ಕನ್ನಡದ ಭಕ್ತಿ - ವಕಾರದ ವಿಭಕ್ತಿ
ಈ ಲೇಖನವು ಈಗ GitHubಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ.
---
ಕನ್ನಡದ ಭಕ್ತಿಯನ್ನು ಮುಂದುವರೆಸುತ್ತಾ...
ಪ್ರಸ್ತಾವನೆ
ಕನ್ನಡದಲ್ಲಿ ಕಾಣುವ ದ್ವಿತ್ವಸಂಧಿಗೂ, ಕನ್ನಡದ ವಿಭಕ್ತಿರೂಪಗಳಲ್ಲಿ ಹಲವೆಡೆ ಕಾಣುವ ವಕಾರಕ್ಕೂ, ಅಚ್ಚಗನ್ನಡಛಂದಸ್ಸಿನ ಅಂಶಗಣಗಳ ಆದಿಯ ವಿನ್ಯಾಸಕ್ಕೂ ಹತ್ತಿರದ ಸಂಬಂಧವಿರುವ ಬಗೆಗೆ ಅನುಸ್ವಾರದ ಅನುಸಾರದಲ್ಲೇ ಹೇಳಿರುವುದನ್ನು ನೋಡಬಹುದು. ಆದರೆ (ಅರ್ಧ)ಅನುಸ್ವಾರದ ವಿವಿಧರೂಪಗಳೇ ಆ ಲೇಖನದ ಮುಖ್ಯವಿಷಯವಾಗಿದ್ದು, ವಕಾರದ ವಿಚಾರವು ಅದರಲ್ಲಿ ಚದುರಿಹೋಗಿರುವುದರಿಂದ, ದ್ವಿತ್ವಸಂಧಿ, ವಕಾರ ಹಾಗೂ ಅಂಶಗಣಗಳಿಗೆ ಸಂಬಂಧಿಸಿದ ವಿಚಾರಗಳನ್ನು ಮಾತ್ರ ಅಲ್ಲಿಂದ ಹೆಕ್ಕಿ ತೆಗೆದು, ಸ್ವಲ್ಪ ವಿಸ್ತರಿಸಿ, ಸ್ವತಂತ್ರವಾದ ಹೊಸ ಲೇಖನವಾಗಿ ಮಾಡಬೇಕಾಯಿತು. ಸ್ಪಷ್ಟತೆಗೋಸ್ಕರ ಮಾಡಿರುವ ಈ ಅನಿವಾರ್ಯ ಪುನರಾವರ್ತನೆಗೆ ಓದುಗರ ಕ್ಷಮೆಯಿರಲಿ.
This work is licensed under a Creative Commons Attribution-NonCommercial-NoDerivatives 4.0 International License. Since there is some original research in this work, please inform in the comment section below, if you want to quote or use this or any part of this work.
ಅಚ್ಚಗನ್ನಡಛಂದಸ್ಸಿನ ಅಂಶಗಣಗಳ ವಿನ್ಯಾಸ
ಅಚ್ಚಗನ್ನಡಛಂದಸ್ಸುಗಳಲ್ಲಿ ಅಕ್ಷರವೃತ್ತ, ಮಾತ್ರಾಜಾತಿಗಳಂತಲ್ಲದ ವಿಶೇಷವಾದ ಗಣವಿನ್ಯಾಸವನ್ನು ನೋಡಬಹುದು. ಇವನ್ನು ಅಂಶಗಣಗಳೆಂದು ಕರೆಯುವುದಿದೆ. ಈ ಗಣಗಳು ಬ್ರಹ್ಮ, ವಿಷ್ಣು, ರುದ್ರಗಣಗಳೆಂದು ಮೂರು ಬಗೆಯವು. ಎಲ್ಲ ಗಣಗಳನ್ನೂ ತಾಳಕ್ಕೆ ತಕ್ಕಂತೆ ಹಿಗ್ಗಿಸಿ (ಲಘು, ಗುರುಗಳನ್ನು ಎಳೆದು), ಕುಗ್ಗಿಸಿ (ಗುರುಗಳನ್ನು ಕುಗ್ಗಿಸಿ) ಹಾಡುವುದು ರೂಢಿ. ಆದರೆ ಈ ಹಿಗ್ಗುವಿಕೆ, ಕುಗ್ಗುವಿಕೆ (ಕರ್ಷಣ) ಕೇವಲ ಗಣದ ಅಂತ್ಯದಲ್ಲಿ ಮಾತ್ರ ನಡೆಯುವ ಕ್ರಿಯೆ. ಗಣದ ಆದಿಯಲ್ಲಿ ಕರ್ಷಣಕ್ಕೆ ನಿಷೇಧ.
ಹೀಗೆ, ಕರ್ಷಣಕ್ಕೆ ನಿಷೇಧವಿರುವ, ಎಲ್ಲ ಗಣಗಳಿಗೂ ಅನ್ವಯಿಸುವ, ಗಣದ ಆದಿಯು, ಈ ಕೆಳಗಿನ ಎರಡು ಲಕ್ಷಣಗಳಲ್ಲಿ ಒಂದನ್ನು ಪಡೆದಿರಲೇಬೇಕು. ಇಲ್ಲವಾದರೆ ಅದು ಯಾವುದೇ ಅಂಶಗಣದ ಆದಿಯಾಗಲಾರದು.
- ಒಂದು ಗುರು - ಗಾಳಿ, ತೆಂಗು, ರಾಮ, ಕೃಷ್ಣ ಇತ್ಯಾದಿ. (ದೀರ್ಘಾಕ್ಷರಗಳು, ಅನುಸ್ವಾರ, ವಿಸರ್ಗ ಹಾಗೂ ಸಂಯುಕ್ತ/ಒತ್ತಕ್ಷರಗಳ ಹಿಂದಿನಕ್ಷರಗಳು ಗುರುವೆನ್ನುವುದನ್ನು ಇಲ್ಲಿ ನೆನೆಯಬಹುದು).
- ಎರಡು ಲಘು - ಬೆಳಕು, ನೆರಳು, ಕನಕ, ಪ್ರಥಮ ಇತ್ಯಾದಿ.
ಇಂತಹ, ಆದಿಯನಂತರ ಒಂದು, ಎರಡು, ಮೂರು ಅಕ್ಷರಗಳು (ಅವುಗಳು ಲಘುವೂ, ಗುರುವೂ ಆಗಬಹುದು) ಬಂದರೆ ಆ ಗಣಗಳು ಕ್ರಮವಾಗಿ ಬ್ರಹ್ಮ, ವಿಷ್ಣು, ರುದ್ರಗಣಗಳಾಗುತ್ತವೆ. ಉದಾಹರಣೆಗೆ (ಇಲ್ಲಿ ಲಘುವನ್ನು ಲ ಎಂದೂ ಗುರುವನ್ನು ಗಂ ಎಂದೂ ಸೂಚಿಸುತ್ತೇನೆ),
ಬ್ರಹ್ಮಗಣಕ್ಕೆ (೪ ವಿನ್ಯಾಸ),
- ಗಾಳಿ - ಗಂಲ,
- ಬೆಳಕು - ಲಲಲ
- ಚಿಂತಾ - ಗಂಗಂ
- ಪ್ರಥಮಾ - ಲಲಗಂ
ವಿಷ್ಣುಗಣಕ್ಕೆ (೮ ವಿನ್ಯಾಸ),
- ಹಾಡುತ - ಗಂಲಲ
- ಹರಸುವ - ಲಲಲಲ
- ಮಾತಾಡು - ಗಂಗಂಲ
- ಅಲುಗಾಟ - ಲಲಗಂಲ
- ಜಾಹ್ನವೀ - ಗಂಲಗಂ
- ಜನಕಜಾ - ಲಲಲಗಂ
- ಮಾತಲ್ಲೇ - ಗಂಗಂಗಂ
- ಬುಡದಲ್ಲೇ - ಲಲಗಂಗಂ
ರುದ್ರಗಣಕ್ಕೆ (೧೬ ವಿನ್ಯಾಸ),
- ಮಾಡಿರುವ - ಗಂಲಲಲ
- ಮರಳೊಳಗೆ - ಲಲಲಲಲ
- ಕಾಡಿಲ್ಲದ - ಗಂಗಂಲಲ
- ನೆರಳಿದ್ದರೆ - ಲಲಗಂಲಲ
ಹೀಗೆ, ರುದ್ರಗಣಕ್ಕೆ ಇನ್ನೂ ೧೨ ವಿನ್ಯಾಸಗಳಿವೆ. ಅವನ್ನೆಲ್ಲಾ ಇಲ್ಲಿ ವಿಸ್ತಾರವಾಗುತ್ತದೆಂದು ಕೊಟ್ಟಿಲ್ಲ.
ಶ್ರೀ ಸೇಡಿಯಾಪು ಕೃಷ್ಣಭಟ್ಟರು ಅಚ್ಚಗನ್ನಡಛಂದಸ್ಸುಗಳ ತಲಸ್ಪರ್ಶಿಯಾದ ಕೃತಿ "ಕನ್ನಡಛಂದಸ್ಸಿ"ನಲ್ಲಿ (ಈ ಕೃತಿಯನ್ನು, ಡಾ|| ಶ್ರೀ ಪಾದೆಕಲ್ಲು ವಿಷ್ಣುಭಟ್ಟರು "ಸೇಡಿಯಾಪು ಛಂದಸ್ಸಂಪುಟ"ದಲ್ಲಿ, ಸೇಡಿಯಾಪು ಅವರ ಇನ್ನೊಂದು ಮೌಲಿಕ ಕೃತಿ "ಛಂದೋಗತಿ"ಯೊಂದಿಗೆ ಸಂಪಾದಿಸಿದ್ದಾರೆ), ಅಂಶಗಣಗಳ ಈ ವಿನ್ಯಾಸವನ್ನು ವಿಶ್ಲೇಷಿಸುತ್ತಾ, ಇಲ್ಲಿರುವ ಮುಖ್ಯ ಲಕ್ಷಣ, ಗಣದ ಆದಿಯಲ್ಲಿ ಲಗಂ ಗತಿ (ಅಂದರೆ ಒಂದು ಲಘುವಾದ ಮೇಲೆ ಒಂದು ಗುರು) ಕಾಣಿಸದಿರುವುದೇ ಆಗಿದೆ, ಅಂಶಗಣಗಳ ಆದಿಯಲ್ಲಿ ಒಂದು ಗುರು ಅಥವಾ ಎರಡು ಲಘುವೇ ಬರಬೇಕು ಎಂಬ ನಿಯಮ, ನಿಜವಾಗಿ ಅಂಶಗಣಗಳ ಆದಿಯಲ್ಲಿ ಒಂದು ಲಘುವಾದ ಮೇಲೆ ಗುರು ಬರಬಾರದು ಎನ್ನುವ ನಿಯಮವೇ ಆಗಿದೆ ಎಂದಿದ್ದಾರೆ.
ಸೇಡಿಯಾಪು ಛಂದಸ್ಸಂಪುಟ, ಪುಟ ೨೯೭
ಈ ಗಣಗಳೊಳಗೆ ಯಾವುದೊಂದು ಗಣದ ಆದಿಯಲ್ಲಿಯೂ ಒಂಟಿ ಲಘು ಇರುವುದಿಲ್ಲ! ಇದಕ್ಕೆ ಕಾರಣವೇನೆಂದರೆ, ಆ ಲಘುಯುಗ್ಮಗಳು ಆಯಾ ವರ್ಗದ ಪ್ರಥಮಗಣದ ಆದ್ಯಕ್ಷರವಾದ ಗುರುವಿನ ಪ್ರತಿರೂಪಗಳಾಗಿ ಅಲ್ಲಿ ಬಂದವುಗಳಾಗಿವೆ. ಮುಂದೆ ಬರುವ ಪ್ರತಿಯೊಂದು ಲಘುವೂ ಪ್ರಥಮಗಣದ ಇತರ ಒಂದೊಂದು ಗುರುವಿನ ಪ್ರತಿರೂಪವಾಗಿರುತ್ತದೆ; ಈ ಕಾರಣದಿಂದ ಇವು ಮಾತ್ರ ಪಠನದಲ್ಲಿ ಗುರೂಚ್ಚಾರವನ್ನು ಪಡೆಯತಕ್ಕವುಗಳಾಗಿವೆ; ಗಣಾದಿಯ ಲಘುಯುಗ್ಮವು ಒಂದು ಗುರ್ವಕ್ಷರದ ಪ್ರತಿರೂಪವಾಗಿರುವ ಕಾರಣ, ಆ ಯುಗ್ಮದ ಲಘುಗಳು ಗುರೂಚ್ಚಾರಕ್ಕೆ ಅನರ್ಹವಾದವುಗಳಾಗಿರುತ್ತವೆ. ಇದೇ ಈ ಗಣವ್ಯವಸ್ಥೆಯ ವೈಶಿಷ್ಟ್ಯ. ಈ ರಹಸ್ಯವನ್ನರಿತರೆ - ಈ ಗಣಗಳಿಂದ ಘಟಿತವಾಗಿರುವ ಪಿರಿಯಕ್ಕರ ಮೊದಲಾದ ಆ "ಜಾತಿ"ಗಳನ್ನೋದುವ ಕೆಲಸವು ಸುಸೂತ್ರವಾಗಿ ಕೈಗೂಡುತ್ತದೆ; ಮತ್ತು ಹಾಡಿನ ಪ್ರತಿಯೊಂದು ತಾಳಖಂಡದ ಆದಿಯಲ್ಲಿಯೂ ಲಗೋಚ್ಚಾರ(ಲಗಂ)ವನ್ನು ನಿಷೇಧಿಸುವುದಕ್ಕಾಗಿಯೇ, ಒಂದಿಷ್ಟು ವಿಚಿತ್ರವಾಗಿ ಕಾಣುವಂತಹ, ಈ ಗಣವರ್ಗದ ನಿರ್ಮಾಣವಾಯಿತೆಂಬುದೂ ಗೊತ್ತಾಗುತ್ತದೆ.
ಅಂಶಗಣಗಳ ಎಲ್ಲ ಸಾಧ್ಯ ಗುರುಲಘುವಿನ್ಯಾಸಗಳನ್ನು ಗಮನಿಸಿದರೆ, ಅವುಗಳಲ್ಲಿ ಎಲ್ಲೂ ಆದಿಯಲ್ಲಿ ಲಗಂ ಗತಿ ಕಾಣಿಸುವುದಿಲ್ಲವೆನ್ನುವುದನ್ನು ಓದುಗರು ಪರೀಕ್ಷಿಸಿ ನೋಡಬಹುದು. ಅಂಶಗಣಗಳ ಆದಿಯನಂತರ ಮಾತ್ರ ಲಗಂ ಗತಿ ಬರಬಹುದೆನ್ನುವುದನ್ನು ಜಾಹ್ನವೀ (ಗಂಲಗಂ), ಜನಕಜಾ (ಲಲಲಗಂ) ಇತ್ಯಾದಿ ಉದಾಹರಣೆಗಳಲ್ಲಿ ಕಾಣಬಹುದು.
ಹಾಗೆಯೇ, ಎರಡೇ ಅಕ್ಷರವಿರುವ ಗಣಗಳಲ್ಲಿ ಮೊದಲ ಅಕ್ಷರ ಗುರುವಾಗಿರಲೇಬೇಕೆನ್ನುವುದನ್ನೂ ನೋಡಬಹುದು. ಉದಾಹರಣೆಗೆ, ಬಾಳು, ತೆಂಕು ಇತ್ಯಾದಿ. ಎರಡು ಲಘುವೇ ಇದ್ದರೂ ಅದು ಅಂಶಗಣವಾಗುವುದಿಲ್ಲ. ಉದಾಹರಣೆಗೆ, ನಡೆ, ಹರಿ ಇವೆಲ್ಲ ಅಂಶಗಣಗಳಲ್ಲ.
ಇದನ್ನು ಮುಂದೆ ವಿವೇಚಿಸುತ್ತಾ, ಸೇಡಿಯಾಪು ಅವರು, ಗಣಾದಿಯಲ್ಲಿ ಲಗಂ ಗತಿಯನ್ನು ತಿರಸ್ಕರಿಸುವುದು, ಕನ್ನಡದ್ದಷ್ಟೇ ಅಲ್ಲ, ಇತರ ದ್ರಾವಿಡಭಾಷೆಗಳಿಗೂ ಸಾಮಾನ್ಯವಾದ ಸ್ವಭಾವ ಎನ್ನುತ್ತಾರೆ. ಇದು ಸರಿಯೇ ಇರಬೇಕೆನಿಸುತ್ತದೆ. ಏಕೆಂದರೆ, ಕನ್ನಡದಲ್ಲಿ ಬಳಕೆಯಾಗುವ ಅಕ್ಷರವೃತ್ತ, ಮಾತ್ರಾಜಾತಿಗಳ ಛಂದಸ್ಸುಗಳಲ್ಲೂ ಜಗಣ (ಲಗಂಲ) ಕಾಣಿಸುವುದು ವಿರಳ ಅಥವಾ ಕಾಣಿಸಿಕೊಂಡರೆ ಅಲ್ಲಿ ಕವಿಗಳು ಗಣವಿನ್ಯಾಸದ ಕಡೆಗೆ ಹೆಚ್ಚು ಗಮನವಹಿಸದೆ ಲಗಂ ಗತಿ ಗಣಾದಿಯಲ್ಲಿ ಕಂಡರೆ, ಕನ್ನಡದ ಕಿವಿಗೆ, ಕೇಳಲು ಹಿತವೆನಿಸುವುದಿಲ್ಲ.
ಹಾಗೆಂದು, ಈ ಸ್ವಭಾವ ಎಲ್ಲ ಭಾಷೆಗಳಲ್ಲೂ ಕಾಣುವುದಿಲ್ಲ. ಉದಾಹರಣೆಗೆ, ಇಂಗ್ಲಿಷಿನಲ್ಲಿ ಪ್ರಸಿದ್ಧವಾದ ಛಂದಸ್ಸು iambic pentameter ಬಳಸುವ iambic ಗಣವಿನ್ಯಾಸ, da-dum (ಅಂದರೆ, ಲಗಂ) ಎಂದೇ ಇದೆ. ಇಂಗ್ಲಿಷಲ್ಲಿ ಈ iambic ಗಣವಿನ್ಯಾಸವಿರುವ ಹಲವು ಛಂದಸ್ಸುಗಳಿರುವುದನ್ನು ನೋಡಬಹುದು. ಸಂಸ್ಕೃತದಲ್ಲೂ, ಜಗಣ(ಲಗಂಲ), ಯಗಣ(ಲಗಂಗಂ)ಗಳಿಂದಲೇ ಆರಂಭಗೊಳ್ಳುವ ಅಕ್ಷರವೃತ್ತಗಳಿರುವುದನ್ನು ನೋಡಬಹುದು. ಹೀಗಾಗಿ, ಕನ್ನಡ ಮತ್ತಿತರ ದ್ರಾವಿಡಭಾಷೆಗಳಲ್ಲಿ ಲಗಂ ಗತಿ (ಅಥವಾ ಜಗಣ) ಕಾಣಿಸದಿರುವುದು ಈ ಭಾಷೆಗಳಿಗೇ ವಿಶೇಷವಾಗಿರುವ ಸ್ವಭಾವವೆನ್ನುವುದು ಸ್ಪಷ್ಟವಾಗುತ್ತದೆ.
ಸೇಡಿಯಾಪು ಅವರು, ಈ ಲಗಂ ಗತಿಯನ್ನು, ಪದ, ಗಣಗಳ ಆದಿಯಲ್ಲಿ, ತಿರಸ್ಕರಿಸುವ ಕನ್ನಡದ ಸ್ವಭಾವವನ್ನು, ಅಂಶಗಣಗಳ ಸ್ವರೂಪದ ಹಿಂದಿನ ಕಾರಣವನ್ನು ವಿಶ್ಲೇಷಿಸುವಲ್ಲಿ ಮಾತ್ರ ಆರೋಪಿಸಿದ್ದಾರೆ. ಆದರೆ, ಕನ್ನಡ ಮತ್ತಿತರ ದ್ರಾವಿಡಭಾಷೆಗಳ ಈ ಸ್ವಭಾವದ ವ್ಯಾಪ್ತಿ, ಕೇವಲ ಛಂದೋಲೋಕಕ್ಕೆ ಸೀಮಿತವಾಗಿಲ್ಲ. ಕನ್ನಡದಲ್ಲಿ ಅದು ವ್ಯಾಕರಣ ಪ್ರಕ್ರಿಯೆಗಳನ್ನೂ, ಪದರೂಪಗಳನ್ನೂ ಕೆಲವು ವಿಶೇಷವಾದ ರೀತಿಯಲ್ಲಿ ರೂಪಿಸಿದೆ ಅನಿಸುತ್ತದೆ. ಇದಕ್ಕೆ, ಸ್ವತಂತ್ರವಾಗಿದ್ದು, ಒಂದಕ್ಕೊಂದು ಸಂಬಂಧಿಸದಂತಿರುವ, ದ್ವಿತ್ವಸಂಧಿ ಹಾಗೂ ಕನ್ನಡದ ವಿಭಕ್ತಿರೂಪಗಳಲ್ಲಿ ಕೆಲವೆಡೆ ಕಾಣುವ ವಕಾರಾಮಗಳನ್ನು ನೋಡೋಣ.
ದ್ವಿತ್ವಸಂಧಿ
ಕೇಶಿರಾಜ, ತನ್ನ ಶಬ್ದಮಣಿದರ್ಪಣದ ಸೂತ್ರ ೭೯, ೮೦, ೮೧ರಲ್ಲಿ, ಕನ್ನಡದಲ್ಲಿ ನಡೆಯುವ ದ್ವಿತ್ವಸಂಧಿಯನ್ನು ನಿರೂಪಿಸಿದ್ದಾನೆ. ಇದರ ಮುಖ್ಯಲಕ್ಷಣವೇನೆಂದರೆ, ವ್ಯಂಜನಾಂತ ಶಬ್ದಕ್ಕೆ, ಸ್ವರವು ಪರವಾದಾಗ, ಪೂರ್ವಪದದ ಅಂತ್ಯವ್ಯಂಜನದ ಹಿಂದೆ ಒಂದೇ ಲಘುವಿದ್ದರೆ ಆ ಅಂತ್ಯವ್ಯಂಜನವು ದ್ವಿತ್ವವಾಗುವುದು. ಪೂರ್ವಪದದ ಅಂತ್ಯವ್ಯಂಜನದ ಹಿಂದೆ ಒಂದೇ ಗುರು ಅಥವಾ ಅನೇಕಾಕ್ಷರಗಳಿದ್ದರೆ, ಆ ಅಂತ್ಯವ್ಯಂಜನವು ದ್ವಿತ್ವವಾಗುವುದಿಲ್ಲ. ಉದಾಹರಣೆಗೆ,
ಒಂದೇ ಗುರುವಿದ್ದಾಗ ದ್ವಿತ್ವವಾಗದಿರುವುದಕ್ಕೆ,
- ಕಾಲ್ + ಉ => ಕಾಲು
- ಮೀನ್ + ಅಂ => ಮೀನಂ
ಅನೇಕಾಕ್ಷರಗಳಿದ್ದಾಗ ದ್ವಿತ್ವವಾಗದಿರುವುದಕ್ಕೆ,
- ಬೆರಲ್ + ಉ => ಬೆರಲು
- ತೊಡರ್ + ಇ => ತೊಡರಿ
ಒಂದೇ ಲಘುವಿದ್ದಾಗ ದ್ವಿತ್ವವಾಗುವುದಕ್ಕೆ,
- ಅಲ್ + ಇ => ಅಲ್ಲಿ
- ಬೆನ್ + ಉ => ಬೆನ್ನು
- ಹೊನ್ + ಅ => ಹೊನ್ನ
- ಹೆಣ್ + ಇನ್ + ಅ => ಹೆಣ್ಣಿನ
- ಮಣ್ + ಒಳಗೆ => ಮಣ್ಣೊಳಗೆ
- ಕಣ್ + ಇಂದ => ಕಣ್ಣಿಂದ
- ತನ್ + ಅಷ್ಟಕ್ಕೆ => ತನ್ನಷ್ಟಕ್ಕೆ
ಹೀಗೆ, ಆದಿಯಲ್ಲಿ ಒಂದೇ ಲಘುವಿರುವಾಗ, ಅಂತ್ಯವ್ಯಂಜನವು ದ್ವಿತ್ವವಾದಾಗ, ಆದಿಯ ಲಘುವು, ಗುರುವಾಗಿ ಪರಿವರ್ತಿತವಾಗುತ್ತದೆ (ಸಂಯುಕ್ತ/ಒತ್ತಕ್ಷರಗಳ ಹಿಂದಿನ ಲಘುವು ಗುರುವಾಗುತ್ತದೆಂಬುದನ್ನು ಗಮನಿಸಬೇಕು). ಹೀಗೆ, ಆದಿಯಲ್ಲಿ ಲಗಂ ಗತಿಯುಂಟಾಗುವ ಸಾಧ್ಯತೆಯೇ ಇಲ್ಲವಾಗುತ್ತದೆ.
ಇದನ್ನು ಸ್ಪಷ್ಟಪಡಿಸಿಕೊಳ್ಳಲು, ಆದಿಯಲ್ಲಿ ಒಂದೇ ಲಘುವಿದ್ದಾಗ ದ್ವಿತ್ವವಾಗದಿದ್ದರೆ, ಹೇಗೆ ಆದಿಯಲ್ಲಿ ಲಗಂ ಗತಿಯುಂಟಾಗಬಹುದೆಂದು ನೋಡೋಣ.
- ಕಣ್ + ಇಂದ => ಕಣಿಂದ - ಲಗಂಲ
- ತನ್ + ಅಷ್ಟಕ್ಕೆ => ತನಷ್ಟಕ್ಕೆ - ಲಗಂಗಂಲ
ಆದಿಯಲ್ಲಿ ಲಗಂ ಗತಿಯಿರುವುದರಿಂದ, ಈ ರೂಪಗಳು ಕನ್ನಡದಲ್ಲಿ ಕಾಣಿಸುವುದಿಲ್ಲ.
ಆದರೆ, ಇದು ಕೇವಲ ಸಾಧ್ಯತೆ ಮಾತ್ರವೆನ್ನುವುದನ್ನು ಗಮನಿಸಬೇಕು. ಕೆಲವೊಮ್ಮೆ, ದ್ವಿತ್ವವಾಗದಿದ್ದರೂ ಲಗಂ ಗತಿ ಸಿದ್ಧಿಸದೆ ಇರಬಹುದು. ಹಾಗಾದಾಗ ಕೆಲವೊಮ್ಮೆ ಎರಡು ಲಘುಗಳು ಮಾತ್ರ ಉಂಟಾಗಿ, ಅಂಶಗಣಗಳ ವಿನ್ಯಾಸ ಸಿದ್ಧಿಸದೆ ಇರಬಹುದು (ಕೇವಲ ಎರಡು ಲಘುಗಳು ಅಂಶಗಣಗಳಾಗುವುದಿಲ್ಲವೆಂಬ ಲಕ್ಷಣವನ್ನು ನೆನೆಯಬಹುದು). ಉದಾಹರಣೆಗೆ,
- ಅಲ್ + ಇ => ಅಲಿ - ಲಲ
- ಬೆನ್ + ಉ => ಬೆನು - ಲಲ
- ಹೊನ್ + ಅ => ಹೊನ - ಲಲ
ಈ ರೂಪಗಳೂ ಅಂಶಗಣವಿನ್ಯಾಸಕ್ಕೆ ಸೇರುವುದಿಲ್ಲವೆನ್ನುವುದನ್ನು ಗಮನಿಸಬೇಕು. ಹಾಗಾಗಿ, ಇವು ಕನ್ನಡದಲ್ಲಿ ಕಾಣಿಸುವುದಿಲ್ಲ.
ಆದರೆ, ಇದೂ ಕೇವಲ ಸಾಧ್ಯತೆ ಮಾತ್ರವೆನ್ನುವುದನ್ನೂ ಮತ್ತೆ ಗಮನಿಸಬೇಕು. ಕೆಲವೊಮ್ಮೆ, ದ್ವಿತ್ವವಾಗದೆಯೂ ಅಂಶಗಣಸಮ್ಮತವಾದ ಲಘುಗುರುವಿನ್ಯಾಸಗಳಾಗುವುದಿದೆ. ಉದಾಹರಣೆಗೆ,
- ಬೆನ್ + ಅನು => ಬೆನನು - ಲಲಲ
- ಹೊನ್ + ಅಲಿ => ಹೊನಲಿ - ಲಲಲ
- ಹೆಣ್ + ಇನ್ + ಅ => ಹೆಣಿನ - ಲಲಲ
ಆದರೆ, ಈ ರೂಪಗಳು ಕನ್ನಡದಲ್ಲೆಲ್ಲೂ ಕಾಣುವುದಿಲ್ಲ, ಅನು, ಅಲಿ ಇತ್ಯಾದಿ ಪ್ರತ್ಯಯರೂಪಗಳು ಹೆಚ್ಚಾಗಿ ಆದಿಯಲ್ಲಿ ಅನೇಕಾಕ್ಷರಗಳಿದ್ದಾಗ ಮಾತ್ರ ಸಿದ್ಧಿಸುತ್ತವೆ. ಉದಾಹರಣೆಗೆ, ಮರವನು, ರಾಮನಲಿ ಇತ್ಯಾದಿ.
ಇದಕ್ಕೆ ಕಾರಣ, ಅನು, ಅಲಿ ಪ್ರತ್ಯಯಗಳ ಹಾಗೂ ಇನ್ ಇತ್ಯಾದಿ ತುಣುಕುಗಳ ಮೂಲರೂಪಗಳು ಕ್ರಮವಾಗಿ ಅಂ (ಅಁ), ಅಲ್, ಇಂ (ಇಁ) ಎಂಬುದೇ ಆಗಿದೆ. ಹಾಗಾಗಿ, ಈ ಉದಾಹರಣೆಗಳ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅಲ್ಲಿ ಲಗಂ ಗತಿ ಒಮ್ಮೆ ಕಾಣಿಸಿ ಆಮೇಲೆ ಮರೆಯಾಗುವುದನ್ನು ಕಾಣಬಹುದು. ಉದಾಹರಣೆಗೆ,
- ಬೆನ್ + ಅಂ + ಉ => ಬೆನಂ (ಲಗಂ) + ಉ => ಬೆನನು (ಲಲಲ)
- ಹೊನ್ + ಅಲ್ + ಇ => ಹೊನಲ್ (ಲಗಂ) + ಇ => ಹೊನಲಿ (ಲಲಲ)
- ಹೆಣ್ + ಇನ್ + ಅ => ಹೆಣಿನ್ (ಲಗಂ) + ಅ => ಹೆಣಿನ (ಲಲಲ)
ಹೀಗೆ, ಪ್ರಕ್ರಿಯೆಗಳಲ್ಲಿ ಮಧ್ಯವರ್ತಿಯಾಗಿ ಕಾಣಬಹುದಾದ ಲಗಂ ರೂಪಗಳನ್ನೂ ಕನ್ನಡಭಾಷೆಯು ಸಹಿಸುವುದಿಲ್ಲ.
ಸೂಚನೆ
ಇನಾಗಮದ ಹಿಂದಿರುವ ಪ್ರಕ್ರಿಯೆಯನ್ನು ಅನುಸ್ವಾರದ ಅನುಸಾರದಲ್ಲಿ ನೋಡಬಹುದು.
ವಿಭಕ್ತಿರೂಪಗಳಲ್ಲಿ ಕೆಲವೊಮ್ಮೆ ಕಾಣುವ ವಕಾರ
ವ್ಯಂಜನಾಂತ, ಉಕಾರಾಂತಶಬ್ದಗಳ ವಿಭಕ್ತಿರೂಪಗಳಲ್ಲಿ ಕೆಲವೆಡೆ ವಕಾರಾಗಮವಾಗುತ್ತದೆ, ಇನ್ನು ಕೆಲವೆಡೆ ಆಗುವುದಿಲ್ಲ. ಇಲ್ಲೂ ಸೂಕ್ಷ್ಮವಾಗಿ ನೋಡಿದರೆ, ಅಂತ್ಯಾಕ್ಷರದ ಮೊದಲು ಕೇವಲ ಒಂದೇ ಲಘುವಿದ್ದಾಗ ಮಾತ್ರ ವಕಾರಾಗಮವಾಗುತ್ತದೆ. ಆದಿಯಲ್ಲಿ ಒಂದು ಗುರು ಅಥವಾ ಅನೇಕಾಕ್ಷರಗಳಿದ್ದರೆ ವಕಾರಾಗಮವಾಗುವುದಿಲ್ಲ (ಶಬ್ದವು ಉಕಾರಾಂತವಾಗಿದ್ದರೆ ಅಲ್ಲಿ ಲೋಪಸಂಧಿಯೇ ಆಗುತ್ತದೆ). ಉದಾಹರಣೆಗೆ,
ಒಂದೇ ಗುರುವಿದ್ದಾಗ ವಕಾರಾಗಮವಾಗದಿರುವುದಕ್ಕೆ,
- ಮೂಡು + ಅಣ್ + ಇಂ => ಮೂಡಣಿಂ
- ಕಾಡು + ಇನ್ + ಅ => ಕಾಡಿನ
- ಕಾಲ್ + ಅನ್ನು => ಕಾಲನ್ನು
ಅನೇಕಾಕ್ಷರಗಳಿದ್ದಾಗ ವಕಾರಾಗಮವಾಗದಿರುವುದಕ್ಕೆ,
- ಬಡಗು + ಅಣ್ + ಅ => ಬಡಗಣ
- ಮರಳು + ಇನ್ + ಅ => ಮರಳಿನ
- ಹಡಗು + ಅನ್ನು => ಹಡಗನ್ನು
ಒಂದೇ ಲಘುವಿದ್ದಾಗ ವಕಾರಾಗಮವಾಗುವುದಕ್ಕೆ,
- ನಡು + ಅ => ನಡುವ
- ಪಡು + ಅಣ್ + ಇಂ => ಪಡುವಣಿಂ
- ಹಸು + ಇನ್ + ಅ => ಹಸುವಿನ
- ಕರು + ಅನ್ನು => ಕರುವನ್ನು
ಅಣಾಗಮದ ಹಿಂದಿರುವ ಪ್ರಕ್ರಿಯೆಯನ್ನು ಅನುಸ್ವಾರದ ಅನುಸಾರದಲ್ಲಿ ನೋಡಬಹುದು.
ಹೀಗೆ, ಒಂದೇ ಲಘುವಿರುವಾಗ, ವಾಕಾರಾಗಮವಾದರೆ, ಆದಿಯ ಒಂದೇ ಲಘುವು, ಎರಡು ಲಘುಗಳಾಗಿ ಪರಿವರ್ತಿತವಾಗುತ್ತದೆ. ಹೀಗೆ, ಆದಿಯಲ್ಲಿ ಲಗಂ ಗತಿಯುಂಟಾಗುವ ಸಾಧ್ಯತೆಯೇ ಇಲ್ಲವಾಗುತ್ತದೆ.
ಇದನ್ನು ಸ್ಪಷ್ಟಪಡಿಸಿಕೊಳ್ಳಲು, ಅದಿಯಲ್ಲಿ ಒಂದೇ ಲಘುವಿದ್ದಾಗ ವಕಾರಾಗಮವಾಗದಿದ್ದರೆ, ಹೇಗೆ ಆದಿಯಲ್ಲಿ ಲಗಂ ಗತಿಯುಂಟಾಗಬಹುದೆಂದು ನೋಡೋಣ (ಇಲ್ಲಿ ಶಬ್ದಗಳು ಉಕಾರಾಂತಗಳಾದುದರಿಂದ, ವಕಾರಾಗಮವಾಗದಿದ್ದರೆ ಲೋಪಸಂಧಿಯೇ ಸಿದ್ಧಿಸುತ್ತದೆ).
- ಪಡು + ಅಲ್ಲಿ => ಪಡಲ್ಲಿ - ಲಗಂಲ
- ಹಸು + ಇಂದ => ಹಸಿಂದ - ಲಗಂಲ
- ಕರು + ಅನ್ನು => ಕರನ್ನು - ಲಗಂಲ
ಆದಿಯಲ್ಲಿ ಲಗಂ ಗತಿಯಿರುವುದರಿಂದ, ಈ ರೂಪಗಳು ಕನ್ನಡದಲ್ಲಿ ಕಾಣಿಸುವುದಿಲ್ಲ.
ಆದರೆ, ಇದು ಕೇವಲ ಸಾಧ್ಯತೆ ಮಾತ್ರವೆನ್ನುವುದನ್ನು ಗಮನಿಸಬೇಕು. ಕೆಲವೊಮ್ಮೆ, ವಕಾರಾಗಮವಾಗದಿದ್ದರೂ ಲಗಂ ಗತಿ ಸಿದ್ಧಿಸದೆ ಇರಬಹುದು. ಹಾಗಾದಾಗ ಕೆಲವೊಮ್ಮೆ ಎರಡು ಲಘುಗಳು ಮಾತ್ರ ಉಂಟಾಗಿ, ಅಂಶಗಣಗಳ ವಿನ್ಯಾಸ ಸಿದ್ಧಿಸದೆ ಇರಬಹುದು (ಕೇವಲ ಎರಡು ಲಘುಗಳು ಅಂಶಗಣಗಳಾಗುವುದಿಲ್ಲವೆಂಬ ಲಕ್ಷಣವನ್ನು ನೆನೆಯಬಹುದು). ಉದಾಹರಣೆಗೆ,
- ನಡು + ಅ => ನಡ - ಲಲ
- ಕರು + ಅ => ಕರ - ಲಲ
ಈ ರೂಪಗಳೂ ಅಂಶಗಣವಿನ್ಯಾಸಕ್ಕೆ ಸೇರುವುದಿಲ್ಲವೆನ್ನುವುದನ್ನು ಗಮನಿಸಬೇಕು. ಹಾಗಾಗಿ, ಇವು ಕನ್ನಡದಲ್ಲಿ ಕಾಣಿಸುವುದಿಲ್ಲ.
ಆದರೆ, ಇದೂ ಕೇವಲ ಸಾಧ್ಯತೆ ಮಾತ್ರವೆನ್ನುವುದನ್ನೂ ಮತ್ತೆ ಗಮನಿಸಬೇಕು. ಕೆಲವೊಮ್ಮೆ, ವಕಾರಾಗಮವಾಗದೆಯೂ ಅಂಶಗಣಸಮ್ಮತವಾದ ಲಘುಗುರುವಿನ್ಯಾಸಗಳಾಗುವುದಿದೆ. ಉದಾಹರಣೆಗೆ,
- ಕರು + ಅನು => ಕರನು - ಲಲಲ
- ಪಡು + ಅಲಿ => ಪಡಲಿ - ಲಲಲ
- ನಡು + ಅಣ್ + ಅ => ನಡಣ - ಲಲಲ
- ಹಸು + ಇನ್ + ಅ => ಹಸಿನ - ಲಲಲ
ಆದರೆ, ಈ ರೂಪಗಳು ಕನ್ನಡದಲ್ಲೆಲ್ಲೂ ಕಾಣುವುದಿಲ್ಲ. ಇದಕ್ಕೆ ಕಾರಣ, ಅನು, ಅಲಿ ಪ್ರತ್ಯಯಗಳ ಹಾಗೂ ಅಣ್, ಇನ್ ತುಣುಕುಗಳ ಮೂಲರೂಪಗಳು ಕ್ರಮವಾಗಿ ಅಂ (ಅಁ), ಅಲ್, ಅಂ (ಅಁ) , ಇಂ (ಇಁ) ಎಂಬುದೇ ಆಗಿದೆ. ಹಾಗಾಗಿ, ಈ ಉದಾಹರಣೆಗಳ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಲಗಂ ಗತಿ ಒಮ್ಮೆ ಕಾಣಿಸಿ ಆಮೇಲೆ ಮರೆಯಾಗುವುದನ್ನು ಕಾಣಬಹುದು. ಉದಾಹರಣೆಗೆ,
- ಕರು + ಅಂ + ಉ => ಕರಂ (ಲಗಂ) + ಉ => ಕರನು (ಲಲಲ)
- ಪಡು + ಅಲ್ + ಇ => ಪಡಲ್ (ಲಗಂ) + ಇ => ಪಡಲಿ (ಲಲಲ)
- ನಡು + ಅಣ್ + ಅ => ನಡಣ್ (ಲಗಂ)+ ಅ => ನಡಣ (ಲಲಲ)
- ಹಸು + ಇನ್ + ಅ => ಹಸಿನ್ (ಲಗಂ) + ಅ => ಹಸಿನ (ಲಲಲ)
ಮೇಲೆ ದ್ವಿತ್ವಸಂಧಿಯಲ್ಲಿ ನೋಡಿದಂತೆ, ಪ್ರಕ್ರಿಯೆಗಳಲ್ಲಿ ಮಧ್ಯವರ್ತಿಯಾಗಿ ಕಾಣಬಹುದಾದ ಲಗಂ ರೂಪಗಳನ್ನೂ ಕನ್ನಡಭಾಷೆಯು ಸಹಿಸುವುದಿಲ್ಲ.
ಕ್ರಿಯಾಪದಗಳಲ್ಲಿ ಕಾಣುವ ಲಗಂ ಗತಿ
ಮೇಲೆ, ಲಗಂ ಗತಿಯನ್ನು ತಿರಸ್ಕರಿಸುವ ಕನ್ನಡದ ಸ್ವಭಾವವನ್ನು ಪ್ರತಿಪಾದಿಸಿರುವಾಗ, ಕನ್ನಡದ ಕ್ರಿಯಾಪದಗಳಲ್ಲಿ ಕೆಲವೊಮ್ಮೆ ಲಗಂ ಗತಿ ಕಾಣಿಸುವುದನ್ನು ಗಮನಿಸಲೇ ಬೇಕು. ಉದಾಹರಣೆಗೆ,
- ಕಲಂಕು - ಲಗಂಲ
- ತುಳುಂಕು - ಲಗಂಲ
- ಮುಸುಂಕು - ಲಗಂಲ
- ಅಡಂಗು - ಲಗಂಲ
- ಉರುಳ್ಚು - ಲಗಂಲ
- ಕೆರಳ್ಚು - ಲಗಂಲ
- ಬೆಮರ್ಚು - ಲಗಂಲ
- ಮುರುಂಟು - ಲಗಂಲ
- ಕೆರಳ್ದ - ಲಗಂಲ
- ಬೆಮರ್ದ - ಲಗಂಲ
- ಕಱುಂಬು - ಲಗಂಲ
ಇಲ್ಲಿರುವ ಉದಾಹರಣೆಗಳನ್ನು, ಕೇಶಿರಾಜನ ಶಬ್ದಮಣಿದರ್ಪಣದ ಧಾತುಪ್ರಕರಣದಿಂದ ಆಯ್ದುಕೊಂಡಿದ್ದೇನೆ.
ಹೀಗೆ, ಕ್ರಿಯಾಪದಗಳಲ್ಲಿ ಕಾಣುವ ಲಗಂ ಗತಿಗೆ ಎರಡು ರೀತಿಯ ಸಮಾಧಾನವನ್ನು ಕೊಡಬಹುದೆನಿಸುತ್ತದೆ.
ಒಂದು, ಈ ಎಲ್ಲಾ ಲಗಂ ಗತಿಯ ಉದಾಹರಣೆಗಳು ಹಳಗನ್ನಡದವು. ಹೊಸಗನ್ನಡದಲ್ಲಿ (ನಡುಗನ್ನಡದಲ್ಲೂ?) ಅವು ಲಗಂ ಗತಿಯಿಲ್ಲದಂತೆ ರೂಪಾಂತರಗೊಂಡಿವೆ. ಉದಾಹರಣೆಗೆ,
- ಕಲಂಕು (ಲಗಂಲ) => ಕಲಕು (ಲಲಲ)
- ತುಳುಂಕು (ಲಗಂಲ) => ತುಳುಕು (ಲಲಲ)
- ಮುಸುಂಕು (ಲಗಂಲ) => ಮುಸುಕು (ಲಲಲ)
- ಅಡಂಗು (ಲಗಂಲ) => ಅಡಗು (ಲಲಲ)
- ಉರುಳ್ಚು (ಲಗಂಲ) => ಉರುಳಿಸು (ಲಲಲಲ)
- ಕೆರಳ್ಚು (ಲಗಂಲ) => ಕೆರಳಿಸು (ಲಲಲಲ)
- ಬೆಮರ್ಚು (ಲಗಂಲ) => ಬೆವರಿಸು (ಲಲಲಲ)
- ಮುರುಂಟು (ಲಗಂಲ) => ಮುರುಟು (ಲಲಲ)
- ಕೆರಳ್ದ (ಲಗಂಲ) => ಕೆರಳಿದ (ಲಲಲಲ)
- ಬೆಮರ್ದ (ಲಗಂಲ) => ಬೆವರಿದ (ಲಲಲಲ)
- ಕಱುಂಬು (ಲಗಂಲ) => ಕರುಬು (ಲಲಲ)
ಹೀಗೆ, ಹಳಗನ್ನಡದ ಕ್ರಿಯಾಪದಗಳಲ್ಲಿ ಕಾಣುವ ಲಗಂ ಗತಿಯನ್ನೂ ತಪ್ಪಿಸುವಂತೆ ರೂಪಾಂತರಿಸಿ, ಹೊಸಗನ್ನಡ (ನಡುಗನ್ನಡವೂ?), ಈ ಮೂಲಸ್ವಭಾವದ ವ್ಯಾಪ್ತಿಯನ್ನು ಇನ್ನೂ ವಿಸ್ತರಿಸಿದೆ ಎನ್ನಬಹುದೇನೋ. ಇಲ್ಲಿ ಕಾಣುವ, ಹಳಗನ್ನಡದ ಸಾನುಸ್ವಾರಕ್ರಿಯಾಪದಗಳು, ಹೊಸಗನ್ನಡದಲ್ಲಿ ಅನುಸ್ವಾರವನ್ನು ಕಳೆದುಕೊಂಡಿರುವುದರ ಹಿಂದಿನ ಅನುಸ್ವಾರಲೋಪದ ಪ್ರಕ್ರಿಯೆಯ ವ್ಯಾಪ್ತಿಯನ್ನು "ಅನುಸ್ವಾರದ ಅನುಸಾರ"ದಲ್ಲಿ ನೋಡಬಹುದು. ಅಲ್ಲಿ ಪ್ರತಿಪಾದಿಸಿದ ಅನುಸ್ವಾರಲೋಪದ ಪ್ರಕ್ರಿಯೆಗೆ , ಕ್ರಿಯಾಪದಗಳ ಸಂದರ್ಭದಲ್ಲಿ, ಲಗಂ ಗತಿಯನ್ನು ತಪ್ಪಿಸುವ ಉದ್ದೇಶವು, ಪ್ರೇರಣೆಯನ್ನು ನೀಡಿದೆಯೆಂದು ಹೇಳಬಹುದೇನೋ.
ಎರಡು, ಕ್ರಿಯಾಪದಗಳು ವಾಕ್ಯದ ಆದಿಯಲ್ಲಿ ಕಾಣಿಸುವುದು ವಿರಳ. ಆದರೆ, ಲಗಂ ಗತಿಯು ಕಾಣದಿರಬೇಕಾದುದು ಅಂಶಗಣಗಳ ಆದಿಯಲ್ಲಿ; ವಾಕ್ಯದ ಆದಿಯಲ್ಲಿ ಮಾತ್ರವಲ್ಲ. ಒಂದು ವಾಕ್ಯದಲ್ಲಿ ಅನೇಕ ಅಂಶಗಣಗಳು ಬರುತ್ತವೆ. ಹೀಗಿರುವಾಗ, ವಾಕ್ಯದಲ್ಲಿ ಮುಂದೆ ಬರಬಹುದಾದ ಕ್ರಿಯಾಪದಗಳಲ್ಲಿರಬಹುದಾದ ಲಗಂ ಗತಿಗಳನ್ನು, ಸರಿಯಾದ ಗಣವಿನ್ಯಾಸದಿಂದ ಅಂಶಗಣಗಳ ಆದಿಯಲ್ಲಿ ಬರದಂತೆ ನೋಡಿಕೊಳ್ಳುವುದು ಕಷ್ಟವಲ್ಲ. ಆದರೆ, ವಾಕ್ಯದ ಆದಿಯಲ್ಲಿ ಹೆಚ್ಚಾಗಿ ಕಾಣಿಸುವ ನಾಮಪದ, ಸರ್ವನಾಮಗಳ ವಿಭಕ್ತಿರೂಪಗಳಲ್ಲಿ ಲಗಂ ಗತಿ ಕಾಣಿಸಿಕೊಂಡರೆ, ವಾಕ್ಯದ ಆದಿಯಲ್ಲಿರುವ ಗಣದಲ್ಲಿ ಲಗಂ ಗತಿಯನ್ನು ತಪ್ಪಿಸುವುದು ಕಷ್ಟವಾಗುತ್ತದೆ. ಈ ಕಾರಣದಿಂದಲೂ, ಹಳಗನ್ನಡವು, ವಿಭಕ್ತಿರೂಪಗಳಲ್ಲಿ ಸಹಿಸದ ಲಗಂ ಗತಿಯನ್ನು, ಕ್ರಿಯಾಪದಗಳಲ್ಲಿ ಸ್ವಲ್ಪಮಟ್ಟಿಗೆ ಸಹಿಸಿದೆ ಎನ್ನಬಹುದೇನೋ.
ಅಕಾರಾಂತ ನಪುಂಸಕಲಿಂಗಶಬ್ದಗಳ ಚತುರ್ಥೀ ವಿಭಕ್ತಿರೂಪದಲ್ಲಿ ಕಾಣುವ ಲಗಂ ಗತಿ
ಅಕಾರಾಂತವಾದ ನಪುಂಸಕಲಿಂಗಶಬ್ದಗಳ ಚತುರ್ಥೀ ವಿಭಕ್ತಿರೂಪದಲ್ಲಿ ಕೆ ಪ್ರತ್ಯಯವು ಸಜಾತೀಯದ್ವಿತ್ವದೊಂದಿಗೆ ಕಾಣಿಸುವುದರಿಂದ, ಮೂಲಶಬ್ದದಲ್ಲಿ ಎರಡು ಲಘುಗಳಷ್ಟೇ ಇದ್ದರೆ ಲಗಂ ಗತಿಯು ಹಳಗನ್ನಡವಷ್ಟೇ ಅಲ್ಲ, ಹೊಸಗನ್ನಡದಲ್ಲೂ ಹಲವೆಡೆ ಕಾಣಿಸುತ್ತದೆ. ಉದಾಹರಣೆಗೆ,
- ಮರಕ್ಕೆ - ಲಗಂಲ
- ಕದಕ್ಕೆ - ಲಗಂಲ
- ಮರಕೆ - ಲಲಲ
- ಕದಕೆ - ಲಲಲ
ಅಕಾರಾಂತವಲ್ಲದ ಶಬ್ದಗಳ ಪ್ರಥಮಾ ವಿಭಕ್ತಿರೂಪಗಳಲ್ಲೂ ಕೆಲವೊಮ್ಮೆ ಹೊಸಗನ್ನಡದಲ್ಲಿ ಕಾಣುವ ಉಕಾರ
"ಕನ್ನಡ ಕೈಪಿಡಿ"ಕಾರರು, ಅಕಾರಾಂತವಲ್ಲದ ಶಬ್ದಗಳ ಪ್ರಥಮಾ ವಿಭಕ್ತಿರೂಪಗಳಲ್ಲಿ, ಹಳಗನ್ನಡ, ನಡುಗನ್ನಡಗಳಲ್ಲಿ ಅಷ್ಟಾಗಿ ಕಾಣದ, ಹೊಸಗನ್ನಡದಲ್ಲಿ ಕೆಲವೊಮ್ಮೆ ಕಾಣುವ, ಉಕಾರದ ವಿವೇಚನೆಯನ್ನು ಮಾಡಿರುವುದನ್ನು "ಅನುಸ್ವಾರದ ಅನುಸಾರ"ದಲ್ಲಿ ನೋಡಬಹುದು.
ಕನ್ನಡ ಕೈಪಿಡಿ, ಪುಟ ೪೧೨
ಹ.ಗ., ನ.ಗ.ಗಳಲ್ಲಿ ಇಲ್ಲದೆ ಇದ್ದ ಒಂದು ವಿಶೇಷ ಪ್ರಯೋಗವು - ಅಕಾರಾಂತಗಳಲ್ಲದ ಶಬ್ದಗಳಿಗೂ ಉ ಪ್ರತ್ಯಯವನ್ನು ಸೇರಿಸುವುದು - ಹೊ.ಗ.ದಲ್ಲಿ ಗ್ರಾಂಥಿಕಭಾಷೆಯಲ್ಲಿ ಮಾತ್ರ ಕಂಡುಬರುತ್ತದೆ. ಇದಕ್ಕೆ ಉ ಎಂಬುದು ಪ್ರ.ವಿ.ಪ್ರತ್ಯಯವೆಂಬ ಭ್ರಮೆಯೇ ಕಾರಣ. ಹ.ಗ.ದಲ್ಲಿನ ವ್ಯಂಜನಾಂತಗಳೆಲ್ಲವೂ ಸ್ವರಾಂತಗಳಾಗುವುದರಿಂದ, ಅದರಲ್ಲಿಯೂ ಮುಖ್ಯವಾಗಿ ಉಕಾರಾಂತಗಳಾಗುವುದರಿಂದ ಉ ಎಂಬುದನ್ನು ಪ್ರ.ವಿ.ಪ್ರತ್ಯಯವೆಂದು ಭಾವಿಸುವುದು ತಪ್ಪು.
[ಹಳಗನ್ನಡವನ್ನು ಹ.ಗ. ಎಂದೂ, ನಡುಗನ್ನಡವನ್ನು ನ.ಗ. ಎಂದೂ, ಹೊಸಗನ್ನಡವನ್ನು ಹೊ.ಗ. ಎಂದೂ, ಪ್ರಥಮಾ ವಿಭಕ್ತಿಯನ್ನು ಪ್ರ.ವಿ. ಎಂದೂ ಮೂಲದಲ್ಲೇ ಸಂಕ್ಷೇಪಿಸಲಾಗಿದೆ.]
ಉದಾಹರಣೆಗೆ,
- ನದಿ + ಉ => ನದಿಯು
- ಕೆರೆ + ಉ => ಕೆರೆಯು
- ಹಸು + ಉ => ಹಸುವು
ಇಲ್ಲಿ, ಹೊಸಗನ್ನಡಿಗರು ("ಕನ್ನಡ ಕೈಪಿಡಿ"ಕಾರರು ಹೇಳಿದಂತೆ) ಉಕಾರವನ್ನು ಪ್ರಥಮಾ ವಿಭಕ್ತಿಪ್ರತ್ಯಯವೆಂದು ಭ್ರಮಿಸಿದ್ದಾರೆ ಎಂದಂತೆಯೇ, ಮೇಲೆ ಕಂಡ, ಅಂಶಗಣಗಳ ವಿನ್ಯಾಸದ ಲಕ್ಷಣಗಳಲ್ಲಿ ಒಂದಾದ, ಎರಡು ಲಘುಗಳೇ ಇರುವ ಪದಗಳು ಅಂಶಗಣಗಳಾಗುವುದಿಲ್ಲ ಎಂಬುದನ್ನೂ ಕಾರಣವೆನ್ನಬಹುದು. ಎಕೆಂದರೆ, ಮೇಲಿನ ಉದಾಹರಣೆಗಳ ಉಕಾರವಿಲ್ಲದ ಮೂಲರೂಪದಲ್ಲಿ ಎರಡು ಲಘುಗಳೇ ಕಾಣಿಸುತ್ತವೆ.
- ನದಿ - ಲಲ
- ಕೆರೆ - ಲಲ
- ಹಸು - ಲಲ
ಇವಕ್ಕೆ, ಉಕಾರ ಬಂದಾಗ ಆಗುವ ಯಕಾರ, ವಕಾರಾಗಮದಿಂದ ಮೂರು ಲಘುಗಳಿರುವ ಅಂಶಗಣಸಮ್ಮತವಾದ ರೂಪ ಸಿದ್ಧಿಸುತ್ತದೆ.
- ನದಿ + ಉ => ನದಿಯು - ಲಲಲ
- ಕೆರೆ + ಉ => ಕೆರೆಯು - ಲಲಲ
- ಹಸು + ಉ => ಹಸುವು - ಲಲಲ
ಹೀಗೆ, ಅಂಶಗಣಸಮ್ಮತವಾದ ರೂಪ ಸಿದ್ಧಿಸಲು ಬಂದ ಉಕಾರವು, ಪ್ರಚಲಿತವಾಗಿ, ಮುಂದೆ ಅನೇಕಾಕ್ಷರಗಳಿರುವ ಅಕಾರಾಂತವಲ್ಲದ ಶಬ್ದಗಳಿಗೂ (ಉದಾಹರಣೆಗೆ, ಕರಡಿಯು, ಬಾಳೆಯು) ಹರಡಿತು ಎನ್ನುವುದು, "ಕನ್ನಡ ಕೈಪಿಡಿ"ಯಲ್ಲಿ ಹೇಳಿರುವ, ಉಕಾರ ಪ್ರಥಮಾ ವಿಭಕ್ತಿಪ್ರತ್ಯಯವೆಂಬ ಭ್ರಮೆಯೆಂಬ ಕಾರಣಕ್ಕೆ ವಿಕಲ್ಪವಾದ, ಇನ್ನೊಂದು ಕಾರಣವಾಗಿರಲೂ ಬಹುದು.
ಸಾರಾಂಶ
ಹೀಗೆ, ಅಚ್ಚಗನ್ನಡಛಂದಸ್ಸಿನ ಅಂಶಗಣಗಳ ವಿನ್ಯಾಸಕ್ಕೂ, ದ್ವಿತ್ವಸಂಧಿಗೂ, ವಿಭಕ್ತಿರೂಪಗಳಲ್ಲಿ ಕಾಣುವ ವಕಾರಕ್ಕೂ ಇರುವ ಒಂದೇ ಮೂಲಕಾರಣ, ಶ್ರೀ ಸೇಡಿಯಾಪು ಕೃಷ್ಣಭಟ್ಟರು ಹೇಳಿದ, ಕನ್ನಡ ಮತ್ತಿತರ ದ್ರಾವಿಡಭಾಷೆಗಳಲ್ಲಿ ಕಾಣುವ ಗಣ, ಪದಗಳ ಆದಿಯಲ್ಲಿ ಲಗಂ ಗತಿಯ ಬಗೆಗಿರುವ ತಿರಸ್ಕಾರ. ಈ ವಿಷಯದಲ್ಲಿ, ಹೊಸಗನ್ನಡ ಇನ್ನೂ ಮುಂದುವರೆದು, ಕ್ರಿಯಾಪದಗಳಲ್ಲಿ ಕೆಲವೆಡೆ ಕಾಣಬಹುದಾದ ಲಗಂ ಗತಿ, ಜಗಣಗಳನ್ನೂ (ಲಗಂಲ) ನಿವಾರಿಸಿಕೊಂಡಿದೆ ಎನ್ನಬಹುದು.
- ಈ ಲೇಖನವನ್ನು ಹಲವು ಬಾರಿ ಓದಿ, ತಪ್ಪುಗಳನ್ನು ತಿದ್ದಿದ ಕನ್ನಡವ್ಯಾಕರಣಾಸಕ್ತ ಗೆಳೆಯರೆಲ್ಲರಿಗೂ ಕೃತಜ್ಞತೆಗಳು.
- ಈ ಲೇಖನದಲ್ಲಿ ಮೊದಲಿದ್ದ ಮೂರು ವಿಚಾರಗಳಿಗೆ (ಅಂಶಗಣಗಳ ಗಣವಿನ್ಯಾಸ, ದ್ವಿತ್ವಸಂಧಿ, ವಿಭಕ್ತಿರೂಪಗಳಲ್ಲಿ ಕಾಣುವ ವಕಾರ) ಪೂರಕವಾಗಿ, ಇನ್ನೆರಡು ವಿಚಾರಗಳನ್ನು (ಕ್ರಿಯಾಪದಗಳಲ್ಲಿ ಕಾಣುವ ಲಗಂ ಗತಿ, ಹೊಸಗನ್ನಡದಲ್ಲಿ ಅಕಾರಾಂತವಲ್ಲದ ಶಬ್ದಗಳ ಪ್ರಥಮಾ ವಿಭಕ್ತಿರೂಪಗಳಲ್ಲಿ ಕಾಣುವ ಉಕಾರ) ಸೇರಿಸಿ ವಿಸ್ತರಿಸಿದ್ದೇನೆ.
- "ಅಕಾರಾಂತ ನಪುಂಸಕಲಿಂಗಶಬ್ದಗಳ ಚತುರ್ಥೀ ವಿಭಕ್ತಿರೂಪದಲ್ಲಿ ಕಾಣುವ ಲಗಂ ಗತಿ" ಎನ್ನುವ ವಿಚಾರವನ್ನು ಸೇರಿಸಿದ್ದೇನೆ.
This work is licensed under a Creative Commons Attribution-NonCommercial-NoDerivatives 4.0 International License. Since there is some original research in this work, please inform in the comment section below, if you want to quote or use this or any part of this work.
Comments
Post a Comment