ನಿಸ್ವನ - ಎಲ್ಲ ಮಲಗಿರುವಾಗ
- ಕವನ: ಕೆ ಎಸ್ ನರಸಿಂಹಸ್ವಾಮಿ
- ಕವನದ ಕಾಪೀರೈಟ್ ಕೃಪೆ: ಕೆ ಎಸ್ ನರಸಿಂಹಸ್ವಾಮಿ ಪ್ರತಿಷ್ಥಾನ (ಡಾ|| ಮೇಖಲಾ ವೆಂಕಟೇಶ್, ವ್ಯವಸ್ಥಾಪಕ ಟ್ರಸ್ಟಿ)
- ರಾಗಸಂಯೋಜನೆ/ಗಾಯನ: ಅಂಶುಮಾನ್ ಕೆ ಆರ್
- ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್
- ಗಿಟಾರ್: ಡಿ ಶ್ರೀನಿವಾಸ್ ಆಚಾರ್ (ಗಿಟಾರ್ ಶ್ರೀನಿವಾಸ್)
- ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
- ಬಾನ್ಸುರೀ/ಕೊಳಲು: ರಘುನಂದನ್ ರಾಮಕೃಷ್ಣ
- ಕೀಬೋರ್ಡ್: ಟೋನಿ ಮ್ಯಾಥ್ಯೂ
- ರಿದಮ್ ಪ್ಯಾಡ್: ವರದರಾಜ್
- ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್
ಕೆ ಎಸ್ ನರಸಿಂಹಸ್ವಾಮಿಗಳ "ಎಲ್ಲ ಮಲಗಿರುವಾಗ" ಎಂಬ ಈ ಕವನ, ಅವರ "ನವಿಲ ದನಿ" ಸಂಕಲನದಲ್ಲಿದೆ.
ಈ ಹಾಡಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೋಹನ, ಹಂಸಧ್ವನಿ, ಸುರನಂದಿನಿ, ತುಸುವಾಗಿ ಯಮನ್ ಕಲ್ಯಾಣಿ, ಮೋಹನ ಕಲ್ಯಾಣಿ ರಾಗಗಳು ಹಾಸುಹೊಕ್ಕಾಗಿವೆ.
ಇಡೀ ಕವನ ಹೀಗಿದೆ.
ಎಲ್ಲ ಮಲಗಿರುವಾಗ
೧
ಎಲ್ಲ ಮಲಗಿರುವಾಗ ಎಚ್ಚರಾಯಿತು ನನಗೆ,
ಕಣ್ತುಂಬ ಹೊಂಗನಸು ಬೆಳಗಿನಲ್ಲಿ;
ಎಲೆ ಮರೆಯ ಹಕ್ಕಿ ಹಾಡಿತ್ತು, ಹನಿಗಳು ಬಿದ್ದು
ಹೂವ ಹೊಳೆ ಹರಿದಿತ್ತು ಕಾಡಿನಲ್ಲಿ.
೨
ಬೆಳಗಾಗ ಬಿರಿದ ಮೊಗ್ಗುಗಳು ಸಂಜೆಗೆ ಬಾಡಿ
ಸತ್ತ ಹೂಗಳ ರಾಶಿ ಲತೆಯ ಕೆಳಗೆ;
ತೆರೆದ ಪುಸ್ತಕದಂತೆ ಬದುಕು, ಮಳೆಬಿಲ್ಲಿನಲಿ
ನಾ ಕಂಡೆ ಹರುಷವನು ಮುಗಿಲ ಕೆಳಗೆ.
೩
ಕೇಂದ್ರಬಿಂದುವಿಗೆ ಹತ್ತಿರವೊ ದೂರವೊ ಕಾಣೆ,
ಬೀಸುತ್ತಲೇ ಇತ್ತು ಮಂದಪವನ;
ಕಿಟಕಿಯನು ಮುಚ್ಚಿದರೆ ತೆರೆದಿತ್ತು ಬಾಗಿಲು,
ಬಲು ಸೂಕ್ಷ್ಮ ಜೀವನದ ಚಲನವಲನ!
೪
ಹಾಡಿನೀಚೆಗೆ ನೋವು ಕಾಡುತ್ತಲೇ ಇತ್ತು
ಬಾಯಿ ಮುಚ್ಚಿತ್ತೆನಗೆ, ಕಣ್ಣ ತೆರೆದೆ;
ಗೋಧೂಳಿಯಲ್ಲಿ ಹಸುಕರುಗಳನು ನಾ ಕಂಡೆ,
ನಡೆದದ್ದು ನಿಜವೆಂದು ಪದ್ಯ ಬರೆದೆ.
೫
ನನ್ನ ಜೊತೆಗೂ ಬರುವ ಬೀದಿ ಮಕ್ಕಳ ಕಂಡೆ,
ಅವು ನಕ್ಕ ನಗೆ ದೇವರೆಂದುಕೊಂಡೆ;
ಹಸೆಯ ಮೇಲಿನ ಹೊಸತು ಜೋಡಿಯನು ನಾ ಕಂಡೆ,
ಇವರ ದೇವರು ಒಲವು ಎಂದುಕೊಂಡೆ!
- ಕೆ ಎಸ್ ನರಸಿಂಹಸ್ವಾಮಿ
ನವಿಲ ದನಿ
ಮಲ್ಲಿಗೆಯ ಮಾಲೆ, ಪುಟ 541
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.
Comments
Post a Comment