ಕೊರೋನಾ ಸೋಂಕಿತರಿಗೆ ಲಸಿಕೆ ಹಾಕುವುದರ ಹಿಂದೆಮುಂದೆ...
ಕೊರೋನಾ ಸೋಂಕಿತರಿಗೆ ಲಸಿಕೆ ಹಾಕದಿರುವುದರ ಪರವಾಗಿ ಹಾಗೂ ಹಾಕಿಸಲು ನಿರ್ಧರಿಸಿರುವ ಭಾರತೀಯ ಸರಕಾರದ ನಿಲುವಿನ ಹಿಂದಿರಬಹುದಾದ ಷಡ್ಯಂತ್ರದ ಬಗೆಗೆ ಡಾ. ಶ್ರೀನಿವಾಸ ಕಕ್ಕಿಲ್ಲಾಯರು ತಮ್ಮ ಫೇಸ್ಬುಕ್ಕಿನಲ್ಲಿ ಬರೆದಿದ್ದಾರೆ.
ಲಸಿಕೆಯ ಅವ್ಯವಸ್ಥೆಯ ಮೇಲೆ ಕಿಡಿಕಾರುವ ಭರದಲ್ಲಿ ಡಾ. ಕಕ್ಕಿಲ್ಲಾಯರು ತಮ್ಮ ಅಜ್ಞಾನವನ್ನೂ ಕಾರಿರುವಂತಿದೆ.
ಅವರು ಅಲ್ಲಿ ಪ್ರಸ್ತಾಪಿಸಿದ “ಕೊರೋನಾ ಸೋಂಕಿತರಿಗೆ ಲಸಿಕೆಯ ಅಗತ್ಯವಿಲ್ಲ” ಎನ್ನುವ ವಾದವನ್ನು ಅವರ ವೈದ್ಯಕೀಯ ಅನುಭವವನ್ನು ಗೌರವಿಸಿ ಸರಿಯೆಂದೇ (ಅದು ನಿಜವಾಗಿ ಸರಿಯಲ್ಲದಿದ್ದರೂ) ಭಾವಿಸೋಣ. ಈ ವಾದದ ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಬದಲಾಗಿ, ಅದರ ಅಪ್ರಸ್ತುತತೆ ಹಾಗೂ (ಒಂದುವೇಳೆ ಸರಿಯೇ ಆಗಿದ್ದರೂ) ಅದರಿಂದ ಆಗಬಹುದಾದ ಅನಾಹುತದ ಪರಿಚಯವನ್ನು ಓದುಗರಿಗೆ ಮಾಡಿಕೊಡುವ ಸಣ್ಣ ಪ್ರಯತ್ನವಿದು.
1. ಈಗ ನಮ್ಮ ಮುಂದಿರುವ ಅತಿ ದೊಡ್ಡ ದುರಂತವೆಂದರೆ multiplicative ಮತ್ತು additive ಪ್ರಕ್ರಿಯೆಗಳ ನಡುವಿನ ವ್ಯತ್ಯಾಸದ ಸರಿಯಾದ ತಿಳುವಳಿಕೆಯ ಅಭಾವ.
ಈ ವ್ಯತ್ಯಾಸವನ್ನೂ, ಅದರ ತಿಳುವಳಿಕೆಯ ಅಭಾವದಿಂದ ಆಗಬಹುದಾದ ಅನಾಹುತವನ್ನೂ ಆದಷ್ಟು ಚುಟುಕಾಗಿ ಹೇಳಬಯಸುತ್ತೇನೆ. ಸಾಂಕ್ರಾಮಿಕರೋಗಶಾಸ್ತ್ರವನ್ನು(epodemiology) multiplicative ಪ್ರಕ್ರಿಯೆಗೆ ಉದಾಹರಣೆಯಾಗಿಯೂ, ವೈದ್ಯಕೀಯ ವೃತ್ತಿಯನ್ನು additive ಪ್ರಕ್ರಿಯೆಗೆ ಉದಾಹರಣೆಯಾಗಿಯೂ ಇಲ್ಲಿ ತೆಗೆದುಕೊಳ್ಳಬಹುದು.
ಸಾಂಕ್ರಾಮಿಕರೋಗಶಾಸ್ತ್ರದಲ್ಲಿ ಮಾಡುವ ಒಂದು ತಪ್ಪು, ಒಂದೇ ವರ್ಷದಲ್ಲಿ, ಲಕ್ಷಗಟ್ಟಲೆ ಜೀವಗಳನ್ನು ಬಲಿ ತೆಗೆದುಕೊಳ್ಳಬಹುದು! ಉದಾಹರಣೆಗೆ, ಡಾ. ಕಕ್ಕಿಲ್ಲಾಯರ “ಕೊರೋನಾ ಸೋಂಕಿತರಿಗೆ ಲಸಿಕೆಯ ಅಗತ್ಯವಿಲ್ಲ” ಎಂಬ ಸಲಹೆಯನ್ನು ಜಾರಿಗೊಳಿಸಲು ಕೊರೋನಾ ಸೋಂಕಿತರಾಗಿ ಗುಣಮುಖರಾದವರ ಕೊರೋನಾ ಪರೀಕ್ಷೆಯಾಗಬೇಕಷ್ಟೇ? ಯಾವುದೇ ರೀತಿಯ ಪರೀಕ್ಷೆಯಾದರೂ false-positive ಎನ್ನುವ ತೊಂದರೆಗೆ ಹೊರತಲ್ಲ. ಕೊರೋನಾ RT-PCR ಪರೀಕ್ಷೆಯ false-positivity rate ಕಡಿಮೆಯೆಂದರೆ 0.2%. ಅಂದರೆ, ಪ್ರತಿ 1000 ಪರೀಕ್ಷೆಗೊಳಗಾದವರಲ್ಲಿ ಇಬ್ಬರು ಕೊರೋನಾ ಸೋಂಕಿಲ್ಲದಿದ್ದರೂ ಸೋಂಕಿತರೆಂದು ಘೋಷಿಸಲ್ಪಡುತ್ತಾರೆ. ಇದು ಅನಿವಾರ್ಯ ಸತ್ಯ. ಹಾಗಾದರೆ, ಅವರೇ ಹೇಳಿದ 80 ಕೋಟಿ ಜನರಲ್ಲಿ 16 ಲಕ್ಷ ಜನರು (80 ಕೋಟಿ x 0.2 / 100) ಕೊರೋನಾ ಸೋಂಕಿಲ್ಲದಿದ್ದರೂ ಸೋಂಕಿತರೆಂದು ಘೋಷಿಸಲ್ಪಡುತ್ತಾರೆ. ಇವರೆಲ್ಲ ಡಾ. ಕಕ್ಕಿಲ್ಲಾಯರ ಸಲಹೆಯಂತೆ ಲಸಿಕೆ ಹಾಕಿಸಿಕೊಳ್ಳದೆ ಮುಂದೊಂದು ದಿನ ನಿಜವಾಗಿಯೂ ಸೋಂಕಿತರಾದರೆ ಅವರಲ್ಲಿ 1.1% (ದೇಶದಲ್ಲಿ ಸದ್ಯದ ಕೊರೋನಾದ ಸೋಂಕಿನಿಂದ ಮೃತರಾದವರ ಶೇಕಡಾವಾರು ಸಂಖ್ಯೆ), ಅಂದರೆ 17.6 ಸಾವಿರ (16 ಲಕ್ಷ x 1.1 / 100) ಜನರು ಮೃತರಾಗುತ್ತಾರೆ.
ಡಾ. ಕಕ್ಕಿಲ್ಲಾಯರು ಪ್ರಖ್ಯಾತ ವೈದ್ಯರು. ಅವರ ಸಲಹೆಯನ್ನು ನಂಬಿ ಕರ್ನಾಟಕದ 6.7 ಕೋಟಿ ಜನರು ಬರಿಯ ಕೆಮ್ಮು-ನೆಗಡಿಯನ್ನೂ ಕೊರೋನಾವೆಂದೇ ತಿಳಿದು, ಲಸಿಕೆಯನ್ನು ಹಾಕಿಸಿಕೊಳ್ಳದೆ ತಣ್ಣನೆ ಕುಳಿತರೆ, ಮುಂದೆ ಅವರೆಲ್ಲ ಸೋಂಕಿತರಾಗಿ ಅವರಲ್ಲಿ 1.1% (ಮೇಲೆ ಹೇಳಿದಂತೆ ಮೃತರ ಶೇಕಡಾವಾರು ಸಂಖ್ಯೆ), ಅಂದರೆ 7 ಲಕ್ಷ ಜನರು, ಡಾ. ಕಕ್ಕಿಲ್ಲಾಯರ “ಕೊರೋನಾ ಸೋಂಕಿತರಿಗೆ ಲಸಿಕೆಯ ಅಗತ್ಯವಿಲ್ಲ” ಎಂಬ ಸಲಹೆಯ ಪರಿಣಾಮವಾಗಿ, ಮೃತರಾಗಬಹುದು. ಇದು ಸಾಧ್ಯತೆ ಮಾತ್ರ. ನಿಜವಾಗಿಯೂ ಆಗಬೇಕೆಂದೇನೂ ಇಲ್ಲ. ಆದರೆ ಆಗಬಹುದಾದ ಅನಾಹುತಗಳನ್ನು ತಡೆಯುವುದೇ ಸಾಂಕ್ರಾಮಿಕರೋಗಶಾಸ್ತ್ರದ ಅತಿ ಮುಖ್ಯವಾದ ವಿಷಯ! ಸಾವಿರಗಟ್ಟಲೆ, ಲಕ್ಷಗಟ್ಟಲೆ ಜನರ ಜೀವದೊಂದಿಗೆ ಚೆಲ್ಲಾಟವಾಡುವ ಎದೆಗಾರಿಕೆ ನಮಗೆ ಬೇಕೇ?
ಹೀಗಿರುವಾಗ, ದಕ್ಷರೂ, ಅತಿಪರಿಶ್ರಮಿಯೂ ಆದ ವೈದ್ಯರೊಬ್ಬರು, ಪ್ರತಿ ದಿನದಲ್ಲಿ (ವಾರಾಂತ್ಯದಲ್ಲೂ ಕೂಡ!) 12 ಗಂಟೆ, ಪ್ರತಿ ಗಂಟೆಯಲ್ಲಿ 12 ರೋಗಿಗಳ ಚಿಕಿತ್ಸೆ (5 ನಿಮಿಷಕ್ಕೊಬ್ಬರಂತೆ) ಮಾಡುತ್ತಾರೆ, ಯಾವ ರೋಗಿಗೂ ಒಂದಕ್ಕಿಂತ ಹೆಚ್ಚು ಬಾರಿ ಚಿಕಿತ್ಸೆ ಮಾಡುವುದಿಲ್ಲ ಹಾಗೂ ಪ್ರತಿ ಚಿಕಿತ್ಸೆಯೂ ರೋಗಿಯ ಜೀವವನ್ನುಳಿಸುತ್ತದೆ ಎಂದರೆ, ತಮ್ಮ 3 ದಶಕಗಳ ಸೇವಾವಧಿಯಲ್ಲಿ ಹೆಚ್ಚೆಂದರೆ ಸುಮಾರು 16 ಲಕ್ಷ (12 x 12 x 365 x 30) ಜೀವಗಳನ್ನು ಅವರು ಉಳಿಸಬಹುದು.
ಡಾ. ಕಕ್ಕಿಲ್ಲಾಯರು ತಮ್ಮ ಸೇವಾವಧಿಯಲ್ಲಿ ಉಳಿಸಿರಬಹುದಾದ 16 ಲಕ್ಷ ಜೀವಗಳನ್ನು ಒಂದೇ ವರ್ಷದಲ್ಲಿ ರಾಜ್ಯದಲ್ಲಿ ಕಳೆದುಕೊಳ್ಳಬಹುದಾದ 7 ಲಕ್ಷ ಜೀವಗಳೊಂದಿಗೆ ತಕ್ಕಡಿಯಲ್ಲಿ ತೂಗಲು ಬಯಸಿಯಾರೇ? ಅವರು ಮುಂದಿನ 13-14 ವರ್ಷಗಳ ಸೇವೆಯಲ್ಲಿ (ಕನ್ನಡಜನತೆ ಅವರ ಸೇವೆಯ ಲಾಭವನ್ನು ಇನ್ನೂ ಎಷ್ಟೋ ವರ್ಷಗಳ ಕಾಲ ಪಡೆಯುವಂತಾಗಲಿ) ಇನ್ನೂ 7 ಲಕ್ಷ ಜೀವಗಳನ್ನು ಉಳಿಸಿದರೂ ಹೋದ ಆ 7 ಲಕ್ಷ ಜೀವಗಳು ಮರಳಿ ಬರುತ್ತವೆಯೇ?
(ಓದುಗರು ದಯವಿಟ್ಟು ಗಮನಿಸಬೇಕು. ಇಲ್ಲಿ ಕೊಟ್ಟಿರುವವು RT-PCR ಪರೀಕ್ಷೆಗಳ ಸಂಖ್ಯೆಗಳು. ಆದರೆ ಕೊರೋನಾ ರೋಗ ತಗಲಿ ಹೋಗಿದೆಯೇ ಎಂದು ಕಂಡುಹಿಡಿಯಲು ಮಾಡಬೇಕಾದದ್ದು anti-body ಪರೀಕ್ಷೆ. ಆದರೂ, ಈ ಪರೀಕ್ಷೆಗಳನ್ನು ನಡೆಸಲು ಬೇಕಾಗುವ ಸಮಯದಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲದಿರುವುದರಿಂದ, ಹಾಗೂ anti-body ಪರೀಕ್ಷೆಗಳ false-positivity rate ಇನ್ನೂ ಹೆಚ್ಚಾಗಿರುವ ಕಾರಣದಿಂದ, ಮೇಲೆ ಕೊಟ್ಟಿರುವ ಉದಾಹರಣೆಗಳಿಗೆ ಹೆಚ್ಚೇನೂ ತೊಡಕಿಲ್ಲ).
2. ಡಾ. ಕಕ್ಕಿಲ್ಲಾಯರ ಸಲಹೆಯಂತೆ, “ಸೋಂಕಿತರಾದವರಿಗೆ ಲಸಿಕೆಯ ಅಗತ್ಯವಿಲ್ಲ” ಎಂದು ಸರಕಾರ ನಿರ್ಧರಿಸಿದರೆ, ದೇಶದಲ್ಲಿ ಇನ್ನೂ ಸೋಂಕಿತರಾಗದವರಿಗೆ (ಸದ್ಯದ ಅವ್ಯವಸ್ಥೆಯಲ್ಲಿ, “ಇನ್ನೂ ಸೋಂಕಿತರಾಗಲಿರುವವರಿಗೆ” ಎನ್ನಬೇಕೇನೋ!) ಲಸಿಕೆ ಹಾಕಿಸಿಕೊಳ್ಳಲು ಆಗಬಹುದಾದ ಪ್ರಯೋಜನವಾದರೂ ಏನು?
ಇಂದಿನ (14 ಮೇ 2021) ಅಧಿಕೃತ ಕೊರೋನಾ ಸೋಂಕಿನ ಅಂಕಿ-ಅಂಶಗಳ ಪ್ರಕಾರ (ಡಾ. ಕಕ್ಕಿಲ್ಲಾಯರು ಹೇಳಿದ “ಸರಕಾರದ ಅಂದಾಜು” ಅಲ್ಲ), ಈ ರೋಗ ಶುರುವಾದಂದಿನಿಂದ ಇಂದಿನವರೆಗೂ ಒಟ್ಟು ಸೋಂಕಿತರ ಸಂಖ್ಯೆ 2.4 ಕೋಟಿ. ಇವರಲ್ಲಿ, 2 ಕೋಟಿ ಜನರು ಈಗಾಗಲೇ ಗುಣಮುಖರಾಗಿ, 2.6 ಲಕ್ಷ ಜನ ಮೃತರಾಗಿದ್ದು, 37 ಲಕ್ಷ ಜನರು ರೋಗದಿಂದ ಇನ್ನೂ ಬಳಲುತ್ತಿದ್ದಾರೆ. 2.4 ಕೋಟಿ ಸೋಂಕಿತರಿಗೆ (2.6 ಲಕ್ಷ ಮೃತರ ಸಂಖ್ಯೆಯನ್ನು ಇಲ್ಲಿ ಕಳೆದಿಲ್ಲ) ಪ್ರತಿಯೊಬ್ಬರಿಗೆ 2 ಲಸಿಕೆಗಳಂತೆ, 4.8 ಕೋಟಿ ಲಸಿಕೆಗಳ ಉಳಿತಾಯವಾಗಿ, ಅವುಗಳನ್ನು ಸೋಂಕಿತರಲ್ಲದವರು ಪಡೆದುಕೊಳ್ಳಬಹುದು.
ಇಂದಿನ (14 ಮೇ 2021) ಅಧಿಕೃತ ಲಸಿಕೆ ಕಾರ್ಯಕ್ರಮದ ಅಂಕಿ-ಅಂಶಗಳ ಪ್ರಕಾರ, 12 ಮೇ 2021ರಂದು ಒಂದೇ ದಿನದಲ್ಲಿ ಇಡೀ ದೇಶದಲ್ಲಿ ಲಸಿಕೆಗಳನ್ನು ಪಡೆದುಕೊಂಡವರ ಸಂಖ್ಯೆ 18.9 ಲಕ್ಷ (ಏಪ್ರಿಲ್ ತಿಂಗಳಲ್ಲಿ ಇದು ಇನ್ನೂ ಹೆಚ್ಚಿತ್ತು!). ಪ್ರತಿದಿನ 15 ಲಕ್ಷ ಲಸಿಕೆಗಳೇ ಎಂದರೂ, 4.8 ಕೋಟಿ ಲಸಿಕೆಗಳನ್ನು 32 ದಿನಗಳಲ್ಲಿ ಕೊಡಬಹುದು. 1 ತಿಂಗಳು ಎನ್ನೋಣ.
ದೇಶದ ಸದ್ಯದ ಜನಸಂಖ್ಯೆ 139 ಕೋಟಿಯಲ್ಲಿ, ಮಕ್ಕಳಿಗೆ (ಅಂದರೆ, 18ರಿಂದ ಕಡಿಮೆ ವಯಸ್ಸಿನವರು) ಇನ್ನೂ 6 ತಿಂಗಳರಿಂದ 1 ವರ್ಷಗಳವರೆಗೂ (ಅಂದರೆ 2021 ಕೊನೆಯಿಂದ 2022 ವರ್ಷಾರ್ಧದವರೆಗೂ), ಲಸಿಕೆ ಕೊಡುವ ಸಾಧ್ಯತೆ ಕಡಿಮೆ. (ಅದಕ್ಕೆ ಬಹಳಷ್ಟು ಕಾರಣಗಳಿವೆ. ಆದರೆ ಲೇಖನದ ಗಾತ್ರ ಇನ್ನೂ ಹೆಚ್ಚಾಗದಿರಲೆಂದು ಅವುಗಳನ್ನಿಲ್ಲಿ ಪ್ರಸ್ತಾಪಿಸಿಲ್ಲ). 2019ರ ಮಾಹಿತಿಯ ಪ್ರಕಾರ (2021ರಲ್ಲಿ ವಯಸ್ಸಿನ ಪ್ರಕಾರ ಜನಸಂಖ್ಯೆಯ ಮಾಹಿತಿ ಇನ್ನೂ ಲಭ್ಯವಿಲ್ಲದಿರುವ ಕಾರಣ), 19ರಿಂದ ಕಡಿಮೆ ವಯಸ್ಸಿನವರು 35.9% (18ರಿಂದ ಕಡಿಮೆ ವಯಸ್ಸಿನವರ ಮಾಹಿತಿ ನನಗೆ ಸಿಗಲಿಲ್ಲ. ಇದರಿಂದ ಡಾ. ಕಕ್ಕಿಲ್ಲಾಯರ ವಾದಕ್ಕೆ ಸಹಾಯವೇ ಆಗುವುದರಿಂದ ಈ ಸಂಖ್ಯೆಯನ್ನು ಇಲ್ಲಿ ಉಪಯೋಗಿಸಿದರೆ ತೊಂದರೆಯಿಲ್ಲ). 36% ಎಂದೇ ಇರಲಿ. ಅಂದರೆ, 139 ಕೋಟಿಯಲ್ಲಿ 50 ಕೋಟಿ (139 x 36 / 100) ಜನರಿಗೆ ಲಸಿಕೆ ಸದ್ಯಕ್ಕಂತೂ ಕೊಡುವಂತಿಲ್ಲ.
ಇನ್ನುಳಿದ 89 ಕೋಟಿ (139 - 50) ಜನರಿಗೆ ಪ್ರತಿಯೊಬ್ಬರಿಗೆ 2 ಲಸಿಕೆಗಳಂತೆ ಬೇಕಾದ್ದು 178 ಕೋಟಿ ಲಸಿಕೆಗಳು. ಇವುಗಳನ್ನು ಕೊಡಲು ಬೇಕಾದ ಸಮಯ, ದಿನಕ್ಕೆ (ಮೇಲೆ ಹೇಳಿದ) 15 ಲಕ್ಷ ಲಸಿಕೆಗಳಂತೆ (178 ಕೋಟಿ / 15 ಲಕ್ಷ), 1187 ದಿನಗಳು! ಅಂದರೆ, 40 ತಿಂಗಳುಗಳು! ಅಂದರೆ, 3 ವರ್ಷಕ್ಕೂ ಹೆಚ್ಚು!
3 ವರ್ಷಗಳೆಲ್ಲಿ? 1 ತಿಂಗಳೆಲ್ಲಿ? ಡಾ. ಕಕ್ಕಿಲ್ಲಾಯರು ಯೋಚಿಸಬೇಕಿದೆ.
ಇಲ್ಲಿ ಪ್ರತಿಯೊಂದು ಹಂತದಲ್ಲೂ, ಸಂಶಯವಿರಬಹುದಾದಲ್ಲೆಲ್ಲಾ, ಡಾ. ಕಕ್ಕಿಲ್ಲಾಯರ ವಾದಕ್ಕೆ ಪೂರಕವಾಗಿರುವಂತೆಯೇ ಸಂಖ್ಯೆಗಳನ್ನು ಬಳಸಿರುವುದನ್ನು ಓದುಗರು ಗಮನಿಸಿಬೇಕು.
3. ಅವರು “ಸರಕಾರದ ಅಂದಾಜಿನಂತೆಯೇ ಈವರೆಗೆ ದೇಶದಲ್ಲಿ ಕನಿಷ್ಠ 80-100 ಕೋಟಿ ಜನರು ಸೋಂಕಿತರಾಗಿ ಗುಣಮುಖರಾಗಿರುತ್ತಾರೆ” ಎಂದು ಪ್ರಸ್ತಾಪಿಸಿದ್ದಾರೆ.
ಇದಕ್ಕೆ ಆಧಾರವನ್ನು ತಿಳಿಸಿಲ್ಲ. ಈ ರೋಗದಿಂದ ಗುಣಮುಖರಾದವರ ಅಧಿಕೃತ ಸಂಖ್ಯೆ ಮೇಲೆಯೇ ಹೇಳಿದಂತೆ 2 ಕೋಟಿ. ಆದರೆ ಡಾ. ಕಕ್ಕಿಲ್ಲಾಯರ ವಾದದ ಪರವಾಗಿ, ಸರಕಾರ ಹಸಿ ಹಸಿ ಸುಳ್ಳೇ ಹೇಳುತ್ತಿದೆ, ನಿಜವಾಗಿಯೂ 80 ಕೋಟಿ ಜನರು ಸೋಂಕಿತರಾಗಿದ್ದಾರೆ ಎಂದುಕೊಳ್ಳೋಣ.
ದೇಶದಲ್ಲಿ ಕೊರೋನಾದಿಂದ ಸೋಂಕಿತರಾದವರಲ್ಲಿ ಮೃತರಾದವರು 1.1% (2.6 ಲಕ್ಷ / 2.4 ಕೋಟಿ). ಇದು ವಿಶ್ವದ ಎಲ್ಲ ದೇಶಗಳಲ್ಲಿ ಸಣ್ಣದಾದ ಸಂಖ್ಯೆಗಳಲ್ಲೊಂದು. ವಿಶ್ವದಲ್ಲಿ ಸದ್ಯಕ್ಕೆ ಸಾಮಾನ್ಯವಾಗಿ 2.1%. ಅಮೇರಿಕಾ 1.8%, ಜರ್ಮನಿ 2.4%, ಹೀಗೆಲ್ಲಾ ಇದೆ. ಡಾ. ಕಕ್ಕಿಲ್ಲಾಯರ ವಾದದ ಪರವಾಗಿ ನಮ್ಮ ದೇಶದಲ್ಲಿ ಮೃತರಾದವರ ಸಂಖ್ಯೆ ನಿಜವಾಗಿ (ಶೇಕಡಾವಾರು) ಇನ್ನೂ ಬಹಳ ಕಡಿಮೆಯಿದೆ ಎಂದರೆ ಬೇರೆದೇಶಗಳಲ್ಲೂ ಸರಕಾರಗಳು ಗಣಿತ ತಿಳಿದಿಲ್ಲವೆಂದಂತಾದೀತು. ಹಾಗಾಗಿ ಸದ್ಯಕ್ಕೆ ದೇಶದಲ್ಲಿ ಕೊರೋನಾ ಸೋಂಕಿತರಲ್ಲಿ ಮೃತರಾದವರ ಸಂಖ್ಯೆ 1.1% ಎಂದೇ ಇಟ್ಟುಕೊಳ್ಳೋಣ. ಸುಲಭದ ಲೆಕ್ಕಾಚಾರಕ್ಕಾಗಿ, 1.1.% ಅನ್ನು, ಡಾ. ಕಕ್ಕಿಲ್ಲಾಯರ ವಾದದ ಪರವಾಗಿ ಕಡಿಮೆಮಾಡಿ, 1% ಎನ್ನೋಣ.
ಹಾಗಾದರೆ, 80 ಕೋಟಿ ಸೋಂಕಿತರಲ್ಲಿ 1%, ಅಂದರೆ 80 ಲಕ್ಷ ಜನರು ಈಗಾಗಲೇ ಮೃತರಾಗಿದ್ದಿರಬೇಕು! 80 ಲಕ್ಷ ಜನರ ಸಾವನ್ನು (ನರೇಂದ್ರ ಮೋದಿ ಹಿಟ್ಲರೇ ಆಗಿದ್ದಪಕ್ಷದಲ್ಲೂ ಸಹ) ಮುಚ್ಚಿಡುವುದು ಅಸಾಧ್ಯವಾದ ಮಾತು.
1% ಜನರಿಗೆ ಸಾವಲ್ಲ, ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯ ಮಾತ್ರ ಬಂದೊದಗಿತು ಎಂದಿಟ್ಟುಕೊಂಡರೂ (ಅದು ನಿಜವಾಗಿ 5%ರಿಂದ 20%), 80 ಲಕ್ಷ ಜನರಿಗೆ ಚಿಕಿತ್ಸೆಮಾಡಬೇಕಾದ ಸಂದರ್ಭ ನಮ್ಮೆಲ್ಲರ ಗಮನದಿಂದ ತಪ್ಪಿರಲು ಸಾಧ್ಯವೇ? 5% ಎಂದುಕೊಂಡರೆ, 4 ಕೋಟಿ ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯ ಬಂದೊದಗಿರಬೇಕು!
ಅಷ್ಟು ಸಂಖ್ಯೆಯಲ್ಲಿ ಚಿಕಿತ್ಸೆಯಾಗಿರುವುದು ಪ್ರಖ್ಯಾತ ವೈದ್ಯರಾದ ಡಾ. ಕಕ್ಕಿಲ್ಲಾಯರ ಗಮನಕ್ಕೆ ಬಂದಿದೆಯೇ?
ನಮ್ಮ ದೇಶದಲ್ಲಿರುವ ಒಟ್ಟು ಆಸ್ಪತ್ರೆಗಳ ಹಾಸಿಗೆಗಳ (ಸಾಮಾನ್ಯ, Oxygen, ICU ಹೀಗೆ ಯಾವುದೇ ರೀತಿಯ ವ್ಯವಸ್ಥೆಯಿರುವ ಅಥವಾ ಇಲ್ಲದಿರುವ) ಸಂಖ್ಯೆಯ ಅಂದಾಜು ಸುಮಾರು 7 ಲಕ್ಷದಿಂದ 19 ಲಕ್ಷ. (ಇದಕ್ಕಿಂತ ಖಚಿತವಾದ ಮಾಹಿತಿ ನನಗೆ ದೊರಕಿಲ್ಲ. ಓದುಗರು ಗೊತ್ತಿದ್ದಲ್ಲಿ ತಿಳಿಸಿ). 19 ಲಕ್ಷವೆಂದುಕೊಂಡರೂ, ಆಸ್ಪತ್ರೆಗಳು 2021 ಏಪ್ರಿಲಿಗಿಂತಲೂ ಎಷ್ಟೋ ತಿಂಗಳುಗಳ ಮೊದಲೇ ರೋಗಿಳಿಂದ ತುಂಬಿತುಳುಕಿ ಕಂಗಾಲಾಗಿರಬೇಕಿತ್ತು!
4. ಹೋಗಲಿ, ಡಾ. ಕಕ್ಕಿಲ್ಲಾಯರ “ಸೋಂಕಿತರಾದವರಿಗೆ ಲಸಿಕೆಯ ಅಗತ್ಯವಿಲ್ಲ” ಎನ್ನುವ ಸಲಹೆಯನ್ನು ಜಾರಿಗೊಳಿಸುವುದಾದರೂ ಹೇಗೆ? ಸೋಂಕಿತರಾದವರು ತಮಗೆ ಲಸಿಕೆಯ ಅಗತ್ಯವಿಲ್ಲವೆಂದು ನಿರ್ಧರಿಸುವ ಮೊದಲು ತಮಗೆ ಬಂದುಹೋದ ರೋಗ ಕೊರೋನಾವೋ, ಬೇರೆ ಯಾವುದೋ ಎಂದು ಪರೀಕ್ಷಿಸಿ ಧೃಢಪಡಿಸಿಕೊಳ್ಳಬೇಕಷ್ಟೇ?
ಈವರೆಗೆ ಇಡೀ ದೇಶದಲ್ಲಿ ಒಟ್ಟು 31 ಕೋಟಿ ಕೊರೋನಾ ಪರೀಕ್ಷೆಗಳು ನಡೆದಿವೆ. ಇವುಗಳಲ್ಲಿ ಪ್ರತಿಯೊಂದು ಪರೀಕ್ಷೆಯೂ ಬೇರೆ ಬೇರೆ ವ್ಯಕ್ತಿಗಳಿಗೇ ಆಗಿದೆ (ಅಂದರೆ, ಯಾವ ವ್ಯಕ್ತಿಯೂ ಒಂದಕ್ಕಿಂತ ಹೆಚ್ಚು ಬಾರಿ ಪರೀಕ್ಷೆಗೊಳಗಾಗಿಲ್ಲ) ಎಂದಿಟ್ಟುಕೊಂಡರೆ, ಡಾ. ಕಕ್ಕಿಲ್ಲಾಯರು ಹೇಳಿದ 80 ಕೋಟಿ (ಅಧಿಕೃತ ಸಂಖ್ಯೆ 2 ಕೋಟಿ) ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ 49 ಕೋಟಿ (80 - 31) ಜನರು ಇನ್ನೂ ಕೊರೋನಾ ಪರೀಕ್ಷೆಗೊಳಗಾಗಬೇಕಿದೆ.
12 ಮೇ 2021ರಂದು ಅಧಿಕೃತ ಕೊರೋನಾ ಪರೀಕ್ಷೆಯ ಅಂಕಿ-ಅಂಶಗಳ ಪ್ರಕಾರ ನಡೆದ ಕೊರೋನಾ ಪರೀಕ್ಷೆಗಳ ಸಂಖ್ಯೆ 18 ಲಕ್ಷ. ಇದೇ ವೇಗದಲ್ಲಿ ನಡೆದರೆ, ಇನ್ನೂ ಪರೀಕ್ಷಿಸಬೇಕಿರುವ 49 ಕೋಟಿ ಕೊರೋನಾ ಸೋಂಕಿನಿಂದ ಗುಣಮುಖರಾದವರನ್ನು ಪರೀಕ್ಷಿಸಲು 272 ದಿನಗಳು (49 ಕೋಟಿ / 18 ಲಕ್ಷ), ಅಂದರೆ 9 ತಿಂಗಳುಗಳು ಬೇಕು.
ನಾವು 9 ತಿಂಗಳು ಕೊರೋನಾ ಪರೀಕ್ಷೆ ಮಾಡುತ್ತಾ ಕೂರಬೇಕೇ? 6ರಿಂದ 12 ತಿಂಗಳೊಳಗೆ ಎಲ್ಲರಿಗೂ (ಸೋಂಕಿತರೋ, ಅಲ್ಲವೋ ಎಂದು ಲೆಕ್ಕಿಸದೆ) ಲಸಿಕೆ ಹಾಕಿಸಬೇಕೇ? ಇದು ಯೋಚಿಸಬೇಕಾದ ವಿಷಯ. ಲಸಿಕೆ ಹಾಕಿಸಿಕೊಳ್ಳಲು ನಿಮಿಷಗಳು ಸಾಕಾದರೆ, ಕೊರೋನಾ ಪರೀಕ್ಷೆಗೆ ಗಂಟೆಗಳು, ದಿನಗಳು ಬೇಕಾಗಿರುವುದೂ ಗಮನಿಸಬೇಕಾದ ವಿಷಯ. ಇದೇ ವೇಳೆ ನಿಜವಾಗಿಯೂ ಸೋಂಕಿತರಾದವರ ಪರೀಕ್ಷೆಗೆ ಏನು ಗತಿ? ಪರೀಕ್ಷೆಯಿಲ್ಲದೆ ಚಿಕಿತ್ಸೆಗೇನು ಗತಿ?
(ಈ ಮೇಲೆಯೇ ಹೇಳಿರುವಂತೆ, ಇಲ್ಲಿ ಕೊಟ್ಟಿರುವವು RT-PCR ಪರೀಕ್ಷೆಗಳ ಸಂಖ್ಯೆಗಳು. ಆದರೆ ಕೊರೋನಾ ರೋಗ ತಗಲಿ ಹೋಗಿದೆಯೇ ಎಂದು ಕಂಡುಹಿಡಿಯಲು ಮಾಡಬೇಕಾದದ್ದು anti-body ಪರೀಕ್ಷೆ. ಆದರೂ, ಈ ಪರೀಕ್ಷೆಗಳನ್ನು ನಡೆಸಲು ಬೇಕಾಗುವ ಸಮಯದಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲದಿರುವುದರಿಂದ, ಇಲ್ಲಿ ಮಂಡಿಸಿರುವ ವಾದಕ್ಕೆ ಹೆಚ್ಚೇನೂ ತೊಡಕಿಲ್ಲ).
ಲೋಕದ ಎಷ್ಟೋ (ನಮ್ಮಿಂದ ಮುಂದುವರೆದಿವೆ ಎಂದುಕೊಂಡಿರುವ) ದೇಶಗಳಲ್ಲಿ ಕೊರೋನಾ ರೋಗದ ೨ನೇ, ೩ನೇ ಅಲೆಗಳು ಮೊದಲಿನದಕ್ಕಿಂತಲೂ ೩, ೪, ೫ ಪಟ್ಟು ದೊಡ್ಡದಾಗಿ ಬಂದಿರುವಾಗ, ನಮ್ಮ ದೇಶದಲ್ಲಿ ಒಂದೇ ಅಲೆಗೆ ಮುಕ್ತಾಯವೆಂದು ತಿಳಿದು, ಲಸಿಕೆಯ ಕಾರ್ಯಕ್ರಮವನ್ನೂ ಸರಿಯಾಗಿ ಸಜ್ಜುಗೊಳಿಸದೆ, Oxygen, ICUಗಳ ವ್ಯವಸ್ಥೆಯನ್ನೂ ಸುಧಾರಿಸದೆ, ಕೊರೋನಾ ರೋಗವನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾದ ರಾಜ್ಯಗಳನ್ನು ತರಾಟೆಗೂ ತೆಗೆದುಕೊಳ್ಳದೆ, ತಣ್ಣನೆ ಕುಳಿತ ಸರಕಾರವನ್ನು ಟೀಕಿಸಬೇಕಾದ್ದು ಬೆಟ್ಟದಷ್ಟಿದೆ. ಕೊಡಬೇಕಾದ ಯೋಗ್ಯ ಸಲಹೆಗಳು, ಸರ್ಜನಶೀಲ ಪರಿಹಾರಗಳೂ ಅಷ್ಟೇ ಇವೆ.
ಆದರೆ ಡಾ. ಕಕ್ಕಿಲ್ಲಾಯರು ಇಲ್ಲಿ ಕೊಟ್ಟಿರುವಂಥ ಅಪ್ರಸ್ತುತ ಮಾತ್ರವಲ್ಲ, ವಿನಾಶಕಾರಿ ಸಲಹೆಗಳು ಬೇಕಿಲ್ಲ.
ಬದಲಾಗಿ, ಲಸಿಕೆಯ ತಯಾರಿಕೆ ಹೆಚ್ಚಿಸಿ, ನಮ್ಮೆಲ್ಲರ ಸಹಕಾರದೊಂದಿಗೆ, ಪ್ರತಿದಿನ 50 ಲಕ್ಷಕ್ಕಿಂತಲೂ ಹೆಚ್ಚು ಲಸಿಕೆಗಳನ್ನು ಕೊಡುವಂತಾಗಬೇಕಿದೆ. ಹಾಗಾದಲ್ಲಿ, ಮೇಲೆ ಹೇಳಿದ 89 ಕೋಟಿ 18-19 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು 1 ವರ್ಷದಲ್ಲಿ (89 ಕೋಟಿ x 2 ಲಸಿಕೆ / 50 ಲಕ್ಷ) ಲಸಿಕೆ ಪಡೆದುಕೊಳ್ಳುವಂತಾದೀತು. ಇನ್ನೂ ಹೆಚ್ಚಿಸಿ, ಪ್ರತಿದಿನ 1 ಕೋಟಿ ಜನರಿಗೆ ಲಸಿಕೆ ಹಾಕಿಸುವಂತಾದಲ್ಲಿ (ಇದು ಬಹಳ ಕಷ್ಟಸಾಧ್ಯ), ಈ ಕೆಲಸ 6 ತಿಂಗಳುಗಳಲ್ಲಿ ಸಾಧ್ಯವಾಗಬಹುದು.
ಇಂದು ನಮ್ಮ ಮುಂದಿರುವ ಸಮಸ್ಯೆ ಕಕ್ಕಿಲ್ಲಾಯರು ತಿಳಿಸಿದ್ದಕ್ಕಿಂತ ಕನಿಷ್ಠಪಕ್ಷ 30 ಪಟ್ಟು (1187 / 32) ದೊಡ್ಡದಾಗಿದೆ!
ಅವರ “ಕೊರೋನಾ ಸೋಂಕಿತರಿಗೆ ಲಸಿಕೆಯ ಅಗತ್ಯವಿಲ್ಲ” ಎನ್ನುವ “ಸಮಾಧಾನ”, ಈ ಸಮಸ್ಯೆಯನ್ನು ಸಾವಿರ ಪಟ್ಟು ದೊಡ್ಡದಾಗಿಸಲಿದೆ.
ಕೊರೋನಾ ರೋಗದಿಂದಲೂ, ಅದರ multiplicative ಪ್ರಕ್ರಿಯೆಯ ಅಜ್ಞಾನದಿಂದಲೂ, (ಡಾ. ಕಕ್ಕಿಲ್ಲಾಯರೂ ಸೇರಿ) ನಮ್ಮೆಲ್ಲರಿಗೆ ಆದಷ್ಟು ಬೇಗ ಮುಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
- ಅಂಶುಮಾನ್. ಕೆ. ಆರ್.
ತಿದ್ದುಪಡಿ:
ಹಿಂದಿನ ಅವೃತ್ತಿಯಲ್ಲಿ additive ಹಾಗೂ multiplicative ಪ್ರಕ್ರಿಯೆಗಳ ಅಂಶ ನಾಲ್ಕನೆಯದಾಗಿ ಈ ಲೇಖನದ ಕೊನೆಯಲ್ಲಿತ್ತು. ಅದನ್ನು ಈಗ ಪ್ರಮುಖಾಂಶವಾಗಿ ಮೊದಲಿಗಿಟ್ಟಿದ್ದೇನೆ. ಅದನ್ನೂ, ಇನ್ನೂ ಕೆಲವು ಅಂಶಗಳನ್ನು ಓದುವ ಸೌಕರ್ಯಕ್ಕಾಗಿ ಎತ್ತಿ ತೋರಿಸಿ, ಇಂಗ್ಲಿಷ್ ಅಂಕೆಗಳೊಂದಿಗೆ ಸ್ವಲ್ಪ ಬದಲಾಯಿಸಿ ಬರೆದಿದ್ದೇನೆ.
This work is licensed under a Creative Commons Attribution-NonCommercial-NoDerivatives 4.0 International License.
Comments
Post a Comment