ನಿಸ್ವನ - ಚೈತ್ಯಾಲಯ




  • ಕವನ: ಅಂಬಿಕಾತನಯದತ್ತ
  • ಕವನದ ಕಾಪೀರೈಟ್ ಕೃಪೆ: ಪುನರ್ವಸು ಬೇಂದ್ರೆ
  • ರಾಗಸಂಯೋಜನೆ/ಗಾಯನ/ವೀಣೆ: ಅಂಶುಮಾನ್ ಕೆ ಆರ್
  • ಸ್ಟೂಡಿಯೋ/ವಾದ್ಯಸಂಯೋಜನೆ: ಹೇಮಂತ್ ಕುಮಾರ್
  • ಬಾನ್ಸುರೀ: ಆನಂದ ಪ್ರಸನ್ನ ಪಟ್ಟನಾಯಕ್ (Flute Butto)
  • ತಾಳವಾದ್ಯ: ಬಿ ಎಸ್ ವೇಣುಗೋಪಾಲ್ ರಾಜು (ತಬಲಾ ವೇಣು)
  • ಕೀಬೋರ್ಡ್: ಟೋನಿ ಮ್ಯಾಥ್ಯೂ (Tony Mathew)
  • ಸಿತಾರ್: ಸುಬ್ರಹ್ಮಣ್ಯ ಹೆಗಡೆ
  • ಧ್ವನಿತಂತ್ರಜ್ಞಾನ: ಬಾಲಕೃಷ್ಣ ರಾವ್

ಈ ಹಾಡು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಜಂಜೂಟಿ ರಾಗದಲ್ಲಿದೆ.

ಇಡೀ ಕವನ ಹೀಗಿದೆ.

ಚೈತ್ಯಾಲಯ

ಶಿವನುಂಡ ನಂಜು ತಿಳಿಗೊಂಡು ಮಂಜು-

ಮಂಜಾಗಿದೆ ಈ ಸಂಜಿಗೆ.

ಇದು ಉಷಾಮಿಷದ ಪೊಸನೇಹ ಸೇರಿ ಕಳೆ

ಏರಿದೆ ಹುರಿಮಂಜಿಗೆ.

ಭೌಮಾತ್ಮಭೂತಿ ಚೈತನ್ಯದೂತಿ, ಊ-

ರ್ಜಿತದಾ ಸಿರಿವಂತಿಗೆ.

ಕಥಕ್ಕಳಿಯ ಪುತ್ಥಳಿಯೆ! ಪೃಥಕ್ ಥತ್

ತಳಿಸಿದೆ ಜೀವಂತಿಗೆ.

ಜಡೆತುಂಬ ಕಣ್ಣು, ಇದು ಯಾವ ಹೆಣ್ಣು? ಮಾ-

ಪ್ರಾಣದ ಸ್ಯಾವಂತಿಗೆ!

ಯಾವ ಅಚ್ಚರಸಿ? ಯಾವ ಋಷಿಯರಸಿ?

ಯಾವ ಭಾವರಸಿ?

ಯಾವ ಘಟ್ಟದಲಿ? ಯಾವ ಪಟ್ಟದಲಿ?

ಯಾವ ಮುಹೂರ್ತವಿರಿಸಿ?

ಯಾವ ನಕ್ಷತ್ರ? ಯಾವ ಸುಕ್ಷೇತ್ರ?

ಯಾವ ಪಾತ್ರ ಧರಿಸಿ?

ಝಂಝಣಣ ಝಣಣ, ಝಂಝಣತ್ ಝಣಣ, ಜೀ-

ವಾಣುವೃಂದ ಮೆರೆಸಿ,

ಛಂದ ಛಂದ ನವಬಂಧ ಪಡೆದು ಬಂ-

ದಿಹವು ಹಳತ ಮರೆಸಿ.

ಛಿಳಿಲ್ ಛಿಟಿಲೆಂದು ಭುಕ್ಕ್ ಭುಗಿಲೆಂದು

ತಟಿತ್ ತಟ್ಟಿತೆಂದೂ

ಕಣ್ಣಮುಚ್ಚಣಿಕೆ ಕಣ್ಣ ತೆರೆವಣಿಕೆ

ಕಣ್ಣಕಟ್ಟಿತೆಂದೂ

ನವೋನವದ ಭವಭವದ ತವದ ವೈ

ಭವದ ಒಟ್ಟಿತಂದು

ಕುರುಡು ಬಯಲಿಗಿಗೊ ಕಣ್ಣು ಬರೆವ ಕೈ-

ವಾಡ ಚಿಗುರ್ತಿಂದು

ದುಂದುದುಂದು ದುಂದುಭಿಸುತಿಹುದು ಇಕೊ

ಹಲವು ಮುಖದಲೊಂದು.

ಬಾರೋ ಇಲ್ಲಿ ಬೈರಾಗಿ ಬಾರೊ, ಬಾ

ಇಲ್ಲಿದೆ ತಂಗುವ ಸ್ಥಲಾ-

ತಣಿವನರಿಯದೇ ದಣಿದುಹೋದೆ, ಬಾ

ಇಲ್ಲಿದೆ ಇಂಗದ ಜಲಾ-

ಏಕೆ ರೋಸಿ, ಭಯಗೊಂಡು ಹೇಸಿ, ನೀ,

ಆಕ್ರೋಶಿಸುತಿಹೆ ಎಲಾ!

ಶಿವದ ಭಕ್ತಿಗವತಾರಶಕ್ತಿಗಿಗೊ

ಇದುವೇ ಇಂಗಿತವಲಾ!

ಬ್ರಹ್ಮಸ್ಫುರಣಕೆ ಮರಣವೆಂತು? ಅದು

ಅದುವೇ ಅಮೃತದ ಬಲಾ.

ಹಿಮಾಲಯದ ಒಳಬಸಿರಲೆ ಕೊರೆದಿದೆ

ಯಾವುದೊ ಬ್ರಹ್ಮಾಭಯಾ-

ಚಿತ್ರನೇತ್ರಗಳು ಉನ್ಮೀಲಿಸುತಿವೆ

ಓಹೊ ತಾರಕಾಮಯಾ!

ಸೃಷ್ಟಿಯ ಕಲೆಯಾ, ಮಾಯೆಯ ಬಲೆಯಾ

ಬೀಸಿದೆ ಉದಯದ ನಯಾ

ಅರವಿಂದ ಮಿಂದ ಅರವಿಂದ ಗಂಧ ಅರಿ-

ವಿಂದಲೆ ಬಂದಿದೆ ಜಯಾ.

ಚಿತ್ತಚಿತ್ತಗಳ ಪಾತ್ರ ಕುಣಿಯುತಿವೆ

ಕಟ್ಟಿದೆ ಚೈತ್ಯಾಲಯ.

- ಅಂಬಿಕಾತನಯದತ್ತ    

ಚೈತ್ಯಾಲಯ: 51

ಪ್ರಕಾಶನ: 1957

Creative Commons License
ಈ ಹಾಡುಗಳೆಲ್ಲವೂ Creative Commons Attribution-NonCommercial-NoDerivatives 4.0 International License ಹಾಗೂ standard YouTube license ಮೂಲಕ ಲಭ್ಯವಿವೆ. ಕವನದ Copyright ಇದರಲ್ಲಿ ಒಳಗೊಂಡಿಲ್ಲ.

Creative Commons License

These songs are licensed under a Creative Commons Attribution-NonCommercial-NoDerivatives 4.0 International License and standard YouTube license. This does not include the copyright on the poem.

Comments

  1. ಆಕರ್ಷಕ ರಾಗ ಸಂಯೋಜನೆ ಹಾಗೂ ಭಾವಪೂರ್ಣ ಮಧುರ ಗಾಯನ.ಅಭಿನಂದನೆಗಳು.

    ReplyDelete
  2. Nice collection... Bendre came in front of me..

    ReplyDelete

Post a Comment

Popular posts from this blog

ನಿಸ್ವನ - ಮಳೆ

Nisvana - Playlists

ನಿಸ್ವನ - ನನ್ನ ನಿನ್ನ ಲೋಕ