ಕನ್ನಡದ ಭಕ್ತಿ - ದ್ರಾವಿಡಭಾಷೆಗಳ ವಿಶೇಷಸ್ವರಗಳು
ಈ ಲೇಖನವು ಈಗ GitHubಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ.
---
ಕನ್ನಡದ ಭಕ್ತಿಯನ್ನು ಮುಂದುವರೆಸುತ್ತಾ...
ಪ್ರಸ್ತಾವನೆ
ಭಾರತೀಯ ಭಾಷೆಗಳ ವರ್ಣಮಾಲೆಗಳಲ್ಲಿ ಬಹಳಷ್ಟು ಸಮಾನಾಂಶಗಳು ಕಾಣುತ್ತವೆ. ಸ್ವರಗಳು (vowels), ಯೋಗವಾಹಗಳು, ವರ್ಗೀಯ ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದೇ ಹೆಚ್ಚಿನ ಭಾಷೆಗಳ ವರ್ಣಮಾಲೆಗಳು ಸಂಯೋಜಿತವಾಗಿವೆ. ಸಂಸ್ಕೃತವ್ಯಾಕರಣಶಾಸ್ತ್ರದ ಪ್ರಭಾವ ಇತರ ಭಾಷೆಗಳ ಮೇಲೆ ಸಾಕಷ್ಟು ಆಗಿರುವುದೇ ಇದಕ್ಕೆ ಕಾರಣವೆನ್ನಬಹುದು. ಅಷ್ಟಲ್ಲದೆ, ಈ ಎಲ್ಲ ಭಾಷೆಗಳ ವರ್ಣಮಾಲೆಗಳಲ್ಲಿ ಹಲವು ವರ್ಣಗಳೂ ಸಮಾನವಾಗಿಯೇ ಇವೆ. ಭಾರತೀಯ ಲಿಪಿಗಳ ವರ್ಣಗಳು ಅಕ್ಷರೋಚ್ಚಾರಣೆಗೆ ಹತ್ತಿರವಾಗಿರಲು (phonetic) ಪ್ರಯತ್ನಿಸುತ್ತವಷ್ಟೇ. ಆದರೆ ಯಾವ ಲಿಪಿಯೂ ಅಕ್ಷರೋಚ್ಚಾರಣೆಯನ್ನು ಪೂರ್ತಿಯಾಗಿ ಬಿಂಬಿಸುವುದು ದುಃಸಾಧ್ಯ. ಹಾಗಿದ್ದರೂ, ಭಾರತೀಯಭಾಷೆಗಳ ಅಕ್ಷರೋಚ್ಚಾರಣೆಯಲ್ಲೂ ಬಹಳ ಸಾಮ್ಯವಿರುವುದನ್ನು ಅಲ್ಲಗಳೆಯಲಾಗದು.
ಸ್ಥೂಲವಾಗಿ ಹೀಗೆನ್ನಬಹುದು.
- ಅ, ಆ, ಇ, ಈ, ಉ, ಊ, ಏ, ಐ, ಓ, ಔ - ಸಾಮಾನ್ಯ ಸ್ವರಗಳು
- ಅಂ - ಸಾಮಾನ್ಯ ಅನುಸ್ವಾರ
- ಕ, ಗ, ಙ, ಚ, ಜ, ಞ, ಟ, ಡ, ಣ, ತ, ದ, ನ, ಪ, ಬ, ಮ - ಸಾಮಾನ್ಯ ವರ್ಗೀಯ ವ್ಯಂಜನಗಳು
- ಯ, ರ, ಲ, ವ, ಸ, ಳ - ಸಾಮಾನ್ಯ ಅವರ್ಗೀಯ ವ್ಯಂಜನಗಳು
ಬೇರೆ ಬೇರೆ ಭಾಷೆಗಳಲ್ಲಿ ಇವಕ್ಕೂ ಹೆಚ್ಚಿನ ಇತರ ವರ್ಣಗಳೂ, ಅಕ್ಷರಗಳೂ ಇರಬಹುದು. ಉದಾಹರಣೆಗೆ, ಸಂಸ್ಕೃತದಲ್ಲಿ ऋ, ऋ, ऌ, ॡ, ಅಃ, ಖ, ಘ, ಛ, ಝ, ಠ, ಢ, ಥ, ಧ, ಫ, ಭ, ಶ, ಷ, ಹಗಳು ಕಾಣಿಸುತ್ತವೆ. ಸಂಸ್ಕೃತಪದಗಳು ಇತರ ಭಾಷೆಗಳಲ್ಲೂ ಬಹಳ ಉಪಯೋಗವಾಗುವುದರಿಂದ, ಈ ವರ್ಣ, ಅಕ್ಷರಗಳು, ಅವು ಸ್ವಾಭಾವಿಕವಾಗಿ ಇರದ ಭಾಷೆಗಳಲ್ಲೂ, ಕಾಣಿಸುತ್ತವೆ.
ಹಾಗೆಯೇ, ಕೆಲವು ವರ್ಣ, ಅಕ್ಷರಗಳು ದ್ರಾವಿಡಭಾಷೆಗಳಲ್ಲಿ ಮಾತ್ರ ವಿಶೇಷವಾಗಿ (ಕೆಲವೊಮ್ಮೆ ಕೆಲವು ದ್ರಾವಿಡಭಾಷೆಗಳಲ್ಲಿ ಮಾತ್ರ) ಕಂಡುಬಂದು, ಇತರ ಭಾರತೀಯ ಭಾಷೆಗಳಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ. ಇವುಗಳಲ್ಲಿ ಸ್ವರಗಳೂ ಇವೆ (ಹ್ರಸ್ವ ಎಕಾರ, ಹ್ರಸ್ವ ಒಕಾರ, ಅರ್ಧ ಎಕಾರ, ಅರ್ಧ ಉಕಾರ ಇತ್ಯಾದಿ), ವ್ಯಂಜನಗಳೂ ಇವೆ (ಶಕಟರೇಫ/ಅಱ/ಱಕಾರ, ಱಳ/ೞಕಾರ ಇತ್ಯಾದಿ). ಇಂತಹ ಕೆಲವು ಅಕ್ಷರಗಳಿಗೆ ಆಯಾ ಭಾಷೆಗಳ ಲಿಪಿಗಳಲ್ಲಿ ತಕ್ಕುದಾದ ವರ್ಣಗಳಿದ್ದರೆ (ಉದಾಹರಣೆಗೆ, ಹ್ರಸ್ವ ಎಕಾರ, ಹ್ರಸ್ವ ಒಕಾರ, ಶಕಟರೇಫ/ಅಱ/ಱಕಾರ, ಱಳ/ೞಕಾರ), ಕೆಲವಕ್ಕೆ ತಕ್ಕುದಾದ ವರ್ಣಗಳು ಕಾಣುವುದಿಲ್ಲ (ಉದಾಹರಣೆಗೆ, ಅರ್ಧ ಎಕಾರ, ಉಕಾರ).
ದ್ರಾವಿಡಭಾಷೆಗಳ ವಿಶೇಷಸ್ವರಗಳು ಮಾತ್ರ ಈ ಲೇಖನದ ವಿಷಯ. ದ್ರಾವಿಡಭಾಷೆಗಳ ವಿಶೇಷವ್ಯಂಜನಗಳ, ಮತ್ತವುಗಳ ವರ್ಣಸಂಜ್ಞೆಗಳ ಬಗೆಗೆ ಶ್ರೀ ಸೇಡಿಯಾಪು ಕೃಷ್ಣಭಟ್ಟರು ಬರೆದಿರುವ "ಱಳ ಕುಳ ಕ್ಷಳ ಸಂಜ್ಞೆಗಳ ಹುಟ್ಟು" ಎನ್ನುವ ಲೇಖನವನ್ನು ಆಸಕ್ತರು ನೋಡಬಹುದು. ಈ ಲೇಖನವನ್ನು ಡಾ|| ಪಾದೆಕಲ್ಲು ವಿಷ್ಣುಭಟ್ಟರು "ವಿಚಾರಪ್ರಪಂಚ" ಎಂಬ ಸೇಡಿಯಾಪು ಕೃಷ್ಣಭಟ್ಟರ ಲೇಖನಸಂಚಯದಲ್ಲಿ ಸಂಪಾದಿಸಿದ್ದಾರೆ.
ಸೂಚನೆ
ಈ ಲೇಖನದಲ್ಲಿ ಅಕ್ಷರವೆನ್ನುವುದನ್ನು ಶ್ರವಣಗೋಚರವಾಗುವ syllable ಎನ್ನುವ ಅರ್ಥದಲ್ಲೂ, ವರ್ಣವೆನ್ನುವುದನ್ನು ದೃಗ್ಗೋಚರವಾಗುವ grapheme ಎನ್ನುವುದಕ್ಕೆ ಹತ್ತಿರವಾದ ಅರ್ಥದಲ್ಲೂ ಬಳಸಿದ್ದೇನೆ. ಈ ಅರ್ಥವ್ಯತ್ಯಾಸವನ್ನು ಶ್ರೀ ಸೇಡಿಯಾಪು ಕೃಷ್ಣಭಟ್ಟರು, "ಅಕ್ಷರ ಮತ್ತು ವರ್ಣ" ಎಂಬ ಲೇಖನದಲ್ಲಿ ಸಾಧಾರವಾಗಿ ನಿರೂಪಿಸಿದ್ದಾರೆ. ಈ ಲೇಖನವನ್ನೂ, ಡಾ|| ಪಾದೆಕಲ್ಲು ವಿಷ್ಣುಭಟ್ಟರು "ವಿಚಾರಪ್ರಪಂಚ" ಎಂಬ ಸೇಡಿಯಾಪು ಕೃಷ್ಣಭಟ್ಟರ ಲೇಖನಸಂಚಯದಲ್ಲಿ ಸಂಪಾದಿಸಿದ್ದಾರೆ.
ಈ ಲೇಖನ Creative Commons Attribution-NonCommercial-NoDerivatives 4.0 International License ಮೂಲಕ ಲಭ್ಯವಿವೆ. ಇಲ್ಲಿ ಕೆಲವು ಹೊಸ ಸಂಶೋದನೆಯ ವಿಚಾರಗಳಿರುವುದರಿಂದ, ಈ ಲೇಖನವನ್ನು ಅಥವಾ ಅದರ ಭಾಗಗಳನ್ನು ಉದ್ಧರಿಸುವ ಮೊದಲು ದಯವಿಟ್ಟು ಕೆಳಗಿರುವ "comment" ವಿಭಾಗದಲ್ಲಿ ಬರೆದು ತಿಳಿಸಿ.
This work is licensed under a Creative Commons Attribution-NonCommercial-NoDerivatives 4.0 International License. Since there is some original research in this work, please inform in the comment section below, if you want to quote or use this or any part of this work.
ಪರಿವಿಡಿ
ಅರ್ಧ ಉಕಾರ
ತಮಿಳಿನಲ್ಲಿ ಅರ್ಧ ಉಕಾರವು, ಕುಱ್ಱಿಯಲುಗರಂ ಎಂಬ ಹೆಸರಿಂದ ಪ್ರಸಿದ್ಧವಾಗಿದೆ (ನನ್ನಂತಹ ತಮಿಳು ಲಿಪಿ ಓದಲಾಗದವರು, ಈ ಜಾಲತಾಣವನ್ನು ಕನ್ನಡ ಅಥವಾ ಇತರ ಲಿಪಿಗಳಿಗೆ, ಅಕ್ಷರಮುಖ ಜಾಲತಾಣದಲ್ಲಿ ಪಲ್ಲಟಿಸಿ ಸಾಧ್ಯವಾದಷ್ಟು ಓದಿಕೊಳ್ಳಲು ಪ್ರಯತ್ನಿಸಬಹುದು; ಅಲ್ಲಿ ಇಡೀ ಜಾಲತಾಣವನ್ನು (website) ಲಿಪಿಪಲ್ಲಟಿಸುವ ಸಾಧನವೂ ಇದೆ. ಹಾಗೆಯೇ, ಮಲಯಾಳದಲ್ಲೂ ಇದು ಸಂವೃತೋಕಾರಂ ಎಂದು ಹೆಸರಾಗಿದೆ.
ಕನ್ನಡದಲ್ಲಿ ಈ ಅರ್ಧ ಉಕಾರವು ಕಾಣಿಸುವುದಿಲ್ಲ. ನನಗೆ ತಿಳಿದಂತೆ, ತೆಲುಗಲ್ಲೂ ಇಲ್ಲ. ತುಳುವಲ್ಲಿ ಧಾರಾಳವಾಗಿ ಕಾಣಿಸುತ್ತದೆ ಮಾತ್ರವಲ್ಲ, ಕನ್ನಡದಲ್ಲಿ ಸಾಮಾನ್ಯವಾಗಿ ಕಾಣುವ ಪೂರ್ಣ ಉಕಾರಕ್ಕಿಂತಲೂ ಹೆಚ್ಚಾಗಿ, ಅರ್ಧ ಉಕಾರವೇ ಕಾಣಿಸುತ್ತದೆ ಎನ್ನಬಹುದೇನೋ. ತುಳುವಲ್ಲಿ ಅರ್ಧ ಉಕಾರ ಕಾಣಿಸುವಲ್ಲೆಲ್ಲಾ, ಕನ್ನಡದಲ್ಲಿ ಪೂರ್ಣ ಉಕಾರವೇ ಕಾಣಿಸುತ್ತದೆ.
ಇಲ್ಲಿ ಉದಾಹರಣೆಗಳನ್ನು ನೀಡಲು, ಕನ್ನಡದ ಲಿಪಿಯಲ್ಲಿ ಅರ್ಧ ಉಕಾರಕ್ಕೆ ತಕ್ಕುದಾದ ಸಂಜ್ಞೆಯಲ್ಲದಿರುವುದು ತೊಡಕಾಗುತ್ತದೆ. ತುಳುವಿನ ಲಿಪಿಯೂ ಅಷ್ಟಾಗಿ ಬಳಕೆಯಲ್ಲಿಲ್ಲದ ಕಾರಣ, ಈ ತೊಡಕು ಪರಿಹಾರವಾಗುವುದಿಲ್ಲ.
ಡಾ|| ಪದ್ಮನಾಭ ಕೇಕುಣ್ಣಾಯರು, ತಮ್ಮ "A Comparative Study of Tulu Dialects" ಎಂಬ ಸಂಶೋದನಾಗ್ರಂಥದಲ್ಲಿ ರೋಮನ್, ಗ್ರೀಕ್ ಲಿಪಿಗಳ ವರ್ಣಗಳನ್ನು ಕೆಲವು ಹೆಚ್ಚುವರಿ ಸಂಜ್ಞೆಗಳೊಂದಿಗೆ ಬಳಸಿ ಈ ತೊಡಕನ್ನು ಪರಿಹರಿಸಿದ್ದಾರೆ ("Phonology" ಅಧ್ಯಾಯ, ಪುಟ 11). ಉದಾಹರಣೆಗೆ,
- ụ - ಹ್ರಸ್ವ ಅರ್ಧ ಉಕಾರ
- ụụ - ದೀರ್ಘ ಅರ್ಧ ಉಕಾರ
ಆದರೆ, ಕನ್ನಡದ ಲಿಪಿಯಲ್ಲಿ ಸ್ವರರಹಿತವಾದ ಕೇವಲ ವ್ಯಂಜನಗಳಿಗೆ (ಉದಾಹರಣೆಗೆ, ವ್ಯಂಜನಾಂತಗಳಲ್ಲಿ) ್ ಎನ್ನುವ ಸಂಜ್ಞೆಯನ್ನು ಬಳಸುತ್ತೇವಷ್ಟೇ. ಉದಾಹರಣೆಗೆ, ಕಾಲ್, ಮಣ್ ಇತ್ಯಾದಿ. ಸಂಯುಕ್ತಾಕ್ಷರಗಳಲ್ಲಿ ಇಂತಹ ಕೇವಲ ವ್ಯಂಜನಗಳನ್ನು ಅರ್ಧಾಕ್ಷರವೆಂದು ಕರೆಯುವ (ಅಷ್ಟೇನೂ ಸಮರ್ಪಕವಲ್ಲದ) ರೂಢಿಯಿದೆ. ಸ್ವರಾಕ್ಷರಗಳ ಅರ್ಧವೆನ್ನಬಹುದಾದ ಯಾವ ಬಗೆಯ ರೂಪವೂ ಕನ್ನಡದಲ್ಲಿರದ ಕಾರಣ, ಈ ಸಂಜ್ಞೆಯನ್ನು ಸ್ವರವರ್ಣಗಳೊಂದಿಗೆ ಎಂದೂ ಕನ್ನಡದಲ್ಲಿ ಬಳಸುವುದಿಲ್ಲ. ಹೀಗಾಗಿ, ತುಳು, ತಮಿಳುಗಳ ಅರ್ಧ ಉಕಾರವನ್ನು ಕನ್ನಡದ ಲಿಪಿಯಲ್ಲಿ, ಉಕಾರವನ್ನು ್ ಸಂಜ್ಞೆಯೊಂದಿಗೆ ಬಳಸಿ ಸೂಚಿಸಬಹುದು. ಅಂದರೆ,
- ಉ್ - ಹ್ರಸ್ವ ಅರ್ಧ ಉಕಾರ
- ಊ್ - ದೀರ್ಘ ಅರ್ಧ ಉಕಾರ
- ಕು್ - ವ್ಯಂಜನದೊಂದಿಗೆ ಹ್ರಸ್ವ ಅರ್ಧ ಉಕಾರ
- ಕೂ್ - ವ್ಯಂಜನದೊಂದಿಗೆ ದೀರ್ಘ ಅರ್ಧ ಉಕಾರ
ಈ ಲೇಖನದಲ್ಲಿ (ಹಾಗೂ ಮುಂದೆ ಬರೆಯುವ ಕನ್ನಡದ ಭಕ್ತಿಯ ಬಗೆಗಿನ ಕನ್ನಡದ ಲಿಪಿಯಲ್ಲಿ ಬರೆಯಲಿರುವ ಲೇಖನಗಳಲ್ಲಿ) ಅರ್ಧ ಉಕಾರಗಳನ್ನು ಈ ರೀತಿಯಲ್ಲೇ ವರ್ಣಿಸುತ್ತೇನೆ.
ಉ್‍ಕಾರದ ಉಚ್ಚಾರಣೆ
ಉ್‍ಕಾರದ ಉಚ್ಚಾರಣೆಯನ್ನು ಹೇಗೆ ಖಚಿತಗೊಳಿಸಬೇಕೆನ್ನುವುದರ ಬಗೆಗೆ ವಿದ್ವಾಂಸರಲ್ಲಿ ಭಿನ್ನಮತಗಳಿವೆ.
- ಡಾ|| ಪದ್ಮನಾಭ ಕೇಕುಣ್ಣಾಯರು ಹ್ರಸ್ವ, ದೀರ್ಘ ಉ್ಕಾರಗಳನ್ನು high central unrounded vowel, ಅಂದರೆ, International Phonetic Alphabet, IPAಯಲ್ಲಿ ɨ ("A Comparative Study of Tulu Dialects, "Phonology" ಅಧ್ಯಾಯ, ಪುಟ 11), ಎಂದಿದ್ದಾರೆ.
- Rev. J. Brigel ಅವರು ಹಾಗೂ A. Männer ಅವರು, ತಮ್ಮ ಪುಸ್ತಕಗಳಲ್ಲಿ, ಇವನ್ನು mid central vowel, ಅಂದರೆ, IPAಯಲ್ಲಿ ə, ಎಂದಿರುವುದನ್ನು ನೋಡಬಹುದು.
- ಡಾ|| ಡಿ. ಎನ್. ಶಂಕರಭಟ್ಟರು ತಮ್ಮ ಪುಸ್ತಕ, ಬರೆಹಗಳಲ್ಲಿ, ಇವನ್ನು closed back unrounded vowel, ಅಂದರೆ, IPAಯಲ್ಲಿ ɯ, ಎಂದಿರುವುದನ್ನು ನೋಡಬಹುದು.
Rev. Brigel ಅವರ ಹಾಗೂ A. Männer ಅವರ ə ಎನ್ನುವ ನಿರೂಪಣೆ, ಸಮರ್ಪಕವೆನಿಸುವುದಿಲ್ಲ. ಉ್‍ಕಾರದ ಉಚ್ಚಾರಣೆಯಲ್ಲಿ ಬಾಯಿಯು, ə ಎನ್ನುವಾಗ ತೆರೆದಷ್ಟು, ತೆರೆಯುವುದಿಲ್ಲವೆನಿಸುತ್ತದೆ.
ಇನ್ನುಳಿದ ɨ, ɯ ಉಚ್ಚಾರಣೆಗಳ ಬಗೆಗಿನ ಭಿನ್ನಮತ ಮಲಯಾಳದ ವಿದ್ವಾಂಸರಲ್ಲೂ ಕಾಣಿಸುತ್ತದೆ. ಕೆಲವೆಡೆ ɨ ಉಚ್ಚಾರಣೆಯನ್ನೂ, ಇನ್ನು ಕೆಲವೆಡೆ ɯ ಉಚ್ಚಾರಣೆಯನ್ನೂ ಪ್ರತಿಪಾದಿಸಿರುವುದನ್ನು ನೋಡಬಹುದು.
ಇವುಗಳಲ್ಲಿ, ಡಾ|| ಪದ್ಮನಾಭ ಕೇಕುಣ್ಣಾಯರ ɨ ಎನ್ನುವ ನಿರೂಪಣೆ, ಉ್‍ಕಾರದ ನಿಜ ಉಚ್ಚಾರಣೆಗೆ ಹತ್ತಿರವಾಗಿಯೇ ಇದೆಯಷ್ಟೇ ಅಲ್ಲದೆ, ಈ ಉಚ್ಚಾರಣೆಯು ಇಕಾರಕ್ಕೆ ಸ್ವಲ್ಪ ಹತ್ತಿರವಾಗಿರುವುದರಿಂದ, ತುಳುವಿನ ಉ್ಂಬ್ಯೆ, ಉ್ಂಬಳ್ (ಕನ್ನಡದಲ್ಲಿ ಇವನು, ಇವಳು) ಎನ್ನುವುವನ್ನು ಕನ್ನಡದ ಲಿಪಿಯಲ್ಲಿ ಬರೆಯುವಾಗ ಇಂಬ್ಯೆ, ಇಂಬಳ್ ಎಂದು ಬರೆಯುವ ರೂಢಿಯು ಬೆಳೆದು ಬಂದಿರಬಹುದು.
ಆದರೆ, ಡಾ|| ಡಿ. ಎನ್. ಶಂಕರಭಟ್ಟರ ɯ ಎನ್ನುವ ನಿರೂಪಣೆ, ಈ ಮೂರರಲ್ಲಿ ಹೆಚ್ಚು ಸಮರ್ಪಕವೆನಿಸುತ್ತದೆ. ಈ ಉಚ್ಚಾರಣೆಯು ತುಳುವಿನ ಉ್ಂದು, ಉ್ಂದ (ಕನ್ನಡದಲ್ಲಿ ಇದು, ಇಕೋ) ಎನ್ನುವುವುಗಳ ನಿಜ ಉಚ್ಚಾರಣೆಗೆ ಮಾತ್ರವಲ್ಲ, ತುಳುವಿನ ಉ್ಂಬ್ಯೆ, ಉ್ಂಬಳ್ ಎನ್ನುವುವುಗಳ ನಿಜ ಉಚ್ಚಾರಣೆಗೂ ಹೆಚ್ಚು ಹತ್ತಿರವಾಗಿದೆ. ಈ ಉಚ್ಚಾರಣೆಯು ಉಕಾರಕ್ಕೆ ಸ್ವಲ್ಪ ಹತ್ತಿರವಾಗಿರುವುದರಿಂದ, ತುಳುವಿನ ಉ್ಂದು, ಉ್ಂದ ಎನ್ನುವುವನ್ನು ಕನ್ನಡದ ಲಿಪಿಯಲ್ಲಿ ಬರೆಯುವಾಗ ಉಂದು, ಉಂದ ಎಂದು ಬರೆಯುವ ರೂಢಿಯು ಬೆಳೆದು ಬಂದಿರಬಹುದು. ಇದೇ ಕಾರಣದಿಂದ ಈ ಸ್ವರವನ್ನು ತಮಿಳಿನ ವೈಯಾಕರಣರು ಕುಱ್ಱಿಯಲುಗರಂ ಎಂದು ಕರೆದಿರಬಹುದು. ಇದೇ ಕಾರಣದಿಂದ ಈ ಸ್ವರವನ್ನು ಅರ್ಧ ಉಕಾರವೆಂದು ಕರೆದು, ಉ್ ಎಂದು ವರ್ಣಿಸಿದರೆ ತಪ್ಪಾಗದು ಎಂದುಕೊಳ್ಳುತ್ತೇನೆ.
ಇಲ್ಲಿ, ಅರ್ಧ ಉಕಾರವೆನ್ನುವಾಗ, ಅರ್ಧ ಎನ್ನುವುದು ಉಚ್ಚಾರಣೆಯ ಸಂದರ್ಭದಲ್ಲಿ ಬಾಯಿ, ನಾಲಗೆ, ತುಟಿಗಳ ರೂಪ ಪೂರ್ಣ ಉಕಾರದ ಉಚ್ಚಾರಣೆಯಲ್ಲಿರುವಂತಿರದೆ, ಸ್ವಲ್ಪ ಬೇರೆಯಾಗಿರುವುದನ್ನು ಸೂಚಿಸುತ್ತದೆಯೇ ಹೊರತು, ಉಚ್ಚಾರಣೆಯ ಕಾಲಪ್ರಮಾಣವನ್ನಲ್ಲ. ಹ್ರಸ್ವ ಉ್‍ಕಾರದ ಉಚ್ಚಾರಣೆಯು, ಹ್ರಸ್ವ ಪೂರ್ಣ ಉಕಾರದಂತೆ (ಉ) ಒಂದು ಮಾತ್ರಾಕಾಲದಷ್ಟೂ, ದೀರ್ಘ ಉ್‍ಕಾರದ (ಊ್) ಉಚ್ಚಾರಣೆಯು, ದೀರ್ಘ ಉಕಾರದಂತೆ (ಊ) ಎರಡು ಮಾತ್ರಾಕಾಲದಷ್ಟೂ ಕಾಲಪ್ರಮಾಣದಲ್ಲೇ ನಡೆಯುತ್ತದೆ.
ಉ್‍ಕಾರದ ಬಳಕೆ
ಉ್‍ಕಾರವು, ತುಳು, ತಮಿಳುಗಳಲ್ಲಿ, ಹೆಚ್ಚಾಗಿ ವ್ಯಂಜನಾಂತ ಪದಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ,
- ತುಳುವಲ್ಲಿ ಎಂಕು್, ತಮಿಳಲ್ಲಿ ಎನಕ್ಕು್ - ಕನ್ನಡದಲ್ಲಿ, ಎನಗೆ / ನನಗೆ
- ತುಳುವಲ್ಲಿ ಕೆಕ್ಕಿಲು್ - ಕನ್ನಡದಲ್ಲಿ, ಕೊರಲು / ಕೊರಳು
- ತಮಿಳಲ್ಲಿ ಸೊಲ್ಲು್ - ಕನ್ನಡದಲ್ಲಿ, ಸೊಲ್ಲು / ಹೇಳು
- ತುಳುವಿನಲ್ಲಿ ಏನು್, ಮಲಯಾಳದಲ್ಲಿ ಞಾನು್ - ಕನ್ನಡದಲ್ಲಿ, ಆನು / ನಾನು
ಅಲ್ಲದೆ, ತುಳುವಿನಲ್ಲಿ ಮೇಲೆ ಕಂಡಂತೆ, ಸಾಮೀಪ್ಯವಾಚಕ ಸರ್ವನಾಮಗಳಲ್ಲಿ (proximal demonstrative pronoun) ಆದಿಯಲ್ಲೂ ಉ್‍ಕಾರವು ಕಾಣಿಸುತ್ತದೆ. ಉದಾಹರಣೆಗೆ,
- ಉ್ಂಬ್ಯೆ - ಕನ್ನಡದಲ್ಲಿ, ಇವನು
- ಉ್ಂಬಳ್ - ಕನ್ನಡದಲ್ಲಿ, ಇವಳು
- ಉ್ಂಬೆರ್ - ಕನ್ನಡದಲ್ಲಿ, ಇವರು
- ಉ್ಂದು - ಕನ್ನಡದಲ್ಲಿ, ಇದು
ಹಾಗೆಯೇ, ಕನ್ನಡದಲ್ಲಿ ಇಕೋ ಎನ್ನುವುದಕ್ಕೆ ತುಳುವಿನಲ್ಲಿ ಉ್ಂದ ಎನ್ನುತ್ತಾರೆ. ತಮಿಳಿನಲ್ಲೂ ಹೀಗೆ ಹೇಳುವುದನ್ನು ಕೇಳಿದ್ದಿದೆ.
ಈ ಉದಾಹರಣೆಗಳಲ್ಲಿರುವಂತೆ, ಹ್ರಸ್ವ ಉ್‍ಕಾರವೇ ಹೆಚ್ಚಾಗಿ ಕಂಡುಬಂದರೂ, ತುಳುವಿನ ಜಾನಪದ ಹಾಡುಗಳಲ್ಲಿ, ಪದಾದಿ, ಪದಮಧ್ಯಗಳಲ್ಲಿ ದೀರ್ಘ ಉ್‍ಕಾರವೂ (ಊ್) ಕೆಲವೊಮ್ಮೆ ಕಾಣಿಸುತ್ತದೆ ಎಂದು ಡಾ|| ಪದ್ಮನಾಭ ಕೇಕುಣ್ಣಾಯರು ನಿರೂಪಿಸಿದ್ದಾರೆ.
"A Comparative Study of Tulu Dialects", "Phonology" ಅಧ್ಯಾಯ, ಪುಟ 12
(i) the high central long vowel ụụ can occur in the non-initial positions in lullaby and such other folk songs and words ending with certain clitics or particles for expressing emotions
ಸಂಸ್ಕೃತದಲ್ಲಿ ಉ್‍ಕಾರ
ಶ್ರೀ ಸೇಡಿಯಾಪು ಕೃಷ್ಣಭಟ್ಟರು "ಋಌಗಳ ಸ್ವರವರ್ಣತ್ವ" ಎನ್ನುವ ಸಣ್ಣ ಲೇಖನದಲ್ಲಿ ಋ, ಌಗಳನ್ನು ಸಂಸ್ಕೃತವರ್ಣಮಾಲೆಯಲ್ಲಿ ಸ್ವರಗಳ ಗುಂಪಿಗೆ ಸೇರಿಸಿರುವುದರ ಔಚಿತ್ಯ, ಕಾರಣಗಳನ್ನು ವಿವೇಚಿಸುತ್ತಾ, ಋಕಾರ, ಌಕಾರಗಳಲ್ಲೂ ಉ್‍ಕಾರವೇ ಅಡಗಿದೆ ಎಂದು ಸಾಧಾರವಾಗಿ ನಿರೂಪಿಸಿದ್ದಾರೆ (ಈ ಲೇಖನವನ್ನು ಡಾ|| ಪಾದೆಕಲ್ಲು ವಿಷ್ಣುಭಟ್ಟರು "ವಿಚಾರಪ್ರಪಂಚ" ಎಂಬ ಸೇಡಿಯಾಪು ಕೃಷ್ಣಭಟ್ಟರ ಲೇಖನಸಂಚಯದಲ್ಲಿ ಸಂಪಾದಿಸಿದ್ದಾರೆ). ಈ ವಿಚಾರವನ್ನು ಅವರದೇ ಮಾತುಗಳಲ್ಲಿ ನೋಡುವುದೇ ಉಚಿತ.
ವಿಚಾರಪ್ರಪಂಚ, ಋಌಗಳ ಸ್ವರವರ್ಣತ್ವ, ಪುಟ ೨೧೮-೨೨೦
...
ಋಌಗಳಲ್ಲಿ ಅಡಗಿರುವ ವ್ಯಂಜನಾಂಶವನ್ನು ಕಳೆದುಹಾಕಿ ಉಚ್ಚರಿಸಿದಾಗ ಅವು ಅಪೂರ್ಣವಾದ ಉಕಾರದಂತೆ - ತಮಿಳು, ತುಳು ಮೊದಲಾದ ದ್ರಾವಿಡಭಾಷೆಗಳಲ್ಲಿರುವ ಕಿರಿಯ ಉಕಾರ(ಕುಟ್ರಿಯಲ್ ಉಕಾರ - ತಮಿಳು)ದಂತೆ ಶ್ರವಣಗೋಚರವಾಗುತ್ತದೆ. ವಿಶಿಷ್ಟರೂಪದ ಈ ಉಕಾರವು ತುಳು, ತಮಿಳುಗಳಲ್ಲಿ ನಾನಾ ವ್ಯಂಜನಗಳಿಗೆ ಸೇರಿಕೊಳ್ಳುವುದಾದರೂ ಸಂಸ್ಕೃತದಲ್ಲಿ ರಕಾರ ಲಕಾರಗಳಿಗೆ ಮಾತ್ರ ಸೇರುವುದಾಗಿದೆ. ತತ್ಪರಿಣಾಮವಾಗಿ ಈ ಸ್ವರಕ್ಕೆ ರಲಕಾರಗಳ ಸಂಯೋಗದ ಹೊರತು ಸಂಸ್ಕೃತದಲ್ಲಿ ಅಸ್ತಿತ್ವವೇ ಇಲ್ಲ. ಆದಕಾರಣ ವರ್ಣಮಾಲೆಯಲ್ಲಿ ಈ ಸ್ವರವಿಶೇಷವನ್ನು ಕೇವಲವಾಗಿ ನಿರೂಪಿಸದೆ ರಕಾರ ಲಕಾರಯುಕ್ತವಾಗಿಯೇ ವೈಯಾಕರಣರು ನಿರೂಪಿಸಿದ್ದಾಗಿದೆ. ತಾತ್ಪರ್ಯವೇನೆಂದರೆ, ಋ ಌ ಎಂಬೀ ಪಿಂಡಗಳು ಕೇವಲ ಸ್ವರಗಳಲ್ಲ. ಆವುಗಳಲ್ಲಿರುವ ಸ್ವರವು ಕಿರಿಯ ಉಕಾರವೇ ಆಗಿದೆ. ವರ್ಣಮಾಲೆಯಲ್ಲಿ ಋಌಗಳು ಸೇರಲು ಇದುವೇ ಕಾರಣ.
...
ಋಕಾರ ಯುಕ್ತವಾದ ಸಂಸ್ಕೃತ ಪದಗಳು ಕನ್ನಡ ಮೊದಲಾದ ದೇಶಭಾಷೆಗಳಲ್ಲಿ ಸಾಕಷ್ಟು ಬಳಕೆಯಲ್ಲಿದ್ದರೂ (ಉದಾ: ಋಷಿ, ಕೃಷ್ಣ, ವೃತ್ತಿ ಇತ್ಯಾದಿ) ಆ ಅಕ್ಷರವನ್ನು ಶುದ್ಧವಾಗಿ ಉಚ್ಚರಿಸುವವರು ಬಹಳ ಕಡಮೆ. ಒಂದೊಂದು ಪ್ರದೇಶದ ಜನರು ಅದನ್ನು ಒಂದೊಂದು ವಿಧವಾಗಿ ಉಚ್ಚರಿಸುವುದು ಕೇಳಿಬರುತ್ತದೆ. ಹಿಂದೀ ಭಾಷೆಯನ್ನಾಡುವವರು ಅದನ್ನು 'ರಿ' ಎಂಬಂತೆ ಉಚ್ಚರಿಸುತ್ತಾರೆ. ಒರಿಸ್ಸಾ, ಗುಜರಾತು, ಮಹಾರಾಷ್ಟ್ರದ ಮತ್ತು ಕರ್ಣಾಟಕದ ಕೆಲವು ಭಾಗಗಳು - ಈ ಪ್ರದೇಶಗಳಲ್ಲಿ ಅದು 'ರು' ಎಂಬಂತೆಯೇ ಉಚ್ಚರಿಸಲ್ಪಡುತ್ತದೆ. ಆದರೆ ಯಾವ ಪ್ರದೇಶದ ಭಾಷೆಗಳಲ್ಲಿ ಕಿರಿಯ ಉಕಾರವು ಇದೆಯೋ ಅಲ್ಲಿಯವರು ಆ ಅಕ್ಷರವನ್ನು ಹೆಚ್ಚು ಕಡಮೆ ಶುದ್ಧವಾಗಿ ಉಚ್ಚರಿಸುತ್ತಾರೆ. ಉದಾ:- ದಕ್ಷಿಣ ಕನ್ನಡ, ತಮಿಳುನಾಡು - ಇತ್ಯಾದಿ. ಸಂಸ್ಕೃತ ವ್ಯಾಕರಣವನ್ನು ಆಭ್ಯಾಸ ಮಾಡಿದವರು ಯಾವ ಪ್ರದೇಶದವರಾದರೂ ಇದನ್ನು ಶುದ್ಧವಾಗಿ ಉಚ್ಚರಿಸದಿರುವುದು ಅಪೂರ್ವ.
ಌಕಾರದ ಪ್ರಯೋಗವು ಸಂಸ್ಕೃತದಲ್ಲಿಯೇ ಅತಿ ವಿರಳ. ಕನ್ನಡದಲ್ಲಿ 'ಕೢಪ್ತ' ಎಂಬೊಂದು ಸಂಸ್ಕೃತ ಶಬ್ದದಲ್ಲಿ ಹೊರತು ಬೇರೆಡೆಯಲ್ಲಿ ಇದರ ಪ್ರಯೋಗವು ದುರ್ಲಭ. ಆದುದರಿಂದ ಕನ್ನಡ ಮುದ್ರಾಲಯಗಳಲ್ಲಿ ಈ ಪದವನ್ನು 'ಕ್ಲ್ ಪ್ತ' ಎಂದು ಮುದ್ರಿಸುತ್ತಾರೆ ಮತ್ತು ಕೈಬರಹದಲ್ಲೂ ಇದೇ ರೂಪವು ಕಂಡುಬರುತ್ತದೆ. ಆದರೆ ಘಟ್ಟದ ಮೇಲಿನವರು ಈ ಪದವನ್ನು 'ಕ್ಲುಪ್ತ' ಎಂದು ಉಚ್ಚರಿಸುವುದು ಮಾತ್ರವಲ್ಲ ಅವರು ಬರೆಯುವುದು ಮುದ್ರಿಸುವುದೂ ಇದೇ ರೂಪದಲ್ಲಿರುವುದು ಕಂಡುಬರುತ್ತದೆ. ಌಕಾರದ ಉಚ್ಚಾರದಲ್ಲಿ ಕೆಲವೆಡೆಗಳಲ್ಲಿ ಇನ್ನೊಂದು ವೈಚಿತ್ರ್ಯವೂ ಗೋಚರವಾಗುತ್ತದೆ. ವರ್ಣಮಾಲೆಯನ್ನು ಪಠಿಸುವಾಗ ಮತ್ತು 'ಕೢಪ್ತ' ಎಂಬ ಪದವನ್ನು ಉಚ್ಚರಿಸುವಾಗ ಌಕಾರವನ್ನು 'ಲೃ' ಎಂದು ಉಚ್ಚರಿಸಿ ಬಿಡುತ್ತಾರೆ ಮತ್ತು ಅದುವೇ ಸರಿಯೆಂದು ವಾದಿಸುತ್ತಾರೆ. ಈ ಭ್ರಾಂತಿಗೆ ಕಾರಣ ಆ ಲಿಪಿ ರೂಪವೇ ಆಗಿದೆ. ನಾಗರೀ ಲಿಪಿಯಲ್ಲಿ ಅದು ಹೀಗಿರುತ್ತದೆ - ऌ. ತೆಲುಗು ಲಿಪಿಯಲ್ಲಿ ಮುದ್ರಿತವಾದ ಪುಸ್ತಕಗಳಲ್ಲಿ 'ಲೃ' ಎಂದೇ ಇದರ ರೂಪವಿರುತ್ತದೆ. 'ಲೃ' ಎಂಬ ಉಚ್ಚಾರದಲ್ಲಿ ಲಕಾರ ಮತ್ತು ಋಕಾರಗಳ ಸಂಯೋಗವಿರುವುದರಿಂದ ಇದು ಆ ಮೂಲವರ್ಣದ ಉಚ್ಚಾರವಲ್ಲವೆಂಬುದು ಸ್ವತಃಸಿದ್ಧ.
ಸಂಸ್ಕೃತದಲ್ಲಿ ದೀರ್ಘ ಋಕಾರವೂ ಕಂಡುಬರುತ್ತದೆ. ಉದಾಹರಣೆಗೆ, ಪಿತೄನ್ (पितॄन्). ಈ ದೀರ್ಘ ಋಕಾರದಲ್ಲಿರುವ ಸ್ವರಾಂಶವು ತುಳುವಿನ ಊ್‍ಕಾರವನ್ನೇ ಹೋಲುತ್ತದೆ.
ಅರ್ಧ ಎಕಾರ
ತುಳುವಿನಲ್ಲಿ, ದ್ರಾವಿಡಭಾಷೆಗಳಲ್ಲೂ ವಿರಳವಾಗಿರುವ, ಅರ್ಧ ಎಕಾರವೊಂದಿದೆ. ಇದರ ಉಚ್ಚಾರಣೆಯಲ್ಲಿ ಬಾಯಿಯು ಪೂರ್ಣ ಎಕಾರದ ಉಚ್ಚಾರಣೆಯಲ್ಲಿರುವಂತಿರದೆ, ಇಂಗ್ಲಿಷಿನ apple ಎನ್ನುವಲ್ಲಿನ ಆದಿಸ್ವರದಂತೆ, ಸ್ವಲ್ಪ ಬೇರೆಯಾಗಿರುತ್ತದೆ. ತುಳುವಿನಲ್ಲಿ, ಕನ್ನಡ ಹಾಗೂ ಇತರ ದ್ರಾವಿಡಭಾಷೆಗಳಲ್ಲಿರುವ ಪೂರ್ಣ ಎಕಾರವೂ ಇದೆ ಮಾತ್ರವಲ್ಲ, ಈ ಎರಡು ಎಕಾರಗಳು ವ್ಯಾಕರಣ, ಅರ್ಥಗಳ ವ್ಯತ್ಯಾಸವನ್ನೂ ಸೂಚಿಸುತ್ತವೆ.
ಇಲ್ಲೂ ಉದಾಹರಣೆಗಳನ್ನು ನೀಡಲು, ಕನ್ನಡದ ಲಿಪಿಯಲ್ಲಿ ಅರ್ಧ ಎಕಾರಕ್ಕೆ ತಕ್ಕುದಾದ ಸಂಜ್ಞೆಯಿಲ್ಲದಿರುವುದು ತೊಡಕಾಗುತ್ತದೆ. ತುಳುವಿನ ಲಿಪಿಯೂ ಅಷ್ಟಾಗಿ ಬಳಕೆಯಲ್ಲಿಲ್ಲದ ಕಾರಣ, ಈ ತೊಡಕು ಪರಿಹಾರವಾಗುವುದಿಲ್ಲ.
ಡಾ|| ಪದ್ಮನಾಭ ಕೇಕುಣ್ಣಾಯರು, ಇದಕ್ಕೆ ϵ ಸಂಜ್ಞೆಯನ್ನು ಬಳಸಿ, ತೊಡಕನ್ನು ಪರಿಹರಿಸಿದ್ದಾರೆ ("A Comparative Study of Tulu Dialects", "Phonology" ಅಧ್ಯಾಯ, ಪುಟ 11). ಉದಾಹರಣೆಗೆ,
- ϵ - ಹ್ರಸ್ವ ಅರ್ಧ ಎಕಾರ
- ϵϵ - ದೀರ್ಘ ಅರ್ಧ ಎಕಾರ
ಈ ಅರ್ಧ ಎಕಾರವು ಕನ್ನಡದಲ್ಲಿ ಇಲ್ಲದಿರುವ ಕಾರಣ, ಕನ್ನಡದ ಲಿಪಿಯಲ್ಲೂ ಅದಕ್ಕೆ ಸರಿಯಾದ ವರ್ಣ / ಸಂಜ್ಞೆಗಳು ಸ್ವಾಭಾವಿಕವಾಗಿಯೇ ಇಲ್ಲ. ಅರ್ಧ ಎಕಾರವಿರುವ ತುಳು ಪದಗಳನ್ನು ಕನ್ನಡದ ಲಿಪಿಯಲ್ಲಿ ಬರೆಯುವಾಗ ಪೂರ್ಣ ಎಕಾರದ ವರ್ಣ / ಸಂಜ್ಞೆಗಳೇ ಬಳಕೆಯಾಗುವುದು ರೂಢಿ. ಆದರೆ ಅದನ್ನು ಓದುವಾಗ ಸಂದರ್ಭಾನುಸಾರವಾಗಿ ಸರಿಯಾದ ಉಚ್ಚಾರಣೆಯನ್ನು ಮಾಡಬೇಕಾಗುತ್ತದೆ.
ಆದರೆ, ಮೇಲೆ ಅರ್ಧ ಉಕಾರವನ್ನು 'ವರ್ಣಿ'ಸಿದಂತೆ (ಉ್), ಇಲ್ಲೂ ಅರ್ಧ ಎಕಾರವನ್ನು, ಎಕಾರವನ್ನು ್ ಸಂಜ್ಞೆಯೊಂದಿಗೆ ಸೂಚಿಸಬಹುದು. ಸಾಮಾನ್ಯವಾಗಿ ಎಕಾರವು ್ ಸಂಜ್ಞೆಯೊಂದಿಗೆ ಕಾಣುವ ಸಂದರ್ಭವು ಕನ್ನಡದಲ್ಲಿ ಬೇರೆಲ್ಲೂ ಕಾಣದ ಕಾರಣ ಹೀಗೆ ಮಾಡಿದರೆ ತೊಂದರೆಯಿರಲಾರದು. ಅಂದರೆ,
- ಎ್ - ಹ್ರಸ್ವ ಅರ್ಧ ಎಕಾರ
- ಏ್ - ದೀರ್ಘ ಅರ್ಧ ಎಕಾರ
- ಕೆ್ - ವ್ಯಂಜನದೊಂದಿಗೆ ಹ್ರಸ್ವ ಅರ್ಧ ಎಕಾರ
- ಕೇ್ - ವ್ಯಂಜನದೊಂದಿಗೆ ದೀರ್ಘ ಅರ್ಧ ಎಕಾರ
ಈ ಲೇಖನದಲ್ಲಿ (ಹಾಗೂ ಮುಂದೆ ಬರೆಯುವ ಕನ್ನಡದ ಭಕ್ತಿಯ ಬಗೆಗಿನ ಕನ್ನಡದ ಲಿಪಿಯಲ್ಲಿ ಬರೆಯಲಿರುವ ಲೇಖನಗಳಲ್ಲಿ) ಅರ್ಧ ಎಕಾರಗಳನ್ನು ಈ ರೀತಿಯಲ್ಲೇ 'ವರ್ಣಿ'ಸುತ್ತೇನೆ.
ಎ್‍ಕಾರದ ಉಚ್ಚಾರಣೆ
- ಡಾ|| ಪದ್ಮನಾಭ ಕೇಕುಣ್ಣಾಯರು ಹ್ರಸ್ವ, ದೀರ್ಘ ಎ್ಕಾರಗಳನ್ನು low front vowel, ಅಂದರೆ, IPAಯಲ್ಲಿ a ("A Comparative Study of Tulu Dialects, "Phonology" ಅಧ್ಯಾಯ, ಪುಟ 12), ಎಂದಿದ್ದಾರೆ.
- ಇತರ ವಿದ್ವಾಂಸರು ಇವನ್ನು low front vowel, near-open front unrounded vowel ಅಥವಾ open-mid front unrounded vowel, ಅಂದರೆ, IPAಯಲ್ಲಿ a, æ ಅಥವಾ ɛ ಎಂದಿರುವುದನ್ನು ನೋಡಬಹುದು.
ಈ ಮೂರರಲ್ಲಿ, æ ಎಂಬುದು ತುಳುವಿನ ಎ್‍ಕಾರದ ಉಚ್ಚಾರಣೆಗೆ ಹತ್ತಿರವಾಗಿದೆ ಎಂದೆನಿಸುತ್ತದಾದರೂ, ಅದೇ ಸರಿಯಾದ ಸಂಜ್ಞೆ ಎನ್ನುವುದು ಕಷ್ಟ. ಆದರೂ, ಅದು ಪೂರ್ಣ ಎಕಾರವಂತೂ (IPAಯಲ್ಲಿ, e̞ ಅಥವಾ e) ಅಲ್ಲವೆನ್ನುವುದು ಸ್ಪಷ್ಟ.
ಇಲ್ಲಿ, ಅರ್ಧ ಎಕಾರವೆನ್ನುವಾಗ, ಅರ್ಧ ಎನ್ನುವುದು ಉಚ್ಚಾರಣೆಯ ಸಂದರ್ಭದಲ್ಲಿ ಬಾಯಿ, ನಾಲಗೆ, ತುಟಿಗಳ ರೂಪ ಪೂರ್ಣ ಎಕಾರದ ಉಚ್ಚಾರಣೆಯಲ್ಲಿರುವಂತಿರದೆ, ಸ್ವಲ್ಪ ಬೇರೆಯಾಗಿರುವುದನ್ನು ಸೂಚಿಸುತ್ತದೆಯೇ ಹೊರತು, ಉಚ್ಚಾರಣೆಯ ಕಾಲಪ್ರಮಾಣವನ್ನಲ್ಲ. ಹ್ರಸ್ವ ಎ್‍ಕಾರದ ಉಚ್ಚಾರಣೆಯು, ಹ್ರಸ್ವ ಪೂರ್ಣ ಎಕಾರದಂತೆ (ಎ) ಒಂದು ಮಾತ್ರಾಕಾಲದಷ್ಟೂ, ದೀರ್ಘ ಎ್‍ಕಾರದ (ಏ್) ಉಚ್ಚಾರಣೆಯು, ದೀರ್ಘ ಎಕಾರದಂತೆ (ಏ) ಎರಡು ಮಾತ್ರಾಕಾಲದಷ್ಟೂ ಕಾಲಪ್ರಮಾಣದಲ್ಲೇ ನಡೆಯುತ್ತದೆ.
ಎ್‍ಕಾರದ ಬಳಕೆ
ಡಾ|| ಪದ್ಮನಾಭ ಕೇಕುಣ್ಣಾಯರು ಎ್‍ಕಾರವು ಹೆಚ್ಚಾಗಿ ಪದಾಂತ್ಯದಲ್ಲಿ, ಕೆಲವೆಡೆ ಪದಮಧ್ಯದಲ್ಲೂ ಕಾಣಿಸುತ್ತದೆ ಎಂದಿದ್ದಾರೆ.
"A Comparative Study of Tulu Dialects", "Phonology" ಅಧ್ಯಾಯ, ಪುಟ 12
...
(ii) the low front short vowel ϵ can occur usually in the word final position;
...
(ii) the low front long vowel ϵϵ can occur in the final position in lullaby, folksongs, endearing words and such other emotive expressions.
...
Its occurrence in medial position is noticed in a few instances only. e.g. bϵϵlϵ work; kϵrϵ tank; bϵϵtϵ other etc. (Ref. Rama, 1978; Shetty, 1986)
ಅಂದರೆ,
- ಬೇ್‍ಲೆ್ - ಕನ್ನಡದಲ್ಲಿ, ಕೆಲಸ
- ಕೆ್‍ರೆ್ - ಕನ್ನಡದಲ್ಲಿ, ಕೆರೆ
- ಬೇ್‍ತೆ್ - ಕನ್ನಡದಲ್ಲಿ, ಬೇರೆ
ಈ ಮೇಲಿನ ಉದಾಹರಣೆಗಳಲ್ಲಿ, ಬೇ್‍ಲೆ್ ಎನ್ನುವಲ್ಲಿ ಖಚಿತವಾಗಿಯೂ ಏ್, ಎ್‍ಕಾರಗಳೆರಡೂ ಕಾಣಿಸುತ್ತವೆ. ಹಾಗೆಯೇ, ಬೇ್‍ರ (ಕನ್ನಡದಲ್ಲಿ, ವ್ಯಾಪಾರ) ಎನ್ನುವಲ್ಲೂ ಏ್‍ಕಾರವು ಕಾಣಿಸುತ್ತದೆ. ಅದರೆ, ಕೆ್‍ರೆ್, ಬೇ್‍ತೆ್ ಎನ್ನುವುವುಗಳನ್ನು ಪೂರ್ಣ ಎಕಾರದೊಂದಿಗೆ ಉಚ್ಚರಿಸುವುದೂ ಇದೆ. ಈ ಮೂರೂ ಉದಾಹರಣೆಗಳಲ್ಲಿ, ಏ್, ಎ್‍ಕಾರಗಳ ಬದಲಿಗೆ ಪೂರ್ಣ ಏ, ಎಕಾರಗಳನ್ನು ಬಳಸಿದರೆ ಅರ್ಥದಲ್ಲೇನೂ ವ್ಯತ್ಯಾಸವಾಗುವುದಿಲ್ಲವೆಂಬುದನ್ನು ಗಮನಿಸಬಹುದು.
ಆದರೆ, ತುಳುವಿನಲ್ಲಿ, ಎ್‍ಕಾರ, ಎಕಾರಗಳು ಕ್ರಿಯಾಪದದ ಕೊನೆಗೆ ಪ್ರತ್ಯಯಗಳಾಗಿ ಬಂದಾಗ, ಪುರುಷ, ಲಿಂಗ, ವಚನಗಳನ್ನು ಸೂಚಿಸಿ ಅರ್ಥವ್ಯತ್ಯಾಸವನ್ನುಂಟುಮಾಡುತ್ತವೆ. ಉದಾಹರಣೆಗೆ,
- ಯಾನ್ ಬತ್ತೆ್ (ಕನ್ನಡದಲ್ಲಿ, ನಾನು ಬಂದೆ) - ಎ್‍ಕಾರವು ಉತ್ತಮಪುರುಷ, ಪುಂಸ್ತ್ರೀಲಿಂಗ, ಏಕವಚನಗಳನ್ನು ಸೂಚಿಸುತ್ತದೆ.
- ಆಯೆ ಬತ್ತೆ (ಕನ್ನಡದಲ್ಲಿ, ಅವನು ಬಂದನು) - ಎಕಾರವು ಪ್ರಥಮಪುರುಷ, ಪುಲ್ಲಿಂಗ, ಏಕವಚನಗಳನ್ನು ಸೂಚಿಸುತ್ತದೆ.
- ಬಾಲೆ್ - ಕನ್ನಡದಲ್ಲಿ, ಮಗು
- ಬಾಲೇ್ - ಕನ್ನಡದಲ್ಲಿ, ಮಗುವೇ
ಕನ್ನಡದಲ್ಲಿ ಎ್‍ಕಾರ
ಕನ್ನಡದಲ್ಲಿರುವ ಹ್ರಸ್ವ, ದೀರ್ಘ ಎಕಾರಗಳನ್ನು ಪೂರ್ಣ ಎಕಾರಗಳೆಂದೇ ಹೆಚ್ಚಾಗಿ ಪರಿಗಣಿಸಲಾಗಿದೆ. ಇದು ಬಹುತೇಕ ಸರಿಯೇ ಎನಿಸಿದರೂ, ಸೂಕ್ಷ್ಮವಾಗಿ ಗಮನಿಸಿದರೆ, ಕ್ರಿಯಾಪದಗಳ ಕೊನೆಯಲ್ಲಿ ಉತ್ತಮಪುರುಷ, ಪುಂಸ್ತ್ರೀಲಿಂಗವಾಚಕವಾಗಿ ಕಾಣಿಸುವ ಎಕಾರಾದಿಯಾದ ಪ್ರತ್ಯಯದಲ್ಲಿ ಕಾಣುವ ಎಕಾರವು, ನಿಜವಾಗಿ ಪೂರ್ಣ ಎಕಾರವಲ್ಲವೆನ್ನುವುದು ಗೊತ್ತಾಗುತ್ತದೆ. ಉದಾಹರಣೆಗೆ,
- ನಾನು ಬಂದೆನು - ಇಲ್ಲಿ ಬಂದೆನು ಎನ್ನುವಲ್ಲಿ ಕೊನೆಗಿರುವ ಉತ್ತಮಪುರುಷ, ಪುಂಸ್ತ್ರೀಲಿಂಗ, ಏಕವಚನವಾಚಕವಾದ ಎನು ಪ್ರತ್ಯಯದ ಆದಿಯಲ್ಲಿ ಆಡುಭಾಷೆಯಲ್ಲಿ ಕಾಣುವುದು, ಪೂರ್ಣ ಎಕಾರವಲ್ಲ.
ಕನ್ನಡದ ಹೆಚ್ಚಿನ ಪ್ರಾಂತ್ಯಗಳ ಆಡುಭಾಷೆಯಲ್ಲಿ, ನಾನು ಬಂದೆನು ಎನ್ನುವುದನ್ನು, ಹೆಚ್ಚಾಗಿ ನಾನು ಬಂದೆ ಎನ್ನುವುದೇ ರೂಢಿ. ಇಲ್ಲೂ ಕೊನೆಯ ಎಕಾರವು ಉತ್ತಮಪುರುಷ, ಪುಂಸ್ತ್ರೀಲಿಂಗ, ಏಕವಚನವಾಚಕವೇ ಆಗಿದೆ. ಇಲ್ಲಂತೂ, ಈ ಕೊನೆಯ ಎಕಾರವು ಪೂರ್ಣ ಎಕಾರವಲ್ಲವೆನ್ನುವುದು ಇನ್ನೂ ಸ್ಪಷ್ಟವಾಗುತ್ತದೆ.
ಈ ಎಕಾರವೂ ತುಳುವಿನ ಎ್‍ಕಾರಕ್ಕೆ ಹತ್ತಿರವಾಗಿಯೇ ಇದೆಯಾದರೂ, ಅದನ್ನು ತುಳುವಿನದೇ ಎ್‍ಕಾರವೆಂದು ಖಚಿತವಾಗಿ ಹೇಳುವುದು ಕಷ್ಟ. ಎಕೆಂದರೆ, ತುಳುವಿನಂತೆ ಕನ್ನಡದಲ್ಲಿ, ಎ್‍ಕಾರ (ಅರ್ಧ), ಎಕಾರಗಳು (ಪೂರ್ಣ) ಹೆಚ್ಚಾಗಿ ವ್ಯಾಕರಣ, ಆರ್ಥವ್ಯತ್ಯಾಸಗಳನ್ನು ಉಂಟುಮಾಡುವುದಿಲ್ಲ. ಹಾಗಾಗಿ, ಅವುಗಳ ಉಚ್ಚಾರಣಾಸೂಕ್ಷ್ಮವನ್ನು ಯಾವಾಗಲೂ ತೋರಿಸುವ ಆವಶ್ಯಕತೆಯಿಲ್ಲವಾಗಿ, ಕನ್ನಡದಲ್ಲಿ ಎ್‍ಕಾರ, ಎಕಾರಗಳ ವ್ಯತ್ಯಾಸವು ಕನ್ನಡಿಗರ ಗಮನಕ್ಕೆ ಅಷ್ಟಾಗಿ ಬರುವುದಿಲ್ಲ.
ಆದರೆ, ಈ ಮೇಲೆ ಹೇಳಿದ ಎಕಾರವು ಪೂರ್ಣ ಎಕಾರವಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ. ಏಕೆಂದರೆ, ನಾನು ಬಂದೆ ಎನ್ನುವಲ್ಲಿ ಪೂರ್ಣ ಎಕಾರವನ್ನು ಉಚ್ಚರಿಸಿದರೆ ಕನ್ನಡಿಗರಿಗೆ ಅದು ಮಕ್ಕಳ ಮಾತಿನಂತೆ ಕೇಳುತ್ತದೆ ಅಥವಾ ಹಾಸ್ಯರಸವನ್ನು ಮೂಡಿಸುತ್ತದೆ. ಕನ್ನಡದ ನಾಟಕ, ಚಲಚಿತ್ರ, ಧಾರಾವಾಹಿಗಳಲ್ಲಿ ಹಾಸ್ಯಪಾತ್ರಗಳು ಹೀಗೆ ಪೂರ್ಣ ಎಕಾರವನ್ನು ಸಮರ್ಥವಾಗಿ ಬಳಸಿರುವುದನ್ನು, ಈಗಲೂ ಬಳಸುತ್ತಿರುವುದನ್ನು ಗಮನಿಸಬಹುದು.
ಹೀಗೆ, ಈ ಎಕಾರವನ್ನು ತುಳುವಿನ ಆರ್ಧ ಎಕಾರವೆನ್ನದಿದ್ದರೂ (ಎ್‍ಕಾರ), ಪೂರ್ಣ ಎಕಾರವಲ್ಲವೆಂದಂತೂ ಧೈರ್ಯವಾಗಿ ಹೇಳಬಹುದು. IPAಯ ɛ ಎನ್ನುವುದಕ್ಕೆ ಹತ್ತಿರವಿರುವ, ಮುಕ್ಕಾಲು ಎಕಾರವೆನ್ನಬಹುದೇನೋ.
ಹಾಗೆಯೇ, ಕನ್ನಡದಲ್ಲಿ ಕಾಣುವ ಎರಡು ಉತ್ತಮಪುರುಷ, ಪುಂಸ್ತ್ರೀಲಿಂಗದ ಸರ್ವನಾಮರೂಪಗಳಲ್ಲಿ ಒಂದಾದ ಆನು (ಇನ್ನೊಂದು, ನಾನು) ಎನ್ನುವುದರ ವಿಭಕ್ತಿರೂಪಗಳ (ಎನ್ನನು, ಎನ್ನಿಂದ, ಎನಗೆ, ಎನ್ನ, ಎನ್ನಲ್ಲಿ) ಆದಿಯಲ್ಲಿ ಆದೇಶವಾಗಿ ಬರುವ ಎನ್ ಎನ್ನುವ ತುಣುಕಲ್ಲೂ ಇರುವುದು, ಪೂರ್ಣ ಎಕಾರವಲ್ಲ. ಇದೂ ಆಕಸ್ಮಿಕವಲ್ಲ. ಕ್ರಿಯಾಪದಗಳ ಕೊನೆಯಲ್ಲಿ ಉತ್ತಮಪುರುಷ, ಪುಂಸ್ತ್ರೀಲಿಂಗ, ಏಕವಚನವನ್ನು ಸೂಚಿಸುವ ಎನ್ ಪ್ರತ್ಯಯ ಹಾಗೂ ಉತ್ತಮಪುರುಷ, ಪುಂಸ್ತ್ರೀಲಿಂಗದ ಸರ್ವನಾಮದ ಆದೇಶರೂಪ ಎನ್, ಇವೆರಡೂ ಒಂದೇ ಆಗಿವೆ. ಆದುದರಿಂದಲೇ, ಇವೆರಡರಲ್ಲೂ ಅಪೂರ್ಣ ಎಕಾರವೇ ಕಾಣಿಸುತ್ತದೆ.
ಆನು ಎನ್ನುವುದರ ಬಹುವಚನರೂಪದ (ಆಮ್) ವಿಭಕ್ತಿರೂಪಗಳ (ಎಮ್ಮನು, ಎಮ್ಮಿಂದ, ಎಮಗೆ, ಎಮ್ಮ, ಎಮ್ಮಲ್ಲಿ) ಆದಿಯಲ್ಲಿ ಆದೇಶವಾಗಿ ಬರುವ ಎಮ್ ಎನ್ನುವ ತುಣುಕಲ್ಲೂ ಅಪೂರ್ಣ ಎಕಾರವೇ ಕಾಣಿಸುತ್ತದೆ. ಆದರೆ, ಕ್ರಿಯಾಪದಗಳ ಕೊನೆಯಲ್ಲಿ ಉತ್ತಮಪುರುಷ, ಪುಂಸ್ತ್ರೀಲಿಂಗ, ಬಹುವಚನವನ್ನು ಸೂಚಿಸುವ ಎವು ಪ್ರತ್ಯಯದಲ್ಲಿ ಪೂರ್ಣ, ಅಪೂರ್ಣ ಎಕಾರಗಳೆರಡೂ ಕಾಣಿಸುತ್ತವೆ.
ಸೂಕ್ಷ್ಮವಾಗಿ ಗಮನಿಸಿದರೆ, ತುಳುವಿನಂತೆ, ಕೆಲವು ಸಂದರ್ಭಗಳಲ್ಲಿ ಕನ್ನಡದಲ್ಲೂ, ಅಪೂರ್ಣ ಹಾಗೂ ಪೂರ್ಣ ಎಕಾರಗಳಿಂದ ಅರ್ಥವ್ಯತ್ಯಾಸವಾಗುತ್ತದೆ ಎಂದೆನಿಸುತ್ತದೆ. ಉದಾಹರಣೆಗೆ, ಹೇಳಿದೆ ಎನ್ನುವುದರ ಬೇರೆ ಬೇರೆ ರೀತಿಯ ಪ್ರಯೋಗಗಳನ್ನು ನೋಡೋಣ.
- ನಾನು ಹೀಗೆ ಹೇಳಿದೆ - ಇಲ್ಲಿ ಹೇಳಿದೆ ಎನ್ನುವುದರ ಕೊನೆಯಲ್ಲಿರುವ ಅಪೂರ್ಣ ಎಕಾರವು ಉತ್ತಮಪುರುಷ, ಪುಂಸ್ತ್ರೀಲಿಂಗ, ಏಕವಚನವನ್ನು ಸೂಚಿಸುತ್ತದೆ.
- ನೀನು ಏನು ಹೇಳಿದೆ? - ಇಲ್ಲಿ ಹೇಳಿದೆ ಎನ್ನುವುದರ ಕೊನೆಯಲ್ಲಿರುವ ಎಕಾರವು ಮಧ್ಯಮಪುರುಷ, ಪುಂಸ್ತ್ರೀಲಿಂಗ, ಏಕವಚನವನ್ನು ಸೂಚಿಸುತ್ತದೆ. ನಾಟಕ, ಕವನಗಳಲ್ಲಿರಬಹುದಾದ ಸಂಭಾಷಣೆಗಳನ್ನು ವಾಚಿಸುವಾಗ (ಹಾಸ್ಯಸಂದರ್ಭದಲ್ಲೇ ಇರಬೇಕೆಂದಿಲ್ಲ) ಇಲ್ಲಿ ಪೂರ್ಣ ಎಕಾರವು ಕೇಳಿಸುತ್ತದಾದರೂ, ಆಡುನುಡಿಯಲ್ಲಿ ಅಪೂರ್ಣ ಎಕಾರವೇ ಕೇಳಿಸುತ್ತದೆ.
- ಆ ಪುಸ್ತಕದಲ್ಲಿ ಹಾಗೆ ಹೇಳಿದೆ - ಇಲ್ಲಿ ಹೇಳಿದೆ ಎನ್ನುವುದರ ಕೊನೆಯಲ್ಲಿರುವ ಪೂರ್ಣ ಎಕಾರವು ಇದೆ ಎನ್ನುವ, ಇರ್ ಕ್ರಿಯಾಪದಧಾತುವಿನ ನಪುಂಸಕಲಿಂಗದ ಕ್ರಿಯಾರೂಪದ, ಭಾಗವಾಗಿದೆ.
ಆದರೆ, ಅನೇಕ ಪ್ರಾಂತ್ಯಗಳಲ್ಲಿ ಇಂತಹ ಉಚ್ಚಾರಣಾವ್ಯತ್ಯಾಸ ಈಗ ಉಳಿದಿಲ್ಲ ಮಾತ್ರವಲ್ಲ, ಕೆಲವು ಪ್ರಾಂತ್ಯಗಳ ಆಡುನುಡಿಯಲ್ಲಿ, ಹ್ರಸ್ವ ಎಕಾರವಿರುವ ಎಲ್ಲೆಡೆಯಲ್ಲೂ ತುಳುವಿನ ಎ್‍ಕಾರದಂತಹ ಉಚ್ಚಾರಣೆಯೇ ಕೇಳಿಬರುತ್ತಿದೆ. ಕನ್ನಡದ ಲಿಪಿಯಲ್ಲೂ ಎ್‍ಕಾರ, ಎಕಾರಗಳೆರಡಕ್ಕೂ ಒಂದೇ ವರ್ಣವಿರುವುದರಿಂದ (ಎ), ಇವುಗಳ ಉಚ್ಚಾರಣಾವ್ಯತ್ಯಾಸವು ಅಳಿಸಿಯೇ ಹೋಗುವಂತಾಗಿದೆ. ಆದರೂ, ಉತ್ತಮಪುರುಷ, ಪುಂಸ್ತ್ರೀಲಿಂಗ, ಎಕವಚನದ ಸಂದರ್ಭದಂತಹ ಕೆಲವೆಡೆ ಅಪೂರ್ಣ ಎಕಾರವು ಕೇಳಿಸುವುದರಿಂದ, ಕನ್ನಡದ ಎ್‍ಕಾರದ ವಿಚಾರವನ್ನು, ಸ್ವಲ್ಪ ವಿವಾದಾಸ್ಪದವಾದರೂ ಆವಶ್ಯಕವೆನಿಸಿ, ಇಲ್ಲಿ ನಿರೂಪಿಸಿದ್ದೇನೆ.
ಹಿಂದೀ, ಉರ್ದೂ ಭಾಷೆಗಳಲ್ಲಿ ಐ, ಔಕಾರಗಳು
- ಐ್ - ಏ್, ಇಕಾರಗಳುಳ್ಳ ಅವಳಿಸ್ವರ
- ಕೈ್ - ವ್ಯಂಜನದೊಂದಿಗೆ ವ್ಯಂಜನದೊಂದಿಗೆ
- ಔ್ - ಓ್, ಉಕಾರಗಳುಳ್ಳ ಅವಳಿಸ್ವರ
- ಕೌ್ - ವ್ಯಂಜನದೊಂದಿಗೆ ಓ್, ಉಕಾರಗಳುಳ್ಳ ಅವಳಿಸ್ವರ
ಸಾರಾಂಶ
ದ್ರಾವಿಡಭಾಷೆಗಳಲ್ಲಿ, ಇತರ ಭಾರತೀಯ ಭಾಷೆಗಳಲ್ಲಿ ಕಾಣುವ ಹಲವು ಸ್ವರಗಳು ಕಾಣಿಸುತ್ತವೆ. ಹಾಗೆಯೇ, ಕೆಲವು ಸ್ವರಗಳು, ದ್ರಾವಿಡಭಾಷೆಗಳಲ್ಲೇ ವಿಶೇಷವಾಗಿ ಕಂಡುಬಂದು, ಇತರ ಭಾರತೀಯ ಭಾಷೆಗಳಲ್ಲಿ ವಿರಳವಾಗಿ ಕಾಣಿಸುತ್ತವೆ. ಇಂತಹ ವಿಶೇಷವಾದ ಸ್ವರಗಳಲ್ಲಿ, ತುಳು, ತಮಿಳು, ಮಲಯಾಳ ಇತ್ಯಾದಿಗಳಲ್ಲಿ ಕಾಣುವ ಅರ್ಧ ಉಕಾರ (ಉ್) ಹಾಗೂ ತುಳುವಿನಲ್ಲಿ ಕಾಣುವ ಅರ್ಧ ಎಕಾರಗಳು (ಎ್) ಪ್ರಮುಖವಾಗಿವೆ. ದ್ರಾವಿಡಭಾಷೆಗಳಲ್ಲಿ, ಅರ್ಧ ಒಕಾರವೂ ಇದೆಯೋ ಎನ್ನುವುದು ಯೋಚನಾರ್ಹ.
ಇವುಗಳನ್ನು ಅರ್ಧ ಉಕಾರ, ಅರ್ಧ ಎಕಾರವೆನ್ನುವುದು ಕೇವಲ ಉಚ್ಚಾರಣೆಯ ಸಂದರ್ಭದಲ್ಲಿ ಬಾಯಿ, ನಾಲಗೆ, ತುಟಿಗಳು ಪೂರ್ಣ ಉಕಾರ, ಎಕಾರಗಳನ್ನು ಉಚ್ಚರಿಸುವಾಗಿನಂತಿರದೆ, ಸ್ವಲ್ಪ ಬೇರೆಯಾಗಿರುವುದೇ ಕಾರಣವಷ್ಟೇ ಹೊರತು, ಅವುಗಳ ಉಚ್ಚಾರಣೆಯ ಕಾಲಪ್ರಮಾಣವಲ್ಲ. ಈ 'ಅರ್ಧ' ಸ್ವರಗಳಿಗೂ ಹ್ರಸ್ವ, ದೀರ್ಘ ರೂಪಗಳಿದ್ದು, ಅವು ಕ್ರಮವಾಗಿ, ಒಂದು, ಎರಡು ಮಾತ್ರಾಕಾಲಗಳನ್ನು ವ್ಯಾಪಿಸುತ್ತವೆ.
ಕನ್ನಡಲಿಪಿಯಲ್ಲಿ, ಈ ಅರ್ಧ ಉಕಾರ, ಎಕಾರಗಳಿಗೆ ತಕ್ಕುದಾದ ವರ್ಣ, ಸಂಜ್ಞೆಗಳಿಲ್ಲದಿರುವುದರಿಂದ ಅವುಗಳನ್ನು ಕೆಳಗಿನಂತೆ ಸೂಚಿಸಬಹುದು ಎಂದುಕೊಂಡಿದ್ದೇನೆ.
- ಉ್ - ಹ್ರಸ್ವ ಅರ್ಧ ಉಕಾರ
- ಊ್ - ದೀರ್ಘ ಅರ್ಧ ಉಕಾರ
- ಕು್ - ವ್ಯಂಜನದೊಂದಿಗೆ ಹ್ರಸ್ವ ಅರ್ಧ ಉಕಾರ
- ಕೂ್ - ವ್ಯಂಜನದೊಂದಿಗೆ ದೀರ್ಘ ಅರ್ಧ ಉಕಾರ
- ಎ್ - ಹ್ರಸ್ವ ಅರ್ಧ ಉಕಾರ
- ಏ್ - ದೀರ್ಘ ಅರ್ಧ ಉಕಾರ
- ಕೆ್ - ವ್ಯಂಜನದೊಂದಿಗೆ ಹ್ರಸ್ವ ಅರ್ಧ ಎಕಾರ
- ಕೇ್ - ವ್ಯಂಜನದೊಂದಿಗೆ ದೀರ್ಘ ಅರ್ಧ ಎಕಾರ
- ಈ ಲೇಖನದಲ್ಲಿರುವ ವಿಚಾರಗಳನ್ನು ಚರ್ಚಿಸಿ, ಟೀಕಿಸಿ, ತಿದ್ದಿದ ಶ್ರೀ ಪ್ರೇಮ್ ಖಮಿತ್ಕರ್ ಹಾಗೂ ಶ್ರೀ ಗಣೇಶಕೃಷ್ಣ ಶಂಕರತೋಟ ಅವರಿಗೆ ಕೃತಜ್ಞತೆಗಳು.
- "ಕನ್ನಡದಲ್ಲಿ ಎ್‍ಕಾರ" ಎನ್ನುವ ವಿಚಾರವನ್ನು ಸೇರಿಸಿದ್ದೇನೆ.
This work is licensed under a Creative Commons Attribution-NonCommercial-NoDerivatives 4.0 International License. Since there is some original research in this work, please inform in the comment section below, if you want to quote or use this or any part of this work.
Comments
Post a Comment