ಕನ್ನಡದ ಭಕ್ತಿ - ಸರ್ವನಾಮಗಳ ಸರ್ಗ
ಈ ಲೇಖನವು ಈಗ GitHub ಇಗೆ ಸ್ಥಳಾಂತರಿತವಾಗಿದೆ. ಮುಂದಿನ ತಿದ್ದುಪಡಿಗಳು ಅಲ್ಲೇ ನಡೆಯುತ್ತವೆ. --- ಕನ್ನಡದ ಭಕ್ತಿಯನ್ನು ಮುಂದುವರೆಸುತ್ತಾ... ಪ್ರಸ್ತಾವನೆ ಕನ್ನಡದ ಪ್ರಥಮಪುರುಷ ದ (third-person) ಎಲ್ಲ ಲಿಂಗ, ವಚನಗಳ (ಅವನು, ಅವಳು, ಅದು, ಅವರು, ಅವು, ಇವನು, ಇವಳು, ಇದು, ಇವರು, ಇವು ಇತ್ಯಾದಿ) ಸರ್ವನಾಮಗಳೆಲ್ಲವೂ ಸ್ವರಾದಿಯಾಗಿದ್ದು, ಅವುಗಳಲ್ಲಿ ಒಂದು ರೀತಿಯ ವ್ಯವಸ್ಥಿತತೆ ಕಂಡುಬರುತ್ತದೆ. ದೂರವಾಚಕವಾದ ಅ (ದೂರ), ಇ (ಸಮೀಪ) ಎನ್ನುವ ಸ್ವರಗಳಿಗೆ ಲಿಂಗ, ವಚನವಾಚಕ (ಅನ್, ಅಳ್, ದ್, ಅರ್, ಮ್/ವ್ ಇತ್ಯಾದಿ) ಪ್ರತ್ಯಯಗಳು ಸೇರಿ, ಈ ಸರ್ವನಾಮಗಳು ರೂಪುಗೊಂಡಿವೆ ಎನ್ನುವುದು ಸುಲಭವಾಗಿ ತಿಳಿಯುತ್ತದೆ ಮಾತ್ರವಲ್ಲ, ಹೆಚ್ಚಿನೆಲ್ಲ ವೈಯಾಕರಣರೂ ಒಪ್ಪಿರುವ ಮತವೇ ಆಗಿದೆ. ಆದರೆ, ಮಧ್ಯಮಪುರುಷ ಸರ್ವನಾಮಗಳು (second-person) ನಕಾರಾದಿಯಾಗಿದ್ದರೆ (ನೀನು, ನೀವು), ಉತ್ತಮಪುರುಷ ಸರ್ವನಾಮಗಳಲ್ಲಿ (first-person) ನಕಾರಾದಿಯಾದ (ನಾನು, ನಾವು) ಹಾಗೂ ಸ್ವರಾದಿಯಾದ (ಆನು, ಆಮ್/ಆವು) ಎರಡು ಬಗೆಯ ರೂಪಗಳು ಕಾಣಿಸುತ್ತವೆ. ಹಾಗೆಯೇ, ಪ್ರಶ್ನಾರ್ಥಕ ಸರ್ವನಾಮಗಳಲ್ಲೂ, ಸ್ವರಾದಿಯಾದ (ಏನು, ಏಕೆ), ಯಕಾರಾದಿಯಾದ (ಯಾವುದು, ಯಾರು, ಯಾಕೆ ಇತ್ಯಾದಿ) ಎರಡು ಬಗೆಯ ರೂಪಗಳು ಕಾಣಿಸುತ್ತವೆ. ಪ್ರಥಮಪುರುಷದ ಸರ್ವನಾಮಗಳಲ್ಲಿ ಕಾಣುವ ಈ ಸುವ್ಯವಸ್ಥೆ ಹಾಗೂ ಉತ್ತಮಪುರುಷ, ಮಧ್ಯಮಪುರುಷ ಹಾಗೂ ಪ್ರಶ್ನಾರ್ಥಕ ಸರ್ವನಾಮಗಳಲ್ಲಿ ಕಾಣುವ ಭಿನ್ನತೆ,