ಅವತಾರದ ತಾತ್ಪರ್ಯ

ಕ್ಷಮೆ ಕೇಳುತ್ತಾ...

ಅಂಶಗಣ ಛಂದಸ್ಸುಗಳ ಮೇಲಿನ ನನ್ನ ಪ್ರೀತಿಯ ಬಗ್ಗೇ ಈಗಾಗಲೇ ಸ್ವಲ್ಪ ಹೇಳಿದ್ದೇನೆ. ಆದರೆ ಈ ಕವನದ ಬಂಧವಾದ ಅಂಶಗಣಗಳ ತ್ರಿಪದಿಯ ಪರಿಚಯ ಮಾಡಬೇಕೆನ್ನಿಸುತ್ತದೆ. ಛಂದೋವತಂಸದಂತೆ ವಿರಳವಲ್ಲದೆ, ಬಹಳ ಜನಪ್ರಿಯವೂ, ಜಾನಪದವೂ ಆದ ತ್ರಿಪದಿಗೆ ಅಪರಿಚಿತರಲ್ಲದ ಓದುಗರು ಈ ಕಿರುಪರಿಚಯವನ್ನು ಬಿಟ್ಟು ಮುನ್ನಡೆಯಬಹುದು.

ತ್ರಿಪದಿಯ ಲಕ್ಷಣಗಳನ್ನು ಇಲ್ಲಿ ಕಾಣಬಹುದು. ಹಾಗಾಗಿ, ತ್ರಿಪದಿಯನ್ನು ಓದುವ/ವಾಚಿಸುವ ಬಗ್ಗೆ ಮಾತ್ರ ಒಂದೆರಡು ಮಾತು. ತ್ರಿಪದಿಯಲ್ಲಿ ಮೂರೇ ಪಾದಗಳಿದ್ದರೂ, ಎರಡನೇ ಪಾದವನ್ನು ಪುನರಾವರ್ತಿಸಿ ನಾಲ್ಕು ಪಾದಗಳಾಗಿ ಓದಬೇಕು. ಆದರೆ, ಎರಡನೇ ಪಾದವನ್ನು ಮೊದಲ ಬಾರಿ ಓದುವಾಗ, ಪಾದದ ಕೊನೆಯ ಗಣವನ್ನು ಓದದೆ (ಇದನ್ನು "||" ಚಿಹ್ನೆಯಿಂದ ಗುರುತಿಸುವುದು ರೂಢಿ), ಅದರ ಹಿಂದಿನ ಗಣ(ಅಂದರೆ, ಎರಡನೇ ಪಾದದ ಮೂರನೇ ಗಣ)ವನ್ನು ಹಿಗ್ಗಿಸಿ ವಿರಮಿಸಬೇಕು.  ಹೀಗೆ ಹಿಗ್ಗಿಸುವಾಗ, ಎರಡನೇ ಪಾದದ ಮೂರನೇ ಗಣದ ಕೊನೆಯ ಅಕ್ಷರವನ್ನು ಬಿಟ್ಟು ಉಳಿದವನ್ನು ಇಡೀ ಗಣದಷ್ಟು ಹಿಗ್ಗಿಸಿ, ಕೊನೆಯ ಅಕ್ಷರವನ್ನು ಮುಡಿ/ಪದ್ಮಗಣದಂತೆ (ಅಪೂರ್ಣ ಗಣ ಎನ್ನಬಹುದು) ಓದುವ ರೀತಿ, ಕವನದ ಜಾನಪದ ಶೈಲಿಯನ್ನು ಇನ್ನೂ ಹೆಚ್ಚಿಸುತ್ತದೆ. ಎರಡನೇ ಪಾದದ ಪುನರಾವರ್ತನೆಯಲ್ಲಿ ಕೊನೆಯ ಗಣವನ್ನೂ ಸೇರಿಸಿ ಓದಬೇಕು. ಆಮೇಲೆ ಮೂರನೇ ಪಾದ.

ಉದಾಹರಣೆಗೆ, ಈ ಕವನದ ಪಲ್ಲವಿಯನ್ನು ಹೀಗೆ ಓದಬಹುದು.


ಇಳೆ ತಾನೇ|ಉರುಳುರುಳಿ-|ಋತುಗ-ಳೂ|ಮರಮರಳಿ-|

ತಿಳಿಯಾದ-|ಮಂಜು---|ಸುಳಿಸು-ರು-|ಳಿ-----|
ತಿಳಿಯಾದ-|ಮಂಜು---|ಸುಳಿಸುರುಳಿ-|ಸುತ್ತಿ-ದೆ-|
ಇಳಿಯ-ದ-|ನಂಜು---|ಏರುತ್ತಿ-|ದೆ-----|

ಇಲ್ಲಿ, "||" ಗಣವಿನ್ಯಾಸವನ್ನೂ, "-" ಒಂದು ಮಾತ್ರಾಕಾಲದ ವಿರಾಮವನ್ನೂ ತೋರಿಸುತ್ತವೆ.


ಇನ್ನು ಕವನದೆಡೆಗೆ.


ಅವತಾರವನ್ನು ಬೇರೆ ಬೇರೆ ಅರ್ಥಗಳಲ್ಲಿ ನಾವು ಬಳಸುತ್ತೇವೆ. ದೇವರ, ದಿವ್ಯವಾದುದರ ಅವತಾರ, ಕೆಳಗಿಳಿಯುವಿಕೆ,  ಅನುಗ್ರಹ (ನಿಗ್ರಹವೂ ಹೌದು) ಹೀಗೆಲ್ಲ ಧ್ವನಿಗಳು. ಆದರೆ, ಸಂಸ್ಕೃತದಲ್ಲಿ ಅದರ ಅರ್ಥವ್ಯಾಪ್ತಿ ಇನ್ನೂ ಹೆಚ್ಚಾಗಿದೆ. ಅವೆಲ್ಲವನ್ನೂ ಇಲ್ಲಿ ಅನ್ವಯಿಸಬಹುದು. ಇದಕ್ಕೆ ಹತ್ತಿರವಾದ ಅವತರವೂ ಈ ಕವನಕ್ಕೆ ಹತ್ತಿರವಾಗಿದೆ. ಇದೆಲ್ಲಕ್ಕೂ ಮೂಲವಾದ ತೃ ಧಾತುವಿನೊಳಗಂತೂ ಒಂದು ಪ್ರಪಂಚವೇ ಇದ್ದಂತಿದೆ! ಅದು ನೀರಿನ (ವರುಣನ?) ವಿಶ್ವರೂಪದಂತೆ ಇದೆ! ಅವತರಕ್ಕೆ ಪರ್ಯಾಯವಾಗಬಹುದಾದಂಥ ಅವಸರ ನಮ್ಮನ್ನು ತೃ-ಲೋಕದಿಂದ ಸೃ-ಲೋಕ್ಕೆ ದಾಟಿಸುತ್ತದೆ. ಇಲ್ಲೂ ನೀರಿನ ನಂಟೇ.


ಇಷ್ಟಲ್ಲದೆ, ಕನ್ನಡದಲ್ಲಿ ಅವತಾರವನ್ನು ವ್ಯಂಗ್ಯವಾಗಿ ಬಳಸುವುದೂ ತುಂಬಾ ಸಾಮಾನ್ಯ. ಅದಕ್ಕೂ ಇಲ್ಲಿ ಜಾಗವಿದೆ.


ಇಳೆ ತಾನೇ ಉರುಳುರುಳಿ ಋತುಗಳೂ ಮರಮರಳಿ

ತಿಳಿಯಾದ ಮಂಜು ಸುಳಿಸುರುಳಿ || ಸುತ್ತಿದೆ
ಇಳಿಯದ ನಂಜು ಏರುತ್ತಿದೆ!

ಮೇಲುನೋಟಕ್ಕೆ ಇದೊಂದು ಪ್ರಕೃತಿಚಿತ್ರಣ. ಕವನವನ್ನು ಬರೆದದ್ದು ೨೦೨೦ರ ಜನವರಿಯ ಉತ್ತರಾರ್ಧದಲ್ಲಿ. ಶಿಶಿರದ ಮಂಜು ಕರಗುತ್ತಾ ಇದೆ. ಚಳಿ ಇನ್ನೂ ಚುರುಕಾಗಿರುವಾಗಲೇ, ವಸಂತದ ನಂಜು ಅವ್ಯಕ್ತವಾದರೂ ನಿಸ್ಸಂಶಯವಾಗಿ ಏರುತ್ತಿದೆ. ಈ ಚಿತ್ರ ಕಾಲಚಕ್ರದ ಪ್ರತೀಕ ಎನ್ನಬಹುದು. ಇದರಲ್ಲಿ ನಮ್ಮ ಸಂಪ್ರದಾಯಗಳಲ್ಲಿ, ಪುರಾಣಗಳಲ್ಲಿ ಬರುವ ಕಾಲದ (ಬೇರೆ ಬೇರೆ ಸ್ಥರಗಳಲ್ಲಿ) ಅನಂತವಾದ ಪುನಾರಾವರ್ತನೆಯ ಪರಿಕಲ್ಪನೆಯನ್ನು ಕಾಣಬಹುದು.


ಆದರೆ ಕಾಲಚಕ್ರ ನಿಂತಲ್ಲೇ ತಿರುಗುವುದಿಲ್ಲವಲ್ಲ! ತಿರುಗುವುದಕ್ಕಿಂತ ಅದು ಉರುಳುವುದೇ ಸರಿ. ಈ ಋತುಚಕ್ರದ ರೂಪಕದ ಪರದೆಯ ಆಚೆಗೆ ಭೂಮಿಯೇ ಉರುಳುತ್ತಿದೆ. ಋತುಗಳನ್ನೂ, ರೂಪಕವನ್ನೂ ದಾಟಿ ಇದೆ. ದಾಟಿಸಿದೆ. ಇಲ್ಲಿಯೂ, ಭೌತಶಾಸ್ತ್ರದ ಸ್ಥರದಲ್ಲಿ ಬೇರೆ ಬೇರೆ ಕಾಲಚಕ್ರಗಳಿವೆ. ಚಕ್ರಗಳೂ ಇವೆ. ಅಂಶಗಣಗಳೊಳಗಿನ ಎಳೆಯಾಟದಿಂದ, ಬೇರೆ ಛಂದಸ್ಸುಗಳಲ್ಲಿ ಕಾಣದ ಶ್ಲೇಷೆಗಳ ಅವಕಾಶವನ್ನು ಇಲ್ಲಿ ಕಾಣಬಹುದು. ತಿಳಿಯಾದ, ತಿಳಿಯದ ಹೀಗೆ ಎರಡೂ ರೀತಿ ತೆಗೆದುಕೊಳ್ಳಬಹುದು. ತಿಳಿಯಾದ ಮಂಜು interstellar medium ಆದರೆ, ತಿಳಿಯದ ಮಂಜು dark matter ಅನ್ನಬಹುದು. ಹೀಗೆ ಸುರುಳಿ ಸುತ್ತಿರುವುದೇ ನಕ್ಷತ್ರಪುಂಜ. ಹೀಗಿರುವಾಗಲೂ, entropy ಎನ್ನುವ ಇಳಿಯದ, ಇಳಿಯಲಾರದ ನಂಜು ಏರುತ್ತಲೇ ಇದೆ. ಕಾಲಚಕ್ರವನ್ನು ಹೊರಟಲ್ಲಿಗೆ ಮರಳದಂತೆ ಉರುಳಿಸುತ್ತಿದೆ.


ಜ್ಞಾನಮೀಮಾಂಸೆಯ ಹಿನ್ನೆಲೆಯಲ್ಲಿ ನೋಡಿದರೆ, ಉರುಳಬೇಕಾದದ್ದು ಉರುಳದೆ ಜ್ಞಾನ ಸಿಗುವುದಿಲ್ಲ. ಅದಕ್ಕಾಗಿ ಪ್ರಯತ್ನವೂ ಬೇಕು, ಸಾಧನೆಯೂ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ತಾಳ್ಮೆ ಬೇಕು. ಹೀಗಿದ್ದೂ, ತಿಳಿವು ಎಷ್ಟೇ ವರ್ಷಗಳ ಸಾಧನೆಯಿಂದ ಸಿಕ್ಕಿದರೂ, ಅದರೊಳಗೆ ಅಜ್ಞಾನ ಸುಳಿಸುತ್ತಿಕೊಂಡೇ ಇರುತ್ತದೆ. ಹಾಗಿದ್ದರೂ ಅದರ ನಂಜು ಮಾತ್ರ ಇಳಿಯುವಂಥದ್ದಲ್ಲ! ಕಾಲಚಕ್ರದಂತೆ, ಜ್ಞಾನಚಕ್ರವೂ ಹೊರಟಲ್ಲಿಗೆ ಮರಳುವಂಥದಲ್ಲ. ಅದನ್ನೂ ತಾಳಬೇಕು.

ಚಕ್ರವೇ ಉರುಳಲ್ಲ, ಮಣ್ಣಲ್ಲೇ ಹುರುಳಿಲ್ಲ

ಶುಕ್ರನ ದೆಸೆಯೂ ಸರಿಯಿಲ್ಲ||ವೆಂದರೆ
ವಕ್ರದೃಷ್ಟಿಯೆ ಬೇರೆ ಕಾಣಿಸಿದೆ!

ವಾಚ್ಯಾರ್ಥದಲ್ಲಿ, ಲೋಕರೂಢಿಯ ಬರಗಾಲ, ಗ್ರಹಚಾರದ ಭಾಷೆಯಲ್ಲಿ ಅಕಾಲದ, ದುರವಸ್ಥೆಯ ಸರಮಾಲೆಗಳು ಮೇಲಿಂದ ಮೇಲೆ ಬಂದಿರುವುದರ ಚಿತ್ರಣ. ಆದರೆ ತಿರುಗದೆ ನಿಂತಿರುವುದು ಕಾಲಚಕ್ರವಲ್ಲ. ಅದು ಉರುಳುತ್ತಲೇ ಇದೆ. ಉರುಳದೇ ನಿಂತಿರುವವರು ನಾವು ಮಾತ್ರ! ನಾವು ಮತ್ತು communism, communalism, socialism, secularism, liberalism, casteism, crony-capitalism ಮುಂತಾದ ನಮ್ಮ ಅವಸ್ಥೆಗಳು, ಅವ್ಯವಸ್ಥೆಗಳು. ಅವತಾರಗಳೇ ಎನ್ನಬೇಕು! ಯಾವಾಗಲೋ ಉರುಳಬೇಕಾದ ಇವು ನಮ್ಮನ್ನು ಇನ್ನೂ ಪ್ರೇತಗಳಾಗಿ ಕಾಡುತ್ತಿವೆ. ಅವುಗಳಿಗೆ ದಡ ಸೇರುವ, ಸೇರಿಸುವ ಯೋಗ್ಯತೆ, ಸಾಮರ್ಥ್ಯಗಳಿಲ್ಲ. ಹೀಗಿದ್ದರೂ, ಅವುಗಳನ್ನು ಪೋಷಿಸುವ ಮತ್ತು ಅವುಗಳಿಂದ ಪೋಷಣೆಯನ್ನು ಪಡೆಯುತ್ತಿರುವ ದೃಷ್ಟಿಕೋನಗಳು ವಕ್ರವೇ. ಇವುಗಳ ಮಣ್ಣು ಯಾವಾಗಲೋ ಹುರುಳು ಕಳೆದುಕೊಂಡಿದೆ.

ಇವಲ್ಲಿ ಕೆಲವು (casteism, communalism, crony-capitalism ಮುಂತಾದವು) ಯಾರೂ ಯೋಚಿಸಿ ಮಾಡಿಕೊಂಡವಲ್ಲ. ಹಾಗೆಂದು ಅವುಗಳಿಗೆ ಅವುಗಳದ್ದೇ ಆದ ಗುರಿಗಳಿಲ್ಲವೆಂದಲ್ಲ. ಯಾವ ಸ್ಪಷ್ಟವಾದ ಉದ್ದೇಶ, ಯೋಚನೆ, ಪ್ರಯತ್ನಗಳಿಲ್ಲದೆಯೂ ತಮ್ಮಷ್ಟಕ್ಕೆ ತಾವೇ ಮುನ್ನಡೆಯುವ ಒಂದು ರೀತಿಯ Darwinian ಶಕ್ತಿಗಳು ಎಂಬುದಷ್ಟೇ ಅರ್ಥ. ಹಾಗೆಂದು ಅವುಗಳ ತೀಕ್ಷ್ಣತೆ, ಪರಿಣಾಮಗಳಿಗೆ ಏನೂ ಕೊರತೆಯಿಲ್ಲ. ಇನ್ನು ಕೆಲವಕ್ಕೆ (communism, socialism, secularism, liberalism ಮುಂತಾದವುಗಳಿಗೆ) ಮೇಲುನೋಟಕ್ಕೆ ಸ್ಪಷ್ಟವಾದ ಉದ್ದೇಶ, ಗುರಿಗಳಿವೆ ಮಾತ್ರವಲ್ಲ, ಗುರಿ ತಲುಪುವ ದಾರಿಯ ಬಗೆಗೂ ಸ್ಪಷ್ಟತೆಯಿದೆ. ಇಂಥಾ ಕಾಣಿಕೆಗಳು ಎಷ್ಟೋ ಇವೆ. ಚೆನ್ನಾಗಿಯೂ ಇವೆ. ಆದರೆ ಅವುಗಳಿಗೆ (ಗುರಿಗಳಿಗೂ, ದಾರಿಗಳಿಗೂ) ನಿಜವಾದ ಕ್ಷಮತೆಯಿದೆಯೇ? ನಿಜವಾಗಿ ನೋಡಿದರೆ ಇವೂ Darwinian ಶಕ್ತಿಗಳೇ. ಎಲ್ಲ ಅಂಥಾ ಶಕ್ತಿಗಳಂತೆ ತಮ್ಮ ದಾರಿ, ಗುರಿಗಳನ್ನು ತಾವೇ ಸೃಷ್ಟಿಸಿಕೊಳ್ಳುತ್ತಲೇ ಇವೆ. ಹೀಗಾದಾಗ, ಮೊದಲು ಸ್ಪಷ್ಟವಾಗಿ ಗುರುತಿಸಿದ, ಘೋಷಿಸಿದ  ಗುರಿಗಳು ಅಮುಖ್ಯವಾಗುತ್ತವೆ. ಹೆಚ್ಚಾಗಿ, ನಿಜವಾದ ಗುರಿಗಳು ಅವುಗಳ ತದ್ವಿರುದ್ಧವಾಗಿಯೇ ಇರುತ್ತವೆ.

ಇಷ್ಟು ಮಾತ್ರವಲ್ಲ, ದೇಶದ ಗತವೈಭವ, ಉಜ್ವಲ ಭವಿಷ್ಯದ ಕನಸುಗಳೂ ಹೊರೆಯಾಗಿಯೇ ಪರಿಣಮಿಸಿರುವಂತಿದೆ. ಆಕಾಶದ ಕಡೆಗೆ ನೋಡಿದರೆ ಸಾಕೇ?

ಆದರೆ, ಈ ಪರಿಸ್ಥಿತಿಯಲ್ಲೂ ಮುಂದಿನ ದಾರಿ ಕಷ್ಟವಲ್ಲ. ಕಾಲಚಕ್ರ ಉರುಳಾಗಬೇಕಿಲ್ಲ. ಉರುಳಿದರೆ ಸಾಕು, ಅಷ್ಟೇ. ಹುರುಳಿರಬೇಕಾದದ್ದು ಮಣ್ಣಲ್ಲಲ್ಲ. ನೋಡುವ ಕಣ್ಣಲ್ಲಿ. ದೆಸೆ ಸರಿಯಿರಬೇಕಾದದ್ದು ಶುಕ್ರನದ್ದಲ್ಲ. ನೋಟದ್ದು. ಅಂಥಾ ಒಳನೋಟದ ವಕ್ರದೃಷ್ಟಿ ಮಾತ್ರ ಮುಂದಿನ ದಾರಿ ಕಂಡೀತು. ಕಾಣಿಸೀತು.

ಕರೆಕರೆದು ಬಂದದ್ದು, ಕಡೆಕಡೆದು ಬಿಟ್ಟದ್ದು,

ಅರೆದರೆದು ಉಜ್ಜಿ ಬೆರೆಸುತ್ತಾ || ಇಟ್ಟದ್ದು,
ಉರಿಸಿಟ್ಟ ಒಲೆಮೇಲೆ ಕಾಯುತ್ತಿದೆ.

ಇಲ್ಲಿರುವುದು ದೈನಂದಿನ ಅಡುಗೆಯ ಸಂಸ್ಕಾರದ ಮೇಲ್ಮೆ. ಅದು ನಮ್ಮೊಳಗೇ ಪ್ರತಿದಿನವೂ ಮಾಡಬೇಕಾದ ಅಡುಗೆಯೂ ಹೌದು. ಹಸಿಯಾಗಿ ಯಾವುದನ್ನೂ ತಿನ್ನುವುದಲ್ಲ. ಪಾಕ ಬೇಕು. ಆದರೆ ವಿಪಾಕವಲ್ಲ. ಹಾಗೆಯೇ, ಇದು ಪೂಜೆ, ಯಜ್ಞಗಳ ಸಂಕೇತವೂ ಆಗಬಹುದು.

೨೦೨೦ರ ಜನವರಿಯ ಸಂದರ್ಭಲ್ಲಿ ನಮ್ಮ ದೇಶದ ಪರಿಸ್ಥಿತಿಯನ್ನೂ ಇಲ್ಲಿ ಅನ್ವಯಿಸಬಹುದು. CAA, NRC ಇವುಗಳ ದಶಕಗಳ (ಏಕೆ? ಶತಮಾನಗಳ) ಹಿನ್ನೆಲೆ, ಅದಕ್ಕೆ ಪ್ರತಿಯಾಗಿ ನಡೆದ, ನಡೆಯುತ್ತಿರುವ, ಪ್ರತಿಭಟನೆ, ಹಿಂಸೆ, ಇವನ್ನೆಲ್ಲ ನೋಡಿದರೆ ದಶಕಗಳೇ, ಶತಮಾನಗಳೇ ಉರುಳಿದರೂ ಉರುಳಿಯೇ ಇಲ್ಲವೇನೋ ಅನ್ನಿಸುತ್ತದೆ. ಈ vote-bank ರಾಜಕಾರಣದ ಅಡುಗೆ, ಸ್ವಾತಂತ್ರ್ಯಪೂರ್ವದಿಂದಲೂ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಅದಕ್ಕಾಗಿ immigration (legal and illegal) ಕರೆದು, ಕಡೆದು (ಎಲ್ಲಾ ಅರ್ಥಗಳಲ್ಲೂ), ಅರೆದು, ಉಜ್ಜಿ, ಬೆರೆಸುತ್ತಾ ಇದ್ದದ್ದು ಈಗ ಚೆನ್ನಾಗಿ ಕುದಿಗೆ ಬಂದಿದೆ. ಉರಿ ಸಿಡಿದಿದೆ. ಅದರೂ, ತುಪ್ಪದ ಒಗ್ಗರಣೆ ಬೀಳುತ್ತಲೇ ಇದೆ.

NRCಯ ರಾಜಕಾರಣವೂ ಅಷ್ಟೇ. ದೇಶಕ್ಕೆ CAA ಬಹಳ ಆವಶ್ಯಕವೇ ಹೌದು. ಆದರೆ NRC (ಈಗ ಹೇಳುತ್ತಿರುವಂತೆ) ಹುಲಿಯ ಸವಾರಿಯೇ ಆಗುವಂತಿದೆ. ನೂರು ವರ್ಷಗಳಿಗಿಂತಲೂ ಹಿಂದಿನಿಂದ ಇಂದಿನವರೆಗೆ ಸತತವಾಗಿ ಅಯೋಗ್ಯತೆಯನ್ನೇ ಮೆರೆಯತ್ತಾ ಬಂದಿರುವ ನಮ್ಮ ದೇಶದ bureaucracyಯಿರುತ್ತಲೇ NRCಯನ್ನು ಸುಸೂತ್ರವಾಗಿ ನಡೆಸುತ್ತೇವೆ ಎನ್ನುವ ಪ್ರತಿಜ್ಞೆಗೆ "ಬೇಳೆ ಬೇಯಿಸುವುದು" ಎನ್ನದೆ ಬೇರೇನೆನ್ನಬೇಕು?

ಇವೆಲ್ಲ, ಉರುಳಬೇಕಾದ ಚಕ್ರವನ್ನು, ಹರಿಯಬೇಕಾದ ನದಿಯನ್ನು ತಡೆದಿಡುವ ಪ್ರಯಾಸ. ನಮ್ಮೆಲ್ಲರ ಇಲ್ಲಿಯವರೆಗಿನ ಈ ಉದ್ಯೋಗ, ಮಹಾಭಾರತದ ಉದ್ಯೋಗಪರ್ವದಂತೆ ಕಾಣಿತ್ತಿದೆ. ನಮಗೆ ಇಷ್ಟವಿರುವ, ಇಲ್ಲದಿರುವ, ಸರಿಯೆನ್ನಿಸುವ, ಎನ್ನಿಸದ ಎಲ್ಲವೂ ಸೇರಿ ಕುದಿಯುತ್ತಿರುವ ಸಮಯ. ಇಲ್ಲಿ ಸತ್ಯಾಸತ್ಯಗಳು ಮಾತ್ರವಲ್ಲದೆ, ಸತ್ಯಗಳೂ ತಮ್ಮೊಳಗೇ ಎದುರುಬದುರಾಗಿವೆ. ಇದು ಕೂಡ ಆಗಲೇಬೇಕಾದಾದ್ದು. ಹೀಗಾಗದೆ ಜ್ಞಾನಚಕ್ರ ಉರುಳದು. ಧರ್ಮಚಕ್ರವೂ ಕೂಡ.

ತೆರೆಯದ ಅಂಗಳ ಪೊರೆಯದ ಕಂಗಳ

ಹೊರೆಯದೆ ತಿಂಗಳೇ ಮೀರಿ||ಹೋಗಿದೆ
ಬರೆಸುಟ್ಟ ಕಲೆಯೂ ಮಾಯುತ್ತಿದೆ.

ಮುಂದಿನ ದಾರಿ ಕಾಣದಿರುವಾಗ ಅದನ್ನೂ ತಾಳುವ ರೀತಿ. ದೇವರನ್ನೇ ದೂರುತ್ತಾ ಪ್ರಾರ್ಥಿಸುವ ರೀತಿ. ಆದರೆ ಅನುಗ್ರಹವಾಗುವ ಮೊದಲೇ, ದೈನ್ಯವೇ ಅಭ್ಯಾಸವಾದರೆ?

ದೇಶದ ಪರಿಸ್ಥಿತಿಯೇ, ಲೋಕದಲ್ಲೂ ಪ್ರತಿಫಲಿಸಿದೆ. ಈಗ ಲೋಕವೆಲ್ಲಾ ಹರಡಿರುವ ಕೊರೋನಾದ ನಂಜು, ಈ ಕವನ ಬರೆದಾಗ ಏರುತ್ತಿತ್ತಷ್ಟೇ. ದೃಢನಿಶ್ಚಯದಿಂದ ಅದನ್ನು ಗಿಡವಾಗಿರುವಾಗಲೇ ಬಗ್ಗಿಸಬಹುದಿತ್ತು. ಆದರೆ ನಾವೆಲ್ಲ ಇನ್ನೂ ಮಂಜನ್ನೇ ಹೊದ್ದುಕೊಂಡಿರುವಾಗ ಅದು ಹೆಮ್ಮರವಾಗಿ ಬೆಳೆದಿದೆ!

ಕೊರೋನಾ ವೈರಸ್ Wuhanನ laboratoryಯಲ್ಲಿ ಬೇಕೆಂದೋ, ತಪ್ಪಾಗಿಯೋ ಆಗಿರಬಹುದು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲವಾದರೂ, ಇದು ಅವಿವೇಕದ ವೈರಸ್ ಸಂಶೋದನೆಯ, factory farming ಮತ್ತು ಅದರಲ್ಲಿ ಮಾಡಲಾಗುವ anti-biotic ದುರುಪಯೋಗಅಪಾಯ, ಜೀವಂತ ಪ್ರಾಣಿಗಳ wet marketಗಳ ಹೀಗೆ ಅನೇಕ ಅಪಾಯಗಳ ಬಗೆಗೆ ಜನಸಾಮಾನ್ಯರನ್ನೂ ಎಚ್ಚರಿಸಿದೆ. ಇಷ್ಟೆಲ್ಲ ಆಗಿಯೂ, ಇವೆಲ್ಲವೂ ಎಂದಿನಂತೆ ನಡೆಯುತ್ತಲೇ ಇವೆ!

ಹೀಗಿರುವಾಗ, ವೈರಸ್ಸೇ ಜೀವನಶೈಲಿಯಾದರೆ?

ಸತ್ಯಗಳ (ನಾವು ಇದುವರೆಗೆ ಸತ್ಯ ಎಂದುಕೊಂಡವುಗಳ)  ನಡುವಿನ, ಧರ್ಮಗಳ (ನಾವು ಇದುವರೆಗೆ ಧರ್ಮ ಎಂದುಕೊಂಡವುಗಳ) ನಡುವಿನ ತಾಕಲಾಟವಿಲ್ಲದೆ ಮುನ್ನಡೆಯಿಲ್ಲ. ಆದರೆ ಅಂಥಾ ತಾಕಲಾಟಗಳು ಸುಲಭವಾಗಿ ದಾಟುವಂಥವಲ್ಲ. ತಾಳಿಕೊಳ್ಳುವಂಥವೂ ಅಲ್ಲ. ಹಾಗೆ ತಾಳಿಕೊಳ್ಳಲಾರದೆಯೂ ತಾಳಿಕೊಳ್ಳುವ ರೀತಿ. ದಾಟುವಲ್ಲಿಯವರೆಗೆ.

ಕಾಣಿಕೆ ಒಂದಲ್ಲ ಹಲವಾರು ಕೊಟ್ಟದ್ದು

ಪೋಣಿಸಿದಂತೆಯೇ ಇತ್ತಲಿದೆ || ಹೂಡಿದ
ಬಾಣದ ಕಣ್ಣಲ್ಲಿ ಕತ್ತಲಿದೆ.

ಹಣ್ಣು, ಕಾಯಿ, ಕಾಣಿಕೆಗಳನ್ನೇನೋ ದೇವಸ್ಥಾನಗಳಲ್ಲಿ ಕೊಡುತ್ತೇವೆ. ಆದರೆ, ಅವು ಕೊಟ್ಟಲ್ಲೇ ಬದಿಯಲ್ಲಿ ಬಿದ್ದಿರುವುದನ್ನೂ ಕಾಣುತ್ತೇವೆ (ಇತ್ತಲೇ ಇದೆ). ಕಾಣಿಕೆ ದೇವರದ್ದೋ, ದೇವಸ್ಥಾನದ್ದೋ ಎನ್ನುವ ದ್ವಂದ್ವವಿದ್ದೇ ಇದೆ (ಇತ್ತಲೆ ಇದೆ). ಹಾಗಿದ್ದರೂ ಕೊಡುತ್ತಲೇ ಇರುತ್ತೇವೆ. ಕತ್ತಲಲ್ಲಿದ್ದರೂ (ಇರುವ ಕಾರಣದಿಂದಲೇ?) ಬೆಳಕಿನ ಕಾಣಿಕೆಯ ಮೇಲಿನ ನಂಬಿಕೆ. ನಂಬಿಕೆಗಿಂತ ಹೆಚ್ಚಾಗಿ, ಆಶಯ.

ಪಾಂಡವರೂ, ಅರ್ಜುನನೂ ಮಹಾಭಾರತ ಯುದ್ಧದ ಕಾಲಕ್ಕಾಗಲೇ ಬಹಳಷ್ಟು ಧರ್ಮಕರ್ಮಗಳ ಉಪದೇಶವನ್ನು ಪಡೆದದ್ದಷ್ಟೇ ಮಾತ್ರವಲ್ಲ, ತಮ್ಮ ಮಿತಿಗಳೊಳಗೆ ಅವನ್ನು ಪಾಲಿಸಿಯೂ ಇದ್ದಾರೆ. ಹೀಗಿದ್ದರೂ ಯುದ್ಧದ ಪರಿಸ್ಥಿತಿ ಬಂದೊದಗಿರುವುದು ಅರ್ಜುನನ್ನು ನಲುಗಿಸಿಬಿಟ್ಟಿದೆ. ಧರ್ಮಯುದ್ಧದ ಪ್ರತಿಯೋಗದ ಮುಂದೆ, ಅಪ್ರತಿಮ ಬಿಲ್ಲುಗಾರನಿಗೇ ಗುರಿ ಕಾಣದಾಗಿದೆ. ಇನ್ನು ಉಳಿದವರ ಪಾಡು?

ಒಂದು ರೀತಿಯಲ್ಲಿ ಇದೂ ಸರಿಯೇ. ಗಟ್ಟಿಯಾದ ತಿಳುವಳಿಕೆಯಲ್ಲಿ ಏಳುವ ದ್ವಂದ್ವಕ್ಕೂ, ಬರಿಯ ಅವಿವೇಕದ ಗೊಂದಲಕ್ಕೂ ಅಜಗಜಾಂತರ! ಸಾಮಾನ್ಯವಾಗಿ ಸತ್ಯ, ಧರ್ಮ, ಜ್ಞಾನ, ಜೀವನ ಎಲ್ಲವೂ ನದಿಗಳಂತೆ ಹರಡುತ್ತಾ, ಮತ್ತೆ ಸೇರುತ್ತಾ  ಸಾಗುವುದೇ ಹೆಚ್ಚು. ಆದರೆ ಅದು ಒಂದು ಮುಖ ಮಾತ್ರ. ಕೆಲವೊಮ್ಮೆ ಅಲ್ಲಲ್ಲಿ ನೆರೆಯುವುದು, ಇಂಗುವುದುಹುದುಗಿಹೋದರೂ ಬತ್ತದೆ ಮತ್ತೆಲ್ಲೋ ಅಗೆದಾಗ ಸೆಲೆಯೊಡೆಯುವುದೂ ಅಷ್ಟೇ ಮುಖ್ಯವಾದ ಇನ್ನೊಂದು ಮುಖ. ಅದಿಲ್ಲದಿದ್ದರೆ ಎಷ್ಟೇ ಹರಡಿದರೂ ಅವುಗಳ ಹರಹು ಸೀಮಿತವೇ. ಕೆಲವೊಮ್ಮೆ, ಅಸ್ತಿತ್ವವನ್ನೇ ಪಣವಿಟ್ಟು ಕಾಯುವುದಲ್ಲದೆ ಬೇರೆ ಗತಿಯಿಲ್ಲ. ಅಂಥ ಪರಿಸ್ಥಿತಿಯನ್ನು ಗುರುತಿಸುವ ಶಕ್ತಿ, ಒಳನೋಟ, ಅದಕ್ಕೆ ಶರಣಾಗುವ ಆರ್ಜವ ಅರ್ಜುನನಿಗಿತ್ತು.

ನಾಕಾರು ಕನಸಲ್ಲಿ ಮೂಕವಾಗಿದೆ ಮನ

ಏಕಾಗ್ರವಾದೀತೇ ಬತ್ತಳಿಕೆ? ಗುಡಿಯಲ್ಲಿ
ಸಾಕಾರವಾದೀತೇ ಮೆರವಣಿಗೆ?


ಎಲ್ಲ ದೃಷ್ಟಿಗಳೂ, ದರ್ಶನಗಳೂ ಒಂದು ಮಟ್ಟಿಗೆ ಕುರುಡೇ. ಆದರೆ ಅವುಗಳು ಬೆಳಕು ಚೆಲ್ಲುವವರೆಗೂ ನಡೆದು, ಅಲ್ಲಿಂದ ಮುಂದಿನ ಕತ್ತಲನ್ನೂ ಕಂಡಾಗಲೇ ಅವುಗಳಿಗೆ ಸಾರ್ಥಕ್ಯ. ಅಂಥ ಕತ್ತಲಿನ ಕಾಣ್ಕೆಯ ಮುಂದೆ ಮೌನವೇ ದಾರಿ.

ಮೋಡದ ಸೆರೆಯಿಂದ ಮಳೆಬಿಲ್ಲಿನೊಂದಿಗೆ
ಹಾಡಿದ ತುಂತುರು ಗಾನ! ಕೇಳಿದರೆ
ನೋಡದ ಕಡಲಿನ ಪಾನ!


ಇಲ್ಲಿಯವರೆಗಿನ ಕವನ ಅವತಾರದ ಹಿಂದಿನ ಪರಿಸ್ಥಿತಿಯ ಬಗೆಯಾದರೆ, ಇದು ಅವತರಣದ ಒಂದು synaesthetic ಚಿತ್ರಣ. ನೋಟ, ಕೇಳುವಿಕೆ, ಸ್ಪರ್ಶ, ರುಚಿ ಪ್ರತ್ಯಕ್ಷವಾಗಿಯೇ ಇರುವಾಗ ವಾಸನೆ ಪರೋಕ್ಷವಾಗಿದೆ ಎಂದುಕೊಳ್ಳೋಣ. ಅಲ್ಲದೆ, ಮಳೆಬಿಲ್ಲೂ, ತುಂತುರು ಹನಿಗಳೂ ಸೇರಿದಾಗ ಮೂಡುವುದು harpಇನ ಚಿತ್ರ.


ಶತತಂತ್ರಿಗಳ ಹಾಡು ಮಳೆಹನಿಗಳ ಹಾಡೇ. ಅವತರಣದ ಹಾಡು.


ದ್ವಂದ್ವದ ಸೆರೆಯಲ್ಲೇ, ಸೆರೆಯಿಂದಲೇ ಅವತಾರ. ಬಿಡುಗಡೆಯೂ ಅದರಿಂದಲೇ. ಅಲ್ಲಿಯವರೆಗೆ ಮುನ್ನಡೆಸಿದ ಶಕ್ತಿಗಳ ಕೈಮೀರಿದಾಗಲೇ, ಹೊಸ ಸೃಷ್ಟಿಯಾದೀತು. ಅದು ಒಂದು ಹಿನ್ನೆಲೆಯಿಂದ ಬಂದರೂ, ಆ ಹಿನ್ನೆಲೆಗಷ್ಟೇ ಬದ್ಧವಾಗಿರದೆ ಸಮಗ್ರ. ಹಿನ್ನೆಲೆಯನ್ನೇ ಮುನ್ನೆಲೆಯಾಗಿಸುವ ಶಕ್ತಿ.

ಒಂದು ನೆಲೆಯಲ್ಲಿ ಸ್ವನಿಷ್ಠವಾಗಿ ಕಂಡರೂ, ಅದು ಅನಂತ ಹರಿವಿನ ಭಾಗವೇ ಆಗಿದೆ. ಹರಿದು, ಇಂಗಿ, ಎಲ್ಲವನ್ನೂ ತಾಳಿ, ಕಾದು, ತಣಿದ ಮೇಲೆ ಸುರಿಯುವ ಮಳೆ. ಸೃಷ್ಟಿಶೀಲವಾದ, ಸೃಷ್ಟಿಶೀಲತೆಯದೇ ಅವತರಣ. ಕಡಲು ಕಾಣದಿದ್ದರೂ, ಅದರ ಅಮೃತವನ್ನು ಕುಡಿಯುವ ಭಾಗ್ಯ!

Creative Commons License
ಈ ಲೇಖನ Creative Commons Attribution-NonCommercial-NoDerivatives 4.0 International License ಮೂಲಕ ಲಭ್ಯವಿವೆ.

Comments

Popular posts from this blog

ನಿಸ್ವನ - ಮಳೆ

ನಿಸ್ವನ - ಜ್ಞಾನಸೂತಕ

Nisvana - Playlists