವಾಗ ಭಾಷೆಗಳ ಬೇರೆ ಬೇರೆ ಎಳೆಗಳು ಮೂಲಭಾಷೆಯ ಹಲವು ಸ್ವರೂಪಗಳನ್ನು ಬಳುವಳಿಯಾಗಿ ಪಡೆದಂತೆಯೇ, ತಮ್ಮವೇ ಆದ ವೈಶಿಷ್ಟ್ಯ, ವೈಚಿತ್ರ್ಯಗಳನ್ನೂ ಪಡೆಯುತ್ತವೆ. ಒಂದು ಎಳೆಯು ಕೆಲವು ಮೂಲ ರೂಪ, ಪ್ರಕ್ರಿಯೆಗಳನ್ನು ಉಳಿಸಿಕೊಂಡು, ಬೇರೆ ಕೆಲವು ಮೂಲ ರೂಪ, ಪ್ರಕ್ರಿಯೆಗಳನ್ನು ಬದಲಾಯಿಸಿಕೊಂಡರೆ, ಇನ್ನೊಂದು ಎಳೆಯು ಬೇರೆ ಕೆಲವು ಮೂಲ ರೂಪ, ಪ್ರಕ್ರಿಯೆಗಳನ್ನು ಉಳಿಸಿಕೊಂಡು, ಮತ್ತೆ ಬೇರಾವುದೋ ಮೂಲ ರೂಪ, ಪ್ರಕ್ರಿಯೆಗಳನ್ನು ಬದಲಾಯಿಸಿಕೊಳ್ಳುತ್ತವೆ. ಹೀಗಾಗದಿದ್ದರೆ, ಅವು ಬೇರೆ ಬೇರೆ ಭಾಷೆ, ಉಪಭಾಷೆಗಳಾಗಲು ಸಾಧ್ಯವಿಲ್ಲ.

          ಉದಾಹರಣೆಗೆ, ವ್ಯಾಕರಣಪ್ರಕ್ರಿಯೆಗಳ ಬದಲಾಗಿ ಮನೆ ಎಂಬ ಒಂದು ಸರಳಶಬ್ದವನ್ನು ನೊಡೋಣ. ನನಗೆ ತಿಳಿದಂತೆ, ಈ ಶಬ್ದ, ದ್ರಾವಿಡಭಾಷೆಗಳಲ್ಲಿ, ಕನ್ನಡದಲ್ಲಿ ಮಾತ್ರ ಕಾಣಿಸುತ್ತದೆ. ಅಲ್ಲದೆ ಆ ಅರ್ಥವನ್ನು ಸೂಚಿಸಲು ಅದೊಂದೇ ಸೂಕ್ತವೆನಿಸುವಂತಿದೆ. ತಮಿಳಿನಲ್ಲಿ ಇದಕ್ಕೆ ಸಮನಾದ ಅರ್ಥದಲ್ಲಿ ವೀಟ್ ಎಂಬ ಶಬ್ದ ಕಾಣಿಸುತ್ತದೆ. ಇದಕ್ಕೆ ಸಾಮ್ಯವಿರುವ ಬೀಡು ಎನ್ನುವ ಶಬ್ದ ಕನ್ನಡದಲ್ಲಿದ್ದರೂ ಅದರ ಬಳಕೆ ಮನೆ ಎನ್ನುವುದಕ್ಕಿಂತ ಬಹಳ ವಿರಳ. ಅಲ್ಲದೆ, ಕನ್ನಡದಲ್ಲಿ, ಮನೆ, ಬೀಡು, ಇವೆರಡರಲ್ಲಿ ಸ್ವಲ್ಪ ಅರ್ಥವ್ಯತ್ಯಾಸವೂ ಆಗಿರುವುದನ್ನು ನೋಡಬಹುದು. ತುಳುವಿನಲ್ಲಿ, ಕನ್ನಡದ ಮನೆ ಎಂಬುದಕ್ಕೆ ಸಮನಾದ ಅರ್ಥದಲ್ಲಿ ಇಲ್ಲ್ ಎಂಬ ಶಬ್ದ ಕಾಣಿಸುತ್ತದೆ. ಈ ಕಾಲದಲ್ಲಿ ಹೆಚ್ಚು ಜನರ ಮನೆಮಾತಾಗಿರುವ ಕನ್ನಡ, ತಮಿಳುಗಳಲ್ಲಿ ಇಲ್ಲ್ ಶಬ್ದವು ಕಾಣಿಸದಿರುವುದನ್ನೂ, ತುಳುವು ಕಡಿಮೆ ಜನರ ಮನೆಮಾತಾಗಿರುವುದನ್ನೂ ನೋಡಿ, ಇಲ್ಲ್ ಎಂಬ ಶಬ್ದವನ್ನು ಕೇವಲ ತುಳುವೇ ಸೃಷ್ಟಿಸಿಕೊಂಡಿದೆ ಎನ್ನಬಹುದೇ? ತುಳುವಿನಲ್ಲಿ ಇಲ್ಲ್ ಎಂಬುದಕ್ಕೆ ಸಮನಾಗಿ, ತೆಲುಗಿನಲ್ಲಿ ಇಲ್ಲು ಎಂಬ ಶಬ್ದವು ಅದೇ ಅರ್ಥದಲ್ಲಿ ಕಾಣಿಸುತ್ತದೆ. ತೆಲುಗುತುಳುಗಳು, ದ್ರಾವಿಡಭಾಷೆಗಳಲ್ಲಿ ಕನ್ನಡ, ತಮಿಳುಗಳಿಗಿಂತ ಮೊದಲೇ ಮೂಲದ್ರಾವಿಡಭಾಷಾಧಾರೆಯಿಂದ ಕವಲೊಡೆದಿರುವುದನ್ನು  ಗಮನಿಸಿದಾಗ, ಇಲ್ಲ್ / ಇಲ್ಲು ಎಂಬುದು ಮೂಲದ್ರಾವಿಡಭಾಷೆಯಲ್ಲಿ ಇಲ್ಲದೆ, ತೆಲುಗು, ತುಳುಗಳಲ್ಲಿ ಎರಡು ಬಾರಿ ಸ್ವತಂತ್ರವಾಗಿ     ರೂಪುಗೊಂಡಿತು ಎನ್ನುವುದಕ್ಕಿಂತ, ಅದು ತೆಲುಗು, ತುಳುಗಳು ಕವಲೊಡೆಯುವ ಮೊದಲೇ ಮೂಲದ್ರಾವಿಡಭಾಷೆಧಾರೆಯಲ್ಲಿದ್ದ ಶಬ್ದವಾಗಿದ್ದು, ಆಮೇಲೆ ಕವಲೊಡೆದ ಕನ್ನಡ, ತಮಿಳುಗಳ ಧಾರೆಯಲ್ಲಿ ಬಳಕೆಯಿಂದ ಬಿದ್ದುಹೋಯಿತು ಎನ್ನುವುದೇ ತರ್ಕಸಮ್ಮತವಾಗುತ್ತದೆ.

          ಭಾಷೆಯ ಬೆಳವಣಿಗೆಯನ್ನು ಹೋಲುವ, ಜೀವಶಾಸ್ತ್ರವಿಕಾಸವಾದದ ಪ್ರಕ್ರಿಯೆಯ ಉದಾಹರಣೆಯೊಂದನ್ನು ತೆಗೆದುಕೊಳ್ಳುವುದಾದರೆ, ಈಗ ನೆಲದ ಮೇಲೆ ಶ್ವಾಸಕೋಶದ ಮೂಲಕ ಗಾಳಿಯನ್ನುಸಿರಾಡುವ ಎಲ್ಲ ಸರೀಸೃಪ (reptile), ಪಕ್ಷಿ, ಸಸ್ತನಿ(mammal)ಜಾತಿಗಳು, ಹಿಂದೆ ಕಿವಿರು(gill)ಗಳ ಮೂಲಕ ನೀರನ್ನುಸಿರಾಡುವ ಮೀನು ಇತ್ಯಾದಿ ಕಶೇರುಕ(vertebrate)ಜಾತಿಗಳಿಂದ ವಿಕಸಿತವಾದುವು ಎನ್ನುವ ನಿರೂಪಣೆಯನ್ನು ಗಮನಿಸಬಹುದು. ಈ ನಿರೂಪಣೆಗೂ, ಸರೀಸೃಪ, ಪಕ್ಷಿ, ಸಸ್ತನಿಗಳಾವುವಲ್ಲೂ, ಹಲವು ಮಿಲಿಯವರ್ಷಗಳ ಕಾಲದಿಂದಲೂ ಶ್ವಾಸಕೋಶಗಳೇ ಕಾಣಿಸುವುದಲ್ಲದೆ, ಕಿವಿರುಗಳು ಕಾಣಿಸಿಲ್ಲ; ಹಾಗಾಗಿ, ಜಲಚರ ಕಶೇರುಕಗಳಿಗೂ, ಸರೀಸೃಪ, ಪಕ್ಷಿ, ಸಸ್ತನಿಗಳಿಗೂ, ಜಲಚರ ಕಶೇರುಕಗಳ ಕಿವಿರುಗಳಿಗೂ,  ಸರೀಸೃಪ, ಪಕ್ಷಿ, ಸಸ್ತನಿಗಳ ಕಿವಿಯ ಅವಯವಗಳಿಗೂ ಯಾವ ಸಂಬಂದವೂ ಇಲ್ಲ ಎನ್ನುವ ಆಕ್ಷೇಪವನ್ನೆತ್ತಬಹುದು. ಆದರೆ, ಕಪ್ಪೆ ಮೊದಲಾದ ಉಭಯಚರ(amphibian)ಗಳ ಜೀವನಚಕ್ರದಲ್ಲಿ, ಅವು ಮೊದಲು ಜಲಚರಗಳಾದ ಗೊದಮೊಟ್ಟೆ(tadpole)ಗಳಾಗಿರುವಾಗ ಕಿವಿರುಗಳಿದ್ದು, ಮುಂದೆ ರೂಪಾಂತರಗೊಂಡು ಉಭಯಚರಗಳಾದಾಗ ಶ್ವಾಸಕೋಶಗಳನ್ನು ಬೆಳೆಸಿಕೊಳ್ಳುವುದನ್ನೂ, ಜಲಚರ ಭ್ರೂಣಗಳ ಬೆಳವಣಿಗೆಯಲ್ಲಿ ಕಿವಿರುಗಳಾಗುವ ಭ್ರೂಣಭಾಗಗಳೇ, ಸರೀಸೃಪ, ಪಕ್ಷಿ, ಸಸ್ತಿನಿಗಳ ಭ್ರೂಣಗಳ ಬೆಳವಣಿಗೆಯಲ್ಲಿ ಕಿವಿಯ (ಮತ್ತು ಹತ್ತಿರದ) ಅವಯವಗಳಾಗುವುದನ್ನೂ ಕಂಡಾಗ, ಈ ಎಲ್ಲ ಜೀವಜಾತಿಗಳ ಜಲಚರ, ಕಶೇರುಕ ಮೂಲದ ಬಗೆಗೆ ಸಂಶಯವುಳಿಯಲಾರದು. ಈ ನಿರೂಪಣೆ, ಜೀವಶಾಸ್ತ್ರ, ವಿಕಾಸವಾದ, ಭ್ರೂಣಗಳ ಬೆಳವಣಿಗೆಯ ಯಾವ ಪ್ರಶ್ನೆಗಳ ಮೇಲೂ ಬೆಳಕು ಚೆಲ್ಲದಿದ್ದಲ್ಲಿ ಅದರ ಬಗೆಗೆ ಯಾವ ಗಮನವನ್ನೂ ಕೊಡಬೇಕಾಗುತ್ತಿರಲಿಲ್ಲ, ನಿಜ. ಆದರೆ, ಈ ನಿರೂಪಣೆಯು ತೋರಿಸುವ, ಈ ಎಲ್ಲ ಜೀವಜಾತಿಗಳ ಬೆಳವಣಿಗೆಯ ಪ್ರಕ್ರಿಯೆಗಳ ನಡುವಿನ ನಿರಂತರತೆಯ, ಆ ಮೂಲಕ ಬಗೆಹರಿಸುವ ಜೀವಶಾಸ್ತ್ರ, ವಿಕಾಸವಾದ, ಭ್ರೂಣಗಳ ಬೆಳವಣಿಗೆಯ ಪ್ರಶ್ನೆಗಳ ಮುಂದೆ, ಸರೀಸೃಪ, ಪಕ್ಷಿ, ಸಸ್ತನಿಗಳೂ ಜಲಚರಗಳಾಗಿರದಿರುವುದನ್ನೂ, ಕಿವಿರನ್ನು ಹೊಂದಿರದಿರುವುದನ್ನೂ, ಅವುಗಳಿಗೆ ಸಾಮಾನ್ಯವಾದ ಜೀವಜಾತಿಧಾರೆಯ ಎಳೆಯಲ್ಲಿ ನಡೆದ ತದನಂತರದ ಪ್ರಕ್ರಿಯೆಯೆನ್ನದೆ ಬೇರೆ ದಾರಿಯಿಲ್ಲ.

          ಈ ಬೆಳಕಲ್ಲಿ ಕನ್ನಡ, ತಮಿಳುಗಳಲ್ಲಿ ಅನುಸ್ವಾರವು ಅಷ್ಟಾಗಿ ಕಾಣಸುವುದಿಲ್ಲ ಎನ್ನುವ ಆಕ್ಷೇಪವನ್ನು ಗಮನಿಸುತ್ತಾ,  ತೆಲುಗು, ಹವ್ಯಕಗಳಲ್ಲಿ ಧಾರಾಳವಾಗಿ ಕಾಣಿಸುವ ಪ್ರಥಮಾ ವಿಭಕ್ತ್ಯರ್ಥದ ಅರ್ಧಾನುಸ್ವಾರವನ್ನೂ (ಹವ್ಯಕದ ಅವಁ), ಅದು ನಕಾರವಾಗುವ ಪ್ರಕ್ರಿಯೆಯನ್ನೂ (ಹವ್ಯಕದ ಬೈಂದನಾ), ಮೇಲೆ ತೋರಿಸಿದ ಪ್ರಕ್ರಿಯೆಗಳಲ್ಲಿ ಕಾಣುವ ಮಧ್ಯಂತರರೂಪಗಳು ಬೇರೆ ಭಾಷೆಗಳಲ್ಲಿ ಕಾಣುವುದನ್ನೂ (ಹವ್ಯಕದ ಎನಁಗೆ), ಅಂತಹ ಮಧ್ಯಂತರರೂಪಗಳು ಇತರ ಭಾಷೆಗಳಲ್ಲೂ ಕೆಲವೊಮ್ಮೆ ಕಾಣದಿರುವಲ್ಲಿ ಅದಕ್ಕೆ ಸಮಾನವಾದ ಪ್ರಕ್ರಿಯೆಯಿಂದ ಸಿದ್ಧಿಸಿದ ಅವನ್ನು ಹೋಲುವ ರೂಪಗಳು ಇತರ ಭಾಷೆಗಳಲ್ಲಿ ಕಾಣುವುದನ್ನೂ (ಮರಂಕೆ ಎನ್ನುವುದರ ಸಮಾನವಾದ ಪ್ರಕ್ರಿಯೆಯಿಂದ ಸಿದ್ಧಿಸುವ ತುಳುವಿನ ಮರೊಂಕ್), ಸಾನುಸ್ವಾರ, ದ್ವಿತ್ವಯುಕ್ತವಾದ ಎರಡೂ ರೂಪಗಳು ಒಂದೇ ವಿಭಕ್ತ್ಯರ್ಥದಲ್ಲಿ ಕೆಲವು ಭಾಷೆಗಳಲ್ಲಿರುವುದನ್ನೂ  (ತುಳುವಿನ ಮರೊಂತ, ಮರತ್ತ, ಮರೊಂಟ್, ಮರಟ್ಟ್), ಒಂದೇ ವಿಭಕ್ತ್ಯರ್ಥದ ಬೇರೆ ಬೇರೆ ರೂಪಗಳಲ್ಲಿ ಪ್ರಕ್ರಿಯಾಸಾಮ್ಯತೆಯಿರುವಂತೆಯೇ ಅಲ್ಲಲ್ಲಿ ಕಾಣಿಸುವ ಪ್ರಕ್ರಿಯಾಭೇದವನ್ನೂ, ಅದರಿಂದ ಕಾಣುವ ಸಿದ್ಧರೂಪದ ಸಾಮ್ಯತೆ, ಭೇದಗಳನ್ನೂ (ಕನ್ನಡದ ಎನಗೆ ಹಾಗೂ ತಮಿಳಿನ ಎನಕ್ಕ್ ಎಂಬಲ್ಲಿನ ಪ್ರಕ್ರಿಯಾಸಾಮ್ಯತೆ ಹಾಗೂ ತುಳುವಿನ ಎಂಕ್ ಎಂಬಲ್ಲಿರುವ ಪ್ರಕ್ರಿಯಾಭೇದ) ಕಂಡಾಗ, ಈ ಪ್ರಕ್ರಿಯೆಗಳನ್ನು  ಉಪೇಕ್ಷಿಸಲಾಗುವುದಿಲ್ಲ. ಇಲ್ಲೂ, ಈ ಪ್ರಕ್ರಿಯೆಗಳು ದ್ರಾವಿಡಭಾಷೆಗಳ ವಿಭಕ್ತಿರೂಪಗಳ ವಿವಿಧತೆಯ ಮೇಲೆ ಬೆಳಕು ಚೆಲ್ಲದಿದ್ದರೆ, ಅವುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿರುತ್ತಿರಲಿಲ್ಲ. ಆದರೆ, ಮೇಲೆ ತೋರಿಸಿದಂತೆ, ಈ ಪ್ರಕ್ರಿಯೆಗಳು ವಿಭಕ್ತಿರೂಪಗಳ ವೈವಿಧ್ಯವನ್ನು, ಮತ್ತವುಗಳ ಅರ್ಥವ್ಯತ್ಯಾಸಗಳನ್ನು ಸ್ಪಷ್ಟವಾಗಿಸುವುದನ್ನು (ಮಣ್ಣ, ಮಣ್ಣಿನ, ಹಣ್ಣ, ಹಣ್ಣಿನ, ಹಲಸ, ಹಲಸಿನ ರೂಪಗಳ ಅರ್ಥವ್ಯತ್ಯಾಸ) ನೋಡಿದಾಗ, ಅವು ಮೂಲದ್ರಾವಿಡಭಾಷಾಧಾರೆಯಲ್ಲಿ ಇದ್ದ ಪ್ರಕ್ರಿಯೆಗಳೇ ಆಗಿದ್ದು, ಮುಂದೆ ಕನ್ನಡ, ತಮಿಳುಗಳ ಧಾರೆಯಲ್ಲಿ ಕೊನೆಯ ರೂಪಾಂತರಗಳೇ ಸ್ಥಿರವಾದವು ಎನ್ನದೆ ಬೇರೆ ದಾರಿಯಿಲ್ಲ.

          ಇಲ್ಲಿರುವ ವಿಚಾರಸರಣಿ ಊಹಾತ್ಮಕ

          ಮೇಲೆಯೇ ಹೇಳಿರುವಂತೆ, ಈ ಲೇಖನದಲ್ಲಿ ನಿರೂಪಿಸಿರುವ ವಿಚಾರಗಳೆಲ್ಲವೂ ಉಹಾತ್ಮಕವೆನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ, ಈ ಪ್ರಕ್ರಿಯೆಗಳು ಕಾಲಗರ್ಭದಲ್ಲಿ ಹುದುಗಿ ಹೋಗಿದ್ದು, ಜೀವಶಾಸ್ತ್ರದಲ್ಲಿ ಕಾಣಬಹುದಾದ ಪಳೆಯುಳಿಕೆ(fossil)ಗಳಂತೆ ಮೂಲದ್ರಾವಿಡಭಾಷೆಯ ಈ ಪ್ರಾಚೀನ ಪ್ರಕ್ರಿಯೆಗಳ ಪಳೆಯುಳಿಕೆಗಳಿರುವ ಲಿಖಿತರೂಪಗಳು ನಮಗೆ ಸಿಗುವ ಸಾಧ್ಯತೆಗಳು ಇಲ್ಲವೇ ಇಲ್ಲವೆನ್ನುವಂತಿರುವಾಗ, ಇವನ್ನು ಕೇವಲ ಊಹೆಯ ಬಲದಲ್ಲಿ ಒಪ್ಪುವುದು ಹೇಗೆ ಎಂದು ಆಕ್ಷೇಪಿಸಬಹುದು.

          ಇದಕ್ಕೆ ಸಮಾಧಾನವಾಗಿ ಹೀಗೆನ್ನಬಹುದಷ್ಟೆ. ಊಹೆಗಳನ್ನೇ ಹೆಚ್ಚಾಗಿ ಆಧರಿಸುವುದು ಭಾಷಾಶಾಸ್ತ್ರ, ವ್ಯಾಕರಣಶಾಸ್ತ್ರಗಳಿಗೆ ಒದಗುವ ಅನಿವಾರ್ಯತೆಯಾಗಿದ್ದು, ಈಗಿನವರೆಗೆ ಶಾಸ್ತ್ರಕಾರರು ಒಪ್ಪಿರುವ, ನಿರೂಪಿಸಿರುವ ಪ್ರಕ್ರಿಯೆಗಳೂ ಊಹೆಗಳನ್ನು ಅಷ್ಟಿಷ್ಟು ಅವಲಂಬಿಸಿಯೇ ಇವೆ.

          ಇಲ್ಲಿ, ೨೦ನೇ ಶತಮಾನದ ಉತ್ಕೃಷ್ಟ ತತ್ವಶಾಸ್ತ್ರಜ್ಞ ಹಾಗೂ ಜ್ಞಾನಮೀಮಾಂಸಕನಾದ ಕಾರ್ಲ್ ಪೋ್‍ಪ್ಪರ್ (Karl Popper), ಅನುಮಾನಗಳನ್ನು, ಅಪವಾದಗಳಿಂದ ಹಾಗೂ ಇತರ ಅನುಮಾನಗಳಿಂದ ಸಶಕ್ತವಾಗಿ ಖಂಡಿಸಬಹುದು ಮಾತ್ರವಲ್ಲ, ಎಲ್ಲ ಶಾಸ್ತ್ರಗಳೂ ಮುಂದುವರೆಯುವ ರೀತಿ ನಿಜವಾಗಿಯೂ ಇದುವೇ ಆಗಿದೆ ಎನ್ನುವುನ್ನೂ, ಪ್ರತ್ಯಕ್ಷಶಬ್ದಾದಿ ಪ್ರಮಾಣಗಳೆಲ್ಲವೂ ಸೂಕ್ಷ್ಮವಾಗಿ ನೋಡಿದರೆ ಅನುಮಾನಪ್ರಮಾಣಗಳೇ ಆಗಿವೆಯೆಂಬುದನ್ನೂ ಸಾಧಾರವಾಗಿ ತನ್ನ ಪುಸ್ತಕಗಳಲ್ಲಿ ನಿರೂಪಿಸಿರುವುದನ್ನು ಗಮನಿಸಬಹುದು.

          Conjectures and Refutations, Page 37

          8. Neither observation nor reason is an authority. Intellectual intuition and imagination are most important, but they are not reliable: they may show us things very clearly, and yet they may mislead us. They are indispensable as the main sources of our theories; but most of our theories are false anyway. The most important function of observation and reasoning, and even of intuition and imagination, is to help us in the critical examination of those bold conjectures which are the means by which we probe into the unknown.

          ಆದರೆ, ಕೇವಲ ಅನುಮಾನಪ್ರಮಾಣದಿಂದ ಜ್ಞಾನಾರ್ಜನೆ ಅಸಾಧ್ಯವೆಂದು ಹತಾಶರಾಗಬೇಕಿಲ್ಲ. ನಮ್ಮೆಲ್ಲರಲ್ಲೂ ಇರುವ ಕುತೂಹಲ, ಸರ್ಜನಶೀಲತೆ, ಕಲ್ಪನಾಶಕ್ತಿಗಳಿಂದ ಸಶಕ್ತವಾದ ವಿಚಾರಗಳನ್ನು ಕಲ್ಪಿಸಿ, ತರ್ಕಬುದ್ಧಿ, ವಿವೇಚನಾಸಾಮರ್ಥ್ಯಗಳ ಒರೆಗೆ ಸತತವಾಗಿ ಹಚ್ಚುತ್ತಿದ್ದರೆ ಜ್ಞಾನವೃದ್ಧಿಯಾಗುವುದು ಖಂಡಿತ. ಇಡೀ ಮನುಷ್ಯಜಾತಿಯು ಇಲ್ಲಿಯವರೆಗೆ ಸಂಚಯಿಸಿರುವ ಜ್ಞಾನಪರಂಪರೆಯ ಪ್ರತಿಯೊಂದು ತುಣುಕೂ ನಮಗೆ ದೊರಕಿರುವುದು ಇಂತಹ ನಿರಂತರ ಮಥನಕ್ರಿಯೆಯಿಂದಲೇ.

          ಕಾರ್ಲ್ ಪೋ್‍ಪ್ಪರ್ (Karl Popper) ಅವರ ಈ ನಿರೂಪಣೆಯಿಂದ ಪ್ರೇರಿತರಾಗಿ, ಪ್ರಖ್ಯಾತ Quantum ಭೌತಶಾಸ್ತ್ರಜ್ಞ ಡೇವಿಡ್ ಡೋ್‍ಯ್ಚ್ (David Deutsch), ಈ ಪ್ರಕ್ರಿಯೆಯ ಮೇಲೆ ಇನ್ನೂ ಬೆಳಕನ್ನು ಚೆಲ್ಲುತ್ತಾ, ಹೀಗೆನ್ನುತ್ತಾರೆ.

          The Beginning of Infinity, Page 3, 4

          Scientific theories are explanations: assertions about what is out there and how it behaves. Where do these theories come from? For most of the history of science, it was mistakenly believed that we 'derive' them from the evidence of our senses - a philosophical doctrine known as empirism: ...

          But, in reality, scientific theories are not derived from anything. We do not read them in nature, nor does nature write them into us. They are guesses - bold conjectures. Human minds create them by rearranging, combining, altering and adding to existing ideas with the intention of improving upon them. We do not begin with 'white paper' at birth, but with inborn expectations and intentions and an innate ability to improve upon them using thought and experience. Experience is indeed essential to science, but its role is different from that supposed by empiricism. It is not the source from which theories are derived. Its main use is to choose between theories that have already been guessed. That is what 'learning from experience' is. ...

          The Beginning of Infinity, Page 14, 15

          The reason that testability is not enough is that prediction is not, and cannot be, the purpose of science. Consider an audience watching a conjuring trick. The problem facing them has much the same logic as a scientific problem. ...

          The problem is not to predict the trick's appearance. I may, for instance, predict that if a conjurer seems to place various balls under various cups, those cups will later appear to be empty; and I may predict that if the conjurer appears to saw someone in half, that person will later appear on stage unharmed. Those are testable predictions. I may experience many conjuring shows and see my predictions vindicated every time. But that does not even address, let alone solve, the problem of how the trick works. Solving it requires an explanation: a statement of the reality that accounts for the appearance. ...

          ಇಲ್ಲಿ ಡೇವಿಡ್ ಡೋ್‍ಯ್ಚ್ (David Deutsch) ನಿರೂಪಿಸಿದ, ಒಂದು ವಿದ್ಯಮಾನದ ಭವಿಷ್ಯವಾಣಿಗೂ, ಅದರ ಹಿಂದಿರುವ ತಥ್ಯದ ವಿವರಣೆಗೂ ಇರುವ ವ್ಯತ್ಯಾಸವೇ, ಶಾಸ್ತ್ರಗಳ ಬೆಳವಣಿಗೆಗೆ ಬಹಳ ಮುಖ್ಯವಾದುದಾಗಿದೆ. ಉದಾಹರಣೆಗೆ, ರಸಾಯನಶಾಸ್ತ್ರದ ಎಲ್ಲ ಧಾತುಗಳನ್ನು Periodic Table ರೂಪದಲ್ಲಿ ವ್ಯವಸ್ಥಿಸಿದಾಗ, ಅವುಗಳ ರಾಸಾಯನಿಕಗುಣಗಳ ಪರಿಚಯ ಕೂಡಲೇ ಆಗುವುದಾದರೂ ಆ ರಾಸಾಯನಿಕಗುಣಗಳ ಹಿಂದಿನ ಕಾರಣ, ಪ್ರಕ್ರಿಯೆಗಳ ಪರಿಚಯವಾಗುವುದಿಲ್ಲ. ಎಲ್ಲ ಧಾತುಗಳ ಅಣುಗಳೊಳಗಿರುವ, ಪ್ರೋಟೋನ್ (proton), ಇಲೆಕ್ಟ್ರೋನ್(electron)ಗಳು ಹಾಗೂ ಆ ಇಲೆಕ್ಟ್ರೋನ್ ಗಳ ಕಕ್ಷೆಗಳ ಸ್ವರೂಪ, ಸಾಮರ್ಥ್ಯಗಳ ವಿವರಣೆ ಮಾತ್ರ  ಎಲ್ಲ ಧಾತುಗಳ ರಾಸಾಯನಿಕಗುಣಗಳ ಹಿಂದಿರುವ ವೈವಿಧ್ಯ, ಕಾರಣ, ಪ್ರಕ್ರಿಯೆಗಳ ತಥ್ಯವನ್ನು ತೋರಿಸೀತು. Periodic Table ಕೇವಲ ರಸಾಯನಶಾಸ್ತ್ರದ ವಿದ್ಯಮಾನಗಳ ಅಡಕವಾದ ಚಿತ್ರವಾದೀತಷ್ಟೇ.

          ಕೇವಲ ಅನುಮಾನಪ್ರಮಾಣದಿಂದ ಜ್ಞಾನಪರಂಪರೆಯೇ ಬೆಳೆಯುವ ಈ ಪ್ರಕ್ರಿಯೆ ಕೇವಲ ವಿಜ್ಞಾನಲೋಕಕ್ಕೆ ಮಾತ್ರ ಸೀಮಿತವಲ್ಲ. ಭಾಷೆ, ವ್ಯಾಕರಣ, ಇತಿಹಾಸ, ಸಂಗೀತ ಇತ್ಯಾದಿ, ಎಲ್ಲ ಶಾಸ್ತ್ರಗಳ ಜ್ಞಾನಪರಂಪರೆಗಳೂ ಬೆಳೆಯವುದು ಈ ಒಂದೇ ಪ್ರಕ್ರಿಯೆಯಿಂದ.

          ಈ ಬೆಳಕಿನಲ್ಲಿ, ಮೇಲೆ ಹೇಳಿದ "ಈಗಿನವರೆಗೆ ಶಾಸ್ತ್ರಕಾರರು ಒಪ್ಪಿರುವ, ನಿರೂಪಿಸಿರುವ ಪ್ರಕ್ರಿಯೆಗಳೂ ಊಹೆಗಳನ್ನು ಅಷ್ಟಿಷ್ಟು ಅವಲಂಬಿಸಿಯೇ ಇವೆ" ಎಂಬ ಮಾತನ್ನು ಸ್ವಲ್ಪ ಬಿಡಿಸಿ ನೋಡೋಣ. 

          ದಿಗ್ವಾಚಕಗಳ ವಿಭಕ್ತಿರೂಪಗಳಲ್ಲಿ ಕೆಲವೆಡೆ ಣಕಾರ ಕಾಣಿಸುವುದನ್ನು ಮೇಲೆ ನೋಡಿದ್ದೇವೆ. ಇದನ್ನು ನಮ್ಮ ವ್ಯಾಕರಣಪರಂಪರೆಯಲ್ಲಿ ಅಣಾಗಮ (ಸೂತ್ರ ೧೨೦) ಎಂದು ಕರೆಯಲಾಗಿದೆ. ಇಲ್ಲಿ ಹೇಳುವ (ಮೂಡು + ಅಣ್ + ಅ => ಮೂಡಣ, ತೆಂಕು + ಅಣ್ + ಇಂ => ತೆಂಕಣಿಂ ಇತ್ಯಾದಿ) ಪ್ರಕ್ರಿಯೆಯಲ್ಲಿ ಕಾಣುವ ಅಣ್ ಎಂಬ ತುಣುಕು, ಕನ್ನಡಭಾಷೆಯ ಬೇರೆ ಯಾವ ಪ್ರಕ್ರಿಯೆಯಲ್ಲಾಗಲೀ, ಸ್ವತಂತ್ರವಾಗಿಯಾಗಲೀ ಕಾಣಿಸುವುದಿಲ್ಲ. ಅಷ್ಟೇ ಏಕೆ, ಈ ಯಾವ ಪ್ರಕ್ರಿಯೆಗಳೂ, ಇಂತಹ ತುಣುಕುಗಳೂ ಭಾಷೆಯಲ್ಲಿ ಎಂದೂ ಬಳಕೆಯಾಗುವುದಿಲ್ಲ. ಕಾಣುವುದು ಕೇವಲ ಮೂಡಣ, ತೆಂಕಣಿಂ ಇತ್ಯಾದಿ ಸಿದ್ಧರೂಪಗಳು. ಅಂ, ಇಂ, ಇತ್ಯಾದಿ ವಿಭಕ್ತಿಪ್ರತ್ಯಯಗಳೂ ಭಾಷೆಯಲ್ಲಿ ಕಾಣುವುದಿಲ್ಲ. ಕಾಣುವುದು ಕೇವಲ ರಾಮನಂ, ಮರದಿಂ, ಮೂಡಣ ಇತ್ಯಾದಿ ಸಿದ್ಧರೂಪಗಳು ಮಾತ್ರ. ಹಾಗೆಯೇ, ಕೆಲವು ವಿಭಕ್ತಿರೂಪಗಳಲ್ಲಿ ಕಾಣುವ ಇನ್ / ಇನ ಎಂಬ ತುಣುಕೂ (ಇದಕ್ಕೆ ಇನಾಗಮವೆಂದು ನಮ್ಮ ವ್ಯಾಕರಣಪರಂಪರೆಯಲ್ಲಿ ಹೆಸರು) ಸ್ವತಂತ್ರವಾಗಿ ಎಲ್ಲೂ ಕಾಣುವುದಿಲ್ಲ. ಕಾಣುವುದು ಕೇವಲ ಮಣ್ಣಿನಕಾಲಿನ ಇತ್ಯಾದಿ ಸಿದ್ಧರೂಪಗಳು ಮಾತ್ರ. ಹಾಗಾಗಿ, ಈ ತುಣುಕುಗಳೂ, ಪ್ರತ್ಯಯಗಳೂ, ಪ್ರಕ್ರಿಯೆಗಳೂ ಊಹೆಗಳೇ ಎನ್ನದೆ ಬೇರೆ ದಾರಿಯಿಲ್ಲ. 

          ಇಲ್ಲಿ ಕೇಳಬೇಕಾದ ಪ್ರಶ್ನೆ, ಇವೆಲ್ಲಾ ಊಹೆಗಳೇ ಎನ್ನುವುದಲ್ಲ; ಈ ಊಹೆಗಳಲ್ಲಿ ತಥ್ಯಾಂಶ ಅಡಗಿದೆಯೇ ಎನ್ನುವುದು. ಇದನ್ನು ನಿರ್ಧರಿಸಲು, ಈ ಊಹೆಗಳ ಪೂರ್ಣ ವ್ಯಾಪ್ತಿಯಲ್ಲಿ ಸಾರ್ಥಕತೆ, ಸಮರ್ಪಕತೆ, ಅಪವಾದ, ವಿರೋಧಾಭಾಸಗಳಿವೆಯೇ, ಈ ಊಹೆಗಳಿಗಿಂತ ಹೆಚ್ಚು ಸಾರ್ಥಕವಾದ, ಕಡಿಮೆ ಅಪವಾದ, ವಿರೋಧಾಭಾಸಗಳಿರುವ ಬೇರೆ ಊಹೆಗಳಿವೆಯೇ ಎಂದು ಹಲವು ದಿಕ್ಕುಗಳಲ್ಲಿ ಯೋಚಿಸಿ, ಅಳೆದು, ತೂಗಬೇಕಾಗುತ್ತದೆ. ಈ ಪ್ರಕ್ರಿಯೆಯ ಮೂಲಕ, ವಿಭಕ್ತಿಪ್ರತ್ಯಯ ಹಾಗೂ ಅವುಗಳ ವ್ಯಾಕರಣಪ್ರಕ್ರಿಯೆಗಳ (ಅವು ಊಹೆಗಳೇ ಆದರೂ) ಸಾರ್ಥಕತೆಯನ್ನು ಮನಗಾಣಬಹುದು.

          ಆದರೆ, ಅಣಾಗಮ, ಇನಾಗಮಗಳ ವಿಷಯದಲ್ಲಿ ಅಂತಹ ಸಾರ್ಥಕತೆ ಕಾಣುವುದಿಲ್ಲ. ಏಕೆಂದರೆ, ಅಣಾಗಮ, ಇನಾಗಮವೆನ್ನುವುದು, ಕೇವಲ ಭಾಷೆಯ ಕೆಲವು ಸೀಮಿತ ವಿದ್ಯಮಾನಗಳಿಗೆ ನಾಮಕರಣ ಮಾಡಿದಂತಾಯಿತಷ್ಟೇ ಹೊರತು, ಅವುಗಳ ಹಿಂದಿನ ಪ್ರಕ್ರಿಯೆಗಳನ್ನು ಬೆಳಕಿಗೆ  ತರುವುದಿಲ್ಲ. ಇನಾಗಮದ ವಿಷಯದಲ್ಲಂತೂ, ಇನಾಗಮವಿರುವ ಹಾಗೂ ಇರದ ಒಂದೇ ಶಬ್ದದ ವಿಭಕ್ತಿರೂಪಗಳಲ್ಲಿ ಕಾಣುವ ಸಣ್ಣ, ದೊಡ್ಡ ಅರ್ಥವ್ಯತ್ಯಾಸಗಳ ಕಾರಣವಂತೂ (ಮೇಲೆ ಹೇಳಿದ, "ಮಣ್ಣ ಮಡಕೆ", "ಹಣ್ಣ ರಸ", "ಹಲಸ ಹಣ್ಣು" ಮತ್ತು "ಮಣ್ಣಿನ ಮಡಕೆ", "ಹಣ್ಣಿನ ರಸ", "ಹಲಸಿನ ಹಣ್ಣು" ಎಂಬಲ್ಲಿರುವ ಅರ್ಥವ್ಯತ್ಯಾಸವನ್ನು ಗಮನಿಸಬಹುದು) ಕತ್ತಲಲ್ಲೇ ಉಳಿಯುತ್ತದೆ.

          ಇದು, ವಿದ್ಯಮಾನಕ್ಕೆ ತಥ್ಯದ, ತೊಡಕಿಗೆ ಪರಿಹಾರದ, ವೇಶ ತೊಡಿಸುವ ಚಮತ್ಕಾರವಷ್ಟೇ. ತಥ್ಯವನ್ನರಸುತ್ತಾ ಇನ್ನೂ ಮುಂದೆ ಸಾಗಲೇ ಬೇಕಿದೆ. ಈ ಲೇಖನದಲ್ಲಿ ನಿರೂಪಿಸಿರುವ ವ್ಯಾಕರಣಪ್ರಕ್ರಿಯೆಗಳು ಇಂತಹ ಕೆಲವು ತಥ್ಯಗಳನ್ನು ಬೆಳಕಿಗೆ ತಂದಿವೆ ಎಂದುಕೊಳ್ಳುತ್ತೇನೆ. ಇಲ್ಲಿರುವ ವಿಚಾರಗಳ ಸಾಫಲ್ಯ ಅವುಗಳು ಬೆಳಗುವ ಭಾಷಾ, ವ್ಯಾಕರಣ, ಅರ್ಥ ಪ್ರಕ್ರಿಯೆಗಳ ವೈವಿಧ್ಯ, ವ್ಯಾಪ್ತಿಗಳಲ್ಲಿದೆಯಷ್ಟೇ ಹೊರತು, ಅವುಗಳ ವೈಫಲ್ಯ ಅವುಗಳ ಊಹಾತ್ಮಕತೆಯಲ್ಲಿಲ್ಲ.

          ಶಬ್ದಗಳ ಷಷ್ಠೀ ವಿಭಕ್ತಿರೂಪಗಳನ್ನು ಇತರ ವಿಭಕ್ತಿರೂಪಗಳ ಆಧಾರವಾಗಿಟ್ಟುಕೊಂಡರೆ ಎಲ್ಲ ವಿಭಕ್ತಿರೂಪವೈವಿಧ್ಯಗಳೂ ಸಿದ್ಧಿಸುತ್ತವೆ

          ಕನ್ನಡದ ಪ್ರಾಚೀನ, ಆಧುನಿಕ ವ್ಯಾಕರಣಗ್ರಂಥಗಳಲ್ಲಿ ಅಲ್ಲದಿದ್ದರೂ ಸಾಕಷ್ಟು ಪ್ರಚಲಿತವಾಗಿರುವ ಒಂದು ಮತ, ಒಂದು ಶಬ್ದದ ವಿಭಕ್ತಿರೂಪಗಳಿಗೆ (ಹೆಚ್ಚಾಗಿ ತೃತೀಯಾದಿ ವಿಭಕ್ತಿರೂಪಗಳಿಗೆ) ಅದರ ಷಷ್ಠೀ ವಿಭಕ್ತಿರೂಪವೇ ಮೂಲವಾಗಿದ್ದು ಆ ಷಷ್ಠೀ ವಿಭಕ್ತಿರೂಪದ ಮೇಲೆಯೇ ಇತರ ವಿಭಕ್ತಿಪ್ರತ್ಯಯಗಳು ಪ್ರಕ್ರಿಯಿಸಿ ವಿವಿಧವಿಭಕ್ತಿರೂಪಗಳು ಸಿದ್ಧಿಸುತ್ತವೆ ಎನ್ನುವುದಾಗಿದೆ. ಅಂದರೆ,

          ಅದರ ಎನ್ನುವ ಷಷ್ಠೀ ವಿಭಕ್ತಿರೂಪವನ್ನು ತೆಗೆದುಕೊಂಡರೆ,

          • ಅದರ + ಇಂದ => ಅದರಿಂದ
          • ಅದರ + ಅಲ್ಲಿ => ಅದರಲ್ಲಿ

          ಮರದ ಎನ್ನುವ ಷಷ್ಠೀ ವಿಭಕ್ತಿರೂಪವನ್ನು ತೆಗೆದುಕೊಂಡರೆ,

          • ಮರದ + ಇಂದ => ಮದಿಂದ
          • ಮರದ + ಅಲ್ಲಿ => ಮರದಲ್ಲಿ

          ಮಣ್ಣ ಎನ್ನುವ ಷಷ್ಠೀ ವಿಭಕ್ತಿರೂಪವನ್ನು ತೆಗೆದುಕೊಂಡರೆ,

          • ಮಣ್ಣ + ಅನ್ನು => ಮಣ್ಣನ್ನು
          • ಮಣ್ಣ + ಇಂದ => ಮಣ್ಣಿಂದ
          • ಮಣ್ಣ + ಇಗೆ => ಮಣ್ಣಿಗೆ
          • ಮಣ್ಣ + ಅಲ್ಲಿ => ಮಣ್ಣಲ್ಲಿ
          ಮಣ್ಣಿನ ಎನ್ನುವ ಷಷ್ಠೀ ವಿಭಕ್ತಿರೂಪವನ್ನು ತೆಗೆದುಕೊಂಡರೆ,
          • ಮಣ್ಣಿನ + ಇಂದ => ಮಣ್ಣಿನಿಂದ
          • ಮಣ್ಣಿನ  => ಮಣ್ಣಿನ
          • ಮಣ್ಣಿನ + ಅಲ್ಲಿ => ಮಣ್ಣಿನಲ್ಲಿ
          ಕಾಲ ಎನ್ನುವ ಷಷ್ಠೀ ವಿಭಕ್ತಿರೂಪವನ್ನು ತೆಗೆದುಕೊಂಡರೆ,
          • ಕಾಲ + ಅನ್ನು => ಕಾಲನ್ನು
          • ಕಾಲ + ಇಂದ => ಕಾಲಿಂದ
          • ಕಾಲ + ಇಗೆ => ಕಾಲಿಗೆ
          • ಕಾಲ  => ಕಾಲ
          • ಕಾಲ + ಅಲ್ಲಿ => ಕಾಲಲ್ಲಿ
          ಕಾಲಿನ ಎನ್ನುವ ಷಷ್ಠೀ ವಿಭಕ್ತಿರೂಪವನ್ನು ತೆಗೆದುಕೊಂಡರೆ,
            • ಕಾಲಿನ + ಇಂದ => ಕಾಲಿನಿಂದ
            • ಕಾಲಿನ  => ಕಾಲಿನ
            • ಕಾಲಿನ + ಅಲ್ಲಿ => ಕಾಲಿನಲ್ಲಿ
            ಮಡುವ ಎನ್ನುವ ಷಷ್ಠೀ ವಿಭಕ್ತಿರೂಪವನ್ನು ತೆಗೆದುಕೊಂಡರೆ,
              • ಮಡುವ + ಅನ್ನು => ಮಡುವನ್ನು
              • ಮಡುವ + ಇಂದ => ಮಡುವಿಂದ
              • ಮಡುವ + ಇಗೆ => ಮಡುವಿಗೆ
              • ಮಡುವ  => ಮಡುವ
              • ಮಡುವ + ಅಲ್ಲಿ => ಮಡುವಲ್ಲಿ

              ಈ ಮತವು ತಕ್ಕಮಟ್ಟಿಗೆ ಶಬ್ದಗಳ ವಿಭಕ್ತಿರೂಪವೈವಿಧ್ಯವನ್ನು ಸರಳವಾಗಿಯೇ ಸಾಧಿಸುವಾಗ, ಈ ಲೇಖನದಲ್ಲಿ ಪ್ರತಿಪಾದಿಸಿರುವ ಸಂಕೀರ್ಣ ಪ್ರಕ್ರಿಯೆಗಳ ಅಗತ್ಯವೇನು ಎಂದೂ ಆಕ್ಷೇಪಿಸಬಹುದು. ಇದಕ್ಕೆ ಸಮಾಧಾನವಾಗಿ ಕೆಲವು ವಿಚಾರಗಳನ್ನು ಗಮನಿಸಬಹುದು.

              ಒಂದು, ಶಬ್ದದ ಷಷ್ಠೀ ವಿಭಕ್ತಿರೂಪಗಳನ್ನು ಇತರ ವಿಭಕ್ತಿರೂಪಗಳ ಮೂಲವಾಗಿ ಪರಿಗಣಿಸಿದರೆ ಸಾಕಷ್ಟು ವಿಭಕ್ತಿರೂಪವೈವಿಧ್ಯವನ್ನು ಸಾಧಿಸಬಹುದೆಂಬಂತೆ ಮೇಲ್ನೋಟಕ್ಕೆ ಕಂಡರೂ, ಮಣ್ಣಿಗೆ, ಕಾಲಿಗೆ, ಮಡುವಿಗೆ ಎಂಬಲ್ಲಿ ಕೆ / ಗೆ ಪ್ರತ್ಯಯದ ಮೊದಲು ಕಾಣುವ ಇಕಾರವನ್ನು (ಮಣ್ಣ + ಇಗೆ => ಮಣ್ಣಿಗೆ) ಈ ಮತದಿಂದ ಸಾಧಿಸಲಾಗದು. ಈ ಇಗೆ ಎನ್ನುವುದನ್ನು ಚತುರ್ಥೀ ವಿಭಕ್ತಿಪ್ರತ್ಯಯದ ರೂಪಗಳಲ್ಲೊಂದೆಂದು ಪರಿಗಣಿಸಿದರೆ (ಇತರ ವಿಭಕ್ತಿ ಪ್ರತ್ಯಯಗಳ ಅಂ/ಅನು/ಅನ್ನು, ಇಂ/ಇಂದ/ಇಂದೆ, ಕೆ/ಗೆ/ಇಗೆ/ಅಕ್ಕೆ, ಒಳ್/ಒಳಗೆ/ಅಲ್/ಅಲಿ/ಅಲ್ಲಿ ಇತ್ಯಾದಿ ರೂಪವೈವಿಧ್ಯವನ್ನೂ ಇದೇ ರೀತಿ ಕನ್ನಡವ್ಯಾಕರಣಪರಂಪರೆಯಲ್ಲಿ  ಪರಿಗಣಿಸಿರುವುದನ್ನು ನೋಡಬಹುದು), ಅದು, ಮೇಲೆ ಹೇಳಿದಂತೆ, ವಿದ್ಯಮಾನವನ್ನೇ ತಥ್ಯವನ್ನಾಗಿ, ತೊಡಕನ್ನೇ ಪರಿಹಾರವನ್ನಾಗಿ,  ಪಡೆದಂತಾದೀತಷ್ಟೇ ಹೊರತು, ನಿಜವಾದ ಪರಿಹಾರವಂತೂ ಆಗದು. ಈ ವಿಭಕ್ತಿಪ್ರತ್ಯಯರೂಪವೈವಿಧ್ಯ ಏಕಿದೆ, ಹೇಗೆ ಉಂಟಾಗಿದೆ ಎನ್ನವ ಪ್ರಶ್ನೆಗೆ ಇಲ್ಲಿ ಉತ್ತರವಿಲ್ಲ. ಹಾಗೆಯೇ, ಅಲ್ಲಲ್ಲಿ ಸಾನುಸ್ವಾರವಾಗಿ ಕಾಣುವ ಚತುರ್ಥೀ ವಿಭಕ್ತಿರೂಪಗಳಿಗೂ (ನವಿಲಿಂಗೆ) ಇಲ್ಲಿ ಉತ್ತರವಿಲ್ಲ.

              ಎರಡು, ಒಂದೇ ಶಬ್ದದ ಒಂದೇ ವಿಭಕ್ತಿಯ ಕೆಲವು ರೂಪಗಳಲ್ಲಿ ಷಷ್ಠೀ ವಿಭಕ್ತಿರೂಪ ಕಾಣಿಸುವುದು ಹಾಗೂ ಕೆಲವು ರೂಪಗಳಲ್ಲಿ ಕಾಣದಿರುವುದನ್ನೂ ಈ ಮತದಿಂದ ವಿವರಿಸಲಾಗದು. ಉದಾಹರಣೆಗೆ, ಕಾಲಿಗೆ ಎಂಬಲ್ಲಿ, ಕಾಲ ಎನ್ನುವ ಷಷ್ಠೀ ವಿಭಕ್ತಿರೂಪ ಕಂಡರೂ, ಕಾಲ್ಗೆ ಎಂಬಲ್ಲಿ ಯಾವ ಷಷ್ಠೀ ವಿಭಕ್ತಿರೂಪವೂ ಕಾಣುವುದಿಲ್ಲ. ಹಾಗೆಯೇ, ಹೊಸಗನ್ನಡದ ಅದಕ್ಕೆ ಎನ್ನುವುದರ ಹಳಗನ್ನಡರೂಪ ಅದರ್ಕೆ ಎನ್ನುವುದನ್ನು ಮೇಲೆ ನೋಡಿದ್ದೇವಷ್ಟೇ (ಶಬ್ದಮಣಿದರ್ಪಣದ ಸೂತ್ರ ೨೪೮ರಲ್ಲಿ ಅದರ್ಕಂಜದೆ ಎನ್ನುವ ಪ್ರಯೋಗವನ್ನು ಕಾಣಬಹುದು). ಇಲ್ಲಿ ಕಾಣುವ ಅರ್ಧ ರೇಫದ (ನಿಜವಾಗಿ ಅದು ಅರ್ಧ ಱಕಾರ/ಅಱ; ಅಂದರೆ, ಅದಱ್ + ಕೆ => ಅದರ್ಕೆ) ಕಾರಣವನ್ನೂ ಈ ಮತದಿಂದ ವಿವರಿಸಲಾಗದು. ಎಕೆಂದರೆ, ಅದರ (ಅದಱ => ಅದರ) ಎನ್ನುವ ಷಷ್ಠೀ ವಿಭಕ್ತಿರೂಪ ವ್ಯಂಜನಾಂತವಲ್ಲ. ಅಕಾರಾಂತ ಪೂರ್ವಪದಗಳಿಗೆ (ಅದಱ/ಅದರ), ವ್ಯಂಜನಗಳು (ಚತುರ್ಥೀ ವಿಭಕ್ತಿಯ ಕೆ ಪ್ರತ್ಯಯ) ಪರವಾದಾಗ, ಪೂರ್ವಪದದ ಅಂತ್ಯದ ಅಕಾರವು ಲೋಪವಾಗುವ ಪ್ರಕ್ರಿಯೆ ಕನ್ನಡದಲ್ಲಿ ಕಾಣುವುದಿಲ್ಲ.

              ಮೂರು, ಒಂದೇ ಶಬ್ದದ ಹಲವು ಷಷ್ಠೀ ವಿಭಕ್ತಿರೂಪಗಳಿರುವಾಗ, ಷಷ್ಠೀ ವಿಭಕ್ತಿರೂಪಗಳಲ್ಲೇ ಕಾಣುವ ವೈವಿಧ್ಯವನ್ನು ಈ ಮತದಿಂದ ಸಾಧಿಸಲಾಗದು. ಉದಾಹರಣೆಗೆ, ಮಣ್ಣ, ಮಣ್ಣಿನ, ಕಾಲ, ಕಾಲಿನ, ಹಣ್ಣ, ಹಣ್ಣಿನ, ಹಲಸ, ಹಲಸಿನ ಹೀಗಿರುವ ರೂಪಗಳು. ಈ ವಿವಿಧರೂಪಗಳು ಏಕಿವೆ ಎಂಬ ಪ್ರಶ್ನೆಗೆ ಈ ಮತದಲ್ಲಿ ಉತ್ತರವಿಲ್ಲ. ಹಾಗೆಯೇ, ಆ ಷಷ್ಠೀ ವಿಭಕ್ತಿರೂಪಗಳಲ್ಲಿ ಕಾಣುವ ಅರ್ಥವೈವಿಧ್ಯವನ್ನೂ ಈ ಮತದಿಂದ ವಿವರಿಸಲಾಗದು. ಉದಾಹರಣೆಗೆ, "ಮಣ್ಣಿನ ಮಡಿಕೆ", "ಹಣ್ಣಿನ ರಸ", "ಹಲಸಿನ ಹಣ್ಣು" ಎಂಬಲ್ಲಿ ಕಾಣುವ ತೃತೀಯಾ ವಿಭಕ್ತಿಯ ಕರಣಕಾರಕಾರ್ಥವು "ಮಣ್ಣ ಮಡಿಕೆ", "ಹಣ್ಣ ರಸ", "ಹಲಸ ಹಣ್ಣು" ಎಂಬಲ್ಲಿ ಏಕೆ ಕಾಣುವುದಿಲ್ಲ, ಕನ್ನಡಿಗರು, "ಮಣ್ಣಿನ ಮಡಕೆ", "ಹಣ್ಣಿನ ರಸ", "ಹಲಸಿನ ಹಣ್ಣು" ಎಂಬ ರೂಪಗಳನ್ನೇ ಹೆಚ್ಚಾಗಿ ಏಕೆ ಬಳಸುತ್ತಾರೆ; "ಮಣ್ಣ ಮಡಕೆ", "ಹಣ್ಣ ರಸ", "ಹಲಸ ಹಣ್ಣು" ಎನ್ನುವುವನ್ನು ಏಕಲ್ಲ; ಈ ಪ್ರಶ್ನೆಗಳಿಗೆ ಈ ಮತದಲ್ಲಿ ಉತ್ತರವಿಲ್ಲ.

              ನಾಲ್ಕು, ಕೆಲವು ಶಬ್ದಗಳ ಷಷ್ಠೀ ವಿಭಕ್ತಿರೂಪಗಳ ಸ್ವರೂಪವು ಹಾಗೆಯೇ ಏಕಿದೆ ಎನ್ನುವುದನ್ನೂ ಈ ಮತದಿಂದ ವಿವರಿಸಲಾಗದು. ಉದಾಹರಣೆಗೆ, ಮಡು ಶಬ್ದದ ಮಡುವ ಎನ್ನುವ ಷಷ್ಠೀ ವಿಭಕ್ತಿರೂಪದಲ್ಲಿ ವಕಾರವೇಕಿದೆ, ಕಾಲ ಎನ್ನುವಲ್ಲಿ ವಕಾರವೇಕಿಲ್ಲ ಎನ್ನುವುದಕ್ಕೆ ಈ ಮತದಲ್ಲಿ ಉತ್ತರವಿಲ್ಲ.

              ಹೀಗೆ, ಶಬ್ದದ ಷಷ್ಠೀ ವಿಭಕ್ತಿರೂಪಗಳನ್ನು ಇತರ ವಿಭಕ್ತಿರೂಪಗಳಿಗೆ ಮೂಲವಾಗಿ ಪರಿಗಣಿಸುವ ಮತದಿಂದ ಸಾಧಿತವಾಗುವ ಹಾಗೂ ಸಾಧಿಸಲಾಗದ ರೂಪ, ಪ್ರಕ್ರಿಯೆ, ಅರ್ಥವೈವಿಧ್ಯಗಳೂ, ಈ ಲೇಖನದಲ್ಲಿ ನಿರೂಪಿಸಿರುವ ಪ್ರಕ್ರಿಯೆಗಳಿಂದ ಸಾಧಿತವಾಗಿರುವುದನ್ನು ಕಾಣಬಹುದು.

              ಆದರೆ, ಈ ಲೇಖನದಲ್ಲಿ ಅಕಾರಾಂತ ನಪುಂಸಕಲಿಂಗದ ವಿಭಕ್ತಿರೂಪಗಳಲ್ಲಿ ಕಾಣುವ ದಕಾರದ ಹಾಗೂ ಅದು ಶಬ್ದದ ವಿಭಕ್ತಿರೂಪಗಳಲ್ಲಿ ಕಾಣುವ ರೇಫದ (ರಕಾರ, ಅಱ) ಹಿಂದಿನ ಪ್ರಕ್ರಿಯೆಗಳನ್ನು ನಿರೂಪಿಸದಿರುವುದು ಸತ್ಯವೇ. ಈ ಪ್ರಕ್ರಿಯೆಗಳ ಬಗೆಗೆ ಇನ್ನೂ ಚಿಂತಿಸಬೇಕಿದೆ ಎಂದು ವಿನಮ್ರವಾಗಿ ಹೇಳಬಹುದಷ್ಟೇ. ಹೀಗಿದ್ದರೂ, ಈ ದಕಾರಾಗಮ, ರಕಾರಾಗಮಗಳು, ಶಬ್ದಗಳ ಷಷ್ಠೀ ವಿಭಕ್ತಿರೂಪಗಳನ್ನು ಇತರ ವಿಭಕ್ತಿರೂಪಗಳಿಗೆ ಮೂಲವಾಗಿ ಪರಿಗಣಿಸುವ ಮತದಿಂದ ಸಾಧಿತವಾಗುವುದೂ ಕೇವಲ ಆ ರೂಪಗಳನ್ನು ಷಷ್ಠೀ ವಿಭಕ್ತಿರೂಪಗಳೆಂದು ಮೊದಲೇ ಒಪ್ಪಿಕೊಳ್ಳುವುದರಿಂದಲೇ ಆಗಿದೆಯಲ್ಲದೆ, ಅದು ಆ ರೂಪಗಳ ಹಿಂದಿನ ಕಾರಣ, ಪ್ರಕ್ರಿಯೆಗಳ ಮೇಲೆ ಬೆಳಕನ್ನೇನೂ ಚೆಲ್ಲುವುದಿಲ್ಲ; ಇದೂ ತೊಡಕಿಗೇ ಪರಿಹಾರದ ವೇಶವನ್ನು ತೊಡಿಸುವ ಚಮತ್ಕಾರವೇ ಹೊರತು, ನಿಜವಾದ ಪರಿಹಾರವೇನಲ್ಲ ಎನ್ನುವುದನ್ನೂ ಗಮನಿಸಲೇ ಬೇಕು.

              ಕೊನೆಯ ಮಾತು

              ವಿಭಕ್ತಿಪ್ರತ್ಯಯಗಳಲ್ಲಿ ಕಾಣುವ ಅನುಸ್ವಾರದ ಬಗೆಗಿನ ಪ್ರಾಚೀನ, ಆಧುನಿಕ ವೈಯಾಕರಣರ ಭಿನ್ನಮತವನ್ನು ಬಗೆಹರಿಸಲು ಅನುಸ್ವಾರದ ಬೆನ್ನಟ್ಟಿದಾಗ ನನಗೆ ಕಂಡ, ಅನುಸ್ವಾರದ ಹಾಗೂ ಕನ್ನಡವ್ಯಾಕರಣದ, ವಿಭಕ್ತಿಪ್ರತ್ಯಯದ ಸಂದರ್ಭದಲ್ಲಿ ಕಾಣುವ, ವಿಸ್ತೃತ ಪ್ರಕ್ರಿಯೆಗಳು ಹಾಗೂ ಅವುಗಳಿಂದ ಸಿದ್ಧಿಸುವ ವಿವಿಧರೂಪಗಳನ್ನು ಮೇಲೆ ನಿರೂಪಿಸಿದ್ದೇನೆ. ಇಲ್ಲಿ ಕೆಲವೊಮ್ಮೆ ಪ್ರಾಚೀನರ ಮತವನ್ನು, ಇನ್ನು ಕೆಲವೆಡೆ ಆಧುನಿಕರ ಮತವನ್ನು ಖಂಡಿಸಿರುವಂತೆ, ಅವರು ಹೇಳಿದ ಲಕ್ಷಣಗಳನ್ನು ಸಮನ್ವಯಿಸಲಾಗಿದೆ ಕೂಡ.

                ಹೀಗೆ, ಕನ್ನಡದ ವಿಭಕ್ತಿಪ್ರತ್ಯಯಗಳ ಸಂದರ್ಭದಲ್ಲಿ ಕಾಣುವ ಸಾಮಾನ್ಯ ಲಕ್ಷಣಗಳ, ಹೆಚ್ಚಿನ ವೈಚಿತ್ರ್ಯಗಳ ಹಿಂದಿರಬಹುದಾದ ವ್ಯಾಕರಣಪ್ರಕ್ರಿಯೆಗಳನ್ನು, ಸಾಧಾರವಾಗಿ ನಿರೂಪಿಸಿದ್ದೇನೆಂದುಕೊಳ್ಳುತ್ತೇನೆ. ಕೆಲವು ವೈಚಿತ್ರ್ಯಗಳ ಬಗೆಗೆ ಇನ್ನೂ ಚಿಂತಿಸುವುದಿದೆ. ಅವುಗಳಲ್ಲಿ ಕೆಲವನ್ನು ಓದುಗರಿಗೆ ಚಿಂತನಾಂಶಗಳಾಗಿ ಕೆಳಗೆ ಪಟ್ಟಿಮಾಡಿದ್ದೇನೆ.

                • ಅಕಾರಾಂತ ನಪುಂಸಕಲಿಂಗದ ವಿಭಕ್ತಿರೂಪಗಳಲ್ಲಿ ಕಾಣುವ ದಕಾರ. ಉದಾಹರಣೆಗೆ, ಮರದ.
                • ನಪುಂಸಕಲಿಂಗದ ಪ್ರಥಮಪುರುಷಸರ್ವನಾಮಗಳಲ್ಲೊಂದಾದ ಅದು ಶಬ್ದದ ವಿಭಕ್ತಿರೂಪಗಳಲ್ಲಿ ಕಾಣುವ ರೇಫ (ರಕಾರ, ಅಱ). ಉದಾಹರಣೆಗೆ, ಅದಱ / ಅದರ.
                • ಸಪ್ತಮೀ ವಿಭಕ್ತಿಪ್ರತ್ಯಯದ ವಿವಿಧರೂಪಗಳು (ಒಳ್, ಒಳಗೆ, ಅಲ್, ಅಲಿ, ಅಲ್ಲಿ ಇತ್ಯಾದಿ).

                ---

                • ಈ ಲೇಖನವನ್ನು ಹಲವು ಬಾರಿ ಓದಿ, ತಪ್ಪುಗಳನ್ನು ತಿದ್ದಿದ ಕನ್ನಡವ್ಯಾಕರಣಾಸಕ್ತ ಗೆಳೆಯರೆಲ್ಲರಿಗೂ ಕೃತಜ್ಞತೆಗಳು. 
                • ತಾಳ್ಮೆಯಿಂದ ಬಹಳಷ್ಟು ತಿದ್ದುಪಡಿ ಮಾಡಿದ ಪ್ರೇಮ್ ಖಮಿತ್ಕರ್ ಅವರಿಗೆ ವಿಶೇಷವಾದ ಕೃತಜ್ಞತೆಗಳು.
                • ಈ ಲೇಖನದಲ್ಲಿರುವ ನಿರೂಪಣೆಯ ಬಗೆಗೆ ಮಾಡಬಹುದಾದ ಕೆಲವು ಆಕ್ಷೇಪಗಳಿಗೆ ಕೊಡಬಹುದಾದ ಸಮಾಧಾನವನ್ನು "ಕೆಲವು ಆಕ್ಷೇಪಗಳಿಗೆ ಸಮಾಧಾನ" ಎನ್ನುವ ವಿಭಾಗಶೀರ್ಷಿಕೆಯಡಿಯಲ್ಲಿ ಹೊಸದಾಗಿ ಸೇರಿಸಿದ್ದೇನೆ. ಇನ್ನೂ ಆಕ್ಷೇಪ, ಖಂಡನೆಗಳಿದ್ದರೆ, ಅಥವಾ ಕೊಟ್ಟಿರುವ ಸಮಾಧಾನಗಳಲ್ಲಿ ಕೊರತೆಗಳಿದ್ದರೆ, ಓದುಗರು ದಯವಿಟ್ಟು ತಿಳಿಸಿ, ತಿದ್ದಿ.
                • ಉಕಾರಾಂತವಾದ ನಪುಂಸಕಲಿಂಗದ, ಏಕವಚನದ ಸರ್ವನಾಮಗಳ ಚತುರ್ಥೀ ವಿಭಕ್ತಿರೂಪಗಳಲ್ಲಿರುವ ಅಕಾರ, ವಿಕಲ್ಪದ್ವಿತ್ವದ ವಿಚಾರವನ್ನು ಸೇರಿಸಿದ್ದೇನೆ.
                Creative Commons License
                ಈ ಲೇಖನ Creative Commons Attribution-NonCommercial-NoDerivatives 4.0 International License ಮೂಲಕ ಲಭ್ಯವಿವೆ. ಇಲ್ಲಿ ಕೆಲವು ಹೊಸ ಸಂಶೋದನೆಯ ವಿಚಾರಗಳಿರುವುದರಿಂದ,  ಈ ಲೇಖನವನ್ನು ಅಥವಾ ಅದರ ಭಾಗಗಳನ್ನು ಉದ್ಧರಿಸುವ ಮೊದಲು ದಯವಿಟ್ಟು ಕೆಳಗಿರುವ "comment" ವಿಭಾಗದಲ್ಲಿ ಬರೆದು ತಿಳಿಸಿ.

                Creative Commons License
                This work is licensed under a Creative Commons Attribution-NonCommercial-NoDerivatives 4.0 International License. Since there is some original research in this work, please inform in the comment section below, if you want to quote or use this or any part of this work.

                Comments

                Popular posts from this blog

                ನಿಸ್ವನ - ಮಳೆ

                Nisvana - Playlists

                ನಿಸ್ವನ - ನನ್ನ ನಿನ್ನ ಲೋಕ