ಈ ಲೇಖನವು ಈಗ GitHubಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ.
---
ಪ್ರಸ್ತಾವನೆ
ಕೇಶಿರಾಜನ
ಶಬ್ದಮಣಿದರ್ಪಣದ ಸೂತ್ರ
೧೧೭ರಲ್ಲಿ ಹಾಗೂ ಸೂತ್ರ
೧೨೯ರಲ್ಲಿ, ಹಳಗನ್ನಡದಲ್ಲಿ
ಎಕಾರವು ಕ್ರಮವಾಗಿ
ತೃತೀಯಾ ವಿಭಕ್ತಿಯ ಹಾಗೂ ಸಪ್ತಮೀ ವಿಭಕ್ತಿಯ ಅರ್ಥದಲ್ಲಿ ಕಾಣಿಸುತ್ತದೆ ಎಂದು ನಿರೂಪಿಸಲಾಗಿದೆ.
ಇದು ಅಷ್ಟು ಸಮಂಜಸವಲ್ಲವೆಂದೆನಿಸಿದ ಕಾರಣ, ಕೇಶಿರಾಜ ಹೇಳಿದ ಎಕಾರದ ಬಳಕೆ, ಅರ್ಥಸಂದರ್ಭಗಳನ್ನು ಇನ್ನಷ್ಟು ಸ್ಫುಟಗೊಳಿಸುವ ಪ್ರಯತ್ನ ಇಲ್ಲಿದೆ.
ಕನ್ನಡದಲ್ಲಿ ಕಾಣುವ ಕೆಲವು ವೈಚಿತ್ರ್ಯಗಳು ಆಗಾಗ ನನ್ನನ್ನು ಕಾಡುತ್ತಲೇ ಬಂದಿವೆ. ಉದಾಹರಣೆಗೆ, ಒಂದೇ ವಿಭಕ್ತಿಪ್ರತ್ಯಯದ ವಿಭಿನ್ನ ರೂಪಗಳು (ದ್ವಿತೀಯಾ - ಅಂ/ಅನು/ಅನ್ನು, ತೃತೀಯಾ - ಇಂ/ಇಂದ, ಚತುರ್ಥೀ - ಕೆ/ಗೆ/ಇಗೆ/ಅಕ್ಕೆ/ಇಕ್ಕೆ, ಸಪ್ತಮೀ - ಒಳ್/ಒಳಗೆ/ಅಲ್/ಅಲಿ/ಅಲ್ಲಿ, ಇತ್ಯಾದಿ). ಷಷ್ಠೀರೂಪದ (ಕೆಲವೊಮ್ಮೆ ಅದಕ್ಕೆ ಸಮೀಪರೂಪದ) ದ್ವಿತೀಯಾ (ಉದಾಹರಣೆಗೆ, ಕಂಡು ಕಂಡು ನೀ ಎನ್ನ ಕೈಬಿಡುವರೇ ಎಂಬ ಪುರಂದರದಾಸರ ಪ್ರಸಿದ್ಧವಾದ ಸಾಲಿನಲ್ಲಿ ಎನ್ನ ಎಂಬುದು ಷಷ್ಠೀ ವಿಭಕ್ತಿಯಂತೆ ಕಂಡರೂ, ಅದು ನಿಜವಾಗಿ ಎನ್ನನ್ನು ಎಂಬ ದ್ವಿತೀಯಾ ವಿಭಕ್ತಿರೂಪವೇ ಆಗಿದೆ).
ಇಂತಹ ವಿಚಾರಗಳ ಸ್ವರೂಪ ಮನಸ್ಸಿನಲ್ಲಿ ತಿಳಿಗೊಳ್ಳತೊಡಗಿದಾಗ, ತಿಳುವಳಿಕೆ ಇನ್ನೂ ಸ್ಫುಟವಾಗಬೇಕಾದರೆ ಹಳಗನ್ನಡದ, ಅದರಲ್ಲೂ, ಹಳಗನ್ನಡವ್ಯಾಕರಣದ ಪರಿಚಯ ಅಗತ್ಯವೆನಿಸಿತು. ಅದರೆ ನನಗೆ ಹಳಗನ್ನಡದ ಗಂಧಗಾಳಿಯೂ ಇಲ್ಲದಿರುವಾಗ ಆಸರೆಯಾಗಿ ಒದಗಿಬಂದದ್ದು ಕನ್ನಡ ಹಣತೆ ಬಳಗದವರು ವರ್ಷಗಳಿಂದ ಆಯೋಜಿಸುತ್ತಾ ಬಂದಿರುವ (ಈಗಲೂ ಜತನದಿಂದ ಮುಂದುವರೆಸುತ್ತಿರುವ) ಕೇಶಿರಾಜನ ಶಬ್ದಮಣಿದರ್ಪಣಂ: ಓದು - ಸಂವಾದದ ಸಾಪ್ತಾಹಿಕ ಕಾರ್ಯಕ್ರಮ. ಹಿಂದೆ ಅಂತರ್ಜಾಲದಲ್ಲಿ ಬೇರೆಡೆಗಳಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮ, ಈಗ ಕನ್ನಡ ಹಣತೆಯ Clubhouse ಮನೆಯಲ್ಲಿ ಪ್ರತಿ ಶನಿವಾರ ಸಂಜೆ 7:30ಕ್ಕೆ (ಭಾರತೀಯ ಸಮಯ) ಮುಂದುವರಿಯುತ್ತಿದೆ. ಹಿಂದೆ ನಡೆದ ಹಾಗೂ ಮುಂದೆ ನಡೆಯಲಿರುವ ಕಾರ್ಯಕ್ರಮಗಳೆಲ್ಲವೂ ಹಣತೆ - ಓದುಗರ ಬಳಗದ YouTube channelಇನಲ್ಲಿ ಕೇಶಿರಾಜನ ಶಬ್ದಮಣಿದರ್ಪಣಂ playlistಇನಲ್ಲಿ ಲಭ್ಯವಿವೆ (ಇರಲಿವೆ). ಇದೊಂದು ಸಾಮೂಹಿಕ ಅಧ್ಯಯನವಾಗಿದ್ದು, ಗುರುಗಳಾದ ಶ್ರೀ ಪಾದೆಕಲ್ಲು ವಿಷ್ಣುಭಟ್ಟರ ಆಳವಾದ, ಪಾಂಡಿತ್ಯಪೂರ್ಣವಾದ (ನನ್ನಂಥ ಹೊಸಗನ್ನಡಿಗರಿಗೂ ಅರ್ಥವಾಗುವಂಥ) ವ್ಯಾಖ್ಯಾನ, ಈ ಅಧ್ಯಯನಕ್ಕೆ ಗಟ್ಟಿತನವನ್ನು ಕೊಟ್ಟಿದೆ.
ಈಮೇಲೆ ಹೇಳಿದ ಕನ್ನಡವಿಭಕ್ತಿವೈಚಿತ್ರ್ಯಗಳ ಬಗೆಗೆ ಇನ್ನೊಮ್ಮೆ ಬರೆಯೋಣ. ಸದ್ಯಕ್ಕೆ
ಕೇಶಿರಾಜನ ಶಬ್ದಮಣಿದರ್ಪಣದ ಈವರೆಗಿನ ಓದಿನಲ್ಲಿ ಹೊಳೆದ ಕನ್ನಡದಲ್ಲಿ ಕೆಲವೆಡೆ ಕಾಣುವ
ಎಕಾರದ ಸಣ್ಣದೊಂದು ವಿಷಯನ್ನು ಆವೇಶಿಸಿಕೊಳ್ಳೋಣ.
ಈಗಾಗಲೇ ಹೇಳಿರುವಂತೆ, ನನ್ನ ಹಳಗನ್ನಡದ ಹಾಗೂ ಕನ್ನಡವ್ಯಾಕರಣದ ತಿಳಿವು ತೀರಾ ಮೇಲು ಮೇಲಿನದು. ಹೀಗಿದ್ದರೂ, ಕೆಳಗೆ ಚರ್ಚಿಸಲಿರುವ ಈ ಒಂದು ಸಣ್ಣ ವಿಷಯದಲ್ಲಿ ಕೇಶಿರಾಜ ಮಂಡಿಸಿರುವ ಮತವನ್ನು ಖಂಡಿಸುವ ದುಸ್ಸಾಹಸ ಮಾಡಬೇಕಿದೆ. ಇದಕ್ಕೆ ನನಗೆ ಶ್ರೀ ಸೇಡಿಯಾಪು ಕೃಷ್ಣಭಟ್ಟರು ತಮ್ಮ
ಕೆಲವು ದೇಶನಾಮಗಳು ಎಂಬ ಉದ್ಗ್ರಂಥದ
ಲೇಖಕನ ವಿಜ್ಞಾಪನೆಯಲ್ಲಿ ಉದ್ಧರಿಸಿದ
ಕೇಶಿರಾಜನ (
ಶಬ್ದಮಣಿದರ್ಪಣದ) ಒಂದು ಸೂಕ್ತಿಯೇ ಆದರ್ಶ!
ಅವಧರಿಪುದು ವಿಬುಧರ್, ದೋ-
ಷಮಿದಱೊಳೇನಾನುಮುಳ್ಳೊಡಂ ಪ್ರಿಯದಿಂ ತಿ-|
ರ್ದುವುದು, ಗುಣಯುಕ್ತಮುಂ ದೋ-
ಷವಿದೂರಮುಮಾಗೆ ಮೆಚ್ಚಿ ಕೈಕೊಳ್ವುದಿದಂ||
ಎಕಾರದ ಆವೇಶ
ಶಬ್ದಮಣಿದರ್ಪಣದ ನಾಮಪ್ರಕರಣದಲ್ಲಿ ವಿಭಕ್ತಿಗಳ ಬಗೆಗೆ ಹೇಳುವ ಈ ಕೆಳಗಿನ ಸೂತ್ರಗಳನ್ನು ಗಮನಿಸೋಣ.
ಸಮನಿಸಿ ತೋಱಿಸುಗುಮಿಮಿಂ-
ದಮಿಂದೆಯೆಂಬಿವು ತೃತೀಯೆಯೊಳ್ ಮತ್ತಮೆಕಾ-|
ರಮದೊಂದೆ ಮೇಣ್ ತೃತೀಯೆಗೆ
ಸಮುಚಿತಮಾದೇಶಮಱಿದುಕೊಳ್ಗೀಕ್ರಮದಿಂ||
ವೃತ್ತಿ - ಇಂ, ಇಂದಂ, ಇಂದೆಯೆಂದು ತೃತೀಯೆ ಮೂಱು ತೆಱನಾಗಿರ್ಪುದು; ಇವರ್ಕಾದೇಶಮಾಗಿ ಬೇಱೊಂದು ಎಕಾರಮಪ್ಪುದು.
ಹೊಸಗನ್ನಡದಲ್ಲಿ ಭಾವಾನುವಾದ: ತೃತೀಯಾ ವಿಭಕ್ತಿ ಪ್ರತ್ಯಯಕ್ಕೆ ಇಂ, ಇಂದ ಹಾಗೂ ಇಂದೆ ಎಂದು ಮೂರು ರೂಪಗಳಿವೆ. ಈ ಮೂರು ರೂಪಗಳ ಸ್ಥಾನದಲ್ಲಿ ಎಕಾರವೊಂದೇ ಆದೇಶವಾಗಿ ಬರುವುದೂ ಇದೆ.
ಪ್ರಯೋಗಂ-
ಆದೇಶದೆಕಾರಕ್ಕೆ: ಕ್ರಮದೆ, ನಯದೆ, ಭಯದೆ.
ಬಗೆದಂತಾಗೆ ಸುರೇಂದ್ರರಿಂ ಕ್ರಮದೆ ಕಲ್ಯಾಣದ್ವಯಂ ಜೈನದೀ-
ಕ್ಷೆಗೆ ಪೂಣ್ದು...
(ಇಂ, ಇಂದ, ಇಂದೆ ರೂಪಗಳ ಪ್ರಯೋಗ ಸುಲಭವಾಗಿಯೇ ತಿಳಿಯುವುದರಿಂದ ಅವುಗಳ ಪ್ರಯೋಗವನ್ನು ಇಲ್ಲಿ ಉದ್ಧರಿಸಿಲ್ಲ).
ಇಲ್ಲಿ ಕ್ರಮದೆ, ನಯದೆ, ಭಯದೆ ಎಂಬುವನ್ನು ಹೊಸಗನ್ನಡದಲ್ಲಿರುವ ಹಾಗೆ ಕ್ರಮದಿಂದ, ನಯದಿಂದ, ಭಯದಿಂದ ಎಂದು ತೃತೀಯಾ ವಿಭಕ್ತಿಯಂತೆ ಅರ್ಥೈಸಬೇಕೆನ್ನುವುದು ಈ ಸೂತ್ರದ ಆಶಯವೆನ್ನುವುದು ನನ್ನ ತಿಳಿವು.
ಅಲ್ಲಿಯೊಳೆಂಬಿವು ಮಿಕ್ಕೆಡೆ-
ಗೆಲ್ಲಂ ದಿಗ್ವಾಚಿಯಪ್ಪದಂತಕ್ಕಲ್ಮ-|
ತ್ತಲ್ಲಿಯುದಂತಕ್ಕೆತ್ವಂ
ಬಲ್ಲರ ಮತದಿಂ ವಿಕಲ್ಪವಿಧಿ ಸಪ್ತಮಿಯೊಳ್||
ವೃತ್ತಿ - ಅಲ್ಲಿ ಎಂದುಂ ಒಳ್ ಎಂದುಂ ಸಪ್ತಮಿಗೆ ಸಾಮಾನ್ಯದಿನಕ್ಕುಂ; ದಿಗ್ವಾಚಿಯಪ್ಪಕಾರಾಂತದ ಮೇಲೆ ವಿಕಲ್ಪದಿಂದಲ್ ಅಕ್ಕುಂ; ಉಕಾರಾಂತ ದಿಗ್ವಾಚಕಂಗಳ್ಗೆಲ್ಲಮೆತ್ವಮಕ್ಕುಂ
ಹೊಸಗನ್ನಡದಲ್ಲಿ ಭಾವಾನುವಾದ: ಅಲ್ಲಿ ಹಾಗೂ ಒಳ್ ಎಂಬುವು ಸಪ್ತಮೀ ವಿಭಕ್ತಿ ಪ್ರತ್ಯಯದ ಸಾಮಾನ್ಯ ರೂಪಗಳಾಗಿವೆ. ದಿಕ್ಕನ್ನು ಸೂಚಿಸುವ ಅಕಾರಾಂತವಾದ ಕನ್ನಡದ ಪದಗಳಿಗೆ ಕೆಲವೊಮ್ಮೆ ಈ ಎರಡು ಸಾಮಾನ್ಯ ರೂಪಗಳ ಸ್ಥಾನದಲ್ಲಿ ಅಲ್ ಎಂಬ ರೂಪವೂ ಕಾಣುವುದುಂಟು. ದಿಗ್ವಾಚಕಪದಗಳು ಉಕಾರಾಂತವಾದರೆ ಕೆಲವೊಮ್ಮೆ ಬರಿಯ ಎಕಾರವೇ ಪ್ರತ್ಯಯದ ಸ್ಥಾನದಲ್ಲಿ ಕಾಣಿಸಿಕೊಳ್ಳುವುದಿದೆ.
ಪ್ರಯೋಗಂ -
ಒಳ್, ಅಲ್ಲಿ ಎಂಬುವರ್ಕೆ; ಕೊಳದೊಳ್ - ಕೊಳದಲ್ಲಿ; ಬನದೊಳ್ - ಬನದಲ್ಲಿ.
ವಿಕಲ್ಪದಿಂದಲ್ಗೆ ಪ್ರಯೋಗಂ: ಮೂಡಲ್, ತೆಂಕಲ್, ಪಡುವಲ್, ಬಡಗಲ್, ಅತ್ತಲ್, ಇತ್ತಲ್, ಉತ್ತಲ್, ಎತ್ತಲ್.
ಉದಂತಕ್ಕೆತ್ವಂ: ಒಳಗು - ಒಳಗೆ; ಪೊಱಗು - ಪೊಱಗೆ; ಪೆಱಗು - ಪೆಱಗೆ; ಮೇಗು - ಮೇಗೆ; ಕೆಳಗು - ಕೆಳಗೆ.
(ಕಾವ್ಯಪ್ರಯೋಗಗಳನ್ನು ವಿಸ್ತಾರ ಹೆಚ್ಚಾಗದಿರಲೆಂದು ಉದ್ಧರಿಸಿಲ್ಲ).
ಇಲ್ಲಿ ಅಲ್ ಹಾಗೂ ಎಕಾರಗಳನ್ನು ಸಪ್ತಮೀ ವಿಭಕ್ತಿಯ ಅರ್ಥದ ಪ್ರತ್ಯಯವಾಗಿ ಕ್ರಮವಾಗಿ ಅಕಾರಾಂತವಾದ (ಮೂಡ => ಮೂಡಲ್, ಅತ್ತ => ಅತ್ತಲ್ ಇತ್ಯಾದಿ) ಹಾಗೂ ಉಕಾರಾಂತವಾದ (ಹೊರಗು => ಹೊರಗೆ, ಕೆಳಗು => ಕೆಳಗೆ) ದಿಗ್ವಾಚಿಯಾದ ಪದಗಳಿಗೆ ಮಾತ್ರ ಬರುತ್ತವೆ ಎಂದು ಹೇಳಿರುವುದು ಗಮನಾರ್ಹ.
ಮೂಡ, ತೆಂಕ, ಅತ್ತ ಇವುಗಳೆಲ್ಲವೂ ನಿಜವಾಗಿಯೂ ಅಕಾರಾಂತಗಳೇ? ಒಳಗು, ಹೊರಗು, ಕೆಳಗು ಇವೆಲ್ಲವೂ ನಿಜವಾಗಿಯೂ ಉಕಾರಾಂತಗಳೇ? ಅಲ್ಲಿ ಎನ್ನುವುದೊಂದು ವಿಭಕ್ತಿಪ್ರತ್ಯಯವೇ ಅಥವಾ ವ್ಯಾಕರಣಪ್ರಕ್ರಿಯೆಗೊಳಗಾಗಿ ಸಿದ್ಧಿಸಿದ ಪದವೇ? ಈ ಪ್ರಶ್ನೆಗಳು ಬೇರೊಂದು ದಿನಕ್ಕಿರಲಿ.
ಆದರೆ
ಅಲ್ ಪ್ರತ್ಯಯ ಸಪ್ತಮೀ ವಿಭಕ್ತ್ಯರ್ಥದಲ್ಲಿ ಬರುವುದು ಕೇವಲ ದಿಗ್ವಾಚಕಗಳಿಗೆ ಮಾತ್ರವೇ ಎನ್ನುವುದನ್ನು ಯೋಚಿಸಿದಾಗ ಬಾಲ್ಯದಲ್ಲಿ ಕೇಳಿದ
ಶಿಶುಗೀತೆಯೊಂದರ ಮೊದಲ ಸಾಲು "
ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು" ನೆನಪಾಯಿತು.
ಮನೆಯಲೊಂದು ಎನ್ನುವ ಪದ
ಮನೆಯಲಿ +
ಒಂದು ಎಂದು ಲೋಪಸಂಧಿಯಾಗಿ ಸಿದ್ಧಿಸಿದೆಯೇ ಅಥವಾ
ಮನೆಯಲ್ +
ಒಂದು ಎಂದು ಸಹಜವಾಗಿ
ಸಂಹಿತವಾಗಿದೆಯೇ
1? ಕನ್ನಡವ್ಯಾಕರಣಶಾಸ್ತ್ರದ ಪರಂಪರೆ ಇಲ್ಲಿ ಲೋಪಸಂಧಿಯನ್ನೇ ಪ್ರತಿಪಾದಿಸುತ್ತದೆ ಎಂದೆನಿಸುತ್ತದೆ.
ಆದರೆ ಅಲ್, ಅಲಿ, ಅಲ್ಲಿ ಈ ಮೂರೂ ರೂಪಗಳು ಸಪ್ತಮೀ ವಿಭಕ್ತಿಪ್ರತ್ಯಯಗಳಾಗಿ ಯಥಾವತ್ತಾಗಿ ಕಾಣಿಸಿಕೊಳ್ಳುವುದು ಅವುಗಳು ಒಂದೇ ಮೂಲ ಪ್ರತ್ಯಯದಿಂದ ಸಿದ್ಧವಾದ ವಿವಿಧರೂಪಗಳಿರಬಹುದೇ ಎನ್ನುವ ಸಂಶಯಕ್ಕೆಡೆಮಾಡುತ್ತದೆ. ಈ ವಿಷಯವನ್ನು ಇನ್ನೊಂದು ಲೇಖನದಲ್ಲಿ ವಿಸ್ತರಿಸೋಣ. ಆದರೆ ಈ ಸಂಶಯದಿಂದ ಸದ್ಯದ ವಿಷಯಕ್ಕೆ ಆಗುವ ಸಹಾಯವೇನೆಂದರೆ ಮನೆಯಲ್ + ಒಂದು ಎನ್ನುವ ಸಂಹಿತೆವಿಂಗಡಣೆಯೂ ಸಾಧುವಿರಬಹುದು, ಅಲ್, ಒಳ್ ಪ್ರತ್ಯಯಗಳೇ ಮೂಲ ಸಪ್ತಮೀ ವಿಭಕ್ತಿಪ್ರತ್ಯಯರೂಪಗಳಾಗಿರಬಹುದು, ಹಾಗಾಗಿ ಅಲ್ ಪ್ರತ್ಯಯ ಕೇವಲ ದಿಗ್ವಾಚಿಗಳಿಗೆ ಮಾತ್ರ ಸೀಮಿತವಾಗಿರಲಾರದು ಎನ್ನುವುದು ಹೊಳೆಯುತ್ತದೆ.
ಎಕಾರವನ್ನು ಸೂತ್ರ ೧೧೭ ಹಾಗೂ ಸೂತ್ರ ೧೨೯, ಕ್ರಮವಾಗಿ ತೃತೀಯಾ ಹಾಗೂ ಸಪ್ತಮೀ ವಿಭಕ್ತಿಗಳಿಗೆ ಪ್ರತ್ಯಯವಾಗಿ ನಿರೂಪಿಸುತ್ತವೆ.
ಸೂತ್ರ ೧೧೭ರಲ್ಲಿ ಎಕಾರಕ್ಕೆ ಕೊಟ್ಟಿರುವ ಪ್ರಯೋಗಗಳಾದ ಕ್ರಮದೆ, ನಯದೆ, ಭಯದೆ ಇವು ಯಾವುವೂ ವಿಭಕ್ತಿರೂಪಗಳಾಗಿರದೆ ಕ್ರಿಯಾವಿಶೇಷಣರೂಪಗಳೆಂಬುದನ್ನು (adverb) ಗಮನಿಸಬೇಕು. ಕ್ರಿಯಾವಿಶೇಷಣಗಳಾಗುವ ಪ್ರಕ್ರಿಯೆಗಳಲ್ಲೂ ಕೆಲವು ವಿಭಕ್ತಿಪ್ರತ್ಯಯರೂಪಗಳು ಕಂಡುಬಂದರೂ ಆ ಪ್ರಕ್ರಿಯೆಗಳು ಬೇರೆ ಬೇರೆ. ಕ್ರಮದೆ, ನಯದೆ, ಭಯದೆ ಎನ್ನುವುದನ್ನು ಕ್ರಮದಿಂದ, ನಯದಿಂದ, ಭಯದಿಂದ ಎಂದು ಹೊಸಗ್ನನಡದ ತೃತೀಯಾವಿಭಕ್ತಿಯಂತೆಯೇ ರೂಪಾಂತರಿಸಿದರೂ ಸಿದ್ಧಿಸುವ ರೂಪಗಳು ಕ್ರಿಯಾವಿಶೇಷಣಗಳೇ. ಹೀಗಾಗಿ, ಸೂತ್ರ ೧೧೭ರಲ್ಲಿ ಎಕಾರವನ್ನು ತೃತೀಯಾ ವಿಭಕ್ತಿಪ್ರತ್ಯಯವಾಗಿ ನಿರೂಪಿಸಿರುವುದು ಉಚಿತವಲ್ಲವೆನಿಸುತ್ತದೆ.
ಕ್ರಮದೆ, ನಯದೆ, ಭಯದೆ ಎನ್ನುವುದಕ್ಕೆ ಕ್ರಮದಲ್ಲಿ, ನಯದಲ್ಲಿ, ಭಯದಲ್ಲಿ ಎಂಬ ರೂಪಾಂತರಗಳೂ ಕ್ರಮದಿಂದ, ನಯದಿಂದ, ಭಯದಿಂದ ಎನ್ನುವಷ್ಟೇ ಸಾಧುವಾದುವು ಮಾತ್ರವಲ್ಲ ಅರ್ಥವನ್ನು ಇನ್ನಷ್ಟು ಸ್ಫುಟಗೊಳಿಸುತ್ತವೆ. ಹಾಗಾದರೆ ಎಕಾರ ಪ್ರತ್ಯಯವು ಸೂತ್ರ ೧೨೯ರಲ್ಲಿ ನಿರೂಪಿಸಿರುವುದಕ್ಕಿಂತಲೂ ವಿಸ್ತಾರವುಳ್ಳ ಸಪ್ತಮೀ ವಿಭಕ್ತಿಪ್ರತ್ಯಯವೇ? ಇದನ್ನೂ ಪೂರ್ತಿ ಒಪ್ಪುವಂತಿಲ್ಲ. ಏಕೆಂದರೆ, ಕ್ರಮದಲ್ಲಿ, ನಯದಲ್ಲಿ, ಭಯದಲ್ಲಿ ಎಂಬುವೂ ಕ್ರಿಯಾವಿಶೇಷಣರೂಪಗಳೇ. ಅಲ್ಲದೆ, ಸೂತ್ರ ೧೨೯ರಲ್ಲಿ ಎಕಾರಕ್ಕೆ ಕೊಟ್ಟಿರುವ ಪ್ರಯೋಗಗಳಾದ ಒಳಗೆ, ಪೊಱಗೆ (ಹೊಸಗನ್ನಡದಲ್ಲಿ ಹೊರಗೆ), ಮೇಗೆ, ಕೆಳಗೆ ಇವುಗಳೂ ಸಪ್ತಮೀ ವಿಭಕ್ತಿರೂಪಗಳೆನ್ನುವುದೂ ಪೂರ್ತಿ ಸರಿಯೆನಿಸುವುದಿಲ್ಲ. ಅವು ಚತುರ್ಥೀ ವಿಭಕ್ತಿರೂಪಗಳಾಗಿರಬಹುದೇ? ಅಥವಾ ಚತುರ್ಥೀ ವಿಭಕ್ತಿಪ್ರತ್ಯಯಗಳಲ್ಲೊಂದಾದ ಗೆ ಪ್ರತ್ಯಯವು ಬೇರೆ ವ್ಯಾಕರಣಪ್ರಕ್ರಿಯೆಯ ಭಾಗವಾಗಿ ಇಲ್ಲಿ ಬಂದಿರಬಹುದೇ? ಚತುರ್ಥೀ ವಿಭಕ್ತಿಯ ಸಂಪ್ರದಾನಕಾರಕದಲ್ಲಿ ಸ್ವಲ್ಪಮಟ್ಟಿಗೆ ದಿಕ್ಕಿನ ಅಂಶವೂ ಅಡಗಿರುವುದನ್ನು ಗಮನಿಸಬೇಕು. ಈ ವಿಷಯವೂ ಇನ್ನೊಂದು ದಿನಕ್ಕಿರಲಿ.
ಹಾಗೆಯೇ, ದಿಗ್ವಾಚಕವಲ್ಲದ ಜೊತೆಗೆ ಎಂಬಲ್ಲೂ ಕಾಣುವ ಎಕಾರವೂ ಜೊತೆಯಲ್ಲಿ ಎನ್ನುವುದಕ್ಕೆ ಸಮಾನಾರ್ಥಕವಾಗಿದೆ (ಜೊತೆಯಿಂದ ಎನ್ನುವ ರೂಪ ಇಲ್ಲಿ ಸಮಂಜಸವಲ್ಲವೆನಿಸುವುದು ಎಕಾರವು ತೃತೀಯಾ ವಿಭಕ್ತಿಪ್ರತ್ಯಯವಲ್ಲವೆನ್ನುವ ಈಮೇಲಿನ ಪ್ರತಿಪಾದನೆಗೆ ಪುಷ್ಟಿಯನ್ನೊದಗಿಸುತ್ತದೆ). ಜೊತೆಗೆ ಎನ್ನುವುದನ್ನೂ (ಜೊತೆಯಲ್ಲಿ ಎನ್ನುವುದನ್ನು ಕೂಡಾ) ಸಪ್ತಮೀ ವಿಭಕ್ತಿರೂಪವೆನ್ನಲಾಗದು. ಹೀಗಾಗಿ, ಸೂತ್ರ ೧೨೯ರಲ್ಲಿ ಎಕಾರವನ್ನು ಸಪ್ತಮೀ ವಿಭಕ್ತಿಪ್ರತ್ಯಯವಾಗಿ ನಿರೂಪಿಸಿರುವುದೂ ಪೂರ್ತಿಯಾಗಿ ಸಮರ್ಪಕವೆನಿಸುವುದಿಲ್ಲ. ಈ ಚರ್ಚೆಯಿಂದ ಎಕಾರವು ಸಪ್ತಮ್ಯರ್ಥದಲ್ಲಿ ಬರುವುದಿಲ್ಲ ಎಂದು ನಿರ್ಣಯಿಸಲಾಗದಿದ್ದರೂ ಸೂತ್ರ ೧೨೯ರಲ್ಲಿ ನೀಡಿರುವ ಎಕಾರದ ಪ್ರಯೋಗಗಳು ಸಪ್ತಮ್ಯರ್ಥದವೆನ್ನುವಲ್ಲಿ ಸ್ವಲ್ಪ ಸಂಶಯವಂತೂ ಉಳಿಯುತ್ತದೆ.
ಹಾಗಾದರೆ ಈ ಎಕಾರದ ನಿಜವೇಷವೇನು?
ಸೂತ್ರ ೮೦
ಪ್ರಯೋಗಂ -
ಸಮುಚ್ಚಯವಶದಿಂ ಎಕಾರಾದಿಸ್ವರಂ ಪರಮಾದೊಡೆ ದ್ವಿತ್ವಮಿಲ್ಲ; ಎನೆ, ಕೊಲೆ, ಉಣೆ ಎಂಬಂತೆ
(ಈ ಸೂತ್ರ ಕಲ್ => ಕಲ್ಲು, ಬೆನ್=> ಬೆನ್ನು ಇತ್ಯಾದಿಯಾಗಿ ಬರುವ ದ್ವಿತ್ವಸಂಧಿಗೆ ಅಪವಾದಗಳನ್ನು ಸೂಚಿಸುವುದಾಗಿದ್ದು, ಅದು ಇಲ್ಲಿ ಅಪ್ರಸ್ತುತವಾದುದರಿಂದ, ಕೇವಲ ಪ್ರಸ್ತುತವಾದ ಎನೆ, ಉಣೆ ಎಂಬಂಥ ಪ್ರಯೋಗಗಳನ್ನು ಉದ್ಧರಿಸಿದ್ದೇನೆ).
ಕನ್ನಡವೆನೆ ಕುಣಿದಾಡುವುದೆನ್ನೆದೆ
ಕನ್ನಡವೆನೆ ಕಿವಿ ನಿಮಿರುವುದು
ಇಲ್ಲಿ ಎನೆ ಎನ್ನುವುದು ಎನಲು (ಎನ್ನಲು ಕೂಡ) ಎಂಬುದರ ರೂಪಾಂತರವಾಗಿದೆಯೆಂದರೆ ತಪ್ಪಾಗಲಾರದು. ಎನಲು ಎಂಬಲ್ಲಿಯೂ ನಮಗೆ ಕಾಣಿಸುವುದು ಅಲ್ ಪ್ರತ್ಯಯವೇ! ಉಣೆ ಎನ್ನುವುದೂ ಉಣಲು ಎಂಬುದರ ರೂಪಾಂತರವೇ ಆಗಿದೆ. ಹೀಗೆ ಮಾಡೆ, ಹೂಡೆ, ಪೋಗೆ, ಕೇಳೆ ಇತ್ಯಾದಿಯಾಗಿ ಎಲ್ಲಡೆಯೂ ಎಕಾರವು ಅಲ್ ಪ್ರತ್ಯಯದ ಸ್ಥಾನದಲ್ಲೇ ಬರುವುದಾಗಿದೆ. ಆದರೆ ಇವು ಯಾವುವೂ (ಎಕಾರಾಂತ ಅಲಂತಗಳೆರಡೂ) ಸಪ್ತಮೀ ವಿಭಕ್ತಿರೂಪಗಳಲ್ಲ.
ಈ ಎಲ್ಲ ವಿಚಾರಸರಣಿಯ ಫಲಿತಾಂಶ ಹೀಗಿರಬಹುದು. ಎಕಾರವು ಅಲ್ ಪ್ರತ್ಯಯಕ್ಕೆ ಪರ್ಯಾಯವಾಗಿ ಬರುವುದೇ ಸರಿ, ತೃತೀಯಾ ವಿಭಕ್ತ್ಯರ್ಥದ ಇಂ, ಇಂದ, ಇಂದೆಗಳಿಗೆ (ಸೂತ್ರ ೧೧೭ರಲ್ಲಿ ನಿರೂಪಿಸುವಂತೆ) ಖಚಿತವಾಗಿಯೂ ಅಲ್ಲ. ಆದರೆ ಸಪ್ತಮಿ ವಿಭಕ್ತ್ಯರ್ಥದ ಅಲ್ (ಅಲ್, ಅಲಿ, ಅಲ್ಲಿ) ಪ್ರತ್ಯಯಕ್ಕೆ ಪರ್ಯಾಯವಾಗಿ ಎಕಾರ ಬರುವುದು ವಿರಳವಿರುವಂತಿದೆ. ಕ್ರಿಯಾಪದದ ಸಂದರ್ಭದಲ್ಲಿ (ಕ್ರಿಯಾವಿಶೇಷಣ, ಕೃದ್ವಾಚಿ ಇತ್ಯಾದಿ) ಅಲ್ ಪ್ರತ್ಯಯ ಬಂದಾಗ ಎಕಾರವು ಅದಕ್ಕೆ ಪರ್ಯಾಯವಾಗಿ ಬರಬಹುದು.
ಈ ಇಡೀ ವಿಚಾರಸರಣಿ ಬಹಳ ಊಹಾತ್ಮಕವಾದುದರಿಂದ, ಈ ನಿರ್ಣಯ ಪೂರ್ತಿ ಸಾಧುವಾಗಿರಬೇಕಾಗಿಲ್ಲ. ವಿಶೇಷವಾಗಿ, ಎಕಾರವು ಸಪ್ತಮ್ಯರ್ಥದ ಅಲ್ ಪ್ರತ್ಯಯಕ್ಕೆ ಪರ್ಯಾಯವಾಗಿಯೂ ಬರುವ ಉದಾಹರಣೆಗಳು ಹೆಚ್ಚಿನ ಪ್ರಯತ್ನಕ್ಕೆ ತೆರೆದುಕೊಳ್ಳಬಹುದು. ಆದರೆ, ಎಕಾರವು ತೃತೀಯಾರ್ಥದಲ್ಲಿ ಬರುವುದಿಲ್ಲ ಎನ್ನುವುದು ಬಹುಷಃ ಖಚಿತವೆನಿಸುತ್ತದೆ.
ಅನುವೇಶ
ಇಂದೆಯ ಹಿಂದೆ ಮುಂದೆ
ಹೀಗೆ ಎಕಾರದ ಆವೇಶದಲ್ಲಿ ಕಂಡ ಬೆಳಕು, ಕೇಶಿರಾಜನು
ಇಂದೆ ಎನ್ನುವುದನ್ನೂ
ತೃತೀಯಾ ವಿಭಕ್ತಿಯಪ್ರತ್ಯಯವೆಂದು ಸೂತ್ರ ೧೧೭ರಲ್ಲಿ ನಿರೂಪಿಸಿರುವುದರ ಅವ್ಯಾಪ್ತಿದೋಷದ ಪರಿಹಾರದ ದಾರಿಯನ್ನೂ ತೋರಿಸುತ್ತದೆ.
ಇಂದೆಯ ಕೊನೆಗೆ ಕಾಣುವ ಎಕಾರವೂ, ಅಲ್ ಪ್ರತ್ಯಯಕ್ಕೆ ಪರ್ಯಾಯವಾಗಿ ಬಂದಿರುವುದೇ ಆಗಿದೆ! ಅಂದರೆ ಇಂದೆ ಎನ್ನುವುದು
ಇಂದಲ್ (
ಇಂದಲಿ2) ಎಂಬುದಕ್ಕೆ ಪರ್ಯಾಯವೇ ಆಗಿದೆ. "
ಚಂದದಿಂದಲಿ ಸಕಲಸಿದ್ಧಿಗಳನಿತ್ತು" ಎನ್ನುವ
ಪುರಂದರದಾಸರ ಸಾಲನ್ನು ಇಲ್ಲಿ ಸ್ಮರಿಸಬಹುದು. ಇಲ್ಲೂ ಅಲ್ ಪ್ರತ್ಯಯವು ಸಪ್ತಮ್ಯರ್ಥದಲ್ಲಿರದೆ ಕ್ರಿಯಾವಿಶೇಷಣಾರ್ಥಕ್ಕೆ ಹತ್ತಿರವಾಗಿಯೇ ಕಾಣಿಸುವುದನ್ನು ಗಮನಿಸಬಹುದು.
ಹೀಗೆ ತೃತೀಯಾ ವಿಭಕ್ತಿಪ್ರತ್ಯಯವಾದ ಇಂದಕ್ಕೆ ಅಲ್ ಪ್ರತ್ಯಯ ಬಂದು, ಆ ಅಲ್ ಪ್ರತ್ಯಯಕ್ಕೆ ಪರ್ಯಾಯವಾಗಿ ಎಕಾರವು ಆದೇಶವಾಗಿ ಕಾಣಿಸುವ, ಇಂದೆ ಎನ್ನುವ ರೂಪವನ್ನೂ ತೃತೀಯಾ ವಿಭಕ್ತಿಪ್ರತ್ಯಯವೆಂದು ಸೂತ್ರ ೧೧೭ರಲ್ಲಿ ನಿರೂಪಿಸಿರುವುದೂ ಸಮಂಜಸವಲ್ಲ. ಇಂ ಎನ್ನುವುದು ಮಾತ್ರವೇ ಮೂಲ ತೃತೀಯಾ ವಿಭಕ್ತಿಪ್ರತ್ಯಯವೆನ್ನುವುದೇ ಸರಿಯನಿಸುತ್ತದೆ (ಇಂದ ಎನ್ನುವ ರೂಪವೂ ಇದೇ ರೀತಿ ವ್ಯಾಕರಣಪ್ರಕ್ರಿಯೆಗೊಳಗಾಗಿ ಸಿದ್ಧವಾದ ರೂಪವೆಂಬುದನ್ನು ಬೇರೆ ದಿನಕ್ಕಿಟ್ಟುಕೊಳ್ಳೋಣ).
ಹವ್ಯಕ ಕನ್ನಡ, ತುಳು ಭಾಷೆಗಳಲ್ಲಿ ಎಕಾರ
ನನಗೆ ತಿಳಿದಂತೆ, ಹವ್ಯಕ ಕನ್ನಡದಲ್ಲಿ ಎಕಾರವು ವಿಭಕ್ತಿಪ್ರತ್ಯಯವಾಗಿ (ತೃತೀಯೆಯಾಗಿಯೂ, ಸಪ್ತಮೀಯಾಗಿಯೂ) ಕಾಣಿಸುವುದು ವಿರಳ (ತೃತೀಯಾರ್ಥದಲ್ಲಂತೂ ಇಲ್ಲವೇ ಇಲ್ಲ). ಕ್ರಿಯಾಪದದ ಸಂದರ್ಭದಲ್ಲಿ ಮಾತ್ರ ಅಲ್ ಪ್ರತ್ಯಯವು ಎಕಾರಾಂತವಾಗಿ ಕಾಣಿಸುತ್ತದೆ. ಉದಾಹರಣೆಗೆ, ಮಾಡಲೆ (ಹೊಸಗನ್ನಡದಲ್ಲಿ ಮಾಡಲು), ಹೋಪಲೆ (ಹೊಸಗನ್ನಡದಲ್ಲಿ ಹೋಗಲು) ಇತ್ಯಾದಿ. ಈ ಸಂದರ್ಭದಲ್ಲಿ ಅಲ್ ಪ್ರತ್ಯಯವು ಎಂದೂ ಎಕಾರವಿಲ್ಲದೆ ಕಾಣಿಸುವುದಿಲ್ಲ ಹಾಗೂ ಎಕಾರವು ಎಂದೂ ಅಲ್ ಪ್ರತ್ಯಯಕ್ಕೆ ಆದೇಶವಾಗಿ ಬರುವುದಿಲ್ಲ.
ತುಳು ಭಾಷೆಯಲ್ಲಿ ಎಕಾರವು ಪ್ರಥಮಾ ವಿಭಕ್ತಿಪ್ರತ್ಯಯವಾಗಿ ಕಾಣಿಸುವುದು ಇದ್ದೇ ಇದೆ, ಆದರೆ ಅದು ಇಲ್ಲಿ ಅಷ್ಟು ಪ್ರಸ್ತುತವಲ್ಲ. ಎಕಾರವು ತೃತೀಯೆ, ಸಪ್ತಮಿಗಳ ಸಂದರ್ಭದಲ್ಲಿ ಕಾಣಿಸುವುದೇ ಇಲ್ಲ. ಕ್ರಿಯಾಪದದ ಸಂದರ್ಭದಲ್ಲಿ, ಕನ್ನಡದ ಅಲ್ ಪ್ರತ್ಯಯದ ಸ್ಥಾನದಲ್ಲಿ ಎರ ಪ್ರತ್ಯಯವು ಕಾಣಿಸುತ್ತದೆ. ಉದಾಹರಣೆಗೆ, ಮಲ್ಪೆರ (ಹೊಸಗನ್ನಡದಲ್ಲಿ ಮಾಡಲು), ಪೋಯೆರ (ಹೊಸಗನ್ನಡದಲ್ಲಿ ಹೋಗಲು) ಇತ್ಯಾದಿ. ವಿಕಲ್ಪವಾಗಿ ಎರ ಪ್ರತ್ಯಯವು ಎಕಾರಾಂತವಾಗಿಯೂ ಕಾಣಿಸುವುದುಂಟು. ಉದಾಹರಣೆಗೆ, ಮಲ್ಪೆರೆ (ಹೊಸಗನ್ನಡದಲ್ಲಿ ಮಾಡಲು), ಪೋಯೆರೆ (ಹೊಸಗನ್ನಡದಲ್ಲಿ ಹೋಗಲು) ಇತ್ಯಾದಿ. ಕನ್ನಡಲ್ಲಿ ಅಲ್ ಪ್ರತ್ಯಯದ ಮೇಲೆ ಕ್ ಪ್ರತ್ಯಯವು ಸೇರುವಂತೆ (ಉದಾ: ಮಾಡಲ್ಕೆ, ಹೊಸಗನ್ನಡದಲ್ಲಿ ಮಾಡಲಿಕ್ಕೆ), ತುಳುವಲ್ಲಿ ಎರ ಪ್ರತ್ಯಯದ ಮೇಲೆ ಕ್ ಪ್ರತ್ಯಯ ಬಂದಾಗ ನಡುವೆ (ಎರ ಪ್ರತ್ಯಯದನಂತರ) ಎಕಾರ ಬಂದೇ ಬರುತ್ತದೆ. ಉದಾಹರಣೆಗೆ, ಮಲ್ಪೆರೆಗ್, ಪೋಯೆರೆಗ್ ಇತ್ಯಾದಿ. ನನಗೆ ತಿಳಿದಂತೆ, ಇಲ್ಲಿ ಎರ ಪ್ರತ್ಯಯ ಎಕಾರಂತವಾಗಿಯಲ್ಲದೆ ಕಾಣಿಸುವುದಿಲ್ಲ (ಮಲ್ಪೆರಗ್, ಪೋಯೆರಗ್ ಇತ್ಯಾದಿ ಪ್ರಯೋಗಗಳನ್ನು ನಾನು ಕೇಳಿಲ್ಲ).
ಹವ್ಯಕ ಕನ್ನಡ ಹಾಗೂ ತುಳು ಭಾಷೆಗಳ ಈ ಲಕ್ಷಣಗಳ ನಿರೂಪಣೆ ತಪ್ಪಾಗಿದ್ದರೆ (ಅಥವಾ ಅದಕ್ಕೆ ಅಪವಾದಗಳಿದ್ದರೆ) ಬಲ್ಲವರು ದಯವಿಟ್ಟು ತಿದ್ದಬೇಕು.
ಹೀಗೆ ಎಕಾರವು ಅಲ್ ಪ್ರತ್ಯಯಕ್ಕೆ (ಅಥವಾ ಅದಕ್ಕೆ ಆ ಭಾಷೆಯಲ್ಲಿ ಪರ್ಯಾಯವಾದ ಪ್ರತ್ಯಯಕ್ಕೆ) ಆದೇಶವಾಗಿ, ಕನ್ನಡಕ್ಕೆ ಹತ್ತಿರದ (ಹವ್ಯಕ), ದೂರದ (ತುಳು) ಇತರ ದ್ರಾವಿಡಭಾಷೆಗಳಲ್ಲಿ ಕಾಣಿಸದಿದ್ದರೂ, ಕ್ರಿಯಾಪದದ ಸಂದರ್ಭದಲ್ಲಿ ಮಾತ್ರ ಆ ಪ್ರತ್ಯಯದೊಂದಿಗೆ (ಆಗಮವಾಗಿ?) ಕಾಣಿಸುವುದು ಮತ್ತು ತೃತೀಯಾ, ಸಪ್ತಮೀ ವಿಭಕ್ತಿಗಳ ಸಂದರ್ಭದಲ್ಲಿ ಕಾಣಿಸದಿರುವುದು, ಈಗಾಗಲೇ ನಿರೂಪಿಸಿದ, ಕನ್ನಡದಲ್ಲೂ ಎಕಾರಕ್ಕೂ ಕ್ರಿಯಾಪದದ ಸಂದರ್ಭದ ಅಲ್ ಪ್ರತ್ಯಯಕ್ಕೂ ಇರುವ ಹತ್ತಿರದ ಸಂಬಂಧವನ್ನೂ, ಅಂಥ ಸಂಬಂಧ ಸಪ್ತಮೀ ವಿಭಕ್ತಿಯ ಅಲ್ ಪ್ರತ್ಯಯೊಂದಿಗೆ ಅಷ್ಟಾಗಿ ಕಾಣದಿರುವುದನ್ನೂ, ತೃತೀಯಾ ವಿಭಕ್ತಿಯೊಂದಿಗೆ ಯಾವ ಸಂಬಂಧವೂ ಇಲ್ಲದಿರುವುದನ್ನೂ ಸ್ವಲ್ಪಮಟ್ಟಿಗೆ ಸಮರ್ಥಿಸುವಂತಿದೆ.
ತೃತೀಯಾರ್ಥದ ಸಪ್ತಮೀ
ಸೇಡಿಯಾಪು ಕೃಷ್ಣಭಟ್ಟರು ತಮ್ಮ ಪಾಂಡಿತ್ಯಪೂರ್ಣವಾದ ಹಾಗೂ ಒಳನೋಟಗಳಿಂದ ತುಂಬಿರುವ "ಪಂಚಮೀ ವಿಭಕ್ತಿ" ಎಂಬ ಲೇಖನದಲ್ಲಿ ಕನ್ನಡದಲ್ಲಿ ಪಂಚಮೀ ವಿಭಕ್ತಿಪ್ರತ್ಯಯವಿಲ್ಲ, ಅದು ತೃತೀಯಾ ವಿಭಕ್ತಿಯ ರೂಪವನ್ನೇ ಪಡೆದಿದೆ ಎನ್ನುವ ಮತವನ್ನು ಖಂಡಿಸುತ್ತಾ, ಕನ್ನಡದಲ್ಲಿ ಇರುವ ಇಂ, ಇಂದ ಎನ್ನುವ ಪ್ರತ್ಯಯಗಳು ನಿಜವಾಗಿ ಪಂಚಮೀ ವಿಭಕ್ತಿಯವೇ ಆಗಿದ್ದು, ತೃತೀಯಾರ್ಥಕ್ಕೆ ಕನ್ನಡವು ಹೆಚ್ಚಾಗಿ ಸಪ್ತಮೀ ವಿಭಕ್ತಿಪ್ರತ್ಯಯವನ್ನೇ ಅವಲಂಬಿಸುತ್ತದೆ (ಉದಾ: ಕತ್ತಿಯಲ್ಲಿ ಕಡಿ ಇತ್ಯಾದಿ) ಎಂದು ಸಾಧಾರವಾಗಿ ನಿರೂಪಿಸಿದ್ದಾರೆ. ಇದು ಇಲ್ಲಿನ ಚರ್ಚೆಗೆ ಪೂರಕವೇ ಆಗಿದೆ. ಇಷ್ಟಲ್ಲದೆ, ಆ ಲೇಖನದಲ್ಲಿ ಅವರು ಹೇಳುವ ಹಾಗೂ ಉದ್ಧರಿಸುವ ಕೆಲವು ಅಂಶಗಳು ಇಲ್ಲಿ ಹೇಳಿರುವ ವಿಚಾರಗಳನ್ನು ಸಮರ್ಥಿಸುವಂತೆಯೇ ಇವೆ.
ಕನ್ನಡ ವೈಯಾಕರಣರ ಮತದಂತೆ, ಹಳೆಯ ಭಾಷೆಯಲ್ಲಿ ತೃತೀಯಾ ವಿಭಕ್ತಿಗೆ ಮೂರು ಅಥವಾ ನಾಲ್ಕು ರೂಪಗಳಿವೆ. ಇಂ, ಇಂದ, ಇಂದೆ; ಈ ಮೂರಕ್ಕೂ ನಪುಂಸಕಲಿಂಗದ ಏಕವಚನದಲ್ಲಿ ಆದೇಶವಾಗಿ 'ಎ' ಬರುವುದು. ಪಂಚಮ್ಯರ್ಥದಲ್ಲಿ ಇವೇ ಪ್ರತ್ಯಯಗಳು (ಪ್ರಾಚೀನರ ಮತದಂತೆ ಅತ್ತಣ್ ಎಂಬುದರೊಡನೆ) ಬರುವುದಾದರೂ, ಇವಕ್ಕೆ ಆದೇಶವಾದ ಎಕಾರವಿಲ್ಲವೆಂದು ಸ್ಪಷ್ಟೀಕರಿಸಿದ್ದಾರೆ. ಆದರೆ ಈ ಎಕಾರವು ಸಪ್ತಮಿಯೆಂದು ನವೀನ ವಿದ್ವಾಂಸರು ನಿರ್ಣಯಿಸಿದ್ದಾರೆ ("ಕನ್ನಡ ಕೈಪಿಡಿ" ಪುಟ ೪೧೩.)
...(ಅವು [ಇಂ, ಇಂದ, ಇಂದೆ] ಮೂರಿದ್ದರೂ, ಇಂ ಎಂಬ ಒಂದನ್ನೇ ಬೆಳೆಯಿಸಿ ಉಳಿದೆರಡು ರೂಪುಗೊಂಡಿರುವುದರಿಂದಲೂ, ಅಭಿನ್ನಾರ್ಥಕಗಳಾದುದರಿಂದಲೂ, ಈ ಮೂರಕ್ಕೆ ಬದಲಾಗಿ ಹೊಸಗನ್ನಡದಲ್ಲಿ 'ಇಂದ' ಎಂಬ ಒಂದೇ ರೂಪವು ತೋರುವುದರಿಂದಲೂ ಭಾಷಾವಿಜ್ಞಾನ ದೃಷ್ಟಿಯಿಂದ ಅದನ್ನು ಒಂದೇ ಎಂದು ಹೇಳಬೇಕಾಗುತ್ತದೆ.)...
ಮೈಸೂರು ವಿಶ್ವವಿದ್ಯಾನಿಲಯದ "ಕನ್ನಡ ಕೈಪಿಡಿ"ಯ ಪುಟ ೪೧೩ರ ಕೊನೆಯಲ್ಲಿರುವ ಅಡಿಟಪ್ಪಣಿ ಹೀಗಿದೆ.
* ಇದು [ಎಕಾರ] ವ್ಯಾಕರಣಗಳಲ್ಲಿ ತೃತೀಯಾವಿಭಕ್ತಿ ಪ್ರತ್ಯಯವೆಂದು ಹೇಳಿದ್ದರೂ, ಸಪ್ತಮೀವಿಭಕ್ತಿ ಪ್ರತ್ಯಯವೆಂದು ತೋರುವುದು. ಒಳಗು+ಎ ಎಂಬುದರೊಡನೆ ಹೋಲಿಸಿ.
ಇದೇ "ಪಂಚಮೀ ವಿಭಕ್ತಿ" ಲೇಖನದಲ್ಲಿ, ಸೇಡಿಯಾಪು ಕೃಷ್ಣಭಟ್ಟರು ಮುಂದೆ ಹವೀಕ ಕನ್ನಡದ (ಹವ್ಯಕ ಎಂದೂ ಹೇಳುವುದಿದೆ) ಸ್ವರೂಪವನ್ನು ವಿವರಿಸುತ್ತಾ ಹೀಗೆಂದಿದ್ದಾರೆ.
ಎಕಾರವು ಇಂದೂ ಆ [ಹವೀಕ] ನುಡಿಯಲ್ಲಿ ಕೆಲವು ಕಡೆ ಸಪ್ತಮೀ ವಿಭಕ್ತಿಯಾಗಿ ಪ್ರಯುಕ್ತವಾಗುತ್ತದೆ. ಉದಾ: ಒಂದು ದಿಕ್ಕೆ (= ಒಂದು ದಿಕ್ಕಿನಲ್ಲಿ).
ಅಂಬಿಕಾತನಯದತ್ತರ "ಮುಗಿದಿತ್ತು ಬೀದಿಮಾತು" ಎಂಬ ಕವನದಲ್ಲಿ (ಹೃದಯ ಸಮುದ್ರ ಎಂಬ ಕವನಸಂಕಲನದಲ್ಲಿದೆ) ಇದೇ ಪ್ರಯೋಗವನ್ನು ನೋಡಬಹುದು.
ಅಬ್ಬಬ್ಬ ಚುಕ್ಕೆ
ಏನೊಂದು ದಿಕ್ಕೆಬಾನೆಲ್ಲ ತೂತು ತೂತು
ದಿಕ್ಕೆ ಎನ್ನುವುದೂ ದಿಗ್ವಾಚಿಯೇ. ಇಲ್ಲೂ ಒಳಗೆ, ಹೊರಗೆ, ಮೇಗೆ, ಕೆಳಗೆ ಎನ್ನುವಲ್ಲಿರುವಂತೆ ಚತುರ್ಥೀ ವಿಭಕ್ತಿಯ ಪ್ರತ್ಯಯವಿರಬಹುದೇ ಎನ್ನುವ ಸಂಶಯ ಕಾಡಿದರೂ, ಹೊಸಗನ್ನಡದಲ್ಲಿ ಇದರ ಚತುರ್ಥೀಸ್ವರೂಪ ದಿಕ್ಕಿಗೆ ಎಂದಿರುವುದರಿಂದಲೂ, ಮೇಗೆ ಎನ್ನುವುದರ ರೂಪಾಂತರವಾಗಿರಬಹುದಾದ ಮೇಲೆ ಎನ್ನುವಲ್ಲಿ ಚತುರ್ಥೀ ವಿಭಕ್ತಿಪ್ರತ್ಯಯದ ಕುರುಹಿಲ್ಲದಿರುವುದರಿಂದಲೂ, ಆ ಸಂಶಯ ಪೂರ್ತಿಯಾಗಿ ಪರಿಹಾರವಾಗುವುದಿಲ್ಲ.
ಹೀಗಾಗಿ, ಎಕಾರವು ನಿಜವಾದ ಸಪ್ತಮ್ಯರ್ಥದಲ್ಲಿ ವಿರಳವಾಗಿಯಾದರೂ (ಪ್ರಾಯಶಃ ದಿಗ್ವಾಚಿಗಳಿಗೆ ಮಾತ್ರ ಸೀಮಿತವಾಗಿ) ಹಳಗನ್ನಡದಲ್ಲೂ, ಹೊಸಗನ್ನಡದಲ್ಲೂ ಕಾಣುವುದಿದೆ ಎಂದುಕೊಳ್ಳಬಹುದೇನೋ. ಕ್ರಿಯಾಪದದ ಸಂದರ್ಭದಲ್ಲಂತೂ ಅಲ್ ಪ್ರತ್ಯಯಕ್ಕೆ ಪರ್ಯಾಯವಾಗಿ ಧಾರಾಳವಾಗಿ ಕಾಣಿಸುತ್ತದೆ. ಆದರೆ ತೃತೀಯಾರ್ಥದಲ್ಲಿ ಎಂದೂ ಬರಲಾರದೆನಿಸುತ್ತದೆ.
___
- ಸಂಸ್ಕೃತವ್ಯಾಕರಣದಲ್ಲೂ ಶಬ್ದಮಣಿದರ್ಪಣದಲ್ಲೂ ಸಂಹಿತೆ ಎನ್ನುವ ಪರಿಭಾಷೆಯನ್ನು ಸಂಧಿಗೆ ಪರ್ಯಾಯವಾಚಕವಾಗಿ ಬಳಸಿದ್ದರೂ, ತೆಕ್ಕುಂಜ ಗೋಪಾಲಕೃಷ್ಣಭಟ್ಟರು ಪೂರ್ವಪರಪದಗಳಲ್ಲಿ ಒಂದಿಷ್ಟು ಬದಲಾವಣೆಯಾದಾಗ ಅದನ್ನು ಸಂಧಿಯೆಂದೂ, ಏನೂ ಬದಲಾವಣೆಯಾಗದೆ ಪದಗಳು ಕೂಡಿಕೊಂಡರೆ ಅದನ್ನು ಸಂಹಿತೆಯೆಂದೂ ಕರೆಯುವುದು ಸೂಕ್ತವೆಂದು ಸೂಚಿಸಿರುವುದು ಕೇಶಿರಾಜನ ಶಬ್ದಮಣಿದರ್ಪಣಂ: ಓದು - ಸಂವಾದದಲ್ಲಿ ಶ್ರೀ ಪಾದೆಕಲ್ಲು ವಿಷ್ಣುಭಟ್ಟರಿಂದ ತಿಳಿಯಿತು.
- ಸೇಡಿಯಾಪು ಕೃಷ್ಣಭಟ್ಟರು "ಪಂಚಮೀ ವಿಭಕ್ತಿ" ಎಂಬ ಲೇಖನದಲ್ಲಿ ಇಂದಲಿ ಎನ್ನುವ ರೂಪ ಇಂದ + ಅಲಿ ಸೇರಿ ಸಿದ್ಧಿಸಿದೆ ಎಂದಿದ್ದಾರೆ (ವಿಚಾರಪ್ರಪಂಚ, ಪುಟ ೧೬೬).
ತೃತೀಯಾ ವಿಭಕ್ತಿ ರೂಪಗಳೆನ್ನಿಸಿಕೊಳ್ಳುವುವುಗಳಲ್ಲಿ ಎಕಾರವೊಂದು ಪಂಚಮಿಯಾಗುವುದಿಲ್ಲವೆಂದು ಕೇಶಿರಾಜಾದಿಗಳು ಹೇಳುವರಷ್ಟೆ. ...; ಎಕಾರವು 'ಇಂ' ಮೊದಲಾದುವುಗಳಂತೆ ಪಂಚಮೀ ವಿಭಕ್ತಿಯಲ್ಲದುದರಿಂದಲೇ ಅದು ಪಂಚಮ್ಯರ್ಥದಲ್ಲಿ ಪ್ರಯುಕ್ತವಾಗುವುದಿಲ್ಲ. ವಸ್ತುತಃ ಎಕಾರವು ಸಪ್ತಮಿಯಾದುದರಿಂದ ತೃತೀಯಾರ್ಥವನ್ನು ಕೊಡುವುದಕ್ಕೆ ಸಮರ್ಥವಾಗುತ್ತದೆ. (ಎ ಎಂಬುದು ನಪುಂಸಕಲಿಂಗದ ಏಕವಚನದಲ್ಲಿ ಮಾತ್ರವೇ ಪ್ರಯುಕ್ತವಾಗುತ್ತದೆ. ಆದುದರಿಂದ ಮೂಲದಲ್ಲಿಯೇ ಅದು ನಪುಂಸಕ ಸಪ್ತಮಿಯಾಗಿದ್ದಿರಲೂಬಹುದು. ಲಿಂಗಭೇದದಿಂದ ಸಪ್ತಮೀ ವಿಭಕ್ತಿ ತುಳುವಿನಲ್ಲಿಯೂ ಇರುವುದೆಂಬುದನ್ನು ಇಲ್ಲಿ ಗಮನಿಸಿದರೆ ಇದರಲ್ಲಿ ವೈಚಿತ್ರ್ಯವು ತೋರಲಾರದು. ಉಪಕರಣವು ಸಹಜವಾಗಿ ನಪುಂಸಕವಾಗಿರಬೇಕಾದುದರಿಂದ ತೃತೀಯಾರ್ಥವನ್ನು ಹೇಳುವುದಕ್ಕೆ ತಕ್ಕುದಾಗಿದೆ.) ಅಲ್ಲದೆ 'ನಡುಗನ್ನಡ'ದಲ್ಲಿ 'ಇಂ' ಪ್ರತ್ಯಯವು ಬೆಳೆದು 'ಇಂದಲಿ' ಎಂದು ಬೆಳೆದುದಕ್ಕೂ ಕಾರಣವನ್ನು ಈಗ ಕಾಣಬಹುದು. ಪಂಚಮಿಯು ತೃತೀಯಾ ಸ್ಥಾನಕ್ಕೆ ಬರುತ್ತಿದ್ದಾಗ ಸಪ್ತಮಿಯು ಮಾಡಿದ ಪ್ರತಿಕ್ರಿಯೆಯಿದು. ಆದರೆ ಪರಿಣಾಮವಾಗಿ, ತೃತೀಯಾ ಪಂಚಮಿಗಳೆರಡದಲ್ಲಿಯೂ 'ಇಂದ'ದೊಂದಿಗೆ 'ಅಲಿ' ಸೇರುವುದಾಯಿತು. ಇಂದಿನ ಕನ್ನಡದಲ್ಲಿ ಕೆಲವೆಡೆ ಲಕಾರಾಗಮವಾಗಲೂ ಇದೇ ಕಾರಣ. ಉದಾ: ಆದುದರಿಂದ + ಏ = ಆದುದರಿಂದಲೇ. ಹೀಗೆ ಒಂದಕ್ಕೊಂದು ಬೆರೆದ ಮೇಲೆ, "ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟ ದೇಶದಿ" ಎಂಬ ರೂಪವೂ ಸಪ್ತಮಿಗುಂಟಾಯಿತು.
ಇಲ್ಲಿ ಶ್ರೀಯುತ ಶ್ರೀಕಾಂತ ಮೂರ್ತಿಯವರು Twitterಅಲ್ಲಿ ನೆನಪಿಸಿದ ಸಪ್ತಮ್ಯರ್ಥದಲ್ಲಿ ಬರುವ ಇಕಾರದ (ಮೊಗದಿ) ಸಮಸ್ಯೆಗೆ ಸೇಡಿಯಾಪು ಅವರು ಒಂದು ರೀತಿಯ ಪರಿಹಾರ (ಪೂರ್ತಿ ಸಮಾಧಾನಕರವಾಗಿರದಿದ್ದರೂ) ನೀಡಿರುವುದು ಗಮನಾರ್ಹ.
Comments
Post a Comment