ಸರಸ್ವತೀ ತಾತ್ಪರ್ಯ

ಈ ಲೇಖನವು ಈಗ GitHubಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ.
---


ಕವನದ ಮೊದಲು ಅದರ ಛಂದಸ್ಸನ್ನು ಸ್ವಲ್ಪ ವಿವರಿಸಬೇಕೆನ್ನಿಸುತ್ತದೆ.

ಅಕ್ಷರಗಣಗಳ ವರ್ಣವತ್ತಗಳು ಮತ್ತು ಮಾತ್ರಾಗಣ ಛಂದಸ್ಸುಗಳು ಸಂಸ್ಕೃತ, ಪ್ರಾಕೃತಗಳಿಂದ ಬಂದು ಕನ್ನಡದವೇ ಆದವು. ಅಂಶಗಣ ಛಂದಸ್ಸುಗಳು ಮೊದಲಿನಿಂದಲೂ ಕನ್ನಡದವೇ. ಯಾಕೋ ಅಂಶಗಣ ಛಂದಸ್ಸುಗಳ ಬಳಕೆ ಸಮಕಾಲೀನ ಕವನಗಳಲ್ಲಿ ಕಡಿಮೆಯಾಗಿದೆ, ಆಗುತ್ತಿದೆ ಅಂತ ನನ್ನ ಅನಿಸಿಕೆ. ಸ್ವಲ್ಪ ಜಾನಪದವೆನ್ನಬಹುದಾದ ಶೈಲಿಯನ್ನು ಬಿಂಬಿಸುವ ಕಾರಣವೋ ಏನೋ. ಅದು ನನ್ನ ಸೀಮಿತ ಓದಿನ ತಪ್ಪು ಅಭಿಪ್ರಾಯವೂ ಇರಬಹುದು. ಏನೇ ಇರಲಿ, ನಾನಂತೂ ಅಂಶಗಣಗಳ ಸರಳ ಸೌಂದರ್ಯಕ್ಕೆ ಮಾರುಹೋಗಿದ್ದೇನೆ. ಅಂಶಗಣಗಳೊಳಗಿನ ಹದವಾದ ಎಳೆಯಾಟ ಕನ್ನಡಕ್ಕೆ ವಿಶೇಷ ಲಾಲಿತ್ಯವನ್ನು ಕೊಟ್ಟಿದೆ.

ಇಲ್ಲಿ ಬಳಸಿರುವ ಅಂಶಗಣ ಛಂದಸ್ಸು ಛಂದೋವತಂಸನಾಗವರ್ಮ ಹೇಳಿದಂತೆ, ಇದಕ್ಕೆ ಅಂಶಗಣಗಳ ನಾಲ್ಕು ಪಾದಗಳು. ಪ್ರತಿಯೊಂದು ಪಾದದಲ್ಲಿ 3 ವಿಷ್ಣುಗಣಗಳಾದಮೇಲೆ ಕಡೆಗೊಂದು ಬ್ರಹ್ಮಗಣ. ಆದರೆ ಪಾದಾಂತ್ಯದಲ್ಲಿ ಬ್ರಹ್ಮಗಣಗಳ ಏಕತಾನತೆ ತಪ್ಪಿಸಲಿಕ್ಕಾಗಿ, ಮೂರನೇ ಪಾದಾಂತ್ಯಕ್ಕೆ ವಿಷ್ಣುಗಣಾದೇಶಮಾಡಿ, ಪಾದವನ್ನು ಎರಡು ಭಾಗ ಮಾಡಿ, ಈ ಭಾಗಗಳು ಸರಿಯಾಗಿ ಕಾಣಿಸಲು ಬೇರೊಂದು ಅಂತ್ಯಪ್ರಾಸವನ್ನೂ ಅಳವಡಿಸಿದ್ದೇನೆ. ಹೀಗಾಗಿ ಇದು 5 ಪಾದಗಳ ಇಂಗ್ಲಿಷಿನ limerick ಆಗಿಯೂ ಕಾಣಿಸುತ್ತದೆ. ಅಂಶಗಣ ಛಂದಸ್ಸುಗಳಲ್ಲಿ ಅಲ್ಲಲ್ಲಿ ಬೇರೆ ಗಣಗಳ ಆದೇಶಕ್ಕೆ ಅವಕಾಶವಿರುವಾಗ ಅಂತಹಾ ಆದೇಶವನ್ನು ವ್ಯವಸ್ಥಿತವಾಗಿಸುವುದರಿಂದ ಹಾಗೂ ಆದಿಪ್ರಾಸವೇ ಮುಖ್ಯವಾಗಿ, ಅಂತ್ಯಪ್ರಾಸ ಗೌಣವಾಗಿರುವಾಗ, ಹೆಚ್ಚಿನ ಅಂತ್ಯಪ್ರಾಸದ ಬಳಕೆಯಿಂದ ತೊಂದರೆಯಿರಲಾರದೆಂದು ತಿಳಿದಿದ್ದೇನೆ. ಇದು ತಪ್ಪಾಗಿದ್ದಲ್ಲಿ ಕ್ಷಮೆಯಿರಲಿ.

ಅಂಶಗಣಗಳನ್ನು ಅಗತ್ಯವಿದ್ದಂತೆ ಎಳೆಯುವ ರೀತಿಯ ಪರಿಚಯವಿಲ್ಲದವರಿಗೆ ಒಂದು ಪಾದದ ಉದಾಹರಣೆ ಕೆಳಗಿದೆ. ಇಲ್ಲಿ ಪ್ರತಿ ಗಣವನ್ನು 6 ಮಾತ್ರಾಕಾಲದಷ್ಟು ಎಳೆಯಬೇಕು. ಪಾದಾಂತ್ಯದ ಬ್ರಹ್ಮಗಣವನ್ನು ಎಳೆಯದೆ ವಿರಮಿಸಿದರೆ ಮುಡಿ, ಪದ್ಮಗಣಗಳಂತೆ ಕೇಳಿಸಬಹುದು.

ಉದಾಹರಣೆಗೆ, ಈ ಕವನದ ಮೊದಲಿನ ಸಾಲನ್ನು ಹೀಗೆ ಓದಬಹುದು.

ಕಡಿದಾದಾ|ಕಣಿವೇಯಾ|ಬೆಣ್ಣೇಯೇ|ಕೆನೆಯೇ--|

ಇಲ್ಲಿ "|" ಗಣವಿನ್ಯಾಸವನ್ನು ತೋರಿಸುತ್ತದೆ. "-" ಒಂದು ಮಾತ್ರಾಕಾಲದ ವಿರಾಮವನ್ನು ತೋರಿಸುತ್ತದೆ.

ಇನ್ನು ಕವನದೆಡೆಗೆ ಹೊರಳೋಣ.

ಶೀರ್ಷಿಕೆಯೇ ಹೇಳಿದಂತೆ ಈ ಕವನದ ವಸ್ತು ಸರಸ್ವತೀ. ದೇವತೆಯಾಗಿಯೂ, ನದಿಯಾಗಿಯೂ. 

ದೇವತೆಯಾಗಿ, ನೇರವಾಗಿ ದೇವತೆಯೇ ಎಂದುಕೊಳ್ಳಬಹುದು. ಇಲ್ಲವೇ ಜ್ಞಾನದ ಅಧಿದೇವತೆಯಾಗಿ, ಜ್ಞಾನಮೀಮಾಂಸೆಯ ಪ್ರತಿಮೆ ಎನ್ನಲೂ ಬಹುದು. ಹೀಗೆ ಪರಿಗಣಿಸಿದಾಗ, ಜ್ಞಾನಮೀಮಾಂಸೆಯೊಂದಿಗೆ ಹಾಸುಹೊಕ್ಕಂತಿರುವ Darwin ಮಂಡಿಸಿದ ವಿಕಾಸವಾದಕ್ಕೂ, ಭೌತಶಾಸ್ತ್ರದ Quantum Theoryಗೂ, ಅದರಲ್ಲೂ, (ಬಹಳ ತಡವಾಗಿಯಾದರೂ) ಕಡೆಗೂ ಇತ್ತೀಚೆಗೆ ಬೆಳಕು ಕಾಣುತ್ತಿರುವ, Hugh Everettನ Many-worlds interpretationಇಗೂ ಪ್ರತಿಮೆಯಾಗಿದೆ.

ನದಿಯಾಗಿ, ಹಿಂದೊಮ್ಮೆ ಮಹಾನದಿಯಾಗಿದ್ದು ಆಮೇಲೆ ಬತ್ತಿಹೋದ ನದಿಯಾಗಿಯೂ, ಭಾರತೀಯ ಸಂಸ್ಕೃತಿಯ ತವರಾಗಿಯೂ ತೆಗೆದುಕೊಳ್ಳಬಹುದು.  ಇಷ್ಟಲ್ಲದೆ, ನದಿಯ ತವರುಮನೆಯಾದ ಹಿಮಾಲಯದ ಕಣಿವೆಯ, ಶಾರದಾದೇವಿಯ ನೆಲೆಯಾದ, ಈಗ ಆ ನದಿಯಂತೆಯೇ ಬತ್ತಿದ, ಕಾಶ್ಮೀರವೂ ಆಗಬಹುದು.

ಕಡಿದಾದ ಕಣಿವೆಯ ಬೆಣ್ಣೆಯೇ? ಕೆನೆಯೇ!
ಸಿಡಿಲಿನ ಕುಡಿಯ ಒಳನಂಜಿನ ಹನಿಯೇ!
ಕೊಡದಲ್ಲಿ ತುಳುಕಿದೆ.
ಬುಡದಲ್ಲಿ ಬಳುಕಿದೆ.
ನೋಡದ ಶಿಖರದ ಮಂಜಿನ ಖನಿಯೇ!

ಕಡಿತ/ಕಡಿಯುವಿಕೆ ಈ ಕವನದ ಹೆಚ್ಚಿನೆಲ್ಲ ವಸ್ತುಗಳ ಅಸ್ತಿತ್ವಕ್ಕೇ ಹತ್ತಿರವಾದ ಸಂಗತಿ. ವಿಕಾರವಾಗಿಯೂ, ಸಂಸ್ಕಾರವಾಗಿಯೂ. ಈ ಮಾತು ಜ್ಞಾನ, ವಿಕಾಸವಾದ, ಸರಸ್ವತೀ ನದಿ, ಶಾರದಾಪೀಠ, ಕಾಶ್ಮೀರ ಇತ್ಯಾದಿಗಳ ವಿಷಯದಲ್ಲಿ ಸ್ವಲ್ಪ ಹೆಚ್ಚು ಸ್ಪಷ್ಟವಾಗಿದ್ದರೂ, ಕೆಲವೊಮ್ಮೆ ಬೇರ್ಪಡುತ್ತಾ, ಕೆಲವೊಮ್ಮೆ ಮತ್ತೆ ಸೇರುತ್ತಾ ಇರುವ ಲೋಕಗಳ ಸರಮಾಲೆಗೂ ಸಂಗತ.

ಹೀಗಿರುವ ಇವುಗಳು, ಮೇಲುನೋಟಕ್ಕೆ ಸಿಗವಂಥವಲ್ಲ. ಅವುಗಳ ಒಳಗಿನ ರೂಪ ಬೇರೆಯೇ ಇದೆ. ಅವು ನಮಗೆ ದಕ್ಕಿದ್ದು ನಮ್ಮ ಕೊಡದಷ್ಟೇ. ನಮಗೆ ಕೊಡದಿರುವಲ್ಲಿ ತುಳುಕಿದ್ದೇ ಇನ್ನೂ ಹೆಚ್ಚು. ಅಲ್ಲದೆ, ಅವುಗಳ ಬುಡದಲ್ಲಿ, ನಾವು ಸಾಮಾನ್ಯವಾಗಿ ಗಟ್ಟಿ ಎಂದು ಭಾವಿಸುವುದು ಏನೂ ಇಲ್ಲ. ಇದು ನಮಗೆ ಕಾಣದಂಥ, ಕಾಣಲಾರದಂಥ ಗಟ್ಟಿತನ. ಬಗೆದು ಮುಗಿಯದ ಗಣಿ.

ಕಡಿದಾದ ಮೇಲೆ ಸಿಕ್ಕಿದ್ದು ಮಾತ್ರ ನಮಗೆ.

ಕರೆಯೊಂದೇ ಸಾಕಲ್ಲ, ಬೇರೇನೂ ಬೇಡ.
ಎರೆಯುವ ಹೊತ್ತಿಗೆ ಕರದಲ್ಲೂ ಕೂಡ,
ನೆರೆಯಲ್ಲಿ ನೊರೆಯಾಗಿ,
ಕೆರೆಯಲ್ಲಿ ಸೆರೆಯಾಗಿ,
ಮರುಭೂಮಿಯೊಳಗೇನೇ ಅಡಗಿದೆ ನೋಡ!

ದೇವಿಯಾಗಿ, ನದಿಯಾಗಿ ಅರ್ಥ ಸ್ಪಷ್ಟವಾಗಿಯೇ ಇದೆ. ಜ್ಞಾನಮೀಮಾಂಸೆಯ, ವಿಕಾಸವಾದದ, many-worlds ನೆಲೆಯಲ್ಲಿ ನೋಡಿದಾಗ, ಕರೆಯ ಅಂಚು ಎನ್ನುವ ಅರ್ಥ ಮುಖ್ಯವಾಗುತ್ತದೆ. ಇವೆಲ್ಲವೂ ಬೇಲಿಯನ್ನೇ ಹೊಲವಾಗಿ ಉಳುವಂಥವು. ನೇರವಾಗಿರದೆ, ಎಡೆತಡೆಗಳಿಗೆ ಮೈಯೊಡ್ಡಿಯೇ ಹರಿಯುವಂಥವು. ಮತ್ತೆ, ಇವುಗಳಿಗೆ ಬೇರೆ ಏನೂ ಬೇಡ ಮಾತ್ರವಲ್ಲ. ಬೇರೂ ಏನೂ ಬೇಡ. ಎಲ್ಲಿಂದ ಆರಂಭ ಎನ್ನುವುದು ಮುಖ್ಯವಲ್ಲ. ಇಲ್ಲಿ ಹೆಚ್ಚಿನ ಕೆಲಸ ನಮ್ಮಿಂದ ಅಡಗಿಯೇ ಆಗುವಂಥದ್ದು.

ಈಗಿನ ಕಾಶ್ಮೀರದ ನೆಲೆಯಲ್ಲಿ ನೋಡಿದರೆ, ಕೆರೆ ಶ್ರೀನಗರದ್ದು. ಈ ಕೆರೆಗೆ ಇಡೀ ದೇಶದ ಭವಿಷ್ಯವೇ ಸೆರೆಯಾಗಿದೆ. ಹುದುಗಿಹೋಗಿದೆ.

ಬಾನೆಲ್ಲ ಹರಡಿ ಕೋಲ್ಮಿಂಚಿನ ಮಾಲೆ,
ಆನೆಗೆ ಅಂಕುಶ, ಟಂಕದ ಸಾಲೆ.
ಮಾನವ ಕಾಡಿದ
ದಾನವ ಮಾಡಿದ
ತಾನವನಡಗಿಸುವಂಥಾ ಕರೆಯೋಲೆ!

ವಿದ್ಯುನ್ಮಮಾಲಾ, ಮಹಾಂಕುಶಾ
 ಸರಸ್ವತೀ ಅಷ್ಟೋತ್ತರ ಶತನಾಮಾವಳಿಯಲ್ಲಿ ಬರುವ ಹೆಸರುಗಳು. ಜ್ಞಾನಮೀಮಾಂಸೆ, ವಿಕಾಸವಾದ, Quantum Theoryಯ ಬಹುಲೋಕಗಳೂ ಹೀಗೆ ಮಿಂಚಿನಂತೆ ಹೊಳೆಯುತ್ತಾ ಬಾನೆಲ್ಲಾ ಹರಡುವವೇ. ಆದರೆ ಈ ಸ್ವಚ್ಛಂದವಾದ ಹರಡುವಿಕೆಯಷ್ಟೇ ಮುಖ್ಯವಾದ ಅದನ್ನು ಅಂಕೆಯಲ್ಲಿಡುವ ಅಷ್ಟೇ ನಿಷ್ಠುರವಾದ ಅಂಕುಶವೂ ಪ್ರತಿಯೊಂದರೊಳಗೂ ಇದೆ. ಜ್ಞಾನಮೀಮಾಂಸೆಯಲ್ಲಿ ನ್ಯಾಯದರ್ಶನ ಸಮ್ಮತವಾದ ಭಾಷ್ಯೆ, ಟೀಕೆಗಳ ಪರಂಪರೆ. ವಿಕಾಸವಾದದಲ್ಲಿ natural selection. Many-worlds interpretationನಲ್ಲಿ quantum entanglement, quantum decoherence. ಇವು ಮಹಾಂಕುಶಗಳು.

ಈ ಪ್ರಕ್ರಿಯೆಯಲ್ಲಿ ಒಂದು economy (ಟಂಕಸಾಲೆ) ಇದೆ. ಇಂಥಾ ಅಂಕುಶವೇ ಟಂಕಸಾಲೆ. ಟಂಕಸಾಲೆಯೇ ಅಂಕುಶ. ಈ ಮಾತು ಕಾಶ್ಮೀರದ ತೊಂದರೆಯ ವಿಷಯದಲ್ಲೂ ಸಂಗತ!

ಮಾನವ, ದಾನವ ಶಬ್ದಗಳು ಬಳಕೆಯಿಂದ ಸ್ವಲ್ಪ ಸವಕಲಾಗಿದ್ದರೂ ದೇವಿಯ ನೆಲೆಯಿಂದ ಅರ್ಥಪೂರ್ಣವೇ ಆಗುತ್ತವೆ. ಇಲ್ಲಿ ದೇವಿ ನಮ್ಮೊಳಗಿನ ತಾನು ಅವನು ಎನ್ನುವುದನ್ನು ಅಡಗಿಸುವ ಶಕ್ತಿ. ಕಾಶ್ಮೀರದ ನೆಲೆಯಲ್ಲೂ ಸಹ. ಇತ್ತೀಚಿನ article 370 amendment ಕೂಡ ಅಂಥಾ ಕರೆಯೋಲೆಯೇ.

Quantum theoryಯಲ್ಲಿ ಒಂದು ಜ್ಞಾನಮೀಮಾಂಸೆಯ ದುರಂತ ದಶಕಗಳ ಕಾಲ ಮೆರೆದು ಈಗಲೂ ಸಾಕಷ್ಟು ಪ್ರಬಲವಾಗಿಯೇ ಇದೆ. ಅದು Copenhagen Interpretation. Copenhagen ಅದರ ಮುಖ್ಯ ರೂವಾರಿಯಾದ Danish physicist Niels Bohrನ ಊರು. Many-worlds interpretation, Copenhagen interpretationನ wave-particle duality, wave function collapse, measurement problem (ಮಾನವ ಕಾಡಿದ) ಮುಂತಾದವುಗಳ ಬಗೆಗಿನ ನಿರರ್ಥಕ ತಾನಗಳನ್ನು ಅಡಗಿಸುವಂಥ ಕರೆಯೋಲೆ.

ಹಸಿರಿನ ಹಂದರಕೆ ಹೂವಿನ ಮೋಡಿ.
ಕೆಸರಿನ ಕೆರೆಯಲ್ಲೂ ಸೆಲೆಗಳು ಮೂಡಿ,
ಉಸಿರಾಗಿ ಕಡಲಿಂದ,
ಬಸಿರಿನ ಒಳಗಿಂದ,
ಪಿಸುಗುಟ್ಟಿದಂತಿದೆ ಅಸರಂತವು ಹಾಡಿ.

ಬೇರೆ ಬೇರೆ ನೆಲೆಗಳಲ್ಲಿ ಹೀಗೆ ಹಸಿರಾಗಿರುವ ಈ ದೈವೀ ಪ್ರಕ್ರಿಯೆ, ತನ್ನ ಹಂದರವನ್ನು ಅಡಗಿಸಿಯೇ ಇಟ್ಟು, ಅದರ ಹೂಗಳನ್ನು ಮಾತ್ರ ತೋರಿಸುತ್ತಿದೆ. ಅದರ ಹಂದರಕ್ಕೂ, ಹೂಗಳಿಗೂ (ತಾವರೆ), ಕೆಸರು ಅತ್ಯಗತ್ಯ. ಅಲ್ಲಲ್ಲಿ ನಿಂತ ಕೆರೆಗಳ ಹಂದರವೇ ಹೂಬಿಟ್ಟು ಎಲ್ಲೆಡೆಯೂ ಹರಡಿದಂತಿವೆ. ಇದು ಲೋಕದ ಉಸಿರೂ ಹೌದು. ಬಸಿರೂ ಹೌದು. ಅದರೊಳಗಿರುವ ನಮಗೆ ಅದು ಪಿಸುನುಡಿದು ಹಾಡಿದಂತಿದೆ. ಎಲ್ಲೆಲ್ಲೂ ಹಾಡಿಯಂತಿದೆ.

Creative Commons License
ಈ ಲೇಖನ Creative Commons Attribution-NonCommercial-NoDerivatives 4.0 International License ಮೂಲಕ ಲಭ್ಯವಿವೆ.

Comments

  1. ಹೊಸಬಗೆಯ ಚಂಪೂ.
    ಆಳವಾದ ವ್ಯಾಖ್ಯಾನದ ನೆರವು ಮಗುವನ್ನು ಅನುಸರಿಸುವ ತಾಯಿಯಂತಿದೆ! ಅದು ಮಗುವಿನ ಹಕ್ಕು ಕೂಡಾ. ನದಿ ಎಲ್ಲವನ್ನೂ ಪ್ರತಿಫಲಿಸುತ್ತದೆ. ಆ ಪ್ರತಿಫಲನದಲ್ಲಿ ಆಯ್ಕೆಗಳಿಲ್ಲ. ಆದುದರಿಂದಲೇ ಕವನವು ಸಂಕೀರ್ಣವಾಗುವುದು. ಆಯ್ಕೆಗಳಿಲ್ಲದ ಸ್ಥಿತಿ ಅತ್ಯಂತ ಸರಳವಾಗಿಯೂ, ಅದೇ ಅತ್ಯಂತ ಸಂಕೀರ್ಣವಾಗಿ ಕಾಣುವುದು ನಮ್ಮ ನೀರಿನ ಹೊಯ್ದಾಟ. ಪದ್ಯ ಗದ್ಯ ಎರಡೂ ಎರಡೂ ಇಷ್ಟವಾಯಿತು.

    ReplyDelete

Post a Comment

Popular posts from this blog

ನಿಸ್ವನ - ಮಳೆ

ನಿಸ್ವನ - ಜ್ಞಾನಸೂತಕ

Nisvana - Playlists