ನಿಸ್ವನ - ಕಣ್ಣನೀರ ಹನಿ - ಇಂದ್ರನೀಲಮಣಿ

ನಿಸ್ವನದ ಭಾಗವಾಗಿ...


ಲಕ್ಷ್ಮೀಶ ತೋಳ್ಪಾಡಿಯವರ 'ಅಹಲ್ಯೆ' ಗೀತರೂಪಕದ ನಾಂದೀ ಪದ್ಯದ ವಿಸ್ತೃತರೂಪವಾದ ಈ ಹಾಡು, ಭಾವಗೀತೆಯಾಚೆಗಿನ ಹೂವು.

ಇಲ್ಲಿ, ಗ್ರಹಭೇದದಿಂದ ಸಿಗುವ ಮೇಳಕರ್ತಗಳ ಜನ್ಯರಾಗಗಳನ್ನು ಬಳಸಿ, ಷಡ್ಜಶ್ರುತಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ನಳಿನಕಾಂತಿ, ಪಂಚಮಶ್ರುತಿಯಲ್ಲಿ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತದ ರಾಗೇಶ್ರೀ ಹಾಗೂ ಗೋರಖ್ ಕಲ್ಯಾಣ್ ರಾಗಗಳ ಗಾಯನವನ್ನು, Jazz-ಶೈಲಿಯ ಗಿಟಾರ್ ಸ್ವರಮಂಡಲದಂತೆ ಹಾಗೂ ವೀಣೆ, ಹದವಾಗಿ ಅನುಸರಿಸುತ್ತವೆ.

ಇಡೀ ಕವನ ಹೀಗಿದೆ.

ಕಣ್ಣನೀರ ಹನಿ - ಇಂದ್ರನೀಲಮಣಿ

ಕಣ್ಣನೀರ ಹನಿ ಇಂದ್ರನೀಲಮಣಿ

ತಾವರೆಯ ಕಂಗಳಲ್ಲಿ

ಆರ್ತಗದ್ಗದವೆ ಗಮಕವಾದೀತು

ಶ್ರುತಿಶುದ್ಧ ಕಂಠದಲ್ಲಿ

ಶಿವವ್ಯೋಮಕೇಶ ಅದು ಎಂಥ ಪಾಶ

ಆ ವ್ಯೋಮದಲ್ಲಿ ಚಂದ್ರ

ರುದ್ರ ನೆತ್ತಿಯಲಿ ಕ್ಷುದ್ರನಾಗುವನೆ

ಸುರಿಸುವನು ನಿತ್ಯ ಜೊನ್ನ.

ಮೊಲೆಹಾಲು ಹನಿಯ ಹನಿಹನಿಗೆ ತಣಿಯ

ಗೋಕುಲದ ಪುಟ್ಟಕಂದ

ಕಟವಾಯಿಯಲ್ಲಿ ವಿಷವಿಳಿದು ಹೋಗೆ

ಪೂತನಿಗೆ ತಾಯ್ತನವ ತಂದ.

ಹೆಣ್ಣುಜಿಂಕೆಯ ಕಣ್ಣ ತಣ್ಣನೆಯ ಬಟ್ಟಲಲಿ

ಭಯವೆ ಅಚ್ಚರಿಯಾಗಿ ಬೆಳೆದು

ಹುಲ್ಲೆಸಳ ತುದಿಯ ಇಬ್ಬನಿಯ ಧ್ಯಾನದಲಿ

ಆಗಸವೆ ಇಳಿದು ಬಂದು

ನಮ್ಮ ಸಮಯಕ್ಕೆ ಕವಿಸಮಯ ಬರಲಿ

ವಿಸ್ಮಯವೆ ತುಳುಕಲಲ್ಲಿ

ಹಂಬಲದ ಹೊಕ್ಕುಳಲಿ ಮೊಗ್ಗಾದ ತಾವರೆಗೆ

ಇಂಬೆಲ್ಲಿ? ಕೆಸರಲ್ಲಿ? ಮಿತ್ರಕಿರಣದಲ್ಲಿ?

- ಲಕ್ಷ್ಮೀಶ ತೋಳ್ಪಾಡಿ

'ಅಹಲ್ಯೆ' ಗೀತರೂಪಕದ ನಾಂದೀ ಪದ್ಯದ ವಿಸ್ತೃತರೂಪ


Creative Commons License
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.

Creative Commons License
These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.

Comments

Popular posts from this blog

ನಿಸ್ವನ - ಮಳೆ

Nisvana - Playlists

ನಿಸ್ವನ - ನನ್ನ ನಿನ್ನ ಲೋಕ